Friday, August 21, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಡಾ.ಚಂದ್ರಭಾನು ಸತ್ಪತಿಯವರಿಗೆ ಸನ್ಮಾನ ಸಮಾರಂಭದ ವರದಿ - ಕೃಪೆ: ಸಾಯಿಅಮೃತಧಾರಾ. ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 20ನೇ ಆಗಸ್ಟ್ 2015, ಗುರುವಾರದಂದು ಬೆಳಿಗ್ಗೆ  11 ಘಂಟೆಗೆ ಸಾಯಿ ಪ್ರಸಾದಾಲಯದ ಆವರಣದಲ್ಲಿರುವ ಸಂಭಾಂಗಣದಲ್ಲಿ ಡಾ.ಚಂದ್ರಭಾನು ಸತ್ಪತಿ (ಗುರೂಜಿ)ಯವರಿಗೆ ಸನ್ಮಾನ ಮಾಡಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಭಾನು ಸತ್ಪತಿಯವರು " ಈ ಸನ್ಮಾನವು ನನಗೆ ಸಲ್ಲಬೇಕಾದುದಲ್ಲ. ಬದಲಿಗೆ ಶ್ರೀ ಸಾಯಿಬಾಬಾರವರ ಆಲೋಚನೆಗಳಿಗೆ ಹಾಗೂ ಹಲವಾರು ಸಾಯಿಭಕ್ತರು ನೀಡಿರುವ ಅತ್ಯುತ್ತಮ ಕೊಡುಗೆಗೆ ಸಲ್ಲಬೇಕಾಗಿದೆ. ಶ್ರೀ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿರುವ ಅವಶ್ಯಕತೆಯಿದೆ" ಎಂದು ನುಡಿದರು. ಅಲ್ಲದೇ, ಸಾಯಿಬಾಬಾರವರ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸುವ ಸಲುವಾಗಿ ಒಂದು ಸಾಯಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಅವರು ಮನವಿ ಮಾಡಿದರು. 



ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿರುತ್ತಾರೆ. ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಷಿ, ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಶಿರಡಿಯ ಸಂಸತ್ ಸದಸ್ಯರಾದ ಶ್ರೀ.ಸದಾಶಿವ ಲೋಖಂಡೆಯವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಡಾ.ಸತ್ಪತಿಯವರ ಬಗ್ಗೆ  ಪ್ರಸ್ತಾವಿಕ ಭಾಷಣವನ್ನು ಮಾಡುವುದರೊಂದಿಗೆ ಸನ್ಮಾನ ಕಾರ್ಯಕ್ರಮವು ಪ್ರಾರಂಭವಾಯಿತು. ತರುವಾಯ, ಡಾ.ಚಂದ್ರಭಾನು ಸತ್ಪತಿಯವರು ಉಪನ್ಯಾಸ ಭಾಷಣವನ್ನು ಮಾಡಿದರು. 

ಉಪನ್ಯಾಸ ಭಾಷಣವನ್ನು ಮಾಡುತ್ತಾ  ಡಾ.ಚಂದ್ರಭಾನು ಸತ್ಪತಿಯವರು "ಶ್ರೀ ಸಾಯಿಬಾಬಾ ಸಂಸ್ಥಾನವು ಇಂದು ನನ್ನನ್ನು ಸನ್ಮಾನಿಸುತ್ತಿದೆ. 25 ವರ್ಷಗಳ ನಂತರ ನಾನು ಈ ರೀತಿಯ ಸನ್ಮಾನಕ್ಕೆ ಪಾತ್ರನಾಗುತ್ತೇನೆ ಎಂದು ನಾನು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಾನು ಮೊಟ್ಟ ಮೊದಲ ಬಾರಿಗೆ 2ನೇ ನವೆಂಬರ್ 1989 ರಲ್ಲಿ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದೆ. ನಾನು ಅಂದು ಆರಂಭಿಸಿದ ಪ್ರಯಾಣವು ಒಂದು ಪ್ರಮುಖ ಮೈಲಿಗಳನ್ನು ತಲುಪಿದೆ. ಇಂದು ಸಾಯಿಬಾಬಾರವರ ಹೆಸರು ಪ್ರಪಂಚದಾದ್ಯಂತ ಹರಡಿ ಬಹಳ ಜನಪ್ರಿಯತೆಯನ್ನು ಪಡೆದಿದೆ. ಶ್ರೀ ಸಾಯಿಬಾಬಾರವರು ಎಲ್ಲಾ ಮತಗಳೂ ಒಂದೇ;  ಪ್ರತಿಯೊಬ್ಬ ಮನುಷ್ಯನನ್ನು ಒಂದೇ ರೀತಿಯಿಂದ ಕಾಣಬೇಕು; ಪ್ರತಿಯೊಬ್ಬರೂ ತಮ್ಮ ತಾಯಿ, ತಂದೆ, ಸಹೋದರ, ಸಹೋದರಿಯರಲ್ಲಿ ಆ ಭಗವಂತನನ್ನು ಕಾಣುವಂತಾಗಬೇಕು. ನಾವಿರುವ ಪರಿಸ್ಥಿತಿಯು ಒಳ್ಳೆಯದು ಅಥವಾ ಕೆಟ್ಟದೇ ಇರಲಿ ಎಲ್ಲಾ ಸಂದರ್ಭದಲ್ಲಿಯೂ ನಾವು ಸಾಯಿಯನ್ನು ಮನದಲ್ಲಿ  ನೆನೆಯೋಣ, ಅವರಿಗೆ ಪ್ರಣಾಮವನ್ನು ಸಲ್ಲಿಸೋಣ. ಶ್ರೀ ಸಾಯಿಬಾಬಾರವರ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ" ಎಂದು ನುಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ವಿನಯ್ ಜೋಷಿಯವರು ಡಾ.ಸತ್ಪತಿಯರು ಸಾಯಿಬಾಬಾರವರ ತತ್ವ ಮತ್ತು ಉಪದೇಶಗಳನ್ನು ಭಕ್ತರಿಗಷ್ಟೇ ಅಲ್ಲದೆ ಸಾಮಾನ್ಯ ವ್ಯಕ್ತಿಗೆ ಕೂಡ ಸರಳ ರೀತಿಯಲ್ಲಿ ವಿವರಿಸುವ ಮೂಲಕ ಶ್ರೀ ಸಾಯಿಬಾಬಾರವರ ಸಂದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಶಿರಡಿ ಮತ್ತು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಸಾಯಿಬಾಬಾರವರ ಎರಡು ಪ್ರಮುಖ ಸಂದೇಶಗಳಾದ "ಶ್ರದ್ಧಾ-ಸಬೂರಿ" ಯನ್ನು ಪ್ರಪಂಚದಾದ್ಯಂತ ಹರಡುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದ್ದಾರೆ  ಎಂದು ತಿಳಿಸಿದರು. ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆವರು ಮಾತನಾಡಿ ಡಾ.ಸತ್ಪತಿಯವರು ತಮ್ಮ ಹೆಸರು-ಕೀರ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಶ್ರೀ ಸಾಯಿಬಾಬಾರವರ ಸಂದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸತ್ಪತಿಯವರು ಸ್ವಾತಂತ್ರ್ಯ ದಿನಾಚರಣೆಯಂದು ನೀಡಿದ ಉಪನ್ಯಾಸ ಭಾಷಣವು ಬಹಳ ಉತ್ತೇಜನಕಾರಿಯಾಗಿತ್ತು ಎಂದು ಶ್ಲಾಘಿಸಿದರು. 

ಸಂಸತ್ ಸದಸ್ಯರಾದ ಶ್ರೀ.ಸದಾಶಿವ ಲೋಖಂಡೆ, ಮಾಜಿ ಮಹಾ ಪೌರರಾದ ಶ್ರೀ.ಕೈಲಾಸ್ ಕೋತೆ, ಶ್ರೀ.ದಿಲೀಪ್ ಸಂಕ್ಲೇಚಾ ರವರುಗಳು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು. ರಾಷ್ಟ್ರೀಯ ಸುರಕ್ಷತಾ ಸಲಹೆಗಾರರಾದ  ಶ್ರೀ.ಸುರೇಶ ರೆಡ್ಡಿ, ಅಸ್ಸಾಂ ರಾಜ್ಯದ ಮುಖ್ಯ ಮಾಹಿತಿ ಅಧಿಕಾರಿಯಾದ ಶ್ರೀ.ಎಸ್.ಎಸ್.ದಾಸ್, ಪುಣೆ ದಂಡಿನ ಮಖ್ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಸಂಜೀವ್ ಕುಮಾರ್, ಮಾಜಿ ಸಂಸತ್ ಸದಸ್ಯೆ ಶ್ರೀಮತಿ.ಅರ್ಚನಾ ನಾಯಕ್, ಭಾರತೀಯ ಆಡಳಿತಾತ್ಮಕ ಸೇವೆಯ ಹಿರಿಯ ಅಧಿಕಾರಿಗಳು, ತಿರುಪತಿ ವಿಶ್ವವಿದ್ಯಾಲಯದ ಡಾ.ರಘುನಾಥ ರೆಡ್ಡಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿದ ಗಣ್ಯರು, ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳು,  ಇಲಾಖೆಯ ಮುಖ್ಯಸ್ಥರು ಹಾಗೂ ಸಂಸ್ಥಾನದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ.ಶಿವಗಜೆಯವರು ವಹಿಸಿಕೊಂಡಿದ್ದರು. ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಂದನಾರ್ಪಣೆಯನ್ನು ಮಾಡಿದರು.  

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment