ಸಾಯಿ ಮಹಾಭಕ್ತ - ರಾಮಚಂದ್ರ ದಾದಾ ಪಾಟೀಲ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ರಾಮಚಂದ್ರ ದಾದಾ ಪಾಟೀಲ್ ರವರು ನರಸಿಂಹ ಲಾಡ್ಜ್ ಎಂದು ಕರೆಯಲ್ಪಡುವ ಕಟ್ಟಡದ ಒಡೆಯರಾಗಿದ್ದರು ಮತ್ತು ಆ ಕಟ್ಟಡದಲ್ಲಿಯೇ ವಾಸಮಾಡುತ್ತಿದ್ದರು. ಈ ಕಟ್ಟಡವು ಪಲ್ಲಕಿ ರಸ್ತೆಯಲ್ಲಿ ಶಿಂಧೆವಾಡಾಕ್ಕೆ ಹೋಗುವ ತಿರುವಿನಲ್ಲಿ ಎಡಭಾಗದಲ್ಲಿ ಸಿಗುತ್ತದೆ.
ಶ್ರೀ.ರಾಮಚಂದ್ರ ದಾದಾ ಪಾಟೀಲ್ ರವರು ಶಿರಡಿಯಲ್ಲಿಯೇ ಜನಿಸಿದರು. ಇವರು ರಾಧಾಬಾಯಿ ಮತ್ತು ದಾದಾ ಕೋಟೆಯ ಒಬ್ಬನೇ ಮಗನಾಗಿದ್ದರು. ಇವರಿಗೆ 3 ಜನ ಸಹೋದರಿಯರಿದ್ದರು. ಇವರು ಬಹಳ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರು ವಂಶಪಾರಂಪರ್ಯವಾಗಿ ಬಂದ ಎಕರೆಗಟ್ಟಲೆ ಭೂಮಿಯನ್ನು ಶಿರಡಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಹೊಂದಿದ್ದರು. ಅನೇಕ ಬಗೆಯ ದವಸ ಧಾನ್ಯಗಳನ್ನು ಮತ್ತು ಕಬ್ಬನ್ನು ಈ ಭೂಮಿಯಲ್ಲಿ ಬೆಳೆಯುತ್ತಿದ್ದರು. ಆದ ಕಾರಣ, ರಾಮಚಂದ್ರ ದಾದಾ ಪಾಟೀಲ್ ರವರು ಹಲವಾರು ಕೆಲಸಗಾರರನ್ನು, ಕೂಲಿ ಆಳುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.
ರಾಮಚಂದ್ರ ದಾದಾ ಪಾಟೀಲ್ ರವರು ಬಾಲ್ಯದಿಂದಲೂ ಬಹಳ ಬುದ್ಧಿವಂತರಾಗಿದ್ದರು. ಇವರು 7ನೇ ತರಗತಿಯವರೆಗೂ ಮರಾಟಿ ಮಾಧ್ಯಮದಲ್ಲಿ ಓದಿದರು. ಆದರೆ ಮೊದಲಿನಿಂದಲೂ ಇವರಿಗೆ ನ್ಯಾಯ ಮತ್ತು ನ್ಯಾಯಾಂಗದ ವಿಷಯಗಳ ಮೇಲೆ ಒಲವು ಹೆಚ್ಚಾಗಿತ್ತು. ಹಿಂದೆ ಬೇರಗಾವ್ ಆಗಿದ್ದ ಹಳ್ಳಿಯನ್ನು ಶಿರಡಿ ಎಂದು ನಾಮಕರಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿರಡಿಯ ಮಾರುತಿ ಮಂದಿರದಲ್ಲಿ ಎರಡು ಹನುಮಂತನ ವಿಗ್ರಹಗಳಿವೆ. ಒಂದು ವಿಗ್ರಹ ಶಿರಡಿಯನ್ನು ಮತ್ತು ಇನ್ನೊಂದು ವಿಗ್ರಹವು ಬೇರಗಾವ್ ನ್ನು ಪ್ರತಿನಿಧಿಸುತ್ತವೆ. ಆಗಿನ ದಿನಗಳಲ್ಲಿ ಚಾವಡಿಯವರೆಗೂ ಶಿರಡಿ ಗ್ರಾಮ ಮತ್ತು ಚಾವಡಿಯ ಆಚೆಗೆ ಬೇರಗಾವ್ ಗ್ರಾಮವೆಂದು ಪರಿಗಣಿಸಲಾಗಿತ್ತು.
ಅತ್ಯಂತ ಎಳೆಯ ವಯಸ್ಸಾದ 11ನೇ ವರ್ಷದಿಂದಲೇ ಇವರು ಸಾಯಿಬಾಬಾರವರ ಸೇವೆಯನ್ನು ಮಾಡಲು ಪ್ರಾರಂಭಿಸಿದರು. 1916 ನೇ ಇಸವಿಯಲ್ಲಿ ಇವರು ತೀವ್ರವಾದ ಶೀತಜ್ವರದಿಂದ ಬಳಲುತ್ತಿದ್ದರು ಮತ್ತು ಸಾಯುವ ಸ್ಥಿತಿಯಲ್ಲಿದ್ದರು (ಶ್ರೀ ಸಾಯಿ ಸಚ್ಚರಿತೆ 42ನೇ ಅಧ್ಯಾಯ ನೋಡುವುದು). ಸಾಯಿಬಾಬಾರವರು ಇವರಿಗೆ ದರ್ಶನ ನೀಡಿ "ನೀನು ಹೆದರಬೇಡ. ನೀನು ಇನ್ನೂ ಬಹಳ ವರ್ಷ ಬಾಳಿ ಬದುಕುವೆ" ಎಂದು ಭರವಸೆ ನೀಡಿದರು. ಬಾಬಾರವರ ಮಾತುಗಳನ್ನು ಕೇಳಿ ಪಾಟೀಲರು ಸಂತೋಷಪಟ್ಟರು ಮತ್ತು ಕೂಡಲೇ ತಮ್ಮ ಪ್ರಾಣ ಸ್ನೇಹಿತರಾದ ತಾತ್ಯಾನ ಬಗ್ಗೆ ವಿಚಾರಿಸಿದರು. ಬಾಬಾರವರು "ಪಾಟೀಲ, ತಾತ್ಯಾ ಇನ್ನು ಎರಡು ವರ್ಷಗಳಲ್ಲಿ ಸಾಯುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳಬೇಡ" ಎಂದು ಮಾತು ಪಡೆದರು. ಸ್ವಲ್ಪ ದಿನಗಳಲ್ಲಿ ರಾಮಚಂದ್ರ ಪಾಟೀಲರು ಗುಣಮುಖರಾದರು. ಆದರೆ ತಾತ್ಯಾ ಪಾಟೀಲರು ಇನ್ನೆರಡು ವರ್ಷಗಳಲ್ಲಿ ಸಾಯುತ್ತಾರೆ ಎಂದು ರಾಮಚಂದ್ರ ಚಿಂತಿಸಹತ್ತಿದರು. ಅವರು ಈ ವಿಷಯವನ್ನು ತಮ್ಮ ಬಾಲ್ಯದ ಗೆಳೆಯರಾದ ಬಾಳಾ ಶಿಂಪಿಯವರ ಹೊರತಾಗಿ ಬೇರೆ ಯಾರಿಗೂ ತಿಳಿಸಿರಲಿಲ್ಲ.
ತಾತ್ಯಾ ಮತ್ತು ರಾಮಚಂದ್ರ ಪಾಟೀಲರು ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು ಮತ್ತು ಇಬ್ಬರೂ ಒಟ್ಟಿಗೆ ಆಡಿಕೊಂಡು ಬೆಳೆದರು. ಸಾಯಿಬಾಬಾರವರು ಪ್ರತಿದಿನ ದ್ವಾರಕಾಮಾಯಿಯಲ್ಲಿ ಈ ಇಬ್ಬರೂ ಗೆಳೆಯರು ಒಂದೇ ತಟ್ಟೆಯಲ್ಲಿ ಊಟವನ್ನು ಮಾಡುವಂತೆ ಮಾಡುವುದರ ಮುಖಾಂತರ ಇವರ ನಡುವೆ ಇದ್ದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ರಾಮಚಂದ್ರ ಪಾಟೀಲರು ಸೀತಾಬಾಯಿ ಎಂಬುವರನ್ನು ವಿವಾಹವಾಗಿದ್ದರು. ಆದರೆ ಅವರಿಗೆ ಸಂತಾನಭಾಗ್ಯ ಲಭಿಸದ ಕಾರಣ ಮರು ವಿವಾಹವಾದರು ಮತ್ತು ತಮ್ಮ ಎರಡನೆಯ ಹೆಂಡತಿಯಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದರು.
ಸಾಯಿಬಾಬಾರವರು 15ನೇ ಅಕ್ಟೋಬರ್ 1918 ರ ಪವಿತ್ರ ವಿಜಯದಶಮಿಯಂದು ಸಮಾಧಿ ಹೊಂದಿದರು. ಆಗ ಬಾಬಾರವರ ದೇಹವನ್ನು ಹೇಗೆ ಸಂಸ್ಕಾರ ಮಾಡಬೇಕೆಂಬ ಪ್ರಶ್ನೆ ಉದ್ಭವಿಸಿತು. ಕೆಲವು ಮುಸಲ್ಮಾನರು ಮಸೀದಿಯ ಅಂಗಳದಲ್ಲಿ ದೇಹವನ್ನು ಸಮಾಧಿ ಮಾಡಿ ಅದರ ಮೇಲೆ ಗೋರಿ ಕಟ್ಟಬೇಕೆಂದು ಅಭಿಪ್ರಾಯಪಟ್ಟರು. ಖುಶಾಲಚಂದ ಮಾರವಾಡಿ ಮತ್ತು ಅಮೀರ ಶಕ್ಕರ ಅವರು ಈ ಅಭಿಪ್ರಾಯವನ್ನು ಅನುಮೋದಿಸಿದರು. ಆದರೆ ಹಳ್ಳಿಯ ಮುಖ್ಯಸ್ಥರಾದ ರಾಮಚಂದ್ರ ಪಾಟೀಲರು ಇದಕ್ಕೆ ಒಪ್ಪಲಿಲ್ಲ. ಬಾಬಾರವರ ದೇಹವನ್ನು ವಾಡಾ ಹೊರತು ಬೇರೆ ಎಲ್ಲಿಯು ಒಯ್ಯಬಾರದೆಂದು ಅವರು ಹೇಳಿದರು. ಈ ರೀತಿ ಭಕ್ತರಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿ 36 ಘಂಟೆಗಳ ಕಾಲ ಚರ್ಚೆ ಹಾಗೆಯೇ ಮುಂದುವರಿಯಿತು.
ರಾಮಚಂದ್ರ ಪಾಟೀಲರು ಸಾಯಿಬಾಬಾರವರ ಕೊನೆಯ ಆಸೆಯನ್ನು ಹೇಗಾದರೂ ಮಾಡಿ ಪೂರೈಸಲೇಬೇಕೆಂದು ಮನಸ್ಸು ಮಾಡಿದ್ದರು. ಇವರ ತಾತನವರಾದ ಅಪ್ಪಾಜಿ ಕೋತೆ ಪಾಟೀಲರು ತಮ್ಮ ಮಾತನ್ನು ಕೇಳದಿದ್ದರೆ ಮನೆಗೆ ಕಾಲಿಡಬೇಡ ಎಂದು ಕಟ್ಟಪ್ಪಣೆ ಮಾಡಿದರು. ರಾಮಚಂದ್ರ ಪಾಟೀಲರು ಬಾಬಾರವರ ಕೊನೆಯ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾದರು. ಅಲ್ಲದೆ, ತಾವು ಕೊಟ್ಟ ಮಾತಿನಂತೆ ಇವರ ತಾತನವರ ಮನೆಗೆ ಸುಮಾರು 12 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ. ಇವರ ಮೊದಲನೇ ಹೆಂಡತಿ ಸೀತಾಬಾಯಿ ಆ ಮನೆಯಲ್ಲಿದ್ದರು.
ಬುಧವಾರ ಸಾಯಂಕಾಲ ಬಾಬಾರವರ ಶರೀರವನ್ನು ಸಕಲ ರಾಜಮರ್ಯಾದೆಗಳಿಂದ ಮೆರವಣಿಗೆ ಮಾಡಿ ವಾಡಾಕ್ಕೆ ತಂದು ಮುರಳೀಧರನ ಪ್ರತಿಮೆಗೋಸ್ಕರ ಮೀಸಲಾದ ಗರ್ಭಗೃಹದಲ್ಲಿ ಸಮಾಧಿ ಮಾಡಲಾಯಿತು. ರಾಮಚಂದ್ರ ಪಾಟೀಲರು 13ನೇ ದಿನ ಒಳ್ಳೆಯ ಸಮಾರಾಧನೆಯನ್ನು ಮಾಡಿ ಶಿರಡಿಯಲ್ಲಿದ್ದ ಎಲ್ಲರಿಗೂ ಊಟವನ್ನು ಹಾಕಿಸಿದರು. ಸಾವಿರಾರು ಜನರಿಗೆ ಲಾಡುವನ್ನು ಹಂಚಲಾಯಿತು. ಎಲ್ಲರಿಗೂ ಹಂಚಿದ ಮೇಲೂ ಅಷ್ಟೇ ಮೊತ್ತದ ಲಾಡುಗಳು ಮಿಕ್ಕಿ ಎಲ್ಲರಿಗೂ ಆಶ್ಚರ್ಯವಾಯಿತು. ಬಾಬಾರವರು ಸಮಾಧಿಯಾದ ಎರಡು ತಿಂಗಳವರೆಗೂ ಬರುವ ಎಲ್ಲ ಭಕ್ತರಿಗೂ ಲಾಡುವನ್ನು ಹಂಚುತ್ತಲೇ ಇದ್ದರು. ಸಾಯಿಭಕ್ತರು ಬೂಟಿವಾಡಾ ಕಟ್ಟಿಸಿದ ಬೂಟಿಯವರಿಗೂ ಮತ್ತು ಬಾಬಾರವರ ಕೊನೆಯ ಆಸೆಯಂತೆ ಸಮಾಧಿಯನ್ನು ಅಲ್ಲೇ ಆಗುವಂತೆ ಮಾಡುವಲ್ಲಿ ಯಶಸ್ವಿಯಾದ ರಾಮಚಂದ್ರ ಪಾಟೀಲರಿಗೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ರಾಮಚಂದ್ರ ಪಾಟೀಲರು ಶಿರಡಿ ಗ್ರಾಮ ಪಂಚಾಯತಿಯಲ್ಲಿ 20 ವರ್ಷಗಳ ಕಾಲ ಮಹೋನ್ನತ ಸೇವೆಯನ್ನು ಸಲ್ಲಿಸಿದರು. ಇಂದಿಗೂ ಶಿರಡಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇವರ ಚಿತ್ರಪಟವನ್ನು ತೂಗುಹಾಕಲಾಗಿದೆ. ಅಷ್ಟೇ ಅಲ್ಲದೇ, ಶಿರಡಿ ಸಾಯಿಬಾಬಾ ಸಂಸ್ಥಾನದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಅನೇಕ ವರ್ಷಗಳ ಕಾಲ ಶಿರಡಿ ಸಾಯಿಬಾಬಾ ಸಂಸ್ಥಾನದ ಜಂಟಿ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದರು.
ರಾಮಚಂದ್ರ ಪಾಟೀಲರು ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ಒಂದು ಕಪ್ ಚಹಾ ಸೇವಿಸುತ್ತಿದರು. ನಂತರ ಮಧ್ಯಾನ್ಹ ಆರತಿ ಮುಗಿಯುವವರೆಗೆ ಏನನ್ನೂ ಸೇವಿಸುತ್ತಿರಲಿಲ್ಲ. ಪ್ರತಿದಿನ ತಪ್ಪದೆ ಆರತಿಗೆ ಹಾಜರಾಗುತ್ತಿದ್ದರು. ಇವರು ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಮರಣ ಹೊಂದಿದರು. ಇವರು ಮರಣ ಹೊಂದಿದ ದಿನ ಮನೆಗೆ ಬಹಳ ಜನ ಅತಿಥಿಗಳನ್ನು ಊಟಕ್ಕೆ ಆಹ್ವಾನಿಸಿದ್ದರು. ಅತಿಥಿಗಳು ಸಮಯಕ್ಕೆ ಸರಿಯಾಗಿ ಬಾರದಿದ್ದ ಕಾರಣ ಇವರ ಮನೆಯವರು ಇವರಿಗೆ ಊಟವನ್ನು ಮಾಡಿ ಮುಗಿಸುವಂತೆ ಹೇಳಿದರು. ಪಾಟೀಲರು ಮಧ್ಯಾನ್ಹದ ಆರತಿಯವರೆಗೂ ಕಾಯುವೆನೆಂದು ತಿಳಿಸಿದರು. ಹಾಗೆ ಹೇಳುತ್ತಿದ್ದಂತೆ ತಲೆಯು ಸುತ್ತುತ್ತಿದ್ದರಿಂದ ಕೆಳಗಡೆ ಕುಳಿತುಕೊಂಡರು. ವೈದ್ಯರನ್ನು ಕರೆತರುವ ಮುನ್ನವೇ ಶಾಂತಿಯಿಂದ ಕೊನೆಯುಸಿರೆಳೆದರು.
ರಾಮಚಂದ್ರ ಪಾಟೀಲರ ವಂಶಸ್ಥರು ಈಗಲೂ ಶಿರಡಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಇವರ ವಂಶಸ್ಥರು ಇವರಿದ್ದ ಹಳೆಯ ಮನೆ ಮತ್ತು ಇವರ ಇನ್ನಿತರ ಆಸ್ತಿಗಳನ್ನು ಶ್ರೀ.ಸಖಾರಾಮ್ ಶೆಲ್ಕೆಯವರಿಗೆ ಮಾರಿಬಿಟ್ಟರು. ಈಗ ಇವರ ಮನೆಯವರು ಶಿರಡಿ ಮನಮಾಡ್ ಮುಖ್ಯರಸ್ತೆಯಲ್ಲಿ ಶಿರಡಿ ಪೋಲಿಸ್ ಸ್ಟೇಶನ್ ಬಳಿ ಇರುವ ಸಣ್ಣ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment