Wednesday, August 19, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಡಾ.ಚಂದ್ರಭಾನು ಸತ್ಪತಿಯವರಿಗೆ ಸನ್ಮಾನ ಸಮಾರಂಭ - ಕೃಪೆ: ಸಾಯಿಅಮೃತಧಾರಾ. ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 20ನೇ ಆಗಸ್ಟ್ 2015, ಗುರುವಾರ ದಂದು ಬೆಳಿಗ್ಗೆ  11 ಘಂಟೆಗೆ ಸಮಾಧಿ ಮಂದಿರದ ಹೊರ ಆವರಣದಲ್ಲಿರುವ ವೇದಿಕೆಯಲ್ಲಿ ಡಾ.ಚಂದ್ರಭಾನು ಸತ್ಪತಿ (ಗುರೂಜಿ)ಯವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು 19ನೇ ಆಗಸ್ಟ್ 2015, ಬುಧವಾರ ದಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿರುವುದಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಹಲವಾರು ಸಾಯಿ ಮಂದಿರಗಳು ತಲೆ ಎತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. 


ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿದ್ದಾರೆ. ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಧರಿಸಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. 1983ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ.ಸತ್ಪತಿಯವರು ಕೆಲವು ವರ್ಷಗಳ ಕಾಲ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಉತ್ತರಪ್ರದೇಶದ ಅನೇಕ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿಯೂ ಸಹ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆ ಇವರದು. ಇವರು 2008ನೇ ಇಸವಿಯಲ್ಲಿ ಪೋಲಿಸ್ ಮಹಾ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದರು. ಇವರು 1989ನೇ ಇಸವಿಯಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಅವರ ಅನನ್ಯ ಭಕ್ತರಾದರು. ಇವರು ಹಲವು ವರ್ಷಗಳ ಕಾಲ ಶಿರಡಿಯಲ್ಲಿ ಉಳಿದುಕೊಂಡು ಶ್ರೀ ಸಾಯಿ ಸಚ್ಚರಿತ್ರೆಯ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿ ತಿಳಿದುಕೊಂಡರು. ನಂತರ ಬಾಬಾರವರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮೊಟ್ಟ ಮೊದಲನೆಯ ಸಾಯಿಬಾಬಾ ಮಂದಿರವನ್ನು ಚೆನ್ನೈನಲ್ಲಿ ಕಟ್ಟಿಸಿದರು.  ಅಲ್ಲಿಂದ ಮುಂದಿನ ವರ್ಷಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಇಲ್ಲಿಯವರೆಗೂ ಸುಮಾರು 230 ಸಾಯಿ ಮಂದಿರಗಳು ತಲೆ ಎತ್ತುವಲ್ಲಿ ಕಾರಣೀಭೂತರಾಗಿದ್ದಾರೆ. 24ನೇ ಜೂನ್ 2015 ರಂದು ಅಮೇರಿಕಾದ ವಾಷಿಂಗ್ ಟನ್ ನಲ್ಲಿ ನಡೆದ ಅಮೇರಿಕನ್ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಅವರು ಮಾನವೀಯತೆಯ ಪ್ರಾಮುಖ್ಯತೆ ಮತ್ತು ಶ್ರೀ ಸಾಯಿಬಾಬಾರವರ ಜಾತ್ಯಾತೀತ ವ್ಯಕ್ತಿತ್ವವನ್ನು ಹಾಗೂ ಶ್ರೀ ಸಾಯಿಬಾಬಾರವರ ಅತ್ಯಂತ ಪ್ರಮುಖ ಉಪದೇಶವಾದ "ಸಬ್ ಕಾ ಮಾಲಿಕ್ ಏಕ್" ನ ಬಗ್ಗೆ ಉಪದೇಶ ನೀಡಿದರು ಎಂದು ಶ್ರೀ.ಜಾಧವ್ ರವರು ತಿಳಿಸಿದರು.  
    
ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಅದರ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಷಿ, ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯ ಹಾಗೂ ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆಯವರುಗಳು ಈ ಮಹಾನ್ ಸಾಯಿಭಕ್ತರಾದ ಡಾ.ಸತ್ಪತಿಯವರನ್ನು 20ನೇ ಆಗಸ್ಟ್ 2015, ಗುರುವಾರ ದಂದು ಬೆಳಿಗ್ಗೆ  11 ಘಂಟೆಗೆ ಸಮಾಧಿ ಮಂದಿರದ ಹೊರ ಆವರಣದಲ್ಲಿರುವ ವೇದಿಕೆಯಲ್ಲಿ  ಸನ್ಮಾನಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment