Wednesday, August 17, 2011

ಸಾಯಿ ಮಹಾಭಕ್ತ - ಲಕ್ಷ್ಮಣ ಕಾಚೇಶ್ವರ ಜಕಾದಿ - ಕೃಪೆ: ಸಾಯಿಅಮೃತಧಾರಾ.ಕಾಂ 


ಸಾಯಿ ಮಹಾಭಕ್ತರಾದ ಶ್ರೀ.ಲಕ್ಷ್ಮಣ ಕಾಚೇಶ್ವರ ಜಕಾದಿಯವರನ್ನು ಸಾಯಿಬಾಬಾರವರು "ನಾನು ಮಾಮಾ" ಎಂದು ಸಂಬೋಧಿಸುತ್ತಿದ್ದರು. ಆದ ಕಾರಣ ಶಿರಡಿಯ ಗ್ರಾಮಸ್ಥರೆಲ್ಲರೂ ಇವರನ್ನು "ನಾನು ಪೂಜಾರಿ" ಎಂದು ಕರೆಯುತ್ತಿದ್ದರು. ಇವರು ಮೊದಲ ಬಾರಿಗೆ ಶಿರಡಿಗೆ 1914 ರಲ್ಲಿ ಭೇಟಿ ನೀಡಿದರು. ಇವರು  ಬಾಪು ಸಾಹೇಬ್ ಜೋಗ ಅವರಿಗೆ ಸಹಾಯಕನಾಗಿ ಸಾಯಿಬಾಬಾರವರ ಆರತಿಯನ್ನು ಮಾಡಲು ಪ್ರಾರಂಭಿಸಿದರು. 

 ಇವರು ಸಂಗಮನೇರ ಗ್ರಾಮದಲ್ಲಿ ವಾಸಿಸುತ್ತಿದ್ದಾಗ ಇವರು ಒಂದು ವೈವಿಧ್ಯಮಯವಾದ ಕನಸನ್ನು ಕಂಡರು. ಆ ಕನಸಿನಲ್ಲಿ ಸಾಯಿಬಾಬಾರವರು ಇವರಿಗೆ ದರ್ಶನ ನೀಡಿ "ಮಗು, ನೀನು ನಿದ್ದೆ ಮಾಡುತ್ತಿದ್ದೀಯಾ? ಶಿರಡಿಗೆ ಬಾ. ಅಲ್ಲಿ ನೀನು ಬಹಳ ತಮಾಷೆಯ ವಿಷಯಗಳನ್ನು ನೋಡಬಹುದು" ಎಂದರು. ಅದೇ ಸಮಯಕ್ಕೆ ಸರಿಯಾಗಿ ಇವರ ತಾಯಿಯ ಸಂಬಂಧಿಯಾದ ಶ್ರೀ.ರತ್ನಾ ಪರ್ಕೆ ಸಂಗಮನೇರದಲ್ಲಿದ್ದ ಇವರ ಮನೆಗೆ ಬಂದರು. ಅವರು ಜಕಾದಿಯವರನ್ನು ತಮಗೆ ಸಹಾಯಕರಾಗಿ ಶಿರಡಿಗೆ ಬರುವಂತೆ ಕೇಳಿಕೊಂಡರು. ನಾನು ಮಾಮಾ ಸಂತೋಷದಿಂದ ಅವರ ಜೊತೆ ಹೊರಟು ಸ್ವಲ್ಪ ದಿನಗಳ ಕಾಲ ಶಿರಡಿಯಲ್ಲಿನ ಅವರ ಮನೆಯಲ್ಲಿ ಉಳಿದುಕೊಂಡರು. 

ನಾನು ಮಾಮಾ ಶಿರಡಿಗೆ ಭೇಟಿ ನೀಡುತ್ತಿದ್ದ ಯಾತ್ರಿಕರಿಗೆ ಶಿರಡಿಯ ಸುತ್ತಮುತ್ತಲಿನ ಯಾತ್ರಾ ಸ್ಥಳಗಳನ್ನು ಮಾರ್ಗದರ್ಶಿಯಾಗಿ ತೋರಿಸಿ ಅದರಿಂದ ಬಂದ ಹಣದಿಂದ ಜೀವನ ಮಾಡುತ್ತಿದ್ದರು. ಆದರೆ ಬಾಪು ಸಾಹೇಬ್ ಜೋಗ ಅವರಿಗೆ ಸಹಾಯಕನಾಗಿ ಸಾಯಿಬಾಬಾರವರ ಪೂಜೆ ಮತ್ತು ಆರತಿಯನ್ನು ಮಾಡುವ ಕೆಲಸ ಇವರಿಗೆ ಹೆಚ್ಚಿನ ಖುಷಿಯನ್ನು ನೀಡುತ್ತಿತ್ತು. ಹೀಗೆ ಎರಡು ವರ್ಷಗಳ ಕಾಲ ಸಾಯಿಬಾಬಾರವರ ಪೂಜೆ ಮತ್ತು ಆರತಿಯನ್ನು ತನ್ನ ಸ್ವ ಇಚ್ಚೆಯಿಂದ ಮಾಡಿದ ಮೇಲೆ ಶಿರಡಿ ಸಾಯಿಬಾಬಾ ಸಂಸ್ಥಾನವು ಇವರನ್ನು ಪೂರ್ಣ ಪ್ರಮಾಣದಲ್ಲಿ ಪೂಜಾರಿಯನ್ನಾಗಿ ಖಾಯಂಗೊಳಿಸಿತು.  

ಇವರ ವಂಶಸ್ಥರು ಶಿರಡಿಯ ನಗರ ಪಾಲಿಕೆಯ ಹಿಂಭಾಗದಲ್ಲಿರುವ ಹೆಗ್ದೆವಾರ ನಗರದಲ್ಲಿ ಈಗಲೂ ವಾಸಿಸುತ್ತಿದ್ದಾರೆ. ಇವರ ಹೆಂಡತಿಯ ಸಹೋದರಿಯನ್ನು ರತ್ನ ಪರ್ಕೆಯ ಕುಟುಂಬಕ್ಕೆ ವಿವಾಹ ಮಾಡಿಕೊಟ್ಟಿದ್ದರಿಂದ ಇವರಿಗೆ ಶಿರಡಿಯಲ್ಲಿ ಉಳಿದುಕೊಳ್ಳಲು ಮನೆಯಿತ್ತು. ಕೆಲವು ದಿನಗಳ ನಂತರ ಇವರು ಸಮಾಧಿ ಮಂದಿರದ ಪಕ್ಕದ ರಸ್ತೆಯಲ್ಲಿದ್ದ ಕಟ್ಟಡದಲ್ಲಿ ರೂಮೊಂದನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸಲು ಪ್ರಾರಂಭಿಸಿದರು. ಇವರ ಮಗ ದಿಗಂಬರ ಇವರ ನಂತರ ಸಾಯಿಬಾಬಾ ಸಂಸ್ಥಾನದ ಪೂಜಾರಿಯಾಗಿ ಸಮಾಧಿ ಮಂದಿರದಲ್ಲಿ ಆರತಿಯನ್ನು ಮಾಡುತ್ತಿದ್ದರು. ಕಾಲಾನಂತರದಲ್ಲಿ ಇವರ ವಂಶಸ್ಥರು ಈಗ ವಾಸಿಸುತ್ತಿರುವ ಆ ಮನೆಯನ್ನು ದಿಗಂಬರ ಅವರು ಖರೀದಿಸಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment