ಸಾಯಿ ಮಹಾಭಕ್ತ - ಭಾಗೋಜಿ ಶಿಂಧೆ - ಕೃಪೆ - ಸಾಯಿಅಮೃತಧಾರಾ.ಕಾಂ
ಭಾಗೋಜಿ ಶಿಂಧೆಯವರು ಒಂದು ರೀತಿಯಲ್ಲಿ ಸಾಯಿಬಾಬಾರವರಿಗೆ ಸಹಾಯಕರಾಗಿದ್ದರು. ಅವರು ಬಾಬಾರವರಿಗೆ ಪ್ರತಿನಿತ್ಯವೂ ಸೇವೆಯನ್ನು ಮಾಡುತ್ತಿದ್ದರು. ದ್ವಾರಕಾಮಾಯಿಗೆ ಪ್ರತಿದಿನ ಬೆಳಗಿನ ಜಾವ ಎಲ್ಲರಿಗಿಂತ ಮುಂಚಿತವಾಗಿ ಆಗಮಿಸಿ ಮೊದಲು ಬಾಬಾರವರ ಬಲಗೈಯನ್ನು ನಂತರ ಬಾಬಾರವರ ದೇಹವನ್ನೆಲ್ಲಾ ತುಪ್ಪವನ್ನು ಸವರಿ ನೀವುತ್ತಿದ್ದರು. ನಂತರ ಭಾಗೋಜಿ ಶಿಂಧೆಯವರು ಚಿಲುಮೆಯನ್ನು ಹೊತ್ತಿಸಿ ಬಾಬಾರವರು ಮತ್ತು ಭಾಗೋಜಿ ಶಿಂಧೆಯವರು ಪರಸ್ಪರ ಒಬ್ಬರಾದ ಮೇಲೆ ಒಬ್ಬರು ಚಿಲುಮೆಯನ್ನು ಎಳೆಯುತ್ತಿದ್ದರು. ಸಾಯಿಬಾಬಾರವರು ಪ್ರತಿದಿನ ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಅವರ ತಲೆಯ ಮೇಲೆ ಛತ್ರಿಯನ್ನು ಹಿಡಿಯುತ್ತಿದ್ದರು.
ಸಾಯಿಬಾಬಾರವರನ್ನು ಮೊದಲು ಭೇಟಿಯಾದಾಗ ಭಾಗೋಜಿ ಶಿಂಧೆಯವರು ಕುಷ್ಟ ರೋಗದಿಂದ ನರಳುತ್ತಿದ್ದರು. ಸಾಯಿಬಾಬಾರವರ ಪಾದ ತೀರ್ಥವನ್ನು ಸೇವಿಸಿದ ಮೇಲೆ ಅವರ ಕುಷ್ಟ ರೋಗ ಗುಣವಾಯಿತು. ಆದರೆ, ಸ್ವಲ್ಪ ಕಲೆಗಳು ಹಾಗೆ ದೇಹದ ಮೇಲೆ ಉಳಿದಿದ್ದವು.
ಒಂದು ಬಾರಿ ಅಕ್ಕಸಾಲಿಗನೊಬ್ಬನ ಮಗುವೊಂದು ಆಟವಾಡುತ್ತ ಕುಲುಮೆಯೊಳಗೆ ಬಿದ್ದಿದುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಕಂಡ ಬಾಬಾರವರು ಆ ಮಗುವನ್ನು ರಕ್ಷಿಸಲು ತಮ್ಮ ಕೈಗಳನ್ನು ಉರಿಯುತ್ತಿರುವ ಧುನಿಯಲ್ಲಿ ಇಟ್ಟರು. ಸಾಯಿಬಾಬಾರವರ ಕೈಗಳೆಲ್ಲ ಸುಟ್ಟಿದುದನ್ನು ಕಂಡ ಶಿರಡಿಯ ಸಾಯಿಭಕ್ತರೆಲ್ಲ ಮುಂಬಯಿಯಿಂದ ಡಾಕ್ಟರ್ ಪರಮಾನಂದರವರನ್ನು ಕರೆಯಿಸಿದರಾದರು ಬಾಬಾರವರು ಅವರಿಂದ ಚಿಕಿತ್ಸೆಯನ್ನು ಪಡೆಯದೇ ಭಾಗೋಜಿ ಶಿಂಧೆಯವರಿಗೆ ತಮ್ಮ ಆರೈಕೆ ಮಾಡಲು ಅನುಮತಿ ಇತ್ತರು. ಭಾಗೋಜಿ ಶಿಂಧೆಯವರು ಪ್ರತಿದಿನ ಬಾಬಾರವರ ಗಾಯಗಳನ್ನೆಲ್ಲ ಚೆನ್ನಾಗಿ ತೊಳೆದು ಅದನ್ನು ಒರೆಸಿ ಗಾಯಕ್ಕೆ ಪಟ್ಟಿಯನ್ನು ಸುತ್ತುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಸಾಯಿಬಾಬಾರವರು ಸಂಪೂರ್ಣ ಗುಣಮುಖರಾದರು. ಆದರೂ, ಈ ಘಟನೆಯಾದ ೮ ವರ್ಷಗಳ ಕಾಲ ಸಾಯಿಬಾಬಾರವರ ಸಮಾಧಿಯವರೆಗೂ ಪ್ರತಿದಿನವೂ ಭಾಗೋಜಿ ಶಿಂಧೆಯವರು ಕೈಗಳನ್ನು ತುಪ್ಪದಿಂದ ಸವರಿ ಚೆನ್ನಾಗಿ ನೀವುತ್ತಿದ್ದರು ಹಾಗೂ ಗಾಯವು ಸಂಪೂರ್ಣ ಗುಣವಾಗಿದ್ದರೂ ಪಟ್ಟಿಯನ್ನು ಸುತ್ತುತ್ತಿದ್ದರು.
ಭಾಗೋಜಿ ಶಿಂಧೆಯವರ ಮನೆಯನ್ನು ಶಿಂಧೆವಾಡಾ ಎಂದು ಕರೆಯುತ್ತಾರೆ. ಇವರ ಮನೆಯು ಲಕ್ಷ್ಮೀ ಭಾಯಿ ಶಿಂಧೆಯವರ ಮನೆಯ ಹಿಂಭಾಗದಲ್ಲಿದೆ. ಚಾವಡಿಯಿಂದ ಮುಂದೆ ಹೋಗಿ ಎಡಕ್ಕೆ ತಿರುಗಿದರೆ ಸ್ವಲ್ಪ ದೂರದಲ್ಲಿ ಬಲಭಾಗದ ಮೂಲೆಯಲ್ಲಿ ನರಸಿಂಹ ಲಾಡ್ಜ್ ಎಂಬ ಹೋಟೆಲ್ ಸಿಗುತ್ತದೆ. ಅದರ ಗೋಡೆಯ ಮೇಲೆ ಪಾದುಕೆಗಳನ್ನು ಸ್ಥಾಪಿಸಿರುತ್ತಾರೆ. ಅದಾದ ನಂತರ ಬಲಕ್ಕೆ ತಿರುಗಿದರೆ ಒಂದು ಸಣ್ಣ ಓಣಿ ಸಿಗುತ್ತದೆ. ಅದೇ ಓಣಿಯಲ್ಲಿ ಬಲಭಾಗಕ್ಕೆ ಶಿಂಧೆವಾಡಾದ ಕಾಂಪೌಂಡ್ ಕಾಣುತ್ತದೆ. ಆ ಕಾಂಪೌಂಡ್ ನ ಒಳಗಡೆ ಹೋದರೆ ಬಲಭಾಗದ ಮೂಲೆಯಲ್ಲಿ ಭಾಗೋಜಿ ಶಿಂಧೆಯವರ ಮನೆಯು ಕಾಣಿಸುತ್ತದೆ. ಭಾಗೋಜಿ ಶಿಂಧೆಯವರ ಮನೆಯ ಕಾಂಪೌಂಡ್ ನ ಪಕ್ಕದಲ್ಲಿ ಅವರ ಸಂಬಂಧಿಕರು ನಡೆಸುವ ಔಷಧಾಲಯವನ್ನು ಕಾಣಬಹುದು.
No comments:
Post a Comment