ಸಾಯಿ ಭಜನ ಗಾಯಕಿ - ಶ್ರೀಮತಿ.ಸರಸ್ವತಿ ಮೂರ್ತಿ - ಕೃಪೆ - ಸಾಯಿಅಮೃತಧಾರಾ.ಕಾಂ
ಸಾಯಿ ಭಜನ ಗಾಯಕಿ ಶ್ರೀಮತಿ.ಸರಸ್ವತಿ
ಅನನ್ಯ ಸಾಯಿ ಭಕ್ತರಾದ ಶ್ರೀಮತಿ.ಸರಸ್ವತಿಯವರು ಬಿ.ಕಾಂ ಪದವೀಧರರು. ಇವರು 24-12-1959 ರಂದು ಶ್ರೀಮತಿ.ರಾಧಮ್ಮ ಮತ್ತು ಶ್ರೀ.ಗೋವಿಂದರಾಜು ದಂಪತಿಗಳ ಮಗಳಾಗಿ ಜನಿಸಿದರು. ಇವರು ಬಾಲಪ್ರತಿಭೆ. ಇವರ ತಾಯಿಯೇ ಇವರಿಗೆ ಮೊದಲ ಗುರು. ನಂತರದ ಹೆಚ್ಚಿನ ಸಂಗೀತ ಶಿಕ್ಷಣಕ್ಕಾಗಿ ಖ್ಯಾತ ಸಂಗೀತ ವಿದ್ವಾಂಸರಾದ ಶ್ರೀ.ಡಿ.ಶ್ರೀನಿವಾಸಯ್ಯ ರವರ ಬಳಿ ಶಿಷ್ಯವೃತ್ತಿಯನ್ನು ಆರಂಭಿಸಿ ಸುಮಾರು 3 ವರ್ಷಗಳ ಕಾಲ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ಇವರು ತಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡಿ ಉತ್ತಮ ಸಂಗೀತಗಾರರನ್ನಾಗಿ ಮಾಡಿರುತ್ತಾರೆ. ಕರ್ನಾಟಕದ ಹೆಸರಾಂತ ಗಾಯಕರಾದ ಶ್ರೀಮತಿ. ಬಿ.ಕೆ.ಸುಮಿತ್ರ, ಶ್ರೀಯುತ. ಶಶಿಧರ್ ಕೋಟೆ ಮತ್ತು ಇನ್ನು ಹಲವು ಹೆಸರಾಂತ ಗಾಯಕರೊಂದಿಗೆ ಇವರು ಹಾಡಿರುತ್ತಾರೆ. ಪ್ರಸ್ತುತ ಇವರು ತಮ್ಮ ಪತಿ ಶ್ರೀ.ನರಸಿಂಹಮೂರ್ತಿ ಇವರೊಂದಿಗೆ ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ನೆಲೆಸಿರುತ್ತಾರೆ.
ಇವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:
ಇವರು ಸಂಗೀತದ ವಿವಿಧ ಪ್ರಕಾರಗಳಾದ ಕರ್ನಾಟಕ ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆ ಮತ್ತು ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.
ಇವರು ಆಲ್ ಇಂಡಿಯಾ ರೇಡಿಯೋ ದ "ಬಿ" ಗ್ರೇಡ್ ಕಲಾವಿದರಾಗಿ ಕಳೆದ 15 ವರ್ಷಗಳಿಂದ "ಗೀತಲಹರಿ" ಕಾರ್ಯಕ್ರಮದ ಶೀರ್ಷಿಕೆಯಡಿ ಭಾವಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಸಂಸ್ಥೆಗಳಾದ ರೋಟರಿ ಕ್ಲಬ್, ಮೆಡಿಟೇಶನ್ ಅಂಡ್ ಸ್ಟಡಿ ಸರ್ಕಲ್, ಚಿನ್ಮಯ ಮಿಶನ್, ಥಿಯೋಸಾಫಿಕಲ್ ಸೊಸೈಟಿ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ, ರಾಗಿಗುಡ್ಡ ದೇವಸ್ಥಾನ, ಇಸ್ಕ್ಕಾನ್ ದೇವಸ್ಥಾನ ಇನ್ನು ಮುಂತಾದ ಕಡೆಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ 2 ಬಾರಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿರುತ್ತಾರೆ.
"ಉದಯ ಟಿವಿ" ಯ ಕಾರ್ಯಕ್ರಮವಾದ "ನಾದ" ದಲ್ಲಿ ಭಕ್ತಿ ಗೀತೆಯ ಕಾರ್ಯಕ್ರಮವನ್ನು ನೀಡಿದ್ದಾರೆ.
"ಶಂಕರ ಟಿವಿ" ಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಪ್ರಸಾರವಾದ ಪ್ರಪ್ರಥಮ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿರುವ ಹೆಗ್ಗಳಿಕೆ ಇವರದು.
ಆಲ್ ಇಂಡಿಯಾ ರೇಡಿಯೋ ದಲ್ಲಿ ಹಲವು ಮಕ್ಕಳ ಕಾರ್ಯಕ್ರಮಗಳಿಗೆ ಸಾಹಿತ್ಯ ರಚಿಸಿ ನಿರೂಪಿಸಿರುತ್ತಾರೆ.
"ಜೀ ಟಿವಿ" ಕನ್ನಡದ ಪ್ರಸಿದ್ದ ಕಾರ್ಯಕ್ರಮವಾದ "ಸ್ನೇಹ ಸ್ನೇಹಿತೆಯರಿಗಾಗಿ" ಯಲ್ಲಿ ಇವರ ಸಾಧನೆಗಳ ಬಗ್ಗೆ ಸಂದರ್ಶನವನ್ನು ಕಾರ್ಯಕ್ರಮವನ್ನು ಪ್ರಸಾರ ಮಾಡಿರುತ್ತಾರೆ.
ಇವರು ಕರ್ನಾಟಕ ಸರ್ಕಾರದ "ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ಯ ಗಾಯಕಿಯಾಗಿದ್ದಾರೆ. ಈ ಇಲಾಖೆಯ ಪ್ರತಿಷ್ಟಿತ ಕಾರ್ಯಕ್ರಮವಾದ "ಉದ್ಯಾನವನದಲ್ಲಿ ಉದಯರಾಗ" ದಡಿಯಲ್ಲಿ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. "ಯವನಿಕಾ" ದಲ್ಲಿ ಪ್ರತಿ ಶುಕ್ರವಾರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾವಗೀತೆಗಳನ್ನು ಹಾಡಿದ್ದಾರೆ. ಇಂದಿರಾನಗರದಲ್ಲಿ ನಡೆದ "ಕಾವ್ಯ ಕಾವೇರಿ" ಕಾರ್ಯಕ್ರಮದಡಿ ಕನ್ನಡ ಗೀತೆ, ಜನಪದ ಗೀತೆಗಳನ್ನು ಹಾಡಿದ್ದಾರೆ.
ವೀರಶೈವ ಸಮಾಜ, ಬಸವ ಭವನಗಳಲ್ಲಿ "ವಚನ ಸಾಹಿತ್ಯ" ದ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾದ ಇವರು ಸಾಯಿಬಾಬಾರವರ ಬಗ್ಗೆ 1000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಈ ಹಾಡುಗಳಲ್ಲಿ ಆಯ್ದ ಪ್ರಮುಖ 100 ಹಾಡುಗಳನ್ನು "ಶ್ರೀ ಸಾಯಿ ಸುಗಂಧ" ಎಂಬ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ತಾವು ರಚಿಸಿರುವ ಹಾಡುಗಳಿಗೆ ತಾವೇ ರಾಗ ಸಂಯೋಜನೆ ಮಾಡಿ ತಮ್ಮ ಶಿಷ್ಯರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಸಾಯಿ ಭಕ್ತರ ಕೋರಿಕೆಯ ಮೇರೆಗೆ ಹುಟ್ಟಿದ ಹಬ್ಬದ ದಿವಸ, ಗೃಹಪ್ರವೇಶ, ಮದುವೆ ವಾರ್ಷಿಕೋತ್ಸವಗಳು ಇನ್ನು ಮುಂತಾದ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ಇವರ ಹಾಡುಗಳ ರಚನೆಗಳು ಬಹಳ ಜನಪ್ರಿಯತೆಯನ್ನು ಪಡೆದಿದ್ದು ಅನೇಕ ಸಾಯಿ ಭಕ್ತರು ಇವರನ್ನು ಈ ಉತ್ತಮ ಕಾರ್ಯಕ್ಕಾಗಿ ಪ್ರಶಂಸಿಸಿದ್ದಾರೆ.
ಇವರು ಜೆ.ಪಿ.ನಗರ 7ನೇ ಹಂತದ ಸಾಯಿಮಂದಿರದ ಭಕ್ತರ ಅನುಭವಗಳ ಬಗ್ಗೆ "ದಿವ್ಯ ಅನುಭವ ಕಥಾಮೃತ" ಎಂಬ ಕನ್ನಡ ಪುಸ್ತಕವನ್ನು ರಚಿಸಿದ್ದಾರೆ.
ಇವರು ತಮ್ಮ ಮನೆಯಲ್ಲೇ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.
ಇವರು ಸಿರಸಿಯ "ಸೋಂದೆ ಸ್ವರ್ಣವಲ್ಲಿ ಮಠ" ದ ಬಗ್ಗೆ ಹಾಡುಗಳನ್ನು ರಚಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.
ಇವರು ಚಿಕ್ಕಮಗಳೂರಿನ "ಹರಿಹರಪುರ ಕ್ಷೇತ್ರ ಮಠ" ದ ಬಗ್ಗೆ ಹಾಡುಗಳನ್ನು ರಚಿಸಿದ್ದು ಶೀಘ್ರದಲ್ಲೇ ಅವುಗಳು ಪುಸ್ತಕ ರೂಪದಲ್ಲಿ ಬಿಡುಗಡೆಯಾಗಲಿದೆ.
ಇವರು ಧಾರವಾಡ ಬಳಿಯ ಹುಲಿ ಗ್ರಾಮದಲ್ಲಿ ವಾಸಿಸುವ 135 ವರ್ಷದ ಅವಧೂತರಾದ "ಶ್ರೀ ಹುಲಿ ಅಜ್ಜ" ರ ಬಗ್ಗೆ ಹಾಡುಗಳನ್ನು ರಚಿಸಿದ್ದು ಶೀಘ್ರದಲ್ಲೇ ಅವು ಸಿಡಿಯ ರೂಪದಲ್ಲಿ ಹೊರಬರಲಿದೆ.
ಇವರು ಟಿ.ಟಿ.ಡಿ.ದಾಸ ಸಾಹಿತ್ಯ ಪ್ರಾಜೆಕ್ಟ್ , ತಿರುಪತಿ ಯವರು 2ನೇ ಫೆಬ್ರವರಿ 2011 ರಂದು ಕರ್ನಾಟಕದ ಹಂಪೆಯಲ್ಲಿ ನಡೆಸಿದ ಶ್ರೀ.ಪುರಂದರದಾಸರ ಆರಾಧನೆ ಮತ್ತು ಸಂಗೀತ ಮಹೋತ್ಸವದ ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿಯಾದ ಶ್ರೀಮತಿ.ಸಂಗೀತ ಕಾಖಂಡಕಿ ಯವರೊಂದಿಗೆ "ಜುಗಲ್ ಬಂದಿ" ಕಾರ್ಯಕ್ರಮದಲ್ಲಿ ಶ್ರೀ.ಪುರಂದರದಾಸರ ಸಾಹಿತ್ಯವನ್ನು ಹಾಡಿ ಎಲ್ಲರನ್ನು ರಂಜಿಸಿದ್ದಾರೆ.
ಇವರು ಕರ್ನಾಟಕದ ಮುರಗೋಡು ಕ್ಷೇತ್ರದ "ಶ್ರೀ.ಚಿದಂಬರ ಮಹಾರಾಜ" ಗುರುಗಳ ಜೀವನ ಚರಿತೆಯನ್ನು ಆಧರಿಸಿ ಹಲವಾರು ಗೀತೆಗಳನ್ನು ರಚಿಸಿದ್ದು ಅದು ಅತಿ ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಇವರು ದತ್ತಪೀಠವಾದ ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ಪ್ರತಿವರ್ಷ ನಡೆಯುವ ಉತ್ಸವದಲ್ಲಿ ಭಕ್ತಿ ಗೀತೆಗಳನ್ನು ಹಾಡಿದ್ದಾರೆ.
ಕರ್ನಾಟಕದ ಕಾಗಿನೆಲೆಯಲ್ಲಿ ಡಿಸೆಂಬರ್ 2012 ರಂದು ಕನಕದಾಸ ಜಯಂತಿಯ ಅಂಗವಾಗಿ ನಡೆದ ದಾಸ ಸಾಹಿತ್ಯ ಕಾರ್ಯಕ್ರಮದಲ್ಲಿ ಹಾಡಿರುತ್ತಾರೆ.
ಕರ್ನಾಟಕದ ಬೆಳಗಾಂ ಜಿಲ್ಲೆಯ ಚಿಕ್ಕೋಡಿಯ ದತ್ತಾತ್ರೇಯ ಮಂದಿರದಲ್ಲಿ 26ನೇ ಮೇ 2012 ರಂದು ನಡೆದ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳನ್ನು ಹಾಡಿದ್ದಾರೆ.
ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿಯ ಶಿವಚಿದಂಬರ ಆಶ್ರಮದಲ್ಲಿ 10ನೇ ಜೂನ್ 2012 ರಂದು ನಡೆದ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ಮೇಲೆ 2 ಗಂಟೆಗಳ ಕಾಲ ಕಾರ್ಯಕ್ರಮವನ್ನು ನೀಡಿದ್ದಾರೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯ ಕರ್ಕಿ ಹಳ್ಳಿಯಲ್ಲಿ 1ನೇ ಜುಲೈ 2012 ಗುರುಪೂರ್ಣಿಮೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿದ್ದಾರೆ.
ಇವರು ಶಿರಡಿ ಸಾಯಿಬಾಬಾರವರ ಎಲ್ಲಾ 4 ಮರಾಠಿ ಆರತಿಗಳನ್ನು ಅಸಲು ಆರತಿಗಳ ಅರ್ಥಕ್ಕೆ ಸ್ವಲ್ಪವೂ ಚ್ಯುತಿಯಾಗದಂತೆ ಮತ್ತು ಅದೇ ರಾಗದಲ್ಲಿ ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ದು ಅದರ ಧ್ವನಿಸುರಳಿಯನ್ನು 13ನೇ ಜೂನ್ 2015 ರಂದು ಲೋಕಾರ್ಪಣೆ ಮಾಡಲಾಯಿತು.
ಇವರು ಶ್ರೀ ಸಾಯಿ ಸಚ್ಚರಿತ್ರೆ, ಶ್ರೀ ಸಾಯಿ ಸುಪ್ರಭಾತ, ಉಧಿ, ದಕ್ಷಿಣೆಯ ಮಹಿಮೆ, ನವವಿಧ ಭಕ್ತಿಯ ಅರ್ಚನೆ, ಚಾವಡಿಯ ಮೆರವಣಿಗೆ ಹಾಗೂ ಇನ್ನಿತರ ಭಜನೆಗಳನ್ನು ಒಳಗೊಂಡ ಪುಸ್ತಕವನ್ನು ರಚಿಸಿದ್ದು ಅದನ್ನು 13ನೇ ಜೂನ್ 2015 ರಂದು ಲೋಕಾರ್ಪಣೆ ಮಾಡಲಾಯಿತು.
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:
ವಿಳಾಸ:
ನಂ.11, "ಸುರಭಿ" 1ನೇ ಮುಖ್ಯರಸ್ತೆ,
ನಟರಾಜ ಲೇಔಟ್, 7ನೇ ಹಂತ, ಜೆ.ಪಿ.ನಗರ,
ಬೆಂಗಳೂರು-560 078.
ಕರ್ನಾಟಕ, ಭಾರತ.
ದೂರವಾಣಿ ಸಂಖ್ಯೆ:
080 - 4165 5581 / 97391 37994 / 98860 30556
ಇ-ಮೇಲ್ ವಿಳಾಸ:
saraswathimurthysai@gmail.com
ಅಂತರ್ಜಾಲ ತಾಣ:
http://sites.google.com/site/nmurthysn/
ಅಲ್ಬಮ್ ಗಳು:
ಶ್ರೀ ಸಾಯಿ ಸುಗಂಧ, ಶ್ರೀ ಸಾಯಿ ಸುಗಂಧ - ಭಾಗ - I (ಕನ್ನಡ ಆರತಿ) ಮತ್ತು ಭಾಗ - I I (ಕನ್ನಡ ಭಜನೆಗಳು)
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment