Wednesday, June 30, 2010

ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ಗುರುಸ್ಥಾನ - ಕೃಪೆ - ಸಾಯಿಅಮೃತಧಾರಾ.ಕಾಂ 

"ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಬಹಳ ಪ್ರಮುಖವಾದುದು. ಗುರುವಿನಲ್ಲಿ ಸಂಪೂರ್ಣ ಶರಣಾಗತನಾದರೆ ಮಾತ್ರ ಮಾನವನು ತಾನು ಬಯಸಿದ್ದನ್ನು ಜೀವನದಲ್ಲಿ ಪಡೆಯಬಹುದು. ಭಕ್ತನಿಗೆ ಸಂಪೂರ್ಣ ಶಕ್ತಿಯನ್ನು ದಯಪಾಲಿಸುವವನು ಗುರು ಒಬ್ಬನೇ. ಗುರುವಿನಲ್ಲಿ ಭಕ್ತಿಯಿಡುವುದು ದೇವರಲ್ಲಿ ಭಕ್ತಿಯಿಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದಿದೆ. ಆದುದರಿಂದ ಗುರುವೇ ಶ್ರೇಷ್ಠನು" ಎಂದು ಶಿರಡಿ ಸಾಯಿಬಾಬಾರವರು ತಿಳಿಸಿದ್ದಾರೆ. 

ಈ ಮೇಲಿನ ಸಾಯಿಯವರ ಮಾತುಗಳಿಂದ ಗುರುಸ್ಥಾನದ ಮಹತ್ವವು ತಿಳಿಯುತ್ತದೆ. ಇಂದಿನ ಗುರುಸ್ಥಾನವಿರುವ ಜಾಗದಲ್ಲಿ ಸಾಯಿಬಾಬಾರವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು, ಮಾತ್ರವಲ್ಲ, ಗುರುಸ್ಥಾನದ ಬೇವಿನ ಮರವಿರುವ ಜಾಗದ ಕೆಳಗಡೆ  ತಮ್ಮ ಗುರುವಿನ ಸಮಾಧಿಯಿರುವುದೆಂದು ಸಾಯಿಬಾಬಾರವರು ಹೇಳುತ್ತಿದ್ದರು. ಆದುದರಿಂದ, ಸಾಯಿಭಕ್ತರಿಗೆ ಗುರುಸ್ಥಾನವು ತಪ್ಪದೆ ನೋಡಲೇಬೇಕಾದ ಒಂದು ಸ್ಥಳವಾಗಿರುತ್ತದೆ. ಒಬ್ಬ ವೃದ್ದ ಮಹಿಳೆಯ ಪ್ರಕಾರ ಗುರುಸ್ಥಾನದ ಬೇವಿನ ಮರದ ಕೆಳಗಡೆಯಲ್ಲಿ ದ್ವಾರಕಾಮಾಯಿಗೆ ಹೋಗಲು ಒಂದು ಸುರಂಗ ಮಾರ್ಗವಿದೆ ಎಂದು ಹೇಳಲಾಗುತ್ತದೆ.






ಸಾಯಿಬಾಬಾರವರು ತಮ್ಮ ಭಕ್ತರಿಗೊಸ್ಕರ ಮೊಟ್ಟ ಮೊದಲ ಬಾರಿಗೆ ಶಿರಡಿಯಲ್ಲಿ ಬೇವಿನ ಮರದ ಕೆಳಗಡೆ ಹದಿನಾರು ವರ್ಷದ ಯುವಕನಾಗಿದ್ದಾಗ ಕಾಣಿಸಿಕೊಂಡರು. ಈ ಬಾಲಸಾಧುವನ್ನು ನೋಡಿ ಶಿರಡಿಯ ಗ್ರಾಮಸ್ಥರೆಲ್ಲ ಆಶ್ಚರ್ಯಚಕಿತರಾದರು. ಆ ಹುಡುಗನು ಯಾರ ಮನೆಯ ಬಾಗಿಲಿಗೂ ಹೋಗುತ್ತಿರಲಿಲ್ಲ. ಮಳೆ, ಚಳಿ, ಬಿಸಿಲು ಯಾವುದಕ್ಕೂ ಜಗ್ಗದೆ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾಗಿದ್ದನು. ಒಂದು ದಿನ ಒಬ್ಬ ಭಕ್ತನ ಮೈಮೇಲೆ ಖಂಡೋಬ ದೇವರು ಬಂದಾಗ ಊರಿನ ಜನರು ಅವನನ್ನು ಈ ಹುಡುಗನ ಬಗ್ಗೆ ಪ್ರಶ್ನಿಸಲಾಗಿ ಖಂಡೋಬ ದೇವರು ಒಂದು ಹಾರೆಯನ್ನು ತಂದು ತಾನು ತೋರಿಸಿದ ಸ್ಥಳದಲ್ಲಿ ಅಗೆಯಲು ಹೇಳಿದನು. ಖಂಡೋಬ ಹೇಳಿದಂತೆ ಮಾಡಲಾಯಿತು. ನೆಲವನ್ನು ಅಗೆದಾಗ ಅಲ್ಲಿ ಒಂದು ನೆಲಮಾಳಿಗೆಯು ಕಾಣಿಸಿತು ಮತ್ತು ಅಲ್ಲಿ 4 ಉರಿಯುತ್ತಿರುವ ದೀಪಗಳನ್ನು ಕಂಡರು. ಅಲ್ಲದೇ, ನೆಲಮಾಳಿಗೆಯಲ್ಲಿ ಹಸುವಿನ ಬಾಯಿಯನ್ನು ಹೋಲುವ ವಸ್ತುಗಳು, ಮರದ ಹಲಗೆಗಳು ಮತ್ತು ಹಾರಗಳನ್ನು ಕಂಡರು. ಖಂಡೋಬ ದೇವರು ಈ ಹುಡುಗನು ಇಲ್ಲಿ 12 ವರ್ಷಗಳ ಕಾಲ ತಪಸ್ಸನ್ನು ಮಾಡಿರುವನು ಎಂದು ಹೇಳಿದರು. ಆಗ ಗ್ರಾಮಸ್ಥರು ಹುಡುಗನನ್ನು ಈ ಬಗ್ಗೆ ಪ್ರಶ್ನಿಸಲಾಗಿ ಹುಡುಗನು ನೇರ ಉತ್ತರವನ್ನು ನೀಡದೆ ಆ ಸ್ಥಳವು ತನ್ನ ಗುರುವಿನ ಸ್ಥಾನವೆಂದು ಮತ್ತು ಆ ಜಾಗವನ್ನು ಜೋಪಾನವಾಗಿ ಕಾಪಾಡಬೇಕೆಂದು ಕೇಳಿಕೊಂಡನು (ಸಾಯಿ ಸಚ್ಚರಿತ್ರೆ ಅಧ್ಯಾಯ 4). ಯಾರಿಗೂ ಸಾಯಿಬಾಬಾರವರ ಗುರು ಯಾರೆಂದು ತಿಳಿದಿರಲಿಲ್ಲ ಮತ್ತು ಈಗಲೂ ಕೂಡ ತಿಳಿದಿಲ್ಲ. ಸಾಯಿಬಾಬಾರವರು ಶಿರಡಿಯಲ್ಲಿ ಮೊದಲು ಕಾಣಿಸಿಕೊಂಡ ಗುರುತಿಗಾಗಿ ಭಕ್ತರು ಈ ಸ್ಥಳದಲ್ಲಿ ಪವಿತ್ರ ಪಾದುಕೆಗಳನ್ನು ಪ್ರತಿಷ್ಠಾಪಿಸಿದ್ದಾರೆ.

1920 ರಲ್ಲಿ ಬೇವಿನ ಮರದ ಪಕ್ಕದಲ್ಲಿ ಪಶ್ಚಿಮ ದಿಕ್ಕಿನಲ್ಲಿದ್ದ ಒಂದು ಸಣ್ಣ ಮಂದಿರವಾಗಿತ್ತು. ಶಕೆ 1863 ರ ಆಶ್ವಯುಜ ಶುದ್ದ ದಶಮಿಯಂದು (30ನೇ ಸೆಪ್ಟೆಂಬರ್ 1941) ಅದೇ ಸ್ಥಳದಲ್ಲಿ ಒಂದು ಸುಂದರ ಮಂದಿರದ ನಿರ್ಮಾಣವಾಯಿತು. ಪಶ್ಚಿಮ ದಿಕ್ಕಿಗೆ ಮುಖ ಮಾಡಿಕೊಂಡಿದ್ದ ಈ ಮಂದಿರವನ್ನು ಸುಮಾರು 1 ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿತ್ತು. ಈ ಮಂದಿರವು ಹಿತ್ತಾಳೆಯಲ್ಲಿ ಸುಂದರ ನವಿಲು ಮತ್ತು ಹೂವುಗಳ ಕೆತ್ತನೆಯನ್ನು ಮತ್ತು ಉತ್ತಮವಾದ ಬಣ್ಣದಿಂದ ಕೂಡಿದ್ದು ಮಂದಿರದ ಮೇಲೆ ಸಣ್ಣ ಕಲಶವನ್ನು ಕೂಡ ಹೊಂದಿತ್ತು.

1974 ಅಲ್ಲಿ ಈ ಸಣ್ಣ ಮಂದಿರವನ್ನು ಒಂದು ದೊಡ್ಡದಾದ ಮಂದಿರದ ಒಳಗೆ ಇರಿಸಲಾಯಿತು. ಸಣ್ಣ ಮಂದಿರದ ಪಕ್ಕದಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಎಡಭಾಗದಲ್ಲಿ ಪವಿತ್ರ ಬೇವಿನ ಮರವಿತ್ತು. ಬೇವಿನ ಮರದ ಎದುರುಗದೆಯಿದ್ದ ಸಣ್ಣ ಪೀಠದ ಮೇಲೆ ಬಾಬಾರವರ ಅಮೃತಶಿಲೆಯ ಪವಿತ್ರ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿತ್ತು.

ಏಪ್ರಿಲ್ 2007 ರ ಹೊತ್ತಿಗೆ ಬೇವಿನ ಮರವು ಒಣಗಲು ಪ್ರಾರಂಭವಾಯಿತು. ಆಗ ಶಿರಡಿ ಸಾಯಿಬಾಬಾ ಸಂಸ್ಥಾನದವರು ತೋಟಗಾರಿಕೆ ಇಲಾಖೆಯ ಸಹಾಯವನ್ನು ಕೋರಿದರು. ಪವಿತ್ರ ಬೇವಿನ ಮರವನ್ನು ಉಳಿಸುವ ಸಲುವಾಗಿ ಹಳೆಯ ಗುರುಸ್ಥಾನವನ್ನು ಕೆಡವಲಾಯಿತು. ಗುರುಪೂರ್ಣಿಮೆಯು ಬಹಳ ಹತ್ತಿರದಲ್ಲಿದ್ದುದರಿಂದ ಈಗಿರುವ ಗುರುಸ್ಥಾನವನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು. ಸಾಯಿಬಾಬಾ ಸಂಸ್ಥಾನದ ಇಂತಹ ಒಳ್ಳೆಯ ಕೆಲಸದಿಂದ ಪವಿತ್ರ ಬೇವಿನ ಮರವು ಮತ್ತೆ ಚಿಗುರಿದೆ.


ಸಣ್ಣ ಧುನಿ ಮಾ: 


ಗುರುಸ್ಥಾನದ ಮುಂಭಾಗದಲ್ಲಿ ಸಾಯಿಭಕ್ತರು ಪ್ರತಿ ಗುರುವಾರ ಮತ್ತು ಶುಕ್ರವಾರ ಧೂಪವನ್ನು ಹಾಕಲು ಅನುಕೂಲವಾಗುವಂತೆ ಸಾಯಿಬಾಬಾ ಸಂಸ್ಥಾನದವರು ಸಣ್ಣ ಧುನಿಯ ವ್ಯವಸ್ಥೆಯನ್ನು ಮಾಡಿದ್ದಾರೆ.


ಸಾಯಿಬಾಬಾರವರು ಗುರುಸ್ಥಾನದ ಮುಂದೆ ಯಾರು ಧೂಪವನ್ನು ಪ್ರತಿ ಗುರುವಾರ ಮತ್ತು ಶುಕ್ರವಾರಗಳಂದು ಉರಿಸುತ್ತಾರೋ ಅವರಿಗೆ ದೇವರು (ಅಲ್ಲಾ) ಒಳ್ಳೆಯದು ಮಾಡುತ್ತಾನೆ ಎನ್ನುತ್ತಿದ್ದರು. ಮೊದಲು ಇಲ್ಲಿ ದ್ವಾರಕಾಮಾಯಿಯಿಂದ ತಂದ ಪವಿತ್ರ ಅಗ್ನಿಯಿಂದ ನಿತ್ಯ ಧೂಪ ಹಚ್ಚುತ್ತಿದ್ದರು. ಆದರೆ ಈಗ ಗುರುವಾರ ಮತ್ತು ಶುಕ್ರವಾರಗಳಂದು ಮಾತ್ರ ಈ ರೀತಿ ವ್ಯವಸ್ಥೆಯನ್ನು ಸಂಸ್ಥಾನದವರು ಮಾಡಿರುತ್ತಾರೆ. 




ಪವಿತ್ರ ಬೇವಿನ ಮರ: 

ಹೇಗೆ ಹಿಂದೂಗಳಲ್ಲಿ ಅಶ್ವತ ವೃಕ್ಷ ಮತ್ತು ಔದುಂಬರ ವೃಕ್ಷಗಳು ಶ್ರೇಷ್ಠ ಎಂಬ ನಂಬಿಕೆಯಿದೆಯೋ ಅದೇ ರೀತಿ ಬಾಬಾರವರು ಈ ಬೇವಿನ ಮರ ಶ್ರೇಷ್ಠ ಎಂದು ತಿಳಿದಿದ್ದರು. ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಈ ಪವಿತ್ರ ಬೇವಿನ ಮರವಿತ್ತು. ಸಾಯಿ ಮಹಿಮಾ ಸ್ತ್ರೋತ್ರದಲ್ಲಿ ಉಪಾಸಿನಿ ಬಾಬಾರವರು ಈ ಬೇವಿನ ಮರವು ಕಲ್ಪವೃಕ್ಷಕ್ಕೂ ಮಿಗಿಲಾದುದು ಎಂದು ವರ್ಣಿಸಿದ್ದಾರೆ. ಈ ಬೇವಿನ ಮರದ ಎಲೆಗಳು ಬಹಳ ಸಿಹಿಯಾಗಿವೆ. ಆದ್ದರಿಂದ ಸಾಯಿಭಕ್ತರು ಈ ಪವಿತ್ರ ಬೇವಿನ ಮರವನ್ನು ಪೂಜಿಸುತ್ತಾರೆ ಮತ್ತು ಇದರ ಎಲೆಗಳನ್ನು ತಿನ್ನುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. 


ಶಿರಡಿಯಲ್ಲಿನ ಗುರುಸ್ಥಾನದ ವಿಶೇಷವೆಂದರೆ ಅಲ್ಲಿರುವ ಬಹು ದೊಡ್ಡದಾದ ಬೇವಿನ ಮರ ಮತ್ತು ಅದರ ಎಲೆಗಳು. ಏಕೆಂದರೆ ಬೇವಿನ ಮರಕ್ಕೆ ಎಲ್ಲರಿಗೂ ತಿಳಿದಿರುವಂತೆ ಔಷಧೀಯ ಗುಣಗಳಿದ್ದು ಅನೇಕ ಖಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಆದರೆ ಶಿರಡಿಯಲ್ಲಿನ ಈ ಬೇವಿನ ಮರದ ವಿಶೇಷವೇನೆಂದರೆ ಅದರ ಎಲೆಗಳು ಸಿಹಿಯಾಗಿದ್ದುದು. ಸಾಮಾನ್ಯವಾಗಿ ಬೇವಿನ ಮರದ ಎಲೆಗಳು ಕಹಿಯಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಸಾಯಿಬಾಬಾರವರ ಆಶೀರ್ವಾದದಿಂದ ಗುರುಸ್ಥಾನದ ಬೇವಿನ ಮರದ ಎಲೆಗಳು ಬಹಳ ಸಿಹಿಯಾಗಿವೆ. ಈ ಸಂಗತಿ ಇಲ್ಲಿನ ಬೇವಿನ ಮರದ ಪವಿತ್ರತೆಯನ್ನು ತೋರಿಸುತ್ತದೆ.

ಈ ಬೇವಿನ ಮರಕ್ಕೆ ಸಂಬಂಧಿಸಿದ ಘಟನೆಯೊಂದು ಸಾಯಿಬಾಬಾರವರು ಎಷ್ಟು ಕಾರ್ಯಶೀಲರು ಮತ್ತು ವಿನಯವಂತರು ಎಂಬುದನ್ನು ತೋರಿಸುತ್ತದೆ. 1900ನೇ ಇಸವಿಯಲ್ಲಿ ಸಾಯಿಬಾಬಾರವರು ದ್ವಾರಕಾಮಾಯಿಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಸಾಥೆವಾಡಾದ ನಿರ್ಮಾಣ ಕಾರ್ಯಕ್ಕೆ ಬೇವಿನ ಮರದ ಒಂದು ಕೊಂಬೆಯು ಅಡ್ಡಲಾಗಿದ್ದು ಅದರಿಂದ ಬಹಳ ತೊಂದರೆಯಾಗುತ್ತಿತ್ತು. ಆದರೆ, ಸಾಯಿಬಾಬಾರವರು ಅಲ್ಲಿ ಕುಳಿತು ಆ ಸ್ಥಳವು ಪವಿತ್ರವಾಗಿದ್ದರಿಂದ ಆ ಕೊಂಬೆಗಳನ್ನು ಕಡಿಯಲು ಯಾರು ಮುಂದಾಗಲಿಲ್ಲ. ಅಷ್ಟೇ ಅಲ್ಲದೇ, ಹಿಂದೆ ಒಮ್ಮೆ ಒಬ್ಬ ಹುಡುಗನು ಮರದ ಕೊಂಬೆಗಳನ್ನು ಕಡಿಯಲು ಮರವನ್ನೇರಿದಾಗ, ಅದರ ಮೇಲಿನಿಂದ ಬಿದ್ದು ಮರಣ ಹೊಂದಿದ್ದನು. ಆಗ ಸಾಯಿಬಾಬಾರವರು ಮಸೀದಿಯಿಂದಲೇ ಶಂಖವನ್ನು ಜೋರಾಗಿ ಊದಿ ಗುರುಸ್ಥಾನದ ಬಳಿ ಹುಡುಗನಿಗೆ ತೊಂದರೆ ಆಗುತ್ತಿರುವ ಸೂಚನೆಯನ್ನು ನೀಡಿದ್ದರು. ಈ ಮೇಲಿನ ಎರಡು ಕಾರಣದಿಂದ ಯಾರು ಮರದ ಕೊಂಬೆಗಳನ್ನು ಕಡಿಯಲು ಸಾಹಸ ಮಾಡಲಿಲ್ಲ. ಅವರೆಲ್ಲ ಸಾಯಿಬಾಬಾರವರ ಬಳಿ ಬಂದು ಸಾಯಿಬಾಬಾರವರ ಸಲಹೆಯನ್ನು ಕೇಳಲಾಗಿ ಅವರು "ಕೆಲಸಕ್ಕೆ ಎಷ್ಟು ಭಾಗವು ತೊಂದರೆ ಕೊಡುತ್ತಿದೆಯೋ ಅಷ್ಟು ಭಾಗವನ್ನು ಯಾವ ಮುಲಾಜಿಲ್ಲದೆ ಕಡಿಯಿರಿ. ನಮ್ಮ ಮಗುವೇ ಗರ್ಭದಲ್ಲಿ ಅಡ್ಡವಾಗಿದ್ದು ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಕೂಡ ನಿರ್ದಾಕ್ಷಿಣ್ಯವಾಗಿ ಕಡಿಯಬೇಕು" ಎಂದು ಸಲಹೆ ನೀಡಿದರು. ಸಾಯಿಬಾಬಾರವರು ಹಾಗೆ ಹೇಳಿದ್ದರೂ ಕೂಡ ಯಾರು ಕೂಡ ಆ ಕೊಂಬೆಗಳನ್ನು ಕಡಿಯಲು ಮುಂದೆ ಬರಲಿಲ್ಲ. ಆಗ ಸಾಯಿಬಾಬಾರವರೇ ಸ್ವತಃ ಮರವನ್ನೇರಿ ಆ ತೊಂದರೆ ನೀಡುತ್ತಿದ್ದ ಕೊಂಬೆಗಳನ್ನು ಕಡಿದರು.


1980 ರಿಂದ ಗುರುಸ್ಥಾನದ ಬೇವಿನ ಮರಕ್ಕೆ 108 ಪ್ರದಕ್ಷಿಣೆ ಮಾಡುವ ಪರಿಪಾಠವನ್ನು ಸಾಯಿಭಕ್ತರು ಇಟ್ಟುಕೊಂಡಿದ್ದಾರೆ. ಕೆಲವರು ಬೆಳಗಿನ ಜಾವ, ಮತ್ತೆ ಕೆಲವರು ರಾತ್ರಿ ವೇಳೆ ಗುರುಸ್ಥಾನದ ಪ್ರದಕ್ಷಿಣೆ ಮಾಡುತ್ತಾರೆ. ಮತ್ತೆ ಕೆಲವು ಭಕ್ತರು ಅಲ್ಲಿ ಸುಮ್ಮನೆ ಒಂದೆಡೆ ಕುಳಿತು ಧ್ಯಾನ ಮಾಡುತ್ತಾರೆ. ಸಾಯಿಬಾಬಾರವರು ಗುರುಸ್ಥಾನದ ಬೇವಿನ ಮರದ ನೆರಳಿನಲ್ಲಿ ಕುಳಿತ ಭಕ್ತನ ಕಷ್ಟಗಳನ್ನೆಲ್ಲ ತಾನು ಭರಿಸುವುದಾಗಿ ಹೇಳಿರುತ್ತಾರೆ. 


ಸಾಯಿಬಾಬಾರವರ ವಿಗ್ರಹ:

ಈ ಅಮೃತಶಿಲೆಯ ವಿಗ್ರಹವು 3 ಅಡಿ ಎತ್ತರವಿದ್ದು "ಕಲ್ಲಿನ ಮೇಲೆ ಕುಳಿತ ಬಾಬಾ" ವಿಗ್ರಹವಾಗಿರುತ್ತದೆ. 1974 ರ ಗುರುಪೂರ್ಣಿಮೆಯ ದಿವಸ ಈ ವಿಗ್ರಹದ ಪ್ರತಿಷ್ಟಾಪನೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ಮುಂಬೈನ ಅನನ್ಯ ಸಾಯಿಭಕ್ತರಾದ ಶ್ರೀಯುತ. ವೈ.ಡಿ. ದಾವೆಯವರು ಅದನ್ನು ಸಂಸ್ಥಾನಕ್ಕೆ ದಾನವಾಗಿ ನೀಡಿದ್ದು ಈ ವಿಗ್ರಹವನ್ನು ಸಮಾಧಿ ಮಂದಿರದ ವಿಗ್ರಹವನ್ನು ಕೆತ್ತಿದ ಶ್ರೀಯುತ ಬಿ.ವಿ.ತಾಲೀಮ್ ರವರ ಮಗನಾದ ಶ್ರೀ.ಹರೀಶ್ ಬಾಲಾಜಿ ತಾಲೀಮ್ ರವರು ಕೆತ್ತಿದ್ದಾರೆ.  ಇದರ ಉದ್ಘಾಟನೆಯನ್ನು ಶ್ರೇಷ್ಠ ಸಂತರಾದ ಪುಣೆಯ ಶ್ರೀ.ಪರ್ಣೆಕರ್ ಮಹಾರಾಜ ಅವರು ಮಾಡಿದ್ದಾರೆ.


ಏಪ್ರಿಲ್ 2007 ರ ಹೊತ್ತಿಗೆ ಬೇವಿನ ಮರವು ಒಣಗಲು ಪ್ರಾರಂಭವಾಯಿತು. ಆಗ ಶಿರಡಿ ಸಾಯಿಬಾಬಾ ಸಂಸ್ಥಾನದವರು ತೋಟಗಾರಿಕೆ ಇಲಾಖೆಯ ಸಹಾಯವನ್ನು ಕೋರಿದರು. ಪವಿತ್ರ ಬೇವಿನ ಮರವನ್ನು ಉಳಿಸುವ ಸಲುವಾಗಿ ಹಳೆಯ ಗುರುಸ್ಥಾನವನ್ನು ಕೆಡವಲಾಯಿತು. ಗುರುಪೂರ್ಣಿಮೆಯು ಬಹಳ ಹತ್ತಿರದಲ್ಲಿದ್ದುದರಿಂದ ಈಗಿರುವ ಗುರುಸ್ಥಾನವನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು. ಆಗ ಬಾಬಾರವರ ವಿಗ್ರಹವನ್ನು ಗುರುಸ್ಥಾನದಿಂದ ಸಾಯಿಬಾಬಾ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. 


ಸಾಯಿಬಾಬಾರವರ ಚಿತ್ರಪಟ: 

ಬಾಬಾರವರ ಕಾಲದಲ್ಲೇ ಈ ಸುಂದರ ಚಿತ್ರಪಟವನ್ನು ಸಣ್ಣ ಮಂದಿರದ ಒಳಗಡೆ ಇರಿಸಲಾಗಿತ್ತು. ಬಾಪು ಸಾಹೇಬ್ ಜೋಗ ರವರು ಪ್ರತಿದಿನ 2 ಬಾರಿ ಆರತಿಯನ್ನು ನೆರವೇರಿಸುತ್ತಿದ್ದರು. ಬಾಬಾರವರ ಸಲಹೆ ಮೇರೆಗೆ ಆರತಿಯನ್ನು ನಿಲ್ಲಿಸಲಾಯಿತು. ಈ ಚಿತ್ರಪಟವು ಅನೇಕ ಭಕ್ತರಿಗೆ ಸಾಕ್ಷಾತ್ಕಾರ ನೀಡುತ್ತಿದೆ ಎಂದು ಹೇಳಲಾಗುತ್ತದೆ. 

30ನೇ ಸೆಪ್ಟೆಂಬರ್ 1952 ರ ದಿನ (ಸಾಯಿಬಾಬಾರವರ 34ನೇ ಮಹಾಸಮಾಧಿಯ 3ನೇ ದಿವಸ) ಈ ಚಿತ್ರಪಟವನ್ನು ತೆಗೆದು ಬೇರೆ ಚಿತ್ರಪಟ ವನ್ನು ಇರಿಸಲಾಯಿತು. ಏಕೆಂದರೆ ಈ ಚಿತ್ರಪಟ ಹಳೆಯದಾಗಿದ್ದಿತು. ಆದ ಕಾರಣ ಶಿರಡಿ ಸಾಯಿಬಾಬಾ ಸಂಸ್ಥಾನದವರು ಶ್ರೀ.ನಾರಾಯಣ ರಾವ್ ದೆವ್ಹಾರೆಯವರು ನೀಡಿದ ಹೊಸ ಚಿತ್ರಪಟವನ್ನು ಸರಿಯಾಗಿ 11 ಘಂಟೆಗೆ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ಸ್ಥಾಪಿಸಿದರು. ಇದರ ಸ್ಥಾಪನೆಯನ್ನು ಶ್ರೀ.ವಸಂತ ನಾರಾಯಣ ಗೌರಕ್ಷಾಕರ್ ರವರು ನೆರವೇರಿಸಿದರು. 

ಪ್ರತಿದಿನ ಈ ಚಿತ್ರಪಟಕ್ಕೆ ಅಲಂಕಾರವನ್ನು ಮತ್ತು ಬೆಳಿಗ್ಗೆ 11:30 ಕ್ಕೆ ಮತ್ತು ಸಂಜೆಯ ಧೂಪಾರತಿಯ ನಂತರ ನೈವೇದ್ಯವನ್ನು ತಪ್ಪದೆ ಅರ್ಪಿಸಲಾಗುತ್ತದೆ. 




ಶಿವಲಿಂಗ ಮತ್ತು ನಂದಿಯ ವಿಗ್ರಹಗಳು: 

ಬಾಬಾರವರ ಚಿತ್ರಪಟದ ಮುಂದೆ ಈ ಶಿವಲಿಂಗವನ್ನು ಮತ್ತು ನಂದಿಯನ್ನು ಸ್ಥಾಪಿಸಲಾಗಿದೆ. ಶಿವಲಿಂಗವು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿದ್ದು ನಂದಿಯು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ.ಈ ಶಿವಲಿಂಗವನ್ನು ಮತ್ತು ನಂದಿಯನ್ನು ಸಾಯಿಬಾಬಾರವರೇ  ಮೇಘ ಅವರಿಗೆ ಆಶೀರ್ವಾದಪೂರ್ವಕವಾಗಿ ಕೊಟ್ಟು ಅದನ್ನು ಅವರ ಮನೆಯಲ್ಲಿ ಪೂಜಿಸಲು ಹೇಳಿದ್ದರು. ಅಲ್ಲದೇ ಮೇಘರವರ ಕನಸಿನಲ್ಲಿ ಬಂದು ತ್ರಿಶೂಲವನ್ನು ಶಿವಲಿಂಗದ ಮುಂದೆ ಬರೆಯಲು ಕೂಡ ಆಜ್ಞಾಪಿಸಿದ್ದರು. ಈ ಘಟನೆಯಿಂದ ಮೇಘಾರವರು ಸಾಯಿಬಾಬಾರವರು ತಮ್ಮ ಇಷ್ಟ ದೈವವಾದ ಸಾಕ್ಷಾತ್ ಶಿವನೆಂದು ಮನಗಂಡರು. ಮೇಘ ಕಾಲವಾದ ನಂತರ ಆ ಶಿವಲಿಂಗವು ಬಾಬಾರವರ ಬಳಿ ವಾಪಸಾಯಿತು (ಸಾಯಿ ಸಚ್ಚರಿತ್ರೆ  28ನೇ ಅಧ್ಯಾಯ). ಈ ಶಿವಲಿಂಗವನ್ನು 1912ನೇ ಇಸವಿಯಲ್ಲಿ ಪ್ರತಿಷ್ಟಾಪಿಸಲಾಯಿತು.

ಪ್ರತಿದಿನ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳಸ್ನಾನವಾದ ನಂತರ ಶಿವಲಿಂಗಕ್ಕೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುತ್ತದೆ. ಮಹಾ ಶಿವರಾತ್ರಿಯ ದಿವಸ ರುದ್ರಾಭಿಷೇಕ ಮತ್ತು ಲಿಂಗೋದ್ಭವದ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.


ಬಾಬಾರವರ ಪವಿತ್ರ ಪಾದುಕೆಗಳು: 
 
ಸಾಯಿ ಸಚ್ಚರಿತೆಯ 5ನೇ ಅಧ್ಯಾಯದಲ್ಲಿ ಈ ಪವಿತ್ರ ಪಾದುಕೆಗಳ ವೃತ್ತಾಂತವನ್ನು ಕೊಡಲಾಗಿದೆ. ಈ ಅಮೃತ ಶಿಲೆಯ ಪಾದುಕೆಗಳನ್ನು ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. 

ಬೇವಿನ ಮರದ ಅಡಿಯಲ್ಲಿರುವ ಪಾದುಕೆಗಳ ವೃತ್ತಾಂತ:


ಮುಂಬೈನ ಇಬ್ಬರು ಸಾಯಿಭಕ್ತರು ಶಿರಡಿಯಲ್ಲಿನ ಸಾಯಿಬಾಬಾ ಭಕ್ತರಾದ ಶ್ರೀಯುತ. ಜಿ.ಕೆ.ದೀಕ್ಷಿತ್ ಮತ್ತು ಸಗುಣ ಮೇರು ನಾಯಕ್ ರವರೊಂದಿಗೆ ಸಮಾಲೋಚನೆ ಮಾಡಿ ಸಾಯಿಬಾಬಾರವರು ಶಿರಡಿಗೆ ಬಂದು ಬೇವಿನ ಮರದ ಕೆಳಗಡೆ ಕುಳಿತ ನೆನಪಿಗಾಗಿ ಒಂದು ಸ್ಮಾರಕವನ್ನು ಬೇವಿನ ಮರದಡಿ ಸ್ಥಾಪಿಸಬೇಕೆಂದು ತೀರ್ಮಾನಿಸಿ ಪಾದುಕೆಗಳನ್ನು ಅಮೃತ ಶಿಲೆಯಲ್ಲಿ ಮಾಡಿಸಬೇಕೆಂದು ತೀರ್ಮಾನ ಮಾಡಿದರು. ಅದಕ್ಕೆ ಖರ್ಚಾಗುವ ಹೆಚ್ಚಿಗೆ ಹಣವನ್ನು ಮುಂಬೈನ ಪ್ರಸಿದ್ದ ವೈದ್ಯರಾದ ಡಾ.ರಾಮರಾವ್ ಕೊಠಾರೆಯವರು ನೀಡುವುದಾಗಿ ಹೇಳಿ ಪಾದುಕೆಗಳ ರೂಪು ರೇಷೆಗಳೊಂದಿಗೆ ಶಿರಡಿಗೆ ಬಂದು ಆ ನಕಲನ್ನು ಉಪಾಸಿನಿಯವರಿಗೆ ತೋರಿಸಿದರು. ಉಪಾಸಿನಿಯವರು ಅದಕ್ಕೆ ಶಂಖ, ಕಮಲ ಪುಷ್ಪ, ಮಹಾವಿಷ್ಣುವಿನ ಚಕ್ರವನ್ನು ಸೇರಿಸಬೇಕೆಂದು ಮತ್ತು ಸಾಯಿ ಮಹಿಮೆಯನ್ನು ಕುರಿತ ಸ್ತೋತ್ರವನ್ನು ಕೆತ್ತಿಸಲು ಸಲಹೆ ನೀಡಿದರು. ಆ ಶ್ಲೋಕದ ಅರ್ಥ ಹೀಗಿದೆ:

"ದೇವಾ! ಕಲ್ಪವೃಕ್ಷಕ್ಕೂ ಮಿಗಿಲಾದ ಆ ಬೇವಿನ ಮರದ ಬುಡದಲ್ಲಿ ಕುಳಿತಿರುವುದರಿಂದಲೇ
ಅದರಿಂದ ಬರುವ ಕಹಿ ರಸಕ್ಕೆ ಬದಲಾಗಿ ಅಮೃತವೇ ಸುರಿಯುವಂತೆ ಮಾಡಿರುವ
 ಪರಮೇಶ್ವರನೇ ನೀನಾಗಿರುವೆ. ನಿನಗೆ ನಮಸ್ಕಾರಗಳು" 

ಅದೇ ರೀತಿ ಉಪಾಸಿನಿಯವರ ಸಲಹೆಯಂತೆ ಪಾದುಕೆಗಳನ್ನು ಮುಂಬೈ ನಲ್ಲಿ ಮಾಡಿಸಿ ಅವುಗಳನ್ನು ಶಿರಡಿಗೆ ಕಳುಹಿಸಿದರು ಮತ್ತು ಪಾದುಕೆಗಳನ್ನು ಶ್ರಾವಣ ಶುದ್ದ ಹುಣ್ಣಿಮೆಯ ದಿನ ಪ್ರತಿಷ್ಟಾಪಿಸಬೇಕೆಂದು ಹೇಳಿಕಳುಹಿಸಿದರು. ಆ ಪಾದುಕೆಗಳನ್ನು 15 ನೇ ಅಕ್ಟೋಬರ್ 1912ನೇ ವರ್ಷದ ಶ್ರಾವಣ ಶುದ್ದ ಹುಣ್ಣಿಮೆಯ ದಿನ ಶ್ರೀಯುತ.ಜಿ.ಕೆ.ದೀಕ್ಷಿತರು 11 ಘಂಟೆಗೆ ಸರಿಯಾಗಿ ಸಕಲ ರಾಜ ಮರ್ಯಾದೆಗಳಿಂದ ಖಂಡೋಬ ಮಂದಿರದಿಂದ ದ್ವಾರಕಾಮಾಯಿಗೆ ತಂದರು. ಸಾಯಿಬಾಬಾರವರು ಅವುಗಳನ್ನು ಸ್ಪರ್ಶಿಸಿ "ಇವು ಆ ಪರಮಾತ್ಮನ ಚರಣಾರವಿಂದಗಳು". ಇವುಗಳನ್ನು ಬೇವಿನ ಮರದಡಿಯಲ್ಲಿ ಪ್ರತಿಷ್ಟಾಪಿಸಿ ಎಂದು ತಿಳಿಸಿದರು. ಅದರಂತೆ ಪಾದುಕೆಗಳನ್ನು ಬೇವಿನ ಮರದಡಿಯಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಅದೇ ದಿನ ಗುರುಸ್ಥಾನದಲ್ಲಿ ಆರತಿ ಕಾರ್ಯಕ್ರಮ ಕೂಡ ಪ್ರಾರಂಭವಾಯಿತು.

ಇದಾದ ಕೆಲವು ತಿಂಗಳ ಬಳಿಕ ಆ ಪಾದುಕೆಗಳನ್ನು ಹುಚ್ಚನೊಬ್ಬ ಒಡೆದು ಹಾಕಿದನು. ಸಾಯಿಬಾಬಾರವರು ಅವನಿಗೆ ಏನು ಬಯ್ಯದೆ ಅವುಗಳನ್ನು ರಿಪೇರಿ ಮಾಡಿಸಿ ಬಡವರಿಗೆ ಅನ್ನದಾನ ಮಾಡಲು ಹೇಳಿದರು. ಸ್ವಲ್ಪ ಕಾಲದ ನಂತರ ಆ ಒಡೆದ ಪಾದುಕೆಗಳನ್ನು ತೆಗೆದು ಬೇರೆ ಪಾದುಕೆಗಳನ್ನು ಸ್ಥಾಪಿಸಲಾಯಿತು. ಆ ಒಡೆದ ಪಾದುಕೆಗಳು ಪೀಠದ ಕೆಳಗಡೆ ಇವೆ ಎಂದು ಹೇಳಲಾಗುತ್ತದೆ.

ಪ್ರತಿದಿನ ಸಂಸ್ಥಾನದ ಪುರೋಹಿತರು ಪವಿತ್ರ ಪಾದುಕೆಗಳಿಗೆ ಅಭಿಷೇಕ, ಪೂಜೆ ಮಾಡಿ ಅಲಂಕಾರ ಮಾಡುತ್ತಾರೆ.

ನಂದಾದೀಪ: 

ಬೇವಿನ ಮರದ ಎರಡು ಬದಿಯಲ್ಲಿ ಎರಡು ನಂದಾದೀಪವನ್ನು ಸಾಯಿಬಾಬಾರವರ ಕಾಲದಲ್ಲೇ ಇರಿಸಲಾಗಿತ್ತು. ಇದನ್ನು ಗಾಜಿನ ಬಾಗಿಲಿದ್ದ ಬೆಳ್ಳಿಯಲ್ಲಿ ಮಾಡಿದ ಗೂಡಿನಲ್ಲಿ ಇರಿಸಲಾಗಿತ್ತು. ಪಾದುಕೆ ಪ್ರತಿಷ್ಟಾಪನೆಯಾದಾಗಿನಿಂದ ಪ್ರತಿ ತಿಂಗಳೂ ಈ ದೀಪದ ಖರ್ಚಿಗೋಸ್ಕರ ಡಾ.ಕೋಥಾರೆಯವರು 2 ರುಪಾಯಿಗಳನ್ನು ಕಳುಹಿಸುತ್ತಿದ್ದರು. 

2007 ರಲ್ಲಿ ಗುರುಸ್ಥಾನದ ನವೀಕರಣವಾದಾಗಿನಿಂದ ಈ ಸ್ಥಳದಲ್ಲಿ ಒಂದೇ ನಂದಾದೀಪವನ್ನು ಇರಿಸಲಾಗಿದೆ. ಇದನ್ನು ಬಾಬಾರವರ ಚಿತ್ರಪಟದ ಮುಂದೆ ಬಲಭಾಗದಲ್ಲಿ ಇರಿಸಲಾಗಿದೆ. 


ಗುರುಸ್ಥಾನದಲ್ಲಿ ನಿತ್ಯ ನಡೆಯುವ ಕಾರ್ಯಕ್ರಮಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಬೆಳಿಗ್ಗೆ 4 ಘಂಟೆ : ಗುರುಸ್ಥಾನ ತೆರೆಯುತ್ತದೆ.
ಬೆಳಿಗ್ಗೆ 4:35 ಕ್ಕೆ : ಗುರುಸ್ಥಾನ ಶುಚಿಗೊಳಿಸಲಾಗುತ್ತದೆ.
ಬೆಳಿಗ್ಗೆ 4:45 ರಿಂದ 5 ಘಂಟೆ : ಮಂಗಳಸ್ನಾನ.
ಬೆಳಿಗ್ಗೆ 5 ಘಂಟೆ :  ಸಿಂಧೂರದಿಂದ ಅಲಂಕಾರ  ಮತ್ತು ದರ್ಶನ ಆರಂಭ.
ಬೆಳಿಗ್ಗೆ 11:15 ಕ್ಕೆ : ಗುರುಸ್ಥಾನವನ್ನು ಶುಚಿಗೊಳಿಸಲಾಗುತ್ತದೆ.
ಬೆಳಿಗ್ಗೆ 11:30 ಕ್ಕೆ : ಚಂದನ ಅಲಂಕಾರ.
ಬೆಳಿಗ್ಗೆ 11:40 ಕ್ಕೆ : ನೈವೇದ್ಯ ಅರ್ಪಣೆ.
ಸಂಜೆ 4 ಘಂಟೆ : ದೀಪವನ್ನು ಶುಚಿಗೊಳಿಸಿ ಎಣ್ಣೆ ಹಾಕುವ ಕಾರ್ಯಕ್ರಮ.
ಸಂಜೆ ಧೂಪಾರತಿಯ ನಂತರ : ನೈವೇದ್ಯ ಸಮರ್ಪಣೆ.
ರಾತ್ರಿ 10 ಘಂಟೆ : ಗುರುಸ್ಥಾನ ಮುಚ್ಚುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment