Saturday, January 23, 2010

ಸಾಯಿ ಮಹಾ ಭಕ್ತ - ಉಪಾಸಿನಿ ಬಾಬ ಆಲಿಯಾಸ್ ಕಾಶೀನಾಥ್ ಗೋವಿಂದ್ ಉಪಾಸಿನಿ ಮಹಾರಾಜ್  (೧೮೭೦ ರಿಂದ ೧೯೪೧) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಉಪಾಸಿನಿ ಬಾಬ ಅವರು ೧೫ ನೇ ಮೇ ೧೮೭೦ ರಂದು ಸಾಟನಾ ಹಳ್ಳಿಯ ಶಾಸ್ತ್ರೀಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಗೋವಿಂದ ಶಾಸ್ತ್ರಿಗಳು. ಇವರ ನಿಜ ನಾಮ ಕಾಶೀನಾಥ ಗೋವಿಂದ ಉಪಾಸಿನಿ ಶಾಸ್ತ್ರಿ. ಇವರು ತಮ್ಮ ದೊಡ್ದಪ್ಪನಾದ ಗೋಪಾಲ ಶಾಸ್ತ್ರಿಗಳ ಬಳಿ ಇದ್ದರು. ಉಪಾಸಿನಿ ಬಾಬರವರ ಬಾಲ್ಯ ಶಿಕ್ಷಣ ಏನು ಇಲ್ಲ ಎನ್ನಬಹುದು. ಏಕೆಂದರೆ, ಇವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಇವರ ಮಾಸ್ತರ್ ಶ್ರೀ ಗರಪುರೆಯವರು ಇವರನ್ನು ಯಾವುದೋ ಕಾರಣಕ್ಕಾಗಿ ಥಳಿಸಿದರು. ಉಪಾಸಿನಿ ಬಾಬ ಅಳುತ್ತ ಹೋಗಿ ಮುನ್ಸೀಫ್ ರಿಗೆ ದೂರು ನೀಡಿದರು. ಅಲ್ಲಿಗೆ ಇವರ ವಿದ್ಯಾಭ್ಯಾಸ ಮುಗಿಯಿತು. ಎಲ್ಲರು ಉಪಾಸಿನಿ ಬಾಬರವರನ್ನು ದಡ್ಡ ಎಂದೇ ಕರೆಯುತ್ತಿದ್ದರು. ಉಪಾಸಿನಿ ಬಾಬರವರು ಬೇಡವೆಂದರೂ ಅವರ ಮನೆಯವರು ಬಲವಂತವಾಗಿ ಅವರ ೧೪ ನೇ ವಯಸ್ಸಿನಲ್ಲಿ ೮ ವರ್ಷದ ಬಾಲಕಿಯೊಡನೆ ವಿವಾಹ ಮಾಡಿದರು. ೧೮೮೫ ರಲ್ಲಿ ಆ ಹುಡುಗಿ ಮೃತಳಾದಳು. ಅವರಿಗೆ ಪುನಃ ಮದುವೆ ಮಾಡಿದರು. ಒಂದು ವರ್ಷದ ನಂತರ ಅವಳೂ ಗತಿಸಿದಳು. ಅವರಿಗೆ ತಮ್ಮ ಮನೆಯವರ ರೀತಿ ನೀತಿಗಳು ಸರಿ ಹೋಗಲಿಲ್ಲ. ಮದುವೆಯೆಂಬ ಬಂಧನದಿಂದ ಅವರಿಗೆ ಜೀವನವೇ ಬೇಸರವಾಗಿ ಮನೆ ಬಿಟ್ಟು ಓಡಿ ಹೋದರು. ಕೆಲವು ಕಾಲದ ನಂತರ ಮರಳಿ ಬಂದು ಸ್ವಲ್ಪ ದಿನಗಳಿದ್ದು ಪುನಃ ಹೊರಟು ಹೋದರು.

ಮನೆಯನ್ನು ಬಿಟ್ಟು ಪ್ರವಾಸ ಹೊರಟ ಅವರು ಬೂರ್ಗಾ ಬೆಟ್ಟಕ್ಕೆ ಹೋಗಿ ಯೋಗ, ಧ್ಯಾನ ಮತ್ತು ಏಕಾಂತ ವಾಸಕ್ಕೆ ಮಾರು ಹೋದರು. ಅಲ್ಲಿ ಒಂದು ಗುಹೆಯನ್ನು ಕಂಡರು ಮತ್ತು ಅದು ತಮ್ಮ ಧ್ಯಾನಕ್ಕೆ ಸರಿಯಾದ ಸ್ಥಳ ಎಂದು ನಿರ್ಧರಿಸಿ ಧ್ಯಾನಮಗ್ನರಾದರು. ಮೂರ್ಚಿತರಾಗಿ ದೇವರ ನಾಮಜಪ ಮಾಡತೊಡಗಿದರು. ಹೀಗೆಯೇ ಹಲವು ದಿನಗಳನ್ನು ಕಳೆದರು. ಅಲ್ಲಿ ಅವರ ಕನಸಿನಲ್ಲಿ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಂ ಇವರ ಹತ್ತಿರ ನಿಂತು ದೇಹದ ಚರ್ಮವನ್ನೆಲ್ಲ ಎಳೆದಂತಾಗಿ ಅವರಲ್ಲಿ ದೈವಿಕ ದೇಹವನ್ನು ಕಾಣುವಂತೆ ಭಾಸವಾಯಿತು. ಅವರಿಬ್ಬರೂ ಆ ದೇಹವನ್ನು ಸಂಬೋಧಿಸಿ "ನೀನೇಕೆ ಸಾಯಲು ಇಚ್ಚಿಸುವೆ. ನಾವು ನಿನ್ನನ್ನು ಸಾಯಲು ಬಿಡುವುದಿಲ್ಲ. ನಾವು ನಿನ್ನೊಡನೆ ಇದ್ದೇವೆ" ಎಂದು ಹೇಳಿ ಅದೇ ಕ್ಷಣದಲ್ಲಿ ಮಾಯವಾದರು. ಗುಹೆಯಿಂದ ಪುನಃ ಹೊರಗೆ ಬಂದು ಮನೆಗೆ ಮರಳಿ ಬಂದರು. ಆದರೆ ಕೆಲವೇ ದಿನಗಳಲ್ಲಿ ಪುನಃ ಅಲೆಮಾರಿತನ ಪ್ರಾರಂಭಿಸಿದರು. ಹೀಗೆ ಅಲೆಯುತ್ತ ಪುಣೆಗೆ ಬಂದರು. ಅಲ್ಲಿ ಅವರ ಅಣ್ಣನ ಮನೆಗೆ ಹೋಗದೆ ಅಲ್ಲಲ್ಲಿ ಭಿಕ್ಷೆ ಬೇಡಿ ತಿನ್ನುತ್ತ ಜೀವನ ನಡೆಸುತ್ತಿದ್ದರು. ೧೮೯೧ ರಲ್ಲಿ ಅವರ ದೊಡ್ಡಪ್ಪ ಗೋಪಾಲ ಶಾಸ್ತ್ರಿಗಳು ನಿಧನರಾದರು. ಆಗ ಉಪಾಸಿನಿ ಬಾಬರವರಿಗೆ ತಾವು ಏನಾದರೊಂದು ಕೆಲಸ ಮಾಡಿ ಜೀವನ ನಡೆಸಬೇಕೆಂದು ತೀರ್ಮಾನ ಮಾಡಿದರು. ಸಾಂಗ್ಲಿಗೆ ಹೋಗಿ ಸಾಂಗ್ಲಿ ವೆಂಕಟರಮಣಾಚಾರ್ ರವರ ಬಳಿ ಆಯುರ್ವೇದ ಮತ್ತು ಸಂಸ್ಕೃತ ವ್ಯಾಕರಣ ಕಲಿತರು. ಅಲ್ಲಿಂದ ಅಮರಾವತಿಗೆ ಹೋಗಿ ಅಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು.

ಉಪಾಸಿನಿ ಬಾಬರವರು ಭಿಷಜ್ ರತ್ನಮಾಲ ಎಂಬ ಮರಾಠ ಮಾಸ ಪತ್ರಿಕೆಯನ್ನು ೧೯೦೨ ರಿಂದ ೧೯೦೫ ರ ತನಕ ಪ್ರಕಾಶನ ಮಾಡಿದರು. ಅದರಲ್ಲಿ ತಮ್ಮ ಔಷಧಿಗಳ ಜಾಹೀರಾತನ್ನು ನೀಡಿ ವೈದ್ಯ ವೃತ್ತಿಯಿಂದ ಸ್ವಲ್ಪ ಹಣಗಳಿಸಿದರು. ಅದರಿಂದ ಬಂದ ಹಣವನ್ನು ಒಂದು ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಅದರಲ್ಲಿ ನಷ್ಟ ಅನುಭವಿಸಿದರು. ಆರೋಗ್ಯ ಪುನಃ ಕೆಟ್ಟಿತು. ಹತಾಶರಾಗಿ ಪುನಃ ಮನೆಗೆ ವಾಪಸಾದರು. ಕೂಡಲೇ ತೀರ್ಥಯಾತ್ರೆ ಮಾಡುವ ಸಲುವಾಗಿ ತಮ್ಮ ೩ ನೇಯ ಪತ್ನಿಯೊಂದಿಗೆ ೩.೪.೧೯೧೦ ರಂದು ನರ್ಮದ ಮತ್ತು ಕಾವೇರಿ ಸಂಗಮಕ್ಕೆ ಬಂದು ಅಲ್ಲಿನ ಬೃಹತ್ ಸೋಮನಾಥ ಲಿಂಗದ ಬಳಿ ತಮ್ಮ ಪತ್ನಿಯೊಡನೆ ಪ್ರಾಣಾಯಾಮ ಮಾಡಲು ಕುಳಿತರು. ಪ್ರಾಣಾಯಾಮ ಮಾಡುತ್ತಲೇ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಅವರ ಪತ್ನಿಯು ನದಿಯ ನೀರನ್ನು ಚುಮುಕಿಸಿದರು. ಆನಂತರ ಜ್ಞಾನ ಬಂದಿತು. ಆದರೆ ಅಂದಿನಿಂದ ಉಸಿರಾಟದ ತೊಂದರೆ ಪ್ರಾರಂಭವಾಯಿತು.  ಯಾವ ಔಷಧಗಳಿಂದಲೂ ಗುಣ ಕಾಣಲಿಲ್ಲ. ಆಗ ರಾಹುರಿಯಲ್ಲಿನ ಯೋಗಿ ಕುಲಕರ್ಣಿಯವರ ಬಳಿಗೆ ಬಂದರು. ಅವರು ಇವರ ತೊಂದರೆ ಯೋಗದಿಂದ ಬಂದಿರುವುದನ್ನು ತಿಳಿದು ಶಿರಡಿಯ ಸಾಯಿಬಾಬಾರವರಲ್ಲಿಗೆ ಹೋಗಲು ತಿಳಿಸಿದರು. ಸಾಯಿಯವರ ಹೆಸರನ್ನು ಕೇಳಿ "ಸಾಯಿಬಾಬ ಮುಸ್ಲಿಂ, ನಾನು ಬ್ರಾಹ್ಮಣ, ಶಾಸ್ತ್ರಿಗಳ ಮಗ. ಆದ್ದರಿಂದ ಮುಸ್ಲಿಮನಿಗೆ ನಾನು ತಲೆ ಬಾಗಲಾರೆ" ಎಂದರು. ಸ್ವಲ್ಪ ದಿನಗಳ ನಂತರ ಒಂದು ದಿನ ರಾಹುರಿಯಲ್ಲಿನ ಬೀದಿಯಲ್ಲಿ ಹೋಗುತ್ತಿದ್ದಾಗ ಓರ್ವ ವಯಸ್ಸಾದ ಮುಸ್ಲಿಮನ್ನು ಸಂಧಿಸಿದರು. ಇವರ ತೊಂದರೆಯನ್ನು ಆಲಿಸಿದ ಆ ವೃದ್ದ ಮುಸ್ಲಿಂ ಉಪಾಸಿನಿ ಬಾಬರವರಿಗೆ ತಣ್ಣೀರು ಕುಡಿಯುವುದು ಬಿಟ್ಟು ಬಿಸಿನೀರು ಕುಡಿಯಲು ಸಲಹೆ ಮಾಡಿದನು. ಅವನ ಸಲಹೆಯನ್ನು ತಿರಸ್ಕರಿಸಿ ಒಬ್ಬ ಹಿಂದೂ ಯೋಗಿ ಪಾತಕ್ ರನ್ನು ಭೇಟಿ ಮಾಡಲು ಜೆಜೂರಿಗೆ ಹೋದರು. ಅಲ್ಲಿ ಪುನಃ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದರು. ಒಂದು ದಿನ ಬಾಯಾರಿಕೆಯಾಗಿ ಎಲ್ಲಿಯೇ ಹತ್ತಿರವಿದ್ದ ಹಳ್ಳದ ಬಳಿ ನೀರು ಕುಡಿಯಲು ಹೋದಾಗ, ರಾಹುರಿಯಲ್ಲಿ ಸಂಧಿಸಿದ ಮುದುಕ ಪುನಃ ಕಾಣಿಸಿಕೊಂಡು ಪುನಃ ಬಿಸಿನೀರು ಕುಡಿಯಲು ಹೇಳಿದನು. ಆಗ ಆ ಮುಸ್ಲಿಂ ವೃದ್ದನ ಮಾತಿನಂತೆ ಬಿಸಿನೀರು ಕುಡಿಯಲು ಪ್ರಾರಂಭಿಸಿದರು. ತಮ್ಮ ಆರೋಗ್ಯ ಸುಧಾರಿಸುತ್ತಾ ಬರುತ್ತಿರುವುದನ್ನು ಗಮನಿಸಿದರು.

ಅದಾದ ಸ್ವಲ್ಪ ದಿನಗಳ ಮೇಲೆ ರಾಹುರಿಯ ಯೋಗಿಯ ಒತ್ತಾಯದ ಮೇರೆಗೆ ೨೭ ನೇ ಜೂನ್ ೧೯೧೧ ರಲ್ಲಿ ಶಿರಡಿಯ ಸಾಯಿಬಾಬಾರವರನ್ನು ಕಾಣಲು ಬಂದರು. ಇದೇ ಉಪಾಸಿನಿ ಬಾಬ ಮತ್ತು ಸಾಯಿಬಾಬಾರವರ ಮೊದಲನೇ ಭೇಟಿ. ಶಿರಡಿಯಲ್ಲಿ ಉಪಾಸಿನಿ ಬಾಬರವರು ಸಾಯಿಬಾಬಾರವರ ಅದ್ವಿತೀಯ ಶಕ್ತಿಯನ್ನು ಮನಗಂಡರು. ಸಾಯಿಬಾಬಾರವರು ಉಪಾಸಿನಿ ಬಾಬರವರಿಗೆ ಖಂಡೋಬ ಮಂದಿರದಲ್ಲಿ ವಾಸಿಸಲು ಹೇಳಿದರು. ಅಲ್ಲಿ ಅವರು ತಮ್ಮನ್ನು ಕಾಣಲು ಬರುವ ಸಂದರ್ಶಕರು ಕೊಡುವ ಭಿಕ್ಷೆಯಿಂದ ಜೀವನ ನಡೆಸುತ್ತಿದ್ದರು. ಕೆಲವು ವೇಳೆ ಭಿಕ್ಷೆ ಸಿಗದೇ ಉಪವಾಸ ಮಾಡಬೇಕಾಗುತ್ತಿತ್ತು. ಹೀಗೆ ಅವರು ಉಪವಾಸ ಮಾಡುತ್ತಿದ್ದುದರಿಂದ ಅವರನ್ನು "ಉಪಾಸಿನಿ" ಎಂದು ಕರೆಯುತ್ತಿದ್ದರು.

ಕೆಲಕಾಲದ ನಂತರ ಉಪಾಸಿನಿಯವರು ಸಕೋರಿ ಆಶ್ರಮಕ್ಕೆ ಬಂದು ನೆಲೆಸಿದರು. ಉಪಾಸಿನಿ ಬಾಬರವರು ಜನರನ್ನು ಪ್ರಾಪಂಚಿಕ ಅಭಿಲಾಷೆಗಳಿಂದ ಎಳೆದು ಧರ್ಮ ಕಾರ್ಯಗಳಲ್ಲಿ ನಿರತರಾಗುವಂತೆ ಮಾಡಿದರು. ಉಪಾಸಿನಿಯವರಿಗೆ ಸಾಯಿಬಾಬಾರವರಿಂದ ಪಡೆದ ಕೆಲವು ದೈವಿಕ ಶಕ್ತಿಗಳಿದ್ದವು. ಉಪಾಸಿನಿ ಬಾಬರವರು ಸಾಯಿ ಪ್ರಚಾರಕ್ಕೆ ಸಲ್ಲಿಸಿದ ಸೇವೆಯನ್ನು ಯಾರು ಮರೆಯುವಂತಿಲ್ಲ. ಇವರು ಸುಪ್ಪ್ರಸಿದ್ಧವಾದ "ಸಾಯಿ ಮಹಿಮ್ನ ಸ್ತೋತ್ರ" ವನ್ನು ರಚಿಸಿದ್ದಾರೆ. ಮತ್ತೊಬ್ಬ ಸಾಯಿ ಮಹಾಭಕ್ತ ಶ್ರೀ ಮೆಹರ್ ಬಾಬಾರವರು ಉಪಾಸಿನಿ ಬಾಬಾರವರ ಶಿಷ್ಯರಾಗಿದ್ದರು. ಉಪಾಸಿನಿ ಬಾಬರವರು ೧೯೪೧ ರಲ್ಲಿ ಸಮಾಧಿ ಹೊಂದಿದರು.

No comments:

Post a Comment