ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಹಸ್ತವನ್ನು ನೀಡಿದ ಕರುಣಾಮಯಿ ಸಾಯಿಬಾಬಾ (ಶ್ರೀಮತಿ.ವಂದನ ಕಾಮತ್ ರವರು ಸಾಯಿಲೀಲಾ ಪತ್ರಿಕೆಯ ಸೆಪ್ಟೆಂಬರ್-ಅಕ್ಟೋಬರ್ ೨೦೦೯ ಸಂಚಿಕೆಯಲ್ಲಿ ತಿಳಿಸಿರುವಂತೆ)
ಶ್ರೀಮತಿ.ವಂದನ ಕಾಮತ್ ರವರು ಬೆಂಗಳೂರಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ತಮ್ಮ ಮನೆಯವರೊಂದಿಗೆ ವಾಸಿಸುತ್ತಿದ್ದರು. ಅವರು ಬಹಳ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರು.
ಆಗ ಅವರಿಗೆ ಸಾಯಿಬಾಬಾ ಯಾರೆಂದು ಗೊತ್ತಿರಲಿಲ್ಲ. ಆದರೆ ಸಾಯಿಯವರ ದಯೆಯಿಂದ ಇವರ ಮನೆಯ ಮಾಲೀಕರ ಸೊಸೆ ವಂದನಾರವರಿಗೆ ಸಾಯಿ ಸಚ್ಚರಿತೆಯನ್ನು ಕೊಟ್ಟು ಓದಲು ತಿಳಿಸಿದರು ಮತ್ತು ಒಳ್ಳೆಯದಾಗುವುದೆಂದು ಭರವಸೆ ನೀಡಿದರು.
ಒಂದು ದಿನ ಇದ್ದಕ್ಕಿದ್ದಂತೆ ಮನೆಯ ಮಾಲೀಕರು ಬಂದು ವಂದನಾರವರಿಗೆ ಮನೆಯನ್ನು ಖಾಲಿ ಮಾಡುವಂತೆ ತಿಳಿಸಿದರು. ಇದನ್ನು ಕೇಳಿ ವಂದನಾರವರಿಗೆ ಸಿಡಿಲು ಬಡಿದಂತಾಯಿತು. ಏಕೆಂದರೆ, ಅವರ ಬಳಿ ಬೇರೆ ಮನೆಗೆ ಬಾಡಿಗೆಗೆ ಹೋಗಲು ಹಣದ ಕೊರತೆಯಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯ ಸಮಯದಲ್ಲಿ ವಂದನಾರವರಿಗೆ ಶಿರಡಿಗೆ ಹೋಗಿಬರುವ ಅವಕಾಶ ಒದಗಿ ಬಂದಿತು. ಅದರಂತೆ ಅವರು ಮನೆಯವರೊಂದಿಗೆ ಶಿರಡಿಗೆ ಹೋಗಿ ಬಂದರು. ಶಿರಡಿಯಿಂದ ವಾಪಸಾದ ನಂತರ ತಮ್ಮ ಮನೆಯವರಿಗೆ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿದ್ದ ಸ್ನೇಹಿತರೊಂದಿಗೆ ತಮ್ಮ ಕಷ್ಟಗಳನ್ನೆಲ್ಲಾ ತೋಡಿಕೊಂಡರು.
ಆ ಸ್ನೇಹಿತರು ಇವರಿಗೆ ಒಂದು ಮನೆಯನ್ನು ಕೊಂಡುಕೊಳ್ಳುವಂತೆ ಸಲಹೆ ನೀಡಿದರು. ಆ ಮಾತನ್ನು ಕೇಳಿ ವಂದನಾರವರಿಗೆ ಆ ಕೆಲಸ ತಮ್ಮಿಂದ ಸಾಧ್ಯವಿಲ್ಲ ಎಂದೆನಿಸಿತು. ಏಕೆಂದರೆ ಆಗ ಅವರ ಬಳಿ ಹೊಸ ಮನೆಗೆ ಬಾಡಿಗೆ ಕೊಡಲು ಕೂಡ ಹಣವಿರಲಿಲ್ಲ. ಆದರೆ, ನಾವು ಅಂದುಕೊಳ್ಳುವುದೇ ಒಂದು, ಸಾಯಿಯವರ ನಿರ್ಧಾರವೇ ಬೇರೆಯಾಗಿರುತ್ತದೆ. ಇಲ್ಲಿ ಹಾಗೆಯೇ ಆಯಿತು. ಅವರ ಸ್ನೇಹಿತರು ಬರಿಯ ಸಲಹೆಯನ್ನು ನೀಡಿದ್ದು ಮಾತ್ರವಲ್ಲದೆ ತ್ಯಾಗರಾಜನಗರದ ಸಾಯಿಮಂದಿರದ ಹತ್ತಿರವಿದ್ದ ಒಂದು ಖಾಲಿ ನಿವೇಶನವನ್ನು ತೆಗೆದುಕೂಳ್ಳಲು ೭೫,೦೦೦/- ರೂಗಳನ್ನು ಕೂಡ ನೀಡಿದರು. ವಂದನರವರ ಮನೆಯವರಿಗೆ ಇದರಿಂದ ಬಹಳ ಸಂತೋಷವಾಯಿತು. ಆದರೆ ಆ ನಿವೇಶನದ ಬೆಲೆ ಲಕ್ಷಕ್ಕಿಂತ ಹೆಚ್ಚಾಗಿತ್ತು. ಆದ್ದರಿಂದ ಮಿಕ್ಕ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆ ಮನೆಯವರನ್ನು ಕಾಡತೊಡಗಿತು.
ಇದೆಲ್ಲದರ ಮಧ್ಯೆ ವಂದನಾರವರ ಮಾವನವರು ತೀರಿಕೊಂಡರು. ಅವರು ಬರೆದ ಉಯಿಲಿಯಿಂದ ಇವರಿಗೆ ೧ ಲಕ್ಷ ರೂಪಾಯಿಗಳು ದೊರೆಯಿತು. ಉಳಿದ ಹಣವನ್ನು ಇವರಿಗೆ ತಿಳಿದವರಿಂದ ಸಾಲ ಪಡೆದು ಆ ನಿವೇಶನವನ್ನು ಕೊಂಡುಕೊಂಡರು.
ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಇವರ ಮನೆಯವರೆಲ್ಲ ಅನನ್ಯ ಸಾಯಿಭಕ್ತರಾಗಿದ್ದರು ಮತ್ತು ತಪ್ಪದೆ ಸಾಯಿಬಾಬಾರವರನ್ನು ಪೂಜಿಸುತ್ತಿದ್ದರು. ನಿವೇಶನವನ್ನು ಕೊಂಡು ಭೂಮಿ ಪೂಜೆಯನ್ನು ಮಾಡಿದರು. ಆದರೆ ಕೈನಲ್ಲಿ ಹಣವಿಲ್ಲದೆ ಒಂದು ವರ್ಷಗಳ ಕಾಲ ಮನೆಯನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸಲಿಲ್ಲ. ಆ ಸಮಯದಲ್ಲಿ ವಂದನಾರವರಿಗೆ ಸಾಯಿ ಸಚ್ಚರಿತೆಯಲ್ಲಿ ಬರುವ ಒಂದು ಘಟನೆ ಜ್ಞಾಪಕಕ್ಕೆ ಬಂದಿತು. ಅದೇನೆಂದರೆ, ಒಬ್ಬ ಭಕ್ತರು ಸಾಯಿಬಾಬಾರವರ ಆದೇಶದಂತೆ ಒಂದು ಕರಿ ನಾಯಿಗೆ ಮೊಸರನ್ನವನ್ನು ನೀಡಿದಾಗ ಆ ಭಕ್ತರ ಆಶೆಗಳು ಫಲಿಸಿದ ಘಟನೆ ನೆನಪಿಗೆ ಬಂದಿತು. ಅದರಂತೆ ವಂದನಾರವರು ೭ ಗುರುವಾರಗಳು ತಪ್ಪದೆ ಕರಿ ನಾಯಿಗೆ ಮೊಸರನ್ನ ನೀಡುವುದಾಗಿ ಮತ್ತು ತಮ್ಮ ಮನೆಯನ್ನು ಕಟ್ಟುವ ಆಶೆಯನ್ನು ಪೂರೈಸಬೇಕೆಂದು ಸಾಯಿಬಾಬಾರವರಲ್ಲಿ ಪ್ರಾರ್ಥಿಸಿದರು.
ಅದರಂತೆ ಮೊದಲನೇ ಗುರುವಾರ ಮೊಸರು ಮತ್ತು ಅನ್ನವನ್ನು ಚೆನ್ನಾಗಿ ಕಲೆಸಿ ಅದನ್ನು ಮನೆಯ ಮುಂದಿತ್ತು ಕರಿ ನಾಯಿಗೊಸ್ಕರ ಕಾಯುತ್ತಿದ್ದರು. ಸ್ವಲ್ಪ ಸಮಯ ಕಳೆದ ಬಳಿಕ ಬಿಳಿಯ ಪಟ್ಟೆಗಳಿದ್ದ ಕರಿಯ ನಾಯಿಯೊಂದು ಇವರು ಇಟ್ಟಿದ್ದ ಊಟದ ತಟ್ಟೆಯ ಹತ್ತಿರ ಬಾಲವನ್ನು ಅಲ್ಲಾಡಿಸುತ್ತಾ ಬಂದಿತು. ಆ ನಾಯಿಯನ್ನು ನೋಡಿ ವಂದನಾರವರಿಗೆ ಯೋಚನೆಯಾಯಿತು. ಏಕೆಂದರೆ ಆ ನಾಯಿಯು ಪೂರ್ತಿ ಕರಿಯ ನಾಯಿಯಾಗಿರಲಿಲ್ಲ. ಆ ಊಟದ ತಟ್ಟೆಯ ಬಳಿ ಬಂದು ವಾಸನೆಯನ್ನು ನೋಡಿದ ಆ ನಾಯಿ ಅದರಲ್ಲಿದ್ದ ಅನ್ನವನ್ನು ತಿನ್ನದೇ ಹಾಗೆಯೇ ಹಿಂದೆ ಮುಂದೆ ತಿರುಗಾಡುತ್ತಿತ್ತು. ಹೀಗೆ ೧೫ ನಿಮಿಷಗಳು ಕಳೆಯಿತು. ಕಡೆಗೂ ಆ ನಾಯಿಯು ತಟ್ಟೆಯಲ್ಲಿದ್ದ ಅನ್ನವನ್ನು ಮುತ್ತದೆ ಹಾಗೆಯೇ ಹೊರಟು ಹೋಯಿತು. ವಂದನಾರವರು ಬಹಳ ಹೊತ್ತು ಕರಿಯ ನಾಯಿಯು ಬರುವುದೆಂಬ ಆಶೆಯಿಂದ ಕಾಯುತ್ತಿದ್ದರು ಮತ್ತು ಬಹಳ ಹೊತ್ತಾದುದರಿಂದ ಇನ್ನು ಬರುವುದಿಲ್ಲವೆಂದು ನಿರಾಶೆ ಹೊಂದಿದರು.
ಸ್ವಲ್ಪ ಸಮಯದ ನಂತರ ಹಿಂದೆ ಬಂದ ನಾಯಿಯು ಅದರೊಂದಿಗೆ ಮತ್ತೊಂದು ಕರಿಯ ನಾಯಿಯನ್ನು ಕರೆದುಕೊಂಡು ಬಂದಿತು. ಆ ಕರಿಯ ನಾಯಿಯು ಆತುರದಿಂದ ಓಡಿಬಂದು ತಟ್ಟೆಯಲ್ಲಿದ್ದ ಮೊಸರನ್ನವನ್ನು ತಿಂದು ಸ್ವಲ್ಪ ಮೊಸರನ್ನವನ್ನು ಹಾಗೆಯೇ ಬಿಟ್ಟಿತು. ಉಳಿದ ಮೊಸರನ್ನವನ್ನು ಬಿಳಿಯ ಪಟ್ಟೆಯಿದ್ದ ಕರಿಯ ನಾಯಿಯು ತಿಂದು ಮುಗಿಸಿತು. ಹೀಗೆ ೨ ನಾಯಿಗಳು ಮೊಸರನ್ನವನ್ನು ತಿಂದು ಸಂತೋಷದಿಂದ ಹೊರಟು ಹೋದವು. ಇದನ್ನು ನೋಡಿದ ಮೇಲೆ ವಂದನಾರವರಿಗೆ ಸಾಯಿಯವರು ತಮ್ಮನ್ನು ಅನುಗ್ರಹಿಸಿದ್ದಾರೆಂದು ಮತ್ತು ತಮ್ಮ ಮನೆಯನ್ನು ಕಟ್ಟುವ ಆಶೆಯು ಪೂರ್ಣಗೊಳ್ಳುತ್ತದೆ ಎಂದು ಭರವಸೆ ಬಂದಿತು. ಅದು ನಿಜವೆಂಬಂತೆ ಈ ಘಟನೆ ನಡೆದ ೫ ತಿಂಗಳಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ವಂದನಾವರವರ ಮನೆಯು ಪೂರ್ಣಗೊಂಡಿತು.
ಆ ದಿನದಿಂದ ವಂದನ ಕಾಮತ್ ಮತ್ತು ಅವರ ಮನೆಯವರು ತಮ್ಮ ಜೀವನವನ್ನೇ ಸಾಯಿಬಾಬಾರವರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ವಂದನಾವರು ಕಳೆದ ೧೧ ವರ್ಷಗಳಿಂದ "ಸಾಯಿ ಸ್ಮರಣ್" ಎಂಬ ಭಜನೆಯ ಗುಂಪೊಂದನ್ನು ಕಟ್ಟಿಕೊಂಡು ಪ್ರತಿ ಭಾನುವಾರ ಒಂದೊಂದು ಸಾಯಿಭಕ್ತರ ಮನೆಗಳಲ್ಲಿ ಸಾಯಿಭಜನೆಯನ್ನು ಮಾಡುತ್ತಾ ಬಂದಿದ್ದಾರೆ. ಇಷ್ಟೇ ಆಲ್ಲದೇ, ಪ್ರತಿ ವರ್ಷ ಸುಮಾರು ೧೫೦ ರಿಂದ ೩೦೦ ಜನ ಸಾಯಿಭಕ್ತರೊಂದಿಗೆ ಶಿರಡಿ ಯಾತ್ರೆಯನ್ನು ಕೈಗೊಂಡು ಶಿರಡಿಯಲ್ಲಿ ಭಜನೆ ಮತ್ತು ಪಲ್ಲಕ್ಕಿ ಉತ್ಸವವನ್ನು ಕೂಡ ಮಾಡುತ್ತಾ ಬಂದಿದ್ದಾರೆ.
ಇಂದು, ಈ ಮನೆಯ ಮೇಲೆ ೩ ಮಹಡಿಗಳನ್ನು ಕಟ್ಟಿರುತ್ತಾರೆ. ೩ ನೇ ಮಹಡಿಯನ್ನು ಸಂಪೂರ್ಣ ಸಾಯಿ ಮಂದಿರವನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಸಾಯಿಬಾಬಾರವರ ವಿಗ್ರಹ ಮತ್ತು ಫೋಟೋಗಳನ್ನು ಇಟ್ಟಿರುತ್ತಾರೆ ಮತ್ತು ಪ್ರತಿದಿನ ಪೂಜೆ ಮತ್ತು ಆರತಿಯನ್ನು ತಪ್ಪದೆ ಮಾಡುತ್ತಾರೆ. ಆಲ್ಲದೇ, ಪ್ರತಿ ಗುರುವಾರ ಸಂಜೆಯ ವೇಳೆ ಭಜನೆ ಮತ್ತು ಆರತಿಯ ಕಾರ್ಯಕ್ರಮಗಳನ್ನು ಇಟ್ಟುಕೊಂಡಿರುತ್ತಾರೆ. ಇಷ್ಟೇ ಆಲ್ಲದೇ, ಪ್ರಮುಖ ಉತ್ಸವಗಳಾದ ರಾಮನವಮಿ, ಗುರುಪೌರ್ಣಮಿ ಮತ್ತು ವಿಜಯದಶಮಿ ದಿನಗಳಂದು ವಿಶೇಷ ಪೂಜೆ ಮತ್ತು ಭಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ನೂರಾರು ಸಾಯಿಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸಾಯಿಬಾಬಾರವರ ಕೃಪೆಗೆ ಪಾತ್ರರಾಗಿದ್ದಾರೆ.
-ಶ್ರೀಮತಿ. ವಂದನ ಕಾಮತ್ ರವರು ಹೇಳಿದಂತೆ
No comments:
Post a Comment