Sunday, November 7, 2010

ಏಷ್ಯಾದ ಅತಿ ದೊಡ್ಡದಾದ ಶಿರಡಿ ಸಾಯಿಬಾಬಾರವರ ತೈಲಚಿತ್ರದ ಸೃಷ್ಟಿಕರ್ತ ಶ್ರೀ.ನವನೀತ್ ಅಗ್ನಿಹೋತ್ರಿ - ಕೃಪೆ: ಸಾಯಿಅಮೃತಧಾರಾ.ಕಾಂ


ಏಷ್ಯಾದ ಅತಿ ದೊಡ್ಡದಾದ ಶಿರಡಿ ಸಾಯಿಬಾಬಾರವರ ತೈಲಚಿತ್ರವನ್ನು ಸೃಷ್ಟಿಸಿದ ಹೆಗ್ಗಳಿಕೆಗೆ ಖ್ಯಾತ ಕಲಾವಿದ ಶ್ರೀ.ನವನೀತ್ ಅಗ್ನಿಹೋತ್ರಿಯವರು ಪಾತ್ರರಾಗಿದ್ದಾರೆ. ಇವರು 11ನೇ ಜೂನ್ 1976 ರಂದು ದೆಹಲಿಯಲ್ಲಿ ಖ್ಯಾತ ಕಲಾವಿದರಾದ ಶ್ರೀ.ವೈ.ಡಿ.ಶರ್ಮ ಅಗ್ನಿಹೋತ್ರಿ ಯವರ ಪುತ್ರರಾಗಿ ಜನಿಸಿದರು. ಶ್ರೀ.ಶರ್ಮ ಅಗ್ನಿಹೋತ್ರಿಯವರ 3 ಜನ ಮಕ್ಕಳ ಪೈಕಿ ಇವರೊಬ್ಬರೇ ಗಂಡು ಮಗ. ಇವರ ಇಡೀ ಕುಟುಂಬವೇ ಶಿರಡಿ ಸಾಯಿಬಾಬಾರವರಲ್ಲಿ ಅನನ್ಯ ಭಕ್ತಿಯನ್ನು ಹೊಂದಿದೆ. ಇವರ ತಂದೆ ತಾಯಿಯವರು ಮತ್ತು ಇವರ ಇಬ್ಬರು ಹಿರಿಯ ಸಹೋದರಿಯರಾದ ದೀಪಿಕಾ ಮತ್ತು ಜ್ಯೋತಿಯವರು ಇವರಿಗೆ ಬಹಳ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಇವರಿಗೆ ಮೊದಲಿನಿಂದಲೂ ಓದಿನ ಕಡೆ ಆಸಕ್ತಿ ಕಡಿಮೆಯಾಗಿತ್ತು. ಇವರು ಸಾದಾ ಹಾರಾಡುವ ಪಕ್ಷಿಗಳನ್ನು, ಗಾಳಿಪಟ, ಆಟವಾಡುವ ಮಕ್ಕಳನ್ನು, ಪ್ರಕೃತಿಯಲ್ಲಿ ತಾನೇ ತಾನಾಗಿ ಬೆಳೆಯುವ ಗಿಡ ಮರಗಳನ್ನು ನೋಡುತ್ತಾ ಸದಾ ಅಧ್ಯಾತ್ಮಿಕ ಚಿಂತನೆಯನ್ನು ಮಾಡುತ್ತಾ ಇದ್ದರು. ಆಲ್ಲದೇ, ಇವರು ಸಣ್ಣ ವಯಸ್ಸಿನವರಿದ್ದಾಗ ಕೆಟ್ಟ ಹುಡುಗರ ಸಹವಾಸದಲ್ಲಿ ಸದಾ ಇರುತ್ತಿದ್ದರು. ಚಿತ್ರಕಲೆಯಲ್ಲಿ ಸ್ವಲ್ಪವೂ ಕೂಡ ಆಸಕ್ತಿಯೇ ಇರಲಿಲ್ಲ.

ಆದರೆ, 1994 ರಲ್ಲಿ ನಡೆದ ಒಂದು ಘಟನೆಯಿಂದ ಇವರು ಪೂರ್ಣ ಬದಲಾದರು. ಇವರು 1994 ರಲ್ಲಿ ಎರಡನೇ ಬಾರಿಗೆ ಶಿರಡಿಗೆ ಇವರ ತಾಯಿಯವರಾದ ಶ್ರೀಮತಿ.ಉಷಾರಾಣಿ ಯವರೊಡನೆ ಹೋಗಿದ್ದರು. ಶಿರಡಿಯಲ್ಲಿ ಇವರ ತಾಯಿಯವರು ಇವರ ಒಳಿತಿಗೊಸ್ಕರವಾಗಿ "ಸಾಯಿ ಸಚ್ಚರಿತೆಯ" ಸಪ್ತಾಹ ಮಾಡಲು ನಿರ್ಧರಿಸಿದರು. ಇವರು ದ್ವಾರಕಾಮಾಯಿಯಲ್ಲಿ ಕುಳಿತು ಶ್ರದ್ದೆಯಿಂದ ಸಪ್ತಾಹ ಪಾರಾಯಣವನ್ನು ಮಾಡಿ ಮುಗಿಸಿದರು. ಸಪ್ತಾಹ ಮುಗಿದ ನಂತರ ಇವರ ತಾಯಿಯವರು ಇವರಿಗೆ ಶ್ರದ್ದೆಯಿಂದ ಸಾಯಿಯವರನ್ನು ಏನಾದರೂ ಬೇಡಿಕೊಳ್ಳುವಂತೆ ಹೇಳಿದರು. ಅವರ ಸಲಹೆಯಂತೆ ನವನೀತ್ ಅಗ್ನಿಹೋತ್ರಿಯವರು ಸಾಯಿಯವರ ಚಿತ್ರಪಟದ ಮುಂದೆ ತಲೆಬಾಗಿ ನಮಸ್ಕರಿಸಿದರು. ಆದರೆ ಇವರಿಗೆ ಏನನ್ನು ಕೇಳಿಕೊಳ್ಳಲು ಮನಸ್ಸು ಬರಲಿಲ್ಲ. ಅದಕ್ಕೆ ಬದಲಾಗಿ ಇವರು ಬಾಬಾರವರನ್ನು "ಬಾಬಾ, ನನ್ನ ಮುಂದಿನ ಭವಿಷ್ಯ ಹೇಗಿದೆ ಎಂದು ತಿಳಿಸಿ" ಎಂದು ಕೇಳಿಕೊಂಡರು ಮತ್ತು ಭಕ್ತಿಯಿಂದ ಬಾಬಾರವರ ಚಿತ್ರಪಟಕ್ಕೆ ವಂದಿಸಿದರು. ಶಿರಡಿಯಿಂದ ದೆಹಲಿಗೆ ರೈಲಿನಲ್ಲಿ ವಾಪಸಾಗುವಾಗ ರೈಲಿನ ಬೋಗಿಯಲ್ಲಿಯೇ ಕುಳಿತು ಸಾಯಿಬಾಬಾರವರ ಕೆಲವು ಚಿತ್ರಗಳನ್ನು ಬರೆದರು. ಅದನ್ನು ನೋಡಿದ ರೈಲಿನ ಸಹಪ್ರಯಾಣಿಕರೆಲ್ಲರೂ ಬಹಳವಾಗಿ ಮೆಚ್ಚಿಗೆ ವ್ಯಕ್ತಪಡಿಸಿದರು. ಆ ಕ್ಷಣದಲ್ಲೇ ನವನೀತ್ ಅಗ್ನಿಹೋತ್ರಿಯವರಿಗೆ ಬಾಬಾರವರಿಂದ ತಮಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಉತ್ತರ ಸಿಕ್ಕಿದೆ ಎಂದು ಅನಿಸಿತು ಮತ್ತು ಚಿತ್ರಕಲೆಯನ್ನು ಅಂದಿನಿಂದಲೇ ಚೆನ್ನಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ದೆಹಲಿಯ ಸುಪ್ರಸಿದ್ದ ಕಲೆ ಮತ್ತು ತಂತ್ರಜ್ಞಾನ ವಿದ್ಯಾಲಯದಿಂದ 3 ವರ್ಷಗಳ ಡಿಪ್ಲೋಮಾವನ್ನು ಮುಗಿಸಿದರು. ನಂತರ ದೆಹಲಿಯ ಎಸ್.ಸಿ.ವಿ.ಟಿ ಕಲಾ ಶಾಲೆಯಿಂದ 1 ವರ್ಷದ ವ್ಯವಹಾರಿಕ ಕಲೆಯ ತರಬೇತಿಯನ್ನು ಕೂಡ ಮುಗಿಸಿದರು. ನಂತರ ದೆಹಲಿಯ ಕಲಾ ಶಾಲೆಯಿಂದ ಚಿತ್ರಕಲೆಯಲ್ಲಿ ವಿಶೇಷ ತರಬೇತಿಯನ್ನು ಕೂಡ ಮುಗಿಸಿದರು.

ಮುಂದೆ ಇವರು ಏಷ್ಯಾದ ಅತಿ ದೊಡ್ಡದಾದ ಶಿರಡಿ ಸಾಯಿಬಾಬಾರವರ ತೈಲಚಿತ್ರವನ್ನು ಸೃಷ್ಟಿಸಿ ಅತ್ಯಂತ ಹೆಸರುವಾಸಿಯಾದರು.ಇವರು ಪ್ರಪಂಚದ ಅನೇಕ ಸಾಯಿಮಂದಿರಗಳಿಗೆ ಸಾಯಿಬಾಬಾರವರ ಸುಂದರ ತೈಲಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ಅಷ್ಟೇ ಆಲ್ಲದೇ, ಸುಪ್ರಸಿದ್ದ ಪುಸ್ತಕಗಳಾದ ಸಾಯಿ ಸ್ನೇಹ, ಫಕೀರ್ ಕೀ ಪಾಠಶಾಲಾ, ಸಾಯಿ ಕೀ ಔರ್ ಮೇರಾ ಪೆಹಲ ಕದಂ ಮತ್ತು ಇನ್ನು ಹಲವಾರು ಪುಸ್ತಕಗಳಿಗೆ  ತೈಲಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ.

ಇವರು ಶ್ವೇತ ಎಂಬುವರನ್ನು ವಿವಾಹವಾಗಿದ್ದಾರೆ ಮತ್ತು ದಕ್ಷ ಮತ್ತು ನವಂಶ್ ಅಗ್ನಿಹೋತ್ರಿ ಎಂಬ ಎರಡು ಸುಂದರ ಮಕ್ಕಳನ್ನು ಪಡೆದಿದ್ದಾರೆ.

ಇಂದು ನವನೀತ್ ಅಗ್ನಿಹೋತ್ರಿಯವರು ರಚಿಸಿರುವ ಸಾಯಿಬಾಬಾರವರ ಚಿತ್ರಗಳನ್ನು ಪ್ರಪಂಚದ 118ಕ್ಕೂ ಹೆಚ್ಚು ಸಾಯಿಮಂದಿರಗಳಲ್ಲಿ ನಾವು ಕಾಣಬಹುದು. ಇವರು ಭಾರತವಷ್ಟೇ ಆಲ್ಲದೇ ಆಸ್ಟ್ರೇಲಿಯಾ, ಅಮೇರಿಕ, ಇಂಗ್ಲೆಂಡ್, ಸಿಂಗಪೂರ್, ಕೆನಡಾ, ದುಬೈ, ಅಬುದಾಬಿ ಮತ್ತು ಇನ್ನು ಹಲವು ದೇಶಗಳಲ್ಲಿ ತಮ್ಮ ತೈಲ ಚಿತ್ರಗಳ ಪ್ರದರ್ಶನವನ್ನು ಮಾಡಿ ಹೆಸರು ಮಾಡಿದ್ದಾರೆ.

ನವನೀತ್ ಅಗ್ನಿಹೋತ್ರಿಯವರು ಶಿರಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪ್ರಸಾದಾಲಯಕ್ಕೆ ತಾವು ರಚಿಸಿರುವ ಒಂದು ಸುಂದರವಾದ ಸಾಯಿಬಾಬಾರವರ ಚಿತ್ರವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆ ತೈಲಚಿತ್ರವನ್ನು ಭಾರತದ ಈಗಿನ ರಾಷ್ಟ್ರಪತಿಗಳಾದ ಶ್ರೀಮತಿ.ಪ್ರತಿಭಾ ಪಾಟೀಲ್ ರವರು ಅನಾವರಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಪ್ರಪಂಚದಾದ್ಯಂತ ಸಂಚರಿಸಿ ಸಾಯಿಯವರ ತತ್ವಗಳನ್ನು ಆಧರಿಸಿದ ತೈಲಚಿತ್ರಗಳ ಪ್ರದರ್ಶನ ನೀಡುವ ಇಚ್ಛೆ ಹೊಂದಿದ್ದಾರೆ.

ಇವರ ಪ್ರತಿಭೆ ಇಷ್ಟಕ್ಕೆ ಸೀಮಿತವಾಗಿಲ್ಲ. ಇವರು ಜುಗಲ್ ಬಂದಿ ಕಾರ್ಯಕ್ರಮಗಳನ್ನು ಭಾರತದ ಹೆಸರಾಂತ ಸಾಯಿಭಜನ ಗಾಯಕರಾದ ಶ್ರೀ. ಮನಹರ್ ಉದಾಸ್, ಶ್ರೀ.ಪ್ರಮೋದ್ ಮೇದಿ, ಅನಿಲ್ ಹನ್ಸಾಲ್ ಮತ್ತಿತರರೊಡನೆ ಯಶಸ್ವಿಯಾಗಿ ನಡೆಸಿದ್ದಾರೆ. ಇವರು ಪ್ರಥಮ ಜುಗಲ್ ಬಂದಿ ಕಾರ್ಯಕ್ರಮವನ್ನು ದೆಹಲಿಯ ಕಾಮಿನಿ ಸಭಾಂಗಣದಲ್ಲಿ ನಡೆಸಿ ಅದರಿಂದ ಬಂದ ಹಣವನ್ನು ಪ್ರಯಾಸ್ ಎಂಬ ಅನಾಥ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಗೆ ದಾನವಾಗಿ ನೀಡಿದರು. ತಮ್ಮ ಎರಡನೇ ಜುಗಲ್ ಬಂದಿ ಕಾರ್ಯಕ್ರಮವನ್ನು ತಮ್ಮದೇ ಆದ ಸಂಗೀತ ಸಂಸ್ಥೆಯಾದ "ಸಾಯಿ ಗ್ಲೋರಿ ಪ್ರೊಡಕ್ಷನ್" ರವರು ಪ್ರಥಮವಾಗಿ ಬಿಡುಗಡೆ ಮಾಡಿದ "ಸಾಯಿ ಮಾ" ಎಂಬ ಧ್ವನಿಸುರುಳಿಯ ಬಿಡುಗಡೆ ಸಮಾರಂಭದಲ್ಲಿ ನೀಡಿ ಅದರಿಂದ ಬಂದ ಹಣವನ್ನು ಮುಂಬೈನ ಉಗ್ರರ ದಾಳಿಗೆ ಬಲಿಯಾದ ಬ್ಲಾಕ್ ಕ್ಯಾಟ್ ಕಮಾಂಡೋ ಹವಾಲ್ದಾರ್ ಶ್ರೀ.ಗಜೇಂದ್ರ ಸಿಂಗ್ ರವರ ಮನೆಯವರಿಗೆ ನೀಡಿದರು. ಇವರ ಕೈಗಳು ಜುಗಲ್ ಬಂದಿ ನಡೆಯುವಾಗ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುತ್ತವೆ ಮತ್ತು ನೆರೆದ ಎಲ್ಲಾ ಸಾಯಿಭಕ್ತರು ಆನಂದಪಡುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಇವರು ಶ್ರೀ.ಅಮಾನ್ ಮೈನ್ಗಿ ಎಂಬುವರ ಜೊತೆ ಸೇರಿ "ಸಾಯಿ ಗ್ಲೋರಿ ಪ್ರೊಡಕ್ಷನ್" ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿಯಲ್ಲಿ ಸಾಯಿ  ಭಕ್ತಿಗೀತೆಗಳ ಪ್ರಥಮ ಧ್ವನಿಸುರಳಿಯಾದ "ಸಾಯಿ ಮಾ" ಹೊರತಂದಿದ್ದು ಆ ಧ್ವನಿಸುರುಳಿಯ ಹೊರಭಾಗದಲ್ಲಿ ಅವರೇ ಸ್ವತಃ ರಚಿಸಿರುವ ಸಾಯಿಬಾಬಾರವರ ತೊಡೆಯ ಮೇಲೆ ಮಗುವು ಮಲಗಿರುವಂತೆ ಕಾಣುವ ಸುಂದರ ಚಿತ್ರವನ್ನು ನೋಡಬಹುದು. ಈ ಧ್ವನಿಸುರಳಿಯನ್ನು ಇವರ ತಂದೆಯ ಸ್ಮರಣಾರ್ಥವಾಗಿ ಇವರು ಬಿಡುಗಡೆ ಮಾಡಿದ್ದು ಇವರಿಗೆ ಈ ಸುಂದರ ಚಿತ್ರವನ್ನು ನೋಡಿದರೆ ತಮ್ಮ ತಂದೆಯ ತೊಡೆಯ ಮೇಲೆ ತಾವು ಮಲಗಿರುವಂತೆ ಮತ್ತು ತಮ್ಮನ್ನು ತಮ್ಮ ತಂದೆಯವರು ಹಿಡಿದುಕೊಂದಿರುವಂತೆ ಅನಿಸುತ್ತದೆ ಎಂದು ಹೇಳುತ್ತಾರೆ. ಈ ಧ್ವನಿಸುರಳಿಯ ಅಭೂತಪೂರ್ವ ಯಶಸ್ಸು ಇವರನ್ನು ಸಂಗೀತ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ದಿದೆ ಎಂಬುದರಲ್ಲಿ ಸಂಶಯವಿಲ್ಲ. ಇವರ ಸೃಜನಶೀಲತೆ ಇವರು ತಮ್ಮ ಸಂಗೀತ ಸಂಸ್ಥೆಗೆ ನೂತನ ವಿಚಾರಧಾರೆಯನ್ನು ಹರಿಸುವಂತೆ ಮಾಡುತ್ತದೆ. 

ಇವರನ್ನು ಸಾಯಿಭಕ್ತರು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು: 

ಶ್ರೀ.ನವನೀತ್ ಅಗ್ನಿಹೋತ್ರಿ
ನವಸಾಯಿ ಕ್ರಿಯೇಷನ್ಸ್
ಎ-3, ಐಡಿಪಿಎಲ್ ವಸತಿ ಸಂಕೀರ್ಣ
ಪೀತಾಂಪುರ, ನವದೆಹಲಿ- 110 034.
ದೂರವಾಣಿ : 011-27018172 / 011-65580083 / 09891116988 / 09212146988
ಈ ಮೇಲ್ :  info@navneetagnihotri.com
               query@navneetagnihotri.com

ಅಂತರ್ಜಾಲ : http://www.navneetagnihotri.com 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment