ಸಾಯಿ ಮಹಾಭಕ್ತ - ಎಸ್.ಬಿ.ಧುಮಾಳ್- ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ
ಕ್ರಿ.ಶ.೧೯೧೨ರಲ್ಲಿ ಎಸ್.ಬಿ.ಧುಮಾಳ್ ರವರು ಒಂದು ಆಪರೇಶನ್ ಗೆ ಒಳಗಾಗಬೇಕಾಯಿತು. ಡಾಕ್ಟರ್ ಕ್ಲೋರೋಫಾರ್ಮ್ ನೀಡುವಾಗ ಎಸ್.ಬಿ.ಧುಮಾಳ್ ರವರು ಸಾಯಿಬಾಬಾರವರು ತಮ್ಮ ತಲೆ ದಿಂಬಿನ ಬಳಿ ಕುಳಿತಿರುವಂತೆ ಕಂಡರು ಹಾಗೂ ಧೈರ್ಯವನ್ನು ತಂದುಕೊಂಡರು. ನನ್ನನ್ನು ನೋಡಿಕೊಳ್ಳಲು ಸಾಯಿಬಾಬಾರವರು ಇದ್ದಾರೆಂಬ ಧೈರ್ಯವನ್ನು ತಂದುಕೊಂಡರು. ಆಪರೇಶನ್ ಯಾವುದೇ ತೊಂದರೆಯಿಲ್ಲದೆ ನಿರ್ವಿಘ್ನವಾಗಿ ನೆರವೇರಿತು. ಇನ್ನೊಂದು ಬಾರಿ ಧುಮಾಳರ ಅಣ್ಣನ ಹೆಂಡತಿ ಕಾಯಿಲೆಯಿಂದ ಪುಣೆಯಲ್ಲಿ ನೆರಳುತ್ತಿದ್ದರು. ಧುಮಾಳರು ನಾಸಿಕ್ ನಿಂದ ಪುಣೆಗೆ ತೆರಳುವ ಮಾರ್ಗದಲ್ಲಿ ಶಿರಡಿಯಲ್ಲಿ ನಿಂತು ಬಾಬಾರವರ ದರ್ಶನ ಪಡೆದು ತೆರಳಲು ನಿರ್ಧರಿಸಿದರು. ಅವರ ಬಳಿ ಕೇವಲ ೮೦ ರುಪಾಯಿಗಳಿದ್ದವು. ಬಾಬಾರವರ ಬಳಿ ಹೋದ ತಕ್ಷಣ ಅವರು ಧುಮಾಳ್ ರವರ ಬಳಿಯಿದ್ದ ಎಲ್ಲ ೮೦ ರುಪಾಯಿಗಳನ್ನು ದಕ್ಷಿಣೆಯಾಗಿ ನೀಡುವಂತೆ ಕೇಳಿದರು ಮತ್ತು ಶಿರಡಿಯಲ್ಲಿ ೩ ದಿನ ಇದ್ದು ನಂತರ ಪುಣೆಗೆ ತೆರಳುವಂತೆ ಹೇಳಿದರು. ಧುಮಾಳರು ೩ ದಿನಗಳ ನಂತರ ಹೊರಡಲು ಅನುಮತಿ ಬೇಡಿದಾಗ ಬಾಬಾರವರು "ಇರು, ಸ್ವಲ್ಪ ನೋಡೋಣ" ಎಂದಷ್ಟೇ ನುಡಿದರು. ೩ ದಿನಗಳ ನಂತರ ಪುಣೆಯಿಂದ ಧುಮಾಳರ ಅಣ್ಣನ ಹೆಂಡತಿ ತೀರಿ ಹೋದರೆಂದು ತಂತಿ ಬಂದಿತು. ಆ ತಂತಿ ಬಂದ ನಂತರವಷ್ಟೇ ಸಾಯಿಬಾಬಾರವರು ಧುಮಾಳರಿಗೆ ಹೊರಡಲು ಅನುಮತಿ ನೀಡಿದರು. ಸಾಯಿಬಾಬಾರವರು ತಮ್ಮ ಅಂತರ್ ದೃಷ್ಟಿಯಿಂದ ಇದನ್ನು ತಿಳಿದಿದ್ದರೆಂದು ನಮಗೆ ಇದರಿಂದ ತಿಳಿದು ಬರುತ್ತದೆ. ಆದುದರಿಂದಲೇ ಧುಮಾಳರಿಗೆ ಬಾಬಾರವರು ಹೋಗಲು ಅನುಮತಿ ನೀಡಲಿಲ್ಲ. ಇದರಿಂದ ಬಾಬಾರವರ ಸರ್ವಜ್ಞತೆ ಅರ್ಥವಾಗುತ್ತದೆ. ಅದೇ ವರ್ಷ ಸಾಯಿಬಾಬಾರವರು ಸಮಾಧಿ ಹೊಂದಿದರು. ಧುಮಾಳರಿಗೆ ಬಾಬಾರವರೊಂದಿಗೆ ೩ ದಿನ ಕಳೆಯುವ ಸುವರ್ಣಾವಕಾಶ ಲಭಿಸಿದ್ದು ಅವರ ಅದೃಷ್ಟವೆಂದೇ ಹೇಳಬೇಕು. ಸಾಯಿಬಾಬಾರವರ ಸಮಾಧಿಯ ನಂತರ ಧುಮಾಳರು ದೇವರ್ ರಾಜ್ಯದ ರವಿನ್ಯು ಇಲಾಖೆಯ ಸದಸ್ಯತ್ವ ಪಡೆದರು. ನಂತರ ೧೯೩೧-೩೨ ರಲ್ಲಿ ಸರ್ಗುಣ ರಾಜ್ಯದಲ್ಲಿ ರವಿನ್ಯು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಆ ರಾಜ್ಯದ ಮುಖ್ಯಸ್ಥ ಧುಮಾಳರನ್ನು ಕಾಣಲು ಬಂದಾಗ ಧುಮಾಳರು ಭೋಜನ ಮಾಡುತ್ತಿದ್ದರು. ಆದ್ದರಿಂದ ಎದ್ದು ಅವರಿಗೆ ವಂದನೆ ಸಲ್ಲಿಸಲು ಆಗುವುದಿಲ್ಲವೆಂದು ಅವರಿಗೆ ಹೇಳಿದರು. ಆದರೆ, ಮುಖ್ಯಸ್ತರು ಬೇಸರಗೊಳ್ಳದೆ ಪಕ್ಕದಲ್ಲಿದ್ದ ಧುಮಾಳರು ಕುಳಿತು ಕೊಳ್ಳುತ್ತಿದ್ದ ಕೋಣೆಗೆ ಹೋದರು ಮತ್ತು ಅಲ್ಲಿ ಸಾಯಿಬಾಬಾರವರ ಸುಂದರ ಚಿತ್ರವನ್ನು ಕಂಡರು ಮತ್ತು ಅಲ್ಲಿಂದ ಬಂದ ನಂತರ ಧುಮಾಳರಿಗೆ "ನಿಮ್ಮ ಸಂಬಳದ ಮೇಲೆ ಇನ್ನು ೫೦ ರುಪಾಯಿಗಳನ್ನು ಹೆಚ್ಚಿಸಿದ್ದೇನೆ" ಎಂದರು. ಧುಮಾಳರು ಸಂಬಳ ಹೆಚ್ಚಿಸಲು ಕೇಳಿರಲೇ ಇಲ್ಲ ಹಾಗೂ ಕೆಲಸಕ್ಕೆ ಸೇರಿ ಇನ್ನು ಕೇವಲ ೧೫ ದಿನಗಳಾಗಿತ್ತು. ಇದು ಸಾಯಿಬಾಬಾರವರ ಲೀಲೆಯಲ್ಲದೆ ಮತ್ತೇನೆಂದು ಹೇಳುವುದಕ್ಕಾಗುತ್ತದೆ.
ಸಾಯಿಬಾಬಾರವರ ಮಹಾಸಮಾಧಿಯ ನಂತರ ಧುಮಾಳರು ಯಾವುದೇ ಕಾರ್ಯ ಮಾಡುವ ಮೊದಲು ಚೀಟಿಯನ್ನು ಹಾಕಿ ಅದರಲ್ಲಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಸಾಯಿಬಾಬಾರವರ ಸಮಾಧಿಗೆ ಸ್ವಲ್ಪ ವರುಷಗಳ ಹಿಂದೆ ಒಂದು ದಿನ ಧುಮಾಳರು ಸಾಯಿಬಾಬಾರವರ ಚಿತ್ರಪಟವನ್ನು ಹಿಡಿದುಕೊಂಡು ದ್ವಾರಕಮಾಯಿಯ ಬಳಿ ಹೋಗುತ್ತಿದ್ದಾಗ ಸಾಯಿಬಾಬಾರವರು ಅವರನ್ನು ನಿಲ್ಲಿಸಿ ಕೈನಲ್ಲಿರುವುದೇನೆಂದು ಕೇಳಲು ಧುಮಾಳರು ಅದನ್ನು ಬಾಬಾರವರಿಗೆ ತೋರಿಸಿದರು. ಬಾಬಾರವರು ಅದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಇದನ್ನು ನೀನೇ ಇಟ್ಟುಕೋ ಎಂದು ವಾಪಾಸ್ ನೀಡಿದರು. ಧುಮಾಳರಿಗೆ ಅದನ್ನು ವಾಪಸ್ ಪಡೆದು ಪೂಜಾ ಗೃಹದಲ್ಲಿಟ್ಟು ಪೂಜಿಸಬೇಕೆಂದು ಆಸೆಯಿತ್ತು. ಬಾಬಾ ಹಿಂತಿರುಗಿಸಿದ ನಂತರ ಧುಮಾಳರಿಗೆ ಸಮಾಧಾನವಾಯಿತು. ಆ ಚಿತ್ರದಲ್ಲಿ ಬಾಬಾರವರು ನಿಂತು ಧ್ಯಾನಾಸಕ್ತರಾಗಿರುವಂತೆ ಕಾಣುತ್ತಿತ್ತು. ಸಾಯಿಬಾಬಾರವರು ಚಿತ್ರವನ್ನು ಧುಮಾಳರಿಗೆ ಹಿಂತಿರುಗಿಸುವಾಗ "ನಿನ್ನೆ ರಾತ್ರಿಯೆಲ್ಲ ನಿನ್ನನ್ನೇ ಕುರಿತು ಯೋಚಿಸುತ್ತಿದ್ದೆ" ಎಂದರು. ಇನ್ನೊಮ್ಮೆ ಬಾಬಾರವರು ಧುಮಾಳರ ಹತ್ತಿರ ೨ ರುಪಾಯಿ ದಕ್ಷಿಣೆ ಪಡೆದು ಹಲವು ನಾಣ್ಯಗಳನ್ನು ನೀಡಿ "ಇದನ್ನು ಜೋಪಾನವಾಗಿ ಕಾಪಾಡು. ಖರ್ಚು ಮಾಡಬೇಡ ಮತ್ತು ಯಾರಿಗೂ ನೀಡಬೇಡ" ಎಂದು ಹೇಳಿದರು. ಸಾಯಿಬಾಬಾರವರಿಗೆ ಯಾರಿಗೆ ಯಾವುದಕ್ಕೆ ಅರ್ಹರು ಎಂದು ಚೆನ್ನಾಗಿ ತಿಳಿದಿತ್ತು.
No comments:
Post a Comment