Sunday, June 27, 2010

ಶಿರಡಿ ಸಾಯಿಬಾಬಾ ಯಾರು ? - ಕೃಪೆ - ಸಾಯಿ ಅಮೃತಧಾರಾ.ಕಾಂ 


ಶ್ರೀ ಸಾಯಿ ಸಚ್ಚರಿತೆಯಲ್ಲಿ ಹೇಳಿರುವಂತೆ ಸಾಯಿಬಾಬಾರವರ ಜೀವನವು ಸಾಗರದಷ್ಟು ಆಳವು ಮತ್ತು ವಿಶಾಲವೂ ಆಗಿದೆ. ಆ ಸಾಗರದಲ್ಲಿ ಯಾರು ಬೇಕಾದರೂ ಮುಳುಗಿ ಜ್ಞಾನ ಮತ್ತು ಭಕ್ತಿಯೆಂಬ ಅನರ್ಘ್ಯ ಮುತ್ತು ರತ್ನಗಳನ್ನು ಪಡೆಯಬಹುದು ಮತ್ತು ಅವನ್ನು ಇತರರಿಗೂ ಹಂಚಬಹುದು.

ಆದ್ದರಿಂದ ಸಾಯಿಬಾಬಾ ಎಂದರೆ ಯಾರು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟಕರವಾದ ಕೆಲಸ. ಸಾಯಿಬಾಬಾರವರ ಬಗ್ಗೆ ಈಗ ಇರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದರೂ ಕೂಡ ಸಾಯಿಬಾರವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಮ್ಮನ್ನು ಪ್ರಶ್ನೆ ಹಾಗೆಯೇ ಕಾಡುತ್ತದೆ. ಏಕೆಂದರೆ, ಸರ್ವಾಂತರ್ಯಾಮಿಯಾದ ಹಾಗೂ ವರ್ಣನಾತೀತನಾದವನನ್ನು ವರ್ಣಿಸುವುದು ಹೇಗೆ? ನಿಗೂಢ ವ್ಯಕ್ತಿತ್ವದ ಸಾಯಿಬಾಬಾರವರ ಬಗ್ಗೆ ಮಾತನಾಡುವುದು ಹೇಗೆ? ಸಾಯಿ ಸಚ್ಚರಿತೆಯ ಲೇಖಕರೆಂದೇ ಪ್ರಸಿದ್ದಿ ಪಡೆದ ಶ್ರೀ.ಗೋವಿಂದ ಧಾಬ್ಹೊಲ್ಕರ್ ಅಲಿಯಾಸ್ ಹೇಮಾಡಪಂತರು ಸಾಯಿಬಾಬಾರವರ ಅಪರಿಮಿತವಾದ ಪ್ರೀತಿ ಮತ್ತು ಅವರ ಸರ್ವಾಂತರ್ಯಾಮಿತ್ವವನ್ನು ವರ್ಣಿಸಲು ತಮಗೆ ಸಾಧ್ಯವಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಇಲ್ಲಿ ಹೇಮಾಡಪಂತರು ಸಾಯಿಬಾಬಾ ಎಂದರೆ ಯಾರು ಎಂಬ ಪ್ರಶ್ನೆಗೆ ಸೂಕ್ಷ್ಮವಾಗಿ ತಿಳಿಸಲು ಪ್ರಯತ್ನಿಸಿದ್ದಾರೆಂದು ಅನಿಸುತ್ತದೆ. ಯಾಕೆಂದರೆ, ಕೆಲವು ಸಾಯಿಭಕ್ತರಿಗೆ ಸಾಯಿಬಾಬಾರವರು ಪ್ರೀತಿಯ ಅವತಾರ ಮುರ್ತಿಯಂತೆ ಗೋಚರಿಸಿದರೆ, ಮತ್ತೆ ಕೆಲವು ಭಕ್ತರಿಗೆ ಸಾಯಿಬಾಬಾರವರ ಅಂತರ್ಯಾಮಿತ್ವ ಸ್ವತಃ ಅರಿವಾಗುತ್ತದೆ. ಆದುದರಿಂದ, ಸಾಯಿಬಾಬಾರವರನ್ನು ಸ್ವತಃ ಅನುಭವದಿಂದ ತಿಳಿದುಕೊಳ್ಳಬೇಕೆ ವಿನಃ ಅವರ ಬಗ್ಗೆ ತಿಳಿಸಲು ಶಕ್ಯವಿಲ್ಲ. ಸಾಯಿಬಾಬಾರವರ ಅಪರಿಮಿತ ಪ್ರೀತಿ ಮತ್ತು ಅವರ ಅಂತರ್ಯಾಮಿತ್ವ ಎರಡನ್ನು ಅರಿತ ಸಾಯಿಭಕ್ತರು ಅದೃಷ್ಟವಂತರೆಂದೇ ಹೇಮಾಡಪಂತರು ಹೇಳುತ್ತಾರೆ.

ಸಾಯಿಬಾಬಾರವರು ಪುಣ್ಯ ಭೂಮಿ ಭಾರತ ಕಂಡ ಅತ್ಯುನ್ನತ ಸಂತ ಶಿರೋಮಣಿ ಮತ್ತು ದೇವ ಮಾನವನೆಂದರೆ ತಪ್ಪಾಗಲಾರದು. ಇವರ ದಿವ್ಯಶಕ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಇವರು ಯುವಕನಾಗಿದ್ದಾಗಲೇ ಯಾರಿಗೂ ಹೇಳದೆ ಶಿರಡಿಯ ಗ್ರಾಮದ ಹೊರಭಾಗದಲ್ಲಿದ್ದ ಒಂದು ಬೇವಿನ ಮರದ ಕೆಳಗೆ ಕಾಣಿಸಿಕೊಂಡರು ಮತ್ತು ತಮ್ಮ ಜೀವಿತದ ಕೊನೆಯವರೆಗೆ ಶಿರಡಿಯಲ್ಲೇ ವಾಸ ಮಾಡಿದರು. ಇವರನ್ನು ಭೇಟಿಯಾದ ಜನರ ಕಷ್ಟಗಳನ್ನು ನಿವಾರಿಸುತ್ತ ಮತ್ತು ಅವರ ಜೀವನ ಶೈಲಿಯನ್ನು ಪರಿವರ್ತಿಸುತ್ತಿದ್ದರು ಮತ್ತು ಈಗಲೂ ಕೂಡ ಅವರನ್ನು ನಂಬಿದ ಭಕ್ತರ ಕಷ್ಟಗಳನ್ನು ನಿವಾರಿಸುತ್ತಿದ್ದಾರೆ ಮತ್ತು ಅವರನ್ನು ಆಶೀರ್ವದಿಸುತ್ತಿದ್ದಾರೆ.

ಸಾಯಿಬಾಬಾರವರು ತಾವು ಭಕ್ತರನ್ನು ಆಶೀರ್ವದಿಸುವ ಸಲುವಾಗಿ ಅವತರಿಸುವೆನೆಂದು ಹೇಳುತ್ತಿದ್ದರು. ಅದನ್ನು ಅವರು ಅನೇಕ ನಿಗೂಢ ರೀತಿಯಲ್ಲಿ ಮಾಡುತ್ತಿದ್ದರು. ಅನಾರೋಗ್ಯದಿಂದ ಬಳಲುವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಿದ್ದರು, ಅನೇಕ ಭಕ್ತರ ಜೀವ ಉಳಿಸಿದರು, ಆಶಕ್ತರನ್ನು ರಕ್ಷಿಸಿದರು, ಅಪಾಯಗಳನ್ನು ಮೊದಲೇ ಗ್ರಹಿಸಿ ಅಪಾಯವಾಗದಂತೆ ನೋಡಿಕೊಳ್ಳುತ್ತಿದ್ದರು, ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಆಶೀರ್ವದಿಸುತ್ತಿದ್ದರು, ಬಡವರಿಗೆ ಹಣವನ್ನು ನೀಡಿ ಶ್ರೀಮಂತನಾಗುವಂತೆ ಮಾಡುತ್ತಿದ್ದರು, ಎಲ್ಲಾ ವರ್ಗದ ಜನರು ಸೌಹಾರ್ದದಿಂದ ಬಾಳುವಂತೆ ಸದಾಕಾಲ ಶ್ರಮಿಸುತ್ತಿದ್ದರು ಮತ್ತು ಇವಲ್ಲಕ್ಕಿಂತ ಮಿಗಿಲಾಗಿ ತಮ್ಮ ಬಳಿ ಬಂದ ಎಲ್ಲಾ ಭಕ್ತರೂ ಕೂಡ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದರು. ಅವರ ಸಹವರ್ತಿ ಭಕ್ತರು ಹೇಳುವಂತೆ ಸಾಯಿಬಾಬಾರವರು ತಾವು ಭಕ್ತರಿಗೆ ಉಪದೇಶ ನೀಡಿದಂತೆ ತಾವು ಕೂಡ ನಡೆದುಕೊಳ್ಳುತ್ತಿದ್ದರು ಮತ್ತು ತಮ್ಮ ಬಳಿ ಬಂದ ಭಕ್ತರು ಸಾಧಕರಾಗುವಂತೆ ಮಾಡುತ್ತಿದ್ದರು. ಸಾಯಿ ಭಕ್ತರಿಗೆ ಸಾಯಿಬಾಬಾರವರು ದೇವರ ಅವತಾರವಷ್ಟೇ ಅಲ್ಲದೇ ಬೇರೇನೂ ಅಲ್ಲ.

ಸಾಯಿಬಾಬಾರವರು ಜಾತ್ಯಾತೀತರಾಗಿದ್ದರು. ಯಾವುದೇ ಮತ ಪಂಗಡಕ್ಕೆ ಸೇರಿರಲಿಲ್ಲ. ಅವರ ಜಾತಿ ಯಾವುದು, ಅವರ ಮಾತಾಪಿತರು ಯಾರು ಎಂಬುದು ಯಾರಿಗೂ ಈಗಲೂ ಕೂಡ ತಿಳಿದಿಲ್ಲ. ಕೆಲವರು ಇವರನ್ನು ಹಿಂದೂವೆಂದು ತಿಳಿದಿದ್ದರು, ಮತ್ತೆ ಕೆಲವರು ಇವರನ್ನು ಮುಸ್ಲಿಂ ಎಂದು ನಂಬಿದ್ದರು. ಇವರು ಎಲ್ಲಾ ಮತಗಳಿಗೂ ಸೇರಿದ್ದವರಾಗಿದ್ದರು. ಆದರು ಯಾವ ಮತದ ಡಂಭಾಚಾರ ಪದ್ದತಿಗಳಿಗೂ ಅಂಟಿ ಕೊಂಡಿರಲಿಲ್ಲ. ಎಲ್ಲಾ ಜಾತಿ ಮತದವರು ಸಾಯಿಬಾಬಾರವರನ್ನು ಪ್ರೀತಿಯಿಂದ ಮತ್ತು ಭಕ್ತಿಯಿಂದ ಸೇವಿಸುತ್ತಿದ್ದರು. ಹಿಂದುಗಳಿಗೆ ಹಿಂದುವಿನಂತೆ, ಮುಸ್ಲಿಮರಿಗೆ ಮುಸ್ಲಿಮರಂತೆ ಗೋಚರಿಸುತ್ತಿದ್ದರು. ಆದರೆ, ಹಿಂದುಗಳಿಗೆ ತಮ್ಮನ್ನು ಫಕೀರನೆಂದು ಮತ್ತು ಮುಸ್ಲಿಮರಿಗೆ ತಮ್ಮನ್ನು ಬ್ರಾಹ್ಮಣನೆಂದು ಸ್ವೀಕರಿಸಲು ಒತ್ತಾಯ ಮಾಡುತ್ತಿದ್ದರು. ಹಿಂದುಗಳಿಗೆ ಅವರ ಧರ್ಮದ ಪ್ರಕಾರ ತಮ್ಮನ್ನು ಪೂಜಿಸಲು ಅನುಮತಿ ನೀಡಿದರೆ, ಮುಸ್ಲಿಮರು ತಮ್ಮ ಧರ್ಮದಂತೆ ಪೂಜಿಸಲು ಅವಕಾಶ ನೀಡಿದ್ದರು. ಇದರಿಂದ ಹಿಂದೂಗಳು ಸಾಯಿಬಾಬಾರವರನ್ನು ತಮ್ಮವರೆಂದು, ಮುಸ್ಲಿಮರು ತಮ್ಮ ಪಂಗಡದವರೆಂದು ತಿಳಿದುಕೊಂಡಿದ್ದರು. ಆದರೆ ಸಾಯಿಬಾಬಾರವರು ಯಾವಾಗಲೂ ಮಸೀದಿಯಲ್ಲಿ ವಾಸ ಮಾಡುತ್ತಾ ಸದಾಕಾಲ ಬಾಯಲ್ಲಿ ಅಲ್ಲಾ ನಾಮವನ್ನು ಉಚ್ಚರಿಸುತ್ತಿದ್ದರು.

ಸಾಯಿಬಾಬಾರವರು ಯಾರಿಗೂ ಉದ್ದುದ್ದ ಭಾಷಣವನ್ನಾಗಲೀ, ಉಪದೇಶವನ್ನಾಗಲಿ ನೀಡುತ್ತಿರಲಿಲ್ಲ. ಆದರೆ, ಭಕ್ತರು ತಮ್ಮ ಸ್ವಂತ ಅನುಭವದಿಂದ ಇವರನ್ನು ತಿಳಿಯುವಂತೆ ಮಾಡುತ್ತಿದ್ದರು. ಸಾಯಿಬಾಬಾರವರು ಯಾರು ತಮ್ಮ ಧರ್ಮವನ್ನು, ಆಚಾರ ವಿಚಾರಗಳನ್ನು ಬಿಡದಂತೆ ಹೇಳುತಿದ್ದರು. ಒಮ್ಮೆ ಒಬ್ಬ ಹಿಂದೂ ಭಕ್ತನು ಮುಸ್ಲಿಮನಾಗಿ ಪರಿವರ್ತನೆ ಮಾಡಿಕೊಂಡಾಗ ಅವನ ಕಪಾಳಕ್ಕೆ ಚೆನ್ನಾಗಿ ಬಿಗಿದು "ಏನು, ನಿನ್ನ ಅಪ್ಪನನ್ನು ಬದಲಿಸಿದ್ದೀಯ?" ಎಂದು ರೇಗಾಡಿದರು.

ಸಾಯಿಬಾಬಾರವರು ಕೆಲವೊಮ್ಮೆ ಮೌನಿಯಾಗಿರುತ್ತಿದ್ದರು, ಮತ್ತೆ ಕೆಲವೊಮ್ಮೆ ತಮ್ಮ ಭಕ್ತರಿಗೆ ದೃಷ್ಟಾಂತವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಹಾಸ್ಯ ಮಾಡುತ್ತಿದ್ದರು, ಮತ್ತೆ ಕೆಲವು ವೇಳೆ ಇದ್ದಕ್ಕಿದ್ದಂತೆ ಕುಪಿತರಾಗುತ್ತಿದ್ದರು. ಕೆಲವು ಬಾರಿ ಸರಳವಾಗಿ ಭೋಧನೆ ಮಾಡುತ್ತಿದ್ದರು, ಮತ್ತೆ ಕೆಲವು ವೇಳೆ ವಾದಿಸುತ್ತಿದ್ದರು. ಸಾಯಿಬಾಬಾರವರು ಬಹಳ ಸರಳ ಜೀವನವನ್ನು ನಡೆಸುತ್ತಿದ್ದರು. ಹೀಗೆ ಭಕ್ತರ ಜೀವನ ಶೈಲಿಗೆ ತಕ್ಕಂತೆ ಉಪದೇಶ ನೀಡಿ ಅವರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದರು.

ಸಾಯಿಬಾಬಾರವರು ಭಕ್ತರಿಗೆ ತಮ್ಮ ಜೀವಿತದ ಕೊನೆಯವರೆಗೂ ಉಪದೇಶ ನೀಡುತ್ತಲೇ ಇದ್ದರು ಮತ್ತು ತಮ್ಮ ಉಪದೇಶಗಳಿಂದ ಅವರನ್ನು ಪರಿವರ್ತನೆ ಮಾಡುತ್ತಿದ್ದರು. ಕೆಲವರಿಗೆ ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡುವಂತೆ ಹೇಳುತಿದ್ದರು, ಮತ್ತೆ ಕೆಲವರಿಗೆ ಮೌನ ವಾಗಿರಲು ಹೇಳುತ್ತಿದ್ದರು. ಕೆಲವರಿಗೆ ಜಪ-ತಪ ಮಾಡಲು ಹೇಳುತ್ತಿದ್ದರು, ಮತ್ತೆ ಕೆಲವರಿಗೆ ಅದನ್ನು ಬಿಡುವಂತೆ ಹೇಳುತ್ತಿದ್ದರು. ಕಲವರಿಗೆ ನಾಮ ಜಪ ಮಾಡಲು ಹೇಳುತ್ತಿದ್ದರು, ಮತ್ತೆ ಕೆಲವರಿಗೆ ಕೀರ್ತನೆ ಮಾಡಲು ಪ್ರಚೋದಿಸುತ್ತಿದ್ದರು. ಹೀಗೆ ಭಕ್ತರಿಗೆ ಬೇರೆ ಬೇರೆ ರೀತಿಯ ಉಪದೇಶಗಳನ್ನು ನೀಡುತ್ತಿದ್ದರು. ಕೆಲವು ಭಕ್ತರಿಗೆ ತಮ್ಮ ಇಷ್ಟ ದೇವರಂತೆ ಕೂಡ ಗೋಚರಿಸಿದ ಪ್ರಸಂಗ ನಡೆದಿದೆ.

ಸಾಯಿಬಾಬಾರವರು ಭಕ್ತರಿಗೆ ತಮ್ಮ ಗುರುವಿನಲ್ಲಿ ಧೃಡ ಭಕ್ತಿಯಿರಬೇಕೆಂದು ಉಪದೇಶ ನೀಡುತ್ತಿದ್ದರು. ಶ್ರದ್ದೆ ಮತ್ತು ಸಬೂರಿ ಎಂಬ ಎರಡು ಕಾಸುಗಳನ್ನು ತಮ್ಮ ಗುರುವಿಗೆ ಅರ್ಪಿಸಬೇಕೆಂಬ ನೀತಿಯನ್ನು ಬಹಳ ಸುಂದರವಾಗಿ ಭೋದಿಸಿದರು.

ಈ ರೀತಿಯಲ್ಲಿ ಇಂದಿಗೂ ಸಾಯಿಬಾಬಾರವರು ತಮ್ಮ ಅಸಂಖ್ಯಾತ ಭಕ್ತರ ಮನದ ಬಯಕೆಗಳನ್ನು ಪೂರೈಸುತ್ತಾ, ಕಷ್ಟಗಳನ್ನು ನಿವಾರಿಸುತ್ತಾ ತಮ್ಮ ಅಂತರ್ಯಾಮಿತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.

No comments:

Post a Comment