ಸಾಯಿ ಮಹಾಭಕ್ತ - ಅಬ್ದುಲ್ ಬಾಬಾ (1871 - 1954) - ಕೃಪೆ : ಸಾಯಿಅಮೃತಧಾರಾ.ಕಾಂ
ಅಬ್ದುಲ್ ಬಾಬಾ
ಸಾಯಿಬಾಬಾರವರ ಬಳಿಗೆ ಬಂದ ಮುಸ್ಲಿಂ ಭಕ್ತರಲ್ಲಿ ಅತಿ ಹೆಚ್ಚು ಮಾಹಿತಿ ಇರುವ ಮತ್ತು ಸಾಯಿಭಕ್ತರಿಗೆ ಅತ್ಯಂತ ಪ್ರೀತಿಪಾತ್ರರಾದ ಸಾಯಿಮಹಾಭಕ್ತ ಅಬ್ದುಲ್ ಬಾಬಾರವರು. ಅಬ್ದುಲ್ ರವರು 30 ವರ್ಷಗಳ ಕಾಲ ಸಾಯಿಬಾಬಾರವರೊಂದಿಗೆ ಸದಾಕಾಲ ಜೊತೆಯಾಗಿದ್ದರು. ಆಲ್ಲದೇ, ಸಾಯಿಬಾಬಾರವರ ಮಹಾಸಮಾಧಿಯಾದ ನಂತರ 36 ವರ್ಷಗಳ ಕಾಲ ಸಾಯಿಬಾಬಾರವರು ಅವರಿಗೆ ನೀಡಿದ ಮಾರ್ಗದರ್ಶನದಂತೆ ನಡೆಯುತ್ತಾ ಸಾಯಿಭಕ್ತರು ನೀಡುವ ದಕ್ಷಿಣೆಯನ್ನು ಸ್ವೀಕರಿಸುತ್ತಾ ಜೀವನ ಸಾಗಿಸುತ್ತಿದ್ದರು.
ಅಬ್ದುಲ್ ರವರು 1871 ರಲ್ಲಿ ಜನಿಸಿದರು ಮತ್ತು ಏಪ್ರಿಲ್ 1954 ರಲ್ಲಿ ಸಮಾಧಿ ಹೊಂದಿದರು. ಇವರು ತಪತಿ ನದಿಯ ದಡದಲ್ಲಿರುವ ನಂದೇಡ್ ಗ್ರಾಮದ ನಿವಾಸಿಯಾಗಿದ್ದರು. ಇವರು ಸಣ್ಣ ವಯಸ್ಸಿನವರಾಗಿದ್ದಾಗ ಇವರು ಒಬ್ಬ ಮುಸ್ಲಿಂ ಫಕೀರ್ ಅಮಿರುದ್ದೀನ್ ಎಂಬುವರ ಆಶ್ರಯದಲ್ಲಿದ್ದರು. ಸಾಯಿಬಾಬಾರವರು ಆ ಫಕೀರ್ ನ ಕನಸಿನಲ್ಲಿ ಬಂದು ಅವರಿಗೆ ಎರಡು ಮಾವಿನ ಹಣ್ಣುಗಳನ್ನು ನೀಡಿ ಅದನ್ನು ಅಬ್ದುಲ್ ನಿಗೆ ನೀಡಿ ಅವನನ್ನು ಶಿರಡಿಗೆ ತಮ್ಮ ಬಳಿ ಕಳಿಸುವಂತೆ ಆದೇಶ ನೀಡಿದರೆಂದು ತಿಳಿದುಬಂದಿದೆ. ಸಾಯಿಯವರ ಆದೇಶದಂತೆ ಫಕೀರನು ಅಬ್ದುಲ್ ಗೆ ಮಾವಿನ ಹಣ್ಣುಗಳನ್ನು ನೀಡಿ ಸಾಯಿಯವರ ಬಳಿಗೆ ಹೋಗುವಂತೆ ಆದೇಶಿಸಿದನು. ಅದರಂತೆ ಅಬ್ದುಲ್ ತಮ್ಮ 20 ನೇ ವಯಸ್ಸಿನಲ್ಲಿ ಅಂದರೆ ಸುಮಾರು 1890 ರಲ್ಲಿ ಸಾಯಿಬಾಬಾರವರ ಬಳಿಗೆ ಬಂದರು. ಆ ಸಮಯದಲ್ಲಿ ನಾನಾ ಸಾಹೇಬ್ ಚಂದೋರ್ಕರ್ ಕೂಡ ಇನ್ನು ಬಾಬಾರವರ ಬಳಿಗೆ ಬಂದಿರಲಿಲ್ಲ. ಸಾಯಿಯವರು ಅಬ್ದುಲ್ ರವರನ್ನು ಉದ್ದೇಶಿಸಿ "ಮೇರಾ ಕಬ್ಲಾ ಆಲಾ" ಅಂದರೆ "ನನ್ನ ಕಾಗೆ" ನನ್ನ ಬಳಿ ಬಂದಿತು ಎಂದು ಸ್ವಾಗತ ನೀಡಿದರು. ಬಾಬಾರವರು ಅಬ್ದುಲ್ ರವರನ್ನು ಅವರ ಜೀವಮಾನ ಪೂರ್ತಿ ತಮ್ಮ ಸೇವೆ ಮಾಡಿಕೊಂಡು ಇರುವಂತೆ ಆದೇಶಿಸಿದರು. ಅಬ್ದುಲ್ ರವರ ಪ್ರಮುಖ ಕೆಲಸವೆಂದರೆ ಲೇಂಡಿ ಉದ್ಯಾನವನ, ದ್ವಾರಕಾಮಾಯಿ ಮತ್ತು ಚಾವಡಿಯಲ್ಲಿದ್ದ ದೀಪಗಳಿಗೆ ಎಣ್ಣೆಯನ್ನು ಹಾಕಿ ಅವುಗಳನ್ನು ನಿರಂತರವಾಗಿ ಆರದೇ ಉರಿಯುವಂತೆ ನೋಡಿಕೊಳ್ಳುವುದು.
ಇನ್ನು ಆಹಾರದ ವಿಷಯ ಬಂದಾಗ, ಸಾಯಿಬಾಬಾರವರು ಮೊದಲು ಅಬ್ದುಲ್ ನಿಗೆ ಆಹಾರವನ್ನು ನೀಡುತ್ತಿರಲಿಲ್ಲ. ಸಾಯಿಬಾಬಾರವರು ಮತ್ತು ಅಬ್ದುಲ್ ಬಾಬಾ ರವರು ಬೇರೆ ಬೇರೆಯಾಗಿ ಭಿಕ್ಷೆಗೆ ಹೋಗುತ್ತಿದ್ದರು. ದ್ವಾರಕಾಮಾಯಿಯ ಬಳಿಯಿದ್ದ ಒಂದು ಕುದುರೆಯ ಲಾಯದಲ್ಲಿ ಅಬ್ದುಲ್ ವಾಸ ಮಾಡುತ್ತಿದ್ದರು. ಇವರು ಸದಾಕಾಲ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಇವರು ಸಾಯಿಬಾಬಾರವರ ಬಳಿ ಕುಳಿತು ಪ್ರತಿನಿತ್ಯ ಖುರಾನ್ ಗ್ರಂಥವನ್ನು ಪಾರಾಯಣ ಮಾಡುತ್ತಿದ್ದರು. ಕೆಲವೊಮ್ಮೆ ಬಾಬಾರವರು ಖುರಾನ್ ಗ್ರಂಥದ ಯಾವುದೋ ಭಾಗವನ್ನು ತೆಗೆದು ಕೊಟ್ಟು ಅಬ್ದುಲ್ ಬಾಬಾನಿಗೆ ಓದಲು ಹೇಳುತ್ತಿದ್ದರು. ಆಲ್ಲದೇ, ಖುರಾನ್ ನಲ್ಲಿದ್ದ ಕೆಲವು ವಿಷಯಗಳನ್ನು ಕೂಡ ಬಾಬಾರವರು ಹೇಳುತ್ತಿದ್ದರೆಂದು ತಿಳಿದುಬಂದಿದೆ. ಸಾಯಿಬಾಬಾರವರು ಹೀಗೆ ಹೇಳುತ್ತಿದ್ದಾಗ ಅಬ್ದುಲ್ ಬಾಬಾರವರು ಒಂದು ನೋಟ್ ಪುಸ್ತಕದಲ್ಲಿ ಬಾಬಾ ಹೇಳಿದ್ದನ್ನೆಲ್ಲ ಬರೆದುಕೊಳ್ಳುತ್ತಿದ್ದರು. ಈ ಪುಸ್ತಕದಲ್ಲಿನ ಲಿಪಿಯು ಮರಾಠಿ ಮತ್ತು ಮೋಡಿ ಬರಹಗಳಾಗಿದ್ದವು ಮತ್ತು ಅದರಲ್ಲಿ ಸಾಯಿಬಾಬಾರವರು ಹೇಳಿದ ಎಲ್ಲಾ ವಿಷಯಗಳು ಅಬ್ದುಲ್ ರಿಂದ ಬರೆಯಲ್ಪಡುತ್ತಿದ್ದವು. ಅಬ್ದುಲ್ ರವರಿಗೆ ಆ ಪುಸ್ತಕವೇ ಖುರಾನ್ ಗ್ರಂಥವಾಗಿ ಅದರಲ್ಲಿ ಸಾಯಿಯವರ ಬಾಯಿಯಿಂದ ಬಂದ ಎಲ್ಲಾ ನುಡಿ ಮುತ್ತುಗಳನ್ನು ಬಹಳ ಜೋಪಾನವಾಗಿ ಅಬ್ದುಲ್ ಬಾಬಾರವರು ಶೇಖರಿಸಿ ಇಟ್ಟಿದ್ದಾರೆ.
ಅಬ್ದುಲ್ ರವರು ಮೊದಲಿನಿಂದ ಕೊನೆಯವರೆಗೂ ಸಾಯಿಬಾಬಾರವರ ಜೊತೆ ಇದ್ದು ಸಾಯಿಬಾಬಾರವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಮಸೀದಿಯ ಕಸವನ್ನು ಕೂಡ ಅಬ್ದುಲ್ ಗುಡಿಸುತ್ತಿದ್ದರು. ಸಾಯಿಬಾಬಾರವರ ಸಮಾಧಿಯಾದ ಬಳಿಕ ಅಬ್ದುಲ್ ಬಾಬಾರವರು ಸಂಸ್ಥಾನದ ಆಡಳಿತ ಮಂಡಳಿಯಲ್ಲಿದ್ದ ಏಕೈಕ ಮುಸ್ಲಿಂ ಆಗಿದ್ದರು. ಬಾಬಾರವರ ಸಮಾಧಿಗೆ ಬಟ್ಟೆಯನ್ನು ಹೊದಿಸುವುದು, ಹೂವುಗಳಿಂದ ಅಲಂಕಾರ ಮಾಡುವುದು ಮತ್ತು ತಮ್ಮ ಉದರ ಪೋಷಣೆಗಾಗಿ ದಿನದ ಮೊದಲ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುವುದು ಇವರ ವಾಡಿಕೆಯಾಗಿತ್ತು. ಇವರ ಬಳಿ ತೊಂದರೆ ಹೇಳಿಕೊಂಡು ಬರುತ್ತಿದ್ದ ಭಕ್ತರಿಗೆ ಸಾಯಿಬಾಬಾರವರ ಉಲ್ಲೇಖವಿದ್ದ ನೋಟ್ ಪುಸ್ತಕವನ್ನು ತೆಗೆದು ಅಲ್ಲಿ ಬಂದ ಹಾಳೆಯಲಿದ್ದ ವಾಕ್ಯಗಳನ್ನು ಪರಿಶೀಲಿಸಿ ಉತ್ತರ ನೀಡುತ್ತಿದ್ದರು ಮತ್ತು ಅವರ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಇದು ಅಬ್ದುಲ್ ರವರಿಗೆ ಸಾಯಿಬಾಬಾರವರು ನೀಡಿದ ಬಳುವಳಿ ಎಂದೇ ಹೇಳಬೇಕು. ಅದರ ಎರಡು ಉದಾಹರಣೆಗಳು ಈ ಕೆಳಕಂಡಂತೆ ಇವೆ:
ಸಾಯಿಬಾಬಾರವರು ಮಹಾಸಮಾಧಿಯಾದ ಕೆಲವು ದಿನಗಳ ನಂತರ ನಡೆದ ಘಟನೆ. ಸಾಯಿ ಮಂದಿರದಲ್ಲಿ ಒಂದು ಬಾವಿಯನ್ನು ತೆರೆಯಲಾಗಿತ್ತು. ಅದರ ನೀರು ಸಿಹಿಯಾಗಿರದೆ ಉಪ್ಪು ನೀರು ಬರುತ್ತಿತ್ತು. ಆಗ ಅಬ್ದುಲ್ ತಮ್ಮ ಬಳಿಯಿದ್ದ ನೋಟ್ ಪುಸ್ತಕವನ್ನು ನೋಡಿ ಬಾವಿಯನ್ನು ಇನ್ನು ಸ್ವಲ್ಪ ಅಡಿಗಳಷ್ಟು ಅಗೆದರೆ ಸಿಹಿ ನೀರು ದೊರಕುವುದೆಂದು ನುಡಿದರು. ಅದರಂತೆ 2 ಅಡಿಗಳಷ್ಟು ಬಾವಿಯನ್ನು ಅಗೆಯಲಾಯಿತು. ಆಗ ಬಾವಿಯಲ್ಲಿನ ನೀರು ಸಿಹಿಯಾಯಿತು.
ಇನ್ನೊಮ್ಮೆ, ಗಾಡ್ಗಿಲ್ ಎಂಬ ಬ್ಯಾರಿಸ್ಟರ್ ತಮ್ಮ ಮಗನು ಇಂಗ್ಲೆಂಡ್ ನಿಂದ ವಾಪಸ್ ಬಂದು ಭಾರತದಲ್ಲಿ ನೆಲೆಸುವನೇ ಎಂದು ಅಬ್ದುಲ್ ರನ್ನು ಪ್ರಶ್ನಿಸಲು ಅಬ್ದುಲ್ ನೋಟ್ ಪುಸ್ತಕ ಪರಿಶೀಲಿಸಿ ಅವರ ಮಗನು ವಾಪಸ್ ಬಂದು ಭಾರತದಲ್ಲಿ ನೆಲೆಸುವನೆಂದು ಭವಿಷ್ಯ ನುಡಿದರು. ಅಬ್ದುಲ್ ರವರು ನುಡಿದಂತೆ ಬ್ಯಾರಿಸ್ಟರ್ ರವರ ಮಗನು ತನ್ನ ಆಂಗ್ಲ ಹೆಂಡತಿ ಮತ್ತು ಮಕ್ಕಳೊಂದಿಗೆ ಭಾರತದಲ್ಲಿ ಬಂದು ನೆಲೆಸಿದನು. ಅಬ್ದುಲ್ ರವರು ಈ ನೋಟ್ ಪುಸ್ತಕವನ್ನು ತಮ್ಮ ಖುರಾನ್ ಎಂದು ಪರಿಗಣಿಸಿದ್ದರು ಮತ್ತು ಅದನ್ನು ಸದಾಕಾಲ ಪಠಣ ಮಾಡುತ್ತಿದ್ದರು. ಹೀಗೆ ಪಠಣ ಮಾಡುವಾಗ ಪವಿತ್ರ ಜಪಮಾಲೆಯಲ್ಲಿದ್ದ ಮಣಿಗಳನ್ನು ತಮ್ಮ ಬೆರಳುಗಳಿಂದ ಸವರುತ್ತ ಪಠಣ ಮಾಡುತ್ತಿದ್ದರು.
ಶಿರಡಿಯ ಲೇಂಡಿ ಉದ್ಯಾನವನದಲ್ಲಿರುವ ನಂದಾ ದೀಪವನ್ನು ಈಗ 4 ಕಡೆಗಳೂ ಸ್ಥಂಭಗಳನ್ನು ನಿರ್ಮಿಸಿ ಹೊರಗಿನಿಂದ ಮುಚ್ಚಲಾಗಿದೆ. ಆದರೆ 1936 ರಲ್ಲಿ ಅಬ್ದುಲ್ ಬಾಬಾರವರು ನೋಡಿಕೊಳ್ಳುತ್ತಿದ್ದಾಗ ಈ ಜಾಗವು ಒಂದು ಹಳ್ಳವಿತ್ತು. ಅದನ್ನು ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸಲು 4 ಕಡೆಗಳಲ್ಲಿ 20 ಬಟ್ಟೆಯ ತುಂಡುಗಳಿಂದ ಮತ್ತು ತಗಡಿನ ಹೊದಿಕೆಯನ್ನು ಮೇಲ್ಚಾವಣಿಯಂತೆ ಮಾಡಿ ಮುಚ್ಚಲಾಗಿತ್ತು. ಸಾಯಿಬಾಬಾರವರು ನಂದಾದೀಪದ ಹಿಂಭಾಗ ಕುಳಿತುಕೊಂಡು ಅಬ್ದುಲ್ ಬಾಬಾರವರಿಗೆ 2 ಮಡಿಕೆಗಳಲ್ಲಿ ನೀರನ್ನು ತುಂಬಿ ತಮ್ಮ ಬಳಿ ಇಡುವಂತೆ ಆಜ್ಞಾಪಿಸುತ್ತಿದ್ದರು. ಅಬ್ದುಲ್ ಸಾಯಿಯವರ ಆಜ್ಞೆಯಂತೆ ನೀರನ್ನು ತಂದಿಡಲು ಬಾಬಾರವರು ಆ ನೀರನ್ನು 4 ದಿಕ್ಕುಗಳಿಗೆ ಚೆಲ್ಲುತ್ತಿದ್ದರು. ಬಾಬಾರವರು ಏಕೆ ಹಾಗೆ ಮಾಡುತ್ತಿದ್ದರು ಅದು ಯಾರಿಗೂ ತಿಳಿದಿಲ್ಲ. ಸ್ವತಃ ಅಬ್ದುಲ್ ಬಾಬಾರವರಿಗೂ ಕೂಡ ಬಾಬಾ ಏಕೆ ಹಾಗೆ ಮಾಡುತ್ತಿದ್ದರು ಎಂದು ತಿಳಿಯುತ್ತಿರಲಿಲ್ಲ. ಆ ಸಮಯದಲ್ಲಿ ಲೇಂಡಿಯಲ್ಲಿ ಅಬ್ದುಲ್ ಮತ್ತು ಬಾಬಾರವರನ್ನು ಬಿಟ್ಟರೆ ಬೇರೆ ಯಾರೂ ಇರುತ್ತಿರಲಿಲ್ಲ. ಆಲ್ಲದೇ ಬಾಬಾರವರ ಸಮ್ಮುಖದಲ್ಲಿ ಅಬ್ದುಲ್ ಬಿಟ್ಟರೆ ಬೇರೆ ಯಾವ ಮುಸ್ಲಿಂ ಬಾಂಧವರೂ ಕೂಡ ಖುರಾನ್ ಪಠಣ ಮಾಡುತ್ತಿರಲಿಲ್ಲ. ಬಾಬಾರವರು ಕೆಲವು ಬಾರಿ ಪವಿತ್ರ ಶಬ್ದಗಳನ್ನು ಉಚ್ಚರಿಸುತ್ತಿದ್ದರು. ಆ ಎಲ್ಲಾ ಶಬ್ದಗಳನ್ನು ಕೂಡ ಅಬ್ದುಲ್ ಬಾಬಾ ತಮ್ಮ ನೋಟ್ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಬಾಬಾರವರು ಯಾವುದೇ ವಿಷಯವನ್ನು ಹೇಳಲಿ ಅದನ್ನು ಅಬ್ದುಲ್ ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಅಬ್ದುಲ್ ಬಾಬಾರವರು 1954 ಇಸವಿ ಏಪ್ರಿಲ್ ತಿಂಗಳಿನಲ್ಲಿ ಸಮಾಧಿ ಹೊಂದಿದರು. ಅಲ್ಲಿಯವರೆಗೆ ಅವರು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಸೇವೆಯನ್ನು ಅವಿರತವಾಗಿ ಸೇವೆಯನ್ನು ಸಲ್ಲಿಸಿದರು. ಅನೇಕ ಜನರ ಖಾಯಿಲೆಗಳಿಗೆ ಬಾಬಾರವರ ಉಧಿಯನ್ನು ನೀಡಿ ಗುಣಪಡಿಸುತ್ತಿದ್ದರು. ಸರಿ ಸುಮಾರು 66 ವರ್ಷಗಳ ಕಾಲ ಸಾಯಿಬಾಬಾರವರಿಗೆ ಅಂಗರಕ್ಷಕನಂತೆ ಅಥವಾ ಬಾಬಾರವರ ಸಮಾಧಿಯಾದ ಬಳಿಕ ಅವರ ಸಮಾಧಿಯನ್ನು ನೋಡಿಕೊಳ್ಳುವ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದರಿಂದ ಅಬ್ದುಲ್ ರವರನ್ನು "ಸಾಯಿಬಾಬಾರವರ ಹನುಮಂತ" ಎಂದು ಅನೇಕ ಸಾಯಿಭಕ್ತರು ವಿಶ್ಲೇಷಿಸಿದ್ದಾರೆ. ಅಬ್ದುಲ್ ರವರು ಸದಾಕಾಲ ತಮ್ಮ ಗುರುವಿನ ಸೇವೆಯನ್ನು ಯಾವುದೇ ಪ್ರತಿಫಲ ಅಪೇಕ್ಷಿಸದೆ ಕೇವಲ ಅನನ್ಯ ಭಕ್ತಿಯಿಂದ ಮಾಡುತ್ತಿದ್ದುದು ಒಂದು ವಿಶೇಷವೇ ಸರಿ. ಇವರು ಗುರುವಿನಲ್ಲಿ ನಮಗೆ ಇರಬೇಕಾದ ನಿಷ್ಠೆ ಮತ್ತು ಶ್ರದ್ಧೆಗೆ ಮಹೋನ್ನತ ನಿದರ್ಶನವಾಗಿದ್ದಾರೆ. ಇವರು ಸಾಯಿಬಾಬಾರವರಲ್ಲಿ ಅತ್ಯಂತ ಹೆಚ್ಚಿನ ಶ್ರದ್ಧೆ ಮತ್ತು ಸಬೂರಿಯನ್ನು ಹೊಂದಿದ್ದರು. ಸಾಯಿಬಾಬಾರವರು ಆಗಾಗ ಅಬ್ದುಲ್ ರವರಿಗೆ "ನೀನು ಬಹುಮಹಡಿ ಕಟ್ಟಡಗಳಲ್ಲಿ ಮತ್ತು ಮೇಲ್ಚಾವಣಿ ಇರುವ ಜಾಗದಲ್ಲಿ ವಾಸಿಸುವೆ ಮತ್ತು ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ" ಎಂದು ಹೇಳಿದ್ದರು. ಬಾಬಾರವರ ಹೇಳಿಕೆ ಮುಂದೆ ನಿಜವಾಯಿತು.ಏಕೆಂದರೆ ಅನೇಕ ವರ್ಷಗಳು ಅಬ್ದುಲ್ ಬಾಬಾರವರು ಬೂಟಿವಾಡಾದ ಮೇಲಿನ ಕೋಣೆಯಲ್ಲಿ ತಂಗಿದ್ದರು ಮತ್ತು ಅನೇಕ ಹಿಂದೂ ಮತ್ತು ಮುಸ್ಲಿಂ ಜನಾಂಗದ ಸಾಯಿಭಕ್ತರು ಇವರ ಮೇಲೆ ಅಪಾರ ಗೌರವ ಇಟ್ಟು ಇವರನ್ನು ಸಂದರ್ಶಿಸಲು ಮತ್ತು ಸಲಹೆಯನ್ನು ಪಡೆಯಲು ಬರುತ್ತಿದ್ದರು.
ಸಾಯಿಬಾಬಾರವರು ಅಬ್ದುಲ್ ರವರಿಗೆ ಯೋಗಿಯ ಹಾಗೆ ಜೀವನ ನಡೆಸಲು ಪ್ರೇರೇಪಿಸಿದ್ದರು. ಬಾಬಾರವರು ಇವರಿಗೆ ಅತಿ ಕಡಿಮೆ ಆಹಾರ ಸೇವನೆ ಮಾಡುವಂತೆ, ಆಹಾರ ಪದಾರ್ಥಗಳ ಮೇಲೆ ಹೆಚ್ಚಿಗೆ ಗಮನ ಹರಿಸದಂತೆ ಮತ್ತು ಅತಿ ಕಡಿಮೆ ಸಮಯ ನಿದ್ರಿಸುವಂತೆ ಸಲಹೆ ನೀಡಿದ್ದರು. ಬಾಬಾರವರ ಸಲಹೆಯಂತೆ ಅಬ್ದುಲ್ ಬಾಬಾರವರು ರಾತ್ರಿ ವೇಳೆ ನಿದ್ರಿಸದೆ ಮೊಣಕಾಲನ್ನು ಚಾಚಿಕೊಂಡು ನೋಟ್ ಪುಸ್ತಕದಿಂದ ಬಾಬಾರವರು ಹೇಳಿ ತಾವು ಬರೆದುಕೊಂಡ ವಿಷಯಗಳನ್ನು ಪಟಿಸುತ್ತಾ ಅದನ್ನೇ ಕುರಿತು ಧ್ಯಾನ ಮಾಡುತ್ತಿದ್ದರು.
ಒಂದು ರಾತ್ರಿ ಅಬ್ದುಲ್ ರವರು ಅತ್ಯಂತ ಬಳಲಿದ್ದರು.ಅದ್ದರಿಂದ ನಿದ್ರಿಸಲು ಅನುಕೂಲವಾಗುವಂತೆ ತಮ್ಮ ಕೈಗಳನ್ನು ಬೊಗಸೆಯಂತೆ ಮುಂದೆ ಮಾಡಿಕೊಂಡು ಅದರಲ್ಲಿ ತಮ್ಮ ತಲೆಯನ್ನು ಇಟ್ಟುಕೊಂಡು ಮಲಗಲು ಪ್ರಯತ್ನ ಪಡುತ್ತಿದ್ದರು. ಅದನ್ನು ನೋಡಿದ ಸಾಯಿಬಾಬಾರವರು "ಏನು ಅಬ್ದುಲ್, ನೀನು ಚಂದ್ರನನ್ನು ನೋಡಲು ಪ್ರಯತ್ನ ಪಡುತ್ತಿದ್ದೀಯಾ?" ಎಂದು ಕೇಳಿದರು. ಆ ರಾತ್ರಿ ಅಬ್ದುಲ್ ನಿದ್ರೆಯಲ್ಲಿ ತೂಕಡಿಸುತ್ತಾ ಬಾಬಾರವರ ಮೇಲೆ ಮತ್ತು ಅವರ ಗಾದಿಯ ಮೇಲೆ ಬಿದ್ದರು. ಆಗ ಬಾಬಾರವರು ಅಬ್ದುಲ್ ತಲೆಯ ಮೇಲೆ ಹೊಡೆದು ಅವರನ್ನು ಎಬ್ಬಿಸಿದರು. ಮಾರನೇ ದಿನ ಮಧ್ಯಾನ್ಹ 2 ಘಂಟೆಯ ಸಮಯದಲ್ಲಿ ಮುಖವನ್ನು ತೊಳೆಯಲು ತಮ್ಮ ಕೈಗಳನ್ನು ಬೊಗಸೆಯಂತೆ ಮಾಡಿಕೊಂಡು ನೋಡಿದಾಗ ಆ ನೀರಿನಲ್ಲಿ ದೊಡ್ಡ ಚಂದ್ರನು ಕಾಣಿಸಿದನು. ಇದಲ್ಲವೇ ಸಾಯಿಬಾಬಾರವರ ಲೀಲೆ ಎಂದರೆ?
ಅಬ್ದುಲ್ ರವರು ಹಳ್ಳಿಯ ಗಡಿಯಲ್ಲಿದ್ದ ನೀರಿನ ಬಳಿ ಬಟ್ಟೆಯನ್ನು ಒಗೆಯುವುದು, ಮಸೀದಿ, ಚಾವಡಿ ಮತ್ತು ಅದರ ಸುತ್ತಮುತ್ತಲಿನ ಬೀದಿಯನ್ನು ಗುಡಿಸುವುದು, ಮಸೀದಿ, ಚಾವಡಿಯಲ್ಲಿನ ದೀಪಗಳಿಗೆ ಎಣ್ಣೆಯನ್ನು ಹಾಕಿ ದೀಪ ಆರದಂತೆ ನೋಡಿಕೊಳ್ಳುವುದು, ಶಿರಡಿಯ ಬೀದಿಗಳನ್ನು ಚೆನ್ನಾಗಿ ಗುಡಿಸಿ ಬಾಬಾರವರು ಭಿಕ್ಷೆಗೆ ಹೋಗುತ್ತಿದ್ದ ಹಾದಿಯನ್ನು ಶುಚಿಯಾಗಿ ಇಡುವುದು ಮುಂತಾದ ಕೆಲಸಗಳನ್ನು ಮಾಡುತಿದ್ದರು. ಆದ ಕಾರಣ ಸಾಯಿಬಾಬಾರವರು ಅಬ್ದುಲ್ ರವರನ್ನು "ನನ್ನ ಜಾಡಮಾಲಿ" "ಹಲಾಲ್ ಕೋರ್" ಎಂದೆಲ್ಲ ಕರೆಯುತ್ತಿದ್ದರು. ಅಬ್ದುಲ್ ಮಸೀದಿಗೆ ನೀರನ್ನು ತಂದು ತುಂಬುವ ಮತ್ತು ಇತರ ಎಲ್ಲಾ ಸಾಯಿಬಾಬಾರವರು ಹೇಳಿದ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಸಾಯಿಬಾಬಾರವರು ಅಬ್ದುಲ್ ರವರಿಗೆ ಊಟ, ಬಟ್ಟೆ, ವಸತಿಯನ್ನು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಒಮ್ಮೆ 1927 ನೇ ಇಸವಿಯಲ್ಲಿ ರಾಧಾಕೃಷ್ಣ ಆಯಿ ಗತಿಸಿದ 11 ವರ್ಷಗಳ ನಂತರ ಅವರು ತಂಗುತ್ತಿದ್ದ ಕೋಣೆಯಲ್ಲಿ ಅಬ್ದುಲ್ ಕುರಾನ್ ಪಠಣ ಮಾಡುತ್ತಿದ್ದಾಗ ಆ ಕೋಣೆಯ ಶಿಥಿಲವಾದ ಗೋಡೆಗಳು ಅಬ್ದುಲ್ ಮೇಲೆ ಬಿದ್ದು ಅಬ್ದುಲ್ ರವರ ಕುತ್ತಿಗೆಯವರೆಗೂ ತುಂಬಿಕೊಂಡು ಅವರು ಒದ್ದಾಡುತ್ತಿದ್ದಾಗ ಸಾಯಿಬಾಬಾರವರು ಅವರನ್ನು ಅಪಾಯದಿಂದ ಕಾಪಾಡಿದರು.
ಅಬ್ದುಲ್ ಬಾಬಾರವರ ಮೊದಲ ಗುರು ಒಮ್ಮೆ ಶಿರಡಿಗೆ ಬಂದು ಅಬ್ದುಲ್ ರವರನ್ನು ತಮ್ಮ ಜೊತೆ ವಾಪಸ್ ಬರುವಂತೆ ಕರೆದರು. ಆಗ ಅಬ್ದುಲ್ ರವರು ಸಾಯಿಬಾಬಾರವರ ಅನುಮತಿ ಇಲ್ಲದೆ ತಾವು ಬರುವುದಿಲ್ಲವೆಂದು ತಿಳಿಸಿದರು. ಆ ಗುರುವು ಸಾಯಿಬಾಬಾರವರ ಬಳಿ ಬಂದು ಕೇಳಿಕೊಳ್ಳಲು ಸಾಯಿಯವರು ಅನುಮತಿ ನೀಡಲಿಲ್ಲ. ಅಬ್ದುಲ್ ರವರ ಗುರು ಬಂದ ಹಾಗೆಯೇ ವಾಪಸ್ ಶಿರಡಿಯಿಂದ ತೆರಳಿದರು.
ಸಾಯಿಬಾಬಾರವರು ಅನೇಕ ಬಾರಿ ತಮ್ಮ ಭಕ್ತರಿಗೆ ಬಯ್ಯುವುದರ ಮತ್ತು ಹೊಡೆಯುವುದರ ಮುಖೇನ ಆಶೀರ್ವಾದ ಮಾಡುತ್ತಿದ್ದರು. ಸಾಯಿಯವರು ಅನೇಕ ಬಾರಿ ಅಬ್ದುಲ್ ಮತ್ತು ಜೋಗ ರವರಿಗೆ ಹೊಡೆಯುತ್ತಿದ್ದರು ಮತ್ತು ಬಯ್ಯುತ್ತಿದ್ದರು. ಆದರೆ ಅಬ್ದುಲ್ ರವರು ಅವುಗಳನ್ನು ಆಶೀರ್ವಾದವೆಂದು ಪರಿಗಣಿಸುತ್ತಿದ್ದರು. ಬಾಬಾರವರು ಮಸೀದಿಗೆ ತೆರಳುವ ಮುಂಚೆ ಅಬ್ದುಲ್ ರವರ ಜೊತೆ ಚಾವಡಿಯಲ್ಲಿ ಕುಳಿತು ಅವರಿಗೆ ಅನೇಕ ಉಪದೇಶಗಳನ್ನು ಮತ್ತು ಭವಿಷ್ಯವಾಣಿಯನ್ನು ಹೇಳುತ್ತಿದ್ದರು. ಅಬ್ದುಲ್ ರವರ ನುಡಿಗಳು ಮತ್ತು ಅಬ್ದುಲ್ ರವರ ಬಳಿಯಿದ್ದ ನೋಟ್ ಪುಸ್ತಕಗಳ ಮಾಹಿತಿಯ ಪ್ರಕಾರ ಸಾಯಿಬಾಬಾರವರು ದಶಾವತಾರಗಳಲ್ಲಿ ಒಂದು ಎಂಬ ವಿಷಯದ ಉಲ್ಲೇಖ ಇದೆ ಎಂದು ಹೇಳಲಾಗುತ್ತದೆ. ಸಾಯಿಬಾಬಾರವರು ಭಾರತವನ್ನು ಆಳಿದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಕೇವಲ 9 ಜನ ದೊರೆಗಳು ಬಂದು ಹೋಗುತ್ತಾರೆ. ನಂತರ ಬ್ರಿಟಿಷ್ ಸಾಮ್ರಾಜ್ಯ ಕುಸಿಯುತ್ತದೆ ಎಂದು ನುಡಿದಿದ್ದರು. ಅವರ ವಾಣಿಯಂತೆ ಬ್ರಿಟಿಷ್ ಸಾಮ್ರಾಜ್ಯದ 9ನೇ ದೊರೆ ಆಳುತ್ತಿದ್ದ ಕಾಲದಲ್ಲಿ ನಮಗೆ ಸ್ವಾತಂತ್ರ್ಯ ದೊರಕಿ ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರ ಕೊನೆಗೊಂಡಿತು.
ಅಬ್ದುಲ್ ಬಾಬಾ ಕುಟೀರ
ಅಬ್ದುಲ್ ಬಾಬಾರವರ ಕುಟೀರವು ಚಾವಡಿಯ ಎದುರುಗಡೆ ಇದೆ. ಅಬ್ದುಲ್ ಬಾಬಾರವರಿಗೆ ಉಮ್ರಾನ್ ರಾವ್ ಬಿ ಎಂಬ ಹೆಂಡತಿ ಮತ್ತು ಒಬ್ಬ ಮಗನಿದ್ದನು. ಇವರ ತಂದೆಯವರಿಗೆ ನಾಂದೇಡ್ ಗ್ರಾಮಸ್ಥರು ಗೌರವದಿಂದ "ನಾಂದೇಡ್ ಗ್ರಾಮದ ಚೋಟು ಸುಲ್ತಾನ್" ಎಂದು ಕರೆಯುತ್ತಿದ್ದರು. ಅಬ್ದುಲ್ ಕುಟೀರ ಈಗ ಇರುವ ಸ್ಥಳದಲ್ಲಿ ಮೊದಲು ಒಂದು ಮಣ್ಣಿನ ಗುಡಿಸಲು ಇತ್ತು. ಸಾಯಿ ಮಹಾಸಮಾಧಿಯ ನಂತರ ಶಿರಡಿ ಸಂಸ್ಥಾನ ಪ್ರಾರಂಭವಾದ ಮೇಲೆ ಸಂಸ್ಥಾನದವರು ಈ ಜಾಗವನ್ನು ಅಬ್ದುಲ್ ರವರಿಗೆ ಭೋಗ್ಯಕ್ಕೆ ನೀಡಿದರು.
ಶಿರಡಿಗೆ ಬರುವ ಭಕ್ತರು ಅಬ್ದುಲ್ ಬಾಬಾ ಕುಟೀರದಲ್ಲಿರುವ "ಚಮತ್ಕಾರಿ ಚಿಮಟ" ವನ್ನು ಮುಟ್ಟುವ ಮತ್ತು ಅದರಿಂದ ಆಶೀರ್ವಾದ ಪಡೆಯುವ ಭಾಗ್ಯವನ್ನು ಹೊಂದಿದ್ದಾರೆ. ಏಕೆಂದರೆ, ಇದನ್ನು ಸ್ವತಃ ಸಾಯಿಬಾಬಾರವರೇ ಅಬ್ದುಲ್ ರವರಿಗೆ ನೀಡಿದರೆಂದು ಹೇಳಲಾಗುತ್ತದೆ. ಇದಕ್ಕೆ ಪ್ರತಿದಿನ ಧೂಪವನ್ನು ಹಚ್ಚಿ ಅಬ್ದುಲ್ ಬಾಬಾ ಪೂಜಿಸುತ್ತಿದ್ದರು. ಇದರ ಸಹಾಯದಿಂದ ಅಬ್ದುಲ್ ಬಾಬಾರವರು ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿದರೆಂದು ಹೇಳಲಾಗುತ್ತದೆ. ಅಬ್ದುಲ್ ಬಾಬಾ ಕುಟೀರದಲ್ಲಿ ಸಾಯಿಬಾಬಾರವರ ಅನೇಕ ಹಳೆಯ ಭಾವಚಿತ್ರಗಳನ್ನು ಸಾಯಿಭಕ್ತರು ನೋಡಬಹುದು.
ಸಾಯಿಬಾಬಾರವರು ಇವರಿಗೆ ಒಂದು ಸಟಕಾ ಮತ್ತು ಒಂದು ತಗಡಿನ ಪಾತ್ರೆಯನ್ನು ನೀಡಿದರೆಂದು ಹೇಳಲಾಗುತ್ತದೆ. ಆದರೆ, ಅಬ್ದುಲ್ ರವರು ಸಾಯಿಬಾಬಾರವರ ಉಪದೇಶಗಳನ್ನು, ವಾಣಿಯನ್ನು ಮತ್ತು ಅವರ ವಚನಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಂಡು ಅದನ್ನು ಪ್ರತಿದಿನ ಪವಿತ್ರ ಖುರಾನ್ ಎಂದು ತಿಳಿದು ಪಠಣ ಮಾಡುತಿದ್ದುದಕ್ಕೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು.
ಕನ್ನಡ ಅನುವಾದ - ಶ್ರೀಕಂಠ ಶರ್ಮ
No comments:
Post a Comment