ಸಾಯಿ ಮಹಾ ಭಕ್ತ - ಅವತಾರ್ ಮೆಹರ್ ಬಾಬಾ (೨೫ ನೇ ಫೆಬ್ರವರಿ ೧೮೯೪ ರಿಂದ ೩೧ ನೇ ಜನವರಿ ೧೯೬೯) - ಕೃಪೆ - ಸಾಯಿಅಮೃತಧಾರಾ.ಕಾಂ
ಮರ್ವಿನ್ ಶೆರಿಯರ್ ಇರಾನಿ ಆಲಿಯಾಸ್ ಮೆಹರ್ ಬಾಬಾ ಅವರು ೨೫ ನೇ ಫೆಬ್ರವರಿ ೧೮೯೪ ರಂದು ಒಂದು ಜೊರಾಸ್ಟ್ರಿಯನ್ ವಂಶದಲ್ಲಿ ಪುಣೆಯಲ್ಲಿ ಜನಿಸಿದರು. ಇವರ ತಂದೆಯವರು ಆಧ್ಯಾತ್ಮಿಕದತ್ತ ಮೊದಲಿನಿಂದಲೂ ಒಲವು ತೋರುತ್ತಿದ್ದರು. ಇವರ ತಂದೆಯ ಆಧ್ಯಾತ್ಮಿಕ ಗುರುಗಳು ಇವರಿಗೆ ತಮ್ಮ ಮಗನ ಮುಖಾಂತರ ಭಗವಂತನ ಸಾಕ್ಷಾತ್ಕಾರವಾಗುವುದೆಂದು ಭವಿಷ್ಯ ನುಡಿದರು. ತಂದೆಯವರಿಗೆ ೨ ನೇ ಮಗನಾದ ಮೆಹರ್ ಬಾಬಾರವರು ನೋಡಲು ಬಹಳ ಸುಂದರವಾಗಿದ್ದರು ಮತ್ತು ಎಲ್ಲರನ್ನು ಆಕರ್ಷಿಸುತ್ತಿದ್ದರು. ಇವರು ತಮ್ಮ ಪ್ರಾಥಮಿಕ ವ್ಯಾಸಂಗವನ್ನು ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿಯೂ ಮತ್ತು ಕಾಲೇಜ್ ವ್ಯಾಸಂಗವನ್ನು ಡೆಕ್ಕನ್ ಕಾಲೇಜ್ ನಲ್ಲಿಯೂ ಪೂರ್ಣಗೊಳಿಸಿದರು.
ಮೆಹರ್ ಬಾಬಾ ಇವರ ಶಿಷ್ಯರು ಇವರಿಗೆ ಕೊಟ್ಟ ಹೆಸರಾಗಿದೆ. ೫ ಗುರುಗಳ ಬಳಿ ಸತತ ಶಿಷ್ಯ ವೃತ್ತಿಯನ್ನು ಪೂರ್ಣಗೊಳಿಸಿದ ಬಳಿಕ ಮೆಹರ್ ಬಾಬಾರವರು ೧೯೨೨ ರಲ್ಲಿ ತಮ್ಮ ಆಧ್ಯಾತ್ಮಿಕ ವೃತ್ತಿಯನ್ನು ಪ್ರಾರಂಭಿಸಿದರು. ಹಜ್ರತ್ ಬಾಬಾಜಾನ್ ಎಂಬ ಪುಣೆಯ ವಯೋವೃದ್ದ ಮಹಿಳಾ ಗುರುಗಳು ಇವರಿಗೆ ಆಧ್ಯಾತ್ಮಿಕ ಉಪದೇಶವನ್ನು ಜನವರಿ ೧೯೧೪ ರಲ್ಲಿ ಇವರ ಹಣೆಗೆ ಚುಂಬಿಸುವ ಮೂಲಕ ನೀಡಿದರು. ಅವರು ತಮ್ಮ ಗುರುಗಳಿಂದ ಆಧ್ಯಾತ್ಮಿಕ ಶಕ್ತಿಪಾತವಾದ ಕೂಡಲೇ ತಮ್ಮ ಸಹಜ ಸ್ಥಿತಿಯಿಂದ ಸಮಾಧಿ ಸ್ಥಿತಿಗೆ ಹೊರಟು ಹೋದರು. ಅಲ್ಲಿಂದ ಮುಂದೆ ೯ ತಿಂಗಳ ಕಾಲ ಹೆಚ್ಚಿಗೆ ಆಹಾರ ಸೇವಿಸುವುದಾಗಲಿ ಅಥವಾ ನಿದ್ದೆ ಮಾಡುವುದಾಗಲಿ ಅವರಿಂದ ಸಾಧ್ಯವಾಗಲಿಲ್ಲ.
ಇದರಿಂದ ಆಶ್ಚರ್ಯಗೊಂಡ ಮೆಹರ್ ಬಾಬಾರವರು ಹುಚ್ಚು ಹಿಡಿದವರಂತಾಗಿ ಮುಂದಿನ ವರ್ಷವೇ ತಮ್ಮ ೫ ಗುರುಗಳಲ್ಲಿ ಮಹಾ ಗುರುಗಳಾದ ಶಿರಡಿ ಸಾಯಿಬಾಬಾರವರ ದರ್ಶನ ಪಡೆಯಲು ಶಿರಡಿಗೆ ತೆರಳಿದರು. ಸಾಯಿಬಾಬಾರವರು ಮೆಹರ್ ಬಾಬಾರವರನ್ನು ನೋಡಿದ ಕೂಡಲೇ ಇವರು ಪ್ರಪಂಚದ ರಕ್ಷಕರೆಂದು ಗುರುತಿಸಿ ಇವರನ್ನು ಉಪಾಸಿನಿ ಮಹಾರಾಜ್ ರವರ ಬಳಿ ಕಳುಹಿಸಿದರು. ಮೆಹರ್ ಬಾಬಾರವರು ಉಪಾಸಿನಿ ಬಾಬಾರವರ ಬಳಿ ಬರುತ್ತಿದ್ದಂತೆ ಇವರ ಮೇಲೆ ಕಲ್ಲೆಸೆದರು. ಆ ಕಲ್ಲು ಇವರಿಗೆ ಸರಿಯಾಗಿ ಬಂದು ಹಜ್ರತ್ ಬಾಬಾಜಾನ್ ಹಣೆಯಲ್ಲಿ ಚುಂಬಿಸಿದ ಜಾಗಕ್ಕೆ ಸರಿಯಾಗಿ ಬಡಿಯಿತು. ಹೀಗೆ ಸಮಾಧಿ ಸ್ಥಿತಿಯನ್ನು ಬಿಡದೆ ಸಹಜ ಸ್ಥಿತಿಗೆ ಮರಳುವ ಕಾರ್ಯ ೫ ವರ್ಷಗಳ ಕಾಲ ನಡೆಯಿತು.
೧೯೨೦ ರಲ್ಲಿ ತಮ್ಮ ಅತಿ ಸಮೀಪದ ಶಿಷ್ಯರನ್ನು ಒಂದುಗೂಡಿಸಿ ಅವರಿಗೆ ಆಧ್ಯಾತ್ಮಿಕ ಭೋಧನೆಯನ್ನು ಮಾಡಲು ಶುರು ಮಾಡಿದರು. ಅಹಮದ್ ನಗರದಲ್ಲಿ ಒಂದು ಆಧ್ಯಾತ್ಮಿಕ ಕೇಂದ್ರವನ್ನು ಪ್ರಾರಂಭಿಸಿ ಅದರ ಮುಖಾಂತರ ಶಾಲೆಗಳನ್ನು, ಆಸ್ಪತ್ರೆಗಳನ್ನು ಹಾಗೂ ಇನ್ನಿತರ ಸಾರ್ವಜನಿಕರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಪ್ರಾರಂಭಿಸಿದರು. ಇದಾದ ಹತ್ತು ವರ್ಷಗಳ ಬಳಿಕ ಮೆಹರ್ ಬಾಬಾರವರು ಮೌನವ್ರತ ಕೈಗೊಂಡರು ಹಾಗೂ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಹೀಗೆ ಸತತ ೪೪ ವರ್ಷಗಳ ಕಾಲ ತಮ್ಮ ಶಿಷ್ಯರ ಬಳಿ ಕೇವಲ ಸಂಕೇತಗಳ ಮುಖಾಂತರ ಹಾಗೂ ಕಪ್ಪು ಹಲಗೆಯಲ್ಲಿ ಬರೆದು ತೋರಿಸುವ ಮುಖಾಂತರ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯದಲ್ಲಿ ಇವರು ೨ ಪುಸ್ತಕಗಳನ್ನು ಕೂಡ ಬರೆದರು.
೧೯೩೧ ರಲ್ಲಿ ಪ್ರಥಮ ಬಾರಿಗೆ ಇವರು ವಿದೇಶ ಪ್ರಯಾಣ ಕೈಗೊಂಡರು. ಹಡಗಿನಲ್ಲಿ ಲಂಡನ್ ಗೆ ರೌಂಡ್ ಟೇಬಲ್ ಕನ್ಫಾರೆನ್ಸ್ ಗೆ ತೆರಳುತ್ತಿದ್ದ ಮಹಾತ್ಮ ಗಾಂಧಿಯವರೊಂದಿಗೆ ಪ್ರಯಾಣ ಬೆಳೆಸಿದರು. ಈ ಸಮಯದಲ್ಲಿ ಮೆಹರ್ ಬಾಬಾರವರು ಗಾಂಧೀಜಿಯವರಿಗೆ ಆಧ್ಯಾತ್ಮಿಕ ಗುರುಗಳಾಗಿ ವರ್ತಿಸಿದರು. ಇಂಗ್ಲೆಂಡ್ ಮತ್ತು ಅಮೇರಿಕ ದೇಶದಲ್ಲಿ ತಮ್ಮ ಶಿಷ್ಯ ಪರಂಪರೆಯನ್ನು ಬೆಳೆಸಿದರು. ಮುಂದೆ ಕೆಲವು ಶಿಷ್ಯರು ಭಾರತಕ್ಕೆ ಬಂದು ಇವರ ಜೊತೆಗೂಡಿ ಕೆಲಸ ಮಾಡಿದರು. ೨ ನೇ ಮಹಾಯುದ್ದಕ್ಕೆ ಮುಂಚೆ ೬ ಬಾರಿ ವಿದೇಶ ಪ್ರಯಾಣ ಮಾಡಿದರು.
೧೯೪೦ ರಲ್ಲಿ ಮೆಹರ್ ಬಾಬಾರವರು ಭಾರತದ ಉದ್ದಗಲಕ್ಕೂ ಸಂಚರಿಸಿ ಬಡವರ, ಕುಷ್ಟ ರೋಗಿಗಳ, ಬುದ್ದಿಮಾಂದ್ಯರ ಮತ್ತು ವಿಕೃತ ಆಧ್ಯಾತ್ಮಿಕ ಮನಸ್ಸುಳ್ಳ ವಿದೇಶಿಯರ ಸೇವೆಯನ್ನು ಯಾವುದೇ ಆಡಂಭರವಿಲ್ಲದೆ, ಸದ್ದಿಲ್ಲದೇ ಮಾಡಿದರು.
೧೯೫೦ ರಲ್ಲಿ ಮೆಹರ್ ಬಾಬಾರವರು ವಿದೇಶಗಳಲ್ಲಿ ತಮ್ಮ ೨ ಕೇಂದ್ರಗಳನ್ನು ತೆರೆದರು. ಸೌತ್ ಕರೋಲಿನ, ಅಮೇರಿಕ ಹಾಗೂ ಬ್ರಿಸ್ಬೆನ್ , ಆಸ್ಟ್ರೇಲಿಯಾ ಗಳಲ್ಲಿ ತಮ್ಮ ಆಧ್ಯಾತ್ಮಿಕ ಕೇಂದ್ರಗಳನ್ನು ಆರಂಭಿಸಿದರು. ಆ ಸಮಯದಲ್ಲಿ ಇವರು ಅಪಘಾತಕ್ಕೆ ತುತ್ತಾಗಿ ಅವರ ಮುಖಕ್ಕೆ ಬಹಳ ಗಾಯವಾಯಿತು ಮತ್ತು ದೇಹದ ಮುಖ್ಯ ಮೊಳೆಗಳು ಮುರಿದವು. ಸ್ವಲ್ಪ ವರ್ಷಗಳ ನಂತರ ಭಾರತದಲ್ಲಿ ಇದೇ ರೀತಿಯ ಅಪಘಾತಕ್ಕೆ ತುತ್ತಾದರು.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ವೆಬ್ ಸೈಟ್ ಜೋಡಣೆಯನ್ನು ಕ್ಲಿಕ್ಕ್ ಮಾಡಿ:
http://www.avatarmeherbaba.org/
No comments:
Post a Comment