ಸಾಯಿ ಮಹಾಭಕ್ತ - ನಂದು ಮಾರವಾಡಿ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ
ನಂದಾರಾಮ್ ಮಾರವಾಡಿಯವರು ಬಹಳ ಶ್ರೀಮಂತ ಜಮೀನ್ಧಾರರು ಮತ್ತು ಲೇವಾದೇವಿ ವ್ಯಾಪಾರಿಗಳು ಆಗಿದ್ದರು. ಆದರೆ ಇವರು ಒಳ್ಳೆಯ ಹೃದಯವಂತರು ಹಾಗೂ ಸೌಮ್ಯ ವ್ಯಕ್ತಿಗಳಾಗಿದ್ದರು. ಇವರ ತಾತನವರು ರಾಜಸ್ಥಾನದ ಖರಾಡೆ ಹಳ್ಳಿಯಿಂದ ಶಿರಡಿಗೆ ವಲಸೆ ಬಹಳ ಹಿಂದೆಯೇ ವಲಸೆ ಬಂದಿದ್ದರು. ನಂದಾರಾಮ್ ರವರು ಶಿರಡಿ ಗ್ರಾಮದಲ್ಲಿ ೧೮೬೬ ರಲ್ಲಿ ಜನಿಸಿದರು. ಸಾಯಿಬಾಬಾರವರು ಇವರ ಮನೆಗೆ ಪ್ರತಿನಿತ್ಯ ಭಿಕ್ಷೆ ಸ್ವೀಕರಿಸಲು ಹೋಗುತ್ತಿದ್ದರು. ನಂದಾರಾಮ್ ರವರ ಮನೆಯು ದ್ವಾರಕಾಮಾಯಿಯ ಎದುರುಗಡೆ ಇದ್ದರೂ ಕೂಡ ಅವರ ಮನೆಗೆ ಮೊದಲು ಭಿಕ್ಷೆಗೆ ಹೋಗದೆ ಎಲ್ಲರ ಮನೆಯಲ್ಲಿ ಬೇಡಿದ ಮೇಲೆ ಕಡೆಗೆ ಇವರ ಮನೆಗೆ ಹೋಗುತ್ತಿದ್ದರು. ಸಾಯಿಬಾಬಾರವರಿಗೆ ಇವರ ಮನೆಯವರೆಂದರೆ ಬಹಳ ಇಷ್ಟ. ನಂದಾರಾಮ್ ರವರ ಮನೆಯ ಬಳಿ ಹೋಗಿ ಸಾಯಿಯವರು "ಒಹ್, ಬೋಪಡಿ ಬಾಯಿ ಭಿಕ್ಷಾ ದೇ" ಎಂದು ಜೋರಾಗಿ ಕೂಗುತ್ತಿದ್ದರು. ನಂದಾರಾಮ್ ರವರ ಹೆಂಡತಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇವರು ಬರುವುದು ಸ್ವಲ್ಪ ತಡವಾದರೆ ಸಾಯಿಬಾಬಾರವರು ಇವರ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಕೆಲವು ವೇಳೆ ಸಾಯಿಯವರು ನಂದಾರಾಮ್ ರವರ ಹೆಂಡತಿಗೆ ಪೂರಣ್ ಪೋಳಿ ಮತ್ತು ಊಟ ನೀಡುವಂತೆ ಕೇಳುತ್ತಿದ್ದರು. ನಂದಾರಾಮ್ ರವರ ಹೆಂಡತಿ ಸಾಯಿಯವರು ಹೇಳಿದಂತೆ ಮಾಡಿಕೊಂಡು ದ್ವಾರಕಾಮಾಯಿಗೆ ಹೋಗಿ ಕೊಟ್ಟರೆ, ಸಾಯಿಯವರು ಸ್ವಲ್ಪವೇ ತಿಂದು ಮಿಕ್ಕಿದ್ದನ್ನು ಮಸೀದಿಯಲ್ಲಿ ನೆರೆದಿದ್ದವರಿಗೆ ಕೊಟ್ಟುಬಿಡುತ್ತಿದ್ದರು. ೧೯೧೧ ರಲ್ಲಿ ಶಿರಡಿ ಗ್ರಾಮದಲ್ಲಿ ಪ್ಲೇಗ್ ಮಹಾಮಾರಿ ಹರಡಿ ಶಿರಡಿಯ ಜನರೆಲ್ಲಾ ಶಿರಡಿ ಬಿಟ್ಟು ಬೇರೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿದರು. ಶಿರಡಿ ಗ್ರಾಮಸ್ಥರು ನಂದಾರಾಮ್ ರವರ ಕಣ್ಣುಗಳು ಕೆಂಪಗೆ ಊದಿಕೊಂಡಿವೆಯೆಂದು ಮತ್ತು ಅವರು ಶಿರಡಿ ಬಿಟ್ಟು ಹೋಗಬೇಕೆಂದು ಸಲಹೆ ನೀಡಿದರು. ಆಗ ನಂದಾರಾಮ್ ರವರು ಹೆದರಿ ಕುದುರೆಯ ಮೇಲೆ ಕುಳಿತು ಹೊರಡಲು ಅನುವಾಗಿ ಮಸೀದಿಗೆ ತೆರಳಿ ಸಾಯಿಯವರ ಅನುಮತಿ ಬೇಡಲು, ಸಾಯಿಬಾಬಾರವರು ಇವರಿಗೆ ಹೊರಡಲು ಅನುಮತಿ ನೀಡದೆ ಉಧಿಯನ್ನು ಕೊಟ್ಟು ಏನು ತೊಂದರೆಯಾಗುವುದಿಲ್ಲವೆಂದು ಭರವಸೆ ನೀಡಿದರು. ಅದರಂತೆ ನಂದಾರಾಮ್ ರವರಿಗೆ ಏನು ತೊಂದರೆಯಾಗಲಿಲ್ಲ.
ನಂದಾರಾಮ್ ರವರ ಅಜ್ಜಿಯಾದ ರಾಧಭಾಯಿ ಸಾಯಿಬಾಬಾರವರಿಗೆ ತಮ್ಮ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದ ಕೂಡಲೇ ಸಾಯುತ್ತಿರುವ ವಿಷಯವನ್ನು ತಿಳಿಸಿ ಅವರನ್ನು ಕಾಪಾಡಲು ಕೇಳಿಕೊಂಡರು. ಸಾಯಿಬಾಬಾರವರು ಅವರಿಗೆ ೩ ಮಾವಿನ ಹಣ್ಣುಗಳನ್ನು ನೀಡಿ ಆಶೀರ್ವದಿಸಿದರು. ಸಾಯಿಯವರ ಅಶೀರ್ವಾದದಂತೆ ಅವರಿಗೆ ೩ ಗಂಡು ಮಕ್ಕಳಾದವು ಮತ್ತು ಯಾವ ಮಕ್ಕಳು ಮರಣ ಹೊಂದದೆ ಚೆನ್ನಾಗಿದ್ದರು. ನಂದಾರಾಮ್ ಅವರು ಮಾಡಿದ ಬಹಳ ಒಳ್ಳೆಯ ಕೆಲಸವೆಂದರೆ ಭೂಟಿವಾಡಾ ಮತ್ತು ದ್ವಾರಕಾಮಾಯಿಯ ನಡುವೆ ಇದ್ದ ಜಾಗವನ್ನು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದುದು. ಈ ಕೆಲಸವನ್ನು ಅವರು ದಾಮು ಅಣ್ಣಾ ಅವರ ಮುಖಾಂತರ ಮಾಡಿದರು. ಇದರಿಂದ ಸಮಾಧಿ ಮಂದಿರವನ್ನು ವಿಶಾಲ ಸ್ಥಳವನ್ನಾಗಿ ಮಾರ್ಪಡಿಸಲು ಸಹಾಯವಾಯಿತು. ನಂದಾರಾಮ್ ರವರಿಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಗುಣ ಇಟ್ಟು ಮತ್ತು ಇವರು ಪಡೆಯುವುದಕ್ಕಿನ್ನಾ ಕೊಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಇವರು ಶಿರಡಿ ಗ್ರಾಮದಲ್ಲಿನ ಮಾರುತಿ ಮಂದಿರ ಮತ್ತು ಗಣೇಶನ ಮಂದಿರದ ದುರಸ್ಥಿ ಕಾರ್ಯವನ್ನು ಕೂಡ ಮಾಡಿಸಿದರು. ನಂದಾರಾಮ್ ರವರು ೧೩ ನೇ ಅಕ್ಟೋಬರ್ ೧೯೪೬ ರಂದು ಸಮಾಧಿ ಹೊಂದಿದರು. ಈಗ ಇವರ ವಂಶಸ್ಥರು ಇವರ ಒಳ್ಳೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
No comments:
Post a Comment