ಸಾಯಿ ಮಹಾಭಕ್ತ - ಬಾಳಾಸಾಹೇಬ್ ಮಿರೀಕರ್ - ಕೃಪೆ : ಸಾಯಿಅಮೃತಧಾರಾ.ಕಾಂ
ಬಾಳಾಸಾಹೇಬ್ ಮಿರೀಕರ್
ಬಾಳಾಸಾಹೇಬ್ ಮಿರೀಕರ್ ರವರು ಸರ್ದಾರ್ ಕಾಕಾ ಸಾಹೇಬ್ ಮಿರೀಕರ್ ರವರ ಪುತ್ರರು. ಇವರು ಕೋಪರ್ಗಾವ್ ನ ಮಾಮಲ್ತೆದಾರರಾಗಿದ್ದರು. ಇವರು ಒಮ್ಮೆ ಚಿತಳಿಗೆ ಪ್ರಯಾಣ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಇವರು ಸಾಯಿಬಾಬಾರವರನ್ನು ಕಾಣಲು ಶಿರಡಿಗೆ ಬಂದರು. ಇವರು ದ್ವಾರಕಾಮಾಯಿಗೆ ಬಂದು ಸಾಯಿಯವರಿಗೆ ನಮಸ್ಕರಿಸಿದಾಗ ಸಾಯಿಬಾಬಾರವರು ಇವರ ಆರೋಗ್ಯ ಮತ್ತು ಮನೆಯ ವಿಷಯಗಳನ್ನು ಎಂದಿನಂತೆ ಪ್ರಶ್ನಿಸಿದರು. ಮಾತಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಾಯಿಬಾಬಾರವರು "ನಿನಗೆ ದ್ವಾರಕಾಮಾಯಿ ಗೊತ್ತಿದೆಯೇ?" ಎಂದು ಕೇಳಿದರು. ಬಾಳಾಸಾಹೇಬ್ ಮಿರೀಕರ್ ರವರಿಗೆ ಬಾಬಾರವರು ಏನು ಹೇಳುತ್ತಿದ್ದಾರೆಂದು ಅರ್ಥವಾಗದೆ ಸುಮ್ಮನೆ ಕುಳಿತಿದ್ದರು. ಸಾಯಿಬಾಬಾರವರು ಮುಂದುವರೆದು "ನೀನು ಈಗ ಕುಳಿತಿರುವುದೇ ದ್ವಾರಕಾಮಾಯಿ. ಇವಳು ತನ್ನ ತೊಡೆಯ ಮೇಲೆ ಕುಳಿತ ಮಕ್ಕಳ ಎಲ್ಲಾ ತೊಂದರೆಗಳನ್ನು ಮತ್ತು ಆತಂಕಗಳನ್ನು ದೂರ ಮಾಡುತ್ತಾಳೆ. ಈ ಮಸೀದಿಮಾಯಿಯು ತುಂಬಾ ದಯಾಮಯಳು. ಇವಳು ತನ್ನ ಭಕ್ತರ ತೊಂದರೆಗಳನ್ನೆಲ್ಲ ದೂರ ಮಾಡುವಳು. ಒಮ್ಮೆ ಇವಳ ತೊಡೆಯ ಮೇಲೆ ಕುಳಿತರೆ ಸಾಕು, ಭಕ್ತರ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಯಾವ ಭಕ್ತರು ಇವಳ ನೆರಳಿನಲ್ಲಿ ಆಶ್ರಯ ಪಡೆಯುತ್ತಾರೋ ಅವರು ಬ್ರಹ್ಮಾನಂದವನ್ನು ಹೊಂದುತ್ತಾರೆ" ಎಂದರು. ನಂತರ ಬಾಬಾರವರು ಬಾಳಾಸಾಹೇಬ್ ಮಿರೀಕರ್ ರವರಿಗೆ ಉಧಿಯನ್ನು ನೀಡಿ ತಮ್ಮ ಹಸ್ತವನ್ನು ಇವರ ತಲೆಯ ಮೇಲೆ ಇರಿಸಿ ಆಶೀರ್ವದಿಸಿದರು. ಇನ್ನೇನು ಬಾಳಾಸಾಹೇಬ್ ಮಿರೀಕರ್ ರವರು ಹೊರಡಬೇಕೆಂದುಕೊಂಡಿರುವಾಗ ಪುನಃ ಸಾಯಿಬಾಬಾರವರು "ಲಂಬು ಬಾವು ನಿನಗೆ ಗೊತ್ತಿದೆಯೇ?" ಎಂದು ತಮ್ಮ ಎಡಗೈಯನ್ನು ಸರ್ಪದಂತೆ ಅಲ್ಲಾಡಿಸುತ್ತಾ "ಇವನು ಬಹಳ ಭಯಂಕರ, ಆದರೆ ದ್ವಾರಕಾಮಯಿ ತನ್ನ ಮಕ್ಕಳನ್ನು ಕಾಪಾಡುತ್ತಿರುವಾಗ, ಇವನು ಏನು ಮಾಡಬಲ್ಲನು" ಎಂದು ಹೇಳಿದರು. ಆ ಸಮಯದಲ್ಲಿ ಮಸೀದಿಯಲ್ಲಿ ನೆರೆದಿದ್ದ ಎಲ್ಲರಿಗೂ ಸಾಯಿಯವರು ಏನು ಹೇಳುತ್ತಿದ್ದಾರೆಂದು ಅರ್ಥವಾಗಲಿಲ್ಲ. ಸಾಯಿಯವರನ್ನು ಕೇಳುವ ಧೈರ್ಯ ಅಲ್ಲಿ ನೆರೆದಿದ್ದ ಯಾರಿಗೂ ಇರಲಿಲ್ಲ.
ನಂತರ ಬಾಳಾಸಾಹೇಬ್ ಮಿರೀಕರ್ ರವರು ಮಸೀದಿಯನ್ನು ಬಿಟ್ಟು ಶ್ಯಾಮರವರೊಂದಿಗೆ ಹೊರಟರು. ಬಾಬಾರವರು ಶ್ಯಾಮರವರನ್ನು ಹಿಂದಕ್ಕೆ ಕರೆದು ಬಾಳಾಸಾಹೇಬ್ ಮಿರೀಕರ್ ರವರೊಡನೆ ಚಿತಳಿಗೆ ಹೋಗಬೇಕೆಂದು ಹೇಳಿದರು. ಶ್ಯಾಮರವರು ಇದನ್ನು ಬಾಳಾಸಾಹೇಬ್ ಮಿರೀಕರ್ ರವರಿಗೆ ತಿಳಿಸಿ ತಾವು ಚಿತಳಿಗೆ ಬರುವುದಾಗಿ ಹೇಳಿದರು. ಆದರೆ ಬಾಳಾಸಾಹೇಬ್ ಮಿರೀಕರ್ ರವರು ಶ್ಯಾಮ ತಮ್ಮ ಜೊತೆ ಬಂದರೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಶ್ಯಾಮರವರು ಪುನಃ ವಾಪಸಾಗಿ ಬಾಳಾಸಾಹೇಬ್ ಮಿರೀಕರ್ ರವರು ಹೇಳಿದ್ದನ್ನು ಬಾಬಾರವರಿಗೆ ತಿಳಿಸಿದರು. ಬಾಬಾರವರು "ಆಗಲಿ, ನೀನು ಹೋಗುವುದು ಬೇಡ. ನಾವು ಯಾವಾಗಲೂ ಒಳ್ಳೆಯದನ್ನೇ ಬಯಸಬೇಕು ಮತ್ತು ಒಳ್ಳೆಯದನ್ನೇ ಮಾಡಬೇಕು. ಏನಾಗಬೇಕೋ ಅದು ಆಗಿಯೇ ತೀರುತ್ತದೆ" ಎಂದರು. ಈ ಮಧ್ಯೆ ಬಾಳಾಸಾಹೇಬ್ ಮಿರೀಕರ್ ರವರು ಮತ್ತೊಮ್ಮೆ ಯೋಚಿಸಿ ಶ್ಯಾಮರವರು ತಮ್ಮ ಜೊತೆ ಬರಬಹುದೆಂದು ತಿಳಿಸಿದರು. ಶ್ಯಾಮರವರು ಪುನಃ ಬಾಬಾರವರ ಬಳಿಗೆ ಹೋಗಿ ಅವರ ಅಪ್ಪಣೆ ಪಡೆದು ಬಾಳಾಸಾಹೇಬ್ ಮಿರೀಕರ್ ರವರೊಡನೆ ಚಿತಳಿಗೆ ಪ್ರಯಾಣ ಬೆಳೆಸಿದರು. ರಾತ್ರಿ 9 ಘಂಟೆಗೆ ಚಿತಳಿ ತಲುಪಿದರು. ಅಲ್ಲಿನ ಮಾರುತಿ ದೇವಸ್ಥಾನದಲ್ಲಿ ತಂಗಿದರು. ಇನ್ನು ದೇವಾಲಯದ ಕಚೇರಿಯ ಸಿಬ್ಬಂದಿ ಬಂದಿರಲಿಲ್ಲ. ಆದ್ದರಿಂದ ಇಬ್ಬರು ಮಾತಾನಾಡುತ್ತಾ ಕುಳಿತಿದ್ದರು. ಬಾಳಾಸಾಹೇಬ್ ಮಿರೀಕರ್ ರವರು ಒಂದು ಚಾಪೆಯ ಮೇಲೆ ಕುಳಿತು ಪತ್ರಿಕೆಯನ್ನು ಓದುತ್ತಿದ್ದರು. ಆಗ ಇವರು ಉಟ್ಟುಕೊಂಡಿದ್ದ ಪಂಚೆಯ ಮೇಲೆ ಯಾವ ಮಾಯದಲ್ಲೋ ಏನೋ ಒಂದು ಭಯಂಕರ ಸರ್ಪವು ಬಂದು ಕುಳಿತುಕೊಂಡಿತ್ತು. ಅದು ಮೆಲ್ಲಗೆ ಸದ್ದು ಮಾಡುತ್ತಾ ಅತ್ತಿತ್ತ ಚಲಿಸತೊಡಗಿತು. ಈ ಶಬ್ದವು ಅಲ್ಲಿದ್ದ ಜವಾನನ ಕಿವಿಗೆ ಬಿದ್ದು ಅವನು ಓಡಿ ಹೋಗಿ ಒಂದು ಲಾಂದ್ರವನ್ನು ತಂದನು. ದೀಪದ ಬೆಳಕಿನಲ್ಲಿ ಇವರ ತೊಡೆಯ ಮೇಲಿದ್ದ ಹಾವನ್ನು ನೋಡಿ "ಹಾವು, ಹಾವು" ಎಂದು ಜೋರಾಗಿ ಕಿರುಚಿಕೊಂಡನು. ಬಾಳಾಸಾಹೇಬ್ ಮಿರೀಕರ್ ರವರು ಭಯದಿಂದ ನಡುಗಲಾರಂಭಿಸಿದರು. ಶ್ಯಾಮರವರಿಗೂ ಕೂಡ ಆಶ್ಚರ್ಯವಾಯಿತು. ಕೂಡಲೇ ಶ್ಯಾಮ ಮತ್ತು ಅಲ್ಲಿದ್ದ ಇತರರು ಸದ್ದು ಮಾಡದೇ ಕೋಲನ್ನು ತೆಗೆದುಕೊಂಡು ಬಂದು ಸರ್ಪವನ್ನು ಹೊಡೆಯಲು ಸಿದ್ದರಾದರು. ಸರ್ಪವು ಬಾಳಾಸಾಹೇಬ್ ಮಿರೀಕರ್ ರವರ ತೊಡೆಯನ್ನು ಬಿಟ್ಟು ಕೆಳಗೆ ಇಳಿಯಿತು. ಕೂಡಲೇ ಅಲ್ಲಿದ್ದ ಎಲ್ಲರು ಸೇರಿ ಸರ್ಪವನ್ನು ಕೊಂದು ಹಾಕಿದರು.
ಹೀಗೆ ಸಾಯಿಬಾಬಾರವರು ಬಾಳಾಸಾಹೇಬ್ ಮಿರೀಕರ್ ರವರಿಗೆ ಮೊದಲೇ ಎಚ್ಚರಿಕೆ ನೀಡಿ ಮುಂದೆ ಆಗಬಹುದಾದ ಅಪಾಯದ ಮುನ್ಸೂಚನೆ ನೀಡಿದ್ದೇ ಆಲ್ಲದೇ ಅವರನ್ನು ಅಪಾಯದಿಂದ ಪಾರು ಮಾಡಿದರು. ಇದರಿಂದ ಬಾಳಾಸಾಹೇಬ್ ಮಿರೀಕರ್ ರವರಿಗೆ ಬಾಬಾರವರಲ್ಲಿದ್ದ ಭಕ್ತಿ ನೂರ್ಮಡಿಯಾಯಿತು.
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment