Thursday, August 6, 2015

ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳ ಕಾರ್ಯಾರಂಭ -ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳನ್ನು ತೆರೆಯಲಾಗಿದ್ದು, ಹಲವಾರು ರೀತಿಯ ಖಾಯಿಲೆಗಳಿಗೆ ಇಲ್ಲಿನ ಆಯುರ್ವೇದ  ವಿಭಾಗದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು  ಹಾಗೂ ಫಿಜಿಯೋಥಿರೆಪಿ ವಿಭಾಗದಲ್ಲಿ ದೈಹಿಕ ವ್ಯಾಯಾಮವನ್ನು ನಿಯಮಿತವಾಗಿ ನೀಡಲಾಗುತ್ತಿದೆ ಎಂದು ಶ್ರೀ ಸಾಯಿಬಾಬಾ  ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 4ನೇ ಆಗಸ್ಟ್ 2015, ಮಂಗಳವಾರ ದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. 

ಶ್ರೀ ಜಾಧವ್ ರವರು ತಮ್ಮ ಮಾತನ್ನು ಮುಂದುವರಿಸುತ್ತಾ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳು ನಿಯಮಿತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. 

ಫಿಜಿಯೋಥಿರೆಪಿ ವಿಭಾಗದಲ್ಲಿ ಈ ಕೆಳಕಂಡ ಖಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ: 

  1. ಸಂಧಿವಾತ - ಕೀಲುಗಳಲ್ಲಿ ಉರಿಯೂತ, ಸ್ಪಾಂಡಿಲೋಸಿಸ್ (ಕುತ್ತಿಗೆ ಮತ್ತು ಬೆನ್ನೆಲುಬು)
  2. ಘನೀಕೃತ ಭುಜ (ಭುಜವನ್ನು ಅಲುಗಾಡಿಸಲು ಅಸಮರ್ಥತೆ)
  3. ಇಸಿಯಾಲ್ಜಿಯಾ (ಸೊಂಟ ನೋವು) 
  4. ಸ್ನಾಯು ಸೆಳೆತ
  5. ಅಸ್ಥಿರಜ್ಜು ಉಳುಕು 
  6. ಆಟವಾಡುವಾ ಸಂಭವಿಸುವ ಗಾಯಗಳು

ಈ ಕೆಳಕಂಡ ಖಾಯಿಲೆಗಳಿಗೆ ಶಸ್ತ್ರಚಿಕಿತ್ಸಾ ನಂತರದ ಚಿಕಿತ್ಸೆಯನ್ನು ನೀಡಲಾಗುತ್ತದೆ:
  1. ಮೂಳೆ ಮುರಿತಗಳು ಮತ್ತು ಕೀಲು ಬದಲಾವಣೆ
  2. ಸ್ಟ್ರೋಕ್ ಅಥವಾ ಪಾರ್ಶ್ವವಾಯು
  3. ಪಾರ್ಕಿನ್ಸನ್ ಖಾಯಿಲೆ (ಪಾರ್ಕಿನ್ಸನ್ ರೋಗವು ಚಲನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ)
  4. ಬೆಲ್ಸ್ ಪಾರ್ಶ್ವವಾಯು ಅಥವಾ ಮುಖದ ಮೇಲಿನ ಪಾರ್ಶ್ವವಾಯು (ಮುಖದ ಸ್ನಾಯುಗಳ ಚಲನೆಯ ಮೇಲೆ ಪರಿಣಾಮ)
  5. ಗುಯ್ಲೈನ್ ಬರ್ರೆ ಸಿಂಡ್ರೊಮ್ (ದೇಹದ ನಿರೋಧಕ ವ್ಯವಸ್ಥೆಯು ಬಾಹ್ಯ ನರ ವ್ಯವಸ್ಥೆಯ ದಾಳಿ ಮಾಡುತ್ತವೆ)
  6. ತಲೆ ಅಥವಾ ಬೆನ್ನುಹುರಿ ಗಾಯದ ನಂತರದ ಪುನಶ್ಚೇತನಾ ಚಿಕಿತ್ಸೆ 
ಶಾಖ ತರಂಗ ಚಿಕಿತ್ಸಾ ವಿಧಾನ, ಪ್ಯಾರಾಫಿನ್ ಮೇಣದ ಸ್ನಾನ ಮತ್ತು ಹಾಟ್ ಪ್ಯಾಕ್ ಚಿಕಿತ್ಸೆ, ಡಿಪ್ ಹಿಟ್ ಚಿಕಿತ್ಸೆ, ಸಣ್ಣ ಅಲೆಗಳ ವಿದ್ಯುದುಷ್ಣ ಚಿಕಿತ್ಸೆ, ಹೈಡ್ರೋಥಿರೆಪಿ (ನೀರನ್ನು ಬಳಸಿ ಚಿಕಿತ್ಸೆ ನೀಡುವುದು), ಎಲೆಕ್ಟ್ರೋಥಿರೆಪಿ (ವಿದ್ಯುತ್ ಶಾಕ್ ನೀಡಿ ಚಿಕಿತ್ಸೆ ನೀಡುವುದು), ಅಲ್ಟ್ರಾಸೌಂಡ್ ಮತ್ತು ಐ.ಎಫ್.ಟಿ ಹಾಗೂ ಟ್ರಾಕ್ಷನ್ (ಸಂಕೋಚನ) ಚಿಕಿತ್ಸೆ, ಸ್ನಾಯು ಸಂವೇದಕ ಚಿಕಿತ್ಸೆ, ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ದೈಹಿಕ ವ್ಯಾಯಾಮಗಳು -  ಈ ಚಿಕಿತ್ಸಾ ಕ್ರಮಗಳನ್ನು ಬಳಸಿ ಮೇಲಿನ ಎಲ್ಲಾ ಖಾಯಿಲೆಗಳನ್ನು ಗುಣಪಡಿಸಲಾಗುತ್ತದೆ. 

ಆಯುರ್ವೇದ ವಿಭಾಗದಲ್ಲಿ, ಈ ಕೆಳಕಂಡ ಖಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ:  
  1. ನಿದ್ರಾಹೀನತೆ 
  2. ಮರೆಗುಳಿತನ 
  3. ಕೂದಲು ಉದುರುವಿಕೆ 
  4. ತಲೆ ನೋವು
  5. ಹೃದಯದ ಖಾಯಿಲೆ 
  6. ಬೆನ್ನುಹುರಿಗೆ ಸಂಬಂಧಿಸಿದ ಖಾಯಿಲೆಗಳು
  7. ಕುತ್ತಿಗೆ ನೋವು 
  8. ಬೆನ್ನು ನೋವು 
  9. ಕೀಲು ನೋವು 
  10. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು 
  11. ಕಣ್ಣಿನ ತೊಂದರೆಗಳು 
  12. ಶೀತ ವೈಪರೀತ್ಯ 
  13. ಮೂಗಿನ ತೊಂದರೆಗಳು 
  14. ಕೆಮ್ಮು ರೋಗ 
  15. ಪಾರ್ಶ್ವವಾಯು 
  16. ಆರ್ಥ್ರಾಲ್ಜಿಯಾ ಮತ್ತು ಚರ್ಮ ರೋಗಗಳು
ಮೇಲಿನ ಈ ಎಲ್ಲಾ ಖಾಯಿಲೆಗಳಿಗೆ ಶಿರೋಧರ (ತಲೆಯ ಮೇಲೆ ಎಣ್ಣೆಯನ್ನು ಸುರಿಯುವಿಕೆ), ಪಂಚಕರ್ಮ ಚಿಕಿತ್ಸೆಗಳಾದ ಬಸ್ತಿ (ಔಷಧೀಯ ಎನಿಮಾ), ನೇತ್ರಾರ್ಪಣ, ನಾಸ್ಯ (ಔಷಧಿಗಳನ್ನು ಮೂಗಿನ ಹೊಳ್ಳೆಗಳ ಮೂಲಕ ನೀಡುವಿಕೆ), ವಾಮನ (ವಾಂತಿಯಾಗುವಂತೆ ಮಾಡುವ ಔಷಧಿಗಳು), ಸ್ವರ್ಗ ಸ್ನೇಹನ  - ಸ್ವೇದನ ಮತ್ತು ರಕ್ತ ಮೋಕ್ಷಣ - ಇವುಗಳನ್ನು ಬಳಸಿ ಚಿಕಿತ್ಸೆ ನೀಡಲಾಗುವುದು.

ಮೇಲಿನ ಎಲ್ಲ ಖಾಯಿಲೆಗಳಿಗೆ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಆಸ್ಪತ್ರೆಯ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾನ್ಹ 1 ಗಂಟೆಯವರೆಗೆ  ಹಾಗೂ ಪಂಚಕರ್ಮ ಚಿಕಿತ್ಸೆಯನ್ನು ಸಂಜೆ 4 ಗಂಟೆಯಿಂದ 6  ಗಂಟೆಯವರೆಗೆ ನೀಡುತ್ತಾರೆ. ಆದ ಕಾರಣ ಅಗತ್ಯವಿರುವ ರೋಗಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಈ ಮೂಲಕ  ಒತ್ತಾಯಿಸಿದ್ದಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment