Saturday, November 6, 2010

ಸಾಯಿ ಮಹಾ ಭಕ್ತ - ನಾನಾವಲ್ಲಿ - ಕೃಪೆ: ಸಾಯಿ ಅಮೃತಧಾರಾ.ಕಾಂ 



ನಾನಾವಲ್ಲಿಯವರ ಸಮಾಧಿ

ನಾನಾವಲ್ಲಿಯವರು ಒಬ್ಬ ವಿಶೇಷ ಸಾಯಿಬಾಬಾ ಭಕ್ತರಾಗಿದ್ದರು. ಇವರು ತಂತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಇವರು ತಮ್ಮನ್ನು ತಾವೇ "ಸಾಯಿಬಾಬಾರವರ ಸೈನ್ಯದ ದಂಡಾಧಿಕಾರಿ" ಎಂದು ಕರೆದು ಕೊಳ್ಳುತ್ತಿದ್ದರು. ಇವರು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿ ಶಿರಡಿಯ ಜನರು ಇವರನ್ನು ಕೆಟ್ಟ ದೃಷ್ಟಿಯಿಂದ ನೋಡುವಂತೆ ಮಾಡುತ್ತಿತ್ತು. ಸಾಯಿಬಾಬಾರವರ ಜೀವನದಂತೆ ಇವರ ಹಿಂದಿನ ಜೀವನವು ಕೂಡ ರಹಸ್ಯಮಾಯವಾಗಿತ್ತು. ಇವರು ತಮ್ಮ ಜೇಬಿನಲ್ಲಿ ಹಾವುಗಳನ್ನು ಮತ್ತು ನಾಲಗೆಯಲ್ಲಿ ಚೇಳುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದುದೇ ಅಲ್ಲದೆ ಶಿರಡಿಯ ಕೆಲವು ಜನರನ್ನು ಕಂಡ ಕೂಡಲೇ ಯಾವುದೇ ಪ್ರಚೋದನೆ ಇಲ್ಲದೆ ಅವರ ಮೇಲೆರಗಿ ಅವರನ್ನು ಚೆನ್ನಾಗಿ ಥಳಿಸುತ್ತಿದ್ದರು. ಇದರಿಂದ ಶಿರಡಿಯ ಜನರಿಗೆ ನಾನಾವಲ್ಲಿ ಎಂದರೆ ಭಯವಾಗುತ್ತಿತ್ತು. ಇನ್ನು ಕೆಲವು ಶಿರಡಿಯ ಜನರು ಇವರನ್ನು ಮಹಾತ್ಮನೆಂದು ತಿಳಿದಿದ್ದರು. ಇವರಿಗೆ ಸಾಯಿಯಲ್ಲಿ ಅಪರಿಮಿತವಾದ ಭಕ್ತಿ ಇದ್ದಿತು. ನಾನಾವಲ್ಲಿಯವರ ರೂಪ ನೋಡುವುದಕ್ಕೆ ಭಯವನ್ನು ಹುಟ್ಟಿಸುತ್ತಿತ್ತು. ಇವರು ಕೆಲವೊಮ್ಮೆ ನಗ್ನರಾಗಿ ಓಡಾಡುತ್ತಿದ್ದರು. ಮತ್ತೆ ಕೆಲವೊಮ್ಮೆ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು. ನಾನಾವಲ್ಲಿಯವರ ಜೀವನವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ ಅವರೊಬ್ಬ ಅತ್ಯಂತ ಶ್ರದ್ದೆ ಭಕ್ತಿಯಿಂದ ಕೂಡಿದ ಹಾಗೂ ವೈರಾಗ್ಯವೇ ಮುರ್ತಿವೆತ್ತಂತೆ ಇರುವ ವ್ಯಕ್ತಿಯಾಗಿ ಕಾಣುತ್ತಾರೆ. ಸಾಯಿಬಾಬಾರವರಂತೆ ನಾನಾವಲ್ಲಿಯವರ ಹಿಂದಿನ ವಿಷಯಗಳ ಬಗ್ಗೆ ಕೂಡ ಹೆಚ್ಚಿಗೆ ತಿಳಿದುಬಂದಿಲ್ಲ. ಕೆಲವರು ಇವರನ್ನು ಬ್ರಾಹ್ಮಣರೆಂದು, ಮತ್ತೆ ಕೆಲವರು ಇವರನ್ನು ಮುಸಲ್ಮಾನರೆಂದು ವಾದವನ್ನು ಮಂಡಿಸುತ್ತಾರೆ. ಕೆಲವೊಮ್ಮೆ ನಾನವಲ್ಲಿ ಮುಸಲ್ಮಾನ್ ಫಕೀರರ ಹಾಗೆ ಬಟ್ಟೆಯನ್ನು ಧರಿಸಿದರೆ ಇನ್ನು ಕೆಲವೊಮ್ಮೆ ಹಿಂದೂ ಸಿದ್ಧರ ಹಾಗೆ ಬಟ್ಟೆಯನ್ನು ಧರಿಸುತ್ತಿದ್ದರು. ಸಾಯಿಬಾಬಾರವರಂತೆ ನಾನಾವಲ್ಲಿಯವರ ಧಾರ್ಮಿಕ ರೀತಿ ನೀತಿಗಳು ಇತರರಿಗಿಂತ ಬೇರೆಯಾಗಿದ್ದು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ನಾನಾವಲ್ಲಿ ಬಾಲಕನಾಗಿದ್ದಾಗ ಒಂದು ಮುಸ್ಲಿಂ ದರ್ಗಾದಲ್ಲಿದ್ದು ದಿವ್ಯ ಪ್ರೇರೇಪಣೆ ಮೇರೆಗೆ ಸಾಯಿಬಾಬಾರವರಲ್ಲಿಗೆ ಬಂದರೆಂದು ಶಿರಡಿಯ ಎಲ್ಲ ಜನರು ಒಪ್ಪುತ್ತಾರೆ. ನಾನಾವಲ್ಲಿಯವರು ಯಾವಾಗ ಶಿರಡಿಗೆ ಬಂದರೆಂದು ಯಾರಿಗೂ ತಿಳಿದಿಲ್ಲ. ಆದರೆ ಸಾಯಿಬಾಬಾರವರು ಮದುವೆ ದಿಬ್ಬಣದ ಜೊತೆಯಲ್ಲಿ ಬರುವುದಕ್ಕೆ ಮುಂಚೆಯೇ ನಾನಾವಲ್ಲಿ ಶಿರಡಿಯಲ್ಲಿದ್ದರೆಂದು ಕೆಲವು ಜನರ ಅಭಿಮತವಾಗಿದೆ. ಸಾಯಿಬಾಬಾರವರನ್ನು ನೋಡಿದ ಕೂಡಲೇ ನಾನಾವಲ್ಲಿ "ಓ ಮಾಮಾ ಬಂದಿರ" ಎಂದು ಸಂಬೋಧಿಸಿದರೆಂದು ತಿಳಿದು ಬಂದಿದೆ. ಅಲ್ಲಿಂದ ಮುಂದೆ ನಾನಾವಲ್ಲಿಯವರು ಸಾಯಿಯವರನ್ನು "ಮಾಮಾ" ಎಂದೇ ಕರೆಯುತ್ತಿದ್ದರು.

ನಾನಾವಲ್ಲಿಯವರು ಬಾಬಾರವರನ್ನು ಕೆಲವೊಮ್ಮೆ ನೋಡುತ್ತಿದ್ದರು ಹಾಗೂ ದೂರದಿಂದಲೇ ದರ್ಶನ ಮಾಡುತ್ತಿದ್ದರು ಹಾಗೂ ಎಲ್ಲ ಶಿರಡಿ ಜನರ ಭಕ್ತಿ, ಪ್ರೀತಿ ಹಾಗೂ ವೈಭವಗಳು ಸಾಯಿಯವರಿಗೆ ಸಲ್ಲಬೇಕೆಂದು ಇಚ್ಚಿಸುತ್ತಿದ್ದರು. ಅವರು "ನನ್ನ ಮಾಮಾನನ್ನು ರಕ್ಷಿಸುವುದೇ ನನ್ನ ಆದ್ಯ ಕರ್ತವ್ಯ" ಎಂದು ಯಾವಾಗಲು ಹೇಳುತ್ತಿದ್ದರು. ನಾನಾವಲ್ಲಿಯವರು ಎಂದಿಗೂ ಅನೀತಿಯನ್ನು ಮತ್ತು ತೋರಿಕೆಯನ್ನು ಸಹಿಸುತ್ತಿರಲಿಲ್ಲ. ಅವರಿಗೆ ಭಕ್ತರ ಅಂತರಂಗ ಚೆನ್ನಾಗಿ ತಿಳಿಯುತ್ತಿತ್ತು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು. ಅವರು ಕೆಲವೊಮ್ಮೆ ದ್ವಾರಕಾಮಾಯಿಯ ಹೊರಗಡೆ ಕಾದು ನಿಂತಿದ್ದು ಕೆಲವು ಜನರಿಗೆ ಥಳಿಸುತ್ತಿದ್ದರೆಂದು ತಿಳಿದುಬಂದಿದೆ. ಆ ಜನರು ಹೋಗಿ ಸಾಯಿಬಾಬಾರವರಿಗೆ ಈ ವಿಷಯವನ್ನು ಹೇಳಿದರೆ ಸಾಯಿಯವರು ನಾನಾವಲ್ಲಿಯವರನ್ನು ಬಯ್ಯದೆ ಜನರಿಗೆ ಹುಷಾರಾಗಿರಲು ಹೇಳುತ್ತಿದ್ದರೆಂದು ತಿಳಿದುಬರುತ್ತದೆ. ಎಚ್.ವಿ.ಸಾಥೆ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು ಹಾಗೂ ಬ್ರಿಟಿಷ್ ಸರ್ಕಾರದ ಉನ್ನತ ಅಧಿಕಾರಿಯಾಗಿದ್ದರು. ಯಾವುದೋ ತಿಳಿಯದ ಕಾರಣಕ್ಕೆ ನಾನಾವಲ್ಲಿ ಸಾಥೆಯವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು. ಚಾವಡಿ ಉತ್ಸವದ ಸಂದರ್ಭದಲ್ಲಿ ಸಾಥೆಯವರು ಬಾಬಾರವರ ಮೆರವಣಿಗೆ ಮುಂದೆ ರಾಜದಂಡವನ್ನು ಹಿಡಿದುಕೊಂಡು ಹೋಗುವ ವಾಡಿಕೆ ಇತ್ತು. ಆ ರೀತಿ ನಡೆಯುವ ಒಂದು ಸಂದರ್ಭದಲ್ಲಿ ನಾನಾವಲ್ಲಿ ಸಾಥೆಯವರ ಹಿಂದಿನಿಂದ ಅವರಿಗೆ ತಿಳಿಯದಂತೆ ಬಂದು ಗಾಜಿನ ಚೂರಿನಿಂದ ಥಳಿಸಿದನು. ಮತ್ತೊಂದು ಬಾರಿ ಸಾಥೆಯವರು ಇನ್ನೇನು ಮಸೀದಿಗೆ ಹೊರಡಲು ಅನುವಾಗುತ್ತಿದ್ದಾಗ, ಸಾಥೆಯವರ ಮಾವನವರು ಬಂದು ನಾನಾವಲ್ಲಿ ದ್ವಾರಕಾಮಾಯಿಯ ಬಳಿ ಮಚ್ಚನ್ನು ಹಿಡಿದುಕೊಂಡು ಅವರನ್ನು ಕೊಲ್ಲಲು ಹೊಂಚು ಹಾಕುತ್ತಿರುವರೆಂದು ಹೇಳಿದರು. ಅದರಿಂದ ಭೀತರಾದ ಸಾಥೆಯವರು 1916 ರಲ್ಲಿ ಸಾಯಿಬಾಬಾರವರ ಅನುಮತಿಯನ್ನು ಸಹ ಪಡೆಯದೇ ಶಿರಡಿಯನ್ನು ಬಿಟ್ಟು ಹೊರಟು ಹೋದರು ಮತ್ತು ಪುನಃ ಶಿರಡಿಗೆ ಸಾಯಿಬಾಬಾರವರು ಜೀವಿಸಿರುವವರೆಗೂ ಬರಲೇ ಇಲ್ಲ.

ಸಾಯಿಬಾಬಾರವರ ಕೀರ್ತಿ ಹರಡುತ್ತಿದಂತೆ ಶಿರಡಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು ಮತ್ತು ಸಾಯಿಯವರನ್ನು ಅತೀವ ಶ್ರದ್ದೆ ಹಾಗೂ ಭಕ್ತಿಗಳಿಂದ ಜನರು ಪೂಜಿಸಹತ್ತಿದರು. ಒಂದು ದಿನ ಮಸೀದಿಯ ತುಂಬಾ ಜನರೆಲ್ಲಾ ನರೆದಿರುವಾಗ ನಾನಾವಲ್ಲಿ ಸೀದಾ ಸಾಯಿಬಾಬಾರವರು ಕುಳಿತಿದ್ದ ಬಳಿಗೆ ಬಂದು "ಸಾಯಿಬಾಬಾ, ದಯಮಾಡಿ ನೀವು ಕುಳಿತಿರುವ ಆಸನ ಬಿಟ್ಟು ಏಳಿ. ನಾನು ಅಲ್ಲಿ ಕುಳಿತುಕೊಳ್ಳಬೇಕು" ಎಂದರು. ಸಾಯಿಬಾಬಾರವರು ಸ್ವಲ್ಪವೂ ತಡ ಮಾಡದೆ ಆಸನದಿಂದೆದ್ದು "ದಯಮಾಡಿ ಕುಳಿತುಕೋ" ಎಂದರು. ನಾನಾವಲ್ಲಿ ಅವರ ಆಸನದಲ್ಲಿ ಕುಳಿತುಕೊಂಡರು. ಇದರಿಂದ ಸಾಯಿ ಭಕ್ತರಿಗೆ ಬಹಳ ಕೋಪ ಬಂದಿತು. ಭಕ್ತರು ನಾನಾವಲ್ಲಿಯವರ ಭಂಡತನವನ್ನು ಕಂಡು ಅವರನ್ನು ಆಸನದಿಂದ ಎಳೆದು ಹಾಕಲು ಯೋಚಿಸಿದರು. ಆದರೆ ಸಾಯಿಬಾಬಾರವರ ಪ್ರಶಾಂತ ಹಾಗೂ ಮಂದಸ್ಮಿತ ಮುಖವನ್ನು ಕಂಡು ಸುಮ್ಮನಾದರು. ಸ್ವಲ್ಪ ಸಮಯ ಅಲ್ಲಿ ಕುಳಿತ ನಂತರ ಆಸನದಿಂದೆದ್ದು "ಶಹಭಾಶ್" ಎಂದು ಉದ್ಗರಿಸಿ ನಾನಾವಲ್ಲಿ ಸಾಯಿಯವರಿಗೆ ನಮಸ್ಕರಿಸಿ ಆನಂದದಿಂದ ಸ್ವಲ್ಪ ಸಮಯ ಕುಣಿದಾಡಿ ಹೊರಟು ಹೋದರು. ಕೆಲವರು ನಾನಾವಲ್ಲಿಯವರು ಸಾಯಿಯವರಿಗೆ ಅಹಂ ಇತ್ತೇ ಎಂದು ಪರೀಕ್ಷಿಸಲು ಹೀಗೆ ಮಾಡಿದರೆಂದು ಮತ್ತೆ ಕೆಲವರು ಸಾಯಿಬಾಬಾರವರ ಶುದ್ಧ ವ್ಯಕ್ತಿತ್ವ ಹಾಗೂ ಅವರು ಮೋಹರಹಿತರೆಂದು ಪ್ರಪಂಚಕ್ಕೆ ತಿಳಿಯಪಡಿಸಲು ನಾನಾವಲ್ಲಿ ಹೀಗೆ ಮಾಡಿದರೆಂದು ಹೇಳುತ್ತಾರೆ. ಸಾಯಿಯವರು ಈ ಘಟನೆಯ ಬಗ್ಗೆ ಏನು ಮಾತನಾಡುತ್ತಿರಲಿಲ್ಲ ಹಾಗೂ ಯಾರಿಗೂ ಅದನ್ನು ಕೇಳುವ ಧೈರ್ಯವೂ ಇರಲಿಲ್ಲ. ನಾನಾವಲ್ಲಿಗೆ ಸಾಯಿಯವರ ಭಾಂಧವ್ಯ ಎಷ್ಟಿತ್ತೆಂದರೆ "ಸಾಯಿಯವರ ನಂತರ ನಾನೇ ಅವರ ಉತ್ತರಾಧಿಕಾರಿ" ಎಂದು ಹೇಳುತ್ತಿದ್ದರು. ಅದು ನಿಜವೆಂದು ತಿಳಿದು ಬರುತ್ತದೆ. ಯಾಕೆಂದರೆ ಸಾಯಿಯವರ ಮರಣದ ವಾರ್ತೆ ತಿಳಿದ ನಾನಾವಲ್ಲಿ ದ್ವಾರಕಾಮಾಯಿಗೆ ಅಳುತ್ತ ಓಡಿ ಬಂದರು ಹಾಗೂ "ಮಾಮಾ, ನಿಮ್ಮನ್ನು ಬಿಟ್ಟು ನಾನು ಹೇಗೆ ಬದುಕಿರಲಿ? ನಾನು ನಿಮ್ಮೊಡನೆ ಬರುತ್ತೇನೆ" ಎಂದು ಹೇಳುತ್ತಾ ಹನುಮಾನ್ ಮಂದಿರಕ್ಕೆ ಹೋಗಿ ಅಲ್ಲಿ ಆಹಾರವನ್ನು ಕೂಡ ಸೇವಿಸದೆ ಅಳುತ್ತ ಕುಳಿತರು ಮತ್ತು ಸಾಯಿಯವರ ಮರಣದ ನಂತರ ಸರಿಯಾಗಿ ಹದಿಮೂರನೇ ದಿನ ತಮ್ಮ ದೇಹತ್ಯಾಗ ಮಾಡಿದರು. ಸಾಯಿಬಾಬಾ ಸಂಸ್ಥಾನದವರು ನಾನವಲ್ಲಿಯ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment