ಸಾಯಿ ಮಹಾಭಕ್ತ - ಕೇಶವ ರಾಮಚಂದ್ರ ಪ್ರಧಾನ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಕೇಶವ ರಾವ್ ಪ್ರಧಾನ್ ರವರು ಭಿವಪುರಿ ಗ್ರಾಮದವರು. ಈ ಗ್ರಾಮದಲ್ಲಿ ಇವರು ಒಂದು ಮನೆ ಮತ್ತು ಸ್ವಲ್ಪ ಜಮೀನನ್ನು ಹೊಂದಿದ್ದರು. ಅಲ್ಲದೆ, ತಮ್ಮ ದಿನ ನಿತ್ಯದ ಜೀವನಕ್ಕಾಗಿ ಇವರು ಒಂದು ಹಣಕಾಸು ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರ ಮನೆಯು ಇವರ ಜಮೀನಿನ ಪಕ್ಕದಲ್ಲೇ ಇದ್ದು ಗ್ರಾಮದ ಹೊರಗಡೆ ನಿರ್ಜನ ಪ್ರದೇಶದಲ್ಲಿ ಇತ್ತು. ಇವರಿದ್ದ ಜಾಗವು ಬಹಳ ಪ್ರಶಾಂತವಾಗಿದ್ದು ಮನೆಯ ಸುತ್ತಲೂ ಸುಂದರ ಹೂವುಗಳಿಂದ ಕೂಡಿದ ತೋಟವನ್ನು ಕಾಣಬಹುದಾಗಿತ್ತು. ಇವರಿದ್ದ ಮನೆಯ ಪಕ್ಕದಲ್ಲಿ ಒಂದು ಸಾಯಿಬಾಬಾ ಮಂದಿರವನ್ನು ಬಹಳ ವರ್ಷಗಳಾದ ಮೇಲೆ ಕಟ್ಟಲಾಗಿದೆ. ಅಲ್ಲದೆ, ತುಳಸಿ ಬೃಂದಾವನ, ಒಂದು ಬಾವಿ ಮತ್ತು ಅನೇಕ ಹಳೆಯದಾದ ಮರಗಳನ್ನು ಕೂಡ ನಾವು ನೋಡಬಹುದು. ಮನೆಯ ಪಕ್ಕದಲ್ಲಿದ್ದ ಹೂತೋಟದಲ್ಲಿ ಒಂದು ಹಳೆಯದಾದ ಆಲದ ಮರ, ಒಂದು ಅರಳಿ ಮರ, ಎರಡು ಬೇವಿನ ಮರಗಳು ಮತ್ತು ಒಂದು ಔದುಂಬರ ವೃಕ್ಷವನ್ನು ಕಾಣಬಹುದಾಗಿತ್ತು.
ಪ್ರಧಾನ್ ರವರು ಸಾಯಿಬಾಬಾರವರನ್ನು ಭೇಟಿಯಾಗುವುದಕ್ಕೆ ಮೊದಲು ಅವರಿಗೆ ಸಾಧು ಸಂತರೆಂದರೆ ಬಹಳ ಅಗೌರವ ಇತ್ತು. ಒಮ್ಮೆ ಇವರ ಸ್ನೇಹಿತರು ಶಿರಡಿಗೆ ತಮ್ಮ ಮನೆಯವರೊಂದಿಗೆ ಹೋಗುತ್ತಿದ್ದರು. ಅವರು ಪ್ರಧಾನ್ ರವರನ್ನು ತಮ್ಮೊಡನೆ ಬರುವಂತೆ ಬಹಳ ಸಲ ಒತ್ತಾಯ ಮಾಡಿದರು. ಮೊದಲು ಪ್ರಧಾನ್ ಶಿರಡಿಗೆ ಹೋಗಲು ಒಪ್ಪಲಿಲ್ಲ. ಆದರೆ, ಬಹಳ ಸಲ ಒತ್ತಾಯ ಮಾಡಿದ ಮೇಲೆ ಪ್ರಧಾನ್ ಒಂದು ಶರತ್ತಿನ ಮೇಲೆ ಶಿರಡಿಗೆ ಹೋಗಲು ಒಪ್ಪಿದರು. ಅದೇನೆಂದರೆ, ತಾನು ಸಾಯಿಬಾಬಾರವರಿಗೆ ತಲೆ ಬಾಗುವುದಿಲ್ಲ ಮತ್ತು ಅವರ ಪಾದ ತೀರ್ಥವನ್ನು ತೆಗೆದುಕೊಳ್ಳುವುದಿಲ್ಲ ಎಂಬುದಾಗಿತ್ತು. ಪ್ರಧಾನ್ ರವರ ಸ್ನೇಹಿತರು ಅದಕ್ಕೆ ಒಪ್ಪಿದರು. ಅವರು ಮತ್ತು ಅವರ ಸ್ನೇಹಿತರ ಮನೆಯವರೆಲ್ಲ ಶಿರಡಿಗೆ ಹೋದರು.ಶಿರಡಿ ತಲುಪಿ ಸಾಯಿಬಾಬಾರವರ ದರ್ಶನ ಪಡೆಯಲು ದ್ವಾರಕಾಮಾಯಿಗೆ ತೆರಳಿದರು. ದ್ವಾರಕಾಮಾಯಿಯಲ್ಲಿ ಬಹಳ ಜನ ಭಕ್ತರು ನೆರೆದಿದ್ದು ಸಭಾಮಂಟಪವು ತುಂಬಿ ಹೋಗಿತ್ತು. ಆದುದರಿಂದ ಪ್ರಧಾನ್ ರವರು ಒಂದು ಕಡೆ ತುದಿಯಲ್ಲಿ ತಮ್ಮ ಪಾಡಿಗೆ ತಾವು ಎಲ್ಲವನ್ನು ನೋಡುತ್ತಾ ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಜನಜಂಗುಳಿ ಕಡಿಮೆಯಾಗಿ ದ್ವಾರಕಾಮಾಯಿ ಖಾಲಿಯಾಯಿತು. ಪ್ರಧಾನ್ ರವರ ಸ್ನೇಹಿತರು ಬಾಬಾರವರ ಬಳಿಗೆ ಹೋಗಿ ಅವರಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಿದ್ದರು. ಆಗ ಸಾಯಿಬಾಬಾರವರು ಪ್ರಧಾನ್ ರವರ ಕಡೆ ತಮ್ಮ ಕೈಯನ್ನು ತೋರಿಸುತ್ತಾ "ಆ ಬೇಜವಾಬ್ದಾರಿತನದ ಮತ್ತು ತೆಗಳುವ ವ್ಯಕ್ತಿಯನ್ನು ಇಲ್ಲಿಗೆ ಕರೆದು ತಾ" ಎಂದು ಆಜ್ಞಾಪಿಸಿದರು. ಪ್ರಧಾನ್ ರವರ ಸ್ನೇಹಿತರು ಅವರನ್ನು ಸಾಯಿಬಾಬಾರವರ ಬಳಿಗೆ ಕರೆದುಕೊಂಡು ಬಂದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬಯ್ಗುಳಗಳ ಮಳೆಯನ್ನು ಸುರಿಸುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಶಾಂತರಾದ ಸಾಯಿಬಾಬಾರವರು ಸಾಧು ಸಂತರಿಗೆ ನಿಂದನೆ ಮಾಡುವದು ತಪ್ಪು ಎಂಬ ಮನವರಿಕೆಯನ್ನು ಪ್ರಧಾನ್ ರವರಿಗೆ ಮಾಡಿಕೊಟ್ಟರು ಮತ್ತು ತಮ್ಮ ಬುದ್ಧಿಯನ್ನು ತಿದ್ದಿಕೊಳ್ಳಲು ಸಲಹೆಯನ್ನು ನೀಡಿದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬುದ್ಧಿವಾದ ಹೇಳುತ್ತಿದ್ದಾಗ ಪ್ರಧಾನ್ ರವರಿಗೆ ಸಾಯಿಬಾಬಾರವರ ಅಂತರ್ಯಾಮಿತ್ವ ಮತ್ತು ತಮ್ಮ ಮನದಲ್ಲಿ ಬಾಬಾರವರ ಬಗ್ಗೆ ಹಾಗೂ ಇತರ ಸಾಧು ಸಂತರ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯಗಳ ಬಗ್ಗೆ ಇದ್ದ ಜ್ಞಾನದ ಅರಿವಾಯಿತು. ಆ ಕೊಡಲೇ ಪ್ರಧಾನ್ ರವರಿಗೆ ಸಾಧು ಸಂತರ ಬಗ್ಗೆ ಇದ್ದ ಅಗೌರವ ಮಾಯವಾಯಿತು. ಆ ಕ್ಷಣದಿಂದಲೇ ಪ್ರಧಾನ್ ರವರು ಸಾಯಿಬಾಬಾರವರ ಅನನ್ಯ ಭಕ್ತರಾದರು.
ದಿನ ಕಳೆದಂತೆ, ಸಾಯಿಬಾಬಾರವರ ದಯೆಯಿಂದ ಪ್ರಧಾನ್ ರವರ ಹಣಕಾಸು ಪರಿಸ್ಥಿತಿ ಸುಧಾರಿಸಿ ಅವರು ಮನಶ್ಯಾಂತಿ ಹೊಂದಿದರು. ಅಂದಿನಿಂದ ಪ್ರಧಾನ್ ರವರು ಆಗಾಗ್ಗೆ ಶಿರಡಿಗೆ ಹೋಗಿ ಬರಲು ಪ್ರಾರಂಭಿಸಿದರು ಮತ್ತು ಪ್ರತಿ ಸಲ ಶಿರಡಿಗೆ ಹೋದಾಗಲೂ ಸಾಯಿಬಾಬಾರವರನ್ನು ಭಿವಪುರಿಗೆ ಬರಲು ಒತ್ತಾಯ ಮಾಡುತ್ತಿದ್ದರು. ಕಟ್ಟ ಕಡೆಗೆ ಒಮ್ಮೆ ಸಾಯಿಬಾಬಾರವರು ತಮ್ಮ ಒಪ್ಪಿಗೆ ಸೂಚಿಸಿ "ನಾನು ಭಿವಪುರಿಗೆ ಖಂಡಿತವಾಗಿ ಬರುವೆ" ಎಂದು ವಚನ ನೀಡಿದರು. ಆದರೆ, ಪ್ರಧಾನ್ ರವರು ಅಷ್ಟಕ್ಕೇ ಸುಮ್ಮನಾಗದೆ ಪದೇ ಪದೇ ಸಾಯಿಬಾಬಾರವರನ್ನು "ನೀವು ಯಾವಾಗ ಭಿವಪುರಿಗೆ ಬರುವಿರಿ" ಎಂದು ಕೇಳಲು ಪ್ರಾರಂಭಿಸಿದರು. ಕಡೆಗೆ ಪ್ರಧಾನ್ ರವರು ಒಮ್ಮೆ ಶಿರಡಿಗೆ ಭೇಟಿ ನೀಡಿದಾಗ ಅವರಿಗೆ ತಮ್ಮ ಒಂದು ಚಿತ್ರಪಟವನ್ನು ನೀಡಿ "ಕೇಳು, ಈ ಚಿತ್ರಪಟವನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯಲ್ಲಿ ಇದು. ಈ ಚಿತ್ರಪಟವೇ ನಾನೆಂದು ತಿಳಿದು ಪೂಜಿಸು.ಇನ್ನು ಎಂದಿಗೂ ನೀನು ಶಿರಡಿಗೆ ಕಾಲಿಡಬೇಡ" ಎಂದು ಹೇಳಿದರು. ಪ್ರಧಾನ್ ರವರು ಚಿತ್ರಪಟವನ್ನು ತೆಗೆದುಕೊಂಡು ಹೋದರು. ಆದರೆ, ಅವರು ಸಾಯಿಬಾಬಾ ಸುಮ್ಮನೆ ಹಾಸ್ಯ ಮಾಡುತ್ತಿದ್ದಾರೆ ಎಂದು ಭಾವಿಸಿದರು. ಪುನಃ ಮತ್ತೊಮ್ಮೆ ಶಿರಡಿಗೆ ಬಂದರು. ಪ್ರಧಾನ್ ರವರು ದ್ವಾರಕಾಮಾಯಿ ಪ್ರವೇಶ ಮಾಡುತ್ತಿದ್ದಂತೆ ಸಾಯಿಬಾಬಾರವರು "ನಾನು ನಿನ್ನ ಮನೆಯಲ್ಲೇ ಇದ್ದೇನೆ. ಶಿರಡಿಗೆ ಮತ್ತೆ ಕಾಲಿಡಬೇಡ. ಭಿವಪುರಿಗೆ ವಾಪಸ್ ಹೋಗು. ಅಲ್ಲಿ ಒಂದು ಮಂದಿರವನ್ನು ನಿರ್ಮಾಣ ಮಾಡು. ಆ ಮಂದಿರದಲ್ಲಿ ನಾನು ನಿನಗೆ ನೀಡಿದ ಚಿತ್ರಪಟವನ್ನು ಪ್ರತಿಷ್ಠಾಪಿಸು. ಆ ಸ್ಥಳದಲ್ಲೇ ಎಲ್ಲ ಉತ್ಸವಗಳನ್ನು ಆಚರಿಸು. ಪುನಃ ಶಿರಡಿಗೆ ಬರಬೇಡ. ಏಕೆಂದರೆ ಭಿವಪುರಿಯೇ ನಿನ್ನ ಶಿರಡಿಯಾಗಿರುತ್ತದೆ. ಈ ಕೊಡಲೇ ಇಲ್ಲಿಂದ ಹೊರಟುಹೋಗು. ನಿನ್ನ ಮನೆಯನ್ನು ಸೇರಿಕೋ" ಎಂದರು. ಹೀಗೆ, ಸಾಯಿಬಾಬಾರವರ ಆಜ್ಞೆಯ ಮೇರೆಗೆ ಪ್ರಧಾನ್ ರವರು ಶಿರಡಿಗೆ ಹೋಗುವುದನ್ನು ನಿಲ್ಲಿಸಿದರು.
ಪ್ರಧಾನ್ ರವರು ತಮ್ಮ ಮನೆಯ ಪಕ್ಕದಲ್ಲಿ ಒಂದು ಸಣ್ಣ ಮಂದಿರವನ್ನು ನಿರ್ಮಿಸಿದರು. ಒಂದು ದಿನ ಮಧ್ಯರಾತ್ರಿಯ ಸಮಯದಲ್ಲಿ ದೇವಾಲಯದ ಬಾಗಿಲು ತೆರೆದ ಶಬ್ದ ಕೇಳಿಸಿತು. ಅವರು ಮತ್ತು ಅವರ ಮನೆಯವರೆಲ್ಲಾ ಏನಾಯಿತೆಂದು ನೋಡಲು ಹೋದರು. ಅಲ್ಲಿ ನಡೆದ ದೃಶ್ಯ ಕಂಡು ಮನೆಯವರಿಗೆಲ್ಲ ಆಶ್ಚರ್ಯವಾಯಿತು. ಸಾಯಿಬಾಬಾರವರು ದೇವಾಲಯದ ಒಳಗಡೆ ಹೋಗಿ ತಮ್ಮ ಹಿಂದೆಯೇ ಬಾಗಿಲನ್ನು ಹಾಕಿಕೊಂಡರು. ಮತ್ತೆ 3 ಘಂಟೆಗೆ ದೇವಾಲಯದ ಬಾಗಿಲು ತೆರೆಯಿತು. ಬಾಬಾರವರು ತಾವು ಬಂದಂತೆಯೇ ಹಿಂತಿರುಗಿ ಹೋದರು. ಪ್ರಧಾನ್ ಓಡಿಹೋಗಿ ನಡೆದ ವಿಷಯವನ್ನು ಗ್ರಾಮದ ಅನೇಕ ಸ್ನೇಹಿತರಿಗೆ ಮತ್ತು ತಮ್ಮ ಬಂಧುಗಳಿಗೆ ತಿಳಿಸಿದರು. ಅವರುಗಳೂ ಕೂಡ ಬಂದು ಈ ವಿಸ್ಮಯಕಾರಿ ದೃಶ್ಯವನ್ನು ನೋಡಿ ಅಚ್ಚರಿಗೊಂಡರು.
ಒಮ್ಮೆ ಪ್ರಧಾನ್ ತಮ್ಮ ಜೀವನದಲ್ಲಿ ಒಂದು ದೊಡ್ಡ ತೊಂದರೆಗೆ ಸಿಕ್ಕಿಹಾಕಿಕೊಂಡರು. ಏನು ಮಾಡಿದರೂ ಕೂಡ ಆ ತೊಂದರೆ ನಿವಾರಣೆ ಆಗುವ ಮಾರ್ಗ ಕಾಣಲಿಲ್ಲ. ಆ ಸಮಯದಲ್ಲಿ ಸಾಯಿಬಾಬಾರವರು ಪ್ರಧಾನ್ ರವರಿಗೆ ದರ್ಶನ ನೀಡಿ ಅವರ ಬೆನ್ನು ತಟ್ಟಿ "ಹೆದರಬೇಡ, ನಾನು ನಿನ್ನನ್ನು ರಕ್ಷಿಸಲು ಇಲ್ಲೇ ಇದ್ದೇನೆ" ಎಂದು ಅಭಯ ನೀಡಿದರು. ಪ್ರಧಾನ್ ರವರು ಬಾಬಾ ತಮಗೆ ಸಾಕ್ಷಾತ್ಕಾರ ನೀಡಿದ ಸ್ಥಳವನ್ನು ಪವಿತ್ರವೆಂದು ತೀರ್ಮಾನಿಸಿ ಆ ಸ್ಥಳದಲ್ಲಿ ಯಾರು ಓಡಾಡಲು ಬಿಡುತ್ತಿರಲಿಲ್ಲ. ಆದುದರಿಂದ ಆ ಸ್ಥಳದ ಪವಿತ್ರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆ ಸ್ಥಳದಲ್ಲಿ ಒಂದು ಪವಿತ್ರ ತುಳಸಿ ಬೃಂದಾವನವನ್ನು ಪ್ರತಿಷ್ಟಾಪಿಸಿದರು.
ಶ್ರೀ ಸಾಯಿಬಾಬಾರವರು 1918 ರಲ್ಲಿ ಸಮಾಧಿ ಹೊಂದಿದರು. ಆದರೆ, ಪ್ರಧಾನ್ ರವರು ತಮ್ಮ ಸಾಯಿ ಪೂಜೆಯನ್ನು ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಮುಂದುವರಿಸಿದರು. 1924 ರಲ್ಲಿ ಪ್ರಧಾನ್ ರವರ ಮಗಳನ್ನು ಮುಂಬೈ ದಾದರ್ ನ ಶ್ರೀ.ಎ.ವಿ.ಗುಪ್ತೆ ಎಂಬುವರಿಗೆ ಕೊಟ್ಟು ವಿವಾಹ ಮಾಡಲಾಯಿತು. ಗುಪ್ತೆಯವರು ಕೂಡ ಬಹಳ ಒಳ್ಳೆಯ ಮನಸ್ಸಿನವರಾದುದರಿಂದ ಅವರು ಕೂಡ ಭಿವಪುರಿಯ ದೇವಾಲಯದ ಎಲ್ಲ ಸಮಾರಂಭಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ಅನೇಕ ಸ್ನೇಹಿತರಿಗೂ ಕೂಡ ಭಿವಪುರಿಗೆ ಬಂದು ಬಾಬಾರವರ ದರ್ಶನ ಮಾಡಿಕೊಂಡು ಹೋಗಲು ಪ್ರೇರೇಪಿಸುತ್ತಿದ್ದರು. ಆ ಕಾರಣದಿಂದ ಭಿವಪುರಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು.
ಶ್ರೀ.ಗುಪ್ತೆ ಪ್ರಥಮ ಬಾರಿಗೆ 1936 ರಲ್ಲಿ ಶಿರಡಿಗೆ ಭೇಟಿ ನೀಡಿದರು. ಅಲ್ಲಿನ ಸಮಾಧಿ ಮಂದಿರವನ್ನು ನೋಡಿ ಭಿವಪುರಿಯಲ್ಲಿ ಕೂಡ ಅದೇ ರೀತಿಯ ಸಮಾಧಿ ಮಂದಿರ ನಿರ್ಮಾಣವಾಗಬೇಕೆಂದು ಸಾಯಿಬಾಬಾರವರನ್ನು ಮನಸಾರೆ ಪ್ರಾರ್ಥಿಸಿದರು. ಸಾಯಿಬಾಬಾರವರು ತಮ್ಮ ಭಕ್ತರ ಕೋರಿಕೆಗಳನ್ನು ಕೂಡಲೇ ನೆರವೇರಿಸುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಂತೆ, ಸಾಯಿಬಾಬಾರವರು ಗುಪ್ತೆಯವರ ಈ ಕೋರಿಕೆಯನ್ನು ಕೂಡಲೇ ನೆರವೇರಿಸಿದರು. ಆ ಕ್ಷಣದಿಂದಲೇ ಭಿವಪುರಿಯ ಸಾಯಿನಾಥ ಮಂದಿರವು ಹೆಚ್ಚು ಹೆಚ್ಚು ಪ್ರಸಿದ್ದಿಯನ್ನು ಪಡೆಯಲು ಪ್ರಾರಂಭಿಸಿತು.
ಶ್ರೀ.ಪ್ರಧಾನ್ ರವರು 1939 ರಲ್ಲಿ ಸ್ವರ್ಗಸ್ಥರಾದರು. ಆಗಿನಿಂದ ದೇವಾಲಯದ ಉಸ್ತುವಾರಿಯ ಹೊಣೆ ಪ್ರಧಾನ್ ರವರ ಮಗ ಮತ್ತು ಅಳಿಯನ ಮೇಲೆ ಬಿದ್ದಿತು. ದೇವಾಲಯದ ಮೇಲ್ವಿಚಾರಣೆಗಾಗಿ ಅದೇ ವರ್ಷ "ಶ್ರೀ ಸದ್ಗುರು ಸಾಯಿನಾಥ ಸೇವಾ ಸಂಸ್ಥಾ" ಎಂಬ ಟ್ರಸ್ಟ್ ನ್ನು ಪ್ರಾರಂಭಿಸಿ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳಲು 7 ಜನ ಟ್ರಸ್ಟಿಗಳನ್ನು ನೇಮಕ ಮಾಡಲಾಯಿತು.
ದಿನೇ ದಿನೇ ಹೆಚ್ಚು ಹೆಚ್ಚು ಸಾಯಿ ಭಕ್ತರು ದೇವಾಲಯಕ್ಕೆ ದರ್ಶನ ಪಡೆಯಲು ಬರಲಾರಂಭಿಸಿದರು. ಇದರಿಂದ ದೇವಾಲಯದಲ್ಲಿ ಸ್ಥಳಾವಕಾಶವಿಲ್ಲದೆ ಹೋಯಿತು. ಆದುದರಿಂದ ದೇವಾಲಯವನ್ನು ಪುನರ್ ನಿರ್ಮಾಣ ಮತ್ತು ಅಗಲೀಕರಣ ಮಾಡುವ ಕಾರ್ಯ ಪ್ರಾರಂಭಿಸಲಾಯಿತು. ದೇವಾಲಯದ ಗೋಡೆ ಕಟ್ಟುವ ಕಾರ್ಯ ಪೂರ್ಣಗೊಂಡಿತಾದರೂ ಹಣದ ಅಭಾವದಿಂದ ಮೇಲ್ಚಾವಣಿಯ ಕೆಲಸ ನಿಂತು ಹೋಯಿತು. ಆಗ ಶ್ರೀ.ನಾರಾಯಣ ಪುರೋಹಿತ್ ಎನ್ನುವ ಸಾಯಿಭಕ್ತರು ಆ ಸಂಕಷ್ಟದಿಂದ ಹೊರಗೆ ಬರಲು ಸಾಯಿ ಸಚ್ಚರಿತೆಯ ಪಾರಾಯಣವನ್ನು ಪ್ರಾರಂಭಿಸಿದರು. ಪಾರಾಯಣ ಆರಂಭಿಸಿದ ನಾಲ್ಕನೇ ದಿನ ಸಾಯಿಬಾಬಾರವರು ಶ್ರೀ.ನಾರಾಯಣ ಪುರೋಹಿತ್ ರವರ ಕನಸಿನಲ್ಲಿ ದರ್ಶನ ನೀಡಿ "ನನ್ನ ಧುನಿ ಎಲ್ಲಿ? ಧುನಿಯು ಇಲ್ಲದಿದ್ದರೆ ಈ ಸ್ಥಳವು ಹೇಗೆ ಶಿರಡಿಯಾಗುತ್ತದೆ? ದೇವಾಲಯದ ಕೆಲಸ ಹೇಗೆ ಪೂರ್ಣವಾಗುತ್ತದೆ?" ಎಂದು ಕೇಳಿದರು. ಈ ಕನಸು ಪ್ರತಿದಿನ ಪುನರಾವರ್ತನೆಯಾಗುತ್ತಿದ್ದರಿಂದ ಶ್ರೀ.ನಾರಾಯಣ ಪುರೋಹಿತ್ ತಮ್ಮ ಕನಸನ್ನು ಶ್ರೀ.ಗುಪ್ತೆಯವರಿಗೆ ತಿಳಿಸಿದರು. ಗುಪ್ತೆಯವರು ಈ ವಿಷಯವನ್ನು ಇತರ ಟ್ರಸ್ಟಿಗಳೊಂದಿಗೆ ಸಮಾಲೋಚಿಸಿ ದೇವಾಲಯದಲ್ಲಿ ಧುನಿಯನ್ನು ಪ್ರಾರಂಭಿಸಲು ತೀರ್ಮಾನಿಸಿದರು. ಧುನಿಗೆ ಒಂದು ಸ್ಥಳವನ್ನು ತೀರ್ಮಾನಿಸಿ ದೇವಾಲಯದ ಕಾರ್ಯ ಮುಂದುವರಿಸಲಾಯಿತು. ಧುನಿಯನ್ನು ಸಾಯಿ ಸಚ್ಚರಿತೆಯ ಲೇಖಕರಾದ ಶ್ರೀ.ಹೇಮಾಡಪಂತರ ಮೊಮ್ಮಗನಾದ ಶ್ರೀ.ಎ.ಆರ್.ವಳವಾಲ್ಕರ್ ರವರು 7ನೇ ಏಪ್ರಿಲ್ 1949 ರ ಪವಿತ್ರ ಶ್ರೀರಾಮನವಮಿಯ ದಿನ ಬೆಳಿಗ್ಗೆ 10 ಘಂಟೆಗೆ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಸಾಯಿ ಭಕ್ತರಾದ ಶ್ರೀ.ಕುಮರೇಶನ್ ಸಮರ್ಥ ಎಂಬುವರು ಮೇಲ್ಛಾವಣಿಯ ಮತ್ತು ಧುನಿಯ ಸುತ್ತಾ ನಿರ್ಮಿಸಬೇಕಿದ್ದ ಕಟ್ಟಡಗಳ ಎಲ್ಲ ಖರ್ಚನ್ನು ವಹಿಸಿಕೊಂಡರು. ಶಿರಡಿಯ ದ್ವಾರಕಾಮಾಯಿಯಲ್ಲಿನ ಧುನಿಯಂತೆ ಈ ಧುನಿಯು ಕೂಡ ನಿರಂತರವಾಗಿ ಪ್ರಜ್ವಲಿಸುತ್ತಿದೆ. ವರ್ಷ ಪೂರ್ತಿ ಅನೇಕ ವಿಶೇಷ ಉತ್ಸವದ ದಿನಗಳನ್ನು ಆಚರಿಸಲಾಗುತ್ತಿದೆ. ಶ್ರೀರಾಮನವಮಿ ಮತ್ತು ಸಾಯಿಬಾಬಾರವರ ಸಮಾಧಿ ದಿವಸವನ್ನು ಮತ್ತಷ್ಟು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶ್ರೀ ಸಾಯಿ ಲೀಲಾ ಮಾಸ ಪತ್ರಿಕೆಯ ಮಾಜಿ ಸಂಪಾದಕರಾದ ದಿವಂಗತ ಪ್ರೊಫೆಸ್ಸರ್ ಶ್ರೀ.ಡಿ.ಡಿ.ಪರ್ಚೂರೆಯವರು ಈ ಎರಡೂ ಉತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಾಯಿಬಾಬಾರವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದ ಕೀರ್ತನೆಯನ್ನು ಮಾಡುತ್ತಿದ್ದರು.
ಅನೇಕ ಪ್ರಸಿದ್ದ ಸಾಯಿಭಕ್ತರು ಈ ದೇವಾಲಯವನ್ನು ಸಂದರ್ಶಿಸಿ ಧನ ಸಹಾಯವನ್ನು ಮಾಡುತ್ತಿದ್ದಾರೆ. ದೇವಾಲಯದ ಟ್ರಸ್ಟಿಗಳು ಹಣ ಸಹಾಯವನ್ನು ಮಾಡಿದ ಈ ಎಲ್ಲ ದಾನಿಗಳಿಗೆ ಅತ್ಯಂತ ಋಣಿಯಾಗಿದ್ದಾರೆ. ಈ ಮೇಲೆ ತಿಳಿಸಿದ ಸಾಯಿಬಾಬಾರವರ ಮಾಡಿದ ವಿಶೇಷ ಲೀಲೆಯಿಂದ ಈ ಸ್ಥಳವು ಪ್ರತಿ ವರ್ಷ ಹೆಚ್ಚು ಹೆಚ್ಚು ಸಾಯಿ ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ ಮತ್ತು ಒಮ್ಮೆ ಬಂದ ಸಾಯಿ ಭಕ್ತ ಮತ್ತೆ ಮತ್ತೆ ಈ ಸ್ಥಳಕ್ಕೆ ಬರುವ ಹಾಗೆ ಮಾಡುತ್ತಿದೆ.
ಭಿವಪುರಿಯ ಸಾಯಿಬಾಬಾ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ಟ್ರಸ್ಟ್ ನಿರ್ಮಾಣಗೊಂಡಿದೆ. ಈ ಟ್ರಸ್ಟ್ ಇತ್ತೀಚಿಗೆ ಹಳೆಯ ಮಂದಿರವನ್ನು ಕೆಡವಿ ಆ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿತು. ಈ ಟ್ರಸ್ಟ್ ನ ಮೇಲ್ವಿಚಾರಣೆಯನ್ನು ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರ ಮೊಮ್ಮಗ ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ಇವರು ಭಿವಪುರಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಮತ್ತು ಮುಖ್ಯ ಟ್ರಸ್ಟಿ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ತಾತನವರಿಂದ ಬಳುವಳಿಯಾಗಿ ಬಂದ ಭಿವಪುರಿ ದೇವಾಲಯದ ಪಕ್ಕದಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment