Friday, November 12, 2010

ಸಾಈ ಬಾಬನ ಹಾಡು (ಲಾವಣೀ) - ರಚನೆ : ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯ 



ಲಾವಣಿಯ ರಚನೆಕಾರ ಶ್ರೀ.ಸುಬ್ಬರಾಮಯ್ಯ 

ಸಾಈಬಾಬನ ಕತೆಯ ಹೇಳುವ
ಆಸೆ ತುಂಬಿದೆ ಮನದಲಿ
ಬಂದು ಕೇಳಿರಿ ಎಂದು ಬೇಡುವೆ
ಸಾಧು ಸಜ್ಜನ ನಿಮ್ಮಲಿ

ಕಥೆಯ ಹೇಳುವ ಶಕ್ತಿ ಇಲ್ಲವು
ನಾನು ಕೇವಲ ಮೂಢನು
ಎಕೆ ಬಂದಿತೋ ಇಂಥ ಆಸೆಯು
ಅದರ ಗುಟ್ಟನು ಅರಿಯೆನು

ಗುರುವೆ ಬ್ರಹ್ಮನು ಗುರುವೆ
ವಿಷ್ಣುವು ಗುರುವೆ ದೇವ ಮಹೇಶ್ವರ 
ಗುರುವೆ ಸಾಕ್ಷಾತ್ ಬ್ರಹ್ಮ ಪರನು
ಗುರುವಿಗದಕೇ ನಮನವು

ನಿನ್ನ ಬೇಡುವೆ ವಿಘ್ನರಾಜನೆ
ಹರಿಸು ಎನ್ನಯ ಚಿಂತೆಯ
ಹಿಡಿದ ಕೆಲಸವ ಮುಗಿಸುವಂದದಿ
ಹರಸು ಎನ್ನನು ಸರ್ವದಾ

ಮಾತಿಗೆಲ್ಲವು ಮೂಲಸ್ಥಾನವು
ನೀವೆ ಅಲ್ಲವೆ ಮಾತೆಯೆ
ವಾಣಿಸರಸ್ವತಿ ನಿಮ್ಮ ಬೇಡುವೆ
ಅರ್ಥ ಪರಿಮಳ ವಾಣಿಯಾ

ರಾಮನೆನ್ನುವ ಎರಡು ಅಕ್ಷರ
ನನ್ನ ಪ್ರಾಣಕೆ ಹತ್ತಿರ
ಅವನ ನೆನೆಯದೆ ಏನು ಆಗದು
ನಮ್ಮ ಜೀವನ ದುಸ್ತರ

ತಂದು ಹಾಕಿರಿ ನಿಮ್ಮ ಬಯಕೆಯ
ನನ್ನ ಪಾದದ ಹತ್ತಿರಾ
ನಾನು ಹೊರುವೆನು ಅದರ ಭಾರವ
ನಿಮಗೆ ಏತರ ಸಂಶಯ

ಏಂದು ಹೇಳಿದ ಸಾಈಬಾಬನ
ಮಾತೇ ನಮಗೆ ಸತ್ಯವು
ಕಂಡ ಸತ್ಯವ ನಂಬಿ ನಡೆವುದೆ
ನಮಗೆ ಒಂದೇ ಮಾರ್ಗವು

ನನ್ನ ಕಥೆಯನು ನಾನೇ ಹೇಳುವೆ
ಏಕೆ ತಿಣುಕುವೆ ಜಾಣನೆ
ನಿನ್ನ ಕಣ್ಣಿಗೆ ಏನು ಕಾಣದು
ನಾನು ನನ್ನದು ಬಿಟ್ಟರೇ

ಹೀಗೆ ನುಡಿದನು ಸಾಈ ಬಾಬನು
ಅಂದು ಕೇಳಿದ ಪ್ರಶ್ನೆಗೆ
ಸಾಧು ಸಂತರ ಕಥೆಯ ಗುಟ್ಟನು 
ಹೇಗೆ ತಿಳಿವರು ಮನುಜರು

ನೂರು ವರುಷದ ಹಿಂದೆ ನಡೆಯಿತು
ಶಿರಡಿ ಎನ್ನುವ ಊರಲೀ
ದೈವ ಮಹಿಮೆಯ ಆಟ ನಡೆಯಿತು
ಸಾಈ ಬಾಬನ ಹೆಸರಲೀ

ಮೊದಲ ಬಾರಿಗೆ ಹುಡುಗನೊಬ್ಬನು
ಶಿರಡಿ ಊರಿಗೆ ಬಂದನೂ
ಊರಹೊರಗಿನ ಮರದ ಕೆಳಗೆ
ಕುಳಿತಿರುತ್ತಾ ಇದ್ದನೂ

ಹೇಗೇ ಬಂದನೊ ಹಾಗೆ ಹೋದನು
ಕಾಣದಾದನು ಜನರಿಗೇ
ಅವನ ಜ್ಞಾಪಕ ಯಾರಿಗಿರುವುದು 
ನಮ್ಮ ಚಿಂತೆಯೆ ನಮ್ಮಗೆ

ಸಾಧು ಸಂತರ ಚಲನವಲನವು
ನಮ್ಮ ದೃಷ್ಟಿಗೆ ಏಟಕದು 
ಕಾಲಧರ್ಮವ ಮೀರಿ ನಡೆವುದು
ಬರಿಯ ಮಾತಿನ ವೈಭವಾ

ತನ್ನ ರಭಸದಿ ಅಂಕೆಯಿಲ್ಲದೆ
ಕಾಲ ಓಡಿತು ಮುಂದಕೆ
ಮತ್ತೆ ಬಂದನು ಶಿರಡಿ ಊರಿಗೆ
ಮದುವೆ ದಿಬ್ಬಣ ಜೊತೆಯಲಿ

ಚಾಂದಭಾಯಿ ಪಾಟೀಲನೆಂಬುವ
ಧನಿಕನಿದ್ದನು ಅಲ್ಲಿಯೇ
ಧೂಪಖೇಡಾ ಎಂಬ ಊರದು
ಪುಣ್ಯ ಪಾವನ ಭೂಮಿಯು

ಕಾಣದಾಯಿತು ಅವನ ಕುದುರೆಯು
ಅವನ ಬಾಳ ಸಂಗಾತಿಯು
ಅದನ ಹುಡುಕುತ ಊರ ತಿರುಗುತ
ದಾರಿ ಹಿಡಿದ ಪಾಟೀಲನು 

ಯುವಕನೊಬ್ಬನು ಅವಗೆ ಕಂಡನು
ತನ್ನ ಊರಿನ ಹತ್ತಿರಾ
ಯುವಕ ಕೂಗಿದ ದನಿಯ ಕೇಳಿ
ಅಲ್ಲೆ ನಿಂತನು ಚಲಿಸದೆ

ಬಂದು ಕುಳಿತುಕೊ ಸೇದು ಚಿಲುಮನು
ಏಕೆ ಚಿಂತಿಪೆ ಪಾಂಥನೇ
ಇಲ್ಲೇ ಇರುವುದು ನಿನ್ನ ಕುದುರೆಯು 
ಹೋಗಿ ಹಿಡಿದುಕೋ ಬೇಗನೆ

ನಿಜವೆ ಆಯಿತು ಅವನ ನುಡಿಯು
ಹಾಗೇ ಸಿಕ್ಕಿತು ಕುದುರೆಯು
ನಿಜವ ನುಡಿಯುವ ನಾಳೆ ನೋಡುವ
ದಿವ್ಯಜ್ಞಾನಿ ಫಕೀರನೂ 

ಎಂದು ಯೋಚಿಸಿ ಕೈಯ್ಯ ಮುಗಿದು 
ಬೇಡಿಕೊಂಡನು ಧನಿಕನು
" ಮಾಡಿ ಪಾವನ ಎನ್ನ ಮನೆಯನು
ನಿಮ್ಮ ಪಾದದ ಸ್ಪರ್ಶದೀ"

ಹಾಗೆ ಹುಟ್ಟಿತು ಅವರ ಮೈತ್ರಿಯು
ಅದರ ಅರ್ಥ ನಿಗೂಢವೂ
ಕಂಡ ಕೆಲಸದ ಹಿಂದೆ ಇರುವುದು
ಕಾಣದೊಂದರ ಮೊಳಕೆಯು

ಬೇಗ ಬಂದಿತು ಮದುವೆ ಸಂಭ್ರಮ
ಚಾಂದಭಾಯಿಯ ಮನೆಯಲೀ
ಹೊರಟರೆಲ್ಲರು ಶಿರಡಿ ಗ್ರಾಮಕೆ
ಅಲ್ಲೆ ನಡೆವುದು ಮದುವೆಯು

"ನೀವು ಬನ್ನಿ" ಎಂದು ಕರೆದನು
ಚಾಂದ ಭಾಯಿ ಪಾಟೀಲನು
ಅದಕೆ ಒಪ್ಪುತ ಹತ್ತಿ ಕುಳಿತನು
ಗಾಡಿಯೊಳಗೆ ಫಕೀರನು

ಖಂಡೋಬ ಮಂದಿರ ಮುಂದೆ ಇದ್ದಿತು
ದೊಡ್ಡ ಜಾಗ ವಿಸ್ಥಾರವೂ
ಆಲ್ಲಿ ಇಳಿದರು ಮದುವೆ ಜನರು
ಹಾವ ಭಾವ ಸಂತೋಷದೀ

ತನ್ನ ಪಾಡಿಗೆ ತಾನೆ ಇಳಿಯುತ
ಸುಮ್ಮನಿದ್ದ ಫಕೀರನೂ
ಅವನ ನೋಡುತ ಓಡಿಬಂದನು
ಪೂರ್ವ ಜನ್ಮದ ನಂಟನು

" ಬನ್ನಿ ಸಾಈ" "ಹೀಗೆ ಬನ್ನಿ"
ಎಂದು ಕರೆದನು ನಂಟನೂ
ಸಾಈ ಯಾಯಿತು ಅವನ ಹೆಸರು
ಸರ್ವ ಕಾಲ ದಿಗಂತರ

ನಮ್ಮ ಬಾಳಿಗೆ ಸಾಈ ಎದ್ದನು
ಶುದ್ದ ಬ್ರಹ್ಮ ಸ್ವರೂಪನು
ಅವನೆ ರಾಮನು ಅವನೆ ಕೃಷ್ಣನು
ಸಾಈ ಮಂಗಳ ಮೂರ್ತಿಯು

ಆದಿ ಶಂಕರ ಗುರು ವರೇಣ್ಯನು
ತಾಯಿ ಲಲಿತೆಯ ಕಂದನೂ
ಅಲ್ಲ ಮಾಲಿಕನೆಂದು ಜಪಿಸುವ
ವಾಸುದೇವ ಮುಕುಂದನು 

ಸಂಗ್ರಹ : ಶ್ರೀಕಂಠ ಶರ್ಮ

No comments:

Post a Comment