ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಆಯೋಜಿಸಿದ್ದ ಗುರುಪೂರ್ಣಿಮೆ ಉತ್ಸವ 2015, ಕಳೆದ ತಿಂಗಳ ಗುರುವಾರ, 30ನೇ ಜುಲೈ 2015 ರಂದು ಅಮಿತೋತ್ಸಾಹದ ವಾತಾವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಯಿತು. ಮಹಾರಾಷ್ಟ್ರದ ಎಲ್ಲಾ ಭಾಗಗಳಿಂದ ಹಾಗೂ ಎಲ್ಲಾ ರಾಜ್ಯಗಳಿಂದ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಲ್ಲಕ್ಕಿಗಳನ್ನು ಹೊತ್ತುಕೊಂಡು ಪಾದಯಾತ್ರೆಯಲ್ಲಿ ಆಗಮಿಸಿದ್ದರು.
ಈ ವರ್ಷದ ಗುರುಪೂರ್ಣಿಮೆಯ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪಲ್ಲಕ್ಕಿಗಳು ಆಗಮಿಸಿದ್ದವು. ಶ್ರೀ ಸಾಯಿಬಾಬಾ ಸಂಸ್ಥಾನದ ಪಲ್ಲಕ್ಕಿ ಉತ್ಸವ ಸಮಿತಿಯು ಪುಣೆಯಿಂದ ಶಿರಡಿಗೆ ಆಗಮಿಸಿದ್ದ ಪಲ್ಲಕ್ಕಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ನೋಡಿಕೊಂಡಿದ್ದು ವಿಶೇಷವೆಂದು ಹೇಳಬೇಕು. ಪಲ್ಲಕ್ಕಿಗಳ ಜೊತೆಯಲ್ಲಿ ಆಗಮಿಸಿದ್ದ ವಾದ್ಯವೃಂದಗಳಿಂದ ಹೊರಹೊಮ್ಮಿದ ಕಿವಿಗಡಚಿಕ್ಕುವ ಸದ್ದು ಸಂಪೂರ್ಣ ಶಿರಡಿಯನ್ನು ಆವರಿಸಿಕೊಂಡು ಶಿರಡಿಯಲ್ಲಿ ಹಬ್ಬದ ವಾತಾವರಣ ನಿಮಾಣವಾಗಿತ್ತು.
ದೆಹಲಿಯ ಶ್ರೀ.ಗೌತಮ್ ಸಹಿನಿ ಮತ್ತು ಶ್ರೀ.ಅನುಪ್ ಜೋಶಿಯವರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು. ಮುಂಬೈನ ಸಾಯಿರಾಜ್ ಡೆಕೊರೇಟರ್ಸ್ ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು.
ಗುರುಪೂರ್ಣಿಮೆ ಉತ್ಸವದ ಮೊದಲನೇ ದಿನವಾದ 30ನೇ ಜುಲೈ 2015, ಗುರುವಾರ ದಂದು ಶ್ರೀ ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಕಾರ್ಯಕಾರಿ ಅಧಿಕಾರಿಗಳೂ ಅದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಸಾವಿರಾರು ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು.
ಮೆರವಣಿಗೆಯು ದ್ವಾರಕಾಮಾಯಿಗೆ ಆಗಮಿಸಿದ ನಂತರ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡುವ ಮೂಲಕ ಅಖಂಡ ಪಾರಾಯಣಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ನಂತರ, ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ರಾಜೇಂದ್ರ ಜಾಧವ್ ಮತ್ತು ಶ್ರೀಮತಿ.ಜಾಧವ್ ರವರುಗಳು ಶ್ರೀ ಸಾಯಿಬಾಬಾರವರ ಆರಾಧನಾ ವಿಧಿ (ಪವಿತ್ರ ಪಾದುಕೆ ಮತ್ತು ಸಮಾಧಿಯ ಪೂಜೆ) ಯನ್ನು ನೆರವೇರಿಸಿದರು.
ಮಧ್ಯಾನ್ಹ 12:30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಹರಿ ಭಕ್ತಪರಾಯಣ ಶ್ರೀ.ಮಾಧವರಾವ್ ಅಜಗವಾಣಕರ್ ರವರಿಂದ ಕೀರ್ತನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರದ್ಧಾ ಭಕ್ತಿ ಕಲ್ಯಾಣ್ ಸಂಸ್ಥಾನದ ವತಿಯಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾತ್ರಿ 8 ಗಂಟೆಗೆ "ಶ್ರೀ ಸಾಯಿ ಮಹಿಮಾ ಗುಣಗಾನ" ಎಂಬ ಹರಿಕಥೆಯನ್ನು ನಾಸಿಕ್ ನ ಹರಿ ಭಕ್ತಪರಾಯಣ ಪಂಡಿತ್ ದೇವರಾವಜಿ ಕುಲಮೇತೆಯವರಿಂದ ಏರ್ಪಡಿಸಲಾಗಿತ್ತು ಹಾಗೂ ರಾತ್ರಿ 9 ಗಂಟೆಗೆ ಸಮಾಧಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಹುಬ್ಬಳ್ಳಿಯ ಶ್ರೀ ಸಾಯಿ ದರ್ಬಾರ್ ಆರ್ಕೆಷ್ಟ್ರಾ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 9:15ಕ್ಕೆ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
30ನೇ ಜುಲೈ 2015, ಗುರುವಾರ ವು ಉತ್ಸವದ ಮೊದಲನೇ ದಿನವಾದ ಕಾರಣ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣ ಮಾಡಲು ಅನುವು ಮಾಡಿಕೊಡುವ ಸಲುವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು.
ಲಕ್ನೌ ನ ಶ್ರೀ.ವಿಕ್ರಮ್ ಕಪೂರ್, ಹೈದರಾಬಾದ್ ನ ಶ್ರೀಮತಿ.ಶಿವಾನಿ ದತ್ತಾ ಹಾಗೂ ಮುಂಬೈನ ಶ್ರೀ.ಅಧ್ಯಾನ್ ನಾರಂಗ್ ರವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಸಾಯಿ ಪ್ರಸಾದಾಲಯದಲ್ಲಿ ಉತ್ಸವದ ಮೊದಲ ದಿನದಂದು ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.
ಉತ್ಸವದ ಎರಡನೇ ಹಾಗೂ ಮುಖ್ಯ ದಿನವಾದ 31ನೇ ಜುಲೈ 2015, ಶುಕ್ರವಾರ ದಂದು ರಾಜ್ಯದ ಹಾಗೂ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಾಯಿ ಭಕ್ತರು ಬಾಬಾರವರ ಸಮಾಧಿಯ ದರ್ಶನಕ್ಕಾಗಿ ಆಗಮಿಸಿದ್ದರು.
ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಷಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರೇವತಿ ಜೋಷಿಯವರುಗಳು ಸಾಯಿಬಾಬಾರವರ ಪವಿತ್ರ ಪಾದುಕೆಗಳಿಗೆ ವಿಧ್ಯುಕ್ತವಾಗಿ ಪೂಜೆಯನ್ನು ನೆರವೇರಿಸಿದರು.
ದ್ವಾರಕಾಮಾಯಿಯಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವು ಸುಸಂಪನ್ನಗೊಂಡಿತು. ನಂತರ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಬಾಬಾರವರ ಭಾವಚಿತ್ರ ಮತ್ತು ವೀಣೆಯ ಜೊತೆಯಲ್ಲಿ ಮೆರವಣಿಗೆಯಲ್ಲಿ ದ್ವಾರಕಾಮಾಯಿಯಿಂದ ಗುರುಸ್ಥಾನದ ಮುಖಾಂತರವಾಗಿ ಸಮಾಧಿ ಮಂದಿರಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಈ ಮೆರವಣಿಗೆಯಲ್ಲಿ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ವಿನಯ್ ಜೋಷಿಯವರು ಪವಿತ್ರ ಸಾಯಿ ಸಚ್ಚರಿತ್ರೆಯನ್ನು, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಪ್ಪಾ ಸಾಹೇಬ್ ಶಿಂಧೆಯವರುಗಳು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡು ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ಶಿರಡಿಯ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ್ದ ಸಾವಿರಾರು ಸಾಯಿ ಭಕ್ತರು ಭಾಗವಹಿಸಿದ್ದರು.
ಸಂಜೆ 4 ರಿಂದ 6 ರವರೆಗೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿತ್ತು. ಸಂಜೆ 7.00 ಗಂಟೆಗೆ ಥಾಣೆಯ ಶ್ರೀ ರೇಣುಕಾ ಕಲಾಮಂಚ್ ನ ವತಿಯಿಂದ "ಭಜನಿ ಬರೂದ್" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾತ್ರಿ 8 ಗಂಟೆಗೆ ಕೇರಳದ ಶ್ರೀ.ತಿರುವೈಳವಾಮಲ ಗೋಪಿಯವರಿಂದ ಪಂಚವಾದ್ಯ ಸಂಗೀತವನ್ನು ಏರ್ಪಡಿಸಲಾಗಿತ್ತು ಹಾಗೂ ರಾತ್ರಿ 9 ಗಂಟೆಗೆ ಮಲೇಶಿಯಾದ ವಿ.ನೌಶಮಿ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಥೋತ್ಸವದಲ್ಲಿ ಸಾಯಿಭಕ್ತರು, ಶಿರಡಿಯ ಗ್ರಾಮಸ್ಥರು ಹಾಗೂ ಸಂಗೀತ-ವಾದ್ಯ ತಂಡಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾಧಿ ಮಂದಿರದ ಒಳಗಡೆಯಲ್ಲಿ ನಿರ್ಮಾಣ ಮಾಡಲಾಗಿರುವ ವೇದಿಕೆಯಲ್ಲಿ ರಾತ್ರಿ 11.00 ರಿಂದ ಮಾರನೇ ದಿನ ಬೆಳಿಗ್ಗೆ 5 ರವರೆಗೆ ವಿವಿಧ ಸಾಯಿ ಭಕ್ತ ಗಾಯಕ/ಗಾಯಕಿಯರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
31st July 2015, ಶುಕ್ರವಾರ ವು ಉತ್ಸವದ ಮುಖ್ಯ ದಿನವಾದ ಕಾರಣದಿಂದ ಸಮಾಧಿ ಮಂದಿರವನ್ನು ರಾತ್ರಿಯಿಡೀ ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು.
ಗುರುಪೂರ್ಣಿಮೆ ಉತ್ಸವದ ಶುಭ ಸಂದರ್ಭದಲ್ಲಿ ಐದು ಪ್ರಮುಖ ದೇವಾಲಯಗಳಾದ ಗುರುಸ್ಥಾನ ಮಂದಿರ, ಶನಿ ಮಂದಿರ, ಗಣಪತಿ ಮಂದಿರ, ಮಹಾದೇವ ಮಂದಿರ ಹಾಗೂ ನಂದಾದೀಪ ಮಂದಿರಗಳ ಮೇಲ್ಭಾಗಗಳಿಗೆ ಸಾಯಿ ಭಕ್ತ ಶ್ರೀ.ವಿಜಯ್ ಕುಮಾರ್ ರವರು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಚಿನ್ನದ ಲೇಪನ ಮಾಡಿದ ಹಾಳೆಗಳಿಂದ ಮುಚ್ಚಲಾಯಿತು. ನಂತರ ನಡೆದ ಸಮಾರಂಭದಲ್ಲಿ ಸಂಸ್ಥಾನದ ಅಧ್ಯಕ್ಷರಾದ ಶ್ರೀ ವಿನಯ್ ಜೋಷಿಯವರು ದಾನಿ ಶ್ರೀ.ವಿಜಯ್ ಕುಮಾರ್ ರವರನ್ನು ಸನ್ಮಾನಿಸಿದರು. ಅಲ್ಲದೇ ಗುರುಸ್ಥಾನ ಮಂದಿರದ ಕಳಶ ಪೂಜೆಯನ್ನೂ ಸಹ ನೆರವೇರಿಸಿದರು.
ಮೂಲ ಮರಾಠಿಯಿಂದ ಗುಜರಾತಿ ಭಾಷೆಗೆ ಭಾಷಾಂತರಿಸಲಾದ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಉತ್ತಮರಾವ್ ಗೋಂದ್ಕರ್, ಶ್ರೀ.ದಿಲೀಪ್ ಉಗಳೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್, ಅನುವಾದಕಿ ಶ್ರೀಮತಿ.ಹಿನೋಬೆನ್ ಮೆಹ್ತಾ, ದಾನಿಗಳಾದ ಶ್ರೀ.ರಾಕೇಶ್ ಪಟೇಲ್ ರವರುಗಳು ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಸಂಪೂರ್ಣ ಆಸ್ತಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ದಾನ ಮಾಡಿದ ಮಹಾದಾನಿ ಶ್ರೀಮತಿ.ಸುಧಾ ಕಿರಣ್ ರವರನ್ನು ಸಹ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಸನ್ಮಾನಿಸಿದರು.
ಮುಂಬೈನ ಶ್ರೀ.ಅಧ್ಯಾನ್ ನಾರಂಗ್, ಶ್ರೀ.ರಾಜಗೋಪಾಲ್ ನಟರಾಜನ್, ಶ್ರೀಮತಿ.ಗಿರಿಜಾ ದೊರೈಸ್ವಾಮಿ,
ಬೆಂಗಳೂರಿನ ಶ್ರೀ.ಮಾಕಂ ರಾಧಾಕೃಷ್ಣ ಅಮರನಾಥ್, ವಿಜಯವಾಡದ ಶ್ರೀಮತಿ.ರತ್ನ ಮಾಣಿಕ್ಯಂ,
ಮುಂಬೈನ ಶ್ರೀ.ನವೀನ ಸಿಂಗ್, ಬೆಂಗಳೂರಿನ ಶ್ರೀಮತಿ.ಭಾಗ್ಯವತಿ ಮತ್ತು ಶ್ರೀ ಚತುರ್ಭುಜ
ವರ್ಮ ಹಾಗೂ ಶ್ರೀ.ಗೌರವ್ ಭಾರದ್ವಾಜ್ , ಸಿಕಂದರಾಬಾದ್ ನ ಶ್ರೀ.ಕೆ.ರಾಮಮೂರ್ತಿ ಮತ್ತು
ಶ್ರೀಮತಿ.ಮಾಧವಿ, ತಿರುಪತಿಯ ಶ್ರೀ.ಭಟ್ಯಾಲಾ ಚಂಗಲ ರಾಯಡು, ಹೈದರಾಬಾದ್ ನ ಶ್ರೀ.ಸುರೇಶ
ರೆಡ್ಡಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಅಹಮದಾಬಾದ್ ನ ಶ್ರೀಮತಿ.ರಾಜಶ್ರೀ ಪಟೇಲ್,
ಭೂಪಾಲ್ ನ ಶ್ರೀ.ದೇವ್ ಸುಮನ್ ಶರ್ಮ, ಹೈದರಾಬಾದ್ ನ ಶ್ರೀಮತಿ.ಕಲಾ ಗೋಣಿ ವಾಸು, ದೆಹಲಿಯ
ಶ್ರೀ.ದೀಪಕ್ ಸೇರು, ಹೈದರಾಬಾದ್ ನ ಶ್ರೀಮತಿ.ಸುಶೀಲಾದೇವಿ ಜಿ.ಮಸಾನಿ ಗೋಂದಿಯಾ ಮತ್ತು
ಶ್ರೀಮತಿ.ಸಹನಾರವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಸಾಯಿ ಪ್ರಸಾದಾಲಯದಲ್ಲಿ ಉತ್ಸವದ ಎರಡನೇ ದಿನದಂದು ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.ಬೆಂಗಳೂರಿನ ಶ್ರೀ.ಶೈಲೇಶ್ ಪಟೇಲ್ ರವರು ಗುರುಪೂರ್ಣಿಮೆಗೆಂದೇ ವಿಶೇಷವಾಗಿ ಕಳುಹಿಸಿದ್ದ ಸಂಚಾರಿ ವಾಹನದ ಸಹಾಯದಿಂದ ಪ್ರತಿಯೊಬ್ಬ ಸಾಯಿ ಭಕ್ತರಿಗೂ ಚಪಾತಿ ದೊರೆಯುವಂತಾಯಿತು. ಸಾಯಿ ಪ್ರಸಾದಾಲಯದಲ್ಲಿ ಪ್ರತಿ ಗಂಟೆಗೆ ಸರಿ ಸುಮಾರು 8000-9000 ಚಪಾತಿಗಳನ್ನು ಸಿದ್ಧಪಡಿಸಲಾಗುತ್ತಿತ್ತು.
30ನೇ ಜುಲೈ 2015, ಗುರುವಾರ ದಂದು ಪ್ರಾರಂಭವಾದ ಗುರುಪೂರ್ಣಿಮೆ ಉತ್ಸವವು 1ನೇ ಆಗಸ್ಟ್ 2015, ಶನಿವಾರ ದಂದು ಸಮಾಧಿ ಮಂದಿರದಲ್ಲಿ ಪರ್ಬಾನಿಯ ಹರಿ ಭಕ್ತ ಪರಾಯಣ ಶ್ರೀ.ಮಾಧವರಾವ್ ಅಜಗಾವಣಕರ್ ರವರ ಕಲ್ಯಾಚ ಕೀರ್ತನೆ ಹಾಗೂ ಮೊಸರಿನ ಗಡಿಗೆಯನ್ನು ಒಡೆಯುವುದರೊಂದಿಗೆ ಸುಸಂಪನ್ನಗೊಂಡಿತು.
ಅಂದು ಬೆಳಿಗ್ಗೆ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆಯವರು ವಿಧ್ಯುಕ್ತವಾಗಿ ಪಾದ ಪೂಜೆಯನ್ನು ನೆರವೇರಿಸಿದರು.
ಉತ್ಸವದ ಕೊನೆಯ ದಿನದ ಅಂಗವಾಗಿ ಅಂದು ಬೆಳಿಗ್ಗೆ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ಗುರುಸ್ಥಾನ ಮಂದಿರದಲ್ಲಿ ರುದ್ರಾಭಿಷೇಕ ಪೂಜೆಯನ್ನು ನೆರವೇರಿಸಿದರು.
ಶ್ರೀ ಸಾಯಿಬಾಬಾ ಸಂಸ್ಥಾನವು ಉತ್ಸವದ ಸಂದರ್ಭದಲ್ಲಿ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಿದ ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ತಂಡದ ಸದಸ್ಯರನ್ನು ಸನ್ಮಾನಿಸಿತು. ಅಲ್ಲದೆ, ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲು ದೇಣಿಗೆಯನ್ನು ನೀಡಿದ ಶ್ರೀ.ಗೌತಮ್ ಸಹನಿ ಮತ್ತು ಶ್ರೀ.ಅನುಪ್ ಜೋಷಿಯವರನ್ನು ಸಹ ಸನ್ಮಾನಿಸಲಾಯಿತು.
ಉತ್ಸವದ ಕೊನೆಯ ದಿನದಂದು ಹೈದರಾಬಾದ್ ನ ಶ್ರೀಮತಿ.ಸಹನಾರವರು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಸಾಯಿ ಪ್ರಸಾದಾಲಯದಲ್ಲಿ ಎಲ್ಲ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಉತ್ಸವದ ಮೂರು ದಿನಗಳಲ್ಲಿ ಸುಮಾರು 2,00,000 ಲಕ್ಷ ಸಾಯಿ ಭಕ್ತರು ಉಚಿತ ಪ್ರಸಾದ ಭೋಜನವನ್ನು ಸ್ವೀಕರಿಸಿದರು.
ದರ್ಶನದ ಸರತಿ ಸಾಲಿನಲ್ಲಿ ಸುಮಾರು 2,50,000 ಕ್ಕೂ ಹೆಚ್ಚು ಲಾಡು ಪ್ರಸಾದದ ಪೊಟ್ಟಣಗಳನ್ನು ಸಾಯಿ ಭಕ್ತರಿಗೆ ವಿತರಿಸಲಾಯಿತು. ಅಲ್ಲದೆ, ಸಾವಿರಾರು ಭಕ್ತರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು. ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆ ಮಾಡಿಕೊಂಡು ಶಿರಡಿಗೆ ಆಗಮಿಸಿದ್ದ ಪಾದಯಾತ್ರಿಗಳಿಗೆ ಸಾಯಿ ಧರ್ಮಶಾಲೆಯಲ್ಲಿ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಉತ್ಸವದ ಕೊನೆಯ ದಿನದಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಯಿ ಭಕ್ತರಿಂದ ಅಭೂತಪೂರ್ವ ಪ್ರಶಂಸೆ ದೊರೆಯಿತು. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರೀ.ಸುಮಿತ್ ಪೋಂಡಾರವರಿಂದ ಶ್ರೀ ಸಾಯಿ ಅಮೃತಕಥಾವನ್ನು ಏರ್ಪಡಿಸಲಾಗಿತ್ತು. ರಾತ್ರಿ 8 ಗಂಟೆಗೆ ನವದೆಹಲಿಯ ಶ್ರೀಮತಿ.ವನಿತಾ ಬಜಾಜ್ ರವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮತ್ತು ರಾತ್ರಿ 9 ಗಂಟೆಗೆ ನಾಸಿಕ್ ನ ಶ್ರೀ.ಪಂಢರಿನಾಥ್ ರವ್ಜಿ ಜಾಧವ್ ರವರಿಂದ ಅಭಂಗ್ ಮತ್ತು ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಭಕ್ತರಿಂದ ಶಿರಡಿಯು ತುಂಬಿ ತುಳುಕಾಡುತ್ತಿದ್ದಾಗ್ಯೂ ಸಹ ಶ್ರೀ ಸಾಯಿಬಾಬಾ ಸಂಸ್ಥಾನವು ಮುತುವರ್ಜಿ ವಹಿಸಿ ಮಾಡಿದ್ದ ಉತ್ತಮ ವ್ಯವಸ್ಥೆಗೆ ಸಾಯಿ ಭಕ್ತರೆಲ್ಲರೂ ಸಂಸ್ಥಾನವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು
ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment