Wednesday, June 30, 2010

ಶಿರಡಿ ದೇವಾಲಯದ ಒಳಗಡೆ ನೋಡಬೇಕಾದ ಸ್ಥಳಗಳು-ಶಿರಡಿ ಸಾಯಿಬಾಬಾ ಸಮಾಧಿ ಮಂದಿರ ಅಥವಾ ದಗ್ಡಿವಾಡ ಆಲಿಯಾಸ್ ಬೂಟಿವಾಡಾ - ಕೃಪೆ - ಸಾಯಿಅಮೃತಧಾರಾ.ಕಾಂ 


ಗೋಪಾಲ್ ರಾವ್ ಮುಕುಂದ್ ರಾವ್ ಬೂಟಿಯವರು ನಾಗಪುರ ಬಳಿಯ ಬರ್ಡಿ ಎಂಬಲ್ಲಿ 1876 ನೇ ಇಸವಿಯಲ್ಲಿ ಜನಿಸಿದರು. ಇವರು ವಿದ್ಯಾವಂತರೂ, ಸುಸಂಸ್ಕೃತರು ಮತ್ತು ಆಗರ್ಭ ಶ್ರೀಮಂತರೂ ಆಗಿದ್ದರು. ಇವರು ಸ್ವಲ್ಪ ಸಮಯ ವಿದ್ಯಾಭ್ಯಾಸವನ್ನು ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಮಾಡಿದರು. ಇವರಿಗೆ ಕವಿತೆ, ಲಲಿತ ಕಲೆಗಳು ಮತ್ತು ಸಂತರೆಂದರೆ ಬಹಳ ಇಷ್ಟ. ಇವರು 1907 ನೇ ಇಸವಿಯಲ್ಲಿ  ಮೊದಲ ಬಾರಿಗೆ ಸಖಾರಾಮ್ ಧುಮಾಳರೊಂದಿಗೆ ಶಿರಡಿಗೆ ಬಂದರು. ಇವರಿಬ್ಬರೂ ಶೇಗಾವ್ ನ ಗಜಾನನ ಮಹಾರಾಜರ ಭಕ್ತರಾಗಿದ್ದರು. ಬೂಟಿಯವರು ಸಾಯಿಬಾಬಾರವರನ್ನು ಭೇಟಿ ಮಾಡಿದ ಮರುಕ್ಷಣವೇ ತಮ್ಮ ಜೀವನ ಶೈಲಿಯನ್ನು ಸಂಪೂರ್ಣ ಬದಲಾಯಿಸಿದರು. ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ಇವರಿಗೆ ಬಾಬಾರವರಲ್ಲಿ ಅಪರಿಮಿತ ಭಕ್ತಿ ಮತ್ತು ಪ್ರೀತಿ ಇದ್ದಿತು. ಇವರು ಆಗಾಗ್ಗೆ ಶಿರಡಿಗೆ ತಮ್ಮ ಕುಟುಂಬದ ಸಮೇತ ಬಂದು ಹೋಗಿ ಮಾಡುತ್ತಿದ್ದರು. ಕಡೆಗೆ ಶಿರಡಿಯಲ್ಲಿ ತಮ್ಮದೇ ಆದ ಒಂದು ಪುಟ್ಟದಾದ ವಾಡಾ ಕಟ್ಟಿಸುವ ಯೋಚನೆಯನ್ನು ಮಾಡಿದರು. 

ದ್ವಾರಕಾಮಾಯಿಯ ಪಕ್ಕದಲ್ಲಿ ಪಶ್ಚಿಮ ದಿಕ್ಕಿಗೆ ಗುರುಸ್ಥಾನ ಮತ್ತು ದ್ವಾರಕಾಮಾಯಿಯ ನಡುವೆ ಸ್ವಲ್ಪ ಖಾಲಿ ಜಾಗವಿತ್ತು. ಈ ಜಾಗದಲ್ಲಿ ಸಾಯಿಬಾಬಾರವರು ಬಹಳ ಪರಿಶ್ರಮದಿಂದ ಸುಂದರವಾದ ಹೂವಿನ ತೋಟವನ್ನು ನಿರ್ಮಿಸಿದ್ದರು. ಬಾಬಾರವರು ರಹತಾಕ್ಕೆ ಹೋದಾಗ ಅಲ್ಲಿಂದ ZÉAqÀÄ ªÀÄ°èUÉ ºÀƪÀÅ, ಜಾಯಿ, ಜುಯಿ ಗಿಡಗಳ ಸಸಿಗಳನ್ನು ತಂದು ಆ ಸ್ಥಳವನ್ನು ಚೆನ್ನಾಗಿ ಗುಡಿಸಿ ನೆಲವನ್ನು ಸಮತಟ್ಟು ಮಾಡಿ ಆ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪ್ರತಿದಿನವೂ ನೀರೆರೆದು ಬಹಳ ಚೆನ್ನಾಗಿ ಬೆಳೆಸಿದ್ದರು. ಇವರ ಭಕ್ತನಾದ ವಾಮನ ತಾತ್ಯಾ ಪ್ರತಿನಿತ್ಯ ಎರಡು ಮಡಿಕೆಗಳನ್ನು ತಂದು ಕೊಡುತ್ತಿದ್ದನು. ಬಾಬಾರವರು ಅದರ ಸಹಾಯದಿಂದ ಚೆನ್ನಾಗಿ ನೀರೆರೆದು ಸುಂದರವಾದ ತೋಟವನ್ನು ಸುಮಾರು 3 ವರ್ಷಗಳ ಪರಿಶ್ರಮದಿಂದ ನಿರ್ಮಿಸಿದ್ದರು (ಸಾಯಿ ಸಚ್ಚರಿತೆ 5 ನೇ ಅಧ್ಯಾಯ ನೋಡಿ). ಈ ಸ್ಥಳವನ್ನು ಬೂಟಿಯವರು ಕೊಂಡುಕೊಂಡು ಆ ಸ್ಥಳದಲ್ಲಿ ತಾವು ಮತ್ತು ತಮ್ಮ ಮನೆಯವರು ವಾಸಿಸಲು ಒಂದು ವಾಡ ನಿರ್ಮಿಸಲು ಯೋಚಿಸಿದರು. ಒಂದು ದಿನ ರಾತ್ರಿ ಬೂಟಿ ಮತ್ತು ಶ್ಯಾಮರವರು ದೀಕ್ಷಿತ್ ವಾಡಾದ ಮೊದಲನೇ ಮಹಡಿಯಲ್ಲಿ ಮಲಗಿದ್ದಾಗ ಇವರಿಗೆ ಮತ್ತು ಶ್ಯಾಮ ಅವರಿಗೆ ಸಾಯಿಬಾಬಾರವರು ಕನಸಿನಲ್ಲಿ ಬಂದು ಒಂದು ವಾಡ ನಿರ್ಮಿಸಲು ಆಜ್ಞಾಪಿಸಿದರು. ಆ ಕೂಡಲೇ ಎಚ್ಚರಗೊಂಡ ಬೂಟಿಯವರು ಅಳುತ್ತಿದ್ದ ಶ್ಯಾಮ ಅವರನ್ನು ತಮಗೆ ಬಿದ್ದ ಕನಸಿನ ವಿಷಯವನ್ನು ಹೇಳಿ ಶ್ಯಾಮ ಅವರು ಅಳುತ್ತಿರುವ ಕಾರಣವೇನೆಂದು ಕೇಳಿದರು. ಆಗ ಶ್ಯಾಮ ಅವರು ಬಾಬಾರವರು ತಮಗೆ "ದೇವಸ್ಥಾನದ ಸಹಿತ ಒಂದು ವಾಡವನ್ನು ನಿರ್ಮಿಸು. ಅದರಲ್ಲಿ ನಾನೇ ಬಂದು ವಾಸಿಸುವೆ" ಎಂದು ಹೇಳಿದರು ಎಂದು ಬೂಟಿಯವರಿಗೆ ತಿಳಿಸಿದರು. ಇಬ್ಬರ ಕನಸು ಒಂದೇ ಆಗಿದ್ದು ಅವರಿಬ್ಬರಿಗೂ ಬಹಳ ಆಶ್ಚರ್ಯವಾಯಿತು. ಆ ಕೂಡಲೇ ಅವರಿಬ್ಬರೂ ಕಾಕಾ ಸಾಹೇಬ್ ದೀಕ್ಷಿತ್ ಬಳಿಗೆ ಹೋಗಿ ವಿಷಯವನ್ನು ತಿಳಿಸಿ ಆ ಕೂಡಲೇ 3 ಜನ ಕಲೆತು ವಾಡ ನಿರ್ಮಾಣದ ರೂಪು ರೇಷೆಯನ್ನು ಹೊಡಿದ ಒಂದು ನಕಾಶೆಯನ್ನು ತಯಾರು ಮಾಡಿದರು. ಮಾರನೇ ದಿನ ಬೆಳಗ್ಗೆ ಬಾಬಾರವರಿಗೆ ಅದನ್ನು ತೋರಿಸಿದರು. ಬಾಬಾರವರು ಅದನ್ನು ನೋಡಿ ಕೂಡಲೇ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆ ಕಾರಣದಿಂದ ಈ ಪವಿತ್ರ ವಾಡಾ ನಿರ್ಮಾಣ ಆರಂಭವಾಯಿತು. ಶ್ಯಾಮ ಅವರೇ ಸ್ವತಃ ಮುಂದೆ ನಿಂತು ಕಟ್ಟಡದ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ವಾಡ ನಿರ್ಮಾಣ ಮಾಡಿದರು. ಬಾಬಾರವರು ಪ್ರತಿದಿನ ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕೆ ಹೋಗುವಾಗ ಕೆಲವು ತಿದ್ದುಪಡಿಗಳನ್ನು ಹೇಳುತ್ತಿದ್ದರು. ಅದರಂತೆ ನಿರ್ಮಾಣ ಕಾರ್ಯ ಬರದಿಂದ ನಡೆಯುತ್ತಿತ್ತು. ಬೂಟಿಯವರೂ ಕೂಡ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ದೇವಾಲಯ ನಿರ್ಮಾಣ ಹಂತದಲ್ಲಿದ್ದಾಗ ಬೂಟಿಯವರಿಗೆ ತಮ್ಮ ಇಷ್ಟ ದೇವರಾದ ಮುರಳಿಧರನ ಪ್ರತಿಮೆಯನ್ನು ಅಲ್ಲಿರಿಸಬೇಕೆಂಬ ಬಯಕೆಯಾಯಿತು. ಬೂಟಿಯವರು ಈ ವಿಷಯವನ್ನು ಶ್ಯಾಮ ಅವರಿಗೆ ತಿಳಿಸಿದರು. ಶ್ಯಾಮರವರು ಬಾಬಾರವರನ್ನು ಈ ವಿಷಯದ ಬಗ್ಗೆ ಕೇಳಲು ಬಾಬಾರವರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಕೂಡಲೇ ಶ್ಯಾಮರವರು ಆ ಸಮಯ ಚೆನ್ನಾಗಿದೆಯೇ ಎಂದು ಬಾಬಾರವರನ್ನು ಕೇಳಿ ಒಪ್ಪಿಗೆ ಪಡೆದು ತೆಂಗಿನಕಾಯಿ ಒಡೆದು ದೇವಾಲಯದ ಕೆಲಸ ಪ್ರಾರಂಭಿಸಿಯೇ ಬಿಟ್ಟರು. ಹೀಗೆ ಸಮಾಧಿ ಮಂದಿರ ನಿರ್ಮಾಣವಾಯಿತು. (ಸಾಯಿ ಸಚ್ಚರಿತೆ 39ನೇ ಅಧ್ಯಾಯ  ನೋಡುವುದು) .ಸಾಯಿಬಾಬಾರವರು ಈ ವಾಡವನ್ನು ದಗ್ಡಿವಾಡ ಎಂದು ಕರೆಯುತ್ತಿದ್ದರು. ಸಾಯಿಯವರು ತಮ್ಮ ಅಂತ್ಯಕಾಲ ಸಮೀಪಿಸುತ್ತಿರುವಾಗ ತಮ್ಮನ್ನು ಬೂಟಿವಾಡಾಕ್ಕೆ ಕರೆದೊಯ್ಯುವಂತೆ ಆಜ್ಞಾಪಿಸಿದರು. ಹೀಗೆ ಬೂಟಿಯವರು ನಿರ್ಮಿಸಿದ ಈ ವಾಡ ಮೊದಲಿಗೆ ಬೂಟಿವಾಡಾ ಅಥವಾ ದಗ್ಡಿವಾಡ ಎಂತಲೂ ಮತ್ತು ಸಾಯಿಯವರ ಮಹಾಸಮಾಧಿಯ ನಂತರ ಸಮಾಧಿ ಮಂದಿರ ಎಂದೂ ನಾಮಕರಣಗೊಂಡಿತು. ಈ ಸಮಾಧಿ ಮಂದಿರಕ್ಕೆ ಈಗ ಪ್ರಪಂಚದ ಎಲ್ಲಾ ಕಡೆಗಳಿಂದಲೂ ಎಲ್ಲಾ ವರ್ಗದ, ಜಾತಿಯ ಜನರು ಬಡವ ಬಲ್ಲಿದರೆಂಬ ಬೇಧವಿಲ್ಲದೆ ತಂಡೋಪತಂಡವಾಗಿ ಬಂದು ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಮತ್ತು ಮುಖ್ಯವಾಗಿ ಸಮಾಧಿಯ ದರ್ಶನವನ್ನು ಮಾಡಿ ಪುನೀತರಾಗುತ್ತಿರುವರು.

ಬೂಟಿವಾಡಾ 1947 ರಲ್ಲಿ ಕಂಡಂತೆ 

 ಸಮಾಧಿ ಮಂದಿರದ ಮುಂಭಾಗದಲ್ಲಿರುವ ಸುಂದರ ಹೆಬ್ಬಾಗಿಲು ಮತ್ತು ಅದರ ಹಿಂದಿರುವ ನಾಮಫಲಕಗಳು 

 ಸಮಾಧಿ ಮಂದಿರ 1952 ರಲ್ಲಿ ಕಂಡಂತೆ 


ಆರತಿಗೆ ನಿಂತಿರುವ ಸಾಯಿ ಭಕ್ತರು (ಅತ್ಯಂತ ಪುರಾತನ ಚಿತ್ರ)


ಸಮಾಧಿ ಮಂದಿರದಲ್ಲಿರುವ ಅಮೃತ ಶಿಲೆಯ ನಂದಿಯ ವಿಗ್ರಹ 

ಪಲ್ಲಕ್ಕಿ ಉತ್ಸವಕ್ಕೆ ಮುಂಚೆ ಸಮಾಧಿಯ ಮೇಲೆ ಇರಿಸಿರುವ ಪವಿತ್ರ ಪಾದುಕೆ ಮತ್ತು ಸಟ್ಕಾ 

ಬೂಟಿಯವರು ಲಕ್ಷಾಂತರ ರುಪಾಯಿಗಳನ್ನು ಸಮಾಧಿ ಮಂದಿರದ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರೆ. 1917ರಲ್ಲಿ ಈ ವಾಡದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿತು. ಕೊನೆಗೆ ಈ ಭವನವನ್ನು ಬೂಟಿಯವರು ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದರು. ಶಿರಡಿಯಲ್ಲಿರುವ ಬೂಟಿವಾಡಾ ನಾಗಪುರದಲ್ಲಿರುವ ಬೂಟಿಯವರ ವಾಡಾದ ತದ್ರೂಪು ಆಗಿರುತ್ತದೆ. 

ಶಿರಡಿ ಸಾಯಿಬಾಬಾ ಸಂಸ್ಥಾನದವರು ಸಮಾಧಿ ಮಂದಿರದ ಮಹಾದ್ವಾರದ ಎಡಭಾಗದ ಬಾಗಿಲ ಹಿಂದೆ ಬೂಟಿವಾಡಾದ ನಿರ್ಮಾಣದ ಬಗ್ಗೆ ಮತ್ತು ಬೂಟಿಯವರ ಬಗ್ಗೆ ಉಲ್ಲೇಖ ಕಂಡು ಬರುತ್ತದೆ. ಅಲ್ಲದೇ, ಸಮಾಧಿ ಮಂದಿರದ ಮಹಾದ್ವಾರದ ಬಲಭಾಗದ ಬಾಗಿಲ ಹಿಂದೆ ಸಭಾಮಂಟಪಕ್ಕೆ ಭೂಮಿಯನ್ನು ದಾನವನ್ನಾಗಿ ನೀಡಿದ ಶ್ರೀ.ದಾಮೋದರ್ ಸಾವಲ್ ರಾಮ್ ರಾಸನೆ, ಅಹಮದ್ ನಗರ, ದಿವಂಗತ ಶ್ರೀ.ಅಣ್ಣಾ ಸಾಹಿಬ್ ಚಿಂಚಿಣಿಕರ್ ಟ್ರಸ್ಟ್, ಚಿಂಚಿಣಿ ಮತ್ತು ದಿವಂಗತ ಶ್ರೀ.ರಾವ್ ಸಾಹಿಬ್ ಯಶವಂತ್ ರಾವ್ ಗಲ್ವಾಂಕರ್, ಬಾಂದ್ರ, ಮುಂಬೈ ಇವರುಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೇ, ಸಭಾಮಂಟಪದ ನಿರ್ಮಾಣ ಕಾರ್ಯ 1949 ಇಸವಿಯ ವಿಜಯದಶಮಿಯಂದು ಪ್ರಾರಂಭವಾಗಿ 1951 ರ ರಾಮನವಮಿಯಂದು ಸಂಪೂರ್ಣಗೊಂಡಿತು. ನಿರ್ಮಾಣಕ್ಕೆ 65,000 ರುಪಾಯಿಗಳು ಖರ್ಚಾಗಿರುವ ವಿಷಯವನ್ನು ಉಲ್ಲೇಖಿಸಲಾಗಿದೆ. ಅಲ್ಲದೇ, ಸಭಾಮಂಟಪ ಯೋಜನೆ ಮತ್ತು ನಿರ್ಮಾಣ ಸಮಿತಿಯು ಇದರ ನಿರ್ಮಾಣಕ್ಕೆ ಪುಣೆಯ ಖ್ಯಾತ ನಿರ್ಮಾಣ ಸಂಸ್ಥೆಯಾದ ಡಿ.ಪಿ.ನಗರ್ಕರ್ ಮತ್ತು ಕಂಪನಿಯನ್ನು ಆಯ್ಕೆ ಮಾಡಿರುವ ವಿಷಯವನ್ನು ಕೂಡ ಉಲ್ಲೇಖಿಸಲಾಗಿದೆ.

ಮತ್ತೊಂದು ಫಲಕದ ಮೇಲೆ ಸಾಯಿಬಾಬಾರವರ 38ನೇ ಪುಣ್ಯತಿಥಿಯ ಅಂಗವಾಗಿ 1952 ರಲ್ಲಿ ಸಂತ ಶ್ರೇಷ್ಠ ಶ್ರೀ.ಪರ್ಣೆಕರ್ ಮಹಾರಾಜ್ ರವರಿಂದ ಸುವರ್ಣ ಕಲಶ ಸ್ಥಾಪನೆಯಾಗಿರುವ ವಿಷಯ ಮತ್ತು 36ನೇ ಪುಣ್ಯ ತಿಥಿಯ ಅಂಗವಾಗಿ 1954 ರಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪ್ರತಿಷ್ಟಾಪನೆಯಾಗಿರುವ ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಅನೇಕರು ಸಾಯಿಬಾಬಾರವರೊಡನೆ ವಾದ ಮಾಡುತ್ತಿದ್ದರು. ಆದರೆ ಬೂಟಿಯವರು ಮಾತ್ರ ಮೌನವಾಗಿರುತ್ತಿದ್ದರು. ಬಾಬಾರವರಿಗೆ  ಏನಾದರೂ  ಹೇಳಬೇಕಾದರೆ ಶ್ಯಾಮರವರ ಮುಖೇನ ಹೇಳುತ್ತಿದ್ದರು. ಅಲ್ಲದೇ, ಸಾಯಿಬಾಬಾರವರ ಮೇಲಿನ ಗೌರವ ಎಷ್ಟು ಇತ್ತೆಂದರೆ ಅವರು ಬಾಬಾರವರನ್ನು ನೇರವಾಗಿ ಕತ್ತೆತ್ತಿ ಮಾತನಾಡಿಸುತ್ತಿರಲಿಲ್ಲ. 

ಒಮ್ಮೆ ಒಬ್ಬ ಜ್ಯೋತಿಷಿ ಶಿರಡಿಗೆ ಬಂದು ಬಾಬಾರವರಿಗೆ ಒಂದು ಜ್ಯೋತಿಷ್ಯ ಗ್ರಂಥವನ್ನು ಅವರ ಕೈಗೆ ನೀಡಿ ಅವರಿಂದ ಆಶೀರ್ವಾದಪೂರ್ವಕವಾಗಿ ಅವರಿಂದ ಪಡೆಯಲು ನೀಡಿದರು. ಆದರೆ ಬಾಬಾರವರು ಅವರಿಗೆ ಪುಸ್ತಕವನ್ನು ನೀಡದೆ ಬೂಟಿಯವರಿಗೆ ಪ್ರಸಾದವಾಗಿ ನೀಡಿದರು. ಬೂಟಿಯವರು ಅದನ್ನು ಚೆನ್ನಾಗಿ ಅಭ್ಯಾಸ ಮಾಡಿ ಪಾಂಡಿತ್ಯವನ್ನು ಗಳಿಸಿ ಒಳ್ಳೆಯ ಜ್ಯೋತಿಷಿ ಎಂದು ಹೆಸರನ್ನು ಪಡೆದರು. 

ಬೂಟಿವಾಡಾವು ಬಾಬಾರವರ ಸಮಾಧಿ ಮಂದಿರವಾಗಿರುವುದರಿಂದ ಈ ಕಟ್ಟಡದಲ್ಲಿ ಅನೇಕ ಬದಲಾವಣೆಗಳನ್ನು ಸಾಯಿಬಾಬಾ ಸಂಸ್ಥಾನದವರು ಆಗಿಂದಾಗ್ಗೆ ಮಾಡುತ್ತಾ ಬಂದಿದ್ದಾರೆ. ಮೊದಲು ಸುವರ್ಣ ಕಲಶ ಸ್ಥಾಪನೆಯಾಯಿತು. ನಂತರ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪ್ರತಿಷ್ಟಾಪನೆಯಾಯಿತು. 

ಸುವರ್ಣ ಕಲಶದ ಸ್ಥಾಪನೆ

ಮೊದಲು ಸಮಾಧಿ ಮಂದಿರದ ಮೇಲ್ಭಾಗದಲ್ಲಿ ಮೇಲ್ಚಾವಣಿಯನ್ನು ಹೊದಿಸಲಾಗಿತ್ತು. ನಂತರ ರಾಜಗೋಪುರ ಮತ್ತು ಸುವರ್ಣ ಕಲಶವನ್ನು ಪ್ರತಿಷ್ಟಾಪಿಸಲಾಯಿತು. ಸಾಯಿಬಾಬಾರವರ ಮಹಾಸಮಾಧಿಯಾಗಿ ಸರಿಯಾಗಿ 34 ವರ್ಷಗಳ ನಂತರ (15-10-1918 ಮಹಾಸಮಾಧಿ ದಿವಸ) ಅಂದರೆ 29ನೇ ಸೆಪ್ಟೆಂಬರ್ 1952 ರಂದು ವಿಜಯದಶಮಿಯ ದಿವಸ ಸುವರ್ಣ ಕಲಶದ ಪ್ರತಿಷ್ಟಾಪನೆಯನ್ನು ಸಂತ ಶ್ರೇಷ್ಠ ಶ್ರೀ.ಪರ್ಣೆಕರ್ ಮಹಾರಾಜ್ ರವರು ವಿಧಿವತ್ತಾಗಿ ನೆರವೇರಿಸಿದರು. 

1952 ರಲ್ಲಿ ಕಲಶ ಸ್ಥಾಪನೆ ನಡೆಯುತ್ತಿರುವ ದೃಶ್ಯ 

ಸುವರ್ಣ ಕಲಶ (ಇತೀಚಿನ ಚಿತ್ರ)

ಹಬ್ಬದ ಅಂಗವಾಗಿ ದೀಪಗಳಿಂದ ಅಲಂಕೃತಗೊಂಡ ಸುವರ್ಣ ಕಲಶ

ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ

ಅಮೃತ ಶಿಲೆಯ ವಿಗ್ರಹ ಮತ್ತು ಬಿ.ವಿ.ತಾಲೀಮ್ (ಒಳಚಿತ್ರ)

ವಿಗ್ರಹವನ್ನು ಕೆತ್ತುವುದರಲ್ಲಿ ಮಗ್ನರಾಗಿರುವ ಬಿ.ವಿ.ತಾಲೀಮ್ 

1952 ರಲ್ಲಿ ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಸಮಾಧಿಯ ಮೇಲೆ ಚಿತ್ರಪಟವನ್ನು ಇರಿಸಲಾಗಿತ್ತು. ಶಿರಡಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದ ಕಾರಣ ಶಿರಡಿ ಸಾಯಿಬಾಬಾ ಸಂಸ್ಥಾನದವರು ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲು ಯೋಚಿಸಿದರು. ಈ ಕೆಲಸಕ್ಕಾಗಿ ಮಹಾರಾಷ್ಟ್ರದ ಐದು ಪ್ರಸಿದ್ದ ಶಿಲ್ಪಿಗಳನ್ನು ಆರಿಸಿದರು. ಅದರಲ್ಲಿ ಬಿ.ವಿ.ತಾಲೀಮ್ ರವರು ಕೂಡ ಒಬ್ಬರಾಗಿದ್ದರು. ಪ್ರತಿಯೊಬ್ಬ ಶಿಲ್ಪಿಗೂ ಒಂದು ಕಪ್ಪು ಬಿಳುಪು ಸಾಯಿಬಾಬಾರವರ ಭಾವಚಿತ್ರವನ್ನು ನೀಡಲಾಯಿತು. ಅಲ್ಲದೇ, ವಿಗ್ರಹದ ಮಾದರಿಯನ್ನು ಕೆತ್ತಲು ಹತ್ತು ದಿನಗಳ ಗಡುವು ನೀಡಲಾಯಿತು. 

ಆಗ ಶಿರಡಿಯ ಮಾರುಕಟ್ಟೆಯಲ್ಲಿದ್ದ ಸಾಯಿಬಾಬಾರವರ ಭಾವಚಿತ್ರಗಳಿಂದ ಅವರ ವಿಗ್ರಹ ಕೆತ್ತುವುದು ಕಷ್ಟವಾಗಿತ್ತು. ಏಕೆಂದರೆ ಮುಖವನ್ನು ಭಾವಚಿತ್ರಗಳನ್ನು ನೋಡಿ ಕೆತ್ತುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.  ಒಂದೊಂದು ಭಾವಚಿತ್ರಗಳಲ್ಲಿ ಸಾಯಿಬಾಬಾರವರು ಒಂದೊಂದು ರೀತಿ ಕಂಡು ಬರುತ್ತಿದ್ದರು. ಇದರಿಂದ ಬಿ.ವಿ.ತಾಲೀಮ್ ರವರಿಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬಿ.ವಿ.ತಾಲೀಮ್ ರವರು ಸಾಯಿಬಾಬಾರವರನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಪುಸ್ತಕಗಳಲ್ಲಿ ಸಾಯಿಬಾಬಾರವರು ಬಿ.ವಿ.ತಾಲೀಮ್ ರವರ ಕನಸಿನಲ್ಲಿ ದಿವ್ಯ ದರ್ಶನ ನೀಡಿ ಅವರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಲಾಗಿದೆ. ಆದರೆ, ಬಿ.ವಿ.ತಾಲೀಮ್ ರವರ ಮೊಮ್ಮಗನ ಪ್ರಕಾರ ಸಾಯಿಬಾಬಾರವರು ಒಂದು ದಿನ ಬೆಳಗಿನ ಸಮಯದಲ್ಲಿ ದಿವ್ಯ ಜ್ಯೋತಿಯ ಹಾಗೆ ದರ್ಶನ ನೀಡಿದರು ಮತ್ತು ಆ ಬೆಳಕಿನಲ್ಲಿ ಸಾಯಿಬಾಬಾರವರ ವದನವು ಬಹಳ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಸಾಯಿಬಾಬಾರವರ ದಯೆಯಿಂದ ಮತ್ತು ಮಾರ್ಗದರ್ಶನದಿಂದ ವಿಗ್ರಹದ ಮುಖವನ್ನು ಕೆತ್ತುವುದು ಬಹಳ ಸುಲಭವಾಯಿತು ಎಂದು ತಿಳಿದು ಬರುತ್ತದೆ.  ಅಷ್ಟೇ ಅಲ್ಲದೆ, ಸಾಯಿಬಾಬಾರವರು ತಾಲೀಮ್ ರವರಿಗೆ "ನೀನು ನನ್ನ ವಿಗ್ರಹ ಕೆತ್ತನೆಯ ಕೆಲಸವನ್ನು ಬೇಗನೆ ಮಾಡಿ ಮುಗಿಸು ಮತ್ತು ಮುಂದೆ ನೀನು ಬೇರೆ ಯಾವ ವಿಗ್ರಹವನ್ನು ಕೆತ್ತುವುದಿಲ್ಲ" ಎಂದು ತಿಳಿಸಿದರೆಂದು ಹೇಳಲಾಗಿದೆ. ಬಾಬಾರವರ ಮಾತುಗಳು ಅಕ್ಷರಶಃ ನಿಜವಾಯಿತು.




ಸಾಯಿಬಾಬಾರವರ ಈ ಸುಂದರ ವಿಗ್ರಹವನ್ನು ಇಟಾಲಿಯನ್ ಮಾರ್ಬಲ್ ನಿಂದ ಕೆತ್ತಲಾಗಿದೆ.ಈ ವಿಗ್ರಹವನ್ನು 7ನೇ ಅಕ್ಟೋಬರ್ 1954 ರ ವಿಜಯದಶಮಿಯಂದು ಸಾಯಿಬಾಬಾರವರ ಸಮಾಧಿಯ ಹಿಂಭಾಗದಲ್ಲಿ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಸ್ವಾಮಿ ಶರಣಾನಂದ್ ರವರು ವಿಧಿವತ್ತಾಗಿ ಪ್ರತಿಷ್ಟಾಪಿಸಿದರು. ಈ ವಿಗ್ರಹದ ಕೆತ್ತನೆಗೆ ಆ ಕಾಲದಲ್ಲೇ 22,000 ರುಪಾಯಿಗಳು ಖರ್ಚಾಗಿತ್ತು. ಈ ವಿಗ್ರಹವನ್ನು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಸ್ಥಾಪಿಸಲಾಗಿದ್ದು ಸಾಯಿಬಾಬಾರವರ ಮುಖವನ್ನು ಈಶಾನ್ಯ ದಿಕ್ಕಿಗೆ ನೋಡುತ್ತಿರುವಂತೆ ಸ್ಥಾಪಿಸಲಾಗಿದೆ. ಸಾಯಿಭಕ್ತರು ಯಾವ ದಿಕ್ಕಿನಿಂದ ನೋಡಿದರೂ ಕೂಡ ತಮ್ಮ ಕಡೆಯೇ ನೋಡುತ್ತಿರುವಂತೆ ಭಕ್ತರಿಗೆ ಭಾಸವಾಗುವ ಹಾಗೆ ಬಹಳ ಸುಂದರವಾಗಿ ಕೆತ್ತಲಾಗಿದೆ.


ಪವಿತ್ರ ಇಟ್ಟಿಗೆ: 

ಈ ಪವಿತ್ರ ಇಟ್ಟಿಗೆ ಸದಾಕಾಲ ಬಾಬಾರವರ ಜೊತೆ ಇರುತ್ತಿತ್ತು. ಮಹಾಳಸಾಪತಿ, ಕಶೀರಾಂ ಶಿಂಪಿ ಮತ್ತು ಮಾಧವ ಫಾಸ್ಲೆ ಪ್ರತಿದಿನ ಈ ಪವಿತ್ರ ಇಟ್ಟಿಗೆಗೆ ಮಂಗಳ ಸ್ನಾನ ಮಾಡಿಸಿ ಪೂಜಿಸುತ್ತಿದ್ದರು. ಒಂದು ದಿನ ಈ ಇಟ್ಟಿಗೆಯು ಕೆಳಗೆ ಬಿದ್ದು ಒಡೆದು ಹೋಯಿತು. ಇಟ್ಟಿಗೆ ಬಿದ್ದು ಒಡೆದಿದ್ದು ಸಾಯಿಬಾಬಾರವರ ಮರಣದ ಮುನ್ಸೂಚನೆಯಾಗಿತ್ತು. ಬಾಬಾರವರು ಇಟ್ಟಿಗೆ ಒಡೆದ ವಿಷಯವನ್ನು ಕೇಳಿ ಅತೀವ ದುಃಖವನ್ನು ವ್ಯಕ್ತಪಡಿಸಿದರು. "ಈ ಇಟ್ಟಿಗೆಯು ನನ್ನ ಆಪ್ತ ಸಂಗಾತಿಯಾಗಿತ್ತು. ಇದು ಒಡೆದದ್ದು ನನ್ನ ದುರದೃಷ್ಟವೇ ಸರಿ" ಎಂದು ಕೊರಗಿದರು. ಇಟ್ಟಿಗೆ ಒಡೆದ ದಿನದಿಂದ ಬಾಬಾರವರ ಆರೋಗ್ಯ ಹದಗೆಡಲು ಆರಂಭವಾಗಿ ಈ ಘಟನೆಯಾದ 5 ದಿನಗಳ ನಂತರ ಬಾಬಾರವರು ಸಮಾಧಿ ಹೊಂದಿದರು. ಇದರ ಪೂರ್ಣ ವಿವರವನ್ನು ಸಾಯಿ ಸಚ್ಚರಿತ್ರೆಯ 44 ನೇ ಅಧ್ಯಾಯದಲ್ಲಿ ನೋಡಬಹುದು. 

ಸಾಯಿಬಾಬಾರವರ ಸಮಾಧಿ:

ಸಾಯಿಬಾಬಾರವರ ಸಮಾಧಿಯು 6 ಅಡಿ ಉದ್ದ ಮತ್ತು 2 ಅಡಿ ಅಗಲ ಇದೆ. ಸಮಾಧಿಯ ಸುತ್ತಾ 9 ಅಡಿ ಉದ್ದ ಮತ್ತು 9 ಅಡಿ ಅಗಲ ಮತ್ತು 3 ಅಡಿ ಎತ್ತರವಿರುವ ಪೀಠವನ್ನು ಸ್ಥಾಪಿಸಲಾಗಿದೆ. ಈ ಪೀಠದ ಕೆಳಗಡೆ 3 ಮೆಟ್ಟಿಲುಗಳನ್ನು ಸ್ಥಾಪಿಸಲಾಗಿದೆ ಮತ್ತು 3 ನೇ ಮೆಟ್ಟಿಲಿನ ಮೇಲೆ "ಆಶ್ವಯುಜ ಶುದ್ದ ದಶಮಿ, 15ನೇ ಅಕ್ಟೋಬರ್ 1918 ರಂದು ಸಾಯಿಬಾಬಾರವರು ಮಹಾಸಮಾಧಿ ಹೊಂದಿದರು" ಎಂದು ಕೆತ್ತಲಾಗಿದೆ. 


ಸಮಾಧಿ ಮಂದಿರದ ದಿನಚರಿ: 

ಪ್ರತಿದಿನ ಬೆಳಗಿನ ಜಾವ ಸಾಯಿಬಾಬಾರವರ ವಿಗ್ರಹ ಮತ್ತು ಸಮಾಧಿಗಳಿಗೆ ಮಂಗಳಸ್ನಾನ ಮಾಡಿಸಲಾಗುತ್ತದೆ. ಅಲ್ಲದೇ, ಅಷ್ಟಗಂಧದಿಂದ ಅಲಂಕಾರ ಮಾಡಲಾಗುತ್ತದೆ. ಸಮಾಧಿಯ ಮೇಲೆ ಶಾಲು ಹೊದೆಸಲಾಗುತ್ತದೆ. ಬಾಬಾರವರ ವಿಗ್ರಹದ ಪಕ್ಕದಲ್ಲಿ ಸೀಮೆಎಣ್ಣೆಯ ಲಾಂದ್ರವನ್ನು ರಾತ್ರಿಯಿಡಿ ಇರಿಸಲಾಗುತ್ತದೆ. ಲಾಂದ್ರದ ಪಕ್ಕದಲ್ಲಿ ಒಂದು ಲೋಟದಲ್ಲಿ ನೀರನ್ನು ಇರಿಸಲಾಗುತ್ತದೆ. ಸಾಯಿಬಾಬಾರವರ ಕಾಲದಲ್ಲಿ ರಾಧಾಕೃಷ್ಣ ಮಾಯಿಯವರು ಈ ಕಾರ್ಯವನ್ನು ಅತ್ತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಮಾಡುತ್ತಿದ್ದರು. ರಾತ್ರಿಯ ಶೇಜಾರತಿಯ ನಂತರ ಬಾಬಾರವರ ವಿಗ್ರಹ ಮತ್ತು ಸಮಾಧಿಯ ಮೇಲೆ ಸೊಳ್ಳೆಯ ಪರದೆಯನ್ನು ಹೊದೆಸಲಾಗುತ್ತದೆ. ಮಾರನೇ ದಿನ ಬೆಳಗಿನ ಜಾವ ಕಾಕಡಾ ಆರತಿಯ ಸಮಯದಲ್ಲಿ ಸೊಳ್ಳೆಯ ಪರದೆಯನ್ನು ತೆಗೆಯಲಾಗುತ್ತದೆ. ಕಾಕಡಾ ಆರತಿಯ ಸಮಯದಲ್ಲಿ ಸಾಯಿಬಾಬಾರವರಿಗೆ ಬೆಣ್ಣೆ ಮತ್ತು ಸಕ್ಕರೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಲಘು ಆರತಿಯ ಸಮಯದಲ್ಲಿ ಉಪಹಾರ ನೈವೇದ್ಯವನ್ನು ಮಾಡಲಾಗುತ್ತದೆ. ಮಧ್ಯಾನ್ಹ ಆರತಿಯ ಸಮಯದಲ್ಲಿ ಭೋಜನ ನೈವೇದ್ಯವನ್ನು ನೀಡಲಾಗುತ್ತದೆ. ಸಂಜೆಯ ಧೂಪಾರತಿಯ ಸಮಯದಲ್ಲಿ ರಾತ್ರಿ ಭೋಜನದ ನೈವೇದ್ಯವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಸ್ವಲ್ಪ ರೊಟ್ಟಿ ಮತ್ತು ಈರುಳ್ಳಿಯನ್ನು ನೈವೇದ್ಯ ಮಾಡುವ ಸಂಪ್ರದಾಯವಿದೆ. ಏಕಾದಶಿಯ ದಿನದಂದು ಉಪವಾಸ ಭೋಜನ ಅಂದರೆ ಫಲಹಾರ ಭೋಜನ ನೈವೇದ್ಯವನ್ನು ನೀಡಲಾಗುತ್ತದೆ. ಸಾಯಿಬಾಬಾರವರ ನೈವೇದ್ಯವನ್ನು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದ ಪ್ರಾಂಗಣದ ಹಿಂಭಾಗದಲ್ಲಿ ಇದ್ದ ನೈವೇದ್ಯ ಶಾಲೆಯಲ್ಲಿ ಮೊದಲು ತಯಾರಿಸಲಾಗುತ್ತಿತ್ತು. ಈಗ ಈ ಸ್ಥಳವು ಸಮಾಧಿ ಮಂದಿರದ ಮೊದಲನೇ ಮಹಡಿಯಲ್ಲಿ ಇರುತ್ತದೆ. 

ಸಮಾಧಿ ಮಂದಿರದಲ್ಲಿ ನಡೆಯುವ ದಿನನಿತ್ಯದ ಕಾರ್ಯಕ್ರಮಗಳ ಸಮಯವನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

4:00 AM ಸಮಾಧಿ ಮಂದಿರ ತೆರೆಯುತ್ತದೆ.
4:15 AM ಭೂಪಾಳಿ 
4:25 AM ಸಾಂಬ್ರಾಣಿಯ ಅರ್ಪಣೆ (ಇದ್ದಿಲನ್ನು ದ್ವಾರಕಾಮಾಯಿಯ ಧುನಿಯಿಂದ ತೆಗೆಯಲಾಗುತ್ತದೆ)
4:30 AM
ಕಾಕಡ ಆರತಿ (ಸಾಯಿಬಾಬಾರವರಿಗೆ ಬೆಣ್ಣೆ ಮತ್ತು ಸಕ್ಕರೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಮತ್ತು ಆರತಿಯ ನಂತರ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ).
5:00 AM ಭಜನೆ.
5:05 AM
ಮಂಗಳ ಸ್ನಾನ (ಮಂಗಳ ಸ್ನಾನದ ನಂತರ ತೀರ್ಥವನ್ನು ಭಕ್ತರಿಗೆ ಹೊರಗಡೆ ಪಾತ್ರೆಗಳಲ್ಲಿ ತುಂಬಿಸಿ ಇರಿಸಲಾಗುತ್ತದೆ).
5:35 AM ಚೋಟ ಆರತಿ "ಶಿರಡಿ ಮಾಜ್ಹೆ ಪಂಡರಾಪುರ".
5:40 AM ದರ್ಶನದ ಆರಂಭ.
11:30 AM ಸಮಾಧಿ ಮಂದಿರ ಶುಚಿಗೊಳಿಸುವ ಕಾರ್ಯಕ್ರಮ.
11:45 AM ಸಾಂಬ್ರಾಣಿಯ ಅರ್ಪಣೆ (ಇದ್ದಿಲನ್ನು ದ್ವಾರಕಾಮಾಯಿಯ ಧುನಿಯಿಂದ ತೆಗೆಯಲಾಗುತ್ತದೆ)
12:00 PM ಮಧ್ಯಾನ್ಹ ಆರತಿ.
12:30 PM ಭೋಜನ ನೈವೇದ್ಯ ಮತ್ತು ತಾಂಬೂಲ ಸಮರ್ಪಣೆ.
4:00 PM ಸಾಯಿ ಸಚ್ಚರಿತ್ರೆ ಪೋತಿ ಪಾರಾಯಣ.
Sunset
ಧೂಪಾರತಿ  (ಸಮಾಧಿ ಮಂದಿರ ಶುಚಿಗೊಳಿಸುವ ಕಾರ್ಯಕ್ರಮ ಮತ್ತು ಸಾಂಬ್ರಾಣಿ ಅರ್ಪಣೆ ಸಂಜೆ ಆರತಿಗೆ ಮುಂಚಿತವಾಗಿ ನಡೆಯುತ್ತದೆ. ರೊಟ್ಟಿ ಮತ್ತು ಈರುಳ್ಳಿಯನ್ನು ನೈವೇದ್ಯ ಮಾಡುವ ಕಾರ್ಯಕ್ರಮ ಸಂಜೆ ಆರತಿಯ ನಂತರ ನಡೆಯುತ್ತದೆ).
8:30 PM to 10:00 PM ವಿವಿಧ ಭಜನಾ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.
10:30 PM
ಶೇಜಾರತಿ ಆರತಿಯ ನಂತರ ವಿಗ್ರಹದ ಮತ್ತು ಸಮಾಧಿಯ ಮೇಲೆ ಶಾಲು ಹೊದೆಸಲಾಗುತ್ತದೆ. ಬಾಬಾರವರ ವಿಗ್ರಹಕ್ಕೆ ರುದ್ರಾಕ್ಷಿ ಮಾಲೆ ಹಾಕಲಾಗುತ್ತದೆ. ಸೊಳ್ಳೆಯ ಪರದೆ ಹಾಕಲಾಗುತ್ತದೆ ಮತ್ತು ಒಂದು ಲೋಟ ನೀರನ್ನು ಇರಿಸಲಾಗುತ್ತದೆ. 
11:15 PM ಸಮಾಧಿ ಮಂದಿರ ಮುಚ್ಚಲಾಗುತ್ತದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment