Thursday, January 21, 2010

ಸಾಯಿ ಮಹಾಭಕ್ತ - ಶ್ರೀ ಸ್ವಾಮಿ ಕೇಶವಯ್ಯಜಿ - ಕೃಪೆ - ಸಾಯಿಅಮೃತಧಾರಾ.ಕಾಂ


ಸ್ವಾಮಿ ಕೇಶವಯ್ಯಜಿಯವರು ಚನ್ನೈನ ಶಣೈ ನಗರದ ಶ್ರೀ ಸಾಯಿಬಾಬಾ ಭಕ್ತ ಸಮಾಜಂನ ಸಂಸ್ಥಾಪಕರು. ಇವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು ಹಾಗೂ  ಸಾಯಿಬಾಬಾರವರ ಲೀಲೆಗಳನ್ನು ಹಾಗೂ ಉಪದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಸ್ವಾಮಿ ಕೇಶವಯ್ಯನವರು ದಕ್ಷಿಣ ಭಾರತದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನ್ನಾರ್ ನದಿಯ ತೀರದಲ್ಲಿರುವ ಪಾಮಿಡಿ ಎಂಬ ಗ್ರಾಮದಲ್ಲಿ ಸಾತ್ವಿಕ ಶೀವೈಷ್ಣವ ಕುಟುಂಬದಲ್ಲಿ ಜನಿಸಿದರು.

ಇವರು 19ನೇ ಶತಮಾನದ ಕೊನೆಯ ಭಾಗದಲ್ಲಿ ಬರುವ ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಜನಿಸಿದರು. ಇವರ ತಂದೆ ಶ್ರೀ.ಸ್ವಾಮಿ ಬಾಲಯ್ಯನವರು ಬಹಳ ದೈವಭಕ್ತರಾಗಿದ್ದರು.

ಸ್ವಾಮೀಜಿಯವರು ತಮ್ಮ ಬಾಲ್ಯದ ದಿನಗಳನ್ನು ಸಂಪೂರ್ಣವಾಗಿ ಪಾಮಿಡಿ ಗ್ರಾಮದಲ್ಲಿಯೇ ಕಳೆದರು. ಆ ಗ್ರಾಮದಲ್ಲಿ ಪೆನ್ನಾರ್ ನದಿಯ ದಡದಲ್ಲಿದ್ದ ಸುಂದರ ಪ್ರಕೃತಿಯ ವಾತಾವರಣ  ಹಾಗೂ ಭೋಗೇಶ್ವರಸ್ವಾಮಿ, ಚೆನ್ನಕೇಶವಸ್ವಾಮಿ ಮತ್ತು ಆಂಜನೇಯಸ್ವಾಮಿಯ ದೇವಾಲಯಗಳು ಇವರನ್ನು ಬಹಳವಾಗಿ ಆಕರ್ಷಿಸಿದವು. ಸ್ವಾಮಿ ಕೇಶವಯ್ಯನವರು ನಿಯಮಿತವಾಗಿ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಗಂಟೆಗಟ್ಟಲೆ ಹೊತ್ತು ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಬಾಲ್ಯದಿಂದಲೇ ದೈವಿಕ ತೇಜಸ್ಸು, ಸರ್ವರನ್ನೂ ಪ್ರೇಮ, ಆತ್ಮೀಯತೆ ಹಾಗೂ ದಯೆಯಿಂದ ಕಾಣುವ ಮನೋಭಾವ ಇವರಲ್ಲಿ ಬೆಳೆದುಬಂದಿತ್ತು. ಆದಕಾರಣ, ಇವರೊಬ್ಬ ದೈವಿಕತೆಯ ಅಂಶವನ್ನು ಹೊಂದಿದ ವಿಶೇಷ ವ್ಯಕ್ತಿಯಾಗಿ ಬೆಳೆಯತೊಡಗಿದರು.

ಇವರ ತಂದೆಯವರು ಇವರನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಇವರಿಗೆ ಗುರು-ಹಿರಿಯರನ್ನು ಕಂಡರೆ ಅಪಾರವಾದ ಗೌರವವಿತ್ತು. ಇವರ ಗುರುಗಳು ಹೇಳಿದ ಮಾತನ್ನು ಎಂದಿಗೂ ಮೀರುತ್ತಿರಲಿಲ್ಲ. ಇವರು ಬಾಲ್ಯದಿಂದಲೇ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದರು. ಚಿಕ್ಕಂದಿನಿಂದಲೇ ದಾನ-ಧರ್ಮಗಳನ್ನು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಇವರಿಗೆ ಡಂಭಾಚರಣೆಯಲ್ಲಿ ನಂಬಿಕೆ ಇರಲಿಲ್ಲ. ದೇವಾಲಯದಲ್ಲಿ ತೆಂಗಿನಕಾಯಿಯನ್ನು ಒಡೆಯುವ ಬದಲಿಗೆ ದಾನ-ಧರ್ಮಗಳನ್ನು ಮಾಡುವುದು ಉತ್ತಮ ಎಂಬ ಮನೋಭಾವನೆಯನ್ನು ಹೊಂದಿದ್ದರು. ಇವರ ಶಾಲೆಯಲ್ಲಿ ನಡೆಸಿದ ಬೈಬಲ್ ತರಗತಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಷ್ಟೇ ಅಲ್ಲದೇ ಜೀಸಸ್ ಕ್ರೈಸ್ಟ್  ಇವರಿಗೆ ದರ್ಶನವನ್ನು ಕೂಡ ಪಾಲಿಸಿದ್ದನು. ಇವರು ಪವಿತ್ರ ಕುರಾನ್ ಗ್ರಂಥವನ್ನು ಪಾರಾಯಣ ಮಾಡಿ ಪ್ರಾಫೆಟ್ ಮೊಹಮ್ಮದ್ ರ ದರ್ಶನವನ್ನು ಕೂಡ ಪಡೆದಿದ್ದರು. ಇವರು ಎಲ್ಲವನ್ನೂ ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಿದ್ದರು. ಹಲವಾರು ಜ್ಯೋತಿಷಿಗಳು ಇವರು ಬಾಲ್ಯದಲ್ಲಿದ್ದಾಗಲೇ ಮುಂದೆ ಒಂದು ದಿನ ಇವರು ಸಂತರಾಗುತ್ತಾರೆಂಬ ಸೂಚನೆಯನ್ನು ನೀಡಿದ್ದರು.

ಇವರು ತಮ್ಮ 14ನೇ ವಯಸ್ಸಿನವರೆವಿಗೂ ಶಾಲೆಯ ಮೆಟ್ಟಿಲನ್ನು ಹತ್ತಿರಲಿಲ್ಲ. ನಂತರ ಪಾಮಿಡಿ ಗ್ರಾಮದಲ್ಲಿದ್ದ ಲಂಡನ್ ಮಿಷನ್ ಮಾಧ್ಯಮಿಕ ಶಾಲೆಗೆ ಸೇರಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಇ.ಡಿ.ಲೇಕರ್ ರವರ ಬಳಿ ಆಂಗ್ಲ ಪದಗಳನ್ನು ಕಲಿಯಲು ಪ್ರಾರಂಭಿಸಿದರು. ಕಲಿಯಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇವರು ಶ್ರೀ.ಇ.ಡಿ.ಲೇಕರ್ ರವರು ತಮ್ಮನ್ನು ಮೆಚ್ಚುವಂತೆ ಮಾಡುವಲ್ಲಿ ಯಶಸ್ವಿಯಾದರು. ಶ್ರೀ.ಇ.ಡಿ.ಲೇಕರ್ ರವರು ಹೋದ ಕಡೆಯೆಲ್ಲಾ ಇವರು ಹಿಂಬಾಲಿಸಿಕೊಂಡು ಹೋಗುತ್ತಿದ್ದರು ಮತ್ತು ದೇವರು ಹಾಗೂ ಧರ್ಮದ ಬಗ್ಗೆ ಹೆಚ್ಚಿನ ವಿಚಾರವನ್ನು ತಿಳಿದುಕೊಂಡರು. ಕೇವಲ ಎರಡೇ ವರ್ಷದಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ ಅನಂತಪುರದಲ್ಲಿದ್ದ ಪ್ರೌಢಶಾಲೆಯಲ್ಲಿ ಆಗಿನ 4ನೇ ಫಾರ್ಮ್ ಗೆ ಪ್ರವೇಶವನ್ನು ಗಳಿಸಿದರು. ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲಿಗರಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು ಮತ್ತು ಮಂಚೂಣಿಯಲ್ಲಿದ್ದರು.  ಶಾಲೆಯಲ್ಲಿ ನಡೆಸುತ್ತಿದ್ದ ಬೈಬಲ್ ತರಗತಿಗೆ ಸೇರಿ ""33 Years life of Jesus" ಎಂಬ ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಿ ಮೊದಲ ಸ್ಥಾನವನ್ನು ಗಳಿಸಿದರು. ಬಾಲ ಕೇಶವಯ್ಯನವರಿಗೆ ಓದಿನಲ್ಲಿ ಇದ್ದ ಆಸಕ್ತಿಯನ್ನು ಕಂಡ ಶಾಲೆಯ ಮುಖ್ಯ ನಿರ್ವಹಣಾಧಿಕಾರಿ ಜರ್ಮನಿ ದೇಶದ ಕುಮಾರಿ.ಕ್ರಿಸ್ಟಲಿಬ್ ರವರು ಇವರಿಗೆ ಅತ್ಯುತ್ತಮ ಶಿಕ್ಷಣ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಲ ಕೇಶವಯ್ಯನವರು ಎಲ್ಲಾ ಧರ್ಮಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೂ ಸಹ ಹಿಂದೂ ಧರ್ಮದಲ್ಲಿ ಇವರಿಗೆ ಅಚಲವಾದ ನಂಬಿಕೆಯಿತ್ತು. ಬಾಲ ಕೇಶವಯ್ಯನವರು ಶಾಲೆಯಲ್ಲಿ ಚೆನ್ನಾಗಿ ಓದಿ ತಮ್ಮ 10ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿದರು. ಇವರ ಮನೆಯ ಹಣಕಾಸಿನ ಪರಿಸ್ಥಿತಿ  ಉತ್ತಮವಾಗಿರಲ್ಲಿಲ್ಲವಾದ ಕಾರಣ ಮುಂದೆ ಓದಲಾಗದೇ  ಸರಕಾರಿ ಕೆಲಸಕ್ಕೆ ಸೇರಿದರು. ಮುಂದಿನ ದಿನಗಳಲ್ಲಿ ಜನರು ಇವರನ್ನು "ಸ್ವಾಮಿ ಕೇಶವಯ್ಯ" ಎಂದು ಸಂಬೋಧಿಸುತ್ತಿದ್ದರು. 

ಅಂದಿನ ಮದ್ರಾಸ್ ರಾಜ್ಯದ ಸರ್ಕಾರಿ ನೋಂದಣಿ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರು. ಕೇವಲ ಕೆಲವೇ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಹುದ್ದೆಗೆ ಬಡ್ತಿಯನ್ನು ಪಡೆದರು. ಬಡವರ ಮೇಲೆ ಇವರಿಗಿದ್ದ ಕಾಳಜಿಯನ್ನು ನೋಡಿದ ಜನರು ಇವರನ್ನು "ಸಂತ ಸಬ್ ರಿಜಿಸ್ಟ್ರಾರ್" ಎಂದು ಕರೆಯುತ್ತಿದ್ದರು. ಇವರ ಮೇಲಿನ ಅಧಿಕಾರಿಗಳು ಇವರ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿ ಆರು ಬಾರಿ ಇವರಿಗೆ ಹೆಚ್ಚಿನ ವೇತನ ಹಾಗೂ ಪುರಸ್ಕಾರವನ್ನು ನೀಡಿ ಗೌರವಿಸಿದ್ದರು. ಮನೆಯಲ್ಲಿ ದಯಾವಂತರಾಗಿ ಹಾಗೂ ಕಚೇರಿಯಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯಾಗಿ ಎಲ್ಲರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರ ಕೆಲಸದ ಸಂಪೂರ್ಣ ಅವಧಿಯಲ್ಲಿ ಇವರ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಕೂಡ ಬರದಂತೆ ಎಚ್ಚರಿಕೆ ವಹಿಸಿದ್ದರು.

ಇವರು ಧರ್ಮಾವರಂ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಾಯಿಬಾಬಾರವರ ಆಶೀರ್ವಾದ ಹಾಗೂ ಕೃಪೆ ಇವರ ಮೇಲೆ 1ನೇ ಜುಲೈ 1939 ರ ರಾತ್ರಿ ಆಯಿತು. ಶಿರಡಿಗೆ ಹೋಗದೇ, ಸಾಯಿಬಾಬಾ ಯಾರೆಂದು ತಿಳಿಯದೇ, ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡದೇ ಇವರ ಸ್ನೇಹಿತರಾದ ಅನಂತಪುರದ ವಕೀಲರಾದ ಶ್ರೀ.ಮಲ್ಲಿರೆಡ್ಡಿಯವರಿಂದ ಕೇವಲ ಸಾಯಿಬಾಬಾರವರ ಹೆಸರನ್ನು ಕೇಳಿದ ಕೆಲವೇ ಗಂಟೆಗಳಲ್ಲಿ ಇವರಿಗೆ ಸಾಯಿಬಾಬಾರವರ ಸಾಕ್ಷಾತ್ಕಾರವಾಗಿ ಕೃಪಾಸಿದ್ಧರಾದರೆಂದರೆ ಆಶ್ಚರ್ಯವಲ್ಲದೇ ಮತ್ತೇನು?? ಸ್ವಾಮಿ ಕೇಶವಯ್ಯನವರು ಈ ವಿಷಯವನ್ನು ತಮ್ಮ ಪತ್ನಿ ಶ್ರೀಮತಿ.ಗೋವಿಂದಮ್ಮಾಳ್ ಗೆ ತಿಳಿಸಿರುತ್ತಾರೆ. ಆ ವೃತ್ತಾಂತ ಈ ರೀತಿಯಿದೆ: 1ನೇ ಜುಲೈ 1939 ರ ರಾತ್ರಿ ಸಾಯಿಬಾಬಾರವರು ಸ್ವಾಮಿ ಕೇಶವಯ್ಯನವರ ಕನಸಿನಲ್ಲಿ ಬಂದು ನಾಲ್ಕೈದು ನಿಮಿಷಗಳ ಕಾಲ ಜೊತೆಯಲ್ಲಿದ್ದರೆಂದು ಹೇಳಲಾಗುತ್ತದೆ. ಇದರಿಂದ ಸ್ವಾಮಿ ಕೇಶವಯ್ಯನವರಿಗೆ ಅತೀವ ಸಂತೋಷವಾಗಿ ಧನ್ಯತೆಯ ಭಾವವನ್ನು ಹೊಂದಿದರೆಂದು ತಿಳಿದುಬಂದಿರುತ್ತದೆ. ಮಾರನೇ ದಿನ ಸಾಯಿಬಾಬಾರವರ ಭಾವಚಿತ್ರವನ್ನು ಕೊಂಡು ಪೂಜೆ ಮಾಡಬೇಕೆಂದು ಸ್ವಾಮಿ ಕೇಶವಯ್ಯನವರು ಅಂದುಕೊಂಡರು. ಆದರೆ, ಒಂದು ವಿಚಿತ್ರ ಸಂಗತಿ ನಡೆಯಿತು. ಅದೇನೆಂದರೆ, ಮಾರನೇ ದಿನ ಅಂಚೆಯ ಮುಖಾಂತರ ಸಾಯಿಬಾಬಾರವರ ಭಾವಚಿತ್ರ ಹಾಗೂ ನಂತರದ ದಿನ ಉಧಿ ಪೊಟ್ಟಣ ಸ್ವಾಮಿ ಕೇಶವಯ್ಯನವರ ಮನೆಗೆ ಬಂದು ಮುಟ್ಟುತ್ತದೆ. ಆದರೆ, ಯಾರು ಕಳುಹಿಸಿದರು ಎಂಬ ಬಗ್ಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ.

ಸ್ವಾಮಿ ಕೇಶವಯ್ಯನವರು ಸಾಯಿಬಾಬಾರವರನ್ನು ಹುಡುಕಿಕೊಂಡು ಹೋಗಲಿಲ್ಲ. ಬದಲಿಗೆ ಸಾಯಿಬಾಬಾರವರೇ ಸ್ವಯಂ ಇವರ ಬಳಿಗೆ ಬಂದು ಭಕ್ತರ ಮೇಲೆ ತಮಗಿದ್ದ ಪ್ರೀತಿಯನ್ನು ತಿಳಿಸಲು ಸ್ವಾಮಿ ಕೇಶವಯ್ಯನವರನ್ನು ಒಂದು ಆಯುಧವನ್ನಾಗಿ ಬಳಸಿಕೊಂಡರೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಂತರದ ನಾಲ್ಕು ದಶಕಗಳಲ್ಲಿ ಸ್ವಾಮಿ ಕೇಶವಯ್ಯನವರು ಮಾಡಿದ ಸಾಯಿ ಸೇವೆಯನ್ನು ಗಮನಿಸಿದರೆ ಸಾಯಿಬಾಬಾರವರು ಇವರನ್ನು ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿದ್ದು ಸರಿ ಎಂದು ನಮಗೆ ಮನದಟ್ಟಾಗುತ್ತದೆ.   1939 ನೇ ಇಸವಿಯ ನಂತರದ ಸ್ವಾಮಿ ಕೇಶವಯ್ಯನವರ ಜೀವನ ಶೈಲಿ ಶಿರಡಿ ಸಾಯಿಬಾಬಾರವರ ಜೀವನದಂತೆಯೇ ಇತ್ತೆಂದರೆ ತಪ್ಪಾಗಲಾರದು.  7ನೇ ಏಪ್ರಿಲ್ 1941 ರಂದು ಇವರಿಗೆ ಪೆನುಕೊಂಡಕ್ಕೆ ವರ್ಗವಾಯಿತು. ಅಂದಿನಿಂದ ಪ್ರತಿ ಗುರುವಾರದಂದು ಇವರು ಮಾಡುತ್ತಿದ್ದ ಸಾಯಿಬಾಬಾರವರ ಪೂಜೆ, ಪುನಸ್ಕಾರಗಳನ್ನು ಸಾವಿರಾರು ಜನರನ್ನು ಇವರ ಕಡೆ ಸೆಳೆಯಿತು.

ಒಮ್ಮೆ ಸ್ವಾಮಿ ಕೇಶವಯ್ಯನವರು ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಪ್ರಸಿದ್ಧ ಸುಬ್ರಮಣ್ಯ ದೇವರ ಕ್ಷೇತ್ರವಾದ ಪಳನಿಗೆ ದರ್ಶನಕ್ಕೆಂದು ತೆರಳಿದ್ದರು. ಪೂಜೆ ಮುಗಿದ ನಂತರ ಕೆಲವು ನಿಮಿಷಗಳ ಕಾಲ ಸ್ವಾಮಿ ಕೇಶವಯ್ಯನವರು ಧ್ಯಾನದಲ್ಲಿ ಮಗ್ನರಾದರು. ಧ್ಯಾನ ಮುಗಿಸಿ ಕಣ್ಣು ತೆರೆದಾಗ ಸುಬ್ರಮಣ್ಯ ದೇವರ ವಿಗ್ರಹವಿದ್ದ ಸ್ಥಳದಲ್ಲಿ ವಿಗ್ರಹಕ್ಕೆ ಬದಲಾಗಿ ಜ್ಯೋತಿಯೊಂದು ಇವರಿಗೆ ಕಾಣಿಸಿತು. ಇವರ ದೇಹವು ಸಂಪೂರ್ಣ ಹಗುರವಾದಂತೆ ಕಂಡುಬಂದಿತು. ಇವರಿಗೆ ದಿವ್ಯ ಆಧ್ಯಾತ್ಮಿಕ ಅನುಭವವಾಗಿತ್ತು. ಆ ದಿನದಿಂದ ಇವರಿಗೆ ವಿಶೇಷ ಶಕ್ತಿ ಪ್ರಾಪ್ತವಾಯಿತು. ಇವರ ಬಳಿಗೆ ಯಾರೇ ಬಂದರೂ ಅವರು ಕೇಳದೆಯೇ ಅವರ ಹಿಂದಿನ ಚರಿತ್ರೆಯನ್ನು ಹೇಳುತ್ತಿದ್ದರು. ಅಲ್ಲದೇ ಅವರ ಮುಂದಿನ ಭವಿಷ್ಯವನ್ನು ಕೂಡ ಹೇಳುತ್ತಿದ್ದರು. ಇವರ ಬಳಿಗೆ ಬಂದ ಜನರು ಹೇಗೆ ಮುಂದೆ ತಮಗೆ ಒದಗಿಬರುವ ತೊಂದರೆಯಿಂದ ಪಾರಾಗಬೇಕೆಂಬ ವಿಧಾನವನ್ನು ಹೇಳಿಕೊಡುತ್ತಿದ್ದರು. ಎಲ್ಲಾ ಸಿದ್ಧಿಗಳು ಇವರ ಅಧೀನದಲ್ಲಿದ್ದವು. ಆದರೆ ಸ್ವಾಮಿ ಕೇಶವಯ್ಯನವರು ಎಂದಿಗೂ ಆ ಸಿದ್ಧಿಗಳಿಗಾಗಿ ಸಾಧನೆಯನ್ನು ಮಾಡಲಿಲ್ಲ ಅಥವಾ ಅದನ್ನು ಪಡೆಯಬೇಕೆಂದು ಪ್ರಯತ್ನ ಮಾಡಲಿಲ್ಲ. ಆ ಸಿದ್ಧಿಗಳು ತಾವಾಗಿಯೇ ಸ್ವಾಮಿ ಕೇಶವಯ್ಯನವರನ್ನು ಅರಸಿ ಬಂದವು.

ಸ್ವಾಮಿ ಕೇಶವಯ್ಯನವರು ನಿತ್ಯ ಪೂಜೆಯನ್ನು ಮಾಡುವುದಷ್ಟೇ ಅಲ್ಲದೇ ಗುರುವಾರಗಳಂದು ವಿಶೇಷ ಪೂಜೆಯನ್ನು ಮಾಡುತ್ತಿದ್ದರು. ಈ ಗುರುವಾರದ ಪೂಜೆಗೆ ಸಾವಿರಾರು ಭಕ್ತರು ಬಂದು ಸೇರುತ್ತಿದ್ದರು. ಪ್ರತಿಯೊಬ್ಬ ಭಕ್ತರು ಪೂಜಾ ಮಂದಿರದ ಒಳಗೆ ಬಂದ ಕೂಡಲೇ ಸ್ವಾಮಿ ಕೇಶವಯ್ಯನವರು ಸಾಯಿಬಾಬಾರವರ ಭಾವಚಿತ್ರವನ್ನು ದೃಷ್ಟಿಸಿ ನೋಡಿ ಒಳಗೆ ಬಂದ ಭಕ್ತರ ಕಷ್ಟಗಳನ್ನು ಸಾಯಿಬಾಬಾರವರ ಬಳಿ ನಿವೇದನೆ ಮಾಡಿ ಆ ತೊಂದರೆಗೆ ಪರಿಹಾರವನ್ನು ತಿಳಿಸುತ್ತಿದ್ದರು. ಭಕ್ತರ ಬಳಿ ಮಾತನಾಡುವಾಗ ಇವರಿಗೆ ಸಾಯಿಬಾಬಾರವರು ತಮ್ಮೊಳಗಿರುವರೆಂಬ ಅರಿವು ಇರುತ್ತಿರಲಿಲ್ಲ. ಸಾಯಿಬಾಬಾರವರ ಆಜ್ಞೆಯಿಲ್ಲದೇ ಇವರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಭಕ್ತರು ಇವರ ಬಳಿ ಮುಖತಃ ಬರಲು ಆಗದಿದ್ದಾಗ ಪತ್ರಮುಖೇನ ಇವರಿಗೆ ವಿಷಯವನ್ನು ತಿಳಿಸುತ್ತಿದ್ದರು. ಸ್ವಾಮಿ ಕೇಶವಯ್ಯನವರು ಆ ಪತ್ರವನ್ನು ಸಾಯಿಬಾಬಾರವರ ಭಾವಚಿತ್ರದ ಮುಂದೆ ಇರಿಸಿ ಸಾಯಿಬಾಬಾರವರಿಂದ ಉತ್ತರವನ್ನು ತಿಳಿದುಕೊಂಡು ಆ ಪತ್ರಕ್ಕೆ ಮರು ಉತ್ತರ ಬರೆದು ಕಳುಹಿಸುತ್ತಿದ್ದರು. ಸಾಯಿಬಾಬಾರವರು ಇವರಿಗೆ ತಮ್ಮ ಭಾವಚಿತ್ರದ ಮುಖಾಂತರ ಹಾಗೂ ಕನಸಿನಲ್ಲಿ ಬಂದು ಮಾತನಾಡುತ್ತಿದ್ದರೆಂದು ತಿಳಿದುಬಂದಿರುತ್ತದೆ. ಹೀಗೆ ತಮ್ಮ ಲೌಕಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಆಧ್ಯಾತ್ಮಿಕ ಜೀವನವನ್ನು ಕೂಡ ನೆಡೆಸಿಕೊಂಡು ಹೋಗುತ್ತಾ ತಮ್ಮ ಬಳಿ ಬಂದ ಜನರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಮಾನವೀಯತೆಯನ್ನು ಸ್ವಾಮಿ ಕೇಶವಯ್ಯನವರು ಮೆರೆದರು.

ಸ್ವಾಮಿ ಕೇಶವಯ್ಯನವರು 1947ನೇ ಇಸವಿಯಲ್ಲಿ ಪೆನುಕೊಂಡದಲ್ಲಿ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಿದರು. ಇವರು ಮಾಡಿದ ಈ ಕಾರ್ಯವನ್ನು ಇವರ ಹತ್ತಿರದ ಸ್ನೇಹಿತರು ಇಂದಿಗೂ ನೆನೆಯುತ್ತಾರೆ. ಬಹಳ ದೂರದ ಊರುಗಳಿಂದ ಪೆನುಕೊಂಡ ಸಾಯಿಬಾಬಾ ಮಂದಿರಕ್ಕೆ ಭಕ್ತರು ಬಂದು ತಮ್ಮ ಕಷ್ಟಗಳನ್ನು ಸ್ವಾಮಿ ಕೇಶವಯ್ಯನವರ ಮುಖಾಂತರ ಸಾಯಿಬಾಬಾರವರಲ್ಲಿ ಹೇಳಿಕೊಂಡು ಅವರ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ತಮ್ಮ ಬಳಿಗೆ ಬಂದ ಎಲ್ಲಾ ಭಕ್ತರಿಗೂ ಸ್ವಾಮಿ ಕೇಶವಯ್ಯನವರು ಪವಿತ್ರ ತೀರ್ಥ ಹಾಗೂ ಉಧಿಯನ್ನು ನೀಡುತ್ತಿದ್ದರು ಮತ್ತು ಆಶೀರ್ವದಿಸುತ್ತಿದ್ದರು. ಭಕ್ತರು ಸ್ವಾಮಿ ಕೇಶವಯ್ಯನವರಲ್ಲಿ ಸಾಯಿಬಾಬಾರವರ ದಯೆಯನ್ನು ಕಂಡಿದ್ದರು. ತಮ್ಮ ಬಳಿಗೆ ಬರುತ್ತಿದ್ದ ಸಮಾಜದ ಎಲ್ಲಾ ವರ್ಗದ ಭಕ್ತರಲ್ಲಿ ಸಾಯಿಬಾಬಾರವರ ಮೇಲೆ ಅತ್ಯಂತ ಹೆಚ್ಚಿನ ನಂಬಿಕೆ ಬರುವಂತೆ ಮಾಡುವಲ್ಲಿ ಸ್ವಾಮಿ ಕೇಶವಯ್ಯನವರು ಯಶಸ್ವಿಯಾಗಿದ್ದರು. ಆದರೆ ಯಾವುದಕ್ಕೂ ತಾವು ಕಾರಣಕರ್ತರು ಎಂದು ಹೊಗಳಿಕೊಳ್ಳುತ್ತಿರಲಿಲ್ಲ. ಒಮ್ಮೆ ಆಂಧ್ರಪ್ರದೇಶದ ಗೂಟಿ ಪ್ರಾಂತ್ಯದಲ್ಲಿ ಮಳೆ ಬಾರದೇ ಬರಗಾಲ ಪರಿಸ್ಥಿತಿ ತಲೆದೋರಿದಾಗ ಸಾಯಿಬಾಬಾರವರಲ್ಲಿ ಪ್ರಾರ್ಥನೆಯನ್ನು ಮಾಡಿ ವರ್ಷಧಾರೆಯಾಗುವಂತೆ ಮಾಡಿದರು.

ತಮ್ಮ ಜೀವಿತಾವಧಿಯಲ್ಲಿ ಇವರು ಶಿರಡಿಗೆ 73 ಬಾರಿ ಯಾತ್ರೆಯನ್ನು ಕೈಗೊಂಡಿದ್ದರು. ಅಲ್ಲದೇ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಸಾಯಿಬಾಬಾ ಮಂದಿರಗಳನ್ನು ಪ್ರಾರಂಭಿಸಲು ಕಾರಣೀಭೂತರಾದರು.

1948ನೇ ಇಸವಿಯಲ್ಲಿ ದೇಹದ ಆರೋಗ್ಯ ಉತ್ತಮವಾಗಿಲ್ಲವಾದ ಕಾರಣ ಚಿಕಿತ್ಸೆಗಾಗಿ ಚನ್ನೈ ನಗರಕ್ಕೆ ಬಂದರು. ನಂತರ 1949ನೇ ಇಸವಿಯಲ್ಲಿ ಆರೋಗ್ಯ ಸುಧಾರಿಸಿದ ನಂತರ ಶಣೈ ನಗರದ ತಮ್ಮ ನಿವಾಸ "ಸಾಯಿ ನಿಲಯಂ" ಲ್ಲಿ ಪ್ರತಿ ಗುರುವಾರ ವಿಶೇಷ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಸಾವಿರಾರು ಜನರು ಈ ಪೂಜೆಯನ್ನು ನೋಡಲು ಬಂದು ಸೇರುತ್ತಿದ್ದರು. ಪೂಜೆಯಲ್ಲಿ ಪಾಲ್ಗೊಂಡು ತಮ್ಮ ತೊಂದರೆಗಳನ್ನು ಸ್ವಾಮೀಜಿಯವರಲ್ಲಿ ಹೇಳಿಕೊಂಡು ಅವರಿಂದ ಶಿರಡಿಯಿಂದ ತಂದ ಪವಿತ್ರ ಉಧಿ ಪ್ರಸಾದವನ್ನು ಸ್ವೀಕರಿಸಿ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಸ್ವಾಮೀಜಿಯವರು ಗುರುಪೂರ್ಣಿಮೆ, ಶ್ರೀರಾಮನವಮಿ, ಗೋಕುಲಾಷ್ಟಮಿ ಮತ್ತು ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು. ದೂರದ ಊರುಗಳಿಂದ ಬಂದು ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಸಂದರ್ಭಗಳಲ್ಲಿ ಸ್ವಾಮೀಜಿಯವರು ಭಕ್ತರಿಗೆ ನೀಡುತ್ತಿದ್ದ ಸಂದೇಶಗಳು ಬಹಳ ಅರ್ಥಪೂರ್ಣವಾಗಿರುತ್ತಿದ್ದವು.

ತಮ್ಮ ಮನೆಯ ಎದುರುಗಡೆ ಇದ್ದ ವಿಶಾಲವಾದ ಖಾಲಿ ಸ್ಥಳದಲ್ಲಿ ಸಾಯಿಬಾಬಾರವರಿಗಾಗಿ ಒಂದು ಭವ್ಯವಾದ ಮಂದಿರವನ್ನು ಕಟ್ಟಿಸಬೇಕೆಂಬ ಕನಸು ಸ್ವಾಮೀಜಿಯವರಿಗೆ ಬಹಳ ಕಾಲದಿಂದಲೂ ಇತ್ತು. ಸ್ವಾಮೀಜಿಯವರ ಕನಸು ನನಸಾಗಿ 14ನೇ ಮಾರ್ಚ್ 1975 ರಂದು ಶಣೈ ನಗರದ ಸಾಯಿಬಾಬಾ ಮಂದಿರ ಪ್ರಾರಂಭವಾಯಿತು. ಅಲ್ಲದೇ ಧ್ಯಾನಮಂದಿರವೂ ಕೂಡ ಉದ್ಘಾಟನೆಗೊಂಡಿತು. ಅಲ್ಲದೇ ಅಂದಿನ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ಶ್ರೀ.ಸಿ.ಸುಬ್ರಮಣ್ಯಂರವರು 15ನೇ ಮಾರ್ಚ್ 1975 ರಂದು ವಿಶೇಷ ಸ್ಮರಣ ಸಂಚಿಕೆಯನ್ನು ಕೂಡ ಬಿಡುಗಡೆ ಮಾಡಿದರು.

ಸ್ವಾಮೀಜಿಯವರು ತಮ್ಮ ಬಳಿಗೆ ಬರುತ್ತಿದ್ದ ಭಕ್ತರ ಮನವನ್ನು ಪರಿವರ್ತನೆಗೊಳಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಅತ್ಯಂತ ಕ್ಲಿಷ್ಟವಾದ ಈ ಕಾರ್ಯವನ್ನು ಸ್ವಾಮೀಜಿಯವರು ಸಾಯಿಬಾಬಾರವರ ದಯೆಯಿಂದ ನಿರಾಯಾಸವಾಗಿ ಮಾಡುತ್ತಿದ್ದರು. ನಾಸ್ತಿಕರನ್ನು ಕೂಡ ಸಾಯಿ ಭಕ್ತರನ್ನಾಗಿ ಮಾಡುವಲ್ಲಿ ಸ್ವಾಮೀಜಿಯವರು ಯಶಸ್ವಿಯಾಗಿದ್ದರು.  ಸಾಯಿಭಕ್ತರಲ್ಲಿ ಅಗ್ರಗಣ್ಯರು ಮತ್ತು ಅನನ್ಯರೂ ಸ್ವಾಮಿ ಕೇಶವಯ್ಯನವರು ಎಂದರೆ ತಪ್ಪಾಗಲಾರದು. ಭಾರತದ ಹಲವಾರು ಸಾಯಿಭಕ್ತಾಗ್ರೇಸರು ಸ್ವಾಮಿ ಕೇಶವಯ್ಯನವರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

ಸ್ವಾಮಿ ಕೇಶವಯ್ಯನವರು ಒಳ್ಳೆಯ ವಾಗ್ಮಿಗಳಾಗಿದ್ದರು. ಇವರು ಹೋದ ಕಡೆಯೆಲ್ಲಾ ಇವರ ಉಪನ್ಯಾಸವನ್ನು ಕೇಳಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದರು. ಸ್ವಾಮಿ ಕೇಶವಯ್ಯನವರು 9ನೇ ಆಗಸ್ಟ್ 1981 ರ ಪವಿತ್ರ ಶ್ರಾವಣ ಶುದ್ಧ ದಶಮಿಯ ದಿನದಂದು ಸೂರ್ಯಾಸ್ತ ಸಮಯ ಸಂಜೆ 6:30ಕ್ಕೆ ಸರಿಯಾಗಿ ಸಮಾಧಿಸ್ಥರಾದರು. ತಾವು ಸಮಾಧಿಯಾಗುವುದಕ್ಕೆ ಸ್ವಲ್ಪ ಸಮಯದ ಹಿಂದೆ ಉಧಿ ನೀಡುವಂತೆ ಕೇಳಿಕೊಂಡರು. ಸ್ವಲ್ಪ ಉಧಿಯನ್ನು ಬಾಯಿಗೆ ಹಾಕಿಕೊಂಡು, ತಮ್ಮ ಹಣೆಗೆ ತಾವೇ ಹಚ್ಚಿಕೊಂಡರು. ಕುರ್ಚಿಯಲ್ಲಿ ಕುಳಿತುಕೊಂಡು "ಅಲ್ಲಾ ಮಾಲಿಕ್" ಎಂದು ಹೇಳುತ್ತಾ ತಮ್ಮ ಕಣ್ಣನ್ನು ಮುಚ್ಚಿಕೊಂಡರು. ಸ್ವಲ್ಪ ಸಮಯದ ನಂತರ ಅವರ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಲಾಯಿತು. ಸ್ವಾಮಿ ಕೇಶವಯ್ಯನವರು ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಸ್ವಾಮಿ ಕೇಶವಯ್ಯನವರು ಇಂದು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ ಅವರು ಮಾನವ ಕುಲಕ್ಕೆ ಮಾಡಿದ ಸೇವೆ, ಅವರು ಮಾಡಿದ ಸಾಯಿ ಪ್ರಚಾರ ಅವರನ್ನು ಇನ್ನೂ ನಮ್ಮ ಮನೆ-ಮನಗಳಲ್ಲಿ ಜೀವಂತವಾಗಿರಿಸಿದೆ.

ಕನ್ನಡ ಅನುವಾದ: ಶ್ರೀಕಂಠಶರ್ಮ

No comments:

Post a Comment