Thursday, July 15, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಸಾಕೂರಿ ಆಶ್ರಮ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಸಾಕೂರಿ ಅಶ್ರಮವು ಶಿರಡಿಯಿಂದ ಕೇವಲ ೫ ಕಿಲೋಮೀಟರು ದೂರದಲ್ಲಿದೆ. ಶಿರಡಿ ಸಾಯಿಬಾಬಾರವರ ಪ್ರಮುಖ ಶಿಷ್ಯರಾದ ಉಪಾಸಿನಿ ಮಹಾರಾಜ್ ರವರು ಇಲ್ಲಿಗೆ ೧೯೧೭ ನೇ ಜುಲೈ ತಿಂಗಳಿನಲ್ಲಿ ಬಂದು ವಾಸಿಸಲು ಪ್ರಾರಂಭಿಸಿದರು. ಸಾಯಿಬಾಬಾರವರು ೧೯೧೮ ರಲ್ಲಿ ಸಮಾಧಿ ಹೊಂದಿದಾಗ ಅವರ ಪ್ರಮುಖ ಶಿಷ್ಯರಾಗಿ ಸಾಯಿಬಾಬಾರವರ ಅಂತಿಮ ಸಂಸ್ಕಾರಗಳನ್ನು ತಾವೇ ವಹಿಸಿಕೊಂಡರು. ಸಾಯಿಬಾಬಾರವರು ಇವರಿಗೆ ಅನೇಕ ದೈವಿಕ ಶಕ್ತಿಗಳನ್ನು ದಯಪಾಲಿಸಿದ್ದರು. ಇವರು ಅಧ್ಯಾತ್ಮಿಕ ವಿಷಯಗಳಲ್ಲಿ ಬಹಳವಾಗಿ ಮುಂದುವರಿದಿದ್ದರು. ೧೯೨೧ ರಲ್ಲಿ ಇವರು ಒಂದು ಸಣ್ಣ ಬಂಬೂವಿನ ಬೋನಿನಲ್ಲಿ ೧೩ ತಿಂಗಳ ಕಾಲ ಸ್ವಯಂ ಬಂಧನಕ್ಕೆ ಒಳಗಾಗಿದ್ದರು. ಇದಕ್ಕೆ ಕಾರಣ ಇವರ ಶಿಷ್ಯರನ್ನು ಯಾವುದೇ ಕಾರಣವಿಲ್ಲದೆ ಪೋಲಿಸಿನವರು ಬಂಧಿಸಿದ್ದರು. ಅದನ್ನು ವಿರೋಧಿಸುವುದಕ್ಕಾಗಿ ಉಪಾಸಿನಿ ಬಾಬಾ ಹೀಗೆ ಮಾಡಿದರು. ಅಲ್ಲಿಂದಲೇ ತಮ್ಮ ಊಟ ತಿಂಡಿಗಳನ್ನು ಮಾಡುತ್ತಿದ್ದರು ಮತ್ತು ಅಲ್ಲಿಂದಲೇ ತಮ್ಮ ಶಿಷ್ಯರಿಗೆ ಪ್ರವಚನಗಳನ್ನು ನೀಡುತ್ತಿದ್ದರು. ಅವರ ಶಿಷ್ಯರು ಪಂಜರದ ಹೊರಗಿನಿಂದಲೇ ಇವರಿಗೆ ಆರತಿಯನ್ನು ಮಾಡುತ್ತಿದ್ದರು. ಬಂಧನದಲ್ಲಿದ್ದ ಅವರ ಶಿಷ್ಯರು ಬಿಡುಗಡೆಯಾದ ಮೇಲೆಯೇ ಅವರು ಪಂಜರದಿಂದ ಹೊರಗೆ ಬಂದರು

ಶ್ರೀ ಉಪಾಸಿನಿ ಮಹಾರಾಜರ ಭಾವಚಿತ್ರ

ಶ್ರೀ ಸಾಯಿಬಾಬಾರವರು ತಮ್ಮ ಬಳಿಗೆ ಬಂದ ಭಕ್ತರನ್ನು ಉಪಾಸಿನಿ ಬಾಬಾರವರ ಬಳಿಗೆ ದರ್ಶನಕ್ಕೆ ಕಳುಹಿಸುತ್ತಿದ್ದರು. ಇವರು ೧೯೧೪ ರಲ್ಲಿ ಶಿರಡಿಯನ್ನು ಬಿಟ್ಟು ಸಿಂಧ್ ಮತ್ತು ನಾಗಪುರದ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿ ಯಾವುದೇ ಸೌಕರ್ಯ ಬಯಸದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಅಲ್ಲಿ ಅನೇಕ ಶ್ರೀಮಂತ ಹಾಗೂ ಮೇಲುವರ್ಗದ ಜನರು ಇವರ ಭಕ್ತರಾದರು. ೧೯೧೫ ರಲ್ಲಿ ಜಾತೀಯ ಕಲಹಗಳು ಪ್ರಾರಂಭವಾದವು. ಇದನ್ನು ನಿವಾರಿಸುವ ಸಲುವಾಗಿ ೧೯೧೫ ರಲ್ಲಿ ಉಪಾಸಿನಿ ಬಾಬಾರವರು ಖರಗಪುರದ ಒಬ್ಬ  ಬಡ ಹಿಂದುಳಿದ ವರ್ಗಕ್ಕೆ ಸೇರಿದ ನಾಮದೇವ ಎಂಬುವನ ಮನೆಯ ದನಂದ ಕೊಟ್ಟಿಗೆಯಲ್ಲಿ ವಾಸ ಮಾಡಲು ಆರಂಭಿಸಿದರು. ಅಷ್ಟೇ ಆಲ್ಲದೇ, ಅವನ ಮನೆಯಲ್ಲಿ ಮಾಡಿದ ಅಡಿಗೆಯನ್ನು ಕೂಡ ಊಟ ಮಾಡಲು ಆರಂಭಿಸಿದರು. ಮೇಲುವರ್ಗದ ಮತ್ತು ಶ್ರೀಮಂತ ಭಕ್ತರು ವಿಧಿ ಇಲ್ಲದೆ ನಾಮದೇವನ ಮನೆಗೆ ಬಂದು ದರ್ಶನ ಮಾಡುವ ಹಾಗೆ ಉಪಾಸಿನಿ ಮಾಡುವಲ್ಲಿ ಯಶಸ್ವಿಯಾದರು. ಸ್ವಲ್ಪ ದಿನಗಳು ಅಲ್ಲಿದ್ದು ನಂತರ ನಾಗಪುರಕ್ಕೆ ತೆರಳಿ ಅಲ್ಲಿಂದ ಪುನಃ ಶಿರಡಿಗೆ ಬಂದು ಖಂಡೋಬ ಮಂದಿರದಲ್ಲಿ ವಾಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಇವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿ ಉಪಾಸಿನಿಯವರು ಹೆಚ್ಚು ಜನಪ್ರಿಯರಾದರು. ಕ್ರಮೇಣ ಸಾಯಿಬಾಬಾರವರ ದರ್ಶನಕ್ಕೆ ಬರುವ ಭಕ್ತರೆಲ್ಲ ಉಪಾಸಿನಿ ಬಾಬಾರವರ ದರ್ಶನ ಪಡೆದೇ ಹಿಂತಿರುಗುತ್ತಿದ್ದರು. ಇವರು ಸಾಯಿಬಾಬಾರವರ ನಂತರ ಉತ್ತರಾಧಿಕಾರಿ ಎಂದು ಸಾಯಿಭಕ್ತರು ಭಾವಿಸಿದರು. ಒಮ್ಮೆ ಒಬ್ಬ ಸ್ವಾಮೀಜಿ ಸಾಯಿಯವರನ್ನು ಕಾಣಲು ಶಿರಡಿಗೆ ಬಂದರು. ಅವರು ಅಧ್ಯಾತ್ಮಿಕ ವಿಷಯದಲ್ಲಿ ಎಲ್ಲ ತಿಳಿದಿರುವೆಂದು ಗರ್ವದಿಂದ ಇದ್ದರು. ಇದನ್ನು ಮುರಿಯಲಿಕ್ಕೆ ಸಾಯಿಯವರು ಇವರನ್ನು ತಮಗೆ ಜರೂರಾಗಿ ೪೦೦/- ರೂಪಾಯಿಗಳು ಬೇಕಾಗಿದೆ ಎಂದು ಹೇಳಿ ಅದನ್ನು ಉಪಾಸಿನಿ ಬಾಬಾರವರಿಂದ ಕೇಳಿ ತರುವಂತೆ ಕಳುಹಿಸಿದರು. ಸ್ವಾಮೀಜಿ ಶಿರಡಿಯಿಂದ ಹೊರಟು ಸಾಕೂರಿ ಆಶ್ರಮಕ್ಕೆ ಬಂದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ಸಿಗುವುದೆಂಬ ಆಶೆಯಿಂದ ಬಂದಿದ್ದರು. ಅಲ್ಲಿಗೆ ಬಂದಾಗ ಉಪಾಸಿನಿ ಬಾಬಾರವರು ತಮ್ಮ ಎಂದಿನ ಶೈಲಿಯಲ್ಲಿ ನಗ್ನರಾಗಿ ಒಂದು ಮರದ ಕೆಳಗೆ ಕುಳಿತಿದ್ದರು. ಅಲ್ಲಿಗೆ ಬಂದು ಸಾಯಿಯವರು ತೆಗೆದುಕೊಂಡು ಬರುವಂತೆ ಹೇಳಿರುತ್ತಾರೆ ಎಂದು ಹೇಳಿ ೪೦೦/- ರುಪಾಯಿಗಳನ್ನು ಕೊಡುವಂತೆ ಒತ್ತಾಯ ಮಾಡಿದರು. ಇವರನ್ನು ನೋಡಿದ ಕೂಡಲೇ ಉಪಾಸಿನಿ ಬಾಬಾರವರು ಕೋಪದಿಂದ ಎದ್ದು ನಿಂತು ಇವರನ್ನು ಹಿಡಿದೆಳೆದು ಚೆನ್ನಾಗಿ ಥಳಿಸಿದರು. ಇದರಿಂದ ಭಯಭೀತರಾದ ಸ್ವಾಮೀಜಿ ಶಿರಡಿಗೆ ಓಡಿ ಬಂದರು. ಸಾಯಿಯವರು ಇವರನ್ನು ನೋಡಿ ನಸುನಕ್ಕರು. ಸ್ವಾಮೀಜಿಗೆ ನಿಜವಾಗಿ ಒಳ್ಳೆಯ ಆಶೀರ್ವಾದವೇ ಫಲಿಸಿತ್ತು.



                          ಸಾಕೂರಿ ಆಶ್ರಮದ ಹೊರನೋಟ

                       ಸಾಕೂರಿ ಆಶ್ರಮದ ಹೆಬ್ಬಾಗಿಲು



ಉಪಾಸಿನಿ ಬಾಬಾ ಕುಳಿತುಕೊಳ್ಳುತ್ತಿದ್ದ ಸ್ಥಳ ಮತ್ತು ಅವರ ಪಾದುಕೆಗಳು

೧೯೪೧ ರಲ್ಲಿ ಗೋದಾವರಿ ಮಾತಾ ಸಾಕೂರಿ ಆಶ್ರಮದ ಅಧಿಕಾರವನ್ನು ತಮ್ಮ ಗುರುಗಳಾದ ಉಪಾಸಿನಿ ಬಾಬಾರವರಿಂದ ವಹಿಸಿಕೊಂಡರು. ಆಗ ಇವರಿಗೆ ಕೇವಲ ೨೬ ವರ್ಷಗಳು. ಆಗಲೇ ಇವರು ಆಧ್ಯಾತ್ಮಿಕವಾಗಿ ಬಹಳ ಬೆಳೆದಿದ್ದರು. ಇವರು ನೋಡಲು ಬಹಳ ಆಕರ್ಷಕವಾಗಿದ್ದರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಇವರು ಬಹಳ ಮೃದು ಸ್ವಭಾವವನ್ನು ಹೊಂದಿದ್ದರು ಮತ್ತು ಮಿತಭಾಷಿಯಾಗಿದ್ದರು.


                       ಪೂಜ್ಯ ಗೋದಾವರಿ ಮಾತಾ

ಚಿಂತಾಮಣಿ ವಿನಾಯಕ

ಸಾಕೂರಿ ಆಶ್ರಮದಲ್ಲಿ ಒಂದು ಅರಳಿ ಮರವಿದೆ. ಆ ಮರದಲ್ಲಿ  ಗಣೇಶನ ಆಕಾರವು ನೈಸರ್ಗಿಕವಾಗಿ ಮೂಡಿಬಂದಿದೆ. ಇದನ್ನು ಚಿಂತಾಮಣಿ ವಿನಾಯಕ ಎಂದು ಕರೆಯುತ್ತಾರೆ. ಏಕೆಂದರೆ, ಇದು ಬೇಡಿದ್ದನ್ನೆಲ್ಲ ಕೊಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮೂಡಿದೆ. ಈ ಮರಕ್ಕೆ ಮತ್ತು ಅದರಲ್ಲಿ ಮೂಡಿರುವ ಗಣೇಶನಿಗೆ ದೂರ್ವೆಯಿಂದ ಪೂಜಿಸಿ ೯ ಪ್ರದಕ್ಷಿಣೆ ಮಾಡಿದರೆ ಭಕ್ತರ ಬಯಕೆಯು ನೆರವೇರುತ್ತದೆ ಎಂಬ ನಂಬಿಕೆಯಿದೆ. ಭಕ್ತರು ತಮ್ಮ ಇಚ್ಛೆ ಪೂರೈಸಿದ ಬಳಿಕ ಪುನಃ ಇಲ್ಲಿಗೆ ಬಂದು ಚಿಂತಾಮಣಿ ವಿನಾಯಕನಿಗೆ ತೆಂಗಿನಕಾಯಿಯಲ್ಲಿ ಹಾರವನ್ನು ಮಾಡಿ ಹರಕೆಯನ್ನು ಪೂರೈಸುವ ಸಂಪ್ರದಾಯ ಬೆಳೆದುಬಂದಿದೆ.


                            ಚಿಂತಾಮಣಿ ವಿನಾಯಕನ ಗುಡಿ


       ಮರದಲ್ಲಿ ಉಧ್ಭವವಾಗಿರುವ ಚಿಂತಾಮಣಿ ವಿನಾಯಕ

ಏಕ ಮುಖದ ದತ್ತಾತ್ರೇಯ
ಒಮ್ಮೆ ಶಿಂಧೆ ವಂಶಕ್ಕೆ ಸೇರಿದ ಗ್ವಾಲಿಯರ್ ರಾಜ್ಯದ ರಾಣಿ ಉಪಾಸಿನಿ ಬಾಬಾರವರ ದರ್ಶನಕ್ಕಾಗಿ ಬಂದು ಸಾಕೂರಿ ಆಶ್ರಮದಲ್ಲಿ ೧ ತಿಂಗಳು ತಂಗಿದ್ದರು. ರಾಣಿಯು ಅಂದುಕೊಂಡಿದ್ದು ನೆರವೇರಿದ ನಂತರ ಆಕೆ ಮತ್ತೆ ಸಾಕೂರಿ ಆಶ್ರಮಕ್ಕೆ ಬಾಬಾ ದರ್ಶನಕ್ಕೆ ಬಂದರು. ಆಗ ಉಪಾಸಿನಿ ಬಾಬಾರವರು ರಾಣಿಗೆ "ಏಕ ಮುಖದ ದತ್ತಾತ್ರೇಯ" ನ ದೇವಸ್ಥಾನವನ್ನು ನಿರ್ಮಿಸುವಂತೆ ತಿಳಿಸಿದರು.  ಹೀಗೆ ೧೯೨೫ ರಲ್ಲಿ ದೇವಾಲಯದ ಕೆಲಸ ಪ್ರಾರಂಭವಾಯಿತು. ಶ್ರೀಯುತ. ವಾಲಿಂಬೆಯವರು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡರು. ಇವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು ಬಾಬಾರವರ ಮಾರ್ಗದರ್ಶನದಲ್ಲಿ ದೇವಾಲಯದ ಕೆಲಸವನ್ನು ೧೯೨೮ ರಲ್ಲಿ ಪೂರ್ಣಗೊಳಿಸಿದರು. ಈ ದೇವಾಲಯದಲ್ಲಿ ಮೊದಲು ಸಾಯಿಬಾಬಾರವರ ಮತ್ತು ಉಪಾಸಿನಿ ಬಾಬಾರವರ ಭಾವಚಿತ್ರ ಮತ್ತು ಸಾಯಿಬಾಬಾರವರ ಪಾದುಕೆಗಳು ಮಾತ್ರ ಇದ್ದವು. ಉಪಾಸಿನಿ ಬಾಬಾರವರು ಸಾಯಿಯವರ ಪಾದುಕೆಗಳ ಮೇಲೆ ನಿಲ್ಲುತ್ತಿದ್ದರು ಮತ್ತು ಆ ಸಮಯದಲ್ಲಿ ಅತ್ಯಂತ ಚಿಕ್ಕ ವಯಸ್ಸಿನವರಾಗಿದ್ದ ಗೋದಾವರಿ ಮಾತಾ ಅವರನ್ನು ಕೂಡ ಸಾಯಿಯವರ ಪಾದುಕೆಗಳ ಮೇಲೆ ನಿಲ್ಲಿಸುತ್ತಿದ್ದರು. ಆದ್ದರಿಂದ ಈ ಪಾದುಕೆಗಳಿಗೆ ಹೆಚ್ಚಿನ ಮಹತ್ವವಿದೆ. 

 
                            ಏಕ ಮುಖಿ ದತ್ತಾತ್ರೇಯನ ಸುಂದರ ವಿಗ್ರಹ

ಏಕ ಮುಖಿ ದತ್ತಾತ್ರೇಯನ ಮಂದಿರ ಪ್ರವೇಶಿಸಿದಾಗ ಮೊದಲು ಹನುಮಂತನ ವಿಗ್ರಹ ಕಾಣಸಿಗುತ್ತದೆ. ಉಪಾಸಿನಿ ಬಾಬಾ ಮೊದಲು ಸಾಕೂರಿಗೆ ಬಂದಾಗ ಇದೇ ಹನುಮಂತನ ವಿಗ್ರಹದ ಪಕ್ಕದ ಗುಡಿಸಿಲಿನಲ್ಲಿ ಅನೇಕ ದಿನಗಳು ವಾಸ ಮಾಡಿದ್ದಾರೆ. ಈ ಸುಂದರ ಏಕ ಮುಖಿ ದತ್ತಾತ್ರೇಯನ ವಿಗ್ರಹವನ್ನು ಜೈಪುರದ ಪ್ರಸಿದ್ದ ಶಿಲ್ಪಿಯೋಬ್ಬರು ಉಪಾಸಿನಿ ಬಾಬಾರವರ ನಿರ್ದೇಶನದಂತೆ ಸಾಕೂರಿಯಲ್ಲೇ ನೆಲೆಸಿ ನಿರ್ಮಿಸಿದ್ದಾರೆ. ಒಮ್ಮೆ ಗೋದಾವರಿ ಮಾತಾಜಿ ಹೂತೋಟದಲ್ಲಿ ನೀರೆರೆಯುತ್ತಿದ್ದಾಗ ಉಪಾಸಿನಿ ಬಾಬಾರವರು ಗೋದಾವರಿ ಮಾತಾಜಿಯವರನ್ನು ಕರೆದು ಫೋಟೋ ತೆಗೆಸಿಕೊಳ್ಳಲು ಹೇಳಿದರು ಮತ್ತು ಆ ಶಿಲ್ಪಿಗೆ ಆ ಫೋಟೋವನ್ನು ನೀಡಿ ಆ ಫೋಟೋದಲ್ಲಿರುವಂತೆಯೇ ವಿಗ್ರಹವನ್ನು ಕಡೆಯಲು ಹೇಳಿದರು. ಈ ವಿಗ್ರಹದ ಮುಖವು ಗೋದಾವರಿ ಮಾತಾಜಿಯವರಂತೆ ಇದೆ. ಉಪಾಸಿನಿ ಬಾಬಾರವರಂತೆ ನಾರು ಮಡಿಯನ್ನು ಹೊಂದಿದೆ. ಶ್ರೀ ಸಾಯಿಬಾಬಾರವರು ವಿಷ್ಣುವಿನ ಅವತಾರವೆಂದು ಸಾಯಿಭಕ್ತರು ಭಾವಿಸುವುದರಿಂದ ವಿಗ್ರಹಕ್ಕೆ ೪ ಕೈಗಳನ್ನು ಕೆತ್ತಲಾಗಿದೆ. ಒಂದೊಂದು ಕೈಗಳಲ್ಲಿ ಶಂಖ, ಚಕ್ರ, ಗಧಾ, ಪದ್ಮವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಆದುದರಿಂದ ಈ ವಿಗ್ರಹವು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಏಕೆಂದರೆ, ಆಧ್ಯಾತ್ಮದ ಆಧಾರಸ್ಥಂಭಗಳಾದ ಸಾಯಿಬಾಬಾ, ಉಪಾಸಿನಿ ಬಾಬಾ ಮತ್ತು ಗೋದಾವರಿ ಮಾತಾಜಿಯವರ ತ್ರಿವೇಣಿ ಸಂಗಮ ಈ ವಿಗ್ರಹದಲ್ಲಿದೆ.

ಈ ಸುಂದರ ವಿಗ್ರಹವನ್ನು ೧೯೪೩ ರಲ್ಲಿ ಪುಷ್ಯ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ಗೋದಾವರಿ ಮಾತಾರವರ ಜನ್ಮ ದಿನ ಮತ್ತು ದತ್ತಾತ್ರೇಯನ ಜಯಂತಿಯನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಈ ಸ್ಥಳದಲ್ಲಿ ಮೊದಲು ದಿನದ ೨೪ ಘಂಟೆಗಳೂ ನಾಮಸ್ಮರಣೆ ನಡೆಯುತ್ತಲೇ ಇತ್ತು. ಆದರೆ ಈಗ ರಾತ್ರಿಯ ವೇಳೆ ಮಂದಿರವನ್ನು ಮುಚ್ಚಲಾಗುತ್ತದೆ.

ಪ್ರತಿದಿನ ಎಲ್ಲ ಆರತಿಗಳೂ ಮೊದಲು ದತ್ತ ಮಂದಿರದಲ್ಲಿ ನಡೆಯುತ್ತದೆ. ನಂತರ ಜೋಪಡಿಯಲ್ಲಿ ನಡೆಯುತ್ತದೆ. ಈ ಮಂದಿರವನ್ನು ಬಹಳ ಸುಂದರವಾಗಿ ಮತ್ತು ಚಾರಿತ್ರಿಕ ಹಿನ್ನೆಲೆಗೆ ಅನುಗುಣವಾಗಿ ಕಟ್ಟಲಾಗಿದೆ. ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಸೂರ್ಯನು ಕುಂಭ ಮತ್ತು ಮೀನ ರಾಶಿಯಲ್ಲಿ ಸಂಚರಿಸುವಾಗ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯನು ಸಿಂಹ ಮತ್ತು ಕನ್ಯಾ ರಾಶಿಯಲ್ಲಿ ಸಂಚರಿಸುವಾಗ ಸೂರ್ಯನ ಕಿರಣಗಳು ನೇರವಾಗಿ ದತ್ತಾತ್ರೇಯನ ವಿಗ್ರಹದ ಮೇಲೆಯೇ ಮೊದಲು ಬೀಳುತ್ತದೆ. ಆಗ ದತ್ತಾತ್ರೇಯನ ವಿಗ್ರಹವು ಸೂರ್ಯನ ಬೆಳಕಿನಲ್ಲಿ ಇನ್ನು ಹೆಚ್ಚು ಪ್ರಜ್ವಲಿಸುತ್ತದೆ.

ಸಾಕೂರಿ ಆಶ್ರಮದಲ್ಲಿ ಬಹಳ ಶ್ರದ್ದೆಯಿಂದ ಸಾಯಿ ಸಚ್ಚರಿತೆ ಪಾರಾಯಣ, ಶ್ರೀ ಧ್ಯಾನೇಶ್ವರಿ ಪಾರಾಯಣ, ಶ್ರೀ ಗುರುಚರಿತ್ರೆ ಪಾರಾಯಣ ಮತ್ತು ಹರಿನಾಮ ಸಪ್ತಾಹಗಳನ್ನು ದತ್ತ ಜಯಂತಿಯ ಸಮಯದಲ್ಲಿ ಆಚರಿಸುತ್ತಾರೆ.

ದತ್ತ ಜಯಂತಿಯ ದಿವಸ ಮಹಾ ಪೂಜೆ, ಶ್ರೀ ಗುರು ಗೀತಾ ಪಠಣ, ಔದುಂಬರ ಪೂಜೆ, ಗೋಪೂಜೆ, ಶ್ವಾನ ಪೂಜೆ, ಕೀರ್ತನೆ ಮತ್ತು ದತ್ತನ ಜನ್ಮೋತ್ಸವಗಳನ್ನು ಆಚರಿಸಲಾಗುತ್ತದೆ. ಮಾರನೇಯ ದಿವಸ ಶ್ರೀ ದತ್ತ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅಂದು ಅನ್ನದಾನ ವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ.

ದತ್ತಾತ್ರೇಯ ಮಂದಿರದ ಪ್ರಾಂಗಣದಲ್ಲಿ ಗಣೇಶನ ಮಂದಿರ, ಶನಿ ದೇವನ ಮಂದಿರ ಮತ್ತು ಖಂಡೋಬ ಮಂದಿರಗಳು ಇವೆ. ಶಂಕರನ ಮಂದಿರದಲ್ಲಿ ಬೇತಾಳನ ವಿಗ್ರಹ, ಮಹಾಮಾರಿಯ ವಿಗ್ರಹ ಮತ್ತು ಪ್ಲೇಗು ದೇವರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಒಮ್ಮೆ ಸಾಕೂರಿಯಲ್ಲಿ ಪ್ಲೇಗು ಮಹಾಮಾರಿ ಬಂದಾಗ ಉಪಾಸಿನಿ ಬಾಬಾರವರು ಈ ವಿಗ್ರಹಗಳನ್ನು ಸ್ಥಾಪಿಸಿದರು ಮತ್ತು ಅವುಗಳಿಗೆ ದೇವರುಗಳ ಸ್ಥಾನವನ್ನು ನೀಡಿದರು ಎಂದು ತಿಳಿದು ಬಂದಿದೆ. ಆಲ್ಲದೇ, ಒಂದು ದೊಡ್ಡ ಕಂಚಿನ ಘಂಟೆಯನ್ನು ಸ್ಥಾಪಿಸಿ ಅದನ್ನು ಬಾರಿಸಲು ಊರಿನ ಜನರಿಗೆ ಹೇಳಿದರೆಂದು ಮತ್ತು ಹಾಗೆ ಮಾಡಿದ್ದರಿಂದ ಪ್ಲೇಗು ಮಹಾಮಾರಿ ಹೊರಟು ಹೋಯಿತೆಂದು ತಿಳಿದುಬಂದಿದೆ.

ಪ್ರತಿ ಗುರುವಾರ ದತ್ತ ಮಂದಿರದಿಂದ ಜೋಪಡಿಗೆ ಮೆರವಣಿಗೆ ಕಾರ್ಯಕ್ರಮವಿರುತ್ತದೆ ಮತ್ತು ಕೆಲವು ವಿಶೇಷ ಉತ್ಸವದ ದಿನಗಳಲ್ಲಿ ರಥೋತ್ಸವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗುತ್ತದೆ.

ಈ ಏಕ ಮುಖಿ ದತ್ತ ಮಂದಿರ ಇಡೀ ವಿಶ್ವದಲ್ಲೇ ಮೊದಲು ಎಂದು ಹೇಳಲಾಗುತ್ತದೆ. ಬೇರೆ ಎಲ್ಲ ಕಡೆಗಳಲ್ಲಿ ದತ್ತಾತ್ರೇಯನ ವಿಗ್ರಹದಲ್ಲಿ ೩ ಮುಖಗಳು ಇರುತ್ತವೆ. ಆಲ್ಲದೇ, ಸಾಕೂರಿ ಆಶ್ರಮದಲ್ಲಿ ಪೂಜೆಗಳು, ಹೋಮಗಳು ಮತ್ತು ಇತರ ಎಲ್ಲ ಕಾರ್ಯಕ್ರಮಗಳನ್ನು ಹೆಂಗಸರೇ (ಕನ್ಯಾಕುಮಾರಿಯರು) ಮಾಡುತ್ತಾರೆ. ಇದು ಕೂಡ ಒಂದು ವಿಶೇಷ ಸಂಗತಿಯೆಂದೇ ಹೇಳಬಹುದು. 

No comments:

Post a Comment