ಸಾಯಿ ಮಹಾಭಕ್ತ - ಕಾಶೀರಾಂ ಬಾಳಾ ಶಿಂಪಿ (ದರ್ಜಿ) - ಕೃಪೆ - ಸಾಯಿಅಮೃತಧಾರಾ.ಕಾಂ
ಕಾಶೀರಾಂ ರವರು ಬಹಳ ಕರುಣಾಶಾಲಿಗಳೂ, ಮೃದು ಸ್ವಭಾವದವರೂ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಸಾಧಿಸಿದ್ದ ವ್ಯಕ್ತಿಯಾಗಿದ್ದರು. ಇವರು, ಮಾಳಸಾಪತಿ ಮತ್ತು ಅಪ್ಪಾ ಜಗಲೆ ಯವರು ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿದ್ದರು ಮತ್ತು ಬಹಳ ಅನ್ಯೋನ್ಯವಾಗಿದ್ದರು. ಈ ಮೂವರು ಶಿರಡಿಗೆ ಬರುತ್ತಿದ್ದ ಎಲ್ಲಾ ಸಾಧು ಸಂತರ ಬೇಕು ಬೇಡಗಳನ್ನು ಬಹಳ ಚೆನ್ನಾಗಿ ಮತ್ತು ಆಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಸಾಧು ಸಂತರಿಗೆ ಸಹಾಯವನ್ನು ಮಾಡುತ್ತಿದ್ದರು. ಮಾಳಸಾಪತಿಯವರು ಬಾಬಾರವರನ್ನು ಊರ ಹೊರಗಿದ್ದ ಖಂಡೋಬ ದೇವಾಲಯದ ಹತ್ತಿರ ಸ್ವಾಗತಿಸಿದ ನಂತರ ಶಿರಡಿ ಗ್ರಾಮದ ಒಳಗೆ ಕರೆದುಕೊಂಡು ಬಂದರು. ಅಲ್ಲಿ ಬಾಬಾರವರು ಕಾಶೀರಾಂ ಶಿಂಪಿ ಮತ್ತು ಅಪ್ಪಾ ಜಗಲೆಯವರನ್ನು ಭೇಟಿ ಮಾಡಿದರು. ಈ ಮೂವರು ಸ್ನೇಹಿತರುಗಳು ಕಲೆತು ಸಾಯಿಬಾಬಾರವರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಕಾಶೀರಾಂ ರವರು ಒಬ್ಬ ಬಟ್ಟೆಯ ವ್ಯಾಪಾರಿ ಮತ್ತು ದರ್ಜಿಯಾಗಿದ್ದರು. ಅಲ್ಲದೆ, ಶಿರಡಿಯಲ್ಲಿ ಸ್ವಲ್ಪ ಭೂಮಿಯನ್ನು ಹಾಗೂ ಒಂದು ಕುದುರೆ ಲಾಯವನ್ನು ಕೂಡಾ ಹೊಂದಿದ್ದರು. ಇವರು ಬಾಬಾರವರನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ಬಾಬಾರವರಿಗೊಸ್ಕರ ಒಂದು ಹಸಿರು ಬಣ್ಣದ ಟೋಪಿ ಮತ್ತು ಕಫ್ನಿಯನ್ನು ಹೊಲೆದು ಕೊಟ್ಟಿದ್ದರು. ಇದೇ ಟೋಪಿ ಮತ್ತು ಕಫ್ನಿ ಸಾಯಿಬಾಬಾರವರು ಮಹಾಸಮಾಧಿಯಾದ ಮೇಲೆ ಅವರ ಹತ್ತಿರವಿದ್ದ ಬಟ್ಟೆಯ ಗಂಟಿನಲ್ಲಿ ದೊರಕಿತು.
ಕಾಶೀರಾಂ ರವರು ದ್ವಾರಕಾಮಾಯಿಯಲ್ಲಿದ್ದ ಧುನಿಮಾ ಗೆ ಬೇಕಾಗಿದ್ದ ಕಟ್ಟಿಗೆಯನ್ನು ನೀಡುತ್ತಿದ್ದರು. ಇವರು ಪ್ರತಿದಿನ ಬೆಳಿಗ್ಗೆ ಸಾಯಿಬಾಬಾರವರ ಬಳಿಗೆ ಬಂದು ಆವರ ಪಾದದ ಬಳಿ ಎರಡು ಪೈಸೆ ನಾಣ್ಯವನ್ನು ಇಡುತ್ತಿದ್ದರು. ಆಗ ಸಾಯಿಬಾಬಾರವರು ಯಾರಿಂದಲೂ ದಕ್ಷಿಣೆಯನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ, ಕಾಶೀರಾಂ ಬಹಳ ಪ್ರೀತಿ ಮತ್ತು ಭಕ್ತಿಯಿಂದ ಕಾಣಿಕೆಯನ್ನು ಅರ್ಪಿಸುತ್ತಿದ್ದರಿಂದ ಸಾಯಿಬಾಬಾರವರು ಇವರಿಂದ ಮಾತ್ರ ದಕ್ಷಿಣೆ ಸ್ವೀಕರಿಸುತ್ತಿದ್ದರು. ಯಾವುದಾದರೊಂದು ದಿನ ಸಾಯಿಬಾಬಾರವರು ದಕ್ಷಿಣೆ ಸ್ವೀಕರಿಸದಿದ್ದರೆ ಕಾಶೀರಾಂ ರವರು ಗಳಗಳನೆ ಅತ್ತುಬಿಡುತ್ತಿದ್ದರು.
ಸ್ವಲ್ಪ ದಿನಗಳು ಕಳೆದ ನಂತರ, ಕಾಶೀರಾಂ ತಾವು ಪ್ರತಿದಿನ ಸಂಪಾದನೆ ಮಾಡುತ್ತಿದ್ದ ಎಲ್ಲಾ ಹಣವನ್ನು ತಂದು ಬಾಬಾರವರ ಮುಂದೆ ಇಡುತ್ತಿದ್ದರು ಮತ್ತು ಬಾಬಾರವರಿಗೆ ಇಷ್ಟ ಬಂದಷ್ಟು ಹಣವನ್ನು ತೆಗೆದುಕೊಳ್ಳಲು ಹೇಳುತ್ತಿದ್ದರು. ಕ್ರಮೇಣ ಕಾಶೀರಾಂ ಅಹಂಕಾರ ಹೆಚ್ಚಾಗಿ ತಾನೇ ಸಾಯಿಬಾಬಾರವರ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿರುವ ಮನುಷ್ಯನೆಂಬ ಮಟ್ಟಕ್ಕೆ ಬೆಳೆದು ನಿಂತರು. ಆಗ ಬಾಬಾರವರು ಇವರಿಂದ ಹೆಚ್ಚು ಹೆಚ್ಚಾದ ದಕ್ಷಿಣೆ ಕೇಳಲು ಪ್ರಾರಂಭಿಸಿದರು. ಆದರೆ ಇವರ ವರಮಾನ ಕುಸಿಯತೊಡಗಿತು. ಕಡೆಗೆ ಇವರು ತಮ್ಮ ಬಳಿ ನೀಡಲು ಹಣವಿಲ್ಲ ಎಂದು ಬಾಬಾರವರಿಗೆ ಹೇಳಿದರು. ಆಗ ಬಾಬಾರವರು ಸಾಲ ಮಾಡಿ ದಕ್ಷಿಣೆ ನೀಡುವಂತೆ ತಿಳಿಸಿದರು. ಸ್ವಲ್ಪ ದಿನಗಳು ಹೀಗೆ ನೆಡೆಯಿತು. ನಂತರ ಸಾಲ ಕೊಡುವವರು ಕೂಡ ಇವರಿಗೆ ಸಾಲ ನೀಡಲು ನಿರಾಕರಿಸಿದರು. ಆಗ ಕಾಶೀರಾಂ ರವರಿಗೆ ಹತ್ತಿದ್ದ ಅಹಂಕಾರ ಇಳಿದು ತಾನು ಬಾಬಾರವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವವ ಎಂಬ ಭ್ರಮೆ ಬಿಟ್ಟು ಹೋಯಿತು. ಆ ಕ್ಷಣದಿಂದಲೇ ಮತ್ತೆ ಕಾಶೀರಾಂ ರವರ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳಲು ಶುರುವಾಯಿತು.
ಕಾಶೀರಾಂ ರವರು ಬಟ್ಟೆಯ ವ್ಯಾಪಾರಿಯಾಗಿದ್ದರಿಂದ ಬೇರೆ ಬೇರೆ ಹಳ್ಳಿಗಳಿಗೆ ತೆರಳಿ ಥಾನ್ ಗಟ್ಟಲೆ ಬಟ್ಟೆಯನ್ನು ಮಾರಾಟ ಮಾಡುತ್ತಿದ್ದರು. ಒಮ್ಮೆ ಇವರು ನವೂರ್ ಬಜಾರ್ ನಿಂದ ಹಿಂತಿರುಗುತ್ತಿದ್ದಾಗ ಡಕಾಯಿತರು ಇವರನ್ನು ದೋಚಲು ಬಂದರು. ಮೊದಲು ಡಕಾಯಿತರು ಇವರನ್ನು ಹಿಂಬಾಲಿಸುತ್ತಿದ್ದ ಗಾಡಿಗಳಲ್ಲಿದ್ದವರ ಮೇಲೆ ಆಕ್ರಮಣ ಮಾಡಿದರು. ನಂತರ ಅವರುಗಳು ಕುದುರೆಯ ಮೇಲೆ ಬರುತ್ತಿದ್ದ ಕಾಶೀರಾಂ ರವರ ಕಡೆ ತಮ್ಮ ಗಮನವನ್ನು ಹರಿಸಿದರು.ಕಾಶೀರಾಂ ಸ್ವಲ್ಪವೂ ಪ್ರತಿರೋಧ ಮಾಡದೆ ತಮ್ಮಲ್ಲಿದ್ದ ಎಲ್ಲವನ್ನು ಕೊಟ್ಟುಬಿಟ್ಟರು. ಆದರೆ ತಮ್ಮ ಬಳಿಯಿದ್ದ ಸಣ್ಣ ಗಂಟನ್ನು ಕೊಡಲು ಒಪ್ಪಲಿಲ್ಲ. ಆಗ ಡಕಾಯಿತರಿಗೆ ಆ ಸಣ್ಣ ಗಂಟಿನಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳು ಇರಬಹುದು ಎಂಬ ಅನುಮಾನ ಉಂಟಾಯಿತು. ಆ ಸಣ್ಣ ಗಂಟಿಗಾಗಿ ಡಕಾಯಿತರು ಕಾಶೀರಾಂ ರವರ ಮೇಲೆ ಜೋರಾಗಿ ಹಲ್ಲೆ ನಡೆಸಿದರು. ಬಹಳ ಗಾಯಗಳಾಗಿದ್ದರೂ ಕೂಡ ಕಾಶೀರಾಂ ರವರಿಗೆ ತಮ್ಮ ಬಳಿ ಬಿದ್ದಿದ್ದ ಕತ್ತಿಯು ಕಣ್ಣಿಗೆ ಬಿದ್ದಿತು. ಕಾಶೀರಾಂ ಆ ಕತ್ತಿಯನ್ನು ಎತ್ತಿಕೊಂಡು ಇಬ್ಬರು ಡಕಾಯಿತರನ್ನು ಕೊಂದುಹಾಕಿದರು. ಆದರೆ, ಮತ್ತೊಬ್ಬ ಡಕಾಯಿತ ತನ್ನ ಬಳಿಯಿದ್ದ ಕೊಡಲಿಯಿಂದ ಕಾಶೀರಾಂ ರವರ ತಲೆಗೆ ಬಲವಾದ ಪೆಟ್ಟು ಕೊಟ್ಟನು. ಕಾಶೀರಾಂ ಪ್ರಜ್ಞೆ ತಪ್ಪಿ ರಕ್ತದ ಮಡುವಿನಲ್ಲಿ ಬಿದ್ದರು. ಉಳಿದ ಡಕಾಯಿತರು ಕಾಶೀರಾಂ ಸತ್ತು ಹೋಗಿದ್ದಾರೆಂದು ತಿಳಿದು ಹೊರಟುಹೋದರು. ಜಾನಕೀದಾಸ್ ಎಂಬ ಸಾಧುವು ಇವರಿಗೆ ಪ್ರತಿದಿನ ಇರುವೆಗಳಿಗೆ ಸಕ್ಕರೆಯನ್ನು ನೀಡುವಂತೆ ಹೇಳಿದ್ದರು. ಆ ಸಣ್ಣ ಗಂಟಿನಲ್ಲಿ ಕಾಶೀರಾಂ ರವರು ಸಕ್ಕರೆಯನ್ನು ಇಟ್ಟುಕೊಂಡಿದ್ದರು. ಸ್ವಲ್ಪ ಸಮಯದ ನಂತರ ಕಾಶೀರಾಂ ರವರಿಗೆ ಪ್ರಜ್ಞೆ ಬಂದಿತು. ತಮಗೆ ಸಹಾಯ ಮಾಡಲು ಬಂದು ತಮ್ಮ ಪಕ್ಕದಲ್ಲಿದ್ದ ಜನರಿಗೆ ತಮ್ಮನ್ನು ಶಿರಡಿಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. ಶಿರಡಿಗೆ ಬಂದ ನಂತರ ಬಾಬಾರವರು ಶ್ಯಾಮಾರವರಿಗೆ ಕಾಶೀರಾಂ ರವರ ಶುಶ್ರೂಷೆ ಮಾಡುವಂತೆ ತಿಳಿಸಿದರು. ಸ್ವಲ್ಪ ಸಮಯದ ನಂತರ ಕಾಶೀರಾಂ ಸಂಪೂರ್ಣ ಗುಣಮುಖರಾದರು.
ಕಾಶೀರಾಂ ರ ಮೇಲೆ ಡಕಾಯಿತರು ಆಕ್ರಮಣ ಮಾಡುತ್ತಿದ್ದಾಗ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರು ಇದ್ದಕ್ಕಿದ್ದಂತೆ ಉದ್ರಿಕ್ತರಾದರು. ಕೆಟ್ಟ ಮಾತುಗಳನ್ನು ಆಡುತ್ತಾ ತಮ್ಮ ಬಳಿಯಿದ್ದ ಸಟಕಾವನ್ನು ಜೋರಾಗಿ ಗಾಳಿಯಲ್ಲಿ ಬೀಸುತ್ತಿದ್ದರು. ಬಾಬಾರವರು ಕಾಶೀರಾಂ ರವರನ್ನು ಆಕ್ರಮಿಸಿದ್ದ ಡಕಾಯಿತರನ್ನು ಹೊಡೆದೋಡಿಸಲು ಮತ್ತು ತಮ್ಮ ಭಕ್ತನನ್ನು ರಕ್ಷಿಸಲು ಈ ರೀತಿ ಮಾಡುತ್ತಿದ್ದರು. ಈ ರೀತಿ ಸಾಯಿಬಾಬಾ ತಮ್ಮ ಭಕ್ತನನ್ನು ಕಾಪಾಡಿದರು. ಆಗಿನ ಮುಂಬೈ ಸರ್ಕಾರ ಕಾಶೀರಾಂ ರವರ ಶೌರ್ಯವನ್ನು ಕೊಂಡಾಡಿ ಅವರಿಗೆ ಒಂದು ಕತ್ತಿಯನ್ನು ಬಹುಮಾನವಾಗಿ ನೀಡಿತು.
ಶಿರಡಿ ಗ್ರಾಮದ ಜನರು ಕಾಶೀರಾಂ ರವರನ್ನು "ಶಿಂಪಿ" ಎಂದು ಕರೆಯುತ್ತಿದ್ದರು. ಸಾಯಿಬಾಬಾರವರು ಕೂಡ ಹಾಗೆಯೇ ಸಂಬೋಧಿಸುತ್ತಿದ್ದರು. ಶಿಂಪಿ ಎನ್ನುವುದು ಕಾಶೀರಾಂ ರವರ ಮನೆತನದ ಹೆಸರಾಗಿತ್ತು. ಆದ್ದರಿಂದ ಇವರಿಗೆ ಶಿಂಪಿ ಎನ್ನುವ ಅನ್ವರ್ಥನಾಮದಿಂದ ಕರೆಯಲಾಗುತ್ತಿತ್ತು. ಈಗ ಇವರ ವಂಶಸ್ಥರು "ಮಿರಾನೆ" ಎನ್ನುವ ಅನ್ವರ್ಥನಾಮವನ್ನು ಬಳಸುತ್ತಾರೆ.
ಕೆಲವು ವರ್ಷಗಳ ಹಿಂದೆ ಕಾಶೀರಾಂ ರವರ ವಂಶಸ್ಥರಾದ ಶ್ರೀ.ಶಾಂತಾರಾಂ ಶ್ಯಾಮ ಮಿರಾನೆಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರು ಸ್ವಲ್ಪ ಕಾಲದಿಂದ ನಿಂತುಹೋಗಿದ್ದ ಸಾಮುಹಿಕ ಸಾಯಿ ಸಚ್ಚರಿತೆಯ ಪಾರಾಯಣವನ್ನು ಪುನ: ಪ್ರಾರಂಭಿಸಲು ಕಾರಣೀಭೂತರಾದರು. ಪಾರಾಯಣದ ಕೊನೆಯಲ್ಲಿ ಭಗವಂತನ ನಾಮಸ್ಮರಣೆ, ಕೀರ್ತನೆ ಮತ್ತು ಭಜನೆಗಳು ನೆಡೆಯುತ್ತವೆ. ನಂತರ ಸಾಯಿಭಕ್ತರು ತಮ್ಮ ಜೀವನದಲ್ಲಿ ಸಾಯಿಬಾಬಾರವರು ಮಾಡಿದ ಲೀಲೆಗಳನ್ನು ಮತ್ತು ಪವಾಡಗಳನ್ನು ಎಲ್ಲಾ ಭಕ್ತರ ಸಮ್ಮುಖದಲ್ಲಿ ಹಂಚಿಕೊಳ್ಳುತ್ತಾರೆ.
ಅನೇಕ ವರ್ಷಗಳು ಸುಖೀ ಜೀವನವನ್ನು ನಡೆಸಿದ ನಂತರ ಕಾಶೀರಾಂ ರವರು ಶಕೆ 1830 ರ ಚೈತ್ರ ಮಾಸದ ಏಕಾದಶಿಯಂದು ಸ್ವರ್ಗಸ್ಥರಾದರು. ಇವರ ವಂಶಸ್ಥರು ಈಗಲೂ ಶಿರಡಿಯಲ್ಲಿನ ಇವರು ವಾಸಿಸುತ್ತಿದ್ದ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ. ಕಾಶೀರಾಂ ರವರ ವಂಶಸ್ಥರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದು ಕಾಶೀರಾಂ ರವರ ಧ್ಯೇಯಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment