ಮಾಧವ ರಾವ್ ದೇಶಪಾಂಡೆ ಆಲಿಯಾಸ್ ಶ್ಯಾಮ ಅವರು ಸಾಯಿಬಾಬಾರವರ ಅತ್ಯಂತ ನಿಕಟವರ್ತಿ ಹಾಗೂ ಪ್ರೀತಿಪಾತ್ರರಾದ ಭಕ್ತರಾಗಿದ್ದರು. ಶ್ಯಾಮರವರು ಸಾಯಿಬಾಬಾರವರ ಆಪ್ತ ಕಾರ್ಯದರ್ಶಿಯಂತೆ ಕಾರ್ಯ ನಿರ್ವಹಿಸುತ್ತಿದ್ದರು. ಶಿವನಿಗೆ ನಂದಿಯಿದ್ದಂತೆ ಶ್ಯಾಮಾರವರು ಬಾಬಾರವರಿಗೆ ತುಂಬಾ ಬೇಕಾದವರಾಗಿದ್ದರು. ಬಾಬಾ ಮತ್ತು ಶ್ಯಾಮರವರ ಬಾಂಧವ್ಯವು ಭಗವಾನ್ ಶ್ರೀಕೃಷ್ಣ ಹಾಗೂ ಅರ್ಜುನರ ನಡುವಿನ ಸಂಬಂಧದಂತೆ ಇತ್ತು.
ಇವರು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನವಾದ 6ನೇ ಡಿಸೆಂಬರ್ 1880 ರಂದು ನಿಮೋಣ್ ಗ್ರಾಮದ ಯಜುರ್ವೇದ ಗೋತ್ರಕ್ಕೆ ಸೇರಿದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಾಯಿಯವರು ಇವರ ತಂದೆಗೆ ನಾಲ್ಕನೇಯ ಪತ್ನಿಯಾಗಿದ್ದರು. ಮೊದಲ ಮೂರು ಜನ ಪತ್ನಿಯರಿಗೆ ಮಕ್ಕಳಾಗದಿದ್ದ ಕಾರಣದಿಂದ ಇವರ ತಂದೆಯವರು ಲಕ್ಷ್ಮಣ ಮಾಮ ಕುಲಕರ್ಣಿಯವರ ತಂಗಿಯನ್ನು ವಿವಾಹವಾದರು. ಶ್ಯಾಮರವರು ಇವರ ಕುಟುಂಬದ ಹಿರಿಯ ಮಗನಾಗಿದ್ದರು. ಇವರಿಗೆ ಇಬ್ಬರು ತಮ್ಮಂದಿರಿದ್ದರು. ಒಬ್ಬ ಮಗ ದತ್ತು ಪುತ್ರನಾದ ಕಾಶೀನಾಥ್ ಬಲವಂತ್. ಅವನನ್ನು ಮನೆಯವರು ಗಣೇಶ್ ಶ್ರೀಧರ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಮತ್ತೊಬ್ಬನ ಹೆಸರು ಬಪ್ಪಾಜಿ ಬಲವಂತ್. ಶ್ಯಾಮರವರು ಕೇವಲ 2 ವರ್ಷದವರಾಗಿದ್ದಾಗ ಅವರ ತಂದೆ ತಾಯಿಯೊಂದಿಗೆ ಶಿರಡಿಗೆ 5 ಕಿಲೋಮೀಟರ್ ದೂರವಿರುವ ನಿಮೋಣ್ ನಿಂದ ಶಿರಡಿಗೆ ಬಂದರು ಹಾಗೂ ತಮ್ಮ ಅಂತ್ಯಕಾಲದವರೆಗೆ ಶಿರಡಿಯಲ್ಲಿ ಪ್ರಸ್ತುತ ಇವರ ವಂಶಸ್ಥರು ಇರುವ ಮನೆಯಲ್ಲಿಯೇ ವಾಸಿಸುತ್ತಿದ್ದರು. ನಿಮೋಣ ಗಾವ್ ನಲ್ಲಿ ಇವರ ಪೂರ್ವಜರು ತೆರಿಗೆ ಸಂಗ್ರಹಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಕರೆಗಟ್ಟಲೆ ಭೂಮಿಯನ್ನು ಹೊಂದಿದ್ದರು. ಅವರುಗಳು ನಿರ್ವಹಿಸುತ್ತಿದ್ದ ಕೆಲಸಕ್ಕೆ ಸರ್ಕಾರದಿಂದ ವೇತನ ಸಹ ದೊರೆಯುತ್ತಿತ್ತು. ಶ್ಯಾಮರವರು ಶಿರಡಿಯಲ್ಲಿ ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸಿ ದ್ವಾರಕಾಮಾಯಿಯ ಮಸೀದಿಯ ಪಕ್ಕದಲ್ಲಿದ್ದ ಶಾಲೆಯೊಂದರಲ್ಲಿ ಇವರು ಸಹ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನಂತರದ ದಿನಗಳಲ್ಲಿ ಇವರು ಶಿರಡಿಗೆ ಇಪ್ಪತ್ತು ಮೈಲಿ ದೂರದಲ್ಲಿರುವ ಅಷ್ಟಗಾವ್ ನಲ್ಲಿ ಪಟೇಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿ ಶ್ಯಾಮರವರು ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದ ಶಾಲೆಯನ್ನು ಬಾಬಾರವರ ಪ್ರೀತಿಯ ಅಶ್ವವಾದ ಶ್ಯಾಮಕರ್ಣನಿಗೆ ತಂಗಲು ಲಾಯವನ್ನಾಗಿ ಮಾರ್ಪಡಿಸಲಾಯಿತು. ಬಾಬಾರವರು ಮಾಧವ ರಾವ್ ರನ್ನು ಪ್ರೀತಿಯಿಂದ "ಶ್ಯಾಮ" ಅಥವಾ "ಶಾಮ್ಯಾ" ಎಂದು ಸಂಬೋಧಿಸುತ್ತಿದ್ದರು. ಸಂಸ್ಕೃತ ಭಾಷೆಯಲ್ಲಿ ಶ್ಯಾಮ ಎಂದರೆ ಯಾವುದೇ ಕೊಳಕಿಲ್ಲದ ನಿರ್ಮಲವಾದ ಕಪ್ಪು ಬಣ್ಣ ಎಂಬ ಅರ್ಥ ಬರುತ್ತದೆ. ಇವರು ಪ್ರಾಧ್ಯಾಪಕರಾಗಿದ್ದ ಶಾಲೆಯ ಕೋಟಡಿಯೊಂದರಲ್ಲಿ ಒಂದು ಸಣ್ಣ ಕಿಟಕಿಯಿದ್ದು ಅದರಿಂದ ದ್ವಾರಕಾಮಾಯಿಯ ಮಸೀದಿಯು ಚೆನ್ನಾಗಿ ಕಾಣುತ್ತಿತ್ತು. ಶ್ಯಾಮರವರು ಈ ಕಿಟಕಿಯಿಂದ ಸಾಯಿಬಾಬಾರವರ ಚಲನವಲನಗಳನ್ನು ಗಮನಿಸುತ್ತಿದ್ದರು. ಇದರಿಂದ ಶ್ಯಾಮರವರಿಗೆ ಸಾಯಿಬಾಬಾರವರ ಅಸಾಧಾರಣ ದೈವಿಕ ಶಕ್ತಿಯ ಅರಿವಾಯಿತು ಮತ್ತು ಬಾಬಾರವರಲ್ಲಿ ಅಮಿತವಾದ ಭಕ್ತಿ ಹಾಗೂ ಪ್ರೀತಿ ಉಕ್ಕಿ ಅವರು ಸಾಯಿಬಾಬಾರವರ ಅತ್ಯಂತ ನಿಕಟವರ್ತಿಗಳಾಗಲು ಸಹಾಯವಾಯಿತು.
ಶ್ಯಾಮರವರು ಆಯುರ್ವೇದವನ್ನು ಸಹ ಅಭ್ಯಾಸ ಮಾಡಿ ರೋಗಿಗಳಿಗೆ ಹಾಗೂ ಬಹಳ ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧವನ್ನು ನೀಡುತ್ತಿದ್ದರು. ಮುಂಬೈ ಹಾಗೂ ದೇಶದ ವಿವಿಧ ಭಾಗಗಳಿಂದ ಅನೇಕರು ಶ್ಯಾಮರವರ ಬಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಆಶ್ಚರ್ಯದ ವಿಷಯವೇನೆಂದರೆ ಶ್ಯಾಮರವರು ಆಯುರ್ವೇದ ವಿದ್ಯೆಯನ್ನು ಕಲಿಯಲು ಯಾವ ಶಾಲೆಗೂ ಹೋಗಿರಲಿಲ್ಲ. ಅವರೇ ಸ್ವಂತವಾಗಿ ಹಲವಾರು ಪುಸ್ತಕಗಳನ್ನು ಓದಿ ಆಯುರ್ವೇದ ವಿದ್ಯೆಯನ್ನು ಕಲಿತಿದ್ದರು.ಇವರು ರೋಗಿಗಳಿಗೆ ಯಾವುದೇ ಔಷಧವನ್ನು ನೀಡುವುದಕ್ಕೆ ಮುಂಚೆ ಆ ಔಷಧಗಳಿಗೆ ಸ್ವಲ್ಪ ಉಧಿಯನ್ನು ಬೆರೆಸಿ ನಂತರವಷ್ಟೇ ಅವುಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೇ ಚಿಕಿತ್ಸೆಯನ್ನು ಪ್ರಾರಂಭಿಸುವುದಕ್ಕೆ ಮುಂಚೆ ಬಾಬಾರವರ ನಾಮಸ್ಮರಣೆಯನ್ನು ಮಾಡದೇ ಇರುತ್ತಿರಲಿಲ್ಲ..
ಶ್ಯಾಮರವರು ಬಾಬಾರವರನ್ನು "ದೇವಾ" ಎಂದು ಕರೆಯುತ್ತಿದ್ದರೂ ಸಹ ಹಲವಾರು ಬಾರಿ ಅವರೊಡನೆ ಬಹಳ ಸಲುಗೆಯಿಂದ ವರ್ತಿಸುತ್ತಿದ್ದರು. ಬೇರೆ ಯಾವ ಭಕ್ತರೂ ಬಾಬಾರವರಿಗೆ ಊಟಕೆ ಬಂದು ಕುಳಿತುಕೊಳ್ಳುವಂತೆ ಹೇಳುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಪ್ರತಿದಿನ ಮಧ್ಯಾನ್ಹ ಆರತಿಯಾದ ನಂತರ ಶ್ಯಾಮರವರು ಬಾಬಾರವರಿಗೆ "ದೇವಾ, ಮೇಲೆದ್ದು ನಿಮ್ಮ ಆಸನದಲ್ಲಿ ಹೋಗಿ ಕುಳಿತುಕೊಳ್ಳಿ ಹಾಗೂ ಪ್ರಸಾದವನ್ನು ನೈವೇದ್ಯ ಮಾಡಿ" ಎಂದು ಹೇಳುತ್ತಿದ್ದರು. ಆಗ ಬಾಬಾರವರು ಮಾತು ಮಾತನಾಡದೇ ಕೂಡಲೇ ಎದ್ದು ಹೋಗಿ ನಿಂಬಾರ್ ನ ಬಳಿ ಕುಳಿತುಕೊಳ್ಳುತ್ತಿದ್ದರು.
ಸಾಯಿ ಸಚ್ಚರಿತ್ರೆಯಲ್ಲಿ ಶ್ಯಾಮ ಅವರ ಕುಟೀರದ ವಿಷಯವಾಗಿ ಸಾಯಿಬಾಬಾರವರು ಪ್ರಸ್ತಾಪ ಮಾಡಿರುವುದನ್ನು ನಾವು ನೋಡಬಹುದು. ಒಮ್ಮೆ ಸಾಯಿಬಾಬಾರವರು ಧಾಬೋಲ್ಕರ್ ಅಲಿಯಾಸ್ ಹೇಮಾಡಪಂತರನ್ನು ಶ್ಯಾಮಾರವರ ಮನೆಗೆ ಹೋಗಿ ಅವರಿಂದ 15 ರುಪಾಯಿ ದಕ್ಷಿಣೆಯನ್ನು ತರಲು ಮತ್ತು ಅಲ್ಲೇ ಸ್ವಲ್ಪ ಕಾಲ ಕುಳಿತು ಮಾತನಾಡಿ ಬರುವಂತೆ ತಿಳಿಸಿದರು. ಸಾಯಿಯವರು ಆದೇಶಿಸಿದಂತೆ ಹೇಮಾಡಪಂತರು ಶ್ಯಾಮಾರವರ ಮನೆಗೆ ಬಂದರು. ಆಗ ಶ್ಯಾಮಾರವರು ಪೂಜೆ ಮಾಡಲು ಅಣಿಯಾಗುತ್ತಿದ್ದರು. ಅದ್ದರಿಂದ ಅವರು ಹೇಮಾಡಪಂತರಿಗೆ ಅಲ್ಲಿಯೇ ಕುಳಿತುಕೊಳ್ಳಲು ಹೇಳಿ ಪೂಜೆ ಮಾಡಿ ಬರುವೆನೆಂದು ಹೇಳಿ ಒಳ ರೂಮಿನೊಳಕ್ಕೆ ಹೋದರು. ಹೇಮಾಡಪಂತರು ಅಲ್ಲಿಯೇ ವರಾಂಡದಲ್ಲಿ ಶ್ಯಾಮರವರು ಪೂಜೆ ಮುಗಿಸಿ ಬರುವವರೆಗೆ ಕಾದುಕುಳಿತರು. ಪೂಜೆ ಮುಗಿಸಿ ಬಂದ ಶ್ಯಾಮಾರವರು ಹೇಮಾಡಪಂತರಿಗೆ ರಾಧ ಭಾಯಿ ದೇಶಮುಖ್ ರವರ ಕತೆಯನ್ನು ಹೇಳಿದರು. ರಾಧ ಭಾಯಿ ದೇಶಮುಖ್ ರವರು ಹೇಗೆ ಸಾಯಿಬಾಬಾರವರಿಂದ ಆಶೀರ್ವದಿಸಲ್ಪಟ್ಟರು ಎಂದು ತಿಳಿಸಿದರು.(ಶ್ರೀ ಸಾಯಿ ಸಚ್ಚರಿತ್ರೆ 18 ಮತ್ತು 19ನೇ ಅಧ್ಯಾಯ).
ಸಾಯಿ ಸಚ್ಚರಿತ್ರೆಯಲ್ಲಿ ಶ್ಯಾಮ ಅವರ ಕುಟೀರದ ವಿಷಯವಾಗಿ ಸಾಯಿಬಾಬಾರವರು ಪ್ರಸ್ತಾಪ ಮಾಡಿರುವುದನ್ನು ನಾವು ನೋಡಬಹುದು. ಒಮ್ಮೆ ಸಾಯಿಬಾಬಾರವರು ಧಾಬೋಲ್ಕರ್ ಅಲಿಯಾಸ್ ಹೇಮಾಡಪಂತರನ್ನು ಶ್ಯಾಮಾರವರ ಮನೆಗೆ ಹೋಗಿ ಅವರಿಂದ 15 ರುಪಾಯಿ ದಕ್ಷಿಣೆಯನ್ನು ತರಲು ಮತ್ತು ಅಲ್ಲೇ ಸ್ವಲ್ಪ ಕಾಲ ಕುಳಿತು ಮಾತನಾಡಿ ಬರುವಂತೆ ತಿಳಿಸಿದರು. ಸಾಯಿಯವರು ಆದೇಶಿಸಿದಂತೆ ಹೇಮಾಡಪಂತರು ಶ್ಯಾಮಾರವರ ಮನೆಗೆ ಬಂದರು. ಆಗ ಶ್ಯಾಮಾರವರು ಪೂಜೆ ಮಾಡಲು ಅಣಿಯಾಗುತ್ತಿದ್ದರು. ಅದ್ದರಿಂದ ಅವರು ಹೇಮಾಡಪಂತರಿಗೆ ಅಲ್ಲಿಯೇ ಕುಳಿತುಕೊಳ್ಳಲು ಹೇಳಿ ಪೂಜೆ ಮಾಡಿ ಬರುವೆನೆಂದು ಹೇಳಿ ಒಳ ರೂಮಿನೊಳಕ್ಕೆ ಹೋದರು. ಹೇಮಾಡಪಂತರು ಅಲ್ಲಿಯೇ ವರಾಂಡದಲ್ಲಿ ಶ್ಯಾಮರವರು ಪೂಜೆ ಮುಗಿಸಿ ಬರುವವರೆಗೆ ಕಾದುಕುಳಿತರು. ಪೂಜೆ ಮುಗಿಸಿ ಬಂದ ಶ್ಯಾಮಾರವರು ಹೇಮಾಡಪಂತರಿಗೆ ರಾಧ ಭಾಯಿ ದೇಶಮುಖ್ ರವರ ಕತೆಯನ್ನು ಹೇಳಿದರು. ರಾಧ ಭಾಯಿ ದೇಶಮುಖ್ ರವರು ಹೇಗೆ ಸಾಯಿಬಾಬಾರವರಿಂದ ಆಶೀರ್ವದಿಸಲ್ಪಟ್ಟರು ಎಂದು ತಿಳಿಸಿದರು.(ಶ್ರೀ ಸಾಯಿ ಸಚ್ಚರಿತ್ರೆ 18 ಮತ್ತು 19ನೇ ಅಧ್ಯಾಯ).
ಒಮ್ಮೆ ಬಾಳಾಸಾಹೇಬ ಮಿರೀಕರರವರು ಶಿರಡಿಗೆ ಬಂದು ಬಾಬಾರವರ ದರ್ಶನವನ್ನು ಮಾಡಿ ಚಿತಳಿಗೆ ವಾಪಸ್ ಹೋಗಬೇಕೆಂದು ನಿರ್ಧರಿಸಿದರು. ಆಗ ಸರ್ವಾಂತರ್ಯಾಮಿಯಾದ ಬಾಬಾರವರು ಮಿರೀಕರರಿಗೆ ಸರ್ಪದಿಂದ ಅಪಾಯವಿದೆಯೆಂದು ತಿಳಿದು ಶ್ಯಾಮನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಆದೇಶಿಸಿದರು. (ಶ್ರೀ ಸಾಯಿ ಸಚ್ಚರಿತ್ರೆ 22ನೇ ಅಧ್ಯಾಯ).
ಶ್ಯಾಮರವರು ಬಾಬಾರವರ ಅತ್ಯಂತ ಆತ್ಮೀಯ ಭಕ್ತರಾಗಿದ್ದರು. ಹಾಗಾಗಿ ಬಾಬಾರವರು ಅವರಿಗೆ ಪವಿತ್ರ ವಿಷ್ಣು ಸಹಸ್ರನಾಮದ ಪ್ರತಿ ಒಂದನ್ನು ದಯಪಾಲಿಸಿ ಆಶೀರ್ವದಿಸಬೇಕೆಂದು ನಿರ್ಧರಿಸಿದರು. ಆ ಘಟನೆ ಈ ರೀತಿ ನಡೆಯಿತು. ಒಮ್ಮೆ ಸಂತ ರಾಮದಾಸರ ಶಿಷ್ಯರಾದ ರಾಮದಾಸಿ ಎಂಬುವರು ಶಿರಡಿಗೆ ಬಂದು ಕೆಲವು ದಿನಗಳ ಕಾಲ ನೆಲೆಸಿದ್ದರು. ಅವರು ಪ್ರತಿದಿನ ಬೆಳಗಿನ ಜಾವ ಹೊತ್ತಿಗೆ ಮುಂಚೆ ಎದ್ದು ಸ್ನಾನ ಮಾಡಿ ಕಾಷಾಯ ವಸ್ತ್ರವನ್ನು ಧರಿಸಿ ವಿಭೂತಿಯನ್ನು ಹಚ್ಚಿಕೊಂಡು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡುತ್ತಿದ್ದರು. ಅವರು ಹೀಗೆ ಹಲವಾರು ದಿನಗಳ ಕಾಲ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿದ್ದರು. ಹೀಗಿರಲು ಒಂದು ದಿನ ಬಾಬಾರವರು ಶ್ಯಾಮರವರಿಗೆ ವಿಷ್ಣು ಸಹಸ್ರನಾಮವನ್ನು ದಯಪಾಲಿಸಲು ಮನಸ್ಸು ಮಾಡಿದರು. ಅದ್ದರಿಂದ ಬಾಬಾರವರು ರಾಮದಾಸಿಯನ್ನು ತಮ್ಮ ಬಳಿಗೆ ಕರೆದು ತಮಗೆ ಹೊಟ್ಟೆ ನೋಯುತ್ತಿದೆಯೆಂದು ಹಾಗೂ ಸೋನಾಮುಖಿ ಕಷಾಯವನ್ನು ಕುಡಿಯದಿದ್ದರೆ ಅದು ಕಡಿಮೆಯಾಗಲಾರದೆಂದೂ ಹೇಳಿ ರಾಮದಾಸಿಗೆ ಸೋನಾಮುಖಿ ತರುವಂತೆ ಹೇಳಿ ಪೇಟೆಗೆ ಕಳುಹಿಸಿದರು. ಅಂತೆಯೇ ರಾಮದಾಸಿಯವರು ವಿಷ್ಣುಸಹಸ್ರನಾಮ ಪುಸ್ತಕವನ್ನು ಬದಿಗಿಟ್ಟು ಪೇಟೆಗೆ ತೆರಳಿದರು. ಕೂಡಲೇ ಬಾಬಾರವರು ತಮ್ಮ ಆಸನದಿಂದ ಮೇಲೆದ್ದು ರಾಮದಾಸಿ ಕುಳಿತುಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿರಿಸಿದ್ದ ವಿಷ್ಣು ಸಹಸ್ರನಾಮ ಪುಸ್ತಕವನ್ನು ತೆಗೆದುಕೊಂಡು ಬಂದು ಶ್ಯಾಮರವರ ಕೈಗೆ ನೀಡಿ "ಎಲೈ ಶ್ಯಾಮ, ಈ ಪುಸ್ತಕವು ಬಹಳ ಬೆಲೆ ಬಾಳುವಂತಹದ್ದು. ಇದನ್ನು ನಿನಗೆ ಬಹುಮಾನವಾಗಿ ನೀಡುತ್ತಿದ್ದೇನೆ. ಇಂದಿನಿಂದಲೇ ಇದನ್ನು ಪಾರಾಯಣ ಮಾಡು. ಒಮ್ಮೆ ನನಗೆ ಹೃದಯದ ಬಡಿತ ಹೆಚ್ಚಾಗಿ ನನ್ನ ಜೀವಕ್ಕೆ ಅಪಾಯವಾದಾಗ ಈ ಪುಸ್ತಕವನ್ನು ನನ್ನ ಎದೆಗೆ ಒತ್ತಿಕೊಂಡೆ. ಆಗ ನನಗೆ ಎಂತಹ ಆರಾಮವಾಯಿತು ಗೊತ್ತೇ? ಆ ದೇವರೇ ಕೆಳಗಿಳಿದು ಬಂದು ನನ್ನನ್ನು ರಕ್ಷಿಸಿದಂತೆ ಭಾಸವಾಯಿತು. ಹಾಗಾಗಿ ಈ ಪುಸ್ತಕವನ್ನು ನಿನಗೆ ನೀಡುತ್ತಿದ್ದೇನೆ. ಪ್ರತಿದಿನ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಪಾರಾಯಣ ಮಾಡು. ದಿನಕ್ಕೆ ಒಂದು ನಾಮವನ್ನಾದರೂ ಉಚ್ಛರಿಸು" ಎಂದು ಹೇಳಿದರು. ಅದಕ್ಕೆ ಶ್ಯಾಮರವರು ಅದು ತಮಗೆ ಬೇಡವೆಂದೂ ಹಾಗೂ ಆ ಪುಸ್ತಕದ ಮಾಲೀಕರಾದ ರಾಮದಾಸಿ ಹುಂಬರೂ, ತಲೆ ತಿರುಕರೂ ಹಾಗೂ ಕೋಪಿಷ್ಟರೂ ಆಗಿದ್ದು ತಮ್ಮೊಡನೆ ಅನಾವಶ್ಯಕವಾಗಿ ಜಗಳವಾಡುತ್ತಾರೆಂದು ಹಾಗೂ ತಮಗೆ ಸಂಸ್ಕೃತವು ಸರಿಯಾಗಿ ಓದಲು ಬಾರದೆಂದು ಹೇಳಿ ಆ ಪುಸ್ತಕವನ್ನು ತೆಗೆದುಕೊಳ್ಳಲು ನಿರಾಕರಿಸಿದರು.
ಶ್ಯಾಮರವರು ಬಾಬಾ ತಮ್ಮನ್ನು ರಾಮದಾಸಿಯ ವಿರುದ್ಧ ಎತ್ತಿಕಟ್ಟಬೇಕೆಂದು ಹಾಗೆ ಮಾಡುತ್ತಿದ್ದಾರೆಂದು ಯೋಚಿಸುತ್ತಿದ್ದರು. ಆದರೆ ಬಾಬಾರವರು ತಮ್ಮ ಆತ್ಮೀಯ ಭಕ್ತರಾದ ಶ್ಯಾಮರವರ ಕೊರಳಿಗೆ ವಿಷ್ಣು ಸಹಸ್ರನಾಮವೆಂಬ ಹಾರವನ್ನು ಹಾಕಿ ಅವರನ್ನು ಸಂಸಾರ ಬಂಧನದಿಂದ ಮುಕ್ತ ಮಾಡಬೇಕೆಂದು ಯೋಚಿಸುತ್ತಿದ್ದಾರೆ ಎಂಬುದರ ಅರಿವಾಗಲಿಲ್ಲ. ದೇವರ ನಾಮಸ್ಮರಣೆಯು ನಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತರನ್ನಾಗಿ ಮಾಡಿ, ದುರಾಲೋಚನೆಗಳನ್ನು ದೂರ ಮಾಡಿ ಈ ಜನನ-ಮರಣ ಚಕ್ರಗಳಿಂದ ನಮ್ಮನ್ನು ಪಾರು ಮಾಡುತ್ತದೆ. ಇದಕ್ಕಿಂದ ಸುಲಭವಾದ ಸಾಧನೆ ಮತ್ತೊಂದಿಲ್ಲ. ನಾಮಸ್ಮರಣೆಯು ನಮ್ಮ ಮನಸ್ಸನ್ನು ತಿಳಿಗೊಳಿಸುತ್ತದೆ. ಇದಕ್ಕೆ ಯಾವುದೇ ರೀತಿಯ ನಿಬಂಧನೆಗಳೂ ಇರುವುದಿಲ್ಲ ಹಾಗೂ ನಾಮಸ್ಮರಣೆಯು ಅತ್ಯಂತ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ಶ್ಯಾಮರವರು ಇಚ್ಛಿಸದಿದ್ದರೋ ಸಹ ಬಾಬಾರವರು ಶ್ಯಾಮರವರು ಈ ಸಾಧನೆಯನ್ನು ಮಾಡಬೇಕೆಂದು ಬಯಸುತ್ತಿದ್ದರು. ಹಾಗಾಗಿ ಬಾಬಾರವರು ಶ್ಯಾಮರವರಿಗೆ ಬಹಳ ಒತ್ತಾಯ ಮಾಡಿದರು ಹಾಗೂ ವಿಷ್ಣುಸಹಸ್ರನಾಮವನ್ನು ಅವರ ಮೇಲೆ ಹೊರಿಸಿದರು.
ಸ್ವಲ್ಪ ಹೊತ್ತಿನಲ್ಲಿಯೇ ರಾಮದಾಸಿಯವರು ಸೋನಾಮುಖಿಯೊಡನೆ ಹಿಂತಿರುಗಿದರು. ಅಣ್ಣಾ ಚಿಂಚಿಣೇಕರರವರು ನಾರದರ ಪಾತ್ರವನ್ನು ವಹಿಸಿ ನಡೆದ ಘಟನೆಯನ್ನು ಚಾಚೂತಪ್ಪದೆ ರಾಮದಾಸಿಯವರಿಗೆ ವರದಿ ಮಾಡಿದರು. ಆ ಮಾತನ್ನು ಕೇಳಿದ ಕೂಡಲೇ ರಾಮದಾಸಿ ಕೆಂಡಾಮಂಡಲವಾಗಿ ಶ್ಯಾಮನನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಬಳಿಯಿದ್ದ ಪುಸ್ತಕವನ್ನು ಪಡೆಯಲು ಬಾಬಾರವರಿಗೆ ಹೊಟ್ಟೆ ನೋವೆಂದು ಸುಳ್ಳು ಹೇಳಿ ತಮ್ಮನ್ನು ಪೇಟೆಗೆ ಸೋನಾಮುಖಿ ತರುವಂತೆ ಮಾಡಿದವರು ಶ್ಯಾಮರವರೇ ಎಂದು ತೆಗಳಿದರು. ಅಲ್ಲದೇ ಪುಸ್ತಕವನ್ನು ಮರಳಿ ಕೊಡದಿದ್ದರೆ ಶ್ಯಾಮರವರ ತಲೆಯನ್ನು ಒಡೆಯುವೆನೆಂದು ಕೂಡ ತಿಳಿಸಿದರು. ಶ್ಯಾಮರವರು ಎಷ್ಟು ಶಾಂತರಾಗಿ ಅವರಿಗೆ ತಿಳಿ ಹೇಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಬಾಬಾರವರು ಮಧ್ಯೆ ಪ್ರವೇಶಿಸಿ "ಎಲೈ ರಾಮದಾಸಿಯೇ, ಇಂದು ನಿನಗೇನಾಗಿದೆ? ಏಕೆ ಅಷ್ಟು ಕೋಪಾವಿಷ್ಟನಾಗಿರುವೆ? ಶ್ಯಾಮನು ನಮ್ಮ ಹುಡುಗನೇ ಅಲ್ಲವೇ? ಅವನನ್ನು ಏಕೆ ವೃಥಾ ನಿಂದಿಸುತ್ತಿದ್ದೇಯೇ? ಏಕೆ ಇತ್ತೀಚಿಗೆ ನೀನು ಬಹಳ ಜಗಳಗಂಟನಾಗಿರುವೆ? ನಿನ್ನ ಬಾಯಲ್ಲಿ ಮೃದು ನುಡಿಗಳು ಬಾರದೇ? ಪ್ರತಿನಿತ್ಯವೂ ಪವಿತ್ರ ಗ್ರಂಥಗಳನ್ನು ಓದುತ್ತೀಯೇ. ಆದರೂ ನಿನ್ನ ಮನಸ್ಸಿನ ಕೊಳಕು ಹೋದಂತಿಲ್ಲ ಹಾಗೂ ನಿನ್ನ ಕ್ರೋಧಕ್ಕೆ ಮಿತಿ ಇದ್ದಂತಿಲ್ಲ. ನೀನೆಂತಹ ರಾಮದಾಸಿಯೋ? ಈ ಒಂದು ಸಣ್ಣ ಪುಸ್ತಕಕ್ಕಾಗಿ ನೀನು ಶ್ಯಾಮನ ಜೊತೆ ಜಗಳವಾಡುತ್ತಿದ್ದೀಯೆ.ನಿಜವಾದ ರಾಮದಾಸಿಗೆ ಮೋಹ ಇರುವುದಿಲ್ಲ. ಬದಲಿಗೆ ಎಲ್ಲರನ್ನೂ ಸಮತೆಯಿಂದ ಕಾಣುತ್ತಾನೆ. ಹೋಗು, ನಿನ್ನ ಜಾಗದಲ್ಲಿ ಕುಳಿತುಕೋ. ಹಣ ಕೊಟ್ಟರೆ ಎಷ್ಟು ಪುಸ್ತಕ ಬೇಕಾದರೂ ದೊರೆಯುತ್ತದೆ. ಆದರೆ ಜನರ ಪ್ರೀತಿಯನ್ನು ಗಳಿಸುವುದು ಬಹಳ ಕಷ್ಟ. ಒಳ್ಳೆಯ ಆಲೋಚನೆ ಮಾಡು ಹಾಗೂ ಎಲ್ಲರೊಂದಿಗೂ ಸೌಹಾರ್ದತೆಯಿಂದ ವರ್ತಿಸು. ಈ ಪುಸ್ತಕದ ಬೆಲೆ ಏನು? ಶ್ಯಾಮನಿಗೂ ಈ ಪುಸ್ತಕಕ್ಕೂ ಸಂಬಂಧವಿಲ್ಲ. ಈ ಪುಸ್ತಕವನ್ನು ತೆಗೆದುಕೊಂಡು ಶ್ಯಾಮನಿಗೆ ಕೊಟ್ಟಿದ್ದು ನಾನೇ. ನೀನು ಈಗಾಗಲೇ ವಿಷ್ಣು ಸಹಸ್ರನಾಮವನ್ನು ಓದಿ ಕಂಠಪಾಠ ಮಾಡಿರುವೆ. ಅದಕ್ಕೆ ನಾನೇ ಶ್ಯಾಮನೂ ಇದನ್ನು ಓದಿ ಪ್ರಯೋಜನ ಪಡೆಯಲಿ ಎಂದು ಅವನಿಗೆ ನೀಡಿದೆ" ಎಂದು ನುಡಿದರು.
ಬಾಬಾರವರ ಮೃದುವಾದ ಜೇನಿನಂತೆ ಸಿಹಿಯಾದ ಮಾತುಗಳನ್ನು ರಾಮದಾಸಿಯ ಮೇಲೆ ಬಹಳ ಪರಿಣಾಮವನ್ನೇ ಉಂಟುಮಾಡಿತು. ಕೂಡಲೇ ರಾಮದಾಸಿ ಶಾಂತನಾಗಿ ಶ್ಯಾಮನನ್ನು ಕುರಿತು ವಿಷ್ಣು ಸಹಸ್ರನಾಮಕ್ಕೆ ಬದಲಾಗಿ ಪಂಚರತ್ನ ಗೀತೆಯನ್ನು ಕೊಡಲು ಸಾಧ್ಯವೇ ಎಂದು ಕೇಳಿದನು. ಇದರಿಂದ ಸಂತಸಗೊಂಡ ಶ್ಯಾಮರವರು "ಒಂದು ಏಕೆ ಹತ್ತು ಪ್ರತಿಗಳನ್ನು ನೀಡಲು ಸಿದ್ಧನಿರುವೆ" ಎಂದು ಉತ್ತರಿಸಿದರು.
ಈ ರೀತಿಯಲ್ಲಿ ರಾಮದಾಸಿ ಹಾಗೂ ಶ್ಯಾಮ ಅವರಿಗೆ ರಾಜಿಯಾಯಿತು. "ರಾಮದಾಸಿ ಪಂಚರತ್ನ ಗೀತೆಯನ್ನು ಏಕೆ ಕೇಳಿದನು. ಬಾಬಾರವರ ಮುಂದೆ ಮಸೀದಿಯಲ್ಲಿ ಪ್ರತಿನಿತ್ಯ ಧಾರ್ಮಿಕ ಗ್ರಂಥಗಳನ್ನು ಪಠಿಸುವ ರಾಮದಾಸಿ ಶ್ಯಾಮನೊಂದಿಗೆ ಜಗಳ ಆಡಿದ್ದಾದರೂ ಏಕೆ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಹೀಗೆ ಹೇಳಬಹುದು. ಈ ಘಟನೆ ನಡೆಯದಿದ್ದರೆ ವಿಷ್ಣು ಸಹಸ್ರನಾಮದ ಮಹತ್ವ ತಿಳಿಯುತ್ತಿರಲಿಲ್ಲ. ಹೀಗೆ ಬಾಬಾರವರು ತಮ್ಮದೇ ರೀತಿಯಲ್ಲಿ ವಿಷ್ಣು ಸಹಸ್ರನಾಮದ ಮಹಿಮೆ ತಿಳಿಯುವಂತೆ ಮಾಡಿದರು. ಶ್ಯಾಮರವರು ವಿಷ್ಣು ಸಹಸ್ರನಾಮವನ್ನು ಚೆನ್ನಾಗಿ ಓದಿ ಮುಂದೊಂದು ದಿನ ಶ್ರೀಮಾನ್. ಬೂಟಿಯವರ ಅಳಿಯಂದಿರೂ ಹಾಗೂ ಪುಣೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಜಿ.ಜಿ.ನಾರ್ಕೆಯವರಿಗೆ ವಿವರಿಸಲು ಸಮರ್ಥರಾದರು. (ಶ್ರೀ ಸಾಯಿ ಸಚ್ಚರಿತ್ರೆ 27ನೇ ಅಧ್ಯಾಯ).
ಒಮ್ಮೆ ಸಂತಾನವಿಲ್ಲದೆ ತೊಳಲಾಡುತ್ತಿದ್ದ ಶ್ರೀಮತಿ.ಔರಂಗಾಬಾದಕರ್ ಎಂಬುವರು ತಮ್ಮ ಮನದ ಬಯಕೆಯನ್ನು ಬಾಬಾರವರಿಗೆ ತಿಳಿಸುವಂತೆ ಶ್ಯಾಮರವರನ್ನು ಬೇಡಿಕೊಂಡರು. ಅಂತೆಯೇ ಶ್ಯಾಮರವರು ಒಂದು ಒಳ್ಳೆಯ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದರು. ಒಂದು ದಿನ ಬಾಬಾರವರು ಸಂತೋಷವಾಗಿದ್ದ ಸಂದರ್ಭದಲ್ಲಿ ಅವರು ಶ್ಯಾಮರವರ ಕೆನ್ನೆಯನ್ನು ಚಿವುಟಿದರು. ಶ್ಯಾಮರವರು ಕೋಪಗೊಂಡಂತೆ ನಟಿಸಿದರು. ಆಗ ಬಾಬಾರವರು "ನಾನು ನಿನ್ನೊಂದಿಗೆ ಕಳೆದ 72 ಜನ್ಮಗಳಿಂದ ಇದ್ದೇನೆ. ಎಂದಾದರೂ ಈ ರೀತಿ ಚಿವುಟಿದ್ದೇನೆಯೇ? ಯೋಚನೆ ಮಾಡಿ ಹೇಳು" ಎಂದರು. ಈ ರೀತಿಯಲ್ಲಿ ಬಾಬಾರವರು ತಮಗೂ ಹಾಗೂ ಶ್ಯಾಮರವರಿಗೂ ಕಳೆದ ಎಪ್ಪತ್ತೆರಡು ಜನ್ಮಗಳಿಂದ ಇರುವ ಸಂಬಂಧವನ್ನು ದೃಢಪಡಿಸಿದರು. (ಶ್ರೀ ಸಾಯಿ ಸಚ್ಚರಿತ್ರೆ 36ನೇ ಅಧ್ಯಾಯ).
ಒಮ್ಮೆ ಶ್ಯಾಮರವರು ಕಣ್ಣುಗಳು ಊದಿಕೊಂಡು ಬಹಳ ತೊಂದರೆಯಿಂದ ಬಳಲುತ್ತಿದ್ದರು. ಕಣ್ಣುಗಳು ಕೆಂಪಾಗಿ, ಊತವಾಗಿ ಒಂದೇ ಸಮನೇ ನೀರು ಸುರಿಯುತ್ತಿತ್ತು. ಅವರು ಎಲ್ಲಾ ರೀತಿಯ ಮುಲಾಮು ಹಾಗೂ ಗುಳಿಗೆಗಳನ್ನು ತೆಗೆದುಕೊಂಡರೂ ಏನೂ ಉಪಯೋಗವಾಗಲಿಲ್ಲ. ಅವರ ಕಣ್ಣಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಊತ ಹೆಚ್ಚಾಗಿ ನೋವು ತಡೆಯಲಾಗದೇ ಒದ್ದಾಡುತ್ತಿದ್ದರು. ಕೊನೆಗೆ ಅವರು ಬಾಬಾರವರ ಸಹಾಯವನ್ನು ಯಾಚಿಸಿದರು. ಶ್ಯಾಮರವರನ್ನು ನೋಡಿದ ಕೂಡಲೇ ಬಾಬಾರವರು ಎಲ್ಲವೂ ಕ್ಷೇಮವೇ ಎಂಬ ಪ್ರಶ್ನೆ ಕೇಳಿದರು. ಇದರಿಂದ ಅಸಮಾಧಾನಗೊಂಡ ಅವರು ಕೋಪದಿಂದ "ದೇವಾ, ನಿಮ್ಮಷ್ಟು ಕರುಣೆಯಿಲ್ಲದ ದೇವರನ್ನು ನಾನು ಇದುವರೆಗೂ ನೋಡಿಯೇ ಇರಲಿಲ್ಲ. ನೀವು ಎಲ್ಲರನ್ನೂ ಗುಣ ಮಾಡುತ್ತೀರಿ. ನಾನು ಕಳೆದ ನಾಲ್ಕು ದಿನಗಳಿಂದ ನೋವಿನಿಂದ ಒದ್ದಾಡುತ್ತಿದ್ದೇನೆ. ನನ್ನ ಕಣ್ಣುಗಳಿಂದ ಎಡಬಿಡದೆ ನೀರು ಸುರಿಯುತ್ತಿದೆ. ನೋವನ್ನು ತಡೆಯಲಾಗುತ್ತಿಲ್ಲ. ಆದರೆ ನಿಮಗೆ ಇದಾವುದರ ಪರಿವೆ ಇದ್ದಂತಿಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ? ನನ್ನ ಕಷ್ಟ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ನನ್ನ ಮಾತುಗಳು ನಿಮ್ಮ ಕಿವಿಗೆ ಬೀಳುತ್ತಿಲ್ಲವೇ? ಇಂತಹ ದೇವರಿಂದ ನಮಗೇನು ಪ್ರಯೋಜನ? ನಾಳೆಯ ಒಳಗೆ ನನ್ನ ಕಣ್ಣಿನ ಬೇನೆ ಗುಣವಾಗದಿದ್ದಲ್ಲಿ, ನಿಮ್ಮನ್ನು ಈ ದ್ವಾರಕಾಮಾಯಿಯಿಂದ ಹೊಡೆದೋಡಿಸದಿದ್ದರೆ ನನ್ನ ಹೆಸರು ಶ್ಯಾಮ ಅಲ್ಲವೆಂದು ತಿಳಿಯಿರಿ" ಎಂದು ನುಡಿದರು. ಅದಕ್ಕೆ ಬಾಬಾರವರು ಮರಾಠಿಯಲ್ಲಿ "ಶ್ಯಾಮ, ಏನಾಗಿದೆಯೆಂದು ಹೀಗೆ ಒದರಾಡುತ್ತಿರುವೆ. ಏಳು ಮೆಣಸಿನ ಕಾಳುಗಳನ್ನು ತೆಗೆದುಕೊಂಡು ಅವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ನಿನ್ನ ಕಣ್ಣುಗಳಿಗೆ ಹಾಕು. ನಿನ್ನ ಕಣ್ಣುಗಳು ಸ್ವಚ್ಛವಾಗುತ್ತವೆ. ಇಗೋ, ಉಧಿಯನ್ನು ತೆಗೆದುಕೊಂಡು ಮಸೀದಿಯಿಂದ ಹೊರಡು" ಎಂದು ನುಡಿದರು. ಬಾಬಾರವರ ಮಾತುಗಳನ್ನು ಕೇಳಿ ಶ್ಯಾಮರವರಿಗೆ ಮತ್ತಷ್ಟು ಕೋಪ ಹೆಚ್ಚಾಯಿತು. ಹಾಗಾಗಿ ಅವರು ಬಾಬಾರವರಿಗೆ "ನೀವು ನಿಮ್ಮನ್ನು ಬಹಳ ಬುದ್ಧಿವಂತರೆಂದು ತಿಳಿದ ಹಾಗಿದೆ. ಈ ವೈದ್ಯ ವೃತ್ತಿಯನ್ನು ಎಲ್ಲಿಂದ ಕಲಿತುಕೊಂಡಿರಿ? ನಾನು ಕಣ್ಣುಗಳಿಗೆ ಮೆಣಸನ್ನು ಹಾಕಿದರೆ ಅವುಗಳು ಒಡೆದುಹೋಗುತ್ತವೆ ಅಷ್ಟೇ. ಈ ರೀತಿ ಜನರಿಗೆ ಹೇಳಿ ಅವರ ಕಣ್ಣುಗಳನ್ನು ಹಾಳು ಮಾಡಬೇಡಿ" ಎಂದರು. ಅದಕ್ಕೆ ಬಾಬಾರವರು ಶಾಂತರಾಗಿ "ಶ್ಯಾಮ, ಸುಮ್ಮನೆ ಎಲ್ಲವೂ ತಿಳಿದಿರುವನಂತೆ ಆಡಬೇಡ. ಹೋಗಿ ನಾನು ಹೇಳಿದಂತೆ ಮಾಡು. ಆಗಲೂ ನಿನಗೆ ಸರಿ ಹೋಗದಿದ್ದಲ್ಲಿ ನೀನು ನನ್ನ ಮೇಲೆ ಕೋಪ ಮಾಡಿಕೋ" ಎಂದರು. ಶ್ಯಾಮರವರು ಬಾಬಾರವರ ಮೇಲೆ ಕೋಪ ಮಾಡಿಕೊಂಡಿದ್ದರೂ ಸಹ ಬಾಬಾರವರಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಬಾಬಾರವರು ಹೇಳಿದಂತೆಯೇ ಶ್ಯಾಮರವರು ಮಾಡಲು ಅದೇ ಕ್ಷಣದಲ್ಲಿ ಅವರ ಕಣ್ಣುಗಳು ಸ್ವಚ್ಛವಾದವು. (ಶಿರಡಿ ಚೇ ಸಾಯಿಬಾಬಾ, ಡಾ.ಕೇಶವ ಬಿ.ಗಾವಂಕರ್).
ಒಮ್ಮೆ ಶ್ಯಾಮರವರು ಬಾಬಾರವರಿಗೆ ನಿಜವಾಗಿಯೂ ಮೂರು ಲೋಕಗಳಾದ ಬ್ರಹ್ಮ ಲೋಕ, ವಿಷ್ಣು ಲೋಕ ಹಾಗೂ ಶಿವಲೋಕಗಳಿವೆಯೇ ಎಂದು ಪ್ರಶ್ನಿಸಿದರು.ಅದಕ್ಕೆ ಬಾಬಾರವರು ಇರುವುದಾಗಿ ಉತ್ತರ ನೀಡಿದರು. ಕೂಡಲೇ ಶ್ಯಾಮರವರು "ಎಲೈ ದೇವಾ, ಹಾಗಿದ್ದಲ್ಲಿ ನೀವು ಏಕೆ ನನಗೆ ತ್ರಿಲೋಕಗಳನ್ನು ತೋರಿಸಬಾರದು" ಎಂದು ಪ್ರಶ್ನಿಸಿದರು ಹಾಗೂ ಒತ್ತಾಯ ಮಾಡಿದರು. ಆಗ ಬಾಬಾರವರು ಒಮ್ಮೆ ಕಣ್ಣು ಮುಚ್ಚಿಕೊಂಡು ಪುನಃ ತೆರೆಯುವಂತೆ ತಿಳಿಸಿದರು. ಅಂತೆಯೇ ಶ್ಯಾಮರವರು ಕಣ್ಣು ಬಿಟ್ಟು ನೋಡಲು ಅವರಿಗೆ ಬ್ರಹ್ಮ ಲೋಕ ಕಾಣಿಸಿತು. ಅವರು ಬ್ರಹ್ಮ ಲೋಕದಲ್ಲಿರುವ ಬಹಳವೇ ಸುಂದರವಾಗಿದ್ದ ವಜ್ರಖಚಿತ ಸಿಂಹಾಸನದ ಮೇಲೆ ಬ್ರಹ್ಮ ದೇವನು ಕುಳಿತಿರುವುದನ್ನು ನೋಡಿದರು. ಬ್ರಹ್ಮನು ತನ್ನ ಮಂತ್ರಿಗಳೊಡನೆ ಸಭೆಯನ್ನು ನಡೆಸುತ್ತಿರುವುದನ್ನು ಸಹ ಕಂಡರು. ಆ ಮಂತ್ರಿಗಳೂ ಕೂಡ ಸುಂದರವಾದ ಚಿನ್ನದ ಕುರ್ಚಿಗಳ ಮೇಲೆ ಕುಳಿತಿದ್ದರು. ಆ ಕುರ್ಚಿಗಳನ್ನು ಸಹ ವಿವಿಧ ರತ್ನಗಳಿಂದ ಅಲಂಕರಿಸಲಾಗಿತ್ತು. ಅಲ್ಲಿ ಚಿನ್ನ ಹಾಗೂ ರತ್ನಗಳ ರಾಶಿಯೇ ಇರುವುದನ್ನು ಕಂಡ ಶ್ಯಾಮರವರಿಗೆ ಮಾತುಗಳೇ ಹೊರಡಲಿಲ್ಲ. ನಂತರ ಬಾಬಾರವರು "ಶ್ಯಾಮ ಇದು ಸತ್ಯ ಲೋಕ ಮತ್ತು ಅಲ್ಲಿ ಕುಳಿತಿರುವವನು ಬ್ರಹ್ಮದೇವ" ಎಂದು ತಿಳಿಸಿದರು. ಬಾಬಾ ಮತ್ತೊಮ್ಮೆ ಕಣ್ಣು ಮುಚ್ಚಿ ಬಿಡುವಂತೆ ಹೇಳಿ ವೈಕುಂಠ ಲೋಕವನ್ನು ಶ್ಯಾಮರವರಿಗೆ ತೋರಿಸಿದರು. ಕೊನೆಗೆ ಅದೇ ರೀತಿ ಶಿವ ಲೋಕವನ್ನು ಸಹ ತೋರಿಸಿದರು. ಈ ರೀತಿ ಪ್ರತಿಯೊಂದು ಲೋಕವನ್ನು ಶ್ಯಾಮರವರಿಗೆ ತೋರಿಸಿದ್ದಷ್ಟೇ ಅಲ್ಲದೇ ಅಲ್ಲಿದ್ದ ಎಲ್ಲವನ್ನೂ ಕುರಿತು ದೀರ್ಘ ವಿವರಣೆಯನ್ನು ಸಹ ನೀಡಿದರು. ಮೂರು ಲೋಕಗಳ ವೈಭವವನ್ನು ನೋಡಿ ಶ್ಯಾಮರವರು ದಂಗಾಗಿ ಹೋದರು. ಅಲ್ಲಿದ್ದ ಐಶ್ವರ್ಯಗಳ ರಾಶಿಯನ್ನು ನೋಡಿ ಶ್ಯಾಮರವರಿಗೆ ಸಂತೋಷ ಹಾಗೂ ಭಯ ಒಮ್ಮೆಲೇ ಆಯಿತು. ಬಾಬಾರವರು ನಂತರ ತಮ್ಮ ಮಾತನ್ನು ಮುಂದುವರಿಸುತ್ತಾ "ಶ್ಯಾಮ, ಇವೆಲ್ಲವೂ ನಮಗೆ ಸರಿ ಹೋಗುವಂತದಲ್ಲ. ನಮ್ಮ ಗುರಿಯು ಸಂಪೂರ್ಣ ಬೇರೆಯದ್ದೇ ಆಗಿರುತ್ತದೆ" ಎಂದು ನುಡಿದರು. ಬಾಬಾರವರು ಶ್ಯಾಮರವರಿಗೆ ದಿವ್ಯ ದೃಷ್ಟಿಯನ್ನು ದಯಪಾಲಿಸಿದ್ದರಿಂದ ಅವರಿಗೆ ಇವೆಲ್ಲವನ್ನೂ ನೋಡಲು ಸಾಧ್ಯವಾಯಿತು. (ಶಿರಡಿ ಚೇ ಸಾಯಿಬಾಬಾ, ಡಾ.ಕೇಶವ ಬಿ.ಗಾವಂಕರ್).
ಬಾಬಾರವರು ಪ್ರತಿನಿತ್ಯ ತಮ್ಮ ಬಳಿ ಬರುತ್ತಿದ್ದ ಅನೇಕ ಭಕ್ತರಿಗೆ ಅಪಾರವಾದ ಹಣವನ್ನು ಹಂಚುತ್ತಿದ್ದರು. ಆದರೆ ಅವರು ಶ್ಯಾಮರವರಿಗೆ ಹಣವನ್ನು ಎಂದೂ ನೀಡಲಿಲ್ಲ. ಅದರ ಬದಲಿಗೆ ಬಾಬಾರವರು ಹಲವಾರು ಬೆಲೆ ಕಟ್ಟಲಾಗದ ಆಧ್ಯಾತ್ಮಿಕ ಉಡುಗೊರೆಗಳನ್ನು ನೀಡಿದರು. ಬಾಬಾರವರು ಶ್ಯಾಮರವರಿಗೆ ಅನೇಕ ಧಾರ್ಮಿಕ ಗ್ರಂಥಗಳು, ಪೋತಿಗಳನ್ನು ನೇಡಿದ್ದರು. ಶ್ಯಾಮರವರು ಆ ಗ್ರಂಥಗಳನ್ನು ಮತ್ತೆ ಮತ್ತೆ ಹೆಚ್ಚಿನ ಶ್ರದ್ಧೆಯಿಂದ ಓದಿ ಅರ್ಥ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಬಾಬಾರವರು ಶ್ಯಾಮರವರನ್ನು ಅನೇಕ ಬಾರಿ ತೀರ್ಥ ಯಾತ್ರೆ ಮಾಡಿಕೊಂಡು ಬರುವಂತೆ ಹೇಳಿ ಕಳುಹಿಸುತ್ತಿದ್ದರು. ಅಂತೆಯೇ ಶ್ಯಾಮರವರುದೇಶದ ದೇಶದ ಉದ್ದಗಲಕ್ಕೂ ಸಂಚರಿಸಿ ಪವಿತ್ರ ಕ್ಷೇತ್ರಗಳಾದ ಕಾಶಿ, ಚಾರ್ ಧಾಮ್ ಹಾಗೂ ಜಗನ್ನಾಥ ಪುರಿಯನ್ನು ಸಂದರ್ಶಿಸಿದರು.
ಬಾಬಾರವರಿಗೆ ಪ್ರತಿನಿತ್ಯ ಹಲವಾರು ಭಕ್ತರುಗಳಿಂದ ಕಾಗದಗಳು ಬರುತ್ತಿದ್ದವು. ಶ್ಯಾಮರವರು ಅದನ್ನು ಜೋರಾಗಿ ಓದಿ ಬಾಬಾರವರಿಗೆ ಹೇಳುತ್ತಿದ್ದರು ಹಾಗೂ ಬಾಬಾರವರು ಅಪ್ಪಣೆ ನೀಡಿದಂತೆ ಆ ಪತ್ರಗಳಿಗೆ ಉತ್ತರ ಬರೆದು ಹಾಕುತ್ತಿದ್ದರು. ಯಾರಾದರೂ ಭಕ್ತರು ಅಂಚೆಯ ಮೂಲಕ ಹಣವನ್ನು ಕಳುಹಿಸಿದರೆ, ಶ್ಯಾಮರವರು ಖುದ್ದಾಗಿ ಅಂಚೆ ಕಛೇರಿಗೆ ತೆರಳಿ ಹಣವನ್ನು ಪಡೆದು ಬಾಬಾರವರಿಗೆ ತಂದುಕೊಡುತ್ತಿದ್ದರು. ಒಮ್ಮೆ ಭಕ್ತರೊಬ್ಬರು ಎರಡು ರೂಪಾಯಿಗಳನ್ನು ಮನಿ ಆರ್ಡರ್ ಮೂಲಕ ಕಳುಹಿಸಿದ್ದರು. ಶ್ಯಾಮ ಅಂಚೆ ಕಛೇರಿಗೆ ತೆರಳಿ ಹಣವನ್ನು ಪಡೆದುಕೊಂಡು ಬಂದರು. ಅದರೆ ಅಂಚೆ ಕಚೇರಿಯಿಂದ ಹಿಂತಿರುಗುವಾಗ ತಮ್ಮ ಮನಸ್ಸನ್ನು ಬದಲಾಯಿಸಿ ಮಸೀದಿಗೆ ಬಂದವರೇ ದ್ವಾರಕಾಮಾಯಿಯ ಒಳಗಡೆ ಇದ್ದರ ರಥದ ಕೋಣೆಯ ಮೇಲ್ಭಾಗದಲ್ಲಿ ಬಚ್ಚಿಟ್ಟರು. ಸರ್ವಾಂತರ್ಯಾಮಿಯಾದ ಸಾಯಿಬಾಬಾರವರಿಗೆ ಈ ವಿಷಯ ತಿಳಿದಿದ್ದರೂ ಸಹ ಶ್ಯಾಮರವರ ಜೊತೆ ಏನೂ ಮಾತನಾಡದೇ ಸುಮ್ಮನಿದ್ದರು. ಆದರೆ ಕೆಲವು ದಿನಗಳ ನಂತರ ಒಂದು ದುರ್ಘಟನೆ ಸಂಭವಿಸಿತು. ಒಂದು ರಾತ್ರಿ ಶ್ಯಾಮರವರ ಮನೆಯಲ್ಲಿ ಕಳ್ಳತನ ಜರುಗಿ ಆ ಕಳ್ಳನು ಅವರ ಬಳಿಯಿದ್ದ ಇನ್ನೂರೈವತ್ತು ರೂಪಾಯಿಗಳನ್ನು ದೋಚಿಕೊಂಡು ಹೋದನು. ಶ್ಯಾಮರವರು ಕಳೆದುಹೋದ ಹಣಕ್ಕಾಗಿ ಎಲ್ಲೆಡೆ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.. ಕೊನೆಗೆ ಅವರು ಪೊಲೀಸರಿಗೆ ದೂರನ್ನು ನೀಡಿದರು. ನಂತರ ಹತಾಶ ಭಾವನೆಯಿಂದ ಬಾಬಾರವರ ಬಳಿ ಹೋಗಿ ನಿಂತಾಗ ಬಾಬಾರವರು "ಬಾಬಾ ನನ್ನ ಮನೆಯಲ್ಲಿ ಕಳ್ಳತನವಾಗಿ ಆ ಕಳ್ಳನು ನನ್ನ ಬಳಿಯಿದ್ದ ಇನ್ನೂರೈವತ್ತು ರೂಪಾಯಿಗಳನ್ನು ಕಸಿದುಕೊಂಡು ಹೋದನು. ಇದರಿಂದ ನಿಮಗೆ ಸಂತೋಷವಾಗುತ್ತದೆಯೇ?. ಬಡವನಾದ ನನ್ನಂತಹವನು ಅಷ್ಟು ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡರೆ ನಿಮಗೆ ಸಂತೋಷವಾಗುತ್ತದೆಯೇ?. ನನ್ನ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಲಿ" ಎಂದು ಪ್ರಶ್ನಿಸಿದರು. ಅದಕ್ಕೆ ಬಾಬಾರವರು ಶಾಂತರಾಗಿ "ಎಲೈ ಶಾಮ್ಯಾ, ಏನಾಯಿತು? ನಿನ್ನ ಮನೆಯಲ್ಲಿ ಕಳ್ಳತನವಾಗಿ ಹಣ ಕಳೆದುಹೋಗಿದ್ದರಿಂದ ನೀನು ನನ್ನ ಬಳಿ ದೂರು ನೀಡಲು ಬಂದಿದ್ದೀಯೆ. ಆದರೆ ನನ್ನ ಎರಡು ರೂಪಾಯಿಗಳು ಕಳುವಾಗಿವೆ. ಅದನ್ನು ನಾನು ಯಾರ ಬಳಿ ಹೇಳಿಕೊಳ್ಳಲಿ? ಎಂದು ಪ್ರಶ್ನಿಸಿದರು. ಆ ಕೂಡಲೇ ಶ್ಯಾಮರವರಿಗೆ ಬಾಬಾರವರ ಮಾತಿನ ಅಂತರಾಳದ ಅರಿವಾಯಿತು. ಬಾಬಾ ತಮ್ಮ ಮಾತನ್ನು ಮುಂದುವರಿಸಿ "ಶ್ಯಾಮ, ನಿನ್ನಂತಹ ಬಡವನಿಗೆ ಇನ್ನೂರೈವತ್ತು ರೂಪಾಯಿಗಳು ಹೇಗೆ ದೊಡ್ಡ ಮೊತ್ತವೋ ಹಾಗೆಯೇ ನನ್ನಂತಹ ಬಡ ಫಕೇರನಿಗೆ ಅಷ್ಟೇ ದೊಡ್ಡ ಮೊತ್ತವಾಗಿರುತ್ತದೆ" ಎಂದು ನುಡಿದರು. (ಶ್ರೀ ಸಾಯಿ ಲೀಲಾ ಪತ್ರಿಕೆ, ಅಂಕ:5, ವರ್ಷ 17, 1940).
ಬೇರೆ ಭಕ್ತರು ನೆರವೇರಿಸುತ್ತಿದ್ದಂತೆ ಶ್ಯಾಮರವರು ಬಾಬಾರವರಿಗೆ ಧಾರ್ಮಿಕ ಪದ್ಧತಿಯ ಪ್ರಾಕಾರ ಪೂಜೆಯನ್ನು ಮಾಡುತ್ತಿರಲಿಲ್ಲ. ಆದರೆ ಅವರಿಗೆ ಬಾಬಾರವರಲ್ಲಿ ಅಪಾರವಾದ ನಂಬಿಕೆಯಿತ್ತು. ಅದನ್ನು ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಶ್ಯಾಮರವರು ತಮ್ಮ ಪ್ರತಿಯೊಂದು ಉಸಿರಾಟದ ಮೂಲಕ ಸದಾ ಸಾಯಿ ನಾಮ ಜಪವನ್ನು ಮಾಡುತ್ತಿದ್ದರು. ಈ ವಿಷಯವನ್ನು "ಶಿರಡಿ ಡೈರಿ" ಯಲ್ಲಿ ಉಲ್ಲೇಖಿಸಲಾಗಿದೆ. ಶಿರಡಿ ಡೈರಿಯ 8ನೇ ಡಿಸೆಂಬರ್ 1911 ರಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದೆ.
ಶ್ಯಾಮರವರು ಎರಡು ಮದುವೆ ಮಾಡಿಕೊಂಡಿದ್ದರು. ಅವರ ಮೊದಲನೇ ಧರ್ಮಪತ್ನಿ ನಿಮೋಣದ ಶ್ರೀ.ಗೋಪಾಲ ಕಾಚೇಶ್ವರ ಕುಲಕರ್ಣಿಯವರ ಮಗಳು. ಅವರಿಗೆ ಏಕನಾಥ್ ಎಂಬ ಹೆಸರಿನ ಮಗನಿದ್ದನು. ಅವರ ಎರಡನೇ ಧರ್ಮಪತ್ನಿ "ಶ್ರೀಮತಿ.ದ್ವಾರಕಾ ಬಾಯಿ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲನೆಯವನ ಹೆಸರು ಉದ್ಧವರಾವ್ ಹಾಗೂ ಎರಡನೇಯವನು ಶ್ರೀ.ಜಗನ್ನಾಥ ಪಂತ್. ಹಾಗೂ ಹೆಣ್ಣು ಮಗುವಿನ ಹೆಸರು ಬೇಬಿ ತಾಯಿ.
ಶ್ರೀ ಸಾಯಿಬಾಬಾ ಸಂಸ್ಥಾನವನ್ನು ಪ್ರಾರಂಭಿಸಿದಾಗ ಶ್ಯಾಮರವರು ದೀಕ್ಷಿತ ವಾಡದಲ್ಲಿ ವಾಸಿಸುತ್ತಿದ್ದರು. ಇವರು ಸಾಯುವುದಕ್ಕೆ ಕೇವಲ ನಾಲ್ಕು ದಿನಗಳ ಮುಂಚೆ ಯಾವುದೋ ತಪ್ಪು ತಿಳುವಳಿಕೆಯಿಂದಾಗಿ ಶ್ಯಾಮರವರು ದೀಕ್ಷಿತವಾಡವನ್ನು ಎರಡು ತಿಂಗಳ ಒಳಗಾಗಿ ಬಿಟ್ಟು ಹೋಗಬೇಕಾಯಿತು. ಆಗ ಅವರು ಪ್ರಸ್ತುತ ದ್ವಾರಕಾಮಾಯಿಯ ಹತ್ತಿರ ಇರುವ ಮನೆಯೊಂದರಲ್ಲಿ ವಾಸಿಸಲು ಪ್ರಾರಂಭಿಸಿದರು. ಶ್ಯಾಮರವರು ಒಳ್ಳೆಯ ಗಟ್ಟಿಮುಟ್ಟಾದ ವ್ಯಕ್ತಿಯಾಗಿದ್ದು ಸುಮಾರು 80 ವರ್ಷಗಳ ಕಾಲ ಜೀವಿಸಿದ್ದರು
ಕೊನೆಗೆ 15ನೇ ಏಪ್ರಿಲ್ 1944, ಬುಧವಾರದಂದು ಸುಮಾರು ಮಾಧ್ಯಾನ್ಹ ಹನ್ನೆರಡು ಗಂಟೆಯ ಸುಮಾರಿಗೆ ಶ್ಯಾಮರವರು ಪ್ರಜ್ಞೆ ಕಳೆದುಕೊಂಡರು ಹಾಗೂ ಮಾರನೇ ದಿನ ಗುರುವಾರ,16ನೇ ಏಪ್ರಿಲ್ 1944 ರ ರಾತ್ರಿ ಅವರು ಕೊನೆಯುಸಿರೆಳೆದರು ಹಾಗೂ ತಮ್ಮ ಗುರುಗಳಾದ ಶ್ರೀ ಸಾಯಿಬಾಬಾರವರಲ್ಲಿ ಲೀನವಾದರು.
ಶ್ಯಾಮಾರವರ ಕುಟೀರವು ದ್ವಾರಕಾಮಾಯಿಯಿಂದ ಪೇಟೆಗೆ ಹೋಗುವ ದಾರಿಯಲ್ಲಿ ಬಲಭಾಗಕ್ಕೆ ಸಿಗುತ್ತದೆ.ಶ್ಯಾಮಾರವರು ಕಾಲವಾದ ನಂತರ ಇವರ ಮಗನಾದ ಉದ್ದವರಾವ್ ದೇಶಪಾಂಡೆ ಇವರ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಉದ್ದವರಾವ್ ದೇಶಪಾಂಡೆ 27ನೇ ಜೂನ್ 1998 ರಂದು ಕಾಲವಾದರು. ಉದ್ದವರಾವ್ ಸಾಯಿ ಮಹಾಸಮಾಧಿಗೆ ಮುಂಚೆ ಬಹಳ ಚಿಕ್ಕವರಾಗಿದ್ದು ಸಾಯಿಬಾಬಾರವರೊಂದಿಗೆ ತಾವು ಆಟವಾಡುತ್ತಿದ್ದೆ ಎಂದು ಹೇಳಿದ್ದಾರೆ. ಸಾಯಿಬಾಬಾರವರಿಗೆ ಮಕ್ಕಳೆಂದರೆ ಪಂಚಪ್ರಾಣ ಮತ್ತು ಮಕ್ಕಳೊಂದಿಗೆ ಸಂಜೆಯ ವೇಳೆ ಆಟವಾಡುತ್ತಿದ್ದರು. ಒಮ್ಮೆ ಶ್ಯಾಮರವರು ಉದ್ದವರಾವ್ ದೇಶಪಾಂಡೆಯವರನ್ನು ತೋರಿಸಿ ಅವರ ಭವಿಷ್ಯದ ಬಗ್ಗೆ ಬಾಬಾರವರನ್ನು ಕೇಳಿದರು. ಆಗ ಬಾಬಾರವರು "ಇವನು ದ್ವಾರಕಾಮಾಯಿಯಲ್ಲಿ ಆಡುತ್ತ ಬೆಳೆಯುತ್ತಾನೆ ಮತ್ತು ಇವನ ಜೀವನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ" ಎಂದು ಹೇಳಿದ್ದರೆಂದು ತಿಳಿದುಬಂದಿದೆ. ಈಗ ಉದ್ದವರಾವ್ ದೇಶಪಾಂಡೆಯವರ ಧರ್ಮಪತ್ನಿ ಈ ಕುಟೀರವನ್ನು ನೋಡಿಕೊಳ್ಳುತ್ತಿದ್ದಾರೆ.ಸಾಯಿಬಾಬಾರವರು ಶ್ಯಾಮಾರವರಿಗೆ ಅನೇಕ ಪವಿತ್ರ ಗ್ರಂಥಗಳನ್ನು ಪ್ರಸಾದ ರೂಪದಲ್ಲಿ ನೀಡಿರುತ್ತಾರೆ ಮತ್ತು ಅದನ್ನು ಶ್ಯಾಮಾರವರ ಮನೆಯಲ್ಲಿಟ್ಟು ಪೂಜಿಸುವಂತೆ ತಿಳಿಸಿರುತ್ತರಾದ್ದರಿಂದ ಇವರ ಕುಟೀರವು ಅತ್ಯಂತ ಪವಿತ್ರವೆಂದೇ ಹೇಳಬೇಕು. ಇವರ ಮನೆಯ ಮುಂದಿನ ಕೋಣೆಯಲ್ಲಿ ಸಾಯಿಬಾಬಾರವರು ನೀಡಿದ ಸುಂದರ ಗಣೇಶನ ವಿಗ್ರಹವಿದೆ. ಅಲ್ಲದೆ ಕೆಲವು ಬಾಬಾರವರ ಹಳೆಯ ಭಾವಚಿತ್ರಗಳಿವೆ (ಸಾಯಿಬಾಬಾರವರು ಲೇಂಡಿ ಉದ್ಯಾನಕ್ಕೆ ಹೋಗುತ್ತಿರುವ ಚಿತ್ರ, ಬಾಬಾರವರು ಎಡಗಡೆ ಶ್ಯಾಮರವರೊಂದಿಗೆ ಹಾಗೂ ಬಲಗಡೆ ಮಹಾಳಸಾಪತಿಯವರೊಂದಿಗೆ ಕುಳಿತಿರುವ ಚಿತ್ರ).ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿಯವರ ಬಾಬಾ'ಸ್ ಋಣಾನುಬಂಧ್, ಶ್ರೀ ಸಾಯಿ ಸಚ್ಚರಿತ್ರೆ, ಡಾ.ಕೇಶವ ಭಗವಾನ್ ಗಾವಂಕರ್ ರವರ ಶಿರಡಿ ಚೇ ಸಾಯಿಬಾಬಾ ಗ್ರಂಥ ಮತ್ತು ಶ್ರೀ ಸಾಯಿ ಲೀಲಾ ದ್ವೈಮಾಸಿಕ ಪತ್ರಿಕೆ).
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment