Friday, July 2, 2010

ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ಪಾರಾಯಣ ಹಾಲ್ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ 

೧೯೯೯ ರ ತನಕ ದ್ವಾರಕಾಮಾಯಿಯ ಪಕ್ಕದಲ್ಲಿನ ಶ್ಯಾಮಸುಂದರ ಹಾಲ್ ಪಾರಾಯಣ ಹಾಲ್ ಆಗಿತ್ತು. ಸಾಯಿಬಾಬಾರವರು ದ್ವಾರಕಾಮಾಯಿಯಲ್ಲಿ ವಾಸಿಸುತ್ತಿದ್ದಾಗ ಈ ಜಾಗದಲ್ಲಿ ಒಂದು ಶಾಲೆಯಿತ್ತೆಂದು ತಿಳಿದುಬಂದಿದೆ. ಮಾಧವರಾವ್ ದೇಶಪಾಂಡೆ ಅಲಿಯಾಸ್ ಶ್ಯಾಮ (ಸಾಯಿಯವರು ಇಟ್ಟ ಹೆಸರು) ರವರು ಈ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಇವರು ಸಾಯಿಬಾಬಾರವರಿಗೆ ಅತ್ಯಂತ ಹಳೆಯ ಮತ್ತು ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಭಕ್ತರಾಗಿದ್ದರು. ಶ್ಯಾಮ ಅವರು ದ್ವಾರಕಾಮಾಯಿ ಮತ್ತು ಪಾರಾಯಣ ಹಾಲ್ ನಡುವೆ ಇದ್ದ ಒಂದು ಸಣ್ಣ ಕಿಟಕಿಯ ಸಂದಿಯಿಂದ ಆಗಾಗ್ಗೆ ಇಣುಕಿ ನೋಡುತ್ತಿದ್ದರು. ಅಲ್ಲಿ ಸಾಯಿಬಾಬಾರವರು ಮಾಡುತ್ತಿದ್ದ ಪವಾಡಗಳನ್ನು ಕಣ್ಣಾರೆ ಕಂಡು ಅವರಲ್ಲಿ ಸಂಪೂರ್ಣ ನಂಬಿಕೆ ಹುಟ್ಟಿ ಅವರ ಪರಮ ಭಕ್ತರಾದರು.


ಹಳೆಯ ಪಾರಾಯಣ ಹಾಲ್ (ಶ್ಯಾಮಸುಂದರ್ ಹಾಲ್)

ಸಾಯಿಬಾಬಾರವರ ಅನನ್ಯ ಭಕ್ತೆಯಾದ ಶ್ರೀಮತಿ.ರಾಧಾಕೃಷ್ಣ ಆಯಿಯವರು ಇಲ್ಲಿ ವಾಸ ಮಾಡುತ್ತಿದ್ದಿರಬಹುದೆಂದು ಹೇಳಲಾಗುತ್ತದೆ. ಸಾಯಿಬಾಬಾ ಸಂಸ್ಥಾನವು ದೊಡ್ಡ ಸಂಸ್ಥಾನವಾಗಿ ಬೆಳೆಯಲು ಇವರು ಪ್ರಮುಖವಾಗಿ  ಕಾರಣರು ಎಂದರೆ ತಪ್ಪಾಗಲಾರದು. ಸಾಯಿಬಾಬಾರವರು ತಮ್ಮ ಬಳಿಗೆ ಬಂದ ಭಕ್ತರನ್ನು ರಾಧಾಕೃಷ್ಣ ಆಯಿಯವರ ಬಳಿಗೆ ಹೋಗಲು ಹೇಳುತ್ತಿದ್ದರು ಮತ್ತು ಈ ಸ್ಥಳವನ್ನು "ಶಾಲೆ" ಎಂದು ಸಂಭೋದಿಸುತ್ತಿದ್ದರು ಎಂದು ತಿಳಿದುಬಂದಿದೆ. ಕೆಲವು ದಿನಗಳ ಕಾಲ ಅಬ್ದುಲ್ ಬಾಬಾರವರು ಇಲ್ಲಿ ವಾಸಿಸುತ್ತಿದ್ದರೆಂದು ತಿಳಿದುಬಂದಿದೆ. ಸಾಯಿಬಾಬಾರವರ ಮಹಾಸಮಾಧಿಗೆ ಕೆಲವು ದಿನಗಳ ಮುಂಚೆ ಈ ಜಾಗದಲ್ಲಿ ಒಂದು ಭಾಗವನ್ನು ಸಾಯಿಬಾಬಾರವರ ಅತ್ಯಂತ ಪ್ರೀತಿಯ ಕುದುರೆ "ಶ್ಯಾಮ ಸುಂದರ" ನಿಗೆ ಲಾಯವಾಗಿ ಉಪಯೋಗಿಸಲು ಆರಂಭ ಮಾಡಿದರು. ಇದನ್ನು ಕಟ್ಟಲು ಬೇಕಾದ ಹಣವನ್ನು  ಶೋಲಾಪುರದ ಸಖಾರಾಮ್ ಔರಂಗಬಾದ್ಕರ್ ರವರು ನೀಡಿದರು. ಇವರಿಗೆ ಮದುವೆಯಾಗಿ ೨೫ ವರ್ಷಗಳಾದರೂ ಮಕ್ಕಳಿರಲಿಲ್ಲ. ಸಾಯಿಬಾಬಾರವರ ಆಶೀರ್ವಾದದ ಫಲದಿಂದ ಇವರಿಗೆ ಮಕ್ಕಳಾಯಿತು. ಅದಕ್ಕೆ ಕೃತಜ್ಞತೆ ಅರ್ಪಿಸಲು ಇವರು ಸಾಯಿಬಾಬಾರವರಿಗೆ ೫೦೦ ರುಪಾಯಿಗಳನ್ನು ನೀಡಿದರು. ಆ ಹಣದಿಂದ ಶ್ಯಾಮ ಸುಂದರ ನಿಗೆ ಲಾಯವನ್ನು ಕಟ್ಟಲಾಯಿತು.

ಹೊಸ ಪಾರಾಯಣ ಹಾಲ್

ಈಗ ಹಳೆಯ ಪಾರಾಯಣ ಹಾಲ್ (ಶ್ಯಾಮಸುಂದರ್ ಹಾಲ್) ನ್ನು ಸ್ಟೋರ್ ರೂಂ (ಸಂಗ್ರಹ ಕೊಟಡಿ) ಯಾಗಿ ಬಳಸಲಾಗುತ್ತಿದೆ. ಹೊಸ ಪಾರಾಯಣ ಹಾಲ್ ನ್ನು ಶಿರಡಿ ದೇವಾಲಯದ ಪ್ರಾಂಗಣದಲ್ಲಿರುವ ಲೇಂಡಿ ಭಾಗ್ ನ ಪಶ್ಚಿಮ ದಿಕ್ಕಿನಲ್ಲಿ ಮತ್ತು ಸಂಸ್ಥಾನದ ಬುಕ್ ಸ್ಟೋರ್ ನ ಎದುರುಗಡೆಯಲ್ಲಿ ಸ್ಥಾಪಿಸಿರುತ್ತಾರೆ. ಪಾರಾಯಣ ಹಾಲ್ ಬೆಳಗ್ಗೆ ೫ ಘಂಟೆಯಿಂದ ರಾತ್ರಿ ೮ ಘಂಟೆಯವರೆಗೂ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ ಮತ್ತು  ವಿಶೇಷ ಹಬ್ಬದ ದಿನಗಳಾದ ರಾಮನವಮಿ, ಗುರುಪೂರ್ಣಿಮೆ, ವಿಜಯದಶಮಿ ಯಂತಹ ದಿನಗಳಲ್ಲಿ ರಾತ್ರಿಯಿಡಿ ತೆರೆದಿರುತ್ತದೆ.

No comments:

Post a Comment