ಶಿರಡಿ ಸಾಯಿಬಾಬಾರವರು ರೈಲುಬಂಡಿಯಲ್ಲಿ "3 ಜನರಿಗೆ ಮಲಗಲು ಸ್ಥಳ" ಕೊಡಿಸಿದ್ದು ಮತ್ತು ಸಾಯಿಭಕ್ತರೊಬ್ಬರ ತಾಯಿಯವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಸಾಯಿ ಲೀಲೆ - ಕೃಪೆ - ಸಾಯಿಅಮೃತಧಾರಾ.ಕಾಂ
ಅಂದು 20ನೇ ಜುಲೈ 2009 ಶ್ರೀಕಂಠ ಅವರ ಸ್ನೇಹಿತ ರಾಜೇಶ್ ರವರು ಫೋನ್ ಮಾಡಿ 22ನೇ ಜುಲೈ 2009 ರಂದು ಅವರು ಮತ್ತು ಅವರ ಸ್ನೇಹಿತರಾದ ಪ್ರವೀಣ್ ರವರು ಶಿರಡಿಗೆ ಹೋಗುತ್ತಿರುವುದಾಗಿ ಜೊತೆಯಲ್ಲಿ ತಾವು ಬರಬೇಕೆಂದು ಆಹ್ವಾನವಿತ್ತರು. ಆಗ ಶ್ರೀಕಂಠರವರು ಚಿಕನ್ ಗುನ್ಯ ಎಂಬ ಭಯಂಕರ ಜ್ವರದಿಂದ ನರಳುತ್ತಿದ್ದರು. ತಮಗೆ ಹುಷಾರಿಲ್ಲದ ಕಾರಣ ಮತ್ತು ಹಣದ ಮುಗ್ಗಟ್ಟಿನ ಕಾರಣ ತಾವು ಬರಲಾಗುವುದಿಲ್ಲ ಎಂದು ಶ್ರೀಕಂಠ ರವರು ರಾಜೇಶ್ ರವರ ಆಹ್ವಾನವನ್ನು ನಿರಾಕರಿಸಿದರು. ಆದರೆ ರಾಜೇಶ್ ರವರು ಶ್ರೀಕಂಠರವರು ಬರಲೇಬೇಕೆಂದು ಪಟ್ಟು ಹಿಡಿದರು ಮತ್ತು ಪ್ರಯಾಣದ ಖರ್ಚನ್ನು ತಾವೇ ವಹಿಸಿಕೊಳ್ಳುತ್ತೇವೆ ಎಂದರು. ಆಲ್ಲದೇ, ತಾವು ಇನ್ನು 15 ಜನರೊಡಗೂಡಿ "ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್" ಎಂಬ ಸಂಸ್ಥೆಯನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪಿಸಿದ್ದು ಅದಕ್ಕಾಗಿ ಒಂದು ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳನ್ನು ಶಿರಡಿಗೆ ಹೋಗಿ ತರಲು ಹೊರಟಿರುವುದಾಗಿ ಹೇಳಿದರು. ಶ್ರೀಕಂಠ ರವರು ಸಾಯಿಯವರ ಸೇವೆ ಎಂದು ತಿಳಿದ ತಕ್ಷಣ ಕೂಡಲೇ ಶಿರಡಿಗೆ ತೆರಲು ತಮ್ಮ ಒಪ್ಪಿಗೆ ನೀಡಿದರು. ಕೂಡಲೇ ರಾಜೇಶ್ ರವರು ಪ್ರವೀಣ್ ರವರನ್ನು ಸಂಪರ್ಕ ಮಾಡಿದರು. ಆದರೆ ಪ್ರವೀಣ್ ರವರು 22ನೇ ಜುಲೈ 2009 ರಂದು ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣವಿದ್ದ ಕಾರಣ ಪ್ರಯಾಣ ಮಾಡುವುದು ಸೂಕ್ತವಲ್ಲ ಎಂದು ಹೇಳಿ ಶಿರಡಿಗೆ ತೆರಳಲು ನಿರಾಕರಿಸಿದರು. ಕೂಡಲೇ ರಾಜೇಶ್ ರವರು ಮತ್ತೊಬ್ಬ ಟ್ರಸ್ಟ್ ನ ಸದಸ್ಯರಾದ ವೇಣುಗೋಪಾಲ್ ರವರನ್ನು ತಮ್ಮೊಡನೆ ಬರಲು ಆಹ್ವಾನ ನೀಡಿದರು. ವೇಣುಗೋಪಾಲ್ ರವರು ಸಾಯಿಯವರ ಅನನ್ಯ ಭಕ್ತರಾಗಿದ್ದರು ಮತ್ತು ಯಾವುದೇ ಕಾರ್ಯ ಮಾಡಬೇಕಾದರೂ ಸಾಯಿಬಾಬಾರವರ ಮುಂದೆ ಚೀಟಿಯನ್ನು ಹಾಕಿ ಅದರಲ್ಲಿ ಬಂದಂತೆ ನಡೆಯುತ್ತಿದ್ದರು. ಆದ್ದರಿಂದ ವೇಣುಗೋಪಾಲ್ ರವರು ತಾವು ಬಾಬಾರವರ ಮುಂದೆ ಚೀಟಿಯನ್ನು ಹಾಕುವುದಾಗಿ ಮತ್ತು ಅದರಲ್ಲಿ ಬಂದಂತೆ ನಡೆಯುವುದಾಗಿ ರಾಜೇಶ್ ರವರಿಗೆ ಹೇಳಿ ಚೀಟಿಯನ್ನು ಹಾಕಿದರು. ಚೀಟಿಯಲ್ಲಿ ಸಾಯಿಯವರು ವೇಣುಗೋಪಾಲ್ ರವರಿಗೆ ಶಿರಡಿಗೆ ತೆರಳಲು ಒಪ್ಪಿಗೆ ನೀಡಿದರು. ಕೂಡಲೇ ರಾಜೇಶ್ ರವರು ರೈಲ್ವೆ ಸ್ಟೇಷನ್ ಗೆ ತೆರಳಿ ಶಿರಡಿಗೆ 3 ತತ್ಕಾಲ್ ಟಿಕೇಟ್ ಬುಕ್ ಮಾಡಿದರು. ಆದರೆ ಹೋಗುವಾಗ ಕರ್ನಾಟಕ ಎಕ್ಷ್ ಪ್ರೆಸ್ ರೈಲಿನ ವೈಟಿಂಗ್ ಲಿಸ್ಟ್ ನಲ್ಲಿ 137, 138 ಮತ್ತು 139 ನೇ ನಂಬರ್ ಆಗಿತ್ತು ಹಾಗೂ ಬರುವಾಗ 25ನೇ ಜುಲೈ 2009 ಕ್ಕೆ ಪುಣೆಯಿಂದ ಉದ್ಯಾನ್ ಎಕ್ಷ್ ಪ್ರೆಸ್ ನಲ್ಲಿ ಟಿಕೆಟ್ ಪಕ್ಕಾ ಆಗಿತ್ತು. ರಾಜೇಶ್ ರವರು ಶ್ರೀಕಂಠರವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಶಿರಡಿಗೆ ಹೊರಡಲು ತಯಾರಿ ಮಾಡಿಕೊಳ್ಳುವಂತೆ ತಿಳಿಸಿದರು. ಕೊನೆಗೂ ಹೊರಡುವ ದಿನ ಬಂದೇ ಬಿಟ್ಟಿತು.
22ನೇ ಜುಲೈ 2009 ರಂದು ಶ್ರೀಕಂಠರವರು ಮನೆಯಿಂದ ಹೊರಟು 5:45 ಕ್ಕೆ ರೈಲು ನಿಲ್ದಾಣ ತಲುಪಿದರು. ಆಗ ಇನ್ನು ರಾಜೇಶ್ ಮತ್ತು ವೇಣುಗೋಪಾಲ್ ಬಂದಿರಲಿಲ್ಲ. ಶ್ರೀಕಂಠ ರವರು ರಾಜೇಶ್ ರವರಿಗೆ ಫೋನ್ ಮಾಡಿ ಪಿ.ಎನ್.ಆರ್. ನಂಬರ್ ತಿಳಿಸಲು ಹೇಳಿದರು. ರಾಜೇಶ್ ರವರು ಪಿ.ಎನ್.ಆರ್. ನಂಬರ್ ಮೆಸೇಜ್ ಮಾಡಿದರು. ರೈಲು ನಿಲ್ದಾಣದ ಚಾರ್ಟ್ ನಲ್ಲಿ ನೋಡಿದಾಗ ವೈಟಿಂಗ್ ಲಿಸ್ಟ್ ನಂಬರ್ 17,18,19 ಕ್ಕೆ ಇಳಿದಿತ್ತು. ಅಂದರೆ, 2ನೇ ದರ್ಜೆಯಲ್ಲಿ ಪ್ರಯಾಣಿಸಲು ಅನುಮತಿಯಿರುವುದಿಲ್ಲ ಮತ್ತು ಸಾಮಾನ್ಯ ದರ್ಜೆಯಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕಾಗುತ್ತದೆ. ಇದನ್ನು ನೋಡಿ ಬೇಸರಗೊಂಡ ಶ್ರೀಕಂಠ ರವರು ರಾಜೇಶ್ ರವರಿಗೆ ಫೋನ್ ಮಾಡಿದರು. ಆಗ ರಾಜೇಶ್ ಮತ್ತು ವೇಣುಗೋಪಾಲ್ ರವರು ರಾಜಾಜಿನಗರದ ಸಾಯಿ ಮಂದಿರದಲ್ಲಿ ಶಿರಡಿಗೆ ಪ್ರಯಾಣ ಮಾಡುವ ಮೊದಲು ಸಾಯಿಯವರ ದರ್ಶನ ಪಡೆಯಲು ತೆರಳಿದ್ದರು. ರಾಜೇಶ್ ರವರು ಶ್ರೀಕಂಠ ರವರಿಗೆ ಇನ್ನು 15 ನಿಮಿಷಗಳಲ್ಲಿ ರೈಲು ನಿಲ್ದಾಣದಲ್ಲಿರುವುದಾಗಿ ಮತ್ತು ಯೋಚನೆ ಮಾಡದಿರಲು ತಿಳಿಸಿದರು. ರೈಲು ಹೊರಡುವುದಕ್ಕೆ ಇನ್ನು ಬಹಳ ಸಮಯವಿದ್ದುದರಿಂದ ಮತ್ತು ರಾಜೇಶ್ ಮತ್ತು ವೇಣುಗೋಪಾಲ್ ರವರು ಇನ್ನು ಬಂದಿರದಿದ್ದರಿಂದ ಶ್ರೀಕಂಠ ರವರು ಅಖಂಡ ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸಲು ಪ್ರಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ ರಾಜೇಶ್ ಮತ್ತು ವೇಣುಗೋಪಾಲ್ ರವರು ರೈಲು ನಿಲ್ದಾಣಕ್ಕೆ ಆಗಮಿಸಿದರು. 3 ಜನ ಕೂಡಲೇ ಟಿ.ಸಿ.ಯ ಬಳಿ ವಿಚಾರಣೆ ಮಾಡಲು ತೆರಳಿದರು. ಟಿ.ಸಿ.ಯವರು ತಮ್ಮ ಬಳಿಯಿದ್ದ ಚಾರ್ಟ್ ನೋಡಿ ವೈಟಿಂಗ್ ಲಿಸ್ಟ್ ನಂ.17,18,19 ಇರುವುದರಿಂದ ಮತ್ತು ಬಂಡಿಯಲ್ಲಿ ಸ್ವಲ್ಪವೂ ಸ್ಥಳವಿಲ್ಲದಿರುವುದರಿಂದ ಏನು ಮಾಡಲು ಸಾಧ್ಯವಿಲ್ಲವೆಂದು ಹೇಳಿ ಯಾವುದಕ್ಕೂ ಮುಂದಿನ ಬೋಗಿಯ ಬಳಿಯಿದ್ದ ಮತ್ತೊಬ್ಬ ಟಿ.ಸಿ.ಯನ್ನು ವಿಚಾರಿಸಲು ಹೇಳಿದರು. 3 ಜನ ಮತ್ತೊಬ್ಬ ಟಿ.ಸಿ.ಯ ಬಳಿ ಓಡಿದರು. ಆ ಟಿ.ಸಿ. ಕೂಡ ಚಾರ್ಟ್ ನೋಡಿ ಏನು ಮಾಡಲು ಆಗುವುದಿಲ್ಲವೆಂದು ಹೇಳಿ, ಒಂದು ಕ್ಷಣ ಯೋಚಿಸಿ ಎಸ್.4 ಬೋಗಿಯನ್ನು ಹತ್ತಿಕೊಳ್ಳುವಂತೆ ಹೇಳಿ ಅಲ್ಲಿ ತಾನು ಬಂದು ಇವರಿಗೆ ಏನಾದರು ಮಾಡಲು ಸಾಧ್ಯವೇ ಎಂದು ನೋಡುವುದಾಗಿ ಭರವಸೆ ನೀಡಿದರು. 3 ಜನ ಬಹಳ ಸಂತೋಷದಿಂದ ತಮ್ಮ ವಸ್ತುಗಳನ್ನು ತೆಗೆದುಕೊಂಡು ಎಸ್.4 ಬೋಗಿಯ ಬಳಿ ತೆರಳಲು ಪ್ರಾರಂಭಿಸಿದರು. ಆ ಕ್ಷಣದಲ್ಲಿ ಶ್ರೀಕಂಠ ರವರು ಏನಾದರಾಗಲಿ ಮತ್ತೊಮ್ಮೆ ಟಿ.ಸಿ.ಯನ್ನು ವಿಚಾರಿಸೋಣವೆಂದು ಯೋಚಿಸಿ ಅದೇ ಟಿ.ಸಿ.ಯ ಬಳಿ ತೆರಳಿ ತಾವುಗಳೆಲ್ಲ ಒಂದು ಒಳ್ಳೆಯ ಕೆಲಸಕ್ಕಾಗಿ ಶಿರಡಿ ಸಾಯಿಬಾಬಾರವರ ದರ್ಶನ ಪಡೆಯಲು ಹೋಗುತ್ತಿರುವುದಾಗಿ ಹೇಳಿ ಏನಾದರು ಮಾಡಿ ಮಲಗಲು ಸ್ಥಳ ನೀಡಿ ಸಹಾಯ ಮಾಡಬೇಕೆಂದು ಕೇಳಿಕೊಂಡರು. ಆ ಕ್ಷಣ ಟಿ.ಸಿ.ಗೆ ಏನಾಯಿತೋ ಸಾಯಿಬಾಬಾರವರೇ ಬಲ್ಲರು. ಆ ಟಿ.ಸಿ.ಯವರು ಶ್ರೀಕಂಠ ರವರಿಗೆ ಎಸ್.4 ಬೋಗಿಯಲ್ಲಿ 41,42,43ನೇ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಹೇಳಿದರು ಮತ್ತು ತಾನು ಬಂದು ಮಲಗಲು ಸ್ಥಳ ಗೊತ್ತು ಮಾಡಿಕೊಡುವುದಾಗಿ ಹೇಳಿದರು. 3 ಜನ ಕೂಡಲೇ ಓಡಿ ಹೋಗಿ ಎಸ್.4 ಬೋಗಿಯಲ್ಲಿ ಟಿ.ಸಿ.ಯವರು ಹೇಳಿದಂತೆ 41,42,43ನೇ ಸೀಟುಗಳಲ್ಲಿ ಕುಳಿತುಕೊಂಡರು. ರೈಲು ಸಮಯಕ್ಕೆ ಸರಿಯಾಗಿ ಅಂದರೆ 7:20 ನಿಮಿಷಕ್ಕೆ ಬೆಂಗಳೂರು ನಿಲ್ದಾಣವನ್ನು ಬಿಟ್ಟು ಹೊರಟಿತು. ಆದರೆ, ಬರುತ್ತೇನೆಂದು ಹೇಳಿದ್ದ ಟಿ.ಸಿ.ಯು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಮತೊಬ್ಬ ಟಿ.ಸಿ.ಯು ಬಂದು ಟಿಕೆಟ್ ಗಳನ್ನು ಚೆಕ್ ಮಾಡಿ ಏಕೋ ಏನೋ ಏನು ಮಾತನಾಡದೆ ಹೊರಟು ಹೋದರು. 41,42 ಮತ್ತು 43ನೇ ಸೀಟಿನಲ್ಲಿ ಪ್ರಯಾಣಿಸಬೇಕಿದ್ದ 3 ಜನ ಕೊನೆಗೂ ಬರಲೇ ಇಲ್ಲ. ಅವರಿಗೆ ಏನಾಯಿತೋ ಸಾಯಿಬಾಬಾರವರೇ ಬಲ್ಲರು. ಹೀಗೆ ಶ್ರೀಕಂಠ, ರಾಜೇಶ್ ಮತ್ತು ವೇಣುಗೋಪಾಲ್ ರವರು ವೈಟಿಂಗ್ ಲಿಸ್ಟ್ ಟಿಕೇಟ್ ನಲ್ಲಿ ಯಾವುದೇ ತೊಂದರೆಯಿಲ್ಲದೆ, ಹೆಚ್ಚಿಗೆ ಹಣವನ್ನು ಕೂಡ ಟಿ.ಸಿ.ಗೆ ನೀಡದೆ ಮಲಗಲು ಸ್ಥಳ ಕೂಡ ದೊರಕಿ ಶಿರಡಿಗೆ ಬಂದು ಸೇರಿದರು. ಇದು ಸಾಯಿಬಾಬಾರವರ ಪವಾಡವಲ್ಲದೆ ಮತ್ತೇನೆಂದು ಹೇಳಬೇಕು. ಮೂರು ಜನ ಶಿರಡಿ ಸೇರಿ ಅಂದು ಕೊಂಡಂತೆ ಅನೇಕ ಬಾರಿ ಆರತಿ ಮತ್ತು ದರ್ಶನಗಳನ್ನು ಮಾಡಿದರು. 24ನೇ ಜುಲೈ 2009 ರಂದು ಒಂದು ಅಂಗಡಿಯಲ್ಲಿ ದ್ವಾರಕಾಮಾಯಿ ಬಾಬಾರವರ ಸುಂದರ ವಿಗ್ರಹ ಮತ್ತು ಪಾದುಕೆಗಳನ್ನು ಖರೀದಿಸಿ ಅದನ್ನು ದ್ವಾರಕಾಮಾಯಿ, ಚಾವಡಿ ಮತ್ತು ಸಮಾಧಿ ಮಂದಿರದಲ್ಲಿ ಪೂಜೆ ಮಾಡಿಸಿದರು. ಆನಂತರ ತಾವುಗಳು ಇಳಿದುಕೊಂಡಿದ್ದ ಲಾಡ್ಜ್ ಗೆ ತೆರಳಿದರು.
ಸುಮಾರು 2:30 ರ ಸಮಯಕ್ಕೆ ಲಾಡ್ಜ್ ಗೆ ತೆರಳಿದಾಗ ರಾಜೇಶ್ ರವರ ಮೊಬೈಲ್ ನಲ್ಲಿ ಅವರ ಅಣ್ಣಾ, ಅಕ್ಕ ಮತ್ತು ಹೆಂಡತಿಯಿಂದ 15 ಕರೆಗಳು ಬಂದಿರುವುದು ಗೊತ್ತಾಯಿತು. ಕೂಡಲೇ ರಾಜೇಶ್ ತಮ್ಮ ಹೆಂಡತಿಗೆ ಫೋನ್ ಮಾಡಿದಾಗ ರಾಜೇಶ್ ರ ತಾಯಿಯವರು ಬಹಳ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿಸಿರುವುದಾಗಿಯು,ಅವರು ತುರ್ತು ಚಿಕಿತ್ಸಾ ಘಟಕದಲ್ಲಿ ಇಟ್ಟಿರುವುದಾಗಿ ಮತ್ತು ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಡಾಕ್ಟರ ಗಳು ಹೇಳುತ್ತಿದ್ದಾರೆಂದು ತಿಳಿಸಿದರು. ಆಲ್ಲದೇ ಎಲ್ಲ ಬಂಧುಗಳಿಗೆ ಹೇಳಿಕಳುಹಿಸಲು ಕೂಡ ಹೇಳಿದ್ದಾರೆಂದು ತಿಳಿಸಿದರು. ದೇಹದಲ್ಲಿ ಸಕ್ಕರೆಯ ಅಂಶ ಬಹಳ ಹೆಚ್ಚಾಗಿದ್ದು ದೇಹಕ್ಕೆ ರಕ್ತವನ್ನಾಗಲಿ ಅಥವಾ ಗ್ಲುಕೋಸ್ ಆಗಲಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ತಿಳಿಸಿದರು. ರಾಜೇಶ್ ರವರಿಗೆ ಕೂಡಲೇ ಹೊರಟು ಬರುವಂತೆ ಅವರ ಹೆಂಡತಿ ತಿಳಿಸಿದಾಗ ರಾಜೇಶ್ ರವರು ವಿಮಾನದ ಸೌಕರ್ಯವನ್ನು ವಿಚಾರಿಸಿದಾಗ ಸಂಜೆ 5:30 ಕ್ಕೆ ಪುಣೆಯಿಂದ ಬೆಂಗಳೂರಿಗೆ ಕಡೆಯ ವಿಮಾನ ಇರುವುದು ಎಂದು ಗೊತ್ತಾಯಿತು. ಅದು ಬಿಟ್ಟರೆ ಬೇರೆ ಯಾವ ವಿಮಾನವು 5:30 ರ ನಂತರ ಇಲ್ಲವೆಂದು ತಿಳಿಯಿತು. ಆಗಲೇ 2:30 ರ ಸಮಯವಾಗಿದ್ದರಿಂದ ಪುಣೆಗೆ ಹೋಗಲು ಕಮ್ಮಿ ಎಂದರೂ 4 ಘಂಟೆಗಳ ಪ್ರಯಾಣವಿರುವುದರಿಂದ ಅದು ಸಾಧ್ಯವಿಲ್ಲವೆಂದು ಗೊತ್ತಾಯಿತು. ಆ ಕ್ಷಣದಲ್ಲಿ ಶ್ರೀಕಂಠ ರವರಿಗೆ 4 ಘಂಟೆಗೆ ಶಿರಡಿಯಿಂದ ಬೆಂಗಳೂರಿಗೆ ವೋಲ್ವೋ ಬಸ್ ಇರುವುದು ಮನಸ್ಸಿಗೆ ಬಂದಿತು. ಕೂಡಲೇ ರಾಜೇಶ್ ರವರಿಗೆ ವೋಲ್ವೋ ಬಸ್ ನಲ್ಲಿ ಹೊರಟು ಮರುದಿನ ಬೆಳಗ್ಗೆ 10 ಘಂಟೆಗೆ ಬೆಂಗಳೂರು ತಲುಪಬಹುದು ಎಂಬ ವಿಷಯ ತಿಳಿಸಿ ಒಬ್ಬ ಏಜೆಂಟ್ ರನ್ನು ಕರೆಯಿಸಿ ಒಂದು ಟಿಕೆಟ್ ಬುಕ್ ಮಾಡಲು ತಿಳಿಸಿದರು. ಆ ಏಜೆಂಟ್ ವಿಚಾರಿಸಲಾಗಿ ಕೇವಲ ಒಂದೇ ಒಂದು ಟಿಕೆಟ್ ಉಳಿದಿರುವುದಾಗಿ ಗೊತ್ತಾಯಿತು. ಕೂಡಲೇ ಆ ಟಿಕೆಟ್ ಬುಕ್ ಮಾಡಿದರು. ರಾಜೇಶ್ ತಮ್ಮ ಗೆಳೆಯರೊಂದಿಗೆ ಕೂಡಲೇ ಹೊರಟು ಖಂಡೋಬ ಮಂದಿರಕ್ಕೆ ತೆರಳಿ ಅಲ್ಲಿ 15 ನಿಮಿಷಗಳ ಕಾಲ ಭಕ್ತಿಯಿಂದ ಪ್ರಾರ್ಥನೆ ಮಾಡಿ ನಂತರ 3:30 ಕ್ಕೆ ಸರಿಯಾಗಿ ಶಿರಡಿ ಬಸ್ ನಿಲ್ಧಾಣ ತಲುಪಿದರು. ರಾಜೇಶ್ ರವರು 4:00 ಘಂಟೆಗೆ ಸರಿಯಾಗಿ ವೋಲ್ವೋ ಬಸ್ ನಲ್ಲಿ ಹೊರಟು ತಮ್ಮ ಸ್ನೇಹಿತರಿಗೆ ಮರುದಿನ ಪುಣೆಯಿಂದ ಹೊರಟು ಬರುವಂತೆ ತಿಳಿಸಿದರು. ರಾಜೇಶ್ ಮರುದಿನ 10:45 ಕ್ಕೆ ಬೆಂಗಳೂರು ತಲುಪಿದರು ಮತ್ತು ಕೂಡಲೇ ಆಸ್ಪತ್ರೆಗೆ ತೆರಳಿದರು. ಅವರ ತಾಯಿಯವರ ಹಣೆಯ ಮೇಲೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಚ್ಚಿದರು. ಆ ನಂತರ ಅವರ ತಾಯಿಯವರನ್ನು "ಏನ್ಡೋಸ್ಕೊಪಿ" ಮಾಡಲು ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ರಿಪೋರ್ಟ್ ಬಂದು ಡಾಕ್ಟರ ಗಳು ನೋಡಿದಾಗ ಯಾವುದೇ ತೊಂದರೆಯು ಕಂಡು ಬರಲಿಲ್ಲ ಮತ್ತು ಯಾವುದೇ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದರು. ವಿಷದಂತೆ ಏರಿದ್ದ ಸಕ್ಕರೆಯ ಅಂಶ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಮತ್ತೆ ಎರಡು ದಿನಗಳು ಆಸ್ಪತ್ರೆಯಲ್ಲಿ ತಂಗಿದ್ದ ನಂತರ 30ನೇ ಜುಲೈ 2009 ರಂದು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.
ಈ ರೀತಿಯಲ್ಲಿ ಶಿರಡಿ ಸಾಯಿಬಾಬಾರವರು 3 ಜನರ ಜೊತೆಯಲ್ಲಿ ಪ್ರಯಾಣದ ಕಡೆಯವರೆಗೂ ತಾವಿದ್ದರೆಂದು ತೋರಿಸಿದ್ದೇ ಆಲ್ಲದೇ ರಾಜೇಶ್ ರವರ ತಾಯಿಯ ಪ್ರಾಣವನ್ನು ಉಳಿಸಲೆಂದೇ ತಾವು ಅವರನ್ನು ಶಿರಡಿಗೆ ಬರುವಂತೆ ಮಾಡಿದ್ದು ಎಂದು ತೋರಿಸಿಕೊಟ್ಟರು.
- ಶ್ರೀಕಂಠ ಶರ್ಮ ಮತ್ತು ರಾಜೇಶ್ ರವರು ಹೇಳಿದಂತೆ
No comments:
Post a Comment