Sunday, July 11, 2010

ಶಿರಡಿ ಸಾಯಿಬಾಬಾರವರು ಪ್ರತಿನಿತ್ಯ ಭಿಕ್ಷೆಗೆ ಹೋಗುತ್ತಿದ್ದ 5 ಧನ್ಯ ಮನೆಗಳು - ಕೃಪೆ - ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರು 5 ಮನೆಗಳಿಗೆ ಪ್ರತಿನಿತ್ಯ ತಮ್ಮ ಮಹಾಸಮಾಧಿಯವರೆಗೂ ಭಿಕ್ಷೆಗೆ ಹೋಗುತ್ತಿದ್ದರು. ಅವುಗಳು ಯಾವುವೆಂದರೆ: 1) ಸಖಾರಾಮ್ ಪಾಟೀಲ್ ಶೆಲ್ಕೆ 2) ವಾಮನ ರಾವ್ ಗೊಂದ್ಕರ್ 3) ಬಯ್ಯಾಜಿ ಅಪ್ಪ ಕೋತೆ ಪಾಟೀಲ್ 4) ಬಾಯಿಜಾಬಾಯಿ ಕೋತೆ ಪಾಟೀಲ್ (ಬಾಯಿಜಾ ಮಾ) 5) ನಂದಾರಾಮ್ ಮಾರವಾಡಿ.

ಈ ಐದು ಮನೆಗಳ ವಿವರಗಳನ್ನು ಸಾಯಿ ಭಕ್ತರ ಮಾಹಿತಿಗಾಗಿ ಈ ಕೆಳಗೆ ಕೊಡಲಾಗಿದೆ.

1. ಸಖಾರಾಮ್ ಪಾಟೀಲ್ ಶೆಲ್ಕೆಯವರ ಮನೆ:

ಇವರ ಮನೆಯು ಸಾಯಿಬಾಬಾರವರ ಚಾವಡಿಯ ಪಕ್ಕದಲ್ಲಿ ಪಶ್ಚಿಮ ದಿಕ್ಕಿಗಿದೆ. ಸಖಾರಾಮ್ ರವರು ರೈತ ಕುಟುಂಬಕ್ಕೆ ಸೇರಿದ್ದು ಬಹಳ ಶ್ರೀಮಂತರಾಗಿದ್ದರು ಮತ್ತು ಅತ್ಯಂತ ಒಳ್ಳೆಯ  ಸಾಯಿಭಕ್ತರಾಗಿದ್ದರು.  ಇವರ ಮೊಮ್ಮಗ ಹರಿ ಬಾವುವಿನ ಪತ್ನಿ ಸಾಕರಬಾಯಿಯವರು ಹೇಗೆ ಸಾಯಿಬಾಬಾರವರು ಸಖಾರಾಮ ಅವರನ್ನು ಪ್ರೀತಿಸುತ್ತಿದ್ದರು ಎಂದು ವರ್ಣಿಸುತ್ತಾರೆ. ಸಾಯಿಬಾಬಾರವರು ವಾಮನರಾವ್ ಗೊಂದ್ಕರ್ ಮತ್ತು ಸಖಾರಾಮ್ ರವರ ಮನೆಯ ಮುಂದುಗಡೆ ದಾರಿಯ ಮಧ್ಯದಲ್ಲಿ ನಿಂತು "ಸಖಾರಾಮ್, ರೋಟೀ ದೇ" ಎಂದು ಜೋರಾಗಿ ಕೂಗುತ್ತಿದ್ದರು ಎಂದು ಹೇಳುತ್ತಾರೆ. ಅಲ್ಲದೇ, ಸಖಾರಾಮ್ ರವರ ಮಗ ತ್ರಯಂಬಕ ಅವರು ಸಾಯಿಬಾಬಾ ಸಂಸ್ಥಾನಕ್ಕೆ ಸ್ವಲ್ಪ ಭೂಮಿಯನ್ನು ದಾನ ಮಾಡಿರುವುದಾಗಿ ಹೇಳುತ್ತಾರೆ. ತ್ರಯಂಬಕ ಅವರ ಸಮಾಧಿಯು ಸಖಾರಾಮ ಅವರ ಮನೆಯ ಪಕ್ಕದ ನರಸಿಂಹ ದೇವಸ್ಥಾನದ ಒಳಗಡೆ ಇದೆ. ಇವರ ಸಮಾಧಿಯ ಪಕ್ಕದಲ್ಲಿ ತ್ರಯಂಬಕರವರ ಪತ್ನಿ ಥಾನಬಾಯಿ ಮತ್ತು ರಾಮಗಿರ್ ಬುವ (ಸಾಯಿ ಸಚ್ಚರಿತ್ರೆ 33ನೇ ಅಧ್ಯಾಯ)  ಇವರುಗಳ ಸಮಾಧಿಯಿದೆ. ಈ ನರಸಿಂಹ ದೇವಸ್ಥಾನವನ್ನು ಕೂಡ ಸಖಾರಾಮ್ ಶೆಲ್ಕೆಯವರ ಮನೆಯವರೇ ಕಟ್ಟಿಸಿದ್ದಾರೆ. ನರಸಿಂಹ ಶೆಲ್ಕೆಯವರ ಕುಲದೇವರು. ಈಗಲೂ ಪ್ರತಿನಿತ್ಯ ಪೂಜೆ, ನೈವೇದ್ಯ ಮತ್ತು ಆರತಿಯನ್ನು ತಪ್ಪದೆ ಮಾಡುತ್ತಾ ಬಂದಿರುತ್ತಾರೆ.  ಅಂದಿನ ದಿನಗಳಲ್ಲಿ ಶಿರಡಿ ಗ್ರಾಮದಲ್ಲಿ ಅನೇಕ ಸಾಧು ಸಂತರುಗಳು, ಗೋಸಾವಿಗಳು ವಾಸ ಮಾಡುತ್ತಿದ್ದರು. ಅವರಲ್ಲಿ ಕೆಲವರ ಸಮಾಧಿಗಳು ಕೂಡ ಇದೆ ಸ್ಥಳದಲ್ಲಿದೆ. ಆದರೆ, ದುರದೃಷ್ಟವಶಾತ್ ಅವರುಗಳ ಹೆಸರುಗಳು ನಮಗೆ ತಿಳಿದುಬಂದಿಲ್ಲ.


ಸುಮಾರು 2000 ಇಸವಿಯಲ್ಲಿ ಶೆಲ್ಕೆಯವರು ವಾಸಿಸುತ್ತಿದ್ದ ಮನೆಯನ್ನು ಇವರ ವಂಶಸ್ಥರು ಮಾರಿಬಿಟ್ಟರು. ಈಗ ಈ ಸ್ಥಳದಲ್ಲಿ ಬಹು ಮಹಡಿ ವಾಣಿಜ್ಯ ಸಂಕೀರ್ಣವನ್ನು ಸಾಯಿಭಕ್ತರು ನೋಡಬಹುದು.


2. ವಾಮನ್ ರಾವ್ ಗೊಂದ್ಕರ್ ರವರ ಮನೆ:

ಇವರ ಮನೆಯು ಸಖಾರಾಮ್ ಪಾಟೀಲ್ ಶೆಲ್ಕೆಯವರ ಮನೆಯ ಎದುರುಗಡೆ ಇದೆ. ವಾಮನ್ ರಾವ್ ಹುಟ್ಟಿದ್ದು ಮತ್ತು ಬೆಳೆದಿದ್ದು ಶಿರಡಿಯಲ್ಲೇ. ಇವರ ಮನೆಯವರು ಕೂಡ ರೈತ ವರ್ಗಕ್ಕೆ ಸೇರಿದ್ದು ಬಹಳ ಶ್ರೀಮಂತರಾಗಿದ್ದರು. ಇವರು ಶಿರಡಿಯ ಗ್ರಾಮದ ಸುತ್ತಮುತ್ತಲೂ 500 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದರು ಎಂದು ಇವರ ವಂಶಸ್ಥರು ಹೇಳುತ್ತಾರೆ. ಇವರು ಲೇಂಡಿ ಉದ್ಯಾನವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಕೂಡ ಹೊಂದಿದ್ದರು. ಕಾಲಾನಂತರದಲ್ಲಿ ಲೇಂಡಿ ಉದ್ಯಾನವನದ ಜಾಗವನ್ನು ಮೋರೆಶ್ವರ್ ಪ್ರಧಾನರವರಿಗೆ ಮಾರಿದರು. ಮೋರೆಶ್ವರ್ ರವರು ಅದನ್ನು ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದರು ಎಂದು ತಿಳಿದುಬರುತ್ತದೆ. 

ಸಾಯಿಸಚ್ಚರಿತೆಯ 19ನೇ ಅಧ್ಯಾಯದಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಾಯಿಬಾಬಾರವರು ಏಣಿಯನ್ನು ತರಲು ಹೇಳಿ ಅದನ್ನು ವಾಮನರಾವ್ ಅವರ ಮನೆಯ ಮುಂದೆ ಇರಿಸಿ ಅವರ ಮನೆಯ ಮೇಲೆ ಹತ್ತಿ ರಾಧಾಕೃಷ್ಣ ಆಯಿಯವರ ಮನೆಯ ಮೇಲಿಂದ ಬಂದು ಕೆಳಗೆ ಇಳಿದು ಏಣಿಯನ್ನು ತಂದು ಕೊಟ್ಟ ವೆಂಕು ಕಂಬ್ಲೆಕರ್ ಗೆ 2/- ರೂಗಳನ್ನು ನೀಡುತ್ತಾರೆ. ಈ ಘಟನೆ ನಡೆದ ಸಮಯದಲ್ಲಿ ಸಾಯಿಬಾಬಾರವರು ಅನಾರೋಗ್ಯದಿಂದ ನೆರಳುತ್ತಿದ್ದರು. ರಾಧಾಕೃಷ್ಣ ಮಾಯಿಯವರು ಕೂಡ ಅನಾರೋಗ್ಯದಿಂದ ನೆರಳುತ್ತಿದ್ದರು. ಆಗ ಪುರಂದರೆಯವರು ರಾಧಾಕೃಷ್ಣ ಮಾಯಿಯವರ ರೋಗವನ್ನು ಗುಣಪಡಿಸುವಂತೆ ಸಾಯಿಬಾಬಾರವರನ್ನು ಬೇಡಿಕೊಂಡರು. ಅದಕ್ಕೆ ಸಾಯಿಬಾಬಾರವರು ಈ ರೀತಿ ನಡೆದುಕೊಂಡು ರಾಧಾಕೃಷ್ಣ ಮಾಯಿಯವರ ಆರೋಗ್ಯವನ್ನು ಗುಣಪಡಿಸಿದರು. 

ಆಗ ಅಲ್ಲಿ ನೆರೆದಿದ್ದ ಎಲ್ಲರೂ ಇಷ್ಟು ಕೆಲಸಕ್ಕೆ ಕಂಬ್ಲೆಕರ್ ಅವರಿಗೆ ಅಷ್ಟೊಂದು ಹಣ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳುತ್ತಾರೆ. ಆಗ ಸಾಯಿಬಾಬಾರವರು ಯಾರಿಂದಲೂ ಪುಕ್ಕಟೆ ಕೆಲಸ ಮಾಡಿಸಿಕೊಳ್ಳಬಾರದು. ಅವರ ಕೆಲಸಕ್ಕೆ ತಕ್ಕಂತೆ ಸಂಭಾವನೆ ನೀಡಬೇಕೆಂದು ಹೇಳುತ್ತಾರೆ. ಕಂಬ್ಲೆಕರ್ ಗೆ ಮದುವೆಯಾದರೂ ಮಕ್ಕಳಿರಲಿಲ್ಲ. ಆದರೆ ಸಾಯಿಬಾಬಾರವರಿಂದ 2/- ರೂಗಳನ್ನು ಪಡೆದ ಮೇಲೆ ಚೆನ್ನಾಗಿ ಅಭಿವೃದ್ದಿ ಹೊಂದಿದ್ದೇ ಅಲ್ಲದೇ 2 ಗಂಡು ಮಕ್ಕಳನ್ನು ಪಡೆಯುತ್ತಾರೆ.

ವಾಮನ ರಾವ್ ಗೊಂದ್ಕರ್ ರವರು ಒಳ್ಳೆಯ ಜೀವನವನ್ನು ನಡೆಸಿದ ನಂತರ 15ನೇ ಮಾರ್ಚ್ 1964 ರಂದು ಸಮಾಧಿ ಹೊಂದಿದರು. ಅವರ ವಂಶಸ್ಥರು ಶಿರಡಿಯಲ್ಲಿ ಈಗಲೂ ವಾಸಿಸುತ್ತಿದ್ದು ವಾಮನ ರಾವ್ ರವರ ಧ್ಯೇಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.ವಿಶೇಷ ಉತ್ಸವದ ದಿನಗಳಲ್ಲಿ ಪಲ್ಲಕ್ಕಿ ಮತ್ತು ರಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಇವರ ಮನೆಯ ಮುಂದೆ ಮೊದಲು ನಿಲ್ಲುತ್ತದೆ. ಸಾಯಿಬಾಬಾರವರಿಗೆ ಮತ್ತು ಅವರ ಪಲ್ಲಕ್ಕಿ ಮತ್ತು ರಥಕ್ಕೆ ಪ್ರಥಮ ಪೂಜೆಯನ್ನು ಸಲ್ಲಿಸುವ ಅವಕಾಶವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದವರು ನೀಡಿರುತ್ತಾರೆ.


3. ಬಯ್ಯಾಜಿ ಅಪ್ಪ ಕೋತೆ ಪಾಟೀಲ್  ರವರ ಮನೆ (ಸಾಯಿ ಕುಟೀರ):
ಇವರ ಮನೆಯನ್ನು "ಸಾಯಿ ಕುಟೀರ" ಎಂದು ಕರೆಯಲಾಗುತ್ತದೆ ಮತ್ತು ಇವರ ಮನೆಯು ಕೋತೆ ಗಲ್ಲಿಯ ಕೊನೆಯಲ್ಲಿ ಇದೆ. ಇವರು ಶಿರಡಿಯಲ್ಲಿ ಹುಟ್ಟಿ ಬೆಳೆದರು ಮತ್ತು ತಮ್ಮ ಚಿಕ್ಕ ವಯಸ್ಸಿನಿಂದಲೇ ಸಾಯಿಬಾಬಾರವರಿಗೆ ತೀರ ಹತ್ತಿರದವರಾಗಿದ್ದರು. ಇವರ ತಂದೆಯವರು ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. 

ಬಯ್ಯಾಜಿ ಅಪ್ಪ ಕೋತೆ ಪಾಟೀಲ್ ರವರು ಬೀರ್ಗಾವ್ ನ ಜಮೀನುದಾರರು, ಪೋಲಿಸ್ ಪಟೇಲರು ಆಗಿದ್ದರು. ಇವರು ಸುಮಾರು 84 ಎಕರೆ ಜಮೀನು ಹೊಂದಿದ್ದರು ಮತ್ತು ಆಗರ್ಭ ಶ್ರೀಮಂತರಾಗಿದ್ದರು. ಇವರ ಮನೆಗೆ ಸಾಯಿಬಾಬಾರವರು ಪ್ರತಿನಿತ್ಯ ಅನೇಕ ಬಾರಿ ಭಿಕ್ಷೆಗೆ ತಮ್ಮ ಸಮಾಧಿಯ ದಿವಸದವರೆಗೂ ಹೋಗುತ್ತಿದ್ದರು. ಬಯ್ಯಾಜಿಯವರು ತಮ್ಮ 11ನೇ ವಯಸ್ಸಿನಿಂದ ಸಾಯಿಬಾಬಾರವರಿಗೆ ಭಿಕ್ಷೆ ನೀಡುತ್ತಿದ್ದರು. ಸಾಯಿಬಾಬಾರವರು ನಮಾಜ್ ಮಾಡುತ್ತಿದ್ದಾಗ ಮೌನವಾಗಿರುತ್ತಿದರು ಮತ್ತು ಇತರರು ನಮಾಜ್ ಮಾಡುವಾಗ ಸಾಯಿಯವರು ಅವರನ್ನು ಮಾತನಾಡಿಸಿ ತೊಂದರೆ ಕೊಡುತ್ತಿರಲಿಲ್ಲ ಎಂದು ಇವರು ಹೇಳುತ್ತಾರೆ. ಬಾಬಾರವರು ಎಲ್ಲರಿಗೂ ಸಿಹಿ ತಿನಿಸುಗಳನ್ನು ಮತ್ತು ಪೇಡವನ್ನು ಹಂಚುತ್ತಿದ್ದರು ಎಂದು ಹೇಳುತ್ತಾರೆ.

ಬಯ್ಯಾಜಿಯವರ ತಂದೆಯ ಮರಣದ ಬಗ್ಗೆ ಸಾಯಿಬಾಬಾರವರು ಮುಂಚೆಯೇ ಮುನ್ಸೂಚನೆ ನೀಡಿದ್ದರೆಂದು ಮತ್ತು ಅದು ನಿಜವಾಯಿತೆಂದು ಹೇಳುತ್ತಾರೆ. ಸಾಯಿಯವರು ಇವರಿಗೆ ಪ್ರತಿನಿತ್ಯ 4/- ರೂಗಳನ್ನು ಕೊಟ್ಟು ತಿಂದು ಖರ್ಚು ಮಾಡಿಬಿಡಬೇಡ ಎಂದು ಹೇಳುತ್ತಿದ್ದರು. ಸಾಯಿಯವರ ಆಜ್ಞೆಯಂತೆ ಆ ಹಣವನ್ನು ಉಳಿಸಿ ಅದರಿಂದ 84 ಎಕರೆ ಭೂಮಿಯನ್ನು ಕೊಂಡುಕೊಂಡರು. ಆಷ್ಟೇ ಅಲ್ಲಾ, ಸಾಯಿಯವರು ಆ ಭೂಮಿಯಲ್ಲಿ ಏನು ಬೆಳೆಯಬೇಕೆಂದು ಸೂಚನೆ ಕೂಡ ನೀಡುತ್ತಿದರೆಂದು ಮತ್ತು ಬಾಬಾರವರ ಮಾತಿನಂತೆ ಬೆಳೆ ಚೆನ್ನಾಗಿ ಬರುತ್ತಿದೆಂದು ತಿಳಿದುಬಂದಿದೆ. ಒಮ್ಮೆ ಇವರು ಸಾಯಿಬಾಬಾರವರ ಸಲಹೆಯಂತೆ ನೆಡೆದುಕೊಳ್ಳದಿದ್ದಾಗ ಇವರ ಜಮೀನಿನಲ್ಲಿ ಬೆಳೆ ಸರಿಯಾಗಿ ಬರದೆ ಸುಮಾರು 300 ರೂಪಾಯಿಗಳ ನಷ್ಟವನ್ನು ಅನುಭವಿಸಿದರೆಂದು ಸ್ವತಃ ಹೇಳಿಕೊಳ್ಳುತ್ತಾರೆ.

ಸಾಯಿಬಾಬಾರವರು ಸಮಾಧಿಯಾಗುವ ಸ್ವಲ್ಪ ಸಮಯಕ್ಕೆ ಮುಂಚೆ ಬಯ್ಯಾಜಿ ಅಪ್ಪ ಕೋತೆ ಪಾಟೀಲರ ತೊಡೆಯ ಮೇಲೆ ಮಲಗಿ "ನಾನು ಹೋಗುತ್ತಿದ್ದೇನೆ, ನನ್ನನ್ನು ವಾಡಾಕ್ಕೆ ಕರೆದು ಕೊಂಡು ಹೋಗು. ಎಲ್ಲಾ ಬ್ರಾಹ್ಮಣರು ನನ್ನ ಹತ್ತಿರವೇ ಇದ್ದು ನನ್ನ ಸೇವೆ ಮಾಡುತ್ತಾರೆ" ಎಂದು ಹೇಳುತ್ತಾ ಅವರ ತೊಡೆಯ ಮೇಲೆಯೇ ಅಸು ನೀಗಿದರು ಎಂದು ತಿಳಿದುಬರುತ್ತದೆ. ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾರವರ ಬಾಯಿಯಲ್ಲಿ ನೀರನ್ನು ಹಾಕಿದರು. ಆದರೆ ಆ ನೀರು ಬಾಯಿಯೊಳಗೆ ಹೋಗದೆ ಹೊರಗೆ ಬಂದಿತು.


ಇವರ ವಂಶಸ್ಥರಾದ ಗೋಪೀನಾಥ್ ಕೋತೆಯವರು ಈಗಲೂ ಶಿರಡಿಯಲ್ಲಿ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶಿರಡಿ ಸಾಯಿಬಾಬಾ ಸಂಸ್ಥಾನದವರು ಇವರಿಗೆ ಸಾಯಿಬಾಬಾರವರ ಪವಿತ್ರ ಪಾದುಕೆ ಮತ್ತು ಸಟಕಾವನ್ನು ಚಾವಡಿ ಉತ್ಸವದ ಸಂದರ್ಭದಲ್ಲಿ ಹಿಡಿದುಕೊಳ್ಳುವ ಸೌಭಾಗ್ಯವನ್ನು ಒದಗಿಸಿ ಕೊಟ್ಟಿರುತ್ತಾರೆ.

4. ಬಾಯಿಜಾಬಾಯಿ ಗಣಪತ್ ಕೋತೆ ಪಾಟೀಲ್ (ಬಾಯಿಜಾ ಮಾ) ರವರ ಮನೆ:

ಇವರ ಮನೆಯು ಸಾಯಿಕುಟೀರದ ಪಕ್ಕದಲ್ಲಿ ಇದೆ. ಬಾಯಿಜಾಬಾಯಿಯವರು ತಮ್ಮ ಮದುವೆಯ ನಂತರ ತಮ್ಮ ಪತಿಯಾದ ಗಣಪತ್ ಕೋತೆ ಪಾಟೀಲರ ಜೊತೆ ಶಿರಡಿಗೆ ಬಂದರು. ಇವರ ಪತಿಯು ಬಹಳ ದೊಡ್ಡ ವ್ಯಾಪಾರಿಯಾಗಿದ್ದರು. ಇವರು ಅತ್ಯಂತ ಕರ್ತವ್ಯ ನಿಷ್ಠೆ ಮತ್ತು ಪ್ರೀತಿಪಾತ್ರಳಾದ ಹೆಂಡತಿಯಾಗಿದ್ದು ಮನೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದರು. ಇವರಿಗೆ ಮನೆಗೆ ಬಂದ ಅತಿಥಿಗಳಿಗೆ ಅಡುಗೆ ಮಾಡಿ ಬಡಿಸುವುದೆಂದರೆ ಬಹಳ ಪ್ರೀತಿ. ಶಿರಡಿಗೆ ಸಾಯಿಬಾಬಾರವರು ಮೊದಲಿಗೆ ಬಂದಾಗಿನಿಂದ ಪ್ರತಿನಿತ್ಯ ಸಾಯಿಯವರು ಎಲ್ಲಿದ್ದರೂ ಸರಿ, ಹುಡುಕಿಕೊಂಡು ಹೋಗಿ ಊಟಕ್ಕಿಟ್ಟು   ಬಲವಂತವಾಗಿ ಊಟ ಬಡಿಸುತ್ತಿದ್ದರು. ಬಾಯಿಜಾಬಾಯಿಯವರಿಗೆ ಸಾಯಿಯವರ ದೈವತ್ವದ ಅರಿವಾಗಿತ್ತು. ಆದುದರಿಂದಲೇ ಅವರು ಸಾಯಿಯವರನ್ನು ಪ್ರತಿನಿತ್ಯ ಅಲೆದಾಡಿಯಾದರೂ ಸರಿ ಹುಡುಕಿ ಊಟವನ್ನು ಬಲವಂತವಾಗಿ ಮಾಡಿಸುತ್ತಿದ್ದರು. ಆ ನಂತರವೇ ಅವರು ಮನೆಗೆ ಬಂದು ಊಟ ಮಾಡುತ್ತಿದ್ದುದು. ಸಾಯಿಯವರು ಮಸೀದಿಗೆ ಬಂದು ವಾಸ ಮಾಡಲು ಶುರು ಮಾಡಿದ ಮೇಲೆ ಬಾಯಿಜಾಬಾಯಿಯವರಿಗೆ ಅಲೆಯುವ ಕಷ್ಟ ತಪ್ಪಿತು.

ಇವರು ಪ್ರತಿನಿತ್ಯ ಸಾಯಿಯವರಿಗೆ ತಪ್ಪದೆ ಭಿಕ್ಷೆ ನೀಡುತ್ತಿದ್ದರು. ಸಾಯಿಬಾಬಾರವರ ಧ್ವನಿಯನ್ನು ಕೇಳಿದ ಕೂಡಲೇ ತಾವು ಏನೇ ಕೆಲಸ ಮಾಡುತ್ತಿರಲಿ ಅದನ್ನು ಬಿಟ್ಟು ಹೊರಗಡೆ ಓಡಿ ಬರುತ್ತಿದ್ದರು. ಇವರು ಹಸುಗಳನ್ನು ಅಥವಾ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದರೂ ಕೂಡ ಆ ಕೆಲಸವನ್ನು ಬಿಟ್ಟು ಆಹಾರವನ್ನು ಕೂಡಲೇ ಸಿದ್ದ ಪಡಿಸಿ ತಂದು ಸಾಯಿಬಾಬಾರವರಿಗೆ ನೀಡುತ್ತಿದ್ದರು. ಬಾಯಿಜಾ ಬಾಯಿಯವರ ಪ್ರೀತಿ ಮತ್ತು ಭಕ್ತಿಯನ್ನು ಕಂಡು ಸಾಯಿಬಾಬಾರವರಿಗೆ ಅತೀವ ಸಂತೋಷವಾಗುತ್ತಿತ್ತು. 

ಇವರ ಪ್ರೀತಿಯನ್ನು ನೋಡಿ ಒಮ್ಮೆ ಸಾಯಿಯವರು ಏನಾದರೂ ವರ ಕೇಳಿಕೊಳ್ಳಲು ಹೇಳಿದಾಗ ಬಾಯಿಜಾಬಾಯಿಯವರು ತಮ್ಮ ಪ್ರೀತಿಯ ಮಗನಾದ ತಾತ್ಯಾನ ಒಳಿತನ್ನು ಕೋರಿದರು. ತಾತ್ಯಾರಿಗೆ 3 ಜನ ಹೆಂಡತಿಯರಿದ್ದರೂ ಮಕ್ಕಳಿರಲಿಲ್ಲ. ಸಾಯಿಯವರ ಆಶೀರ್ವಾದದಿಂದ ಇವರಿಗೆ 3 ಗಂಡು ಮಕ್ಕಳು ಮತ್ತು 2 ಹೆಣ್ಣು ಮಕ್ಕಳು ಹುಟ್ಟಿದರು. ಬಾಯಿಜಾಬಾಯಿಯವರಿಗೆ ಆಶ್ವಾಸನೆ ನೀಡಿದಂತೆ ಸಾಯಿಬಾಬಾರವರು ತಾತ್ಯರವರನ್ನು ಅನವರತ ಕಾಪಾಡಿದರು ಮತ್ತು ತಾತ್ಯರಿಗೊಸ್ಕರ ತಮ್ಮ ದೇಹತ್ಯಾಗ ಕೂಡ ಮಾಡಿದರು ಎಂದು ಹೇಳುತ್ತಾರೆ.



ಸಾಯಿಬಾಬಾರವರು ಜೀವಂತರಾಗಿದ್ದಾಗ ಸಾಯಿಬಾಬಾರವರಿಗೆ ಆರತಿಯನ್ನು ಮಾಡುವ ಸಮಯದಲ್ಲಿ ಸೇದಲು ಹುಕ್ಕಾವನ್ನು ನೀಡುತ್ತಿದ್ದರು. ಸಾಯಿಯವರು ಆ ಹುಕ್ಕಾವನ್ನು ಒಮ್ಮೆ ಸೇದಿದ ನಂತರ ಅದನ್ನು ಅಲ್ಲಿದ್ದ ಇತರ ಭಕ್ತರಿಗೆ ನೀಡುತ್ತಿದ್ದರು. 

ಶಿರಡಿ ಸಾಯಿಬಾಬಾ ಸಂಸ್ಥಾನದವರು ಸಾಯಿಬಾಬಾರವರ ಚಿತ್ರಪಟವನ್ನು ಚಾವಡಿ ಉತ್ಸವದ ಸಂದರ್ಭದಲ್ಲಿ ಹಿಡಿದುಕೊಳ್ಳುವ ಸೌಭಾಗ್ಯವನ್ನು ಇವರ ವಂಶಸ್ಥರಿಗೆ ನೀಡಿದ್ದಾರೆ. 

5. ನಂದಾರಾಮ್ ಮಾರವಾಡಿಯವರ ಮನೆ:

ನಂದಾರಾಮ್ ಮಾರವಾಡಿಯವರು ಬಹಳ ಶ್ರೀಮಂತ ಜಮೀನ್ಧಾರರು ಮತ್ತು ಲೇವಾದೇವಿ ವ್ಯಾಪಾರಿಗಳು ಆಗಿದ್ದರು. ಆದರೆ ಇವರು ಒಳ್ಳೆಯ ಹೃದಯವಂತರು ಹಾಗೂ ಸೌಮ್ಯ ವ್ಯಕ್ತಿಗಳಾಗಿದ್ದರು. ಇವರ ತಾತನವರು ರಾಜಸ್ಥಾನದ ಖರಾಡೆ ಹಳ್ಳಿಯಿಂದ ಶಿರಡಿಗೆ ವಲಸೆ ಬಹಳ ಹಿಂದೆಯೇ ವಲಸೆ ಬಂದಿದ್ದರು. ನಂದಾರಾಮ್ ರವರು ಶಿರಡಿ ಗ್ರಾಮದಲ್ಲಿ 1866 ರಲ್ಲಿ ಜನಿಸಿದರು. ಇವರು ೧೮೭೫ ರಲ್ಲಿ ಸಾಯಿಬಾಬಾರವರಿಗೆ ಬಹಳ ಹತ್ತಿರದವರಾದರು ಮತ್ತು ಆಗಿನಿಂದ ಸಾಯಿಬಾಬಾರವರ ಮೇಲಿದ್ದ ಇವರ ಪ್ರೀತಿ ಮತ್ತು ಭಕ್ತಿ ನೂರ್ಮಡಿಯಾಯಿತು. ಅಷ್ಟೇ ಅಲ್ಲಾ, ಆಗಿನಿಂದ ತಮ್ಮ ದಿನದ ಬಹುಪಾಲು ಸಮಯವನ್ನು ಸಾಯಿಬಾಬಾರವರ ಬಳಿಯೇ ಕಳಿಯುತ್ತಿದ್ದರು.

ಸಾಯಿಬಾಬಾರವರು ಇವರ ಮನೆಗೆ ಪ್ರತಿನಿತ್ಯ ಭಿಕ್ಷೆ ಸ್ವೀಕರಿಸಲು ಹೋಗುತ್ತಿದ್ದರು. ನಂದಾರಾಮ್ ರವರ ಮನೆಯು ದ್ವಾರಕಾಮಾಯಿಯ ಎದುರುಗಡೆ ಇದ್ದರೂ ಕೂಡ ಅವರ ಮನೆಗೆ ಮೊದಲು ಭಿಕ್ಷೆಗೆ ಹೋಗದೆ ಎಲ್ಲರ ಮನೆಯಲ್ಲಿ ಬೇಡಿದ ಮೇಲೆ ಕಡೆಗೆ ಇವರ ಮನೆಗೆ ಹೋಗುತ್ತಿದ್ದರು. ಸಾಯಿಬಾಬಾರವರಿಗೆ ಇವರ ಮನೆಯವರೆಂದರೆ ಬಹಳ ಇಷ್ಟ. ನಂದಾರಾಮ್ ರವರ ಮನೆಯ ಬಳಿ ಹೋಗಿ ಸಾಯಿಯವರು "ಒಹ್, ಬೋಪಡಿ ಬಾಯಿ ಭಿಕ್ಷಾ ದೇ" ಎಂದು ಜೋರಾಗಿ ಕೂಗುತ್ತಿದ್ದರು. ನಂದಾರಾಮ್ ರವರ ಹೆಂಡತಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇವರು ಬರುವುದು ಸ್ವಲ್ಪ ತಡವಾದರೆ ಸಾಯಿಬಾಬಾರವರು ಇವರ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಕೆಲವು ವೇಳೆ ಸಾಯಿಯವರು ನಂದಾರಾಮ್ ರವರ ಹೆಂಡತಿಗೆ ಪೂರಣ್ ಪೋಳಿ ಮತ್ತು ಊಟ ನೀಡುವಂತೆ ಕೇಳುತ್ತಿದ್ದರು. ನಂದಾರಾಮ್ ರವರ ಹೆಂಡತಿ ಸಾಯಿಯವರು ಹೇಳಿದಂತೆ ಮಾಡಿಕೊಂಡು ದ್ವಾರಕಾಮಾಯಿಗೆ ಹೋಗಿ ಕೊಟ್ಟರೆ, ಸಾಯಿಯವರು ಸ್ವಲ್ಪವೇ ತಿಂದು ಮಿಕ್ಕಿದ್ದನ್ನು ಮಸೀದಿಯಲ್ಲಿ ನೆರೆದಿದ್ದವರಿಗೆ ಕೊಟ್ಟುಬಿಡುತ್ತಿದ್ದರು.

1911 ರಲ್ಲಿ ಶಿರಡಿ ಗ್ರಾಮದಲ್ಲಿ ಪ್ಲೇಗ್ ಮಹಾಮಾರಿ ಹರಡಿ ಶಿರಡಿಯ ಜನರೆಲ್ಲಾ ಶಿರಡಿ ಬಿಟ್ಟು ಬೇರೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿದರು. ಶಿರಡಿ ಗ್ರಾಮಸ್ಥರು ನಂದಾರಾಮ್ ರವರ ಕಣ್ಣುಗಳು ಕೆಂಪಗೆ ಊದಿಕೊಂಡಿವೆಯೆಂದು ಮತ್ತು ಅವರು ಶಿರಡಿ ಬಿಟ್ಟು ಹೋಗಬೇಕೆಂದು ಸಲಹೆ ನೀಡಿದರು. ಆಗ ನಂದಾರಾಮ್ ರವರು ಹೆದರಿ ಕುದುರೆಯ ಮೇಲೆ ಕುಳಿತು ಹೊರಡಲು ಅನುವಾಗಿ ಮಸೀದಿಗೆ ತೆರಳಿ ಸಾಯಿಯವರ ಅನುಮತಿ ಬೇಡಲು, ಸಾಯಿಬಾಬಾರವರು ಇವರಿಗೆ ಹೊರಡಲು ಅನುಮತಿ ನೀಡದೆ ಉಧಿಯನ್ನು ಕೊಟ್ಟು ಏನು ತೊಂದರೆಯಾಗುವುದಿಲ್ಲವೆಂದು ಭರವಸೆ ನೀಡಿದರು. ಅದರಂತೆ ನಂದಾರಾಮ್ ರವರಿಗೆ ಏನು ತೊಂದರೆಯಾಗಲಿಲ್ಲ.


ನಂದಾರಾಮ್ ರವರ ಅಜ್ಜಿಯಾದ ರಾಧಭಾಯಿ ಸಾಯಿಬಾಬಾರವರಿಗೆ ತಮ್ಮ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದ ಕೂಡಲೇ ಸಾಯುತ್ತಿರುವ ವಿಷಯವನ್ನು ತಿಳಿಸಿ ಅವರನ್ನು ಕಾಪಾಡಲು ಕೇಳಿಕೊಂಡರು. ಸಾಯಿಬಾಬಾರವರು ಅವರಿಗೆ 3 ಮಾವಿನ ಹಣ್ಣುಗಳನ್ನು ನೀಡಿ ಆಶೀರ್ವದಿಸಿದರು. ಸಾಯಿಯವರ ಅಶೀರ್ವಾದದಂತೆ ಅವರಿಗೆ 3 ಗಂಡು ಮಕ್ಕಳಾದವು ಮತ್ತು ಯಾವ ಮಕ್ಕಳು ಮರಣ ಹೊಂದದೆ ಚೆನ್ನಾಗಿದ್ದರು.

ನಂದಾರಾಮ್ ಅವರು ಮಾಡಿದ ಬಹಳ ಒಳ್ಳೆಯ ಕೆಲಸವೆಂದರೆ ಬೂಟಿವಾಡಾ   ಮತ್ತು ದ್ವಾರಕಾಮಾಯಿಯ ನಡುವೆ ಇದ್ದ ಜಾಗವನ್ನು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದುದು. ಈ ಕೆಲಸವನ್ನು ಅವರು ದಾಮು ಅಣ್ಣಾ ಅವರ ಮುಖಾಂತರ ಮಾಡಿದರು. ಇದರಿಂದ ಸಮಾಧಿ ಮಂದಿರವನ್ನು ವಿಶಾಲ ಸ್ಥಳವನ್ನಾಗಿ ಮಾರ್ಪಡಿಸಲು ಸಹಾಯವಾಯಿತು. ನಂದಾರಾಮ್ ರವರಿಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಗುಣ ಇಟ್ಟು ಮತ್ತು ಇವರು ಪಡೆಯುವುದಕ್ಕಿನ್ನಾ ಕೊಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಇವರು ಶಿರಡಿ ಗ್ರಾಮದಲ್ಲಿನ ಮಾರುತಿ ಮಂದಿರ ಮತ್ತು ಗಣೇಶನ ಮಂದಿರದ ದುರಸ್ಥಿ ಕಾರ್ಯವನ್ನು ಕೂಡ ಮಾಡಿಸಿದರು.

ನಂದಾರಾಮ್ ರವರು 13ನೇ ಅಕ್ಟೋಬರ್ 1946 ರಂದು ಸಮಾಧಿ ಹೊಂದಿದರು. ಈಗ ಇವರ ವಂಶಸ್ಥರು ಇವರ ಒಳ್ಳೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ನಂದರಾಮ್ ಮಾರವಾಡಿಯ ಮನೆಯು ಇದ್ದ ಜಾಗದಲ್ಲಿ ಕೂಡ ಈಗ ಬಹು ಮಹಡಿ ವಾಣಿಜ್ಯ ಸಂಕೀರ್ಣವನ್ನು ಸಾಯಿಭಕ್ತರು ನೋಡಬಹುದು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment