Saturday, July 17, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳಗಳು  - ಕನೀಫ್ ನಾಥ ಮಂದಿರ, ಮಹಾಲಕ್ಷ್ಮಿ ಮಂದಿರ ,ವಿಠಲನ ಮಂದಿರ, ನರಸಿಂಹ ದೇವಾಲಯ, ಮತ್ತು 2 ಜೈನ ದೇವಾಲಯಗಳು   - ಕೃಪೆ - ಸಾಯಿ ಅಮೃತಧಾರಾ.ಕಾಂ
 
ಕನೀಫ್ ನಾಥ್ ಮಂದಿರ 



 ಕನೀಫ್ ನಾಥ್ ಮಂದಿರ

ಈ ಮಂದಿರವು ಶಿರಡಿಯ ಹಳೆ ಪೋಸ್ಟ್ ಆಫೀಸಿನ ಬಳಿ ಮತ್ತು ಸೇವಾಧಾಮ್ ಕಾರ್ಯಾಲಯದ ಬಳಿ  ಇರುತ್ತದೆ.  ಈ ಮಂದಿರವು ಶಿರಡಿಯ ಅತ್ಯಂತ ಪುರಾತನವಾದ ದೇವಾಲಯ.  ದುರದೃಷ್ಟವಶಾತ್  ಈ ಮಂದಿರವನ್ನು ಯಾವಾಗ ನಿರ್ಮಾಣ  ಮಾಡಲಾಯಿತು ಎಂದು ತಿಳಿದುಬಂದಿಲ್ಲ. ಆದರೆ ಈ ಮಂದಿರವು ಕ್ರಿ.ಶ.1800 ರಲ್ಲಿ  ಶಿರಡಿಯಲ್ಲಿ ಇದ್ದಿದ್ದರಿಂದ ಈ ಮಂದಿರವು 1800 ಕ್ಕಿಂತ ಮುಂಚೆಯೇ ಇತ್ತು ಎಂದು ಊಹಿಸಬಹುದು. ಈ ಮಂದಿರವನ್ನು ನಾಥ ಸಂಪ್ರದಾಯದಲ್ಲಿ ಒಬ್ಬರಾದ ಕನೀಫ್ ನಾಥ್ ರಿಗೆ ಅರ್ಪಣೆ ಮಾಡಲಾಗಿದೆ. ಕನೀಫ್ ನಾಥರು ಆನೆಯ ಕಿವಿಯಿಂದ ಹುಟ್ಟಿದರೆಂದು ಹೇಳಲಾಗುತ್ತದೆ. ಆದ್ದರಿಂದ  ಕನೀಫ್ ನಾಥರೆಂದು ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ನಾಥ ಸಂಪ್ರದಾಯದ ವಿಶೇಷತೆ ಏನೆಂದರೆ ಧುನಿಯನ್ನು ಉರಿಸುವುದು. ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಈ ಮಂದಿರದ ಬಳಿ ಸ್ವಲ್ಪ ಕಾಲ ನಿಲ್ಲುತ್ತಿದ್ದರೆಂದು ಹೇಳಲಾಗಿದೆ. ಕನೀಫ್ ನಾಥ್ ಮಂದಿರದಿಂದ ಬಲಕ್ಕೆ ತಿರುಗಿದರೆ ಶಿರಡಿಯ ಮುಖ್ಯ ರಸ್ತೆ ಸಿಗುತ್ತದೆ. ಆ ಮುಖ್ಯ ರಸ್ತೆಯಲ್ಲಿ ಸ್ವಲ್ಪ ದೂರ ಹೋಗಿ ಪುನಃ ಬಲಕ್ಕೆ ತಿರುಗಿದರೆ ಲೇಂಡಿ ಉದ್ಯಾನವನ ಸಿಗುತ್ತದೆ. ಈಗ ಈ ದಾರಿಯಲ್ಲಿ ಅಂಗಡಿ ಮುಂಗಟ್ಟುಗಳು ಹೆಚ್ಚಾಗಿವೆ. ಸಾಯಿಬಾಬಾರವರ ಕಾಲದಲ್ಲಿ ಈ ರಸ್ತೆಯು ಯಾವುದೇ ಜನಸಂಚಾರವಿಲ್ಲದೆ ಖಾಲಿಯಾಗಿತ್ತು. ಶ್ರಾವಣ ಮಾಸದ ಗೋಕುಲಾಷ್ಟಮಿಯ ದಿನ ಮತ್ತು ಇತರ ವಿಶೇಷ ಹಬ್ಬದ ದಿನಗಳಂದು ಈ ಮಂದಿರದಲ್ಲಿ ದೊಡ್ಡ ಉತ್ಸವವೇ ಜರುಗುತ್ತದೆ. ಶಿರಡಿಯ ಗ್ರಾಮದ ಪೂಜಾರಿ ಈ ಮಂದಿರದಲ್ಲಿ ಪ್ರತಿನಿತ್ಯ ಪೂಜೆಯನ್ನು ತಪ್ಪದೆ ನೆರವೇರಿಸುತ್ತಾರೆ.


ಮಹಾಲಕ್ಷ್ಮಿ ಮಂದಿರ (ಅಷ್ಟಲಕ್ಷ್ಮಿ ಮಂದಿರ)

ಈ ಅತ್ಯಂತ ಪುರಾತನವಾದ ಅಷ್ಟಲಕ್ಷ್ಮಿ ಮಂದಿರವು  ಪಿಂಪಲ್ ವಾಡಿ ರಸ್ತೆಯ ಪಿಲಿಗ್ರಿಮ್ಸ್ ಇನ್ ಹೋಟೆಲ್ ನ ಪಕ್ಕದಲ್ಲಿದೆ. ದ್ವಾರಕಾಮಾಯಿಯಿಂದ ಕೇವಲ 5 ನಿಮಿಷದ ನಡಿಗೆಯ ಅಂತರದಲ್ಲಿದೆ ಈ ಮಂದಿರವಿರುತ್ತದೆ. ಸಾಯಿಬಾಬಾರವರು ತಮ್ಮ ಬೆಳಗಿನ ಭಿಕ್ಷೆಗೆ ಹೋಗುವಾಗ ಕೆಲವೊಮ್ಮೆ ಈ ಮಂದಿರದ ಬಳಿ ಹೋಗುತ್ತಿದ್ದರು. ಸಾಯಿ ಸಚ್ಚರಿತೆಯಲ್ಲಿ ಈ ದೇವಾಲಯದ ವಿಷಯವನ್ನು ಉಲ್ಲೇಖಿಸಲಾಗಿದೆ. ಬಾಳಾ ಗಣಪತಿ ಶಿಂಪಿ ಒಮ್ಮೆ ಅತಿಸಾರ ಮತ್ತು ಮಲೇರಿಯಾ ರೋಗದಿಂದ ಬಳಲುತ್ತಿರುತ್ತಾರೆ. ಯಾವುದೇ ಔಷಧ ತೆಗೆದುಕೊಂಡರೂ ಕೂಡ ಗುಣವಾಗುವುದಿಲ್ಲ. ಅತಿಸಾರ ಹೆಚ್ಚಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಆಗ ಅವರು ಸಾಯಿಯವರ ಸಹಾಯವನ್ನು ಬೇಡುತ್ತಾರೆ. ಆಗ ಸಾಯಿಬಾಬಾ "ಮಹಾಲಕ್ಷ್ಮಿ ದೇವಾಲಯದ ಬಳಿ ಹೋಗು. ಅಲ್ಲಿ ಒಂದು ಕರಿ ನಾಯಿಗೆ ಮೊಸರನ್ನ ನೀಡು. ನಿನ್ನ ಖಾಯಿಲೆ ಗುಣವಾಗುತ್ತದೆ" ಎಂದು ಹೇಳುತ್ತಾರೆ. ಆಗ ಬಾಳಾ ಗಣಪತಿ ಶಿಂಪಿಯವರು ಇದನ್ನು ಕಾರ್ಯಗತ ಮಾಡುವುದು ಹೇಗೆ ಎಂದು ಯೋಚಿಸುತ್ತ ಮನೆಗೆ ತೆರಳಿ ಅನ್ನ ಮತ್ತು ಮೊಸರನ್ನು ಚೆನ್ನಾಗಿ ಕಲಸಿಕೊಂಡು ಮಹಾಲಕ್ಷ್ಮಿ ಮಂದಿರದ ಬಳಿ ಬರುವ ಹೊತ್ತಿಗೆ ಒಂದು ಕರಿ ನಾಯಿ ಬಾಲವನ್ನು ಅಲ್ಲಾಡಿಸುತ್ತ ಇವರ ಬಳಿ ಬರುತ್ತದೆ. ಭಾಳ ಗಣಪತಿ ಶಿಂಪಿ ಸಂತೋಷಭರಿತರಾಗಿ ಆ ಕರಿ ನಾಯಿಗೆ ಮೊಸರನ್ನ ನೀಡುತ್ತಾರೆ. ಆ ನಾಯಿಯು ಮೊಸರನ್ನ ತಿಂದ ಕೆಲವೇ ಕ್ಷಣಗಳಲ್ಲಿ ಶಿಂಪಿಯವರ ಆರೋಗ್ಯ ಸುಧಾರಿಸುತ್ತದೆ (ಸಾಯಿ ಸಚ್ಚರಿತ್ರೆ 13ನೇ ಅಧ್ಯಾಯವನ್ನು ಸಾಯಿ ಭಕ್ತರು ನೋಡುವುದು).

  
ಮಹಾಲಕ್ಷ್ಮಿ ಮಂದಿರದ ಹೊರನೋಟ
1950 ನೇ ಇಸವಿಯಲ್ಲಿ ಈ ಮಂದಿರದಲ್ಲಿ ಮರದ ತೊಲೆಗಳನ್ನು ಹಾಕಿ ನಿರ್ಮಾಣ ಮಾಡಲಾಗಿತ್ತು. ದೇವಾಲಯದ ಮಧ್ಯ ಭಾಗದಲ್ಲಿ ಅಷ್ಟಲಕ್ಷ್ಮಿಯರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿತ್ತು ಮತ್ತು ವಿಗ್ರಹಕ್ಕೆ ಸಿಂಧೂರದಿಂದ ಅಲಂಕಾರ ಮಾಡಲಾಗುತ್ತಿತ್ತು. ಕಾಲಾನಂತರದಲ್ಲಿ ಈ ಮಂದಿರದಲ್ಲಿ ಅನೇಕ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಯಿತು. ಈ ಮಂದಿರದಲ್ಲಿ ಈಗ ದುರ್ಗಾದೇವಿ, ಮಹಾಲಕ್ಷ್ಮಿ, ಅಷ್ಟಲಕ್ಷ್ಮಿ, ನವಗ್ರಹ, ಶಿವಲಿಂಗ, ಏಳು ಪವಿತ್ರ ಕಪ್ಪು ಶಿಲೆಗಳು, ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.

ದುರ್ಗಾದೇವಿಯ ವಿಗ್ರಹ 

ಮಹಾಲಕ್ಷ್ಮಿಯ ವಿಗ್ರಹ 

 ಅಷ್ಟಲಕ್ಷ್ಮಿಯ ವಿಗ್ರಹ 

 ನವಗ್ರಹಗಳು 

 ಶಿವಲಿಂಗ
ಅಷ್ಟಲಕ್ಷ್ಮಿಯ ಮಂದಿರದಲ್ಲಿ ಎರಡು ಸಾಲು ಅಷ್ಟಲಕ್ಷ್ಮಿಯ ವಿಗ್ರಹಗಳಿವೆ. ಮೇಲಿನ ಸಾಲಿನಲ್ಲಿರುವ ಅಷ್ಟಲಕ್ಷ್ಮಿಯ ವಿಗ್ರಹಗಳನ್ನು ಹೊಸದಾಗಿ ಪ್ರತಿಷ್ಟಾಪಿಸಲಾಗಿದೆ. ಕೆಳಗಿನ ಸಾಲಿನಲ್ಲಿರುವ ಅಷ್ಟಲಕ್ಷ್ಮಿಯ ವಿಗ್ರಹಗಳನ್ನು ಸಾಯಿಬಾಬಾರವರ ಕಾಲದಲ್ಲೇ ಪ್ರತಿಷ್ಟಾಪಿಸಲಾಗಿದ್ದು ಅತ್ಯಂತ ಪುರಾತನವಾಗಿರುತ್ತದೆ.

ಪವಿತ್ರ ಧುನಿ ಮಾ 

ದೇವಾಲಯದ ಪೂರ್ವ ಭಾಗದಲ್ಲಿ ಏಳು ಪವಿತ್ರ ಕಪ್ಪು ಶಿಲೆಗಳನ್ನು ಇರಿಸಲಾಗಿದೆ ಮತ್ತು ಅದಕ್ಕೆ ಸಿಂಧೂರದಿಂದ ಪ್ರತಿನಿತ್ಯ ಅಲಂಕಾರ ಮಾಡಲಾಗುತ್ತದೆ. ಈ ಏಳು ಪವಿತ್ರ ಕಲ್ಲುಗಳು ಏಳು ಪವಿತ್ರ ನದಿಗಳ ಸಂಕೇತವಾಗಿ ಇರಿಸಲಾಗಿದೆ.

ಏಳು ಪವಿತ್ರ ಶಿಲೆಗಳು 

ಆಗಸ್ಟ್ 2001 ರಲ್ಲಿ ಈ ಮಂದಿರವನ್ನು ಜೀರ್ಣೋದ್ದಾರ ಮಾಡಿ ಸುಂದರವಾಗಿ ನಿರ್ಮಾಣ ಮಾಡಿರುತ್ತಾರೆ.

ವಿಠಲನ ಮಂದಿರ

ಈ ಮಂದಿರವು ಪೋಸ್ಟ್ ಆಫೀಸ್ ಗೆ ಹೋಗುವ ಮಾರ್ಗದಲ್ಲಿ ಎಡಭಾಗದಲ್ಲಿ ಮತ್ತು ಸೇವಾಧಾಮ್ ಕಾರ್ಯಾಲಯದ  ಎದುರುಗಡೆ ಇರುತ್ತದೆ. ಲಕ್ಷ್ಮಣ್ ಮಾಮಾ ಅವರ ಏಳನೆಯ ಪೀಳಿಗೆ ಯವರ ಪ್ರಕಾರ ಮೊದಲು ಶಿರಡಿಯು ಬೆಟ್ಟ ಗುಡ್ಡ ಗಳಿಂದ ಕೂಡಿದ ಪ್ರದೇಶವಾಗಿತ್ತು. ಮೊದಲು ಈ ದೇವಾಲಯವು ಶ್ಯಾಮರವರ ಮನೆಯ ಪಕ್ಕದಲ್ಲಿತ್ತು . ಬೆಟ್ಟ ಗುಡ್ಡಗಳನ್ನು  ಕಡಿದು ರಸ್ತೆ ಮಾಡುವಾಗ ವಿಠಲನ ಮಂದಿರವನ್ನು ಈಗ ಇರುವ ಸ್ಥಳಕ್ಕೆ ವರ್ಗಾಯಿಸಲಾಯಿತು.

 ವಿಠಲನ ಮಂದಿರದ ಹೊರನೋಟ 

ಪುರಾತನ ಇತಿಹಾಸಗಳ ಪ್ರಕಾರ ನಾನು ಮಾಮ ರತ್ನ ಪಾರ್ಕಿಯವರು ವಿಠಲನ ಪರಮ ಭಕ್ತರಾಗಿದ್ದರು. ಒಮ್ಮೆ ಪಂಡರಾಪುರದ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡುವಾಗ ಇವರಿಗೆ ನದಿಯಲ್ಲಿ ವಿಠಲನ ವಿಗ್ರಹವೊಂದು ದೊರಕಿತು. ಆ ಸ್ಥಳದಲ್ಲಿಯೇ ಆ ವಿಗ್ರಹಕ್ಕೆ ವಿಧಿವತ್ತಾಗಿ ಪೂಜೆ ಮಾಡಿ ವಿಗ್ರಹವನ್ನು ತಮ್ಮ ಮನೆಗೆ ತಂದರು. ನಂತರ ಮಂದಿರವನ್ನು ನಿರ್ಮಿಸಿ ಪ್ರತಿನಿತ್ಯ ವಿಠಲನಿಗೆ ಪೂಜೆಯನ್ನು ಸಲ್ಲಿಸುತ್ತಿದ್ದರು. ಆದರೆ ಅವರಿಗೆ ವಿಠಲನ ವಿಗ್ರಹದ ಜೊತೆ ರುಕ್ಮಿಣಿ ಇಲ್ಲದಿರುವುದು ಬಹಳ ಬೇಸರ ತಂದಿತು. ಮುಂದಿನ ವರ್ಷ ಪಂಡರಾಪುರಕ್ಕೆ ಯಾತ್ರೆಗೆ ಹೋದಾಗ ಅವರು ದಾಸಗಣು ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ದಾಸಗಣುರವರು ಅದೇ ಶಿಲೆಯಿಂದ ಮಾಡಿದ ರುಕ್ಮಿಣಿಯ ವಿಗ್ರಹವನ್ನು ಇವರಿಗೆ ಕೊಟ್ಟು ಪ್ರತಿಷ್ಟಾಪಿಸುವಂತೆ ಹೇಳಿದರು ಎಂದು ಹೇಳಲಾಗುತ್ತದೆ. 



ವಿಠಲನ ಮಂದಿರದ ಪೂಜಾರಿಯಾದ ಲಕ್ಷ್ಮಣ ಮಾಮಾ  (ನಾನು ಮಾಮಾ ರವರ  ಮಗ ) ಬಹಳ ಸಂಪ್ರದಾಯಬದ್ದ ಕುಟುಂಬಕ್ಕೆ ಸೇರಿದ್ದರು. ಆದುದರಿಂದ ಸಾಯಿಬಾಬಾರವರು ಮೊದಲು ಶಿರಡಿಗೆ ಬಂದಾಗ ಬಾಬಾರವರನ್ನು, ಅವರ ರೀತಿ ನೀತಿಗಳನ್ನು ಮತ್ತು ಅವರ ದೈನಂದಿನ ಚಟುವಟಿಕೆಗಳನ್ನು ಕಂಡು ಅದನ್ನು ಸಹಿಸದೆ ತೀವ್ರವಾಗಿ ವಿರೋಧಿಸುತ್ತಿದ್ದರು. ಒಮ್ಮೆ ಇವರು ತೀವ್ರವಾದ ಖಾಯಿಲೆಯಿಂದ ಬಳಲುತ್ತಿದ್ದಾಗ ಸಾಯಿಬಾಬಾರವರು ಇವರನ್ನು ಕಾಪಾಡಿದರು. ಅಂದಿನಿಂದ ಇವರು ಸಾಯಿಬಾಬಾರವರ ಅನನ್ಯ ಭಕ್ತರಾದರು. ಇವರ ಮಗನಾದ ಬಾಪಾಜಿ ಲಕ್ಷ್ಮಣ ರತ್ನ ಪರ್ಕಿ ಕೂಡ ಒಮ್ಮೆ ತೀವ್ರತರವಾದ ಖಾಯಿಲೆಯಿಂದ ಬಳಲುತ್ತಿದ್ದರು. ಆಗ ಲಕ್ಷ್ಮಣ ರಾವ್ ಪೂಜಾರಿಯವರು ಸಾಯಿಬಾಬಾರವರನ್ನು ಕಂಡು ತಮ್ಮ ಮಗನನ್ನು ಕಾಪಾಡುವಂತೆ ಬೇಡಿಕೊಂಡರು. ಆಗ ಸಾಯಿಬಾಬಾರವರು ಇವರನ್ನು ಬೈದು ಅಲ್ಲಿಂದ ಓಡಿಸಿದರು. ಆ ನಂತರ ಸಾಯಿಯವರಿಗೆ ದಯೆ ಬಂದು ಇವರ ಮನೆಗೆ ತೆರಳಿ ಬಾಪಾಜಿಯ ತಲೆಯ ಮೇಲೆ ತಮ್ಮ ಅಭಯ ಹಸ್ತವನ್ನಿತ್ತು ಆಶೀರ್ವದಿಸಿದರು ಮತ್ತು ಬಾಪಾಜಿಯವರು ಸಾಯಿಯವರ ದಯೆಯಿಂದ ಗುಣ ಹೊಂದಿದರು. ಈ ಘಟನೆಯಾದ ನಂತರ ಲಕ್ಷ್ಮಣ ರಾವ್ ಅವರು ಸಾಯಿಯವರು ದೇವರ ಅಪರಾವತಾರವೆಂದು ತಮ್ಮ ಅನುಭವದಿಂದ ತಿಳಿದುಕೊಂಡರು ಮತ್ತು ಅವರನ್ನು ದೇವರೆಂದೇ ಪೂಜಿಸತೊಡಗಿದರು. ಇವರ ಮಗನಾದ ಬಾಪಾಜಿ ಕೂಡ ಸಾಯಿಯವರ ಅನನ್ಯ ಭಕ್ತನಾದರು ಮತ್ತು ಸಾಯಿಯವರ ಮಹಾಸಮಾಧಿಯ ಸಮಯದಲ್ಲಿ ಕೆಲವೇ ಭಕ್ತರ ಸಂಗಡ ಮಸೀದಿಯಲ್ಲಿ ಸಾಯಿಯವರ ಬಳಿಯೇ ಇದ್ದರು. ಇವರನ್ನು ನಾವು ಅದೃಷ್ಟವಂತರೆಂದೇ ಹೇಳಬಹುದು.

ಲಕ್ಷಣ ಮಾಮಾರವರು ಶಿರಡಿಯ ಗ್ರಾಮ ಪೂಜಾರಿಯಾಗಿದ್ದರು. ಇವರು ಪ್ರತಿದಿನ ಮೊದಲು ಸಾಯಿಬಾಬಾರವರ ಪೂಜೆಯನ್ನು ನೆರವೇರಿಸಿ ನಂತರ ಶಿರಡಿ ಗ್ರಾಮದಲ್ಲಿದ್ದ ಎಲ್ಲ ದೇವರುಗಳ ಪೂಜೆಯನ್ನು ನೆರವೇರಿಸುತ್ತಿದ್ದರು. 




ಸಾಯಿಬಾಬಾರವರ ಮಹಾಸಮಾಧಿಯ ಮಾರನೇ ದಿನ  ಬೆಳಗಿನ ಜಾವ ಸಾಯಿಬಾಬಾರವರು ಲಕ್ಷ್ಮಣ ಮಾಮಾರವರ ಕನಸಿನಲ್ಲಿ ದರ್ಶನ ನೀಡಿ ಶಿರಡಿಗೆ ಬಂದು ತಮಗೆ ಕಾಕಡಾ ಆರತಿ ಮಾಡುವಂತೆ ಆದೇಶ ನೀಡಿದರು. ಕೂಡಲೇ ಲಕ್ಷ್ಮಣ ಮಾಮಾರವರು ನಿದ್ರೆಯಿಂದ ಎದ್ದು ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸಿ ಪೂಜಾ ಸಾಮಗ್ರಿಗಳೊಡನೆ ಶಿರಡಿಯ ದ್ವಾರಕಾಮಾಯಿಗೆ ಬಂದು ಮುಸ್ಲಿಂ ಮೌಲ್ವಿಗಳು ಮತ್ತು ಇತರ ಶಿರಡಿ ಗ್ರಾಮಸ್ಥರ ವಿರೋಧವನ್ನು ಲೆಕ್ಕಿಸದೆ ತಮ್ಮ ಪಾಡಿಗೆ ತಾವು ಮೃತ ದೇಹಕ್ಕೆ ಆರತಿ ಮಾಡಿ ಹೊರಟು ಹೋದರು (ಸಾಯಿ ಸಚ್ಚರಿತ್ರೆ 43ನೇ ಅಧ್ಯಾಯ ನೋಡುವುದು).


ಸಾಯಿಬಾಬಾರವರು ಈ ವಿಠಲನ ಮಂದಿರಕ್ಕೆ ಲೇಂಡಿ ಉದ್ಯಾನವನಕ್ಕೆ ಹೋಗುವ ಸಮಯದಲ್ಲಿ ಹೋಗುತ್ತಿದ್ದರು ಮತ್ತು ಅಲ್ಲಿ ಸ್ವಲ್ಪ ಕಾಲ ಇರುತ್ತಿದ್ದರೆಂದು ಹೇಳಲಾಗುತ್ತದೆ. ಈ ಮಂದಿರವು ಅತ್ಯಂತ ಪ್ರಶಾಂತವಾಗಿ ಇದ್ದಿದ್ದರಿಂದ ಸಾಯಿಬಾಬಾರವರು ದಾಸಗಣುವಿಗೆ ಈ ಮಂದಿರದಲ್ಲಿಯೇ ತಂಗುವಂತೆ ಮತ್ತು ದ್ವಾರಕಾಮಾಯಿಗೆ ಬರಬೇಡವೆಂದು ಆದೇಶ ನೀಡಿದರೆಂದು ತಿಳಿದುಬಂದಿದೆ.

ನರಸಿಂಹ ದೇವಾಲಯ


ಈ ಮಂದಿರವನ್ನು ಸಖಾರಾಮ್ ಶೆಲ್ಕೆಯವರ ವಂಶಸ್ಥರು 1964 ರಲ್ಲಿ ಕಟ್ಟಿಸಿದರು.  ಈ ನರಸಿಂಹ ದೇವಾಲಯವು ಚಾವಡಿಯ ಪಕ್ಕದಲ್ಲಿ ಮತ್ತು ಸಖಾರಾಮ್ ಶೆಲ್ಕೆಯವರ ಮನೆಯ ಪಕ್ಕದಲ್ಲಿ ಇರುತ್ತದೆ.  ಹಿಂದೆ ಈ ಜಾಗದಲ್ಲಿ ಸಾಯಿ ಮಹಾಭಕ್ತರಾದ ಶ್ರೀ. ಸಖಾರಾಮ್ ಶೆಲ್ಕೆಯವರ ಕುಟೀರವಿತ್ತು. ಸಾಯಿಯವರು 5 ಮನೆಗಳಲ್ಲಿ ಪ್ರತಿನಿತ್ಯವೂ ಭಿಕ್ಷೆಯನ್ನು ಬೇಡುತ್ತಿದ್ದರು. ಅವರಲ್ಲಿ ಶ್ರೀ.ಸಖಾರಾಮ್ ಶೆಲ್ಕೆಯವರ ಮನೆಯು ಒಂದು. ಈ ದೇವಾಲಯದ ಆವರಣದಲ್ಲಿ ಸಖಾರಾಮ್ ಶೆಲ್ಕೆಯ ಮಗ ತ್ರಯಂಬಕ  ಶೆಲ್ಕೆ , ಸೊಸೆ ಅರ್ಶಾ ಬಾಯಿ ಮತ್ತು ರಾಮಗೀರ್ ಬುವ (ಸಾಯಿಸಚ್ಚರಿತೆ 33ನೇ ಆಧ್ಯಾಯ, ಜಾಮನೇರ್ ಪವಾಡ  ಇವರ ಉಲ್ಲೇಖವಿದೆ) ಇವರುಗಳ ಸಮಾಧಿಯನ್ನು ಕಟ್ಟಲಾಗಿದೆ. ಈ ಮಂದಿರವನ್ನು ಸಖಾರಾಮ್ ಶೆಲ್ಕೆಯವರ ವಂಶಸ್ಥರು ನೋಡಿಕೊಳ್ಳುತ್ತಿದ್ದಾರೆ.

 
  ನರಸಿಂಹನ ವಿಗ್ರಹ 

ಜೈನ ದೇವಾಲಯಗಳು

ಶಿರಡಿಯಲ್ಲಿ 2 ಪ್ರಮುಖ ಜೈನ ದೇವಾಲಯಗಳು ಇವೆ. ಮೊದಲನೆಯ ಜೈನ ಮಂದಿರವು ನಗರ್-ಮನಮಾಡ ರಸ್ತೆಯಲ್ಲಿರುವ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನ ಪಕ್ಕದಲ್ಲಿದೆ. ಇದನ್ನು ಶ್ರೀ ಜೈನ ಶ್ವೇತಾಂಭರ ತೀರ್ಥ ಟ್ರಸ್ಟ್ ನವರು ಸ್ಥಾಪಿಸಿದ್ದು ಈ ಮಂದಿರದವನ್ನು ಯಾವುದೇ ಕಬ್ಬಿಣವನ್ನು ಉಪಯೋಗಿಸದೆ ಕಟ್ಟಲಾಗಿದೆ. ಒಂದು ಕಬ್ಬಿಣದ ಮೊಳೆ ಕೂಡ ಭಕ್ತರಿಗೆ ಕಾಣಸಿಗುವುದಿಲ್ಲ. ಏಕೆಂದರೆ ಕಬ್ಬಿಣ ಅಥವಾ ಯಾವುದೇ ರೀತಿಯ ಲೋಹವು ಧ್ಯಾನಕ್ಕೆ ಅಡ್ಡಿಯನ್ನು ಉಂಟುಮಾಡುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಈ ಮಂದಿರದಲ್ಲಿ ಆದೇಶ್ವರ ಭಗವಾನರ ವಿಗ್ರಹವಿದೆ.  


ಆದೇಶ್ವರ ಭಗವಾನ್ ಜೈನ ಮಂದಿರ

ಎರಡನೇ ಮಂದಿರವು ಇಲ್ಲಿಂದ ಸ್ವಲ್ಪವೇ ದೂರದಲ್ಲಿದೆ. ಈ ಮಂದಿರವನ್ನು ಶೇಷ ಮಹಲ್ ಎಂದು ಕರೆಯುತ್ತಾರೆ. ಏಕೆಂದರೆ ಈ ಮಂದಿರದ ಒಳಭಾಗದ ಗೋಡೆಗಳನ್ನು ಮತ್ತು ಮೇಲು ಚಾವಣಿಯನ್ನು ಕನ್ನಡಿಯ ಚೂರುಗಳಿಂದ ಶೃಂಗರಿಸಲಾಗಿದೆ. ಈ ಮಂದಿರದಲ್ಲಿ ಜೈನ ಧರ್ಮದ 16ನೇ ತೀರ್ಥಂಕರರಾದ ಶ್ರೀ ಶಾಂತಿನಿವಾಸ ಮಹಾರಾಜರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ಮಂದಿರವನ್ನು ಶ್ರೀ ಶಾಂತಿನಿವಾಸ ದಿಗಂಬರ ದೇವಸ್ಥಾನ ಕಮಿಟಿಯವರು ನಿರ್ಮಿಸಿದ್ದಾರೆ. ಈ ಮಂದಿರಕ್ಕೆ ಹೋಗಬೇಕಾದರೆ ನಗರ್-ಪುಣೆ ಮುಖ್ಯ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಮುನಿಸಿಪಲ್ ಆಫೀಸಿನ ಪಕ್ಕದ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸುಮಾರು 100 ಮೀಟರ್ ದೂರ ಸಾಗಿದರೆ ಬಲಭಾಗದಲ್ಲಿ ಬರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment