ಛೋಟೆ ಖಾನ್ ರವರು ಔರಂಗಾಬಾದ್ ಜಿಲ್ಲೆಯ ವೈಜಾಪುರದ ನಿವಾಸಿಗಳಾಗಿದ್ದರು. ಇವರಿಗೆ 65 ವರ್ಷಗಳಾಗಿತ್ತು. ಇವರು ಸಾಯಿಬಾಬಾರವರನ್ನು 1910 ರಲ್ಲಿ ಮೊದಲ ಬಾರಿಗೆ ಭೇಟಿಯಾದರು.ಫಕೀರ್ ದುರ್ವೇಶ್ ಶಾ ರವರು ಇವರನ್ನು ಸಾಯಿಬಾಬಾರವರ ಬಳಿಗೆ ಕಳುಹಿಸಿದರು. ಕೂಡಲೇ ಛೋಟೆ ಖಾನ್ ರವರು ಸಾಯಿಬಾಬಾರವರನ್ನು ಭೇಟಿ ಮಾಡಲು ಶಿರಡಿಗೆ ಬಂದರು. ಆಗ ಬಾಬಾರವರು ಮಸೀದಿಯ ಮುಂದೆ ಇದ್ದ ಒಂದು ಸಣ್ಣ ಗಲ್ಲಿಯಲ್ಲಿ ನಿಂತಿದ್ದರು. ಅವರಿಗೆ ಒಬ್ಬ ಮಹಿಳೆ ತನ್ನ ಪ್ರಣಾಮಗಳನ್ನು ಸಲ್ಲಿಸುತ್ತಿದ್ದಳು. ಫಕೀರ್ ದುರ್ವೇಶ್ ಶಾ ರವರ ಮಾರ್ಗದರ್ಶನದಂತೆ ಛೋಟೆ ಖಾನ್ ಬಾಬಾರವರ ಹಿಂದೆ ನಿಂತುಕೊಂಡು ಕುರಾನ್ ನ ಮೊದಲ ಅಧ್ಯಾಯವನ್ನು ಓದಿದರು. ಇವರು ಬಿಸ್ಮಿಲ್ಲಾ ಎಂದು ಓದಲು ಶುರು ಮಾಡುತ್ತಿದ್ದಂತೆ ಬಾಬಾರವರು ಇವರ ಕಡೆಗೆ ತಿರುಗಿ ಕೋಪದಿಂದ "ಯಾರು ನೀನು? ನನ್ನನ್ನು ಏನೋ ಕೇಳಲು ಬಂದಿರುವ ನೀನೇನು ನನ್ನ ಅಪ್ಪನೇ?" ಎಂದೆಲ್ಲಾ ಬಾಬಾರವರು ಜೋರಾಗಿ ಕಿರುಚಾಡಿ ಒದರಾಡಿದರು. ಇವರ ಮೇಲೆ ಬಯ್ಗುಳಗಳ ಮಳೆಯನ್ನೇ ಸುರಿಸಿದರು. ನಂತರ ಬಾಬಾರವರು ಮಸೀದಿಗೆ ಬಂದು ಏನೇನೋ ಮಾತುಗಳನ್ನು ಆಡಿದರು. ಆದರೆ ಛೋಟೆ ಖಾನ್ ರವರಿಗೆ ಆ ಮಾತುಗಳು ಅರ್ಥವಾಗಲಿಲ್ಲ. ಸಾಯಿಯವರ ಅನುಮತಿ ಇಲ್ಲದೆ ಮಸೀದಿಗೆ ಯಾರೂ ಪ್ರವೇಶ ಮಾಡುವಂತೆ ಇರಲಿಲ್ಲ. ಆದ್ದರಿಂದ ಛೋಟೆ ಖಾನ್ ಮಸೀದಿಯ ದ್ವಾರದ ಬಳಿ ಸುಮ್ಮನೆ ಕುಳಿತರು. ಎರಡು ದಿನಗಳ ನಂತರ ಸಾಯಿಬಾಬಾರವರು ಇವರಿಗೆ ಒಳಗೆ ಬರಲು ಅಪ್ಪಣೆ ನೀಡಿದರು. ಕಾಕಾ ದೀಕ್ಷಿತ್ ಮತ್ತಿತರರು ಇವರ ಪರವಾಗಿ ಮಾತನಾಡಿ "ಬಾಬಾ, ಇವರೆಲ್ಲ ನಿಮ್ಮ ಮಕ್ಕಳಿದ್ದಂತೆ. ಇವರ ಮೇಲೆ ನಿಮಗೆ ಕೋಪವೇಕೆ?" ಎಂದು ಕೇಳಲು ಸಾಯಿಬಾಬಾರವರು "ಏನು, ಇವನನ್ನು ನನ್ನ ಮಗನೆಂದು ಕರೆದೆಯಾ? ಇವನು ಒಬ್ಬ ಉಪಾಧ್ಯಾಯರನ್ನು ಹೊಡೆದು ಸಾಯಿಸಿದ್ದಾನೆ" ಎಂದರು. ಕೆಲವು ದಿನಗಳ ಹಿಂದೆ ಛೋಟೆ ಖಾನ್ ನಿಜಾಮರ ಸಿಪಾಯಿಯಾಗಿ ಮಾಮಲ್ತೆದಾರರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬ ಕ್ರಿಶ್ಚಿಯನ್ ಉಪಾಧ್ಯಾಯರು ಒಂದು ಕೇಸಿನಲ್ಲಿ ಸರಿಯಾಗಿ ಸಾಕ್ಷ್ಯ ಹೇಳದೆ ತಪ್ಪು ಹೇಳಿದರೆಂದು ಅವರನ್ನು ಚೆನ್ನಾಗಿ ಥಳಿಸಿದ್ದ. ಅದೇ ವಿಷಯದ ಬಗ್ಗೆ ಸಾಯಿಬಾಬಾರವರು ಪ್ರಸ್ತಾಪ ಮಾಡಿದುದು. ಛೋಟೆ ಖಾನ್ ಹೊಡೆದ ರಭಸಕ್ಕೆ ಉಪಾಧ್ಯಾಯರ ಬಾಯಿಯಲ್ಲಿ ರಕ್ತ ಬಂದು ಅವರು ಪ್ರಜ್ಞೆ ತಪ್ಪಿ ಬಿದ್ದರು. ಆಗ ಮಾಮಲ್ತೆದಾರರು ಛೋಟೆ ಖಾನ್ ರವರಿಗೆ ಕೆಲಸಕ್ಕೆ ರಾಜೀನಾಮೆ ನೀಡಿ ಹೋಗುವಂತೆ ಆಜ್ಞಾಪಿಸಿದರು. ಅವರ ಆದೇಶದಂತೆ ಛೋಟೆ ಖಾನ್ ರವರು ನಿಜಾಂ ರಾಜ್ಯ ಬಿಟ್ಟು ಓಡಿ ಬಂದು ಸಾಯಿಬಾಬಾರವರ ಪಾದಗಳಿಗೆ ಶರಣಾದರು. ಬಡೇ ಬಾಬಾ ರವರ ಮಗ ಕಾಸಿಂ ಭಾಯಿ, ಜೋಗ ಮತ್ತು ದೀಕ್ಷಿತ್ ರವರು ಛೋಟೆ ಖಾನ್ ರವರನ್ನು ಬಾಬಾರವರ ಬಳಿಗೆ ಕರೆದುಕೊಂಡು ಬಂದರು. ಆಗ ಬಾಬಾರವರು ಛೋಟೆ ಖಾನ್ ರವರನ್ನು ಉದ್ದೇಶಿಸಿ "ಹೆದರಬೇಡ, ಅಲ್ಲಾನೇ ದೇವರು. ನಿನಗೆ ಸಜೆಯಾಗುವುದಿಲ್ಲ" ಎಂದು ಭರವಸೆ ನೀಡಿದರು. ಎರಡು ತಿಂಗಳುಗಳ ಕಾಲ ಛೋಟೆ ಖಾನ್ ಶಿರಡಿಯಲ್ಲೇ ತಂಗಿದ್ದರು. ನಂತರ ಬಾಬಾರವರು "ನೀನು ಈಗ ಹೊರಡು. ನಿನ್ನ ಜಮೀನಿನ ತಗಾದೆ ಯಾವುದೇ ತೊಂದರೆ ಇಲ್ಲದೆ ನಿವಾರಣೆಯಾಗುವುದು" ಎಂದು ಹೇಳಿದರು. ಬಾಬಾ ಹೇಳಿದುದು ಇವರ ಮತ್ತು ಇವರ ಅತ್ತೆಯವರ ನಡುವೆ ಇದ್ದ ಜಮೀನಿನ ತಗಾದೆ. ಬಾಬಾರವರು ಹೇಳಿದಂತೆ ಆ ತಗಾದೆಯು ನಿವಾರಣೆಯಾಗಿ ಆ ಜಮೀನು ಇವರ ಸುಪರ್ದಿಗೆ ಬಂದಿತು.
ಇವರು ಎರಡನೇ ಬಾರಿ ಶಿರಡಿಗೆ ಭೇಟಿ ನೀಡಿದಾಗ ಮಹಾಲ್ಸಪತಿ ಮತ್ತು ಮೌಸಿಬಾಯಿಯವರು ಶಿರಡಿಯಲ್ಲಿದ್ದರು. ಇವರನ್ನು ನೋಡಿದ ತಕ್ಷಣವೇ ಬಾಬಾರವರು ಮೌಸಿಬಾಯಿಗೆ "ಈ ಜನಗಳು ನನ್ನ ಮಾತು ಕೇಳುವುದಿಲ್ಲ. ಆಮೇಲೆ ಅನುಭವಿಸುತ್ತಾರೆ. ಮುಳ್ಳುಗಳು ಸಿಕ್ಕಿಕೊಂಡು ಇವರ ಕಡೆಯವರು ಸಾಯುತ್ತಾರೆ" ಎಂದು ನುಡಿದರು. ಬಾಬಾರವರು ನುಡಿದಂತೆಯೇ ಮುಂದೆ ನಡೆಯಿತು. ಬಾಬಾರವರನ್ನು ಮೊದಲನೇ ಬಾರಿ ಭೇಟಿಯಾದ ಮೇಲೆ ಅವರಿಗೆ ಹೇಳದೆ ಛೋಟೆ ಖಾನ್ ರವರು ಶಿರಡಿ ಬಿಟ್ಟು ಹೊರಟರು. ಎರಡು ದಿನಗಳ ಬಳಿಕ ಮನೆಯನ್ನು ಸೇರಿದಾಗ ಇವರ ತಾಯಿಯವರ ಕಾಲಿಗೆ ಮುಳ್ಳುಗಳು ಚುಚ್ಚಿಕೊಂಡು ಕಾಲಿನಲ್ಲಿ ವ್ರಣವಾಗಿ, ಊದಿಕೊಂಡು ಅದರಿಂದಲೇ ಮರಣ ಹೊಂದಿದ್ದರು. ಇವರ ತಾಯಿಯವರ ಮರಣದ ನಾಲ್ಕನೇ ದಿನ ಇವರು ಶಿರಡಿಗೆ ಬಂದಿದ್ದರು. ಛೋಟೆ ಖಾನ್ ರವರ ಬಳಿ ತಾಯಿಯವರ ಅಂತ್ಯಕ್ರಿಯೆ ಮಾಡಲು ಹಣವಿರಲಿಲ್ಲ ಮತ್ತು ಇವರಿಗೆ ಕೆಲಸವೂ ಇರಲಿಲ್ಲ.ಸಾಯಿಬಾಬಾರವರು ಹಣದ ಸಹಾಯ ಮಾಡುವರು ಎಂಬ ಆಸೆಯಿಂದ ಶಿರಡಿಗೆ ಬಂದಿದ್ದರು. ಶಿರಡಿಯಲ್ಲಿ ಸುಮಾರು 34 ದಿನಗಳು ತಂಗಿದ್ದರು. ನಂತರ ಒಂದು ದಿನ ಬಾಬಾರವರು ಇವರಿಗೆ ಮೌಸಿಬಾಯಿಯವರ ಸಮ್ಮುಖದಲ್ಲಿ "ಉಧಿಯನ್ನು ಪಡೆದು ಈ ಮನುಷ್ಯ ಕೂಡಲೇ ಊರಿಗೆ ಹೊರಡಬೇಕು" ಎಂದರು. ಛೋಟೆ ಖಾನ್ ರವರಿಗೆ ಇದು ಬಾಬಾರವರ ಆಜ್ಞೆ ಎಂದು ತಿಳಿಯಿತು. ಮಾರನೇ ದಿನ ಬೆಳಗ್ಗೆ ಛೋಟೆ ಖಾನ್ ರವರು ಬಾಬಾರವರ ಬಳಿಗೆ ಹೋದಾಗ ಸಾಯಿಬಾಬಾರವರು ಇವರ ಕೈಗೆ ಉಧಿಯನ್ನು ನೀಡುತ್ತಾ "ನಿನ್ನ ಮನೆಯ ಬಾಗಿಲಿನಲ್ಲಿ ಒಬ್ಬ ಮುದುಕಿ ಬಂದು ನಿಲ್ಲುತ್ತಾಳೆ. ಅವಳು ನಿನಗೆ ಏನನ್ನೋ ಕೊಡುತ್ತಾಳೆ. ಅದರ ಸಹಾಯದಿಂದ ನೀನು ಅಂತ್ಯಕ್ರಿಯೆಯ ಕಾರ್ಯಗಳನ್ನು ಮುಗಿಸಬಹುದು. ಮನೆಗೆ ಅತಿಥಿಗಳು ಬಂದಿದ್ದಾರೆ. ಅವರೊಡನೆ ಸೇರಿ ಒಟ್ಟಿಗೆ ಭೋಜನವನ್ನು ಮಾಡು" ಎಂದು ನುಡಿದರು. ಇದು ಬಾಬಾರವರು ತಮ್ಮ ಅಂತರ್ಜ್ಞಾನದಿಂದ ಆಡಿದ ಮಾತುಗಳೆಂದು ಛೋಟೆ ಖಾನ್ ರವರಿಗೆ ಆಗ ಅರ್ಥವಾಗಲಿಲ್ಲ. ಆದರೆ ಇವರು ಮನೆಗೆ ತೆರಳಿ ಇವರ ತಾಯಿಯವರ 40 ದಿನದ ಕಾರ್ಯಗಳನ್ನು ಮಾಡಬೇಕೆಂದು ಯೋಚಿಸುತ್ತಿರುವಾಗ ಕಾಜಿ ಗ್ರಾಮದ ಒಬ್ಬ ವಯಸ್ಸಾದ ವಿಧವೆಯೊಬ್ಬರು ಇವರ ಮನೆಯ ಬಾಗಿಲಿಗೆ ಬಂದರು. ಇವರ ಕೈಗಳಿಗೆ ಪ್ರೀತಿಯಿಂದ 50 ರುಪಾಯಿಗಳನ್ನು ಕೊಟ್ಟು "ನೀನು ಕಾರ್ಯಗಳನ್ನು ಮುಂದುವರೆಸು" ಎಂದು ಹೇಳಿದರು. ಅಂದು 40 ದಿನದ ಮಾಸಿಕ ಶ್ರಾದ್ದದ ದಿನವಾಗಿತ್ತು. ಇವರ 4 ಜನ ಸಹೋದರಿಯರು ಅವರ ಪತಿಯೊಡನೆ ಇವರ ಮನೆಗೆ ಬಂದಿದ್ದರು. ಆ ವಯಸ್ಸಾದ ವಿಧವೆ ನೀಡಿದ ಹಣದಿಂದ ಕಾರ್ಯಗಳೆಲ್ಲಾ ಚೆನ್ನಾಗಿ ನಡೆದವು. ಬಾಬಾರವರು ಹೀಗೆ ಛೋಟೆ ಖಾನ್ ರವರಿಗೆ ಸಮಾರಂಭಕ್ಕೆ ಹಣವನ್ನು ಒದಗಿಸಿ ಆ ವಿಧವೆಯ ರೂಪದಲ್ಲಿ ಬಂದು ಸಹಾಯ ಮಾಡಿದರು.
ಇವರು ನಾಲ್ಕನೇ ಬಾರಿ ಶಿರಡಿಗೆ ಭೇಟಿ ನೀಡಿದಾಗ "ನಿನ್ನ ಮನೆಗೆ ಗುಲಾಬ್ ಬಂದಿದ್ದಾನೆ" ಎಂದು ಬಾಬಾ ನುಡಿದರು. ಛೋಟೆ ಖಾನ್ ಮನೆಗೆ ವಾಪಸ್ ಬಂದಾಗ ಇವರ ಪತ್ನಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಬಗ್ಗೆಯೇ ಬಾಬಾ ಮುಂಚೆಯೇ ತಿಳಿದು ಭವಿಷ್ಯ ನುಡಿದಿದ್ದರು. ಸಾಯಿಯವರು ಹೇಳಿದಂತೆ ಮಗುವಿಗೆ ಗುಲಾಬ್ ಎಂದೇ ನಾಮಕರಣ ಮಾಡಲಾಯಿತು.
ಇನ್ನೊಮ್ಮೆ ಛೋಟೆ ಖಾನ್ ಶಿರಡಿಗೆ ಭೇಟಿ ನೀಡಿದಾಗ ಬಹಳ ದಿನಗಳ ಕಾಲ ಬಾಬಾರವರು ಛೋಟೆ ಖಾನ್ ಗೆ ಹೊರಡಲು ಅನುಮತಿ ನೀಡಲಿಲ್ಲ. ಇದರಿಂದ ಛೋಟೆ ಖಾನ್ ರವರು ತಾಳ್ಮೆ ಕಳೆದುಕೊಂಡು ಹೊರಡಲು ಅವಸರ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಾಬಾರವರು ಇವರಿಗೆ ಹೊರಡಲು ಅನುಮತಿ ನೀಡದೆ "ನೀನು ಈಗ ಹೊರಟರೆ ನಿನಗೆ ಬಿರುಗಾಳಿ, ಬೆಂಕಿಯ ಉಂಡೆಗಳು, ಮತ್ತು ಇನ್ನು ಅನೇಕ ತೊಂದರೆಗಳು ಎದುರಾಗಬಹುದು" ಎಂದು ನುಡಿದರು. ಆದರೆ ಛೋಟೆ ಖಾನ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮನೆಗೆ ಹೊರಟರು. ಇವರು ವೇಗವಾಗಿ ನಡೆಯುತ್ತಾ, ಓಡುತ್ತಾ 12 ಮೈಲಿ ದೂರವನ್ನು ಕ್ರಮಿಸಿದಾಗ ಸಂಜೆ 5:50 ರ ಸಮಯವಾಗಿತ್ತು. ವರಿ ನದಿಯ ದಡದ ಪಕ್ಕದಲ್ಲಿ ನಡೆಯುತ್ತಾ ಹೋಗುತ್ತಿದ್ದರು. ಆಗ ಸೂರ್ಯಾಸ್ತದ ಸಮಯ. ದಾರಿಯಲ್ಲಿ ಸಿಕ್ಕ ಪಟೇಲನು "ಮುಂದೆ ಹೋಗಬೇಡ. ಮೋಡ ತುಂಬಿಕೊಂಡಿದೆ. ಮಳೆ ಬರುವ ಹಾಗಿದೆ. ಈಗ ಹೊರಟರೆ ನೀನು ತೊಂದರೆಗೆ ಸಿಕ್ಕಿಕೊಳ್ಳುತ್ತೀಯೇ" ಎಂದು ಬುದ್ಧಿ ಮಾತು ಹೇಳಿದರು. ಅದಕ್ಕೆ ಉತ್ತರವಾಗಿ ಛೋಟೆ ಖಾನ್ ರವರು "ಇನ್ನು ಕೇವಲ 4 ಮೈಲಿಗಳ ದೂರವಷ್ಟೇ ಇದೆ. ನಾನು ಬೇಗನೆ ಹೋಗುತ್ತೇನೆ" ಎಂದು ಹೇಳಿ ಮುಂದೆ ಸಾಗಿದರು. ಮೂರು ಮೈಲಿ ಸಾಗುವುದರೊಳಗೆ ಜೋರಾಗಿ ಬಿರುಗಾಳಿ ಪ್ರಾರಂಭವಾಗಿ ಮಿಂಚೊಂದು ಅಲ್ಲಿದ್ದ ಅರಳಿ ಮರಕ್ಕೆ ಅಪ್ಪಳಿಸಿ ಆ ಮರವು ಕೆಳಗೆ ಉರುಳಿ ಬಿದ್ದು ಅದಕ್ಕೆ ಬೆಂಕಿ ಹತ್ತಿಕೊಂಡಿತು. ಅದನ್ನು ನೋಡಲಾಗದೆ ಹಿಂದೆ ತಿರುಗಿದಾಗ ಇವರಿಗೆ ಸಾಯಿಬಾಬಾರವರು ಎರಡು ನಾಯಿಗಳ ಜೊತೆ ತಮ್ಮ ಬೆನ್ನ ಹಿಂದೆಯೇ ಇದ್ದುದು ಕಾಣಿಸಿತು. ಇವರು ಬಾಬಾರವರಿಗೆ ನಮಸ್ಕಾರ ಮಾಡಿದ ಕೂಡಲೇ ಬಾಬಾರವರು ಅದೃಶ್ಯರಾದರು. ನಂತರ ಛೋಟೆ ಖಾನ್ ಮುಂದುವೆರೆದರು. ಇವರ ಹಳ್ಳಿಗೆ ಹೋಗಲು ಒಂದು ನದಿಯನ್ನು ದಾಟಬೇಕಾಗಿತ್ತು. ಅದರ ಆಳದ ಬಗ್ಗೆ ಛೋಟೆ ಖಾನ್ ರವರಿಗೆ ತಿಳಿದಿರಲಿಲ್ಲ. ನದಿಯ ನೀರು ತಮ್ಮ ಮೊಣಕಾಲವರೆಗೆ ಇದೆ ಎಂದು ಅವರು ಭಾವಿಸಿದ್ದರು. ಧೈರ್ಯವಾಗಿ ನದಿಯನ್ನು ದಾಟಿ ಆಚೆಯ ದಡಕ್ಕೆ ಬಂದು ಸೇರಿದರು. ಆದರೆ ದಡ ಸೇರಿ ಹಿಂತಿರುಗಿ ನೋಡಿದಾಗ ನದಿಯು ಉಕ್ಕಿ ಪ್ರವಾಹದಂತೆ ನೀರು ಹರಿದು ಬರುತ್ತಿರುವುದನ್ನು ನೋಡಿದರು. ಅವರಿಗೆ ನಾನು ಹೇಗೆ ನದಿಯನ್ನು ದಾಟಿದೆ ಎಂದು ಆಶ್ಚರ್ಯವಾಯಿತು. ನದಿಯ ಆಳವು ಸುಮಾರು 20 ಅಡಿಗಳಷ್ಟು ಇಟ್ಟು ಎಂದು ಆಗ ಇವರಿಗೆ ತಿಳಿಯಿತು. ಹೀಗೆ ಛೋಟೆ ಖಾನ್ ರವರು ಸಾಯಿಬಾಬಾರವರ ಸಹಾಯದಿಂದ ಮನೆಯನ್ನು ಸುರಕ್ಷಿತವಾಗಿ ಸೇರಿದರು. ಬಾಬಾರವರು ಇವರನ್ನು ಎಡಬಿಡದೆ ಹಿಂಬಾಲಿಸಿ ಇವರನ್ನು ರಕ್ಷಿಸಿದರು.
1936 ರಲ್ಲಿ ಗುಲಾಬ್ ನ ಮದುವೆ ಮಾಡಬೇಕೆಂದು ಛೋಟೆ ಖಾನ್ ಯೋಚಿಸಿದರು. ಆದರೆ ಆಗಲೂ ಇವರಿಗೆ ಹಣದ ತೊಂದರೆಯಿತ್ತು. ಆಗ ಛೋಟೆ ಖಾನ್ ರವರು ಶಿರಡಿಗೆ ತೆರಳಿ ಅಲ್ಲಿನ ಮಸೀದಿಯಲ್ಲಿ ಮಲಗಿದ್ದರು. ಆಗ ಬಾಬಾರವರು ಇವರ ಸ್ವಪ್ನದಲ್ಲಿ ಕಾಣಿಸಿಕೊಂಡು "ನೀನು ಈಗಲೇ ಪುಣೆಗೆ ಹೋಗು. ಅದರಿಂದ ನಿನಗೆ ಒಳ್ಳೆಯದಾಗುತ್ತದೆ" ಎಂದು ನುಡಿದರು. ಸಾಯಿಯವರು ಹೇಳಿದಂತೆ ಛೋಟೆ ಖಾನ್ ಪುಣೆಗೆ ಹೊರಟರು. ಅತಿಯಾದ ಪೈಲ್ಸ್ ನಿಂದ ಬಳಲುತ್ತಿದ್ದ ಲಡ್ಕರ್ ಎಂಬುವರನ್ನು ಇವರು ಭೇಟಿ ಮಾಡಿದರು. ಛೋಟೆ ಖಾನ್ ವರು ಲಡ್ಕರ್ ರವರಿಗೆ ಸಾಯಿಬಾಬಾರವರು ಆ ಖಾಯಿಲೆಗೆ ನೀಡುವ ಔಷಧ ತಮಗೆ ತಿಳಿದಿದೆ ಎಂದು ಹೇಳಿ ಅವರಿಗೆ ಆ ಔಷಧವನ್ನು ನೀಡಿದರು. ಆ ಔಷಧವನ್ನು ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಲಡ್ಕರ್ ರವರಿಗೆ ಗುಣವಾಯಿತು. ಕೂಡಲೇ ಲಡ್ಕರ್ ಹೊರಟು ಪುಣೆಯ ಕುದುರೆ ರೇಸ್ ಗೆ ತೆರಳಿ ಬಾಜಿಯನ್ನು ಕಟ್ಟಿ ಅದರಲ್ಲಿ 1100 ರುಪಾಯಿಗಳನ್ನು ಗೆದ್ದರು. ಅದರಲ್ಲಿ 700 ರುಪಾಯಿಗಳನ್ನು ಛೋಟೆ ಖಾನ್ ರವರಿಗೆ ನೀಡಿದರು. ಅದರಿಂದ ಗುಲಾಬ್ ನ ಮದುವೆ ಯಾವುದೇ ತೊಂದರೆಯಿಲ್ಲದೆ ನಡೆಯಿತು.
1918 ರಲ್ಲಿ ಸಾಯಿಬಾಬಾರವರು ಮಹಾಸಮಾಧಿಯಾಗುವುದಕ್ಕೆ ಕೆಲವು ದಿನಗಳ ಮುಂಚೆಯೇ ಕೆಲವು ಸಿದ್ದತೆಗಳನ್ನು ಮಾಡಿಕೊಂಡರು. ಇಸ್ಲಾಂ ಧರ್ಮದ ಪ್ರಕಾರವಾಗಿ ಈ ಸಿದ್ದತೆಗಳನ್ನು ಮಾಡಿದರು. ಅದೇನೆಂದರೆ, ಬಡೇ ಬಾಬಾ ಮಗನಾದ ಖಾಸಿಮ್ ಗೆ ಬಾಬಾರವರು ಕೆಲವು ಪೋಲಿ ಮತ್ತು ಬೇಯಿಸಿದ ಕೋಳಿ ಕೊಟ್ಟರು ಮತ್ತು ಅವನಿಗೆ 250 ರುಪಾಯಿಗಳನ್ನು ಮತ್ತು ಸೇವಂತಿಗೆ ಹೂವಿನ ಹಾರವನ್ನು ಕೊಟ್ಟು ಔರಂಗಾಬಾದ್ ಗೆ ಹೋಗಿ ಅಲ್ಲಿ ಫಕೀರ್ ಶಂಶುದ್ದೀನ್ ಮಿಯಾ ರವರಿಗೆ 250 ರುಪಾಯಿಗಳನ್ನು ಕೊಡುವಂತೆ ತಿಳಿಸಿದರು. ಅವರಿಗೆ ಮೌಲು ಮತ್ತು ಖವಾಲಿ ಹಾಗೂ ನ್ಯಾಸ ಮಾಡುವಂತೆ ಹೇಳು ಎಂದು ತಿಳಿಸಿದರು. ಮೌಲು ಎಂದರೆ ಮೊಹಮ್ಮದ್ ಪೈಗಂಬರ್ ರವರ ಹಾಡುಗಳನ್ನು ಹಾಡುವುದು, ಕವಾಲಿ ಎಂದರೆ ತಬಲಾ ಬಾರಿಸಿಕೊಂಡು ಸಂತರ ಬಗ್ಗೆ ಹಾಡುಗಳನ್ನು ಹಾಡುವುದು ಹಾಗೂ ನ್ಯಾಸ ಎಂದರೆ ಆಹಾರವನ್ನು ತಯಾರು ಮಾಡಿ ಜನಗಳಿಗೆ ಸಂತರ್ಪಣೆ ಮಾಡುವುದು. ಇದಾದ ಬಳಿಕ ಒಂದು ಹಾರವನ್ನು ತೆಗೆದುಕೊಂಡು ಖಾಸಿಮ್ ಬನ್ನೇಮಿಯಾ ರವರ ಬಳಿಗೆ ಹೋಗಿ ಆ ಹಾರವನ್ನು ಅವರ ಕೊರಳಿಗೆ ಹಾಕಿ ಅವರಿಗೆ "ನವ್ ದಿನ್ ನವ್ ತಾರಿಕ್ ಅಲ್ಲಾ ಮಿಯಾನೆ ಅಪನ್ ದುನಿಯಾ ಲಗಾಯಾ, ಮರ್ಜಿ ಅಲ್ಲಾಕಿ" ಅಂದರೆ "9ನೇ ತಿಂಗಳ 9ನೇ ದಿನ ಅಲ್ಲಾನೇ ಇಟ್ಟ ದೀಪವನ್ನು ಅಲ್ಲಾನೇ ತೆಗೆದುಕೊಂಡು ಹೋಗುತ್ತಾನೆ, ಹೀಗಿದೆ ಅಲ್ಲಾನ ಲೀಲೆ" ಎಂದು ಹೇಳಿದರು. ಆದರೆ ಖಾಸಿಂ ನಾನು ಔರಂಗಾಬಾದ್ ಗೆ ಹೊಸಬನೆಂದು ತಿಳಿಸಿದಾಗ ಸಾಯಿಬಾಬಾರವರು ಅವನ ಜೊತೆಯಲ್ಲಿ ಛೋಟೆ ಖಾನ್ ರವರನ್ನು ಕಳುಹಿಸಿದರು. ಹೇಗೆ ಖಾಸಿಮ್, ಛೋಟೆ ಖಾನ್ ರವರು ಮತ್ತು ಖಾಸಿಂ ರವರ ಮನೆಯ ಆಳು ಅಮೀರ್ 3 ಜನ ಕೂಡಿ ಹೊರಟರು. ಇವರು ಔರಂಗಾಬಾದ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದಾಗ ಫಕೀರ್ ಶಂಶುದ್ದೀನ್ ಇವರ ಬಳಿಗೆ ಬಂದು "ಸಾಯಿಬಾಬಾರವರ ಕಡೆಯಿಂದ ಬಂದ ಅತಿಥಿಗಳು ಯಾರು?" ಎಂದು ಕೇಳಿದರು. ಛೋಟೆ ಖಾನ್ ಮತ್ತು ಖಾಸಿಂ ಅವರಿಗೆ ತಮ್ಮ ವಂದನೆಗಳನ್ನು ಸಲ್ಲಿಸಿದರು. ಆ ಕೊಡಲೇ ಶಂಶುದ್ದೀನ್ ಸಾಯಿಬಾಬಾರವರು ಶಿರಡಿಯಲ್ಲಿ ಹೇಳಿದ್ದನ್ನೆಲ್ಲವನ್ನು ಯಥಾವತ್ತಾಗಿ ಇವರಿಗೆ ಪುನರುಚ್ಚಾರ ಮಾಡಿದರು. ನಂತರ 3 ಜನರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿ ಅವರಿಗೆ ಊಟವನ್ನು ಹಾಕಿದರು. ಆಗ ಅವರುಗಳು ಸಾಯಿಯವರು ಕೊಟ್ಟ 250 ರುಪಾಯಿಗಳನ್ನು ಶಂಶುದ್ದೀನ್ ರವರಿಗೆ ನೀಡಿದರು. ಸಾಯಿಯವರ ಆಜ್ಞೆಯಂತೆ ಮೌಲು, ಕವಾಲಿ ಮತ್ತು ನ್ಯಾಸವನ್ನು ಮಾಡಿ ರಾತ್ರಿಯ ವೇಳೆಗೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ನಂತರ ಈ 3 ಜನ ಹೊರಟು ಮರುದಿನ ಬೆಳಗಿನ ಜಾವ ಬನ್ನೇಮಿಯಾ ರವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಬನ್ನೇಮಿಯಾರವರು ಒಂದು ತೋಳನ್ನು ಮೇಲಕ್ಕೆತ್ತಿ ಇನ್ನೊಂದು ತೋಳನ್ನು ಕೆಳಕ್ಕೆ ಇಳಿಸಿ ನಿಂತುಕೊಂಡಿದ್ದರು. ಅಲ್ಲಿ ಇದ್ದ ಜನಗಳು ಬನ್ನೇಮಿಯಾರವರ ಬಳಿಗೆ ಈಗ ಹೋಗಬೇಡಿ ಎಂದು ಇವರಿಗೆ ತಿಳಿಸಿದರು. ಹೀಗೆಯೇ ಒಂದು ಘಂಟೆ ಕಾಲ ಕಳೆಯಿತು. ಆಗ ಛೋಟೆ ಖಾನ್ ರವರು ಧೈರ್ಯ ಮಾಡಿ ಬಾಬಾರವರು ಕಳುಹಿಸಿದ ಹಾರವನ್ನು ತೆಗೆದುಕೊಂಡು ಬಂದು ಬನ್ನೇಮಿಯಾರವರ ಕೊರಳಿಗೆ ಹಾಕಿದರು. ಆಗ ಬನ್ನೇಮಿಯಾ ಎತ್ತಿದ್ದ ತೋಳನ್ನು ಕೆಳಕ್ಕೆ ಇಳಿಸಿದರು. ಆಗ ಛೋಟೆ ಖಾನ್ ರವರು ಬಾಬಾರವರು ಹೇಳಿದ ವಾಕ್ಯಗಳನ್ನು ಇವರಿಗೆ ತಿಳಿಸಿದರು. ಆ ಮಾತನ್ನು ಕೇಳಿ ಬನ್ನೇಮಿಯಾರವರು ಆಕಾಶವನ್ನು ನೋಡುತ್ತಾ ಕಣ್ಣೀರು ಸುರಿಸಿದರು. ಅವರಿಗೆ ಸಾಯಿಯವರು ಈ ಪ್ರಪಂಚದಿಂದ ದೂರವಾಗುತ್ತಿದ್ದಾರೆ ಎಂಬುದರ ಅರಿವಾಗಿತ್ತು. ಇದಾದ ನಂತರ 4 ತಿಂಗಳಿಗೆ ಸರಿಯಾಗಿ ಸಾಯಿಬಾಬಾರವರು ಇಹಲೋಕವನ್ನು ತ್ಯಜಿಸಿದರು. ನವ್ ದಿನ್ ನವ್ ತಾರಿಕ್ ಅಂದರೆ 9ನೇ ತಿಂಗಳ 9ನೇ ದಿನ. ಸಾಯಿಬಾಬಾರವರು ಇಹಲೋಕ ತ್ಯಜಿಸಿದ್ದು 9ನೇ ತಿಂಗಳ 9ನೇ ದಿನ. ಬಾಬಾರವರಿಗೆ ಅರಬ್ಬೀ ಮತ್ತು ಉರ್ದು ಭಾಷೆಗಳು ಚೆನ್ನಾಗಿ ತಿಳಿದಿತ್ತು ಮತ್ತು ಬಾಬಾರವರು ಅಬ್ದುಲ್ ಗೆ ಖುರಾನ್ ಕಲಿಸಿದ್ದರು.
1936 ರಲ್ಲಿ ಒಂದು ದಿನ ರಾತ್ರಿ ಛೋಟೆ ಖಾನ್ ಮತ್ತು ಮಾಧವ ಫಾಸ್ಲೆ ರಾತ್ರಿ ಮಸೀದಿಯಲ್ಲಿ ಮಲಗಿದ್ದರು. ಆಗ ಛೋಟೆ ಖಾನ್ ರವರು "ಮಾಧವ್, ಏಳು ನಾನು ಮುತ್ರ ಮಾಡಬೇಕು" ಎಂದು ಹೇಳಿದ ಸಾಯಿಬಾಬಾರವರ ಧ್ವನಿಯನ್ನು ಬಹಳ ಸ್ಪಷ್ಟವಾಗಿ ಕೇಳಿಸಿಕೊಂಡರು. ಆದರೆ ಮಾಧವ್ ನಿದ್ರೆಯಿಂದ ಏಳಯೇ ಇಲ್ಲ. ಮಾರನೆಯ ದಿನ ಬೆಳಗಿನ ಜಾವ ಸಾಯಿಬಾಬಾರವರು ಸಾಮಾನ್ಯವಾಗಿ ಕುಳಿತಿರುತ್ತಿದ್ದ ಸ್ಥಳದ ಗುಂಡಿಯ ಜಾಗದಲ್ಲಿ ಸುಗಂಧ ತೀರ್ಥ ಕಂಡರು. ಬಾಬಾ ಮುತ್ರ ಮಾಡಿದ ಜಾಗದಲ್ಲಿ ಸುಗಂಧ ತೀರ್ಥ ತುಂಬಿತ್ತು.
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment