ಸಾಯಿ ಮಹಾ ಭಕ್ತ - ಶ್ರೀ ನಂಜುಂಡೇಶ್ವರ್ (೨೮.೦೪.೧೯೨೪ ರಿಂದ ಫೆಬ್ರವರಿ ೨೦೦೦) - ಕೃಪೆ - ಶ್ರೀಮತಿ.ಅನ್ನಪೂರ್ಣ ತಿಲಕ್ ಮತ್ತು ಡಾ.ಶಿವಚರಣ್
ಶ್ರೀ ನಂಜುಂಡೇಶ್ವರ್ ರವರು ಶ್ರೀಮತಿ.ಟೇಕುರ್ ಜಯಲಕ್ಷ್ಮಿ ಹಾಗೂ ಟೇಕುರ್ ಶ್ರೀನಿವಾಸಮೂರ್ತಿಯವರ ಮಗನಾಗಿ ೨೮.೦೪.೧೯೨೪ ರಂದು ಜನಿಸಿದರು. ಶ್ರೀ ನಂಜುಂಡೇಶ್ವರ್ ರವರು ಕರ್ನಾಟಕದ ಶಿಲ್ಪಿ ಎಂದೇ ಹೆಸರಾದ ಸರ್. ಎಂ. ವಿಶ್ವೇಶ್ವರಯ್ಯ ರವರ ಸಂಬಂಧಿಗಳಾಗಿರುತ್ತಾರೆ. ಬೇರೆ ಎಲ್ಲ ಮಕ್ಕಳಂತೆ ನಂಜುಂಡೇಶ್ವರ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಬೆಂಗಳೂರಿನ ಪ್ರಸಿದ್ದ ಕಾಲೇಜೊಂದರಲ್ಲಿ ಬಿ.ಏ. ಪದವಿಗೆ ಸೇರಿದರು. ಆ ಸಮಯದಲ್ಲಿ ನಂಜುಂಡೇಶ್ವರ್ ರವರಿಗೆ ಸಾಯಿಬಾಬಾರವರ ಲೀಲೆಗಳು ಅತೀವ ಪ್ರಭಾವ ಬೀರುವುದಕ್ಕೆ ಪ್ರಾರಂಭವಾಯಿತು. ಬಿ.ಏ. ಪರೀಕ್ಷೆಗೆ ಇನ್ನು ೧೫ ದಿನಗಳಿರುವಾಗ ಸಾಯಿಬಾಬಾರವರು ಇವರಿಗೆ ಸಾಕ್ಷಾತ್ಕಾರ ನೀಡಿ ಈ ಪ್ರಾಪಂಚಿಕ ವಿಷಯಗಳಲ್ಲಿ ಇವರಿಗೆ ಏನು ಉಳಿದಿಲ್ಲವೆಂದು ಮನವರಿಕೆ ಮಾಡಿಕೊಟ್ಟು ಈ ಪ್ರಾಪಂಚಿಕ ಬಂಧನದಿಂದ ಬಿಡುಗಡೆ ಮಾಡಿ ಆಧ್ಯಾತ್ಮಿಕದತ್ತ ಅವರ ಮನಸ್ಸು ಹೋಗುವಂತೆ ಮಾಡಿದರು. ಹೀಗೆ ತಮ್ಮ ಕೃಪಾಕಟಾಕ್ಷದಿಂದ ಸಾಯಿಬಾಬಾರವರು ಶ್ರೀ ನಂಜುಂಡೇಶ್ವರ್ ರವರನ್ನು ತಮ್ಮ ಮಹಾಭಕ್ತರನ್ನಾಗಿ ಮಾಡಿಕೊಂಡರು ಮತ್ತು ತಮ್ಮ ತಕ್ಕೆಗೆ ಎಳೆದುಕೊಂಡರು.
ಶ್ರೀ ನಂಜುಂಡೇಶ್ವರ್ ರವರು ಬಹಳ ಸರಳ ಜೀವಿಯಾಗಿದ್ದರು ಮತ್ತು ಸಾಯಿಬಾಬಾರವರ ಅಪ್ರತಿಮ ಭಕ್ತರಾಗಿದ್ದರು. ಅವರು ಬಾಹ್ಯ ಪ್ರಪಂಚಕ್ಕೆ ತಾವು ದೇವಮಾನವರೆಂದಾಗಲಿ ಅಥವಾ ಅತ್ಮಜ್ಞಾನಿಯೆಂದು ಹೇಳಿಕೊಳ್ಳಲಿಲ್ಲ. ಎಲ್ಲ ಸಾಮಾನ್ಯ ಮನುಷ್ಯರಂತೆ ತಾವು ಕೂಡ ನಡೆದುಕೊಳ್ಳುತ್ತಿದ್ದರು. ಆದರೂ ಕೂಡ ಸಾಯಿಬಾಬಾರವರ ಸಾಕ್ಷಾತ್ಕಾರವನ್ನು ಪಡೆದಿದ್ದರು ಮತ್ತು ನಿಜವಾದ ಮಹಾತ್ಮರು ಕಮಲದ ಎಲೆಯ ಮೇಲಿನ ನೀರಿನಂತೆ ಇರುವ ಹಾಗೆ, ತಾವು ಕೂಡ ಜೀವನ ನಡೆಸುತ್ತಿದ್ದರು. ಯಾರಾದರೂ ಸ್ವಾಮಿ ಅಥವಾ ಬಾಬಾ ಎಂದು ಕರೆದರೆ ಕೋಪಗೊಳ್ಳುತ್ತಿದ್ದರು ಮತ್ತು "ನಾನು ಸ್ವಾಮಿಯು ಅಲ್ಲ ಗುರುವು ಅಲ್ಲ, ನಾನು ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಾಲಕ ಮತ್ತು ಶಿರಡಿ ಸಾಯಿಬಾಬಾ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು" ಎಂದು ಹೇಳುತ್ತಿದ್ದರು. ಶ್ರೀ ನಂಜುಂಡೇಶ್ವರ್ ರವರಿಗೆ ಹೇಗೆ ಸಾಯಿಬಾಬಾ ಸಾಕ್ಷಾತ್ಕಾರವಾಯಿತೆಂದು ಕೇಳಿದರೆ ಕಣ್ಣು ರೆಪ್ಪೆ ಕೂಡ ಮಿಟುಕಿಸದೆ ತಕ್ಷಣವೇ "ನಾನು ಯಾವ ಆಧ್ಯಾತ್ಮಿಕ ಸಾಧನೆಯನ್ನು ಮಾಡಲಿಲ್ಲ. ನಾನು ಕೇವಲ ಬಾಬನಿಗೆ ಒಂದು ಬಿಳಿಯ ಹಾಳೆಯನ್ನು ಕೊಟ್ಟೆ ಅಷ್ಟೇ. ಸಾಯಿಬಾಬಾರವರೆ ಮಿಕ್ಕಿದೆಲ್ಲವನ್ನು ಮಾಡಿದರು" ಎಂದು ಹೇಳುತ್ತಿದ್ದರು. ಇದರಿಂದ ಶ್ರೀ ನಂಜುಂಡೇಶ್ವರ್ ರವರು ಏನು ಹೇಳಬಯಸಿದ್ದರೆಂದರೆ ಸಾಯಿಬಾಬಾರವರ ಸಾಕ್ಷಾತ್ಕಾರವಾಗಬೇಕಾದರೆ ಮಾನವನು ತನ್ನ ಮನಸ್ಸನ್ನು ಬಿಳಿಯ ಹಾಳೆಯಂತೆ ಪರಿಶುದ್ದವಾಗಿ ಇಟ್ಟುಕೊಳ್ಳಬೇಕು. ಆಗ ಖಂಡಿತವಾಗಿ ಸಾಯಿಬಾಬಾರವರ ಸಾಕ್ಷಾತ್ಕಾರ ಆಗುತ್ತದೆ. ಶ್ರೀ ನಂಜುಂಡೇಶ್ವರ್ ರವರು ಆಗಾಗ ತಮ್ಮ ಹತ್ತಿರದ ಜನಗಳಿಗೆ ಹೀಗೆ ಹೇಳುತ್ತಿದ್ದರು "ಶಾಂತರಾಗಿ ಇರುವುದನ್ನು ಕಲಿಯಿರಿ. ಸಾಯಿಬಾಬನ ಮುಂದೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿ. ನಿಮ್ಮ ಎಲ್ಲ ಅಹಂಕಾರಗಳನ್ನು ಮತ್ತು ಋಣಾತ್ಮಕ ಶಕ್ತಿಗಳನ್ನು ಸಾಯಿಬಾಬನಲ್ಲಿ ಅರ್ಪಿಸಿ. ಸಾಯಿಬಾಬನನ್ನು ಯಾವುದೇ ಸಂಶಯ ಪಡದೆ ವಿನಮ್ರರಾಗಿ ಅನುಸರಿಸಿ. ಸಾಯಿಬಾಬಾರವರು ನಿಮಗೆ ಖಂಡಿತವಾಗಿ ಸಾಕ್ಷಾತ್ಕಾರವನ್ನು ನೀಡುವರು". ಶ್ರೀ ನಂಜುಂಡೇಶ್ವರ್ ರವರ ಈ ಮಾತುಗಳು ಎಷ್ಟು ಅರ್ಥಪೂರ್ಣವಾಗಿವೆ ಅಲ್ಲವೇ?
೧೯೬೩ ರಲ್ಲಿ ಶ್ರೀ ನಂಜುಂಡೇಶ್ವರ್ ರವರಿಗೆ ಪ್ರತಿದಿನ ಮಧ್ಯಾನ್ಹ ಮೂರು ಘಂಟೆಯ ಸಮಯದಲ್ಲಿ ಸಾಯಿಬಾಬಾರವರು ಸೂಕ್ಷ್ಮ ರೂಪದಲ್ಲಿ ದರ್ಶನ ನೀಡುತ್ತಿದ್ದರು ಮತ್ತು ಗುರುವಿನ ಅವಶ್ಯಕತೆಯ ಬಗ್ಗೆ ಕನ್ನಡ ಭಾಷೆಯಲ್ಲಿ ಉಪದೇಶವನ್ನು ಕೂಡ ಮಾಡುತ್ತಿದ್ದರು. ಶ್ರೀ ನಂಜುಂಡೇಶ್ವರ್ ರವರು ಬಾಬಾರವರ ಉಪದೇಶಗಳನ್ನು ತಪ್ಪದೆ ಬರೆದಿಟ್ಟುಕೊಳ್ಳುತ್ತಿದ್ದರು. ಸಾಯಿಬಾಬಾರವರು ೧೯೧೮ ರಲ್ಲಿ ಮಹಾಸಮಾಧಿ ಹೊಂದಿದರು. ಹಲವು ಸಂವತ್ಸರಗಳ ಬಳಿಕವು ಕೂಡ ಶ್ರೀ ನಂಜುಂಡೇಶ್ವರ್ ರವರಿಗೆ ತಮ್ಮ ದಿವ್ಯದರ್ಶನ ನೀಡಿದುದು ಸಾಯಿಬಾಬಾರವರ ಒಂದು ಪವಾಡವೇ ಸರಿ. (ತಮ್ಮ ಭಕ್ತರಿಗೆ ಈಗಲೂ ಮಾರ್ಗದರ್ಶನ ನೀಡುತ್ತ ಅವರಿಗೆ ತಮ್ಮ ದಿವ್ಯ ದರ್ಶನವನ್ನು ದಯಪಾಲಿಸುತ್ತ ಮತ್ತು ಅವರ ಕಷ್ಟಗಳನ್ನೆಲ್ಲ ನೀಗುತ್ತ ತಾವು ಜನನ ಮರಣಗಳಿಗೆ ಅತೀತರೆಂದು ಪ್ರಪಂಚಕ್ಕೆ ತೋರಿಸಿದ್ದಾರೆ). ಶ್ರೀ ನಂಜುಂಡೇಶ್ವರ್ ರವರು ಸಾಯಿಬಾಬಾರವರ ಉಪದೇಶಗಳನ್ನು ಹಲವು ವರ್ಷಗಳು ತಮ್ಮ ಬಳಿಯೇ ಜೋಪಾನವಾಗಿ ಇಟ್ಟುಕೊಂಡಿದ್ದರು. ಆದರೆ ಶ್ರೀ ನಂಜುಂಡೇಶ್ವರ್ ರವರಿಗೆ ಹತ್ತಿರವಾಗಿದ್ದ ಕೆಲವು ಸಾಯಿಭಕ್ತರ ಒತ್ತಡಕ್ಕೆ ಮಣಿದು ೩೧ನೇ ಅಕ್ಟೋಬರ್ ೧೯೯೬ ರಲ್ಲಿ "ಶಿರಡಿ ಸಾಯಿಬಾಬಾ ಹೇಳಿದ ಮಾತುಗಳು" ಎಂಬ ಶೀರ್ಷಿಕೆಯಡಿ ಕನ್ನಡ ಭಾಷೆಯಲ್ಲಿ ಪ್ರಕಟಿಸಿದರು. ಗುರುವಿನ ಅನ್ವೇಷಣೆಯಲ್ಲಿರುವವರಿಗೆ ಈ ಪುಸ್ತಕವು ಮಾರ್ಗದರ್ಶಕನ ಹಾಗೆ ಬೆಳಕು ಚೆಲ್ಲುತ್ತದೆ ಮತ್ತು ಆತ್ಮ ಸಾಕ್ಷತ್ಕಾರವಾಗಬೇಕಾದರೆ ಗುರುವಿನ ಅವಶ್ಯಕತೆ ಇದೆ ಎಂದು ತಿಳಿಯಪಡಿಸುತ್ತದೆ. ಕಾಲಾನಂತರದಲ್ಲಿ ಈ ಪುಸ್ತಕವನ್ನು "ಸಾಯಿಬಾಬಾ ವಾಕ್ಸುಧಾಮ್ರುತಮು" ಎಂಬ ಶೀರ್ಷಿಕೆಯಡಿ ಶ್ರೀಮತಿ ಅನ್ನಪೂರ್ಣ ತಿಲಕ್ ರವರು ಬಹಳ ಸುಂದರವಾಗಿ ಅನುವಾದ ಮಾಡಿದ್ದಾರೆ.
ಹೀಗೆ ಶ್ರೀ ನಂಜುಂಡೇಶ್ವರ್ ರವರು ತಮ್ಮ ಸಣ್ಣ ವಯಸ್ಸಿನಲ್ಲೇ ಎಲ್ಲ ಬಂಧನಗಳನ್ನು ತೊರೆದು ಸಾಮಾನ್ಯ ಜನರಿಗೆ ಸಾಯಿಬಾಬರವರನ್ನು ಹೊಂದಲು ನಡೆಯಬೇಕಾದ ದಾರಿಯನ್ನು ತೋರಿಸುತ್ತ ಫೆಬ್ರವರಿ ೨೦೦೦ ಶಿವರಾತ್ರಿಯ ಪವಿತ್ರ ದಿವಸ ಸಾಯಿಪಾದವನ್ನು ಸೇರಿದರು.
ಶ್ರೀ ನಂಜುಂಡೇಶ್ವರ್ ರವರ ತರಹದ ಸಾಯಿಭಕ್ತರು ಇತ್ತೀಚಿನ ದಿನಗಳಲಿ ನಮಗೆ ಕಾಣ ಸಿಗುವುದು ಬಹಳ ಅಪರೂಪ ಎಂದೇ ಹೇಳಬಹುದು.
No comments:
Post a Comment