Monday, August 3, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನೂತನ ಔಷಧ ಖರೀದಿ ನೀತಿಯ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಆಸ್ಪತ್ರೆಗಳಲ್ಲಿ, ಔಷಧ ಖರೀದಿಸುವ ವಿಷಯದಲ್ಲಿ ಹಲವಾರು ವರ್ಷಗಳಿಂದ ಹಳೇ ಪದ್ಧತಿಯನ್ನೇ ಅನುಸರಿಸಲಾಗುತ್ತಿರುವ ಕಾರಣ ಔಷಧ ತಯಾರಿಕಾ ಸಂಸ್ಥೆಗಳು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ, ಔಷಧ ಮತ್ತು ವೈದ್ಯಕೀಯ ಶಸ್ತ್ರಚಿಕಿತ್ಸಾ ಉಪಕರಣಗಳ ಬೆಲೆಯನ್ನು ಕಡಿಮೆ ಮಾಡದೇ ಏಕರೂಪದ ಬೆಲೆಗೆ ಮಾತ್ರ ನೀಡುವುದಾಗಿ ತಿಳಿಸಿವೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಕಳೆದ ತಿಂಗಳ 31ನೇ ಜುಲೈ 2015, ಶುಕ್ರವಾರ ದಂದು ನಡೆಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಆದರೆ ಈ ವರ್ಷದಿಂದ ಔಷಧ ಮತ್ತು ವೈದ್ಯಕೀಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ಸರ್ಕಾರಿ ಟೆಂಡರ್ ಅನ್ನು ಕರೆದು ಅದರ ಮೂಲಕ ಖರೀದಿಸಲಾಗುವುದು ಎಂದು ಶ್ರೀ.ರಾಜೇಂದ್ರ ಜಾಧವ್ ರವರು ತಿಳಿಸಿದರು. ಸರ್ಕಾರಿ ಅಧಿನಿಯಮದ ಪ್ರಕಾರ ಔಷಧ ಖರೀದಿಗೆ ಷರತ್ತುಗಳನ್ನು ವಿಧಿಸಲಾಗುವುದು ಹಾಗೂ ಒಂದು  ನಿರ್ದಿಷ್ಟ ಕಾಲಾವಧಿಯನ್ನು ನಿಗದಿಪಡಿಸಲಾಗುವುದು.ಸರ್ಕಾರಿ ಆಸ್ಪತ್ರೆಗಳು ಔಷಧಗಳನ್ನು ಬೇರೆ ಔಷಧ ತಯಾರಿಕಾ ಸಂಸ್ಥೆಗಳಿಂದ ಖರೀದಿಸುವಾಗ ಔಷಧಗಳ ಗುಣಮಟ್ಟಕ್ಕೆ ಚ್ಯುತಿಯಾಗದಂತೆ ಅತಿ ಕಡಿಮೆ ಬೆಲೆಯನ್ನು ನೀಡುವ ಸ್ಥಳೀಯ ಸಂಸ್ಥೆಗಳ ದರದೊಂದಿಗೆ ತುಲನೆ ಮಾಡುತ್ತವೆ. ಹಾಗೆ ಮಾಡುವಾಗ ಸರ್ಕಾರಿ ಆಸ್ಪತ್ರೆಗಳು ಪರಿಣಿತ ವೈದ್ಯರ ಸಲಹೆ ಸೂಚನೆಗಳನ್ನು ಪರಿಗಣಿಸುತ್ತವೆ. ಈ ಪದ್ಧತಿಯನ್ನು ಅನುಸರಿಸುವುದರಿಂದ ಸ್ಥಳೀಯ ಔಷಧ ತಯಾರಿಕಾ ಸಂಸ್ಥೆಗಳ ಸರ್ವಾಧಿಕಾರಿ ಧೋರಣೆಯನ್ನುಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಆದ ಕಾರಣ, ಇನ್ನು ಮುಂದಿನ ದಿನಗಳಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ಕೂಡ ಇದೇ ಪದ್ಧತಿಯನ್ನು ಅನುಸರಿಸಲಿದೆ ಎಂದು ಶ್ರೀ.ಜಾಧವ್ ರವರು ಸುದ್ಧಿಗಾರರಿಗೆ ತಿಳಿಸಿದರು. 

ಒಂದು ವೇಳೆ ಬೇರೆ ಸ್ಥಳದಲ್ಲಿರುವ ಹೊಸ ಔಷಧ ತಯಾರಿಕಾ ಸಂಸ್ಥೆಯೊಂದು ಶ್ರೀ ಸಾಯಿಬಾಬಾ ಸಂಸ್ಥಾನದ ಆಸ್ಪತ್ರೆಗಳಿಗೆ ಔಷಧಗಳನ್ನು ವಿತರಿಸುವುದಾಗಿ ಮುಂದೆ ಬಂದಲ್ಲಿ, ಸಂಸ್ಥಾನವು ಆ ಸಂಸ್ಥೆಯ ಅಧಿಕಾರಿಗಳಿಗೆ ಆ ಸಂಸ್ಥೆಯ  ಕುರಿತಂತೆ ಪ್ರಾತ್ಯಕ್ಷಿಕೆಯನ್ನು ನೀಡುವಂತೆ ತಿಳಿಸುತ್ತದೆ. ಅಲ್ಲದೆ, ಆ ಸಂಸ್ಥೆಯು ಇತರ ಕಡೆಗಳಲ್ಲಿ ಅದೇ ಔಷಧಗಳನ್ನು ವಿತರಿಸಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ತಾಕೀತು ಮಾಡುತ್ತದೆ ಹಾಗೂ ಅದರ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಅಷ್ಟೇ ಅಲ್ಲದೆ ಆ ಔಷಧಗಳ ಬೆಲೆಯನ್ನು ಕುರಿತು ಕೂಡ ಅಧ್ಯಯನ ನಡೆಸುತ್ತದೆ. ಪ್ರಯೋಗಾಲಯದ ಉಪಕರಣಗಳ ತಯಾರಿಕಾ ಸಂಸ್ಥೆಗಳು ಸಂಸ್ಥಾನದ ಆಸ್ಪತ್ರೆಗಳು ತಮ್ಮ ಸಂಸ್ಥೆಯಿಂದಲೇ ಔಷಧಗಳನ್ನು ಕೂಡ ಖರೀದಿಸಬೇಕೇಂಬ ಅಧಿಸೂಚನೆಯನ್ನು ಹೊರಡಿಸಿದ್ದರು. ಹಾಗಾಗಿ, ಸಂಸ್ಥಾನವು ಈ ಹೊಸ ಸಂಸ್ಥೆಗಳಿಂದ ಔಷಧ ಖರೀದಿ ಮಾಡಲು ಪ್ರಾರಂಭಿಸಿದಲ್ಲಿ ಪ್ರಸ್ತುತ ಔಷಧಗಳನ್ನು ಪೂರೈಕೆ ಮಾಡುತ್ತಿರುವ ಸಂಸ್ಥೆಗಳ ಸರ್ವಾಧಿಕಾರಿ ದೋರಣೆಯನ್ನು ತೊಡೆದುಹಾಕಿ ಅವುಗಳು ಸಹ ಔಷಧಗಳ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸುತ್ತವೆ ಎಂದು ಶ್ರೀ. ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು.
 
ಆದುದರಿಂದ ಶ್ರೀ ಸಾಯಿಬಾಬಾ ಸಂಸ್ಥಾನವು ಸರ್ಕಾರಿ ಟೆಂಡರ್ ಗಳ ಮೂಲಕ ದೊರೆಯುವ ದರಕ್ಕಿಂತಲೂ ಅತ್ಯಂತ ಕಡಿಮೆ ದರದಲ್ಲಿ ದೇಶದ ಬೇರೆ ಭಾಗಗಳಲ್ಲಿರುವ ಔಷಧ ತಯಾರಿಕಾ ಸಂಸ್ಥೆಗಳಿಂದ ಖರೀದಿಸಲು ನಿರ್ಧರಿಸಿದೆ. 

ಸಂಸ್ಥಾನದ ಆಸ್ಪತ್ರೆಗಳಲ್ಲಿ ಈ ಹೊಸ ಟೆಂಡರ್ ಪ್ರಕ್ರಿಯೆಯನ್ನು ಅಳವಡಿಸುವ ಸಲುವಾಗಿ ಸಂಸ್ಥಾನದ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಕಾರ್ಮಿಕರು ಹಾಗೂ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳೂ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಮುಖ್ಯ ಅಕೌಂಟೆಂಟ್ ಆದ ಶ್ರೀ.ದಿಲೀಪ್ ಜಿರ್ಪೆ, ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ಔಷಧ  ಖರೀದಿ ವಿಭಾಗದ ವ್ಯವಸ್ಥಾಪಕರಾದ ಶ್ರೀ.ಅಭಲೇ ಕುನಾಲ್, ತಾಂತ್ರಿಕ ವಿಭಾಗದ ವ್ಯವಸ್ಥಾಪಕರಾದ ಶ್ರೀ.ವಿನೋದ್ ಕೋತೆ - ಇವರುಗಳ ಮೇಲ್ವಿಚಾರಣೆಯಲ್ಲಿ ವಿಶೇಷ ಮುತುವರ್ಜಿ ವರ್ಹಿಸಿ ತಮ್ಮ ಕಾರ್ಯ ನಿರ್ವಹಿಸಿರುತ್ತಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ : ಶ್ರೀಕಂಠ ಶರ್ಮ

No comments:

Post a Comment