ಶಿರಡಿ ಯಾತ್ರಿಕರು ಪಾಲಿಸಬೇಕಾದ ಸೂಚನೆಗಳು - ಕೃಪೆ - ಸಾಯಿ ಅಮೃತಧಾರಾ.ಕಾಂ
ಪ್ರಥಮ ಬಾರಿಗೆ ಶಿರಡಿ ಸಾಯಿಬಾಬಾರವರ ದರ್ಶನ ಮಾಡಲು ಶಿರಡಿಗೆ ತೆರಳುವ ಸಾಯಿ ಭಕ್ತರಿಗಾಗಿ ಕೆಲವು ಸಲಹೆ, ಸೂಚನೆಗಳನ್ನು ಈ ಕೆಳಗೆ ನೀಡಲಾಗಿದೆ:
೧. ಶಿರಡಿಗೆ ಬಂದ ನಂತರ ಭಕ್ತರು ಸಾಯಿಬಾಬಾರವರ ದರ್ಶನಕ್ಕೂ ಮೊದಲು "ಖಂಡೋಬ ಮಂದಿರ" ವನ್ನು ದರ್ಶನ ಮಾಡಬೇಕು. ಖಂಡೋಬ ಮಂದಿರವು ಸಾಯಿನಾಥ್ ಹಾಸ್ಪಿಟಲ್ ಬಳಿ ಇರುತ್ತದೆ. ಇದಕ್ಕೆ ಕಾರಣ ಹೀಗಿದೆ. ಸಾಯಿಬಾಬಾರವರು ಮೊದಲ ಬಾರಿ ಶಿರಡಿಗೆ ಮದುವೆ ದಿಬ್ಬಣದ ಜೊತೆ ಬಂದಾಗ ಖಂಡೋಬ ಮಂದಿರದ ಮುಂಭಾಗದಲ್ಲಿರುವ ಆಲದ ಮರದ ಕೆಳಗೆ ಗಾಡಿಯಿಂದ ಇಳಿಯುತ್ತಿದ್ದಾಗ ಮಂದಿರದ ಅರ್ಚಕ ಮಹಾಲಸಪತಿ ಯವರು "ಆವೋ ಸಾಯಿ" ಎಂದು ಬಾಬಾರವರನ್ನು ಸಂಭೋದಿಸುತ್ತಾರೆ. ಅಂದಿನಿಂದ ಶಿರಡಿಯ ಜನರೆಲ್ಲರೂ ಅವರನ್ನು ಸಾಯಿಬಾಬ ಎಂದು ಕರೆಯಲು ಆರಂಭಿಸುತ್ತಾರೆ.
೨. ಶಿರಡಿಗೆ ಮೊದಲ ಬಾರಿ ದರ್ಶನಕ್ಕೆ ತೆರಳುವ ಭಕ್ತರು ಸಾಯಿಬಾಬಾರವರ "ಧೂಳಿ ದರ್ಶನ" ಮಾಡತಕ್ಕದ್ದು. ಧೂಳಿ ದರ್ಶನವೆಂದರೆ ಶಿರಡಿ ತಲುಪಿದ ಕೂಡಲೇ ಮುಖ ತೊಳೆಯದೇ, ಸ್ನಾನ ಮಾಡದೆ ಹಾಗೆಯೇ ಸಮಾಧಿ ಮಂದಿರಕ್ಕೆ ತೆರಳಿ ಸಾಯಿಬಾಬಾರವರನ್ನು ದರ್ಶನ ಮಾಡುವುದು. ನಂತರ ನಿಧಾನವಾಗಿ ಸ್ನಾನ, ಉಪಹಾರಗಳನ್ನು ಮುಗಿಸಿ ಬಾಬಾರವರ ದರ್ಶನ ಮಾಡುವುದು.
೩. ಸಾಯಿಬಾಬಾರವರಿಗೆ ಮಂಗಳ ಸ್ನಾನ, ಅಭಿಷೇಕ, ೪ ಆರತಿಗಳು (ಕಾಕಡ ಆರತಿ, ಮಧ್ಯಾನ್ಹ ಆರತಿ, ಧೂಪ್ ಆರತಿ ಹಾಗೂ ಶೇಜಾರತಿ) ಸಮಾಧಿ ಮಂದಿರದಲ್ಲೇ ಜರಗುತ್ತವೆ. ಮಂದಿರವು ಬೆಳಗಿನ ಜಾವ ೪.೦೦ ಘಂಟೆಗೆ ತೆರೆಯುತ್ತದೆ ಹಾಗೂ ರಾತ್ರಿ ೧೧:೧೫ ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ.
೪.ಮಂಗಳ ಸ್ನಾನದ ಸಮಯದಲ್ಲಿ, ಶೋಡಚೋಪಚಾರ ಪೂಜೆಯ ಸಮಯದಲ್ಲಿ ಹಾಗೂ ಆರತಿಯ ಸಮಯಗಳಲ್ಲಿ ಭಕ್ತರು ಹಾರ, ಹೂವುಗಳು, ತೆಂಗಿನಕಾಯಿ, ಹಾಗೂ ಶೇಷವಸ್ತ್ರಗಳನ್ನು ಅರ್ಪಿಸಲು ಅವಕಾಶವಿಲ್ಲ.
೫. ಸಾಯಿಬಾಬಾರವರ ಮಂಗಳ ಸ್ನಾನ, ಶೋಡಚೋಪಚಾರ ಪೂಜೆ, ಹಾಗೂ ಕಾಕಡ ಆರತಿಯ ಬಳಿಕವೇ "ಪ್ರಥಮ ದರ್ಶನ" ಮಾಡಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಸಾಯಿ ಭಕ್ತರು ಆ ಸಮಯದಲ್ಲಿ ಸಾಯಿಬಾಬಾರವರಿಗೆ ಹಾರ, ಹೂವುಗಳು, ತೆಂಗಿನಕಾಯಿ, ಹಾಗೂ ಶೇಷವಸ್ತ್ರಗಳನ್ನು ಅರ್ಪಣೆ ಮಾಡಬಹುದು.
೬. ಸಾಯಿಬಾಬಾರವರಿಗೆ ಶೇಷವಸ್ತ್ರಗಳನ್ನು ಅಥವಾ ಇನ್ನೇನಾದರು ವಸ್ತುಗಳನ್ನು ಅಥವಾ ಕಾಣಿಕೆಯನ್ನು ನೀಡಲು ಬಯಸಿದರೆ ಅದನ್ನು ಸಾಯಿಬಾಬಾ ಸಂಸ್ಥಾನದ "ಡೊನೇಶನ್ ಕೌಂಟರ್" ನಲ್ಲಿ ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು. ಒಂದು ವೇಳೆ ಸಾಯಿಬಾಬಾರವರಿಗೆ ನೀಡಿದ ವಸ್ತ್ರವನ್ನು ವಾಪಸ್ ಪಡೆಯಬೇಕೆಂದರೆ "ಡೊನೇಶನ್ ಕೌಂಟರ್" ನಲ್ಲಿ ಕೊಟ್ಟು ರಸೀದಿಯನ್ನು ಪಡೆಯುವ ಅವಶ್ಯಕತೆಯಿಲ್ಲ. ಸಾಯಿ ಭಕ್ತರು ನೀಡಿದ ವಸ್ತ್ರಗಳು ಹಾಗೂ ವಸ್ತುಗಳನ್ನು ಸಂಸ್ಥಾನದವರು ಪ್ರತಿ ಗುರುವಾರ ಹಾಗೂ ಭಾನುವಾರಗಳಂದು "ಸತ್ಯನಾರಾಯಣ ಪೂಜಾ ಹಾಲ್" ನ ಬಳಿ ಬೆಳಗ್ಗೆ ೧೦.೦೦ ಘಂಟೆಯಿಂದ ಹರಾಜು ಹಾಕುತ್ತಾರೆ. ಸಾಯಿಭಕ್ತರು ಅವುಗಳನ್ನು ಕೊಳ್ಳಬಹುದು.
೭. ಭಕ್ತರು ಸಾಯಿಬಾಬಾರವರಿಗೆ ಹಣವನ್ನು ಕಾಣಿಕೆಯಾಗಿ ನೀಡಲು ಬಯಸಿದಲ್ಲಿ ಅದನ್ನು ಸಾಯಿಬಾಬಾ ಸಂಸ್ಥಾನದ "ಡೊನೇಶನ್ ಕೌಂಟರ್" ನಲ್ಲಿ ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು ಅಥವಾ ನೇರವಾಗಿ ಸಂಸ್ಥಾನದ ಪ್ರಮುಖ ಸ್ಥಳಗಳಲ್ಲಿ ಇಟ್ಟಿರುವ ಹುಂಡಿಯಲ್ಲಿ ಹಾಕತಕ್ಕದ್ದು.
೮. ಸಾಯಿಬಾಬಾ ಸಂಸ್ಥಾನದವರು ಸಮಾಧಿ ಮಂದಿರದ ಆವರಣದ ೩ ಕಡೆ "ಡೊನೇಶನ್ ಕೌಂಟರ್" ನ್ನು ತೆರೆದಿರುತ್ತಾರೆ. ಅವುಗಳು ಯಾವುವೆಂದರೆ ೧. ಸಮಾಧಿ ಮಂದಿರದ ಮುಂಭಾಗದಲ್ಲಿ (SBI ATM ಪಕ್ಕದಲ್ಲಿ) ೨. ಬುಕ್ ಸ್ಟಾಲ್ ನ ಮುಂಭಾಗದಲ್ಲಿ ೩. ಸಮಾಧಿ ಮಂದಿರ ಪ್ರಾಂಗಣದ ೩ ನೇ ಗೇಟ್ ನ ಎದುರುಗಡೆ.
೯.ಸಮಾಧಿ ಮಂದಿರ, ಪಾರಾಯಣ ಹಾಲ್, ಮ್ಯೂಸಿಯಂ, ದ್ವಾರಕಾಮಾಯಿ, ಚಾವಡಿ ಯಲ್ಲಿ ಫೋಟೋ, ವೀಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.
೧೦. ಸಮಾಧಿ ಮಂದಿರದ ಒಳಗಡೆ ಪುರುಷರಿಗಾಗಿ ಮತ್ತು ಮಹಿಳೆಯರು ಹಾಗೂ ಮಕ್ಕಳಿಗಾಗಿ ಬೇರೆ ಬೇರೆ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ಸಾಯಿಭಕ್ತರು ಸರಿಯಾಗಿ ಪಾಲಿಸತಕ್ಕದ್ದು.
೧೧. ಧುನಿ ಪೂಜೆಯ (ಸಾಯಿಬಾಬಾರವರಿಗೆ ನೈವೇದ್ಯ ನೀಡುವ ಸಮಯ) ಸಮಯ ಬಿಟ್ಟು ಇನ್ನುಳಿದ ಎಲ್ಲಾ ಸಮಯದಲ್ಲಿ ಸಾಯಿಭಕ್ತರಿಗೆ ಸಮಾಧಿ ಮಂದಿರ, ಗುರುಸ್ಥಾನ, ದ್ವಾರಕಾಮಾಯಿ ಹಾಗೂ ಚಾವಡಿ ಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
೧೨. ಚಾವಡಿಯಲ್ಲಿ ಮಹಿಳೆಯರಿಗೆ "ಸಾಯಿಬಾಬಾರವರು ಮಲಗುತ್ತಿದ್ದ ಸ್ಥಳ" ದ ಕಡೆಗೆ ಹೋಗಲು ಅನುಮತಿಯಿಲ್ಲ. ಇದನ್ನು ಮಹಿಳಾ ಸಾಯಿಭಕ್ತರು ಗಮನಿಸತಕ್ಕದ್ದು.
೧೩. ವಿಜಯದಶಮಿ, ರಾಮನವಮಿ, ಗುರು ಪೂರ್ಣಿಮಾ ದಂತಹ ಉತ್ಸವದ ದಿನಗಳಲ್ಲಿ ಸಮಾಧಿ ಮಂದಿರವನ್ನು ರಾತ್ರಿಯಿಡಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆ ದಿನಗಳಲ್ಲಿ ಸಾಯಿಬಾಬಾ ಸಂಸ್ಥಾನದವರು ವಿಶೇಷ ಭಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅಲ್ಲದೇ, ಆ ದಿನಗಳಲ್ಲಿ ಶೇಜಾರತಿ ಕಾರ್ಯಕ್ರಮ ಇರುವುದಿಲ್ಲ ಹಾಗೂ ಮಾರನೆಯ ದಿವಸ ಬೆಳಗಿನ ಕಾಕಡಾ ಆರತಿ ಕೂಡ ಮಾಡುವುದಿಲ್ಲ. ಸಾಯಿಬಾಬಾರವರ ಮಂಗಳ ಸ್ನಾನದೊಂದಿಗೆ ಕಾರ್ಯಕ್ರಮಗಳು ಆರಂಭವಾಗುತ್ತದೆ.
೧೪. ಪ್ರತಿ ಗುರುವಾರಗಳಂದು "ಪಲ್ಲಕ್ಕಿ ಉತ್ಸವ" ಅಥವಾ "ಚಾವಡಿ ಉತ್ಸವ" ಬಹಳ ವೈಭವದಿಂದ ನಡೆಯುತ್ತದೆ. ರಾತ್ರಿ ೯: ೧೫ ಕ್ಕೆ ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಯ ಬಳಿಗೆ ತೆರಳಿ ಆನಂತರ ಅಲ್ಲಿಂದ ಹೊರಟು ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಆರತಿಯಾದ ನಂತರವೇ ಸಮಾಧಿ ಮಂದಿರದಲ್ಲಿ ಶೇಜಾರತಿ ಕಾರ್ಯಕ್ರಮ ನಡೆಯುತ್ತದೆ. ವಿಶೇಷ ಹಬ್ಬದ ದಿನಗಳಾದ ವಿಜಯದಶಮಿ, ರಾಮನವಮಿ, ಗುರು ಪೂರ್ಣಿಮಾ, ಶಿವರಾತ್ರಿ, ಏಕಾದಶಿ (ಕಾರ್ತೀಕ ಹಾಗೂ ಆಷಾಢ) ದಿನಗಳಂದು ಪಲ್ಲಕ್ಕಿ ಉತ್ಸವ ಶಿರಡಿ ಗ್ರಾಮವನ್ನು ಪ್ರದಕ್ಷಿಣೆ ಮಾಡಿ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಆನಂತರವಷ್ಟೇ, ಸಮಾಧಿ ಮಂದಿರದಲ್ಲಿ ಶೇಜಾರತಿ ಕಾರ್ಯಕ್ರಮ ನಡೆಯುತ್ತದೆ.
೧೫. ಸಾಯಿಭಕ್ತರು ತಮ್ಮ ಪಾದರಕ್ಷೆಗಳನ್ನು ಸಂಸ್ಥಾನದವರು ಸಮಾಧಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಿರುವ ಉಚಿತ ಪಾದರಕ್ಷಾ ವಿಭಾಗದಲ್ಲೇ ಬಿಡತಕ್ಕದ್ದು.
೧೬. ಸಾಯಿಭಕ್ತರು ತಮ್ಮ ಮೊಬೈಲ್ , ಕ್ಯಾಮರಾ ಹಾಗೂ ಕೈ ಚೀಲಗಳನ್ನು ಸಂಸ್ಥಾನದವರು ಸಮಾಧಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಿರುವ ಉಚಿತ "ಮೊಬೈಲ್ ಕೌಂಟರ್" ನಲ್ಲೇ ಇಡತಕ್ಕದ್ದು.
೧೭. ಎಲ್ಲ ಪುರೋಹಿತರು ಮತ್ತು ಕೆಲಸಗಾರರು ಸಾಯಿಬಾಬಾ ಸಂಸ್ಥಾನದ ನೌಕರರಾಗಿರುತ್ತಾರೆ. ಆದುದರಿಂದ, ಅವರಿಗೆ ಯಾವುದೇ ರೀತಿಯಲ್ಲಿ ಹಣವನ್ನಾಗಲಿ ಅಥವಾ ಕಾಣಿಕೆಯನ್ನಾಗಲಿ ನೀಡಬಾರದೆಂದು ವಿನಂತಿಸಲಾಗಿದೆ.
೧೮. ಸಮಾಧಿ ಮಂದಿರದ ಮುಂಭಾಗದಲ್ಲಿನ ಅಂಗಡಿಗಳಲ್ಲಿ ಹಾಗೂ ಕೊಂಡು ಮಾರುವ ಹುಡುಗರಿಂದ ತೆಂಗಿನಕಾಯಿ, ಹೂವುಗಳು, ಹಾರಗಳು, ಧೂಪ, ರೋಜ್ ವಾಟರ್ ಮುಂತಾದ ವಸ್ತುಗಳನ್ನು ಕೊಂಡುಕೊಳ್ಳುವಾಗ ವಿಚಾರಿಸಿ ಕೊಳ್ಳಲು ಸೂಚಿಸಲಾಗಿದೆ. ಇಲ್ಲವಾದರೆ, ಸಾಯಿಭಕ್ತರು ಮೋಸಹೋಗುವ ಸಾಧ್ಯತೆಗಳಿವೆ.
೧೯. ಹಾಗೆಯೇ, ಸಮಾಧಿ ಮಂದಿರ, ದ್ವಾರಕಾಮಾಯಿ, ಚಾವಡಿ, ಹನುಮಾನ್ ಮಂದಿರದ ಮುಂಭಾಗದಲ್ಲಿ ನಾಯಿಗಳಿಗೆ ಹಾಲನ್ನು ನೀಡುವಾಗ ಮತ್ತು ಬಿಕ್ಷುಕರಿಗೆ ಊಟವನ್ನು ನೀಡುವಾಗ ಎಚ್ಚರ ವಹಿಸಲು ಸೂಚಿಸಲಾಗಿದೆ.
೨೦. ಶಿರಡಿಯಲ್ಲಿ ಪ್ರಯಾಣಿಕರಿಗೆ ತಂಗಲು ಅನೇಕ ಧರ್ಮಶಾಲೆಗಳು, ಹೋಟೆಲ್ ಗಳು ಇವೆ. ಸಾಯಿಭಕ್ತರು ನೇರವಾಗಿ ಧರ್ಮಶಾಲೆಗಳು, ಹೋಟೆಲ್ ಗಳನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ. ಇಲ್ಲದಿದ್ದರೆ, ಕಪಟ ಏಜೆಂಟರಿಂದ ಮೋಸ ಹೋಗುವ ಸಂಧರ್ಭಗಳು ಬರಬಹುದು.
೨೧. ಶಿರಡಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಸಂಸ್ಥಾನದವರು ಕ್ಯಾಂಟೀನ್, "ಪ್ರಸಾದಾಲಯ" ಭೋಜನ ಶಾಲೆ, ರೈಲ್ವೆ ಬುಕಿಂಗ್ ಕೌಂಟರ್, ಬಸ್ ಬುಕಿಂಗ್ ಕೌಂಟರ್, ಬುಕ್ ಸ್ಟಾಲ್ (ಸಾಯಿಲೀಲ ಮಾಸಪತ್ರಿಕೆ, ಸಾಯಿ ಸಚ್ಚರಿತೆ ಹಾಗೂ ಇತರ ಸಾಯಿಬಾಬಾರವರಿಗೆ ಸಂಬಂಧಿಸಿದ ಪುಸ್ತಕಗಳಿಗಾಗಿ), ಸುಲಬ್ ಕಾಂಪ್ಲೆಕ್ಷ್ (ಕೆಲವು ಘಂಟೆಗಳ ಕಾಲ ಸಾಯಿಭಕ್ತರು ತಮ್ಮವಸ್ತುಗಳನ್ನು ಜೋಪಾನವಾಗಿ ಇಡಲು) ಗಳ ವ್ಯವಸ್ಥೆ ಮಾಡಿರುತ್ತಾರೆ. ಸಾಯಿಭಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
೨೨. "ಸಾಯಿಬಾಬಾ ರವರ ಪವಿತ್ರ ಉಧಿ ಪ್ರಸಾದ" ವನ್ನು ಸಮಾಧಿ ಮಂದಿರದ ಮುಂದುಗಡೆಯಿರುವ ಕೌಂಟರ್ ನಲ್ಲಿ ಮಧ್ಯಾನ್ಹದ ಹಾಗೂ ಸಂಜೆಯ ಧೂಪಾರತಿಯ ಬಳಿಕ ನೀಡುವ ವ್ಯವಸ್ಥೆಯನ್ನು ಸಾಯಿಬಾಬಾ ಸಂಸ್ಥಾನದವರು ಮಾಡಿರುತ್ತಾರೆ.
ಸಾಯಿಬಾಬ ಮಂದಿರದ ದೈನಂದಿನ ಕಾರ್ಯಕ್ರಮಗಳ ವಿವರ
ಬೆಳಗ್ಗೆ ೪:೦೦ ಘಂಟೆ - ಮಂದಿರ ತೆರೆಯುತ್ತದೆ
ಬೆಳಗ್ಗೆ ೪:೧೫ ಘಂಟೆ - ಭೂಪಾಳಿ
ಬೆಳಗ್ಗೆ ೪: ೩೦ ಘಂಟೆ - ಕಾಕಡಾ ಆರತಿ
ಬೆಳಗ್ಗೆ ೫: ೦೦ ಘಂಟೆ - ಭಜನೆ ಕಾರ್ಯಕ್ರಮ
ಬೆಳಗ್ಗೆ ೫:೦೫ ಘಂಟೆ - ಸಾಯಿಬಾಬಾರವರಿಗೆ ಮಂಗಳ ಸ್ನಾನ (ಸಮಾಧಿ ಮಂದಿರದಲ್ಲಿ)
ಬೆಳಗ್ಗೆ ೫: ೩೫ ಘಂಟೆ - "ಶಿರಡಿ ಮಾಜೆ ಪಂಡರಪುರ" ಛೋಟಾ ಆರತಿ
ಬೆಳಗ್ಗೆ ೫: ೪೦ ಘಂಟೆ - ದರ್ಶನ ಪ್ರಾರಂಭ
ಬೆಳಗ್ಗೆ ೧೧:೩೦ ಘಂಟೆ - ದ್ವಾರಕಾಮಾಯಿಯಲ್ಲಿ ಧುನಿ (ಅನ್ನ ಹಾಗೂ ತುಪ್ಪದಿಂದ)
ಮಧ್ಯಾನ್ಹ ೧೨:೦೦ ಘಂಟೆ - ಮಧ್ಯಾನ್ಹ ಆರತಿ
ಸಂಜೆ ೪:೦೦ ಘಂಟೆ - ಪೋತಿ ಪಾರಾಯಣ (ಸಚ್ಚರಿತೆ) (ಸಮಾಧಿ ಮಂದಿರದಲ್ಲಿ)
ಸೂರ್ಯಾಸ್ತ ಸಮಯ - ಧೂಪಾರತಿ
ರಾತಿ ೮:೩೦ ರಿಂದ ೧೦:೦೦ - ಸಾಯಿ ಭಜನ ಮಂಡಳಿಗಳಿಂದ ಭಜನೆ ಕಾರ್ಯಕ್ರಮ
ರಾತ್ರಿ ೯:೦೦ ಘಂಟೆ - ಚಾವಡಿ ಮತ್ತು ಗುರುಸ್ಥಾನ ಮುಚ್ಚುತ್ತದೆ.
ರಾತ್ರಿ ೯:೩೦ ಘಂಟೆ - ದ್ವಾರಕಾಮಾಯಿಯಲ್ಲಿ ನೀರನ್ನು ನೀಡಿ, ಸೊಳ್ಳೆಯ ಪರದೆಯನ್ನು ಕಟ್ಟಿ, ದೀವಟಿಗೆಯನ್ನು ಇಡುತ್ತಾರೆ.
ರಾತ್ರಿ ೯:೪೫ ಘಂಟೆ - ದ್ವಾರಕಾಮಾಯಿ (ಧುನಿಯಿರುವ ಮೇಲಿನ ಭಾಗ) ಮುಚ್ಚುತ್ತಾರೆ.
ರಾತ್ರಿ ೧೦:೩೦ ಘಂಟೆ - ಸಮಾಧಿ ಮಂದಿರದಲ್ಲಿ ಶೇಜಾರತಿ. ಆರತಿಯ ನಂತರ ಸಾಯಿಬಾಬಾರವರ ವಿಗ್ರಹಕ್ಕೆ ಶಾಲನ್ನು ಹೊದೆಸಿ, ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಹಾಕಿ, ನೀರನು ನೀಡಿ, ಸೊಳ್ಳೆಯ ಪರದೆಯನ್ನು ಕಟ್ಟುತ್ತಾರೆ.
ರಾತ್ರಿ ೧೧:೧೫ ಘಂಟೆ - ಸಮಾಧಿ ಮಂದಿರ ಮುಚ್ಚುತ್ತಾರೆ.
ಸಾಯಿಬಾಬಾರವರಿಗೆ ಅಭಿಷೇಕ ಪೂಜೆಯ ವಿವರಗಳು
ಮೊದಲನೇ ಬ್ಯಾಚ್ - ಬೆಳಗ್ಗೆ ೭೦೦ ರಿಂದ ೮:೦೦ ರವರೆಗೆ
ಎರಡನೇ ಬ್ಯಾಚ್ - ಬೆಳಗ್ಗೆ ೯:೦೦ ರಿಂದ ೧೦:೦೦ ರವರೆಗೆ
ಮೂರನೇ ಬ್ಯಾಚ್ - ಮಧ್ಯಾನ್ಹ ೧೨:೩೦ ರಿಂದ ೧:೩೦ ರವರೆಗೆ
ಸಾಯಿಭಕ್ತರು ೧೦೧/- ರುಪಾಯಿಗಳನ್ನು "ಡೊನೇಶನ್ ಕೌಂಟರ್" ನಲ್ಲಿ ಕೊಟ್ಟು ಅಭಿಷೇಕಕ್ಕೆ ಒಂದು ದಿವಸ ಮುಂಚಿತವಾಗಿ ಬರೆಸತಕ್ಕದ್ದು.
ಸಾಯಿಬಾಬಾರವರಿಗೆ ಸಾಯಿ ಸತ್ಯನಾರಾಯಣ ವ್ರತದ ವಿವರಗಳು
ಮೊದಲನೇ ಬ್ಯಾಚ್ - ಬೆಳಗ್ಗೆ ೮:೦೦ ಘಂಟೆ
ಎರಡನೇ ಬ್ಯಾಚ್ - ಬೆಳಗ್ಗೆ ೧೦:೩೦ ಘಂಟೆ
ಸಾಯಿಭಕ್ತರು 50/- ರುಪಾಯಿಗಳನ್ನು "ಡೊನೇಶನ್ ಕೌಂಟರ್" ನಲ್ಲಿ ಕೊಟ್ಟು ಸಾಯಿ ಸತ್ಯನಾರಾಯಣ ವ್ರತಕ್ಕೆ ಒಂದು ದಿವಸ ಮುಂಚಿತವಾಗಿ ಬರೆಸತಕ್ಕದ್ದು.
No comments:
Post a Comment