Wednesday, August 17, 2011

 ಸಾಯಿ ಮಹಾಭಕ್ತರು - ತುಕಾರಾಂ, ಕೊಂಡಾಜಿ ಮತ್ತು ಗಾಬಾಜಿ (ಸುತಾರ್) - ಕೃಪೆ: ಸಾಯಿಅಮೃತಧಾರಾ.ಕಾಂ  

ತುಕಾರಾಂ ಸುತಾರ್ ರವರ ಅಡ್ಡ ಹೆಸರು ಭಲೇರಾವ್. ಇವರ ಕುಲಕಸುಬು ಬಡಗಿ ಅಥವಾ ಸುತಾರ್ ಆಗಿತ್ತು. ಆದ್ದರಿಂದ ಸಾಯಿಬಾಬಾರವರು ಇವರನ್ನು "ಸುತಾರ್" ಎಂದು ಕರೆಯುತ್ತಿದ್ದರು. ಶಿರಡಿಯ ಗ್ರಾಮಸ್ಥರೂ ಕೂಡ "ಸುತಾರ್" ಎಂದೇ ಸಂಬೋಧಿಸುತ್ತಿದ್ದರು. 

ಇವರ ಮನೆಯು ವಿಠಲ ಮಂದಿರದ ಎದುರುಗಡೆ ಇರುತ್ತದೆ. ಪಿಲಾಜಿ ಗುರಾವ್ ಮನೆಯಿಂದ ಸೇವಾಧಾಮ್ ಗೆ ಹೋಗುವ ಸಣ್ಣ ರಸ್ತೆಯಲ್ಲಿ ಇವರ ಮನೆಯಿದ್ದು, ಮನೆಯ ಬಾಗಿಲ ಮೇಲೆ "ಓಂ" ಎಂದು ಬರೆಯಲಾಗಿದೆ. 



ತುಕಾರಾಂ ಗೆ ಕೊಂಡಾಜಿ ಮತ್ತು ಗಾಬಾಜಿ ಎಂಬ ಇಬ್ಬರು ಸಹೋದರರಿದ್ದರು. ಸಾಯಿಬಾಬಾರವರು ಈ 3 ಜನರನ್ನೂ ಬಹಳ ಪ್ರೀತಿಸುತ್ತಿದ್ದರು. ಆದರೆ, ತುಕಾರಾಂ ಇವರಿಗೆ ಹತ್ತಿರದವರಾಗಿದ್ದರು. ಈ 3 ಜನ ಸಹೋದರರೂ ದ್ವಾರಕಾಮಾಯಿಯನ್ನು ದುರಸ್ತಿ ಮಾಡಿದ ಸಮಯದಲ್ಲಿ ಸಂಪೂರ್ಣ ಮರದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಅಲ್ಲದೆ, ಮಸೀದಿ ದುರಸ್ತಿ ಕಾರ್ಯ ಮುಗಿದ ಮೇಲೆ ಕೂಡ ಹಲವು ವರ್ಷಗಳ ಕಾಲ ದ್ವಾರಕಾಮಾಯಿಯನ್ನು ಅವರುಗಳೇ ನೋಡಿಕೊಳ್ಳುತ್ತಿದ್ದರು. ಸಾಯಿಬಾಬಾರವರ ಮಹಾಸಮಾಧಿಯ ತನಕ ದ್ವಾರಕಾಮಾಯಿಯನ್ನು ತುಕಾರಾಂ ಅವರೇ ಗುಡಿಸುತ್ತಿದ್ದರು. ಸಾಯಿಬಾಬಾರವರು ಮುಖವನ್ನು ತೊಳೆದುಕೊಳ್ಳಲು ಅನುಕೂಲವಾಗುವಂತೆ ಬಿಸಿ ನೀರನ್ನು ಕಾಯಿಸಿಕೊಡುತ್ತಿದ್ದರು. ಈ ಕೆಲಸಗಳನ್ನು ತುಕಾರಾಂ ಅವರೇ ಪ್ರತಿದಿನ ಮಾಡುತ್ತಿದ್ದರು. ಬೇರೆಯವರು ಈ ಕೆಲಸಗಳನ್ನು ಮಾಡಲು ಸಾಯಿಬಾಬಾರವರು ಬಿಡುತ್ತಿರಲಿಲ್ಲ. 

ಕೊಂಡಾಜಿಯವರಿಗೆ ಮದುವೆಯಾದರೂ ಮಕ್ಕಳಿರಲಿಲ್ಲ. ಇವರ ಸಹೋದರ ಗಾಬಾಜಿಯವರಿಗೆ ಪಾರ್ವತಿಬಾಯಿ ಮತ್ತು ಸಾಯಿಬಾಯಿ ಎಂಬ ಇಬ್ಬರು ಹೆಂಡತಿಯರಿದ್ದರು. ಗಾಬಾಜಿಯವರು ಸಾಯಿಬಾಯಿಯಿಂದ ಗಂಗಾಧರ ಎಂಬ ಒಬ್ಬ ಮಗನನ್ನು ಪಡೆದಿದ್ದರು. ತುಕಾರಾಂ ಅವರಿಗೂ ಕೂಡ ಸುಂದರಾಬಾಯಿ ಮತ್ತು ಗೀತಾಬಾಯಿ ಎಂಬ ಇಬ್ಬರು ಹೆಂಡತಿಯರಿದ್ದರು. ತುಕಾರಾಂ ಅವರು ನಾಲ್ಕು ಗಂಡು ಮಕ್ಕಳನ್ನು ಹೊಂದಿದ್ದರು. ತುಕಾರಾಂ ರವರ ವಂಶಸ್ಥರು 2009ನೇ ಇಸವಿಯವರೆಗೂ ಈ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಶಿರಡಿಯ ಸಾಯಿನಗರದ ಹಿಂಭಾಗದಲ್ಲಿರುವ ಪ್ರದೇಶದಲ್ಲಿ ಸ್ವಂತ ಮನೆಯನ್ನು ಕಟ್ಟಿಕೊಂಡು ಅಲ್ಲಿ ವಾಸವಾಗಿರುತ್ತಾರೆ. 

ಈ ಧ್ವಜಗಳಿಗೆ ಬೇಕಾದ 30 ಅಡಿ ಉದ್ದನೆಯ ಕೋಲನ್ನು ಸುತಾರ್ ವಂಶದವರು ತಯಾರಿಸುತ್ತಾರೆ. ಇದರ ತಯಾರಿಕೆಗೆ ಬೇಕಾದ ಬಂಬುಗಳನ್ನು "ಮಾಧಿ" ಎನ್ನುವ ಸ್ಥಳದಿಂದ ಪ್ರತಿವರ್ಷ ತರುತ್ತಾರೆ. ರಾಮನವಮಿ ಪ್ರಾರಂಭಕ್ಕೆ ಒಂದು ತಿಂಗಳ  ಮುಂಚಿತವಾಗಿ ಈ ಬಂಬು ಕೋಲುಗಳನ್ನು ಇವರ ಮನೆಗೆ ತರುತ್ತಾರೆ. ನಂತರ ಕೋಲುಗಳನ್ನು ಚೆನ್ನಾಗಿ ಶುಚಿಗೊಳಿಸಿ ಮೆರುಗೆಣ್ಣೆಯನ್ನು ಬಳಿಯುತ್ತಾರೆ. ಮರಾಟಿಯಲ್ಲಿ ಇದಕ್ಕೆ "ಕಥಿ" ಎಂದು ಕರೆಯುತ್ತಾರೆ. ನಂತರ ಈ ಬಂಬು ಕೋಲುಗಳಿಗೆ ವಿಧ್ಯುಕ್ತವಾಗಿ ಪೂಜಿಸಲಾಗುತ್ತದೆ ಮತ್ತು ಈ ಬಂಬು ಕೋಲುಗಳನ್ನು ರಾಮನವಮಿ ಉತ್ಸವದ ಸಂದರ್ಭದಲ್ಲಿ ಧ್ವಜಗಳನ್ನು ಬದಲಾಯಿಸಲು ಬಳಸಲಾಗುತ್ತದೆ. ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವವನ್ನು ಸಾಯಿಬಾಬಾರವರು 1911 ರಲ್ಲಿ ಪ್ರಾರಂಭಿಸಿದರು. ರಾಮನವಮಿಯ ದಿನ ಉರುಸ್ ನಡೆಸಲು ತೀರ್ಮಾನ ಮಾಡಿ ಭೀಷ್ಮರವರು ಕಾಕಾ ಮಹಾಜನಿಯವರೊಡನೆ ಸಮಾಲೋಚಿಸಿದರು. ಈ ವಿಷಯವನ್ನು ಸಾಯಿಬಾಬಾರವರೊಡನೆ ಚರ್ಚೆ ಮಾಡಿ ಅವರ ಒಪ್ಪಿಗೆ ಪಡೆದು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ರಾಮನವಮಿಯ ದಿನ ಉರುಸ್ ಕಾರ್ಯಕ್ರಮ ತಪ್ಪದೆ ನಡೆಯುತ್ತಿದೆ. ಹಿಂದೂ ಮತ್ತು ಮುಸ್ಲಿಂ ಭಾಂದವರು ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಲಕ್ಷಾಂತರ ಮಂದಿ  ದೇಶ ವಿದೇಶಗಳಿಂದ ಶಿರಡಿಗೆ ಬಂದು ರಾಮನವಮಿ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸಾಯಿಬಾಬಾ ಸಂಸ್ಥಾನದವರು ಒಂದು ಧ್ವಜವನ್ನು ನೀಡುತ್ತಾರೆ. ಸುಂದರ ಕಸೂತಿ ಮಾಡಲ್ಪಟ್ಟ ಮತ್ತೊಂದು ಧ್ವಜವನ್ನು ದಾಮು ಅಣ್ಣಾ ವಂಶಸ್ಥರು ನೀಡುತ್ತಾರೆ. ನಿಮೋಣ್ಕರ್ ಕುಟುಂಬದವರು ಹಸಿರು ಧ್ವಜವನ್ನು ನೀಡುತ್ತಾರೆ. ಮಧ್ಯಾನ್ಹ 2:00 ಘಂಟೆಗೆ ಸರಿಯಾಗಿ ಸಂಸ್ಥಾನದವರು ತಮ್ಮ ಧ್ವಜವನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರದಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಹಸಿರು ಧ್ವಜ ಮತ್ತು ಕಸೂತಿ ಮಾಡಲ್ಪಟ್ಟ ಧ್ವಜಗಳನ್ನು ಒಂದು ಉದ್ದನೆಯ ಕೋಲಿನಲ್ಲಿ ಸಿಕ್ಕಿಸಿಕೊಂಡು ತುಕಾರಾಂ ಸುತಾರ್ ಮನೆಯಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಅಲ್ಲಿ 3 ಧ್ವಜಗಳಿಗೆ ಲಘು ಅಥವಾ ಛೋಟಾ ಆರತಿ ಬೆಳಗುತ್ತಾರೆ. ನಂತರ 3 ಧ್ವಜಗಳನ್ನು ಶಿರಡಿಯ ಸುತ್ತಾ ಮೆರವಣಿಗೆ ಮಾಡಿ ದ್ವಾರಕಾಮಾಯಿಗೆ ತರುತ್ತಾರೆ.  ಆಗ ಮೆರವಣಿಗೆಯಲ್ಲಿ ನೃತ್ಯಪಟುಗಳು ಭಾಗವಹಿಸಿ ಸೊಗಸಾಗಿ ನೃತ್ಯ ಮಾಡುತ್ತಾರೆ. ಸಂಸ್ಥಾನದವರು ನೀಡುವ ಧ್ವಜವನ್ನು ದ್ವಾರಕಾಮಾಯಿಯ ಒಳಗಡೆ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಲಾಗುತ್ತದೆ. ಮಿಕ್ಕ 2 ಧ್ವಜಗಳನ್ನು ದ್ವಾರಕಾಮಾಯಿಯ ಚಾವಣಿಯ ಮೇಲೆ ತೂಗು ಹಾಕುತ್ತಾರೆ. 

ಸಮಾಧಿ ಮಂದಿರದಿಂದ ಸುತಾರ್ ರವರ ಮನೆಗೆ ಧ್ವಜಗಳನ್ನು ಬೆಳ್ಳಿಯ ತಟ್ಟೆಯಲ್ಲಿ ತರಲಾಗುತ್ತದೆ. ಸುತಾರ್ ರವರ ಮನೆಯಲ್ಲಿ ಈ ಧ್ವಜಗಳಿಗೆ ಪೂಜೆಯನ್ನು ಮಾಡಿ ಆರತಿಯನ್ನು ಬೆಳಗಿ ನಂತರ ಇವರ ಮನೆಯಲ್ಲಿ ತಯಾರಿಸಿದ ಬಂಬು ಕೋಲಿನ ತುದಿಗೆ ಧ್ವಜಗಳನ್ನು ಸಿಕ್ಕಿಸುತ್ತಾರೆ. ಇದನ್ನು ತುಕಾರಾಂ ಸುತಾರ್ ವಂಶಸ್ಥರೇ ಮಾಡುತ್ತಾರೆ. 

 
ತುಕಾರಾಂ ಸುತಾರ್ ರವರ ವಂಶಸ್ಥರು ಇಂದಿಗೂ ಶಿರಡಿಯಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ. ತುಕಾರಾಂ ರವರ 3ನೇ ಮಗನ  ಹೆಂಡತಿಯಾದ ಸೊಸೆ ಪಾರ್ವತಿಬಾಯಿಯವರು ಉಧಿಯನ್ನು ಜರಡಿ ಹಿಡಿದು ಚೀಲಗಳಲ್ಲಿ ತುಂಬಿಸುವ ಪುಣ್ಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಇದು ಬಹಳ ಕಷ್ಟದ ಕೆಲಸ. ಏಕೆಂದರೆ, ಉಧಿಯನ್ನು ಜರಡಿ ಹಿಡಿಯುವಾಗ ಅದರ ಧೂಳು ಕಣ್ಣು ಮತ್ತು ಮುಗಿಗೆ ಬಿದ್ದು ತೊಂದರೆಯಾಗುತ್ತದೆ. ಆದರೆ, ಸಾಯಿಬಾಬಾರವರ ಆಶೀರ್ವಾದದಿಂದ ಇವರಿಗೆ ಯಾವುದೇ ಕಣ್ಣಿನ ತೊಂದರೆಯಾಗಲಿ ಅಥವಾ ಶ್ವಾಸಕೋಶದ ತೊಂದರೆಯಾಗಲಿ ಆಗುವುದಿಲ್ಲ. ಅಲ್ಲದೆ, ಇದರಿಂದಾಗುವ ಮತ್ತೊಂದು ತೊಂದರೆ ಎಂದರೆ, ಎಷ್ಟೇ ಬಿಸಿಲಿದ್ದರೂ ಕೂಡ ಫ್ಯಾನ್ ಹಾಕುವ ಹಾಗಿಲ್ಲ. ಏಕೆಂದರೆ, ಫ್ಯಾನ್ ಗಾಳಿ ಬೀಸಿದರೆ ಉಧಿಯು ಎಲ್ಲೆಡೆ ಹರಡಿಕೊಳ್ಳುತ್ತದೆ. 

ಶಿರಡಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಪ್ರತಿದಿನ ಅನೇಕ ಗೋಣಿ ಚೀಲಗಳಷ್ಟು ಉಧಿಯನ್ನು ಜರಡಿ ಹಿಡಿಯಲಾಗುತ್ತಿದೆ. ಪಾರ್ವತಿಬಾಯಿಯವರು ತಮ್ಮ ಸಣ್ಣ ವಯಸ್ಸಿನಿಂದಲೇ ಉಧಿಯನ್ನು ಜರಡಿ ಹಿಡಿಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾಯಿಬಾಬಾ ಸಂಸ್ಥಾನದವರು ಆಗ ಅಲ್ಪ ಮೊತ್ತವನ್ನು ದಕ್ಷಿಣೆಯ ರೂಪದಲ್ಲಿ ನೀಡುತ್ತಿದ್ದರು. ಈಗ ಆಕೆಗೆ ಸುಮಾರು 70 ವರ್ಷಗಳು. ಆದ್ದರಿಂದ ಅವರು ಉಧಿ ಜರಡಿ ಹಿಡಿಯುವುದನ್ನು ನಿಲ್ಲಿಸಿದ್ದಾರೆ. ಆದರೆ ಇವರ ಸೊಸೆ ರುಕ್ಮಿಣಿ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗ ಸಂಸ್ಥಾನದವರು ಒಂದು ಗೋಣಿಚೀಲ ಜರಡಿ ಹಿಡಿದ ಉಧಿಗೆ ಎಪ್ಪತ್ತು ರುಪಾಯಿಗಳನ್ನು ನೀಡುತ್ತಿದೆ. 

ಈ ಪವಿತ್ರ ಕಾರ್ಯವನ್ನು ಮಾಡಿ ನಮಗೆ ಪರಮ ಪವಿತ್ರ ಉಧಿ ಸಿಗುವಂತೆ ಮಾಡುತ್ತಿರುವ ಈ ವಂಶದ ಮಹಿಳೆಯರಿಗೆ ನಾವುಗಳು ಕೃತಜ್ಞತೆ ಸಲ್ಲಿಸಲು ಮರೆಯಬಾರದು. 

ಅಂದಿನ ಕಾಲದಲ್ಲಿ ಸಾಯಿಬಾಬಾ ಸಂಸ್ಥಾನದವರು ಪ್ರತಿನಿತ್ಯ ಮಧ್ಯಾನ್ಹ ಬಾಬಾರವರಿಗೆ ನೈವೇದ್ಯ ಮಾಡಿದ ನಂತರ ಒಂದು ತಟ್ಟೆಯಲ್ಲಿ ನೈವೇದ್ಯ ಪ್ರಸಾದವನ್ನು ಇವರ ಮನೆಗೆ ಕಳುಹಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದರು. ಆದರೆ, ಕಾಲ ಕಳೆದಂತೆ ಈ ಪದ್ದತಿಯನ್ನು ಸಂಸ್ಥಾನದವರು ಕೈಬಿಟ್ಟರು. ಆದರೂ, ಸುತಾರ್ ವಂಶಸ್ಥರು ಆ ಪದ್ದತಿಯನ್ನು ಕೈಬಿಡದೆ ಇಂದಿಗೂ ಕೂಡ ಸಮಾಧಿ ಮಂದಿರಕ್ಕೆ ಬಂದು ಮಧ್ಯಾನ್ಹದ ಆರತಿಯ ನಂತರ ನೈವೇದ್ಯ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ. ಇವರ ವಂಶಸ್ಥರು ನಿಜಕ್ಕೂ ಪುಣ್ಯವಂತರೆಂದೇ ಹೇಳಬೇಕು. ಏಕೆಂದರೆ ಸಾಯಿಬಾಬಾರವರಿಗೆ ನೈವೇದ್ಯವಾದ ಪ್ರಸಾದವನ್ನು ಸ್ವೀಕರಿಸುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನಿದೆ?.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment