ಸಾಯಿ ಮಹಾಭಕ್ತ - ನಾನಾ ಸಾಹೇಬ್ ನಿಮೋಣ್ಕರ್ ಆಲಿಯಾಸ್ ಶಂಕರ ರಾವ್ ರಘುನಾಥ ದೇಶಪಾಂಡೆ - ಕೃಪೆ: ಸಾಯಿಅಮೃತಧಾರಾ.ಕಾಂ
ನಾನಾ ಸಾಹೇಬ್ ನಿಮೋಣ್ಕರ್ ರವರು ಸಂಗಮನೇರ್ ನ ವಿಶೇಷ ಮ್ಯಾಜಿಸ್ಟ್ರೇಟ್ ಆಗಿದ್ದರು ಮತ್ತು ನಿಮೋಣ್ ಮತ್ತು ಅದರ ಸುತ್ತಮುತ್ತಲಿನ 5 ಹಳ್ಳಿಗಳ ಮುಖ್ಯಸ್ಥರಾಗಿದ್ದರು. ಇವರು ನಿಮೋಣ್ ನಲ್ಲಿ ಎಕರೆಗಟ್ಟಲೆ ಜಮೀನನ್ನು ಹೊಂದಿ ಬಹಳ ಸ್ಥಿತಿವಂತರಾಗಿದ್ದರು. ಇವರು ಬೇಲಾಪುರದ ನಿವಾಸಿಯಾದ ಜಾಯಾಜಿಯವರನ್ನು ವಿವಾಹವಾಗಿದ್ದರು ಮತ್ತು ಸೋಮನಾಥ, ನಾಗನಾಥ ಹಾಗೂ ರಾಮನಾಥ ಎಂಬ 3 ಗಂಡುಮಕ್ಕಳನ್ನು ಪಡೆದಿದ್ದರು. ನಾಗನಾಥರ ಮಗ ರೇವನ್ನಾಥ್ ನಾಗನಾಥ್ ದೇಶಪಾಂಡೆ. ಇವರ ಮಗ ನಂದಕುಮಾರ್ ರೇವನ್ನಾಥ್ ದೇಶಪಾಂಡೆ. ನಂದಕುಮಾರ್ ರವರು 4ನೇ ಪೀಳಿಗೆಗೆ ಸೇರಿದವರಾಗಿದ್ದು ತಮ್ಮ ಮುತ್ತಾತನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಿದ್ದಾರೆ.
"ದೇಶಪಾಂಡೆ" ಎನ್ನುವುದು ಇವರ ವಂಶದಲ್ಲಿ ಜನಿಸುವ ಎಲ್ಲರಿಗೂ ಅನ್ವಯವಾಗುವ ವಂಶಾವಳಿಯ ಹೆಸರಾಗಿರುತ್ತದೆ. ಇವರ ವಂಶಸ್ಥರು ಅನೇಕ ತಲೆಮಾರುಗಳಿಂದ ಶಿರಡಿಗೆ ಸರಿ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ "ನಿಮೋಣ್" ಗ್ರಾಮದಲ್ಲಿ ನೆಲೆಸಿರುವುದರಿಂದ ಇವರ ವಂಶದಲ್ಲಿ ಜನಿಸುವ ಪ್ರತಿಯೊಬ್ಬರ ಹೆಸರಿನ ಕೊನೆಯಲ್ಲಿ "ನಿಮೋಣ್ಕರ್" ಎನ್ನುವ ಅನ್ವರ್ಥನಾಮ ಸೇರಿಕೊಂಡಿದೆ.
ನಾನಾ ಸಾಹೇಬ್ ನಿಮೋಣ್ಕರ್ ರವರು ತಮ್ಮ ಎಲ್ಲಾ ಆಸ್ತಿಗಳನ್ನು ತೊರೆದು ತಮ್ಮ ಪತ್ನಿಯೊಂದಿಗೆ ಶಿರಡಿಗೆ ಹೋಗಿ ಅಲ್ಲಿಯೇ ನೆಲೆಸಿ ಸಾಯಿಬಾಬಾರವರ ಸೇವೆಯನ್ನು ತಮ್ಮ ಕೊನೆಗಾಲದವರೆಗೂ ಮಾಡಿಕೊಂಡಿದ್ದ ಸಾಯಿ ಮಹಾಭಕ್ತರು. ಹೇಮಾಡಪಂತರ ಶ್ರೀ.ಸಾಯಿ ಸಚ್ಚರಿತ್ರೆಯ 6,12,20,23,25,29,37,38 ಮತ್ತು 43, 44 ಅಧ್ಯಾಯಗಳಲ್ಲಿ ಇವರ ಹೆಸರನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರು ಬರೆದಿರುವ ಶ್ರೀ.ಸಾಯಿ ಸಹಸ್ರನಾಮದ 521 ನೇ ಶ್ಲೋಕದಲ್ಲಿ ಕೂಡ ಇವರ ಹೆಸರಿನ ಉಲ್ಲೇಖ ಬರುತ್ತದೆ. ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾ ಅವರನ್ನು "ದೇವಾ" ಎಂದು ಸಂಬೋಧಿಸುತ್ತಿದ್ದರು. ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾರವರನ್ನು ಅವರ ಮಹಾಸಮಾಧಿಯ ತನಕವೂ ಅತ್ಯಂತ ಹೆಚ್ಚಿನ ಪ್ರೀತಿ ಮತ್ತು ವಿಶ್ವಾಸದಿಂದ ನೋಡಿಕೊಂಡರು.
ಶ್ರೀ ಸಾಯಿ ಸಚ್ಚರಿತ್ರೆಯ 6ನೇ ಅಧ್ಯಾಯದ ಓವಿ 54 ರಿಂದ 57 ರಲ್ಲಿ ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವದ ವಿವರಣೆಯನ್ನು ನೀಡುವಾಗ ನಾನಾ ಸಾಹೇಬ್ ನಿಮೋಣ್ಕರ್ ರವರ ಹೆಸರನ್ನು ಉಲ್ಲೇಖಿಸಲಾಗಿದೆ. ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವವನ್ನು ಸಾಯಿಬಾಬಾರವರು 1911 ರಲ್ಲಿ ಪ್ರಾರಂಭಿಸಿದರು. ರಾಮನವಮಿಯ ದಿನ ಉರುಸ್ ನಡೆಸಲು ತೀರ್ಮಾನ ಮಾಡಿ ಭೀಷ್ಮರವರು ಕಾಕಾ ಮಹಾಜನಿಯವರೊಡನೆ ಸಮಾಲೋಚಿಸಿದರು. ಈ ವಿಷಯವನ್ನು ಸಾಯಿಬಾಬಾರವರೊಡನೆ ಚರ್ಚೆ ಮಾಡಿ ಅವರ ಒಪ್ಪಿಗೆ ಪಡೆದು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ರಾಮನವಮಿಯ ದಿನ ಉರುಸ್ ಕಾರ್ಯಕ್ರಮ ತಪ್ಪದೆ ನಡೆಯುತ್ತಿದೆ. ಹಿಂದೂ ಮತ್ತು ಮುಸ್ಲಿಂ ಭಾಂದವರು ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಲಕ್ಷಾಂತರ ಮಂದಿ ದೇಶ ವಿದೇಶಗಳಿಂದ ಶಿರಡಿಗೆ ಬಂದು ರಾಮನವಮಿ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸಾಯಿಬಾಬಾ ಸಂಸ್ಥಾನದವರು ಒಂದು ಧ್ವಜವನ್ನು ನೀಡುತ್ತಾರೆ. ಹಸಿರು ಧ್ವಜವನ್ನು ದಾಮು ಅಣ್ಣಾ ವಂಶಸ್ಥರು ನೀಡುತ್ತಾರೆ. ನಿಮೋಣ್ಕರ್ ಕುಟುಂಬದವರು ಸುಂದರ ಕಸೂತಿ ಮಾಡಲ್ಪಟ್ಟ ಮತ್ತೊಂದು ಧ್ವಜವನ್ನು ನೀಡುತ್ತಾರೆ. ಮಧ್ಯಾನ್ಹ 2:00 ಘಂಟೆಗೆ ಸರಿಯಾಗಿ ಸಂಸ್ಥಾನದವರು ತಮ್ಮ ಧ್ವಜವನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರದಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಹಸಿರು ಧ್ವಜ ಮತ್ತು ಕಸೂತಿ ಮಾಡಲ್ಪಟ್ಟ ಧ್ವಜಗಳನ್ನು ಒಂದು ಉದ್ದನೆಯ ಕೋಲಿನಲ್ಲಿ ಸಿಕ್ಕಿಸಿಕೊಂಡು ತುಕಾರಾಂ ಸುತಾರ್ ಮನೆಯಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಅಲ್ಲಿ 3 ಧ್ವಜಗಳಿಗೆ ಲಘು ಅಥವಾ ಛೋಟಾ ಆರತಿ ಬೆಳಗುತ್ತಾರೆ. ನಂತರ 3 ಧ್ವಜಗಳನ್ನು ಶಿರಡಿಯ ಸುತ್ತಾ ಮೆರವಣಿಗೆ ಮಾಡಿ ದ್ವಾರಕಾಮಾಯಿಗೆ ತರುತ್ತಾರೆ. ಆಗ ಮೆರವಣಿಗೆಯಲ್ಲಿ ನೃತ್ಯಪಟುಗಳು ಭಾಗವಹಿಸಿ ಸೊಗಸಾಗಿ ನೃತ್ಯ ಮಾಡುತ್ತಾರೆ. ಸಂಸ್ಥಾನದವರು ನೀಡುವ ಧ್ವಜವನ್ನು ದ್ವಾರಕಾಮಾಯಿಯ ಒಳಗಡೆ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಲಾಗುತ್ತದೆ. ಮಿಕ್ಕ 2 ಧ್ವಜಗಳನ್ನು ದ್ವಾರಕಾಮಾಯಿಯ ಚಾವಣಿಯ ಮೇಲೆ ತೂಗು ಹಾಕುತ್ತಾರೆ. 2011 ನೇ ಇಸವಿಯ ಶ್ರೀರಾಮನವಮಿಗೆ ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವ ಆರಂಭವಾಗಿ 100 ವರ್ಷಗಳು ಸಂದಿತು. ನಾನಾ ಸಾಹೇಬರ ಮರಿಮಗನಾದ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆಯವರಿಗೆ ಈ 100ನೇ ಶ್ರೀರಾಮನವಮಿ ಉತ್ಸವದ ದಿನದಂದು ದ್ವಾರಕಾಮಾಯಿಯ ಮೇಲೆ ಪವಿತ್ರ ಧ್ವಜವನ್ನು ಹಾರಿಸುವ ಸುವರ್ಣಾವಕಾಶ ದೊರಕಿತು.
ಶ್ರೀ ಸಾಯಿ ಸಚ್ಚರಿತ್ರೆಯ 12ನೇ ಅಧ್ಯಾಯದ ಓವಿ 56 ರಿಂದ 83 ರಲ್ಲಿ ನಾನಾಸಾಹೇಬರ ಹೆಸರನ್ನು ಉಲ್ಲೇಖಿಸಲಾಗಿದೆ. ಅವರ ಮಗನು ಬೇಲಾಪುರದಲ್ಲಿ ರೋಗಪೀಡಿತನಾಗಿ ಹಾಸಿಗೆ ಹಿಡಿದಾಗ ಜಾಯಾಜಿಯವರು ಕೂಡಲೇ ಬೇಲಾಪುರಕ್ಕೆ ಹೋಗಿ ತಮ್ಮ ಮಗನನ್ನು ನೋಡಿ ಅಲ್ಲಿ ಕೆಲವು ಕಾಲ ಇರಬೇಕೆಂದು ಮನಸ್ಸು ಮಾಡಿ ಹೊರಡಲನುವಾದರು. ಆದರೆ, ನಾನಾಸಾಹೇಬರು ಮಗನನ್ನು ನೋಡಿಕೊಂಡು ಮರುದಿನವೇ ಮರಳಿ ಬರುವಂತೆ ಹೇಳಿದರು. ಆಗ ಜಾಯಾಜಿಯವರಿಗೆ ಏನೂ ತೋಚದಂತಾಯಿತು. ಆಗ ಸಾಯಿಬಾಬಾರವರು ಅವರ ಸಹಾಯಕ್ಕೆ ಬಂದರು. ಬಾಬಾರವರು ವಾಡಾದ ಸಮೀಪದಲ್ಲಿ ನಾನಾಸಾಹೇಬ ಮತ್ತು ಕೆಲವರೊಂದಿಗೆ ಕಲೆತು ಮಾತನಾಡುತ್ತಿದ್ದರು. ಆಗ ಜಾಯಾಜಿಯವರು ಬಂದು ಅವರ ಪಾದಗಳಿಗೆ ಎರಗಿ ಹೊರಡಲು ಅನುಮತಿ ಬೇಡಿದರು. ಬಾಬಾರವರು ಕೂಡಲೇ "ಹೊರಡು, ತೀವ್ರ ಹೊರಡು- ಗಾಬರಿ ಪಡಬೇಡ. ಬೇಲಾಪುರದಲ್ಲಿ ನಾಲ್ಕು ದಿನ ನಿಂತು ಬಾ" ಎಂದರು. ಅಲ್ಲಿಯೇ ನಿಂತಿದ್ದ ನಾನಾಸಾಹೇಬರಿಗೆ ಬಾಬಾರವರ ಮಾತಿನ ಹಿಂದಿನ ಮರ್ಮ ತಿಳಿಯಿತು. ಜಾಯಜಿಯವರ ಮನಸ್ಸಿಗೆ ಕೂಡ ನೆಮ್ಮದಿ ಸಿಕ್ಕಿತು. ಹೀಗೆ ಬಾಬಾರವರ ಮಾತಿನಿಂದ ಇಬ್ಬರೂ ಸಮಾಧಾನ ಹೊಂದಿದರು.
ಶ್ರೀ ಸಾಯಿ ಸಚ್ಚರಿತ್ರೆಯ 20ನೇ ಅಧ್ಯಾಯದ ಓವಿ 50 ರಲ್ಲಿ ಸಾಯಿಬಾಬಾರವರು ನಾನಾಸಾಹೇಬರನ್ನು "ಮಟಾರೆ ಕಾಕಾ" ಎಂದು ಸಂಬೋಧಿಸುತ್ತಿದ್ದ ಉಲ್ಲೇಖವನ್ನು ನೀಡಲಾಗಿದೆ.
ಶ್ರೀ ಸಾಯಿ ಸಚ್ಚರಿತ್ರೆಯ 23ನೇ ಅಧ್ಯಾಯದ ಓವಿ 40 ಮತ್ತು 41 ರಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಒಂದು ದಿನ ಶ್ಯಾಮಾ ಅವರು ವಿಷಪೂರಿತವಾದ ಸರ್ಪದಿಂದ ಕಚ್ಚಲ್ಪಟ್ಟರು. ಕಿರುಬೆರಳಿಗೆ ಸರ್ಪವು ಕಡಿದಿದ್ದರಿಂದ ವಿಷವು ದೇಹಕ್ಕೆಲ್ಲಾ ವ್ಯಾಪಿಸಿತ್ತು. ಯಾತನೆ ಬಹಳವಾಗಿ ಅವರಿಗೆ ಬದುಕುವ ಭರವಸೆ ಉಳಿದಿರಲಿಲ್ಲ. ಅವರ ಸ್ನೇಹಿತರು ಎಂದಿನಂತೆ ಅವರನ್ನು ವಿಠೋಬ ದೇವಾಲಯಕ್ಕೆ ಕರೆದುಕೊಂಡು ಹೋಗಬೇಕೆಂದಿದ್ದರು. ಆಗ ಅಲ್ಲಿಯೇ ಇದ್ದ ನಾನಾಸಾಹೇಬರು ಉಧಿಯನ್ನು ತೆಗೆದುಕೊಳ್ಳಲು ಶಿಫಾರಸು ಮಾಡಿದರು. ಅಷ್ಟರಲ್ಲಿ ಶ್ಯಾಮ ಅವರು ತಮ್ಮ ವಿಠೋಬನಾದ ಸಾಯಿಬಾಬಾರವರಿದ್ದ ದ್ವಾರಕಾಮಾಯಿ ಮಸೀದಿಗೆ ಧಾವಿಸಿದರು. ಕೊನೆಗೆ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರು ವಿಷಕ್ಕೆ ನೇರವಾಗಿ ಕೆಳಗೆ ಇಳಿಯಲು ಆಜ್ಞೆ ಮಾಡುವ ಮುಖಾಂತರ ಶ್ಯಾಮಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.
ಶ್ರೀ ಸಾಯಿ ಸಚ್ಚರಿತ್ರೆಯ 25ನೇ ಅಧ್ಯಾಯದ ಓವಿ 20 ರಿಂದ 25 ರಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಶ್ರೀರಾಮನವಮಿಯ ವಿಷಯವನ್ನು ಮತ್ತೆ ಪ್ರಸ್ತಾಪಿಸಲಾಗಿದೆ. ಧ್ವಜದ ವಿವರಣೆಯನ್ನು ನೀಡುವಾಗ ಇವರ ಹೆಸರಿನ ಉಲ್ಲೇಖ ಬರುತ್ತದೆ.
ಶ್ರೀ ಸಾಯಿ ಸಚ್ಚರಿತ್ರೆಯ 29ನೇ ಅಧ್ಯಾಯದ ಓವಿ 157 ರಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಿಕನೇರದ ಕ್ಯಾಪ್ಟನ್ ಹಾಟೆಯವರು ಶಿರಡಿಗೆ ಹೋಗುವವರ ಸಂಗಡ 12 ರುಪಾಯಿಗಳನ್ನು ಕೊಟ್ಟು ಎರಡು ರುಪಾಯಿಗಳನ್ನು ತರಕಾರಿಗೆ ಉಪಯೋಗಿಸಿ ಇನ್ನುಳಿದ ಹತ್ತು ರುಪಾಯಿಗಳನ್ನು ಬಾಬಾರವರಿಗೆ ದಕ್ಷಿಣೆ ಅರ್ಪಿಸಲು ಹೇಳಿದರು. ಅವರ ಸ್ನೇಹಿತನು ಶಿರಡಿಗೆ ಬಂದು ತರಕಾರಿ ಕೊಂಡನು. ಆದರೆ ವಾಲಪಾಪಡಿ ಪಲ್ಯ ದೊರೆಯಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಅಕಸ್ಮಾತ್ತಾಗಿ ಬಂದ ಒಬ್ಬ ಮಹಿಳೆಯ ಹತ್ತಿರ ವಾಲಪಾಪಡಿ ಶೇಂಗಾ ದೊರೆತವು. ನಂತರ ಅದೆಲ್ಲವನ್ನೂ ತೆಗೆದುಕೊಂಡು ಮಸೀದಿಗೆ ಹೋಗಿ ಹಾಟೆಯವರ ಪರವಾಗಿ ಬಾಬಾರವರಿಗೆ ನೈವೇದ್ಯವನ್ನು ಅರ್ಪಿಸಿದನು. ನಾನಾಸಾಹೇಬರು ಆ ತರಕಾರಿಗಳನ್ನು ಉಪಯೋಗಿಸಿ ಅಡುಗೆ ತಯಾರು ಮಾಡಿ ಬಾಬಾರವರಿಗೆ ಬಡಿಸಿದರು. ಬಾಬಾರವರು ವಾಲಪಾಪಡಿಯನ್ನು ಮಾತ್ರ ತಿನ್ನುತ್ತಿದ್ದರು. ಇದನ್ನು ನೋಡಿ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಯಿತು. ಈ ಸಮಾಚಾರವನ್ನು ತಮ್ಮ ಮಿತ್ರರಿಂದ ತಿಳಿದುಕೊಂಡ ಮೇಲೆ ಹಾಟೆಯವರು ಆನಂದಭರಿತರಾದರು.
ಶ್ರೀ ಸಾಯಿ ಸಚ್ಚರಿತ್ರೆಯ 37ನೇ ಅಧ್ಯಾಯದ ಓವಿ 116 ರಿಂದ 217 ರಲ್ಲಿ ಚಾವಡಿ ಮೆರವಣಿಗೆಯನ್ನು ವರ್ಣಿಸುವಾಗ ಇವರ ಹೆಸರನ್ನು ಉಲ್ಲೇಖಿಸಲಾಗಿದೆ.ವಿಶೇಷವಾಗಿ ಓವಿ 189 ರಲ್ಲಿ ನಾನಾ ಸಾಹೇಬ ನಿಮೋಣ್ಕರ್ ರವರು ಶ್ವೇತ ಛತ್ರಿಯನ್ನು ಬಾಬಾರವರ ತಲೆಯ ಮೇಲೆ ಹಿಡಿದು ವೃತ್ತಾಕಾರವಾಗಿ ತಿರುಗಿಸುತ್ತಿದ್ದರು ಎಂಬ ವಿವರಣೆ ನೀಡಲಾಗಿದೆ.
ಶ್ರೀ ಸಾಯಿ ಸಚ್ಚರಿತ್ರೆಯ 38ನೇ ಅಧ್ಯಾಯದ ಓವಿ 152 ರಿಂದ 184 ರಲ್ಲಿ ದ್ವಾರಕಾಮಾಯಿಯಲ್ಲಿ ಬಾಬಾರವರು ಅಡಿಗೆ ಮಾಡುತ್ತಿದ್ದ ವಿವರಣೆಯನ್ನು ನೀಡುವಾಗ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ವಿಶೇಷವಾಗಿ ಓವಿ 158, 169 ಮತ್ತು 170 ರಲ್ಲಿ ಶ್ಯಾಮ ಮತ್ತು ನಿಮೋಣ್ಕರ್ ಪ್ರತಿದಿನವೂ ದ್ವಾರಕಾಮಾಯಿಯಲ್ಲಿ ಭಕ್ತರಿಗೆ ತಮ್ಮ ಹಸ್ತದಿಂದ ಆಹಾರವನ್ನು ಬಡಿಸುತ್ತಿದ್ದ ವಿವರಣೆಯನ್ನು ನೀಡಲಾಗಿದೆ. ಇಬ್ಬರೂ ಅತ್ಯಂತ ಪೂಜ್ಯ ಭಾವನೆಯಿಂದ ತಮ್ಮ ಕರ್ತವ್ಯವನ್ನು ಶಿರಸಾ ವಹಿಸಿ ನೆರವೇರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಶ್ರೀ ಸಾಯಿ ಸಚ್ಚರಿತ್ರೆಯ 43 ಮತ್ತು 44ನೇ ಅಧ್ಯಾಯದಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಾಯಿಬಾಬಾರವರ ದೇಹಾವಸನ ಕಾಲದಲ್ಲಿ ಬಾಯಾಜಿ ಅಪ್ಪಾ ಕೋತೆ ಪಾಟೀಲರ ತೊಡೆಯ ಮೇಲೆ ಮಲಗಿದ್ದ ಸಾಯಿಬಾಬಾರವರ ಬಾಯಿಗೆ ನಾನಾ ಸಾಹೇಬರು ಪವಿತ್ರ ಗಂಗಾಜಲವನ್ನು ಹಾಕುತ್ತಾರೆ. ನೀರು ಹೊರಗೆ ಬಂದುಬಿಡುತ್ತದೆ. ಆಗ ನಾನಾ ಸಾಹೇಬ್ ನಿಮೋಣ್ಕರ್ ರವರು "ಓ ದೇವಾ" ಎಂದು ಜೋರಾಗಿ ಕೂಗಿಕೊಳ್ಳುತ್ತಾರೆ. ಆಗ ಬಾಬಾರವರು ಕಣ್ಣು ತೆರೆದು ತಮ್ಮ ಬಾಯಿಯಿಂದ "ಹಾ" ಎಂದಿದ್ದನ್ನು ನಾನಾ ಸಾಹೇಬರು ನೋಡುತ್ತಾರೆ.
ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ರಚಿಸಿರುವ "ಶ್ರೀ ಸಾಯಿ ಸಹಸ್ರನಾಮಾವಳಿ ಮತ್ತು ಅಷ್ಟೋತ್ತರ" ದ 521 ನೇ ಶ್ಲೋಕದಲ್ಲಿ ಇವರ ಹೆಸರಿನ ಉಲ್ಲೇಖ ಬರುತ್ತದೆ ಮತ್ತು ಇವರಿಗೆ ಬಾಬಾರವರು ತಮ್ಮ ಪಾದುಕೆಗಳನ್ನು ನೀಡಿರುವ ವಿವರಣೆ ಇರುತ್ತದೆ.
ಪವಿತ್ರ ಪಾದುಕೆಗಳು
ವಿಳಾಸ:
ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ, ನಿಮೋಣ್ ಗ್ರಾಮ, ಸಂಗಮ್ನೇರ್ ತಾಲ್ಲೂಕು, ಅಹಮದ್ ನಗರ ಜಿಲ್ಲೆ-422 611, ಮಹಾರಾಷ್ಟ್ರ, ಭಾರತ.
ದೂರವಾಣಿ ಸಂಖ್ಯೆ:
+91 99220 60733
ಪಾದುಕಾ ಪೂಜೆಯ ವೀಡಿಯೋಗಳು:
(ವೀಡಿಯೋ ಕೃಪೆ: ಪಲ್ಲವಿ ವಾರ್ತೆ, ಬಂಗಾರಪೇಟೆ)
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment