Tuesday, August 9, 2011

ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಓಂಕಾರಾಶ್ರಮ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಪನಮಾಕನಹಳ್ಳಿ, ಕೊಂಡಶೆಟ್ಟಿಹಳ್ಳಿ ಅಂಚೆ-563 137, ವಯಾ ಟೇಕಲ್ ಹೋಬಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಪನಮಾಕನಹಳ್ಳಿಯಲ್ಲಿ ಇರುತ್ತದೆ. ಈ ದೇವಾಲಯವು ಕೊಂಡಶೆಟ್ಟಿಹಳ್ಳಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ಮತ್ತು ಟೇಕಲ್ ರೈಲ್ವೇ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲಿರುತ್ತದೆ. ಬಸ್ ನಿಲ್ದಾಣದಿಂದ ಹಾಗೂ ರೈಲ್ವೇ ನಿಲ್ದಾಣದಿಂದ ಹೇರಳವಾಗಿ ಆಟೋಗಳು ಸಿಗುತ್ತವೆ. 

ಈ ದೇವಾಲಯದ ಭೂಮಿ ಪೂಜೆಯನ್ನು ಪವಿತ್ರ ಕಾರ್ತೀಕ ಮಾಸದಲ್ಲಿ 23ನೇ ನವೆಂಬರ್ 1989 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 26ನೇ ಮೇ 1993 ರಂದು ಬೆಂಗಳೂರಿನ ಸಾಯಿಪಾದಾನಂದ ಸತ್ಸಂಗದ ಶ್ರೀ.ಪುಟ್ಟಣ್ಣರವರು ನೆರವೇರಿಸಿದರು. ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಸಾಯಿಬಾಬಾರವರ ವಿಗ್ರಹವನ್ನು ವಿಧಿವತ್ತಾಗಿ ಪ್ರತಿಷ್ಟಾಪನೆ ಮಾಡಲಾಯಿತು.

ಸಾಯಿಬಾಬಾ ಮಂದಿರವು 6 ಎಕರೆಯ ವಿಶಾಲವಾದ ಪ್ರದೇಶದಲ್ಲಿರುತ್ತದೆ. ಈ ಮಂದಿರದ ಆವರಣದಲ್ಲಿ ಶಿರಡಿಯಿಂದ ತಂದ ಪವಿತ್ರ ಮಣ್ಣನ್ನು ಹರಡಲಾಗಿರುವುದರಿಂದ ಈ ಸ್ಥಳವು ಅತ್ಯಂತ ಪವಿತ್ರವೆಂದೇ ಹೇಳಬೇಕು. ಆದ ಕಾರಣ, ಈ ಮಂದಿರಕ್ಕೆ ಬರುವ ಸಾಯಿಭಕ್ತರಿಗೆ ಶಿರಡಿಗೆ ಹೋದಾಗ ಯಾವ ರೀತಿ ಅನುಭವವಾಗುತ್ತದೆಯೋ ಅದೇ ರೀತಿಯ ಅನುಭವವಾಗುತ್ತಿದೆ.

ಈ ದೇವಾಲಯವನ್ನು ಅನನ್ಯ ಶಿರಡಿ ಸಾಯಿಬಾಬಾ ಭಕ್ತರಾದ ಶ್ರೀ.ಪಿ.ಎಸ್.ಗೋವಿಂದನ್ ರವರು ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯ ಹೊರಭಾಗದ ಎರಡೂ ಬದಿಗಳಲ್ಲಿ ಕಪ್ಪು ಶಿಲೆಯ ಗಣಪತಿ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದ ಗರ್ಭಗುಡಿಯಲ್ಲಿ ಎರಡು ಅಡಿ ಎತ್ತರದ ಕಪ್ಪು ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ತಲೆಯ ಹಿಂದೆ ದೀಪವನ್ನು ಮತ್ತು ದೀಪದ ಹಿಂಭಾಗದಲ್ಲಿ ವೃತ್ತಾಕಾರದಲ್ಲಿ ಕನ್ನಡಿಯನ್ನು ಇರಿಸಲಾಗಿದ್ದು, ಕನ್ನಡಿಯು ದೀಪದ ಬೆಳಕನ್ನು "ಅಖಂಡ ಜ್ಯೋತಿ" ಯಂತೆ ಬೆಳಗಿಸುತ್ತಿದ್ದು ನೋಡುಗರ ಕಣ್ಣುಗಳಿಗೆ ಹಬ್ಬವನ್ನು ಉಂಟುಮಾಡುತ್ತದೆ.

ಗರ್ಭಗುಡಿಯ ಮುಂಭಾಗದಲ್ಲಿ "ದ್ವಾರಕಾಮಾಯಿ" ಯನ್ನು ಸ್ಥಾಪಿಸಲಾಗಿದೆ. ಈ ಸ್ಥಳದಲ್ಲಿ ಶಿರಡಿಯಿಂದ ತಂದ ಪವಿತ್ರ ಧುನಿಯನ್ನು 25ನೇ ನವೆಂಬರ್ 1996 ರಂದು ವಿಧ್ಯುಕ್ತವಾಗಿ ಸ್ಥಾಪಿಸಲಾಗಿದೆ. ಇಲ್ಲಿನ ಧುನಿಯಿಂದ ಬರುವ ವಿಭೂತಿಯನ್ನು ಹಣೆಯಲ್ಲಿ ಧರಿಸಿದ ಅನೇಕ ಸಾಯಿಭಕ್ತರ ದೈಹಿಕ ಮತ್ತು ಮಾನಸಿಕ ಖಾಯಿಲೆಗಳು ಆಶ್ಚರ್ಯಕರ ರೀತಿಯಲ್ಲಿ ಗುಣವಾಗುತ್ತಿವೆ.

ದ್ವಾರಕಾಮಾಯಿಯ ಮಧ್ಯಭಾಗದಲ್ಲಿ "ಹೋಮಕುಂಡ" ವನ್ನು ಸ್ಥಾಪಿಸಲಾಗಿದೆ ಮತ್ತು ಹೋಮಕುಂಡದ ಮಧ್ಯಭಾಗದಲ್ಲಿ ನಿರಂತರ ಉರಿಯುವ ದೀಪದ ಲಾಂದ್ರವನ್ನು ಇರಿಸಲಾಗಿದೆ. ಹೋಮಕುಂಡದ ಮುಂಭಾಗದಲ್ಲಿ ಪವಿತ್ರ ಬೆಳ್ಳಿಯ ಪಾದುಕೆಗಳನ್ನು ಇರಿಸಲಾಗಿದೆ.

ದ್ವಾರಕಾಮಾಯಿಯಲ್ಲಿರುವ ಮಂಟಪದ ಒಳಗಡೆ ಪುಟ್ಟದಾದ ಕಪ್ಪು ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮತ್ತೊಂದು ಮಂಟಪದಲ್ಲಿ ಸತ್ಯನಾರಾಯಣ ಸ್ವಾಮಿಯ ಚಿತ್ರಪಟವನ್ನು ಇರಿಸಲಾಗಿದೆ.

ದ್ವಾರಕಾಮಾಯಿಯ ಒಂದು ಕೊನೆಯಲ್ಲಿ ಶಿರಡಿಯಿಂದ ಪವಿತ್ರ ಧುನಿಯನ್ನು ತರಲು ಬಳಸಿದ್ದ ವಸ್ತುಗಳನ್ನು ಇರಿಸಲಾಗಿದೆ ಮತ್ತು ಧುನಿಯನ್ನು ತರಲು ಶಿರಡಿಗೆ ತೆರಳಿದ್ದ ಸಾಯಿಭಕ್ತರ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಯ ವಿವರಗಳನ್ನು ಬಿಂಬಿಸುವ ಚಿತ್ರಪಟವನ್ನು ಸಮೀಪದ ಗೋಡೆಯ ಮೇಲೆ ತೂಗುಹಾಕಲಾಗಿದೆ.


2005 ನೇ ಇಸವಿಯಲ್ಲಿ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಪಿ.ಎನ್.ವಿಶ್ವನಾಥನ್ ರವರು ನವಗ್ರಹ ಮತ್ತು ದತ್ತಾತ್ರೇಯ ದೇವರುಗಳ ವಿಗ್ರಹಗಳ ಪ್ರತಿಷ್ಟಾಪನೆಯ ಸಂದರ್ಭದಲ್ಲಿ ಒಂದು ಹೋಮವನ್ನು ನೆರವೇರಿಸಿದ್ದರು. ಆಗ ನಡೆದ ಕಾರ್ಯಕ್ರಮಗಳ ಫೋಟೋವನ್ನು ತೆಗೆಯಲಾಗಿತ್ತು. ಆದರೆ, ಹೋಮವಾಗಿ ಎರಡು ವರ್ಷಗಳೇ ಸಂದಿದರೂ ಕೂಡ ಆ ಫೋಟೋಗಳನ್ನು ಸ್ಟುಡಿಯೋದಲ್ಲಿ ಅಭಿವೃದ್ದಿಗೊಳಿಸಿರಲಿಲ್ಲ. 2007 ರಲ್ಲಿ ಆ ಫೋಟೋಗಳ ನೆನಪಾಗಿ ನೆಗಟಿವ್ ಗಳನ್ನು ಅಭಿವೃದ್ದಿಗೊಳಿಸಿದಾಗ ಆಶ್ಚರ್ಯ ಕಾದಿತ್ತು. ಈ ಕೆಳಗೆ ನೀಡಿರುವ "ಹೋಮದಲ್ಲಿ ಕಾಣಿಸಿಕೊಂಡ ಸಾಯಿಬಾಬಾರವರ ಚಿತ್ರ" ಹೊರಬಂದಿತು.



ದೇವಾಲಯದ ಮಹಾದ್ವಾರದ ಬಳಿ ಕಪ್ಪು ಶಿಲೆಯ ಗಣಪತಿ, ಲಕ್ಷ್ಮಿ ಮತ್ತು ಸರಸ್ವತಿ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ದೇವಾಲಯದ ಆವರಣದಲ್ಲಿರುವ ಪವಿತ್ರ ಅರಳಿ ಮರದ ಕೆಳಗಡೆ ನಿರಂತರ ಪ್ರಜ್ವಲಿಸುವ ನಂದಾದೀಪವನ್ನು ಸ್ಥಾಪಿಸಲಾಗಿದೆ.

ನಂದಾದೀಪದ ಪಕ್ಕದಲ್ಲಿ ದತ್ತಾತ್ರೇಯ, ಹನುಮಂತ ಹಾಗೂ ನಾಗ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ನವಗ್ರಹಗಳನ್ನು 1ನೇ ಅಕ್ಟೋಬರ್ 1998 ರಂದು ಸ್ಥಾಪಿಸಲಾಗಿದೆ.

ಸಾಯಿಬಾಬಾ ಮಂದಿರದ ಎದುರುಗಡೆ ಸ್ವಲ್ಪ ದೂರದಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ. ಈ ಸ್ಥಳದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತಿದೆ.

ದೇವಾಲಯದಿಂದ ಸುಮಾರು 100 ಮೀಟರ್ ಗಳ ಅಂತರದಲ್ಲಿ ಗೋಶಾಲೆಯನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು 6ನೇ ಮಾರ್ಚ್ 2009 ರಂದು ನೆರವೇರಿಸಲಾಯಿತು.ಈ ಸ್ಥಳದಲ್ಲಿ 9 ಹಸುಗಳನ್ನು ಸಾಕಲಾಗುತ್ತಿದ್ದು ಇದರಿಂದ ಬರುವ ಹಾಲನ್ನು ದಿನನಿತ್ಯದ ಅಭಿಷೇಕಕ್ಕೆ ಮತ್ತು ಮಂದಿರಕ್ಕೆ ಬರುವ ವಿಶೇಷ ಅತಿಥಿಗಳ ಸತ್ಕಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಗೋಶಾಲೆಯನ್ನು ಪ್ರಾರಂಭಿಸಲು ಕಾರಣಕರ್ತರು ಮತ್ತು ಶ್ರೀ.ಗೋವಿಂದನ್ ರವರಿಗೆ ಸ್ಫೂರ್ತಿಯನ್ನು ತುಂಬಿದ ಕೀರ್ತಿ ಪರಮಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಶಿಷ್ಯರಾದ ಶ್ರೀ.ರಾಧಾಕೃಷ್ಣ ಸ್ವಾಮೀಜಿಯವರಿಗೆ ಸಲ್ಲುತ್ತದೆ.

ಗೋಶಾಲೆಯ ಎದುರುಗಡೆ "ಮಂಗಳ ಕಾರ್ಯಾಲಯ" ವನ್ನು  6ನೇ ಮಾರ್ಚ್ 2009 ರಂದು ಪ್ರಾರಂಭಿಸಲಾಗಿದ್ದು ಈ ಸ್ಥಳವನ್ನು ಮದುವೆ ಮತ್ತು ಇತರ ಶುಭ ಕಾರ್ಯಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತಿದೆ.

ಭಕ್ತರಿಗೆ ಪ್ರಸಾದವನ್ನು ವಿತರಿಸುವ ಸಲುವಾಗಿ "ಶ್ರೀ ಸಾಯಿ ಪ್ರಸಾದ ನಿಲಯ" ವನ್ನು ಮಂದಿರದ ಎದುರುಗಡೆ ನಿರ್ಮಿಸಲಾಗಿದೆ.

ಗೋಶಾಲೆ ಮತ್ತು ಮಂಗಳ ಕಾರ್ಯಾಲಯದ ಎದುರುಗಡೆ ಒಂದು ನಾಗರ ಹುತ್ತದ ಪಕ್ಕದಲ್ಲಿ ಪವಿತ್ರ ಭಿಲ್ವ ವೃಕ್ಷವಿದೆ ಮತ್ತು ಮರದ ಪಕ್ಕದಲ್ಲಿ ಹೋಮಕುಂಡವನ್ನು ಸ್ಥಾಪಿಸಲಾಗಿದೆ.


























ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು


ಆರತಿಯ ಸಮಯ: 
ಬೆಳಿಗ್ಗೆ: 9 ಘಂಟೆಗೆ
ರಾತ್ರಿ: 7 ಘಂಟೆಗೆ

ವಿಶೇಷ ಕಾರ್ಯಕ್ರಮಗಳು:

ದೇವಾಲಯದಲ್ಲಿ ಪ್ರತೀ ತಿಂಗಳೂ 6 ಘಂಟೆಗಳ ಕಾಲ ಹಾಗೂ ವರ್ಷಕ್ಕೊಮ್ಮೆ ೨೪ ಘಂಟೆಗಳ ಕಾಲ ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮಜಪವನ್ನು ನಡೆಸಲಾಗುತ್ತದೆ. ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ.

101/- ರುಪಾಯಿ ಮತ್ತು ಅದಕ್ಕೆ ಮೇಲ್ಪಟ್ಟು ಹಣವನ್ನು ಕಾಣಿಕೆ ನೀಡಿದವರ ಹೆಸರಿನಲ್ಲಿ ಶಾಶ್ವತ ಪೂಜೆಯನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು: 

1. ಶ್ರೀರಾಮನವಮಿ - 108 ಬಾರಿ ಸಾಮುಹಿಕ ಸಾಯಿ ತಾರಕ ಹೋಮ.
2. ವಿಜಯದಶಮಿ - 108 ಬಾರಿ ಸಾಮುಹಿಕ ಸಾಯಿ ತಾರಕ ಹೋಮ.

ದೇಣಿಗೆಗೆ ಮನವಿ: 
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೊಸ್ಕರ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬಂಗಾರಪೇಟೆ ಶಾಖೆ, ಖಾತೆ ಸಂಖ್ಯೆ: 01190009615 ಗೆ" ಸಂದಾಯವಾಗುವಂತೆ ನೀಡಬಹುದು.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 
ಪನಮಾಕನಹಳ್ಳಿ, ಕೊಂಡಶೆಟ್ಟಿಹಳ್ಳಿ ಅಂಚೆ, ವಯಾ ಟೇಕಲ್ ಹೋಬಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ.


ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಓಂಕಾರಾಶ್ರಮ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ),
ಪನಮಾಕನಹಳ್ಳಿ, ಕೊಂಡಶೆಟ್ಟಿಹಳ್ಳಿ ಅಂಚೆ-563 137,
ವಯಾ ಟೇಕಲ್ ಹೋಬಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ


ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಪಿ.ಎಸ್.ಗೋವಿಂದನ್ - ಅಧ್ಯಕ್ಷರು / ಶ್ರೀ.ವಿ.ಪಾಂಡುರಂಗ -ಕಾರ್ಯದರ್ಶಿ / ಶ್ರೀ.ಕೆ.ವಿಜಯಕುಮಾರ್ -ಖಚಾಂಚಿ

ದೂರವಾಣಿ ಸಂಖ್ಯೆಗಳು: 
+ 91 8151 211513 / +91 94488 86751


ಮಾರ್ಗಸೂಚಿ:
ಟೇಕಲ್ ರೈಲ್ವೇ ನಿಲ್ದಾಣ ಅಥವಾ ಕೊಂಡಶೆಟ್ಟಿಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಕೊಂಡಶೆಟ್ಟಿಹಳ್ಳಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ಮತ್ತು ಟೇಕಲ್ ರೈಲ್ವೇ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲಿರುತ್ತದೆ. ಬಸ್ ನಿಲ್ದಾಣದಿಂದ ಹಾಗೂ ರೈಲ್ವೇ ನಿಲ್ದಾಣದಿಂದ ಹೇರಳವಾಗಿ ಆಟೋಗಳು ಸಿಗುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment