ಸಾಯಿ ಮಹಾಭಕ್ತ - ವಿಠಲ್ ಎನ್. ವೈದ್ಯ - ಕೃಪೆ: ಸಾಯಿಅಮೃತಧಾರಾ.ಕಾಂ
ವಿಠಲ್ ಎನ್. ವೈದ್ಯರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು 1911 ರಲ್ಲಿ ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದರು. ಒಮ್ಮೆ ಇವರು ನ್ಯುಮೋನಿಯಾದಿಂದ ಖಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಸುಮಾರು 21 ದಿನಗಳ ಕಾಲ ಜ್ವರವು ಎಡಬಿಡದೆ ಕಾಡುತ್ತಿತ್ತು. ಇವರನ್ನು ನೋಡಿಕೊಳ್ಳುತ್ತಿದ್ದ ಡಾ.ಚಿಪ್ಕರ್ ರವರು ಇವರಿಗೆ ಎಲ್ಲಾ ರೀತಿಯ ಔಷಧೋಪಚಾರಗಳನ್ನೂ ಮಾಡಿದರು. ಆದರೂ ಕೂಡ ಇವರ ಜ್ವರ ಇಳಿಮುಖವಾಗಲಿಲ್ಲ.
ಇಪ್ಪತ್ತೊಂದನೇ ದಿನ ರಾತ್ರಿ ಸುಮಾರು 9 ಘಂಟೆಗೆ ಇವರ ಜೀವನದ ದಿಕ್ಕನ್ನೇ ಬದಲಾಯಿಸುವ ಘಟನೆಯೊಂದು ನಡೆಯಿತು. ಇವರ ಮನೆಯವರೆಲ್ಲಾ ಇವರು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದರು. ಆಗ ಇವರು "ಸಾಯಿಬಾಬಾ ನಮ್ಮ ಮನೆಗೆ ಭಿಕ್ಷೆಗೆ ಬಂದಿದ್ದಾರೆ. ಅವರಿಗೆ ರೊಟ್ಟಿ ಮತ್ತು ಈರುಳ್ಳಿಯನ್ನು ಕೊಡಿ" ಎಂದು ಜೋರಾಗಿ ಕೂಗಿಕೊಂಡರು. ಸುತ್ತಮುತ್ತಲೂ ಯಾರೂ ಇರದಿದ್ದ ಕಾರಣ ಮನೆಯವರು ಜ್ವರದ ತಾಪದ ಪ್ರಭಾವದಿಂದ ವಿಠಲ್ ರವರು ಹೀಗೆ ಕೂಗಿಕೊಳ್ಳುತ್ತಿದ್ದಾರೆ ಎಂದುಕೊಂಡರು. ಆಗ ವಿಠಲ್ ರವರು ಕೋಪದಿಂದ ಮನೆಯವರೆಲ್ಲರನ್ನು ಚೆನ್ನಾಗಿ ಬಯ್ದು ಅಲ್ಲಿಂದ ಹೊರಗೆ ಓಡಿಸಿದರು. ಮನೆಯವರೆಲ್ಲಾ ರೂಮಿನಿಂದ ಬಂದು ಹೊರಗಡೆ ನಿಂತುಕೊಂಡಿದ್ದರು. ಆದರೆ, ವಿಠಲ್ ಎನ್. ವೈದ್ಯ ರವರು ಮಾತನಾಡುವುದೆಲ್ಲಾ ಅವರಿಗೆ ಕೇಳಿಸುವಂತಿತ್ತು. ಅವರುಗಳಿಗೆ ಸಾಯಿಬಾಬಾ ವಿಠಲ್ ಎನ್. ವೈದ್ಯ ರವರ ಬಳಿ ಮಾತನಾಡುವುದು ಕೇಳಿ ಆಶ್ಚರ್ಯವಾಯಿತು. ಬಾಬಾರವರು ಇಬ್ಬರು ವ್ಯಕ್ತಿಗಳ ಹತ್ತಿರ ಮಾತನಾಡುತ್ತಾ ಅವರಿಗೆ ಹೊರಟು ಹೋಗುವಂತೆ ಆಜ್ಞಾಪಿಸಿದ್ದು ಕೂಡ ಕೇಳಿಸಿತು. ಆ ಇಬ್ಬರು ವ್ಯಕ್ತಿಗಳು ತಾವು ವಿಠಲ್ ಎನ್. ವೈದ್ಯ ರವರನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದ್ದು ಕೇಳಿಸಿತು. ಅದಕ್ಕೆ ಬಾಬಾರವರು ಆಕ್ಷೇಪಣೆ ಮಾಡುತ್ತಾ ತಮ್ಮ ಸಟಕಾವನ್ನು ಜೋರಾಗಿ ನೆಲಕ್ಕೆ ಕುಟ್ಟಿದ ಶಬ್ದ ಕೇಳಿಸಿತು. ನಂತರ ಆ ಇಬ್ಬರು ವ್ಯಕ್ತಿಗಳು ಮಾತನಾಡಿದ ಶಬ್ದ ಕೇಳಿಸಲಿಲ್ಲವಾದ್ದರಿಂದ ಅವರಿಬ್ಬರೂ ಹೊರಟುಹೋಗಿರುವರೆಂದು ತಿಳಿಯಿತು. ನಂತರ ಬಾಬಾರವರು ಒಂದು ದೊಡ್ಡ ತಂಬಿಗೆಯ ತುಂಬಾ ತಣ್ಣೀರನ್ನು ತೆಗೆದುಕೊಂಡು ಕುಡಿಯುವಂತೆ ವಿಠಲ್ ಎನ್. ವೈದ್ಯ ರವರಿಗೆ ತಿಳಿಸಿ ಹೊರಟುಹೋದರು.
ವಿಠಲ್ ಎನ್. ವೈದ್ಯರವರು ಹೊರಗಡೆ ನಿಂತಿದ್ದ ತಮ್ಮ ಮಗನನ್ನು ಕರೆದು ಒಂದು ದೊಡ್ಡ ತಂಬಿಗೆಯ ತುಂಬಾ ತಣ್ಣೀರನ್ನು ತರುವಂತೆ ಹೇಳಿದರು. ಕೂಡಲೇ ಇವರ ಮಗನು ಓಡಿ ಹೋಗಿ ತಣ್ಣೀರನ್ನು ತೆಗೆದುಕೊಂಡು ಬಂದು ಕುಡಿಯಲು ಕೊಟ್ಟನು. ವಿಠಲ್ ಎನ್. ವೈದ್ಯರವರು ಮಗನು ತಂದ ನೀರನ್ನು ಪೂರ್ತಿ ಕುಡಿದರು ಮತ್ತು ಕೂಡಲೇ ಬೆವರಲಾರಂಭಿಸಿದರು. ಅವರ ಮಗನು ಈ ವಿಷಯವನ್ನು ಡಾಕ್ಟರ್ ಗೆ ತಿಳಿಸಲು ಅವರು ಬಂದು ವಿಠಲ್ ರವರನ್ನು ಪರೀಕ್ಷಿಸಿದರು ಮತ್ತು ತಣ್ಣೀರನ್ನು ಕುಡಿದ ನಂತರ ಜ್ವರವು ಕಡಿಮೆಯಾಯಿತೆಂಬ ಮಾತನ್ನು ಕೇಳಿ ಆಶ್ಚರ್ಯಚಕಿತರಾದರು. ಮಾರನೇ ದಿನ ಡಾಕ್ಟರ್ ಒಂದು ಸೂಜಿಯನ್ನು ನೀಡಿ ವಿಠಲ್ ಎನ್. ವೈದ್ಯ ರವರು ಸಂಪೂರ್ಣವಾಗಿ ಗುಣಮುಖರಾಗಿರುವರೆಂದು ಮನೆಯವರಿಗೆ ತಿಳಿಸಿದರು.
ಈ ಘಟನೆಯು ಹೇಗೆ ಸಾಯಿಬಾಬಾರವರು ತಾವು ಪ್ರೀತಿಸುತ್ತಿದ್ದವರನ್ನು ಅಪಾಯಗಳಿಂದ ಕಾಪಾಡುತ್ತಿದ್ದರೆಂದು ನಮಗೆ ತಿಳಿಸಿಕೊಡುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment