Wednesday, June 30, 2010

ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ಗುರುಸ್ಥಾನ - ಕೃಪೆ - ಸಾಯಿಅಮೃತಧಾರಾ.ಕಾಂ 

"ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಬಹಳ ಪ್ರಮುಖವಾದುದು. ಗುರುವಿನಲ್ಲಿ ಸಂಪೂರ್ಣ ಶರಣಾಗತನಾದರೆ ಮಾತ್ರ ಮಾನವನು ತಾನು ಬಯಸಿದ್ದನ್ನು ಜೀವನದಲ್ಲಿ ಪಡೆಯಬಹುದು. ಭಕ್ತನಿಗೆ ಸಂಪೂರ್ಣ ಶಕ್ತಿಯನ್ನು ದಯಪಾಲಿಸುವವನು ಗುರು ಒಬ್ಬನೇ. ಗುರುವಿನಲ್ಲಿ ಭಕ್ತಿಯಿಡುವುದು ದೇವರಲ್ಲಿ ಭಕ್ತಿಯಿಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದಿದೆ. ಆದುದರಿಂದ ಗುರುವೇ ಶ್ರೇಷ್ಠನು" ಎಂದು ಶಿರಡಿ ಸಾಯಿಬಾಬಾರವರು ತಿಳಿಸಿದ್ದಾರೆ. 

ಈ ಮೇಲಿನ ಸಾಯಿಯವರ ಮಾತುಗಳಿಂದ ಗುರುಸ್ಥಾನದ ಮಹತ್ವವು ತಿಳಿಯುತ್ತದೆ. ಇಂದಿನ ಗುರುಸ್ಥಾನವಿರುವ ಜಾಗದಲ್ಲಿ ಸಾಯಿಬಾಬಾರವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು, ಮಾತ್ರವಲ್ಲ, ಗುರುಸ್ಥಾನದ ಬೇವಿನ ಮರವಿರುವ ಜಾಗದ ಕೆಳಗಡೆ  ತಮ್ಮ ಗುರುವಿನ ಸಮಾಧಿಯಿರುವುದೆಂದು ಸಾಯಿಬಾಬಾರವರು ಹೇಳುತ್ತಿದ್ದರು. ಆದುದರಿಂದ, ಸಾಯಿಭಕ್ತರಿಗೆ ಗುರುಸ್ಥಾನವು ತಪ್ಪದೆ ನೋಡಲೇಬೇಕಾದ ಒಂದು ಸ್ಥಳವಾಗಿರುತ್ತದೆ. ಒಬ್ಬ ವೃದ್ದ ಮಹಿಳೆಯ ಪ್ರಕಾರ ಗುರುಸ್ಥಾನದ ಬೇವಿನ ಮರದ ಕೆಳಗಡೆಯಲ್ಲಿ ದ್ವಾರಕಾಮಾಯಿಗೆ ಹೋಗಲು ಒಂದು ಸುರಂಗ ಮಾರ್ಗವಿದೆ ಎಂದು ಹೇಳಲಾಗುತ್ತದೆ.






ಸಾಯಿಬಾಬಾರವರು ತಮ್ಮ ಭಕ್ತರಿಗೊಸ್ಕರ ಮೊಟ್ಟ ಮೊದಲ ಬಾರಿಗೆ ಶಿರಡಿಯಲ್ಲಿ ಬೇವಿನ ಮರದ ಕೆಳಗಡೆ ಹದಿನಾರು ವರ್ಷದ ಯುವಕನಾಗಿದ್ದಾಗ ಕಾಣಿಸಿಕೊಂಡರು. ಈ ಬಾಲಸಾಧುವನ್ನು ನೋಡಿ ಶಿರಡಿಯ ಗ್ರಾಮಸ್ಥರೆಲ್ಲ ಆಶ್ಚರ್ಯಚಕಿತರಾದರು. ಆ ಹುಡುಗನು ಯಾರ ಮನೆಯ ಬಾಗಿಲಿಗೂ ಹೋಗುತ್ತಿರಲಿಲ್ಲ. ಮಳೆ, ಚಳಿ, ಬಿಸಿಲು ಯಾವುದಕ್ಕೂ ಜಗ್ಗದೆ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾಗಿದ್ದನು. ಒಂದು ದಿನ ಒಬ್ಬ ಭಕ್ತನ ಮೈಮೇಲೆ ಖಂಡೋಬ ದೇವರು ಬಂದಾಗ ಊರಿನ ಜನರು ಅವನನ್ನು ಈ ಹುಡುಗನ ಬಗ್ಗೆ ಪ್ರಶ್ನಿಸಲಾಗಿ ಖಂಡೋಬ ದೇವರು ಒಂದು ಹಾರೆಯನ್ನು ತಂದು ತಾನು ತೋರಿಸಿದ ಸ್ಥಳದಲ್ಲಿ ಅಗೆಯಲು ಹೇಳಿದನು. ಖಂಡೋಬ ಹೇಳಿದಂತೆ ಮಾಡಲಾಯಿತು. ನೆಲವನ್ನು ಅಗೆದಾಗ ಅಲ್ಲಿ ಒಂದು ನೆಲಮಾಳಿಗೆಯು ಕಾಣಿಸಿತು ಮತ್ತು ಅಲ್ಲಿ 4 ಉರಿಯುತ್ತಿರುವ ದೀಪಗಳನ್ನು ಕಂಡರು. ಅಲ್ಲದೇ, ನೆಲಮಾಳಿಗೆಯಲ್ಲಿ ಹಸುವಿನ ಬಾಯಿಯನ್ನು ಹೋಲುವ ವಸ್ತುಗಳು, ಮರದ ಹಲಗೆಗಳು ಮತ್ತು ಹಾರಗಳನ್ನು ಕಂಡರು. ಖಂಡೋಬ ದೇವರು ಈ ಹುಡುಗನು ಇಲ್ಲಿ 12 ವರ್ಷಗಳ ಕಾಲ ತಪಸ್ಸನ್ನು ಮಾಡಿರುವನು ಎಂದು ಹೇಳಿದರು. ಆಗ ಗ್ರಾಮಸ್ಥರು ಹುಡುಗನನ್ನು ಈ ಬಗ್ಗೆ ಪ್ರಶ್ನಿಸಲಾಗಿ ಹುಡುಗನು ನೇರ ಉತ್ತರವನ್ನು ನೀಡದೆ ಆ ಸ್ಥಳವು ತನ್ನ ಗುರುವಿನ ಸ್ಥಾನವೆಂದು ಮತ್ತು ಆ ಜಾಗವನ್ನು ಜೋಪಾನವಾಗಿ ಕಾಪಾಡಬೇಕೆಂದು ಕೇಳಿಕೊಂಡನು (ಸಾಯಿ ಸಚ್ಚರಿತ್ರೆ ಅಧ್ಯಾಯ 4). ಯಾರಿಗೂ ಸಾಯಿಬಾಬಾರವರ ಗುರು ಯಾರೆಂದು ತಿಳಿದಿರಲಿಲ್ಲ ಮತ್ತು ಈಗಲೂ ಕೂಡ ತಿಳಿದಿಲ್ಲ. ಸಾಯಿಬಾಬಾರವರು ಶಿರಡಿಯಲ್ಲಿ ಮೊದಲು ಕಾಣಿಸಿಕೊಂಡ ಗುರುತಿಗಾಗಿ ಭಕ್ತರು ಈ ಸ್ಥಳದಲ್ಲಿ ಪವಿತ್ರ ಪಾದುಕೆಗಳನ್ನು ಪ್ರತಿಷ್ಠಾಪಿಸಿದ್ದಾರೆ.

1920 ರಲ್ಲಿ ಬೇವಿನ ಮರದ ಪಕ್ಕದಲ್ಲಿ ಪಶ್ಚಿಮ ದಿಕ್ಕಿನಲ್ಲಿದ್ದ ಒಂದು ಸಣ್ಣ ಮಂದಿರವಾಗಿತ್ತು. ಶಕೆ 1863 ರ ಆಶ್ವಯುಜ ಶುದ್ದ ದಶಮಿಯಂದು (30ನೇ ಸೆಪ್ಟೆಂಬರ್ 1941) ಅದೇ ಸ್ಥಳದಲ್ಲಿ ಒಂದು ಸುಂದರ ಮಂದಿರದ ನಿರ್ಮಾಣವಾಯಿತು. ಪಶ್ಚಿಮ ದಿಕ್ಕಿಗೆ ಮುಖ ಮಾಡಿಕೊಂಡಿದ್ದ ಈ ಮಂದಿರವನ್ನು ಸುಮಾರು 1 ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿತ್ತು. ಈ ಮಂದಿರವು ಹಿತ್ತಾಳೆಯಲ್ಲಿ ಸುಂದರ ನವಿಲು ಮತ್ತು ಹೂವುಗಳ ಕೆತ್ತನೆಯನ್ನು ಮತ್ತು ಉತ್ತಮವಾದ ಬಣ್ಣದಿಂದ ಕೂಡಿದ್ದು ಮಂದಿರದ ಮೇಲೆ ಸಣ್ಣ ಕಲಶವನ್ನು ಕೂಡ ಹೊಂದಿತ್ತು.

1974 ಅಲ್ಲಿ ಈ ಸಣ್ಣ ಮಂದಿರವನ್ನು ಒಂದು ದೊಡ್ಡದಾದ ಮಂದಿರದ ಒಳಗೆ ಇರಿಸಲಾಯಿತು. ಸಣ್ಣ ಮಂದಿರದ ಪಕ್ಕದಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಎಡಭಾಗದಲ್ಲಿ ಪವಿತ್ರ ಬೇವಿನ ಮರವಿತ್ತು. ಬೇವಿನ ಮರದ ಎದುರುಗದೆಯಿದ್ದ ಸಣ್ಣ ಪೀಠದ ಮೇಲೆ ಬಾಬಾರವರ ಅಮೃತಶಿಲೆಯ ಪವಿತ್ರ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿತ್ತು.

ಏಪ್ರಿಲ್ 2007 ರ ಹೊತ್ತಿಗೆ ಬೇವಿನ ಮರವು ಒಣಗಲು ಪ್ರಾರಂಭವಾಯಿತು. ಆಗ ಶಿರಡಿ ಸಾಯಿಬಾಬಾ ಸಂಸ್ಥಾನದವರು ತೋಟಗಾರಿಕೆ ಇಲಾಖೆಯ ಸಹಾಯವನ್ನು ಕೋರಿದರು. ಪವಿತ್ರ ಬೇವಿನ ಮರವನ್ನು ಉಳಿಸುವ ಸಲುವಾಗಿ ಹಳೆಯ ಗುರುಸ್ಥಾನವನ್ನು ಕೆಡವಲಾಯಿತು. ಗುರುಪೂರ್ಣಿಮೆಯು ಬಹಳ ಹತ್ತಿರದಲ್ಲಿದ್ದುದರಿಂದ ಈಗಿರುವ ಗುರುಸ್ಥಾನವನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು. ಸಾಯಿಬಾಬಾ ಸಂಸ್ಥಾನದ ಇಂತಹ ಒಳ್ಳೆಯ ಕೆಲಸದಿಂದ ಪವಿತ್ರ ಬೇವಿನ ಮರವು ಮತ್ತೆ ಚಿಗುರಿದೆ.


ಸಣ್ಣ ಧುನಿ ಮಾ: 


ಗುರುಸ್ಥಾನದ ಮುಂಭಾಗದಲ್ಲಿ ಸಾಯಿಭಕ್ತರು ಪ್ರತಿ ಗುರುವಾರ ಮತ್ತು ಶುಕ್ರವಾರ ಧೂಪವನ್ನು ಹಾಕಲು ಅನುಕೂಲವಾಗುವಂತೆ ಸಾಯಿಬಾಬಾ ಸಂಸ್ಥಾನದವರು ಸಣ್ಣ ಧುನಿಯ ವ್ಯವಸ್ಥೆಯನ್ನು ಮಾಡಿದ್ದಾರೆ.


ಸಾಯಿಬಾಬಾರವರು ಗುರುಸ್ಥಾನದ ಮುಂದೆ ಯಾರು ಧೂಪವನ್ನು ಪ್ರತಿ ಗುರುವಾರ ಮತ್ತು ಶುಕ್ರವಾರಗಳಂದು ಉರಿಸುತ್ತಾರೋ ಅವರಿಗೆ ದೇವರು (ಅಲ್ಲಾ) ಒಳ್ಳೆಯದು ಮಾಡುತ್ತಾನೆ ಎನ್ನುತ್ತಿದ್ದರು. ಮೊದಲು ಇಲ್ಲಿ ದ್ವಾರಕಾಮಾಯಿಯಿಂದ ತಂದ ಪವಿತ್ರ ಅಗ್ನಿಯಿಂದ ನಿತ್ಯ ಧೂಪ ಹಚ್ಚುತ್ತಿದ್ದರು. ಆದರೆ ಈಗ ಗುರುವಾರ ಮತ್ತು ಶುಕ್ರವಾರಗಳಂದು ಮಾತ್ರ ಈ ರೀತಿ ವ್ಯವಸ್ಥೆಯನ್ನು ಸಂಸ್ಥಾನದವರು ಮಾಡಿರುತ್ತಾರೆ. 




ಪವಿತ್ರ ಬೇವಿನ ಮರ: 

ಹೇಗೆ ಹಿಂದೂಗಳಲ್ಲಿ ಅಶ್ವತ ವೃಕ್ಷ ಮತ್ತು ಔದುಂಬರ ವೃಕ್ಷಗಳು ಶ್ರೇಷ್ಠ ಎಂಬ ನಂಬಿಕೆಯಿದೆಯೋ ಅದೇ ರೀತಿ ಬಾಬಾರವರು ಈ ಬೇವಿನ ಮರ ಶ್ರೇಷ್ಠ ಎಂದು ತಿಳಿದಿದ್ದರು. ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಈ ಪವಿತ್ರ ಬೇವಿನ ಮರವಿತ್ತು. ಸಾಯಿ ಮಹಿಮಾ ಸ್ತ್ರೋತ್ರದಲ್ಲಿ ಉಪಾಸಿನಿ ಬಾಬಾರವರು ಈ ಬೇವಿನ ಮರವು ಕಲ್ಪವೃಕ್ಷಕ್ಕೂ ಮಿಗಿಲಾದುದು ಎಂದು ವರ್ಣಿಸಿದ್ದಾರೆ. ಈ ಬೇವಿನ ಮರದ ಎಲೆಗಳು ಬಹಳ ಸಿಹಿಯಾಗಿವೆ. ಆದ್ದರಿಂದ ಸಾಯಿಭಕ್ತರು ಈ ಪವಿತ್ರ ಬೇವಿನ ಮರವನ್ನು ಪೂಜಿಸುತ್ತಾರೆ ಮತ್ತು ಇದರ ಎಲೆಗಳನ್ನು ತಿನ್ನುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. 


ಶಿರಡಿಯಲ್ಲಿನ ಗುರುಸ್ಥಾನದ ವಿಶೇಷವೆಂದರೆ ಅಲ್ಲಿರುವ ಬಹು ದೊಡ್ಡದಾದ ಬೇವಿನ ಮರ ಮತ್ತು ಅದರ ಎಲೆಗಳು. ಏಕೆಂದರೆ ಬೇವಿನ ಮರಕ್ಕೆ ಎಲ್ಲರಿಗೂ ತಿಳಿದಿರುವಂತೆ ಔಷಧೀಯ ಗುಣಗಳಿದ್ದು ಅನೇಕ ಖಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಆದರೆ ಶಿರಡಿಯಲ್ಲಿನ ಈ ಬೇವಿನ ಮರದ ವಿಶೇಷವೇನೆಂದರೆ ಅದರ ಎಲೆಗಳು ಸಿಹಿಯಾಗಿದ್ದುದು. ಸಾಮಾನ್ಯವಾಗಿ ಬೇವಿನ ಮರದ ಎಲೆಗಳು ಕಹಿಯಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಸಾಯಿಬಾಬಾರವರ ಆಶೀರ್ವಾದದಿಂದ ಗುರುಸ್ಥಾನದ ಬೇವಿನ ಮರದ ಎಲೆಗಳು ಬಹಳ ಸಿಹಿಯಾಗಿವೆ. ಈ ಸಂಗತಿ ಇಲ್ಲಿನ ಬೇವಿನ ಮರದ ಪವಿತ್ರತೆಯನ್ನು ತೋರಿಸುತ್ತದೆ.

ಈ ಬೇವಿನ ಮರಕ್ಕೆ ಸಂಬಂಧಿಸಿದ ಘಟನೆಯೊಂದು ಸಾಯಿಬಾಬಾರವರು ಎಷ್ಟು ಕಾರ್ಯಶೀಲರು ಮತ್ತು ವಿನಯವಂತರು ಎಂಬುದನ್ನು ತೋರಿಸುತ್ತದೆ. 1900ನೇ ಇಸವಿಯಲ್ಲಿ ಸಾಯಿಬಾಬಾರವರು ದ್ವಾರಕಾಮಾಯಿಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಸಾಥೆವಾಡಾದ ನಿರ್ಮಾಣ ಕಾರ್ಯಕ್ಕೆ ಬೇವಿನ ಮರದ ಒಂದು ಕೊಂಬೆಯು ಅಡ್ಡಲಾಗಿದ್ದು ಅದರಿಂದ ಬಹಳ ತೊಂದರೆಯಾಗುತ್ತಿತ್ತು. ಆದರೆ, ಸಾಯಿಬಾಬಾರವರು ಅಲ್ಲಿ ಕುಳಿತು ಆ ಸ್ಥಳವು ಪವಿತ್ರವಾಗಿದ್ದರಿಂದ ಆ ಕೊಂಬೆಗಳನ್ನು ಕಡಿಯಲು ಯಾರು ಮುಂದಾಗಲಿಲ್ಲ. ಅಷ್ಟೇ ಅಲ್ಲದೇ, ಹಿಂದೆ ಒಮ್ಮೆ ಒಬ್ಬ ಹುಡುಗನು ಮರದ ಕೊಂಬೆಗಳನ್ನು ಕಡಿಯಲು ಮರವನ್ನೇರಿದಾಗ, ಅದರ ಮೇಲಿನಿಂದ ಬಿದ್ದು ಮರಣ ಹೊಂದಿದ್ದನು. ಆಗ ಸಾಯಿಬಾಬಾರವರು ಮಸೀದಿಯಿಂದಲೇ ಶಂಖವನ್ನು ಜೋರಾಗಿ ಊದಿ ಗುರುಸ್ಥಾನದ ಬಳಿ ಹುಡುಗನಿಗೆ ತೊಂದರೆ ಆಗುತ್ತಿರುವ ಸೂಚನೆಯನ್ನು ನೀಡಿದ್ದರು. ಈ ಮೇಲಿನ ಎರಡು ಕಾರಣದಿಂದ ಯಾರು ಮರದ ಕೊಂಬೆಗಳನ್ನು ಕಡಿಯಲು ಸಾಹಸ ಮಾಡಲಿಲ್ಲ. ಅವರೆಲ್ಲ ಸಾಯಿಬಾಬಾರವರ ಬಳಿ ಬಂದು ಸಾಯಿಬಾಬಾರವರ ಸಲಹೆಯನ್ನು ಕೇಳಲಾಗಿ ಅವರು "ಕೆಲಸಕ್ಕೆ ಎಷ್ಟು ಭಾಗವು ತೊಂದರೆ ಕೊಡುತ್ತಿದೆಯೋ ಅಷ್ಟು ಭಾಗವನ್ನು ಯಾವ ಮುಲಾಜಿಲ್ಲದೆ ಕಡಿಯಿರಿ. ನಮ್ಮ ಮಗುವೇ ಗರ್ಭದಲ್ಲಿ ಅಡ್ಡವಾಗಿದ್ದು ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಕೂಡ ನಿರ್ದಾಕ್ಷಿಣ್ಯವಾಗಿ ಕಡಿಯಬೇಕು" ಎಂದು ಸಲಹೆ ನೀಡಿದರು. ಸಾಯಿಬಾಬಾರವರು ಹಾಗೆ ಹೇಳಿದ್ದರೂ ಕೂಡ ಯಾರು ಕೂಡ ಆ ಕೊಂಬೆಗಳನ್ನು ಕಡಿಯಲು ಮುಂದೆ ಬರಲಿಲ್ಲ. ಆಗ ಸಾಯಿಬಾಬಾರವರೇ ಸ್ವತಃ ಮರವನ್ನೇರಿ ಆ ತೊಂದರೆ ನೀಡುತ್ತಿದ್ದ ಕೊಂಬೆಗಳನ್ನು ಕಡಿದರು.


1980 ರಿಂದ ಗುರುಸ್ಥಾನದ ಬೇವಿನ ಮರಕ್ಕೆ 108 ಪ್ರದಕ್ಷಿಣೆ ಮಾಡುವ ಪರಿಪಾಠವನ್ನು ಸಾಯಿಭಕ್ತರು ಇಟ್ಟುಕೊಂಡಿದ್ದಾರೆ. ಕೆಲವರು ಬೆಳಗಿನ ಜಾವ, ಮತ್ತೆ ಕೆಲವರು ರಾತ್ರಿ ವೇಳೆ ಗುರುಸ್ಥಾನದ ಪ್ರದಕ್ಷಿಣೆ ಮಾಡುತ್ತಾರೆ. ಮತ್ತೆ ಕೆಲವು ಭಕ್ತರು ಅಲ್ಲಿ ಸುಮ್ಮನೆ ಒಂದೆಡೆ ಕುಳಿತು ಧ್ಯಾನ ಮಾಡುತ್ತಾರೆ. ಸಾಯಿಬಾಬಾರವರು ಗುರುಸ್ಥಾನದ ಬೇವಿನ ಮರದ ನೆರಳಿನಲ್ಲಿ ಕುಳಿತ ಭಕ್ತನ ಕಷ್ಟಗಳನ್ನೆಲ್ಲ ತಾನು ಭರಿಸುವುದಾಗಿ ಹೇಳಿರುತ್ತಾರೆ. 


ಸಾಯಿಬಾಬಾರವರ ವಿಗ್ರಹ:

ಈ ಅಮೃತಶಿಲೆಯ ವಿಗ್ರಹವು 3 ಅಡಿ ಎತ್ತರವಿದ್ದು "ಕಲ್ಲಿನ ಮೇಲೆ ಕುಳಿತ ಬಾಬಾ" ವಿಗ್ರಹವಾಗಿರುತ್ತದೆ. 1974 ರ ಗುರುಪೂರ್ಣಿಮೆಯ ದಿವಸ ಈ ವಿಗ್ರಹದ ಪ್ರತಿಷ್ಟಾಪನೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ಮುಂಬೈನ ಅನನ್ಯ ಸಾಯಿಭಕ್ತರಾದ ಶ್ರೀಯುತ. ವೈ.ಡಿ. ದಾವೆಯವರು ಅದನ್ನು ಸಂಸ್ಥಾನಕ್ಕೆ ದಾನವಾಗಿ ನೀಡಿದ್ದು ಈ ವಿಗ್ರಹವನ್ನು ಸಮಾಧಿ ಮಂದಿರದ ವಿಗ್ರಹವನ್ನು ಕೆತ್ತಿದ ಶ್ರೀಯುತ ಬಿ.ವಿ.ತಾಲೀಮ್ ರವರ ಮಗನಾದ ಶ್ರೀ.ಹರೀಶ್ ಬಾಲಾಜಿ ತಾಲೀಮ್ ರವರು ಕೆತ್ತಿದ್ದಾರೆ.  ಇದರ ಉದ್ಘಾಟನೆಯನ್ನು ಶ್ರೇಷ್ಠ ಸಂತರಾದ ಪುಣೆಯ ಶ್ರೀ.ಪರ್ಣೆಕರ್ ಮಹಾರಾಜ ಅವರು ಮಾಡಿದ್ದಾರೆ.


ಏಪ್ರಿಲ್ 2007 ರ ಹೊತ್ತಿಗೆ ಬೇವಿನ ಮರವು ಒಣಗಲು ಪ್ರಾರಂಭವಾಯಿತು. ಆಗ ಶಿರಡಿ ಸಾಯಿಬಾಬಾ ಸಂಸ್ಥಾನದವರು ತೋಟಗಾರಿಕೆ ಇಲಾಖೆಯ ಸಹಾಯವನ್ನು ಕೋರಿದರು. ಪವಿತ್ರ ಬೇವಿನ ಮರವನ್ನು ಉಳಿಸುವ ಸಲುವಾಗಿ ಹಳೆಯ ಗುರುಸ್ಥಾನವನ್ನು ಕೆಡವಲಾಯಿತು. ಗುರುಪೂರ್ಣಿಮೆಯು ಬಹಳ ಹತ್ತಿರದಲ್ಲಿದ್ದುದರಿಂದ ಈಗಿರುವ ಗುರುಸ್ಥಾನವನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು. ಆಗ ಬಾಬಾರವರ ವಿಗ್ರಹವನ್ನು ಗುರುಸ್ಥಾನದಿಂದ ಸಾಯಿಬಾಬಾ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. 


ಸಾಯಿಬಾಬಾರವರ ಚಿತ್ರಪಟ: 

ಬಾಬಾರವರ ಕಾಲದಲ್ಲೇ ಈ ಸುಂದರ ಚಿತ್ರಪಟವನ್ನು ಸಣ್ಣ ಮಂದಿರದ ಒಳಗಡೆ ಇರಿಸಲಾಗಿತ್ತು. ಬಾಪು ಸಾಹೇಬ್ ಜೋಗ ರವರು ಪ್ರತಿದಿನ 2 ಬಾರಿ ಆರತಿಯನ್ನು ನೆರವೇರಿಸುತ್ತಿದ್ದರು. ಬಾಬಾರವರ ಸಲಹೆ ಮೇರೆಗೆ ಆರತಿಯನ್ನು ನಿಲ್ಲಿಸಲಾಯಿತು. ಈ ಚಿತ್ರಪಟವು ಅನೇಕ ಭಕ್ತರಿಗೆ ಸಾಕ್ಷಾತ್ಕಾರ ನೀಡುತ್ತಿದೆ ಎಂದು ಹೇಳಲಾಗುತ್ತದೆ. 

30ನೇ ಸೆಪ್ಟೆಂಬರ್ 1952 ರ ದಿನ (ಸಾಯಿಬಾಬಾರವರ 34ನೇ ಮಹಾಸಮಾಧಿಯ 3ನೇ ದಿವಸ) ಈ ಚಿತ್ರಪಟವನ್ನು ತೆಗೆದು ಬೇರೆ ಚಿತ್ರಪಟ ವನ್ನು ಇರಿಸಲಾಯಿತು. ಏಕೆಂದರೆ ಈ ಚಿತ್ರಪಟ ಹಳೆಯದಾಗಿದ್ದಿತು. ಆದ ಕಾರಣ ಶಿರಡಿ ಸಾಯಿಬಾಬಾ ಸಂಸ್ಥಾನದವರು ಶ್ರೀ.ನಾರಾಯಣ ರಾವ್ ದೆವ್ಹಾರೆಯವರು ನೀಡಿದ ಹೊಸ ಚಿತ್ರಪಟವನ್ನು ಸರಿಯಾಗಿ 11 ಘಂಟೆಗೆ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ಸ್ಥಾಪಿಸಿದರು. ಇದರ ಸ್ಥಾಪನೆಯನ್ನು ಶ್ರೀ.ವಸಂತ ನಾರಾಯಣ ಗೌರಕ್ಷಾಕರ್ ರವರು ನೆರವೇರಿಸಿದರು. 

ಪ್ರತಿದಿನ ಈ ಚಿತ್ರಪಟಕ್ಕೆ ಅಲಂಕಾರವನ್ನು ಮತ್ತು ಬೆಳಿಗ್ಗೆ 11:30 ಕ್ಕೆ ಮತ್ತು ಸಂಜೆಯ ಧೂಪಾರತಿಯ ನಂತರ ನೈವೇದ್ಯವನ್ನು ತಪ್ಪದೆ ಅರ್ಪಿಸಲಾಗುತ್ತದೆ. 




ಶಿವಲಿಂಗ ಮತ್ತು ನಂದಿಯ ವಿಗ್ರಹಗಳು: 

ಬಾಬಾರವರ ಚಿತ್ರಪಟದ ಮುಂದೆ ಈ ಶಿವಲಿಂಗವನ್ನು ಮತ್ತು ನಂದಿಯನ್ನು ಸ್ಥಾಪಿಸಲಾಗಿದೆ. ಶಿವಲಿಂಗವು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿದ್ದು ನಂದಿಯು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ.ಈ ಶಿವಲಿಂಗವನ್ನು ಮತ್ತು ನಂದಿಯನ್ನು ಸಾಯಿಬಾಬಾರವರೇ  ಮೇಘ ಅವರಿಗೆ ಆಶೀರ್ವಾದಪೂರ್ವಕವಾಗಿ ಕೊಟ್ಟು ಅದನ್ನು ಅವರ ಮನೆಯಲ್ಲಿ ಪೂಜಿಸಲು ಹೇಳಿದ್ದರು. ಅಲ್ಲದೇ ಮೇಘರವರ ಕನಸಿನಲ್ಲಿ ಬಂದು ತ್ರಿಶೂಲವನ್ನು ಶಿವಲಿಂಗದ ಮುಂದೆ ಬರೆಯಲು ಕೂಡ ಆಜ್ಞಾಪಿಸಿದ್ದರು. ಈ ಘಟನೆಯಿಂದ ಮೇಘಾರವರು ಸಾಯಿಬಾಬಾರವರು ತಮ್ಮ ಇಷ್ಟ ದೈವವಾದ ಸಾಕ್ಷಾತ್ ಶಿವನೆಂದು ಮನಗಂಡರು. ಮೇಘ ಕಾಲವಾದ ನಂತರ ಆ ಶಿವಲಿಂಗವು ಬಾಬಾರವರ ಬಳಿ ವಾಪಸಾಯಿತು (ಸಾಯಿ ಸಚ್ಚರಿತ್ರೆ  28ನೇ ಅಧ್ಯಾಯ). ಈ ಶಿವಲಿಂಗವನ್ನು 1912ನೇ ಇಸವಿಯಲ್ಲಿ ಪ್ರತಿಷ್ಟಾಪಿಸಲಾಯಿತು.

ಪ್ರತಿದಿನ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳಸ್ನಾನವಾದ ನಂತರ ಶಿವಲಿಂಗಕ್ಕೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುತ್ತದೆ. ಮಹಾ ಶಿವರಾತ್ರಿಯ ದಿವಸ ರುದ್ರಾಭಿಷೇಕ ಮತ್ತು ಲಿಂಗೋದ್ಭವದ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.


ಬಾಬಾರವರ ಪವಿತ್ರ ಪಾದುಕೆಗಳು: 
 
ಸಾಯಿ ಸಚ್ಚರಿತೆಯ 5ನೇ ಅಧ್ಯಾಯದಲ್ಲಿ ಈ ಪವಿತ್ರ ಪಾದುಕೆಗಳ ವೃತ್ತಾಂತವನ್ನು ಕೊಡಲಾಗಿದೆ. ಈ ಅಮೃತ ಶಿಲೆಯ ಪಾದುಕೆಗಳನ್ನು ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. 

ಬೇವಿನ ಮರದ ಅಡಿಯಲ್ಲಿರುವ ಪಾದುಕೆಗಳ ವೃತ್ತಾಂತ:


ಮುಂಬೈನ ಇಬ್ಬರು ಸಾಯಿಭಕ್ತರು ಶಿರಡಿಯಲ್ಲಿನ ಸಾಯಿಬಾಬಾ ಭಕ್ತರಾದ ಶ್ರೀಯುತ. ಜಿ.ಕೆ.ದೀಕ್ಷಿತ್ ಮತ್ತು ಸಗುಣ ಮೇರು ನಾಯಕ್ ರವರೊಂದಿಗೆ ಸಮಾಲೋಚನೆ ಮಾಡಿ ಸಾಯಿಬಾಬಾರವರು ಶಿರಡಿಗೆ ಬಂದು ಬೇವಿನ ಮರದ ಕೆಳಗಡೆ ಕುಳಿತ ನೆನಪಿಗಾಗಿ ಒಂದು ಸ್ಮಾರಕವನ್ನು ಬೇವಿನ ಮರದಡಿ ಸ್ಥಾಪಿಸಬೇಕೆಂದು ತೀರ್ಮಾನಿಸಿ ಪಾದುಕೆಗಳನ್ನು ಅಮೃತ ಶಿಲೆಯಲ್ಲಿ ಮಾಡಿಸಬೇಕೆಂದು ತೀರ್ಮಾನ ಮಾಡಿದರು. ಅದಕ್ಕೆ ಖರ್ಚಾಗುವ ಹೆಚ್ಚಿಗೆ ಹಣವನ್ನು ಮುಂಬೈನ ಪ್ರಸಿದ್ದ ವೈದ್ಯರಾದ ಡಾ.ರಾಮರಾವ್ ಕೊಠಾರೆಯವರು ನೀಡುವುದಾಗಿ ಹೇಳಿ ಪಾದುಕೆಗಳ ರೂಪು ರೇಷೆಗಳೊಂದಿಗೆ ಶಿರಡಿಗೆ ಬಂದು ಆ ನಕಲನ್ನು ಉಪಾಸಿನಿಯವರಿಗೆ ತೋರಿಸಿದರು. ಉಪಾಸಿನಿಯವರು ಅದಕ್ಕೆ ಶಂಖ, ಕಮಲ ಪುಷ್ಪ, ಮಹಾವಿಷ್ಣುವಿನ ಚಕ್ರವನ್ನು ಸೇರಿಸಬೇಕೆಂದು ಮತ್ತು ಸಾಯಿ ಮಹಿಮೆಯನ್ನು ಕುರಿತ ಸ್ತೋತ್ರವನ್ನು ಕೆತ್ತಿಸಲು ಸಲಹೆ ನೀಡಿದರು. ಆ ಶ್ಲೋಕದ ಅರ್ಥ ಹೀಗಿದೆ:

"ದೇವಾ! ಕಲ್ಪವೃಕ್ಷಕ್ಕೂ ಮಿಗಿಲಾದ ಆ ಬೇವಿನ ಮರದ ಬುಡದಲ್ಲಿ ಕುಳಿತಿರುವುದರಿಂದಲೇ
ಅದರಿಂದ ಬರುವ ಕಹಿ ರಸಕ್ಕೆ ಬದಲಾಗಿ ಅಮೃತವೇ ಸುರಿಯುವಂತೆ ಮಾಡಿರುವ
 ಪರಮೇಶ್ವರನೇ ನೀನಾಗಿರುವೆ. ನಿನಗೆ ನಮಸ್ಕಾರಗಳು" 

ಅದೇ ರೀತಿ ಉಪಾಸಿನಿಯವರ ಸಲಹೆಯಂತೆ ಪಾದುಕೆಗಳನ್ನು ಮುಂಬೈ ನಲ್ಲಿ ಮಾಡಿಸಿ ಅವುಗಳನ್ನು ಶಿರಡಿಗೆ ಕಳುಹಿಸಿದರು ಮತ್ತು ಪಾದುಕೆಗಳನ್ನು ಶ್ರಾವಣ ಶುದ್ದ ಹುಣ್ಣಿಮೆಯ ದಿನ ಪ್ರತಿಷ್ಟಾಪಿಸಬೇಕೆಂದು ಹೇಳಿಕಳುಹಿಸಿದರು. ಆ ಪಾದುಕೆಗಳನ್ನು 15 ನೇ ಅಕ್ಟೋಬರ್ 1912ನೇ ವರ್ಷದ ಶ್ರಾವಣ ಶುದ್ದ ಹುಣ್ಣಿಮೆಯ ದಿನ ಶ್ರೀಯುತ.ಜಿ.ಕೆ.ದೀಕ್ಷಿತರು 11 ಘಂಟೆಗೆ ಸರಿಯಾಗಿ ಸಕಲ ರಾಜ ಮರ್ಯಾದೆಗಳಿಂದ ಖಂಡೋಬ ಮಂದಿರದಿಂದ ದ್ವಾರಕಾಮಾಯಿಗೆ ತಂದರು. ಸಾಯಿಬಾಬಾರವರು ಅವುಗಳನ್ನು ಸ್ಪರ್ಶಿಸಿ "ಇವು ಆ ಪರಮಾತ್ಮನ ಚರಣಾರವಿಂದಗಳು". ಇವುಗಳನ್ನು ಬೇವಿನ ಮರದಡಿಯಲ್ಲಿ ಪ್ರತಿಷ್ಟಾಪಿಸಿ ಎಂದು ತಿಳಿಸಿದರು. ಅದರಂತೆ ಪಾದುಕೆಗಳನ್ನು ಬೇವಿನ ಮರದಡಿಯಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಅದೇ ದಿನ ಗುರುಸ್ಥಾನದಲ್ಲಿ ಆರತಿ ಕಾರ್ಯಕ್ರಮ ಕೂಡ ಪ್ರಾರಂಭವಾಯಿತು.

ಇದಾದ ಕೆಲವು ತಿಂಗಳ ಬಳಿಕ ಆ ಪಾದುಕೆಗಳನ್ನು ಹುಚ್ಚನೊಬ್ಬ ಒಡೆದು ಹಾಕಿದನು. ಸಾಯಿಬಾಬಾರವರು ಅವನಿಗೆ ಏನು ಬಯ್ಯದೆ ಅವುಗಳನ್ನು ರಿಪೇರಿ ಮಾಡಿಸಿ ಬಡವರಿಗೆ ಅನ್ನದಾನ ಮಾಡಲು ಹೇಳಿದರು. ಸ್ವಲ್ಪ ಕಾಲದ ನಂತರ ಆ ಒಡೆದ ಪಾದುಕೆಗಳನ್ನು ತೆಗೆದು ಬೇರೆ ಪಾದುಕೆಗಳನ್ನು ಸ್ಥಾಪಿಸಲಾಯಿತು. ಆ ಒಡೆದ ಪಾದುಕೆಗಳು ಪೀಠದ ಕೆಳಗಡೆ ಇವೆ ಎಂದು ಹೇಳಲಾಗುತ್ತದೆ.

ಪ್ರತಿದಿನ ಸಂಸ್ಥಾನದ ಪುರೋಹಿತರು ಪವಿತ್ರ ಪಾದುಕೆಗಳಿಗೆ ಅಭಿಷೇಕ, ಪೂಜೆ ಮಾಡಿ ಅಲಂಕಾರ ಮಾಡುತ್ತಾರೆ.

ನಂದಾದೀಪ: 

ಬೇವಿನ ಮರದ ಎರಡು ಬದಿಯಲ್ಲಿ ಎರಡು ನಂದಾದೀಪವನ್ನು ಸಾಯಿಬಾಬಾರವರ ಕಾಲದಲ್ಲೇ ಇರಿಸಲಾಗಿತ್ತು. ಇದನ್ನು ಗಾಜಿನ ಬಾಗಿಲಿದ್ದ ಬೆಳ್ಳಿಯಲ್ಲಿ ಮಾಡಿದ ಗೂಡಿನಲ್ಲಿ ಇರಿಸಲಾಗಿತ್ತು. ಪಾದುಕೆ ಪ್ರತಿಷ್ಟಾಪನೆಯಾದಾಗಿನಿಂದ ಪ್ರತಿ ತಿಂಗಳೂ ಈ ದೀಪದ ಖರ್ಚಿಗೋಸ್ಕರ ಡಾ.ಕೋಥಾರೆಯವರು 2 ರುಪಾಯಿಗಳನ್ನು ಕಳುಹಿಸುತ್ತಿದ್ದರು. 

2007 ರಲ್ಲಿ ಗುರುಸ್ಥಾನದ ನವೀಕರಣವಾದಾಗಿನಿಂದ ಈ ಸ್ಥಳದಲ್ಲಿ ಒಂದೇ ನಂದಾದೀಪವನ್ನು ಇರಿಸಲಾಗಿದೆ. ಇದನ್ನು ಬಾಬಾರವರ ಚಿತ್ರಪಟದ ಮುಂದೆ ಬಲಭಾಗದಲ್ಲಿ ಇರಿಸಲಾಗಿದೆ. 


ಗುರುಸ್ಥಾನದಲ್ಲಿ ನಿತ್ಯ ನಡೆಯುವ ಕಾರ್ಯಕ್ರಮಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಬೆಳಿಗ್ಗೆ 4 ಘಂಟೆ : ಗುರುಸ್ಥಾನ ತೆರೆಯುತ್ತದೆ.
ಬೆಳಿಗ್ಗೆ 4:35 ಕ್ಕೆ : ಗುರುಸ್ಥಾನ ಶುಚಿಗೊಳಿಸಲಾಗುತ್ತದೆ.
ಬೆಳಿಗ್ಗೆ 4:45 ರಿಂದ 5 ಘಂಟೆ : ಮಂಗಳಸ್ನಾನ.
ಬೆಳಿಗ್ಗೆ 5 ಘಂಟೆ :  ಸಿಂಧೂರದಿಂದ ಅಲಂಕಾರ  ಮತ್ತು ದರ್ಶನ ಆರಂಭ.
ಬೆಳಿಗ್ಗೆ 11:15 ಕ್ಕೆ : ಗುರುಸ್ಥಾನವನ್ನು ಶುಚಿಗೊಳಿಸಲಾಗುತ್ತದೆ.
ಬೆಳಿಗ್ಗೆ 11:30 ಕ್ಕೆ : ಚಂದನ ಅಲಂಕಾರ.
ಬೆಳಿಗ್ಗೆ 11:40 ಕ್ಕೆ : ನೈವೇದ್ಯ ಅರ್ಪಣೆ.
ಸಂಜೆ 4 ಘಂಟೆ : ದೀಪವನ್ನು ಶುಚಿಗೊಳಿಸಿ ಎಣ್ಣೆ ಹಾಕುವ ಕಾರ್ಯಕ್ರಮ.
ಸಂಜೆ ಧೂಪಾರತಿಯ ನಂತರ : ನೈವೇದ್ಯ ಸಮರ್ಪಣೆ.
ರಾತ್ರಿ 10 ಘಂಟೆ : ಗುರುಸ್ಥಾನ ಮುಚ್ಚುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಶಿರಡಿ ದೇವಾಲಯದ ಒಳಗಡೆ ನೋಡಬೇಕಾದ ಸ್ಥಳಗಳು-ಶಿರಡಿ ಸಾಯಿಬಾಬಾ ಸಮಾಧಿ ಮಂದಿರ ಅಥವಾ ದಗ್ಡಿವಾಡ ಆಲಿಯಾಸ್ ಬೂಟಿವಾಡಾ - ಕೃಪೆ - ಸಾಯಿಅಮೃತಧಾರಾ.ಕಾಂ 


ಗೋಪಾಲ್ ರಾವ್ ಮುಕುಂದ್ ರಾವ್ ಬೂಟಿಯವರು ನಾಗಪುರ ಬಳಿಯ ಬರ್ಡಿ ಎಂಬಲ್ಲಿ 1876 ನೇ ಇಸವಿಯಲ್ಲಿ ಜನಿಸಿದರು. ಇವರು ವಿದ್ಯಾವಂತರೂ, ಸುಸಂಸ್ಕೃತರು ಮತ್ತು ಆಗರ್ಭ ಶ್ರೀಮಂತರೂ ಆಗಿದ್ದರು. ಇವರು ಸ್ವಲ್ಪ ಸಮಯ ವಿದ್ಯಾಭ್ಯಾಸವನ್ನು ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಮಾಡಿದರು. ಇವರಿಗೆ ಕವಿತೆ, ಲಲಿತ ಕಲೆಗಳು ಮತ್ತು ಸಂತರೆಂದರೆ ಬಹಳ ಇಷ್ಟ. ಇವರು 1907 ನೇ ಇಸವಿಯಲ್ಲಿ  ಮೊದಲ ಬಾರಿಗೆ ಸಖಾರಾಮ್ ಧುಮಾಳರೊಂದಿಗೆ ಶಿರಡಿಗೆ ಬಂದರು. ಇವರಿಬ್ಬರೂ ಶೇಗಾವ್ ನ ಗಜಾನನ ಮಹಾರಾಜರ ಭಕ್ತರಾಗಿದ್ದರು. ಬೂಟಿಯವರು ಸಾಯಿಬಾಬಾರವರನ್ನು ಭೇಟಿ ಮಾಡಿದ ಮರುಕ್ಷಣವೇ ತಮ್ಮ ಜೀವನ ಶೈಲಿಯನ್ನು ಸಂಪೂರ್ಣ ಬದಲಾಯಿಸಿದರು. ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ಇವರಿಗೆ ಬಾಬಾರವರಲ್ಲಿ ಅಪರಿಮಿತ ಭಕ್ತಿ ಮತ್ತು ಪ್ರೀತಿ ಇದ್ದಿತು. ಇವರು ಆಗಾಗ್ಗೆ ಶಿರಡಿಗೆ ತಮ್ಮ ಕುಟುಂಬದ ಸಮೇತ ಬಂದು ಹೋಗಿ ಮಾಡುತ್ತಿದ್ದರು. ಕಡೆಗೆ ಶಿರಡಿಯಲ್ಲಿ ತಮ್ಮದೇ ಆದ ಒಂದು ಪುಟ್ಟದಾದ ವಾಡಾ ಕಟ್ಟಿಸುವ ಯೋಚನೆಯನ್ನು ಮಾಡಿದರು. 

ದ್ವಾರಕಾಮಾಯಿಯ ಪಕ್ಕದಲ್ಲಿ ಪಶ್ಚಿಮ ದಿಕ್ಕಿಗೆ ಗುರುಸ್ಥಾನ ಮತ್ತು ದ್ವಾರಕಾಮಾಯಿಯ ನಡುವೆ ಸ್ವಲ್ಪ ಖಾಲಿ ಜಾಗವಿತ್ತು. ಈ ಜಾಗದಲ್ಲಿ ಸಾಯಿಬಾಬಾರವರು ಬಹಳ ಪರಿಶ್ರಮದಿಂದ ಸುಂದರವಾದ ಹೂವಿನ ತೋಟವನ್ನು ನಿರ್ಮಿಸಿದ್ದರು. ಬಾಬಾರವರು ರಹತಾಕ್ಕೆ ಹೋದಾಗ ಅಲ್ಲಿಂದ ZÉAqÀÄ ªÀÄ°èUÉ ºÀƪÀÅ, ಜಾಯಿ, ಜುಯಿ ಗಿಡಗಳ ಸಸಿಗಳನ್ನು ತಂದು ಆ ಸ್ಥಳವನ್ನು ಚೆನ್ನಾಗಿ ಗುಡಿಸಿ ನೆಲವನ್ನು ಸಮತಟ್ಟು ಮಾಡಿ ಆ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪ್ರತಿದಿನವೂ ನೀರೆರೆದು ಬಹಳ ಚೆನ್ನಾಗಿ ಬೆಳೆಸಿದ್ದರು. ಇವರ ಭಕ್ತನಾದ ವಾಮನ ತಾತ್ಯಾ ಪ್ರತಿನಿತ್ಯ ಎರಡು ಮಡಿಕೆಗಳನ್ನು ತಂದು ಕೊಡುತ್ತಿದ್ದನು. ಬಾಬಾರವರು ಅದರ ಸಹಾಯದಿಂದ ಚೆನ್ನಾಗಿ ನೀರೆರೆದು ಸುಂದರವಾದ ತೋಟವನ್ನು ಸುಮಾರು 3 ವರ್ಷಗಳ ಪರಿಶ್ರಮದಿಂದ ನಿರ್ಮಿಸಿದ್ದರು (ಸಾಯಿ ಸಚ್ಚರಿತೆ 5 ನೇ ಅಧ್ಯಾಯ ನೋಡಿ). ಈ ಸ್ಥಳವನ್ನು ಬೂಟಿಯವರು ಕೊಂಡುಕೊಂಡು ಆ ಸ್ಥಳದಲ್ಲಿ ತಾವು ಮತ್ತು ತಮ್ಮ ಮನೆಯವರು ವಾಸಿಸಲು ಒಂದು ವಾಡ ನಿರ್ಮಿಸಲು ಯೋಚಿಸಿದರು. ಒಂದು ದಿನ ರಾತ್ರಿ ಬೂಟಿ ಮತ್ತು ಶ್ಯಾಮರವರು ದೀಕ್ಷಿತ್ ವಾಡಾದ ಮೊದಲನೇ ಮಹಡಿಯಲ್ಲಿ ಮಲಗಿದ್ದಾಗ ಇವರಿಗೆ ಮತ್ತು ಶ್ಯಾಮ ಅವರಿಗೆ ಸಾಯಿಬಾಬಾರವರು ಕನಸಿನಲ್ಲಿ ಬಂದು ಒಂದು ವಾಡ ನಿರ್ಮಿಸಲು ಆಜ್ಞಾಪಿಸಿದರು. ಆ ಕೂಡಲೇ ಎಚ್ಚರಗೊಂಡ ಬೂಟಿಯವರು ಅಳುತ್ತಿದ್ದ ಶ್ಯಾಮ ಅವರನ್ನು ತಮಗೆ ಬಿದ್ದ ಕನಸಿನ ವಿಷಯವನ್ನು ಹೇಳಿ ಶ್ಯಾಮ ಅವರು ಅಳುತ್ತಿರುವ ಕಾರಣವೇನೆಂದು ಕೇಳಿದರು. ಆಗ ಶ್ಯಾಮ ಅವರು ಬಾಬಾರವರು ತಮಗೆ "ದೇವಸ್ಥಾನದ ಸಹಿತ ಒಂದು ವಾಡವನ್ನು ನಿರ್ಮಿಸು. ಅದರಲ್ಲಿ ನಾನೇ ಬಂದು ವಾಸಿಸುವೆ" ಎಂದು ಹೇಳಿದರು ಎಂದು ಬೂಟಿಯವರಿಗೆ ತಿಳಿಸಿದರು. ಇಬ್ಬರ ಕನಸು ಒಂದೇ ಆಗಿದ್ದು ಅವರಿಬ್ಬರಿಗೂ ಬಹಳ ಆಶ್ಚರ್ಯವಾಯಿತು. ಆ ಕೂಡಲೇ ಅವರಿಬ್ಬರೂ ಕಾಕಾ ಸಾಹೇಬ್ ದೀಕ್ಷಿತ್ ಬಳಿಗೆ ಹೋಗಿ ವಿಷಯವನ್ನು ತಿಳಿಸಿ ಆ ಕೂಡಲೇ 3 ಜನ ಕಲೆತು ವಾಡ ನಿರ್ಮಾಣದ ರೂಪು ರೇಷೆಯನ್ನು ಹೊಡಿದ ಒಂದು ನಕಾಶೆಯನ್ನು ತಯಾರು ಮಾಡಿದರು. ಮಾರನೇ ದಿನ ಬೆಳಗ್ಗೆ ಬಾಬಾರವರಿಗೆ ಅದನ್ನು ತೋರಿಸಿದರು. ಬಾಬಾರವರು ಅದನ್ನು ನೋಡಿ ಕೂಡಲೇ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆ ಕಾರಣದಿಂದ ಈ ಪವಿತ್ರ ವಾಡಾ ನಿರ್ಮಾಣ ಆರಂಭವಾಯಿತು. ಶ್ಯಾಮ ಅವರೇ ಸ್ವತಃ ಮುಂದೆ ನಿಂತು ಕಟ್ಟಡದ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ವಾಡ ನಿರ್ಮಾಣ ಮಾಡಿದರು. ಬಾಬಾರವರು ಪ್ರತಿದಿನ ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕೆ ಹೋಗುವಾಗ ಕೆಲವು ತಿದ್ದುಪಡಿಗಳನ್ನು ಹೇಳುತ್ತಿದ್ದರು. ಅದರಂತೆ ನಿರ್ಮಾಣ ಕಾರ್ಯ ಬರದಿಂದ ನಡೆಯುತ್ತಿತ್ತು. ಬೂಟಿಯವರೂ ಕೂಡ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ದೇವಾಲಯ ನಿರ್ಮಾಣ ಹಂತದಲ್ಲಿದ್ದಾಗ ಬೂಟಿಯವರಿಗೆ ತಮ್ಮ ಇಷ್ಟ ದೇವರಾದ ಮುರಳಿಧರನ ಪ್ರತಿಮೆಯನ್ನು ಅಲ್ಲಿರಿಸಬೇಕೆಂಬ ಬಯಕೆಯಾಯಿತು. ಬೂಟಿಯವರು ಈ ವಿಷಯವನ್ನು ಶ್ಯಾಮ ಅವರಿಗೆ ತಿಳಿಸಿದರು. ಶ್ಯಾಮರವರು ಬಾಬಾರವರನ್ನು ಈ ವಿಷಯದ ಬಗ್ಗೆ ಕೇಳಲು ಬಾಬಾರವರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಕೂಡಲೇ ಶ್ಯಾಮರವರು ಆ ಸಮಯ ಚೆನ್ನಾಗಿದೆಯೇ ಎಂದು ಬಾಬಾರವರನ್ನು ಕೇಳಿ ಒಪ್ಪಿಗೆ ಪಡೆದು ತೆಂಗಿನಕಾಯಿ ಒಡೆದು ದೇವಾಲಯದ ಕೆಲಸ ಪ್ರಾರಂಭಿಸಿಯೇ ಬಿಟ್ಟರು. ಹೀಗೆ ಸಮಾಧಿ ಮಂದಿರ ನಿರ್ಮಾಣವಾಯಿತು. (ಸಾಯಿ ಸಚ್ಚರಿತೆ 39ನೇ ಅಧ್ಯಾಯ  ನೋಡುವುದು) .ಸಾಯಿಬಾಬಾರವರು ಈ ವಾಡವನ್ನು ದಗ್ಡಿವಾಡ ಎಂದು ಕರೆಯುತ್ತಿದ್ದರು. ಸಾಯಿಯವರು ತಮ್ಮ ಅಂತ್ಯಕಾಲ ಸಮೀಪಿಸುತ್ತಿರುವಾಗ ತಮ್ಮನ್ನು ಬೂಟಿವಾಡಾಕ್ಕೆ ಕರೆದೊಯ್ಯುವಂತೆ ಆಜ್ಞಾಪಿಸಿದರು. ಹೀಗೆ ಬೂಟಿಯವರು ನಿರ್ಮಿಸಿದ ಈ ವಾಡ ಮೊದಲಿಗೆ ಬೂಟಿವಾಡಾ ಅಥವಾ ದಗ್ಡಿವಾಡ ಎಂತಲೂ ಮತ್ತು ಸಾಯಿಯವರ ಮಹಾಸಮಾಧಿಯ ನಂತರ ಸಮಾಧಿ ಮಂದಿರ ಎಂದೂ ನಾಮಕರಣಗೊಂಡಿತು. ಈ ಸಮಾಧಿ ಮಂದಿರಕ್ಕೆ ಈಗ ಪ್ರಪಂಚದ ಎಲ್ಲಾ ಕಡೆಗಳಿಂದಲೂ ಎಲ್ಲಾ ವರ್ಗದ, ಜಾತಿಯ ಜನರು ಬಡವ ಬಲ್ಲಿದರೆಂಬ ಬೇಧವಿಲ್ಲದೆ ತಂಡೋಪತಂಡವಾಗಿ ಬಂದು ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಮತ್ತು ಮುಖ್ಯವಾಗಿ ಸಮಾಧಿಯ ದರ್ಶನವನ್ನು ಮಾಡಿ ಪುನೀತರಾಗುತ್ತಿರುವರು.

ಬೂಟಿವಾಡಾ 1947 ರಲ್ಲಿ ಕಂಡಂತೆ 

 ಸಮಾಧಿ ಮಂದಿರದ ಮುಂಭಾಗದಲ್ಲಿರುವ ಸುಂದರ ಹೆಬ್ಬಾಗಿಲು ಮತ್ತು ಅದರ ಹಿಂದಿರುವ ನಾಮಫಲಕಗಳು 

 ಸಮಾಧಿ ಮಂದಿರ 1952 ರಲ್ಲಿ ಕಂಡಂತೆ 


ಆರತಿಗೆ ನಿಂತಿರುವ ಸಾಯಿ ಭಕ್ತರು (ಅತ್ಯಂತ ಪುರಾತನ ಚಿತ್ರ)


ಸಮಾಧಿ ಮಂದಿರದಲ್ಲಿರುವ ಅಮೃತ ಶಿಲೆಯ ನಂದಿಯ ವಿಗ್ರಹ 

ಪಲ್ಲಕ್ಕಿ ಉತ್ಸವಕ್ಕೆ ಮುಂಚೆ ಸಮಾಧಿಯ ಮೇಲೆ ಇರಿಸಿರುವ ಪವಿತ್ರ ಪಾದುಕೆ ಮತ್ತು ಸಟ್ಕಾ 

ಬೂಟಿಯವರು ಲಕ್ಷಾಂತರ ರುಪಾಯಿಗಳನ್ನು ಸಮಾಧಿ ಮಂದಿರದ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರೆ. 1917ರಲ್ಲಿ ಈ ವಾಡದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿತು. ಕೊನೆಗೆ ಈ ಭವನವನ್ನು ಬೂಟಿಯವರು ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದರು. ಶಿರಡಿಯಲ್ಲಿರುವ ಬೂಟಿವಾಡಾ ನಾಗಪುರದಲ್ಲಿರುವ ಬೂಟಿಯವರ ವಾಡಾದ ತದ್ರೂಪು ಆಗಿರುತ್ತದೆ. 

ಶಿರಡಿ ಸಾಯಿಬಾಬಾ ಸಂಸ್ಥಾನದವರು ಸಮಾಧಿ ಮಂದಿರದ ಮಹಾದ್ವಾರದ ಎಡಭಾಗದ ಬಾಗಿಲ ಹಿಂದೆ ಬೂಟಿವಾಡಾದ ನಿರ್ಮಾಣದ ಬಗ್ಗೆ ಮತ್ತು ಬೂಟಿಯವರ ಬಗ್ಗೆ ಉಲ್ಲೇಖ ಕಂಡು ಬರುತ್ತದೆ. ಅಲ್ಲದೇ, ಸಮಾಧಿ ಮಂದಿರದ ಮಹಾದ್ವಾರದ ಬಲಭಾಗದ ಬಾಗಿಲ ಹಿಂದೆ ಸಭಾಮಂಟಪಕ್ಕೆ ಭೂಮಿಯನ್ನು ದಾನವನ್ನಾಗಿ ನೀಡಿದ ಶ್ರೀ.ದಾಮೋದರ್ ಸಾವಲ್ ರಾಮ್ ರಾಸನೆ, ಅಹಮದ್ ನಗರ, ದಿವಂಗತ ಶ್ರೀ.ಅಣ್ಣಾ ಸಾಹಿಬ್ ಚಿಂಚಿಣಿಕರ್ ಟ್ರಸ್ಟ್, ಚಿಂಚಿಣಿ ಮತ್ತು ದಿವಂಗತ ಶ್ರೀ.ರಾವ್ ಸಾಹಿಬ್ ಯಶವಂತ್ ರಾವ್ ಗಲ್ವಾಂಕರ್, ಬಾಂದ್ರ, ಮುಂಬೈ ಇವರುಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೇ, ಸಭಾಮಂಟಪದ ನಿರ್ಮಾಣ ಕಾರ್ಯ 1949 ಇಸವಿಯ ವಿಜಯದಶಮಿಯಂದು ಪ್ರಾರಂಭವಾಗಿ 1951 ರ ರಾಮನವಮಿಯಂದು ಸಂಪೂರ್ಣಗೊಂಡಿತು. ನಿರ್ಮಾಣಕ್ಕೆ 65,000 ರುಪಾಯಿಗಳು ಖರ್ಚಾಗಿರುವ ವಿಷಯವನ್ನು ಉಲ್ಲೇಖಿಸಲಾಗಿದೆ. ಅಲ್ಲದೇ, ಸಭಾಮಂಟಪ ಯೋಜನೆ ಮತ್ತು ನಿರ್ಮಾಣ ಸಮಿತಿಯು ಇದರ ನಿರ್ಮಾಣಕ್ಕೆ ಪುಣೆಯ ಖ್ಯಾತ ನಿರ್ಮಾಣ ಸಂಸ್ಥೆಯಾದ ಡಿ.ಪಿ.ನಗರ್ಕರ್ ಮತ್ತು ಕಂಪನಿಯನ್ನು ಆಯ್ಕೆ ಮಾಡಿರುವ ವಿಷಯವನ್ನು ಕೂಡ ಉಲ್ಲೇಖಿಸಲಾಗಿದೆ.

ಮತ್ತೊಂದು ಫಲಕದ ಮೇಲೆ ಸಾಯಿಬಾಬಾರವರ 38ನೇ ಪುಣ್ಯತಿಥಿಯ ಅಂಗವಾಗಿ 1952 ರಲ್ಲಿ ಸಂತ ಶ್ರೇಷ್ಠ ಶ್ರೀ.ಪರ್ಣೆಕರ್ ಮಹಾರಾಜ್ ರವರಿಂದ ಸುವರ್ಣ ಕಲಶ ಸ್ಥಾಪನೆಯಾಗಿರುವ ವಿಷಯ ಮತ್ತು 36ನೇ ಪುಣ್ಯ ತಿಥಿಯ ಅಂಗವಾಗಿ 1954 ರಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪ್ರತಿಷ್ಟಾಪನೆಯಾಗಿರುವ ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಅನೇಕರು ಸಾಯಿಬಾಬಾರವರೊಡನೆ ವಾದ ಮಾಡುತ್ತಿದ್ದರು. ಆದರೆ ಬೂಟಿಯವರು ಮಾತ್ರ ಮೌನವಾಗಿರುತ್ತಿದ್ದರು. ಬಾಬಾರವರಿಗೆ  ಏನಾದರೂ  ಹೇಳಬೇಕಾದರೆ ಶ್ಯಾಮರವರ ಮುಖೇನ ಹೇಳುತ್ತಿದ್ದರು. ಅಲ್ಲದೇ, ಸಾಯಿಬಾಬಾರವರ ಮೇಲಿನ ಗೌರವ ಎಷ್ಟು ಇತ್ತೆಂದರೆ ಅವರು ಬಾಬಾರವರನ್ನು ನೇರವಾಗಿ ಕತ್ತೆತ್ತಿ ಮಾತನಾಡಿಸುತ್ತಿರಲಿಲ್ಲ. 

ಒಮ್ಮೆ ಒಬ್ಬ ಜ್ಯೋತಿಷಿ ಶಿರಡಿಗೆ ಬಂದು ಬಾಬಾರವರಿಗೆ ಒಂದು ಜ್ಯೋತಿಷ್ಯ ಗ್ರಂಥವನ್ನು ಅವರ ಕೈಗೆ ನೀಡಿ ಅವರಿಂದ ಆಶೀರ್ವಾದಪೂರ್ವಕವಾಗಿ ಅವರಿಂದ ಪಡೆಯಲು ನೀಡಿದರು. ಆದರೆ ಬಾಬಾರವರು ಅವರಿಗೆ ಪುಸ್ತಕವನ್ನು ನೀಡದೆ ಬೂಟಿಯವರಿಗೆ ಪ್ರಸಾದವಾಗಿ ನೀಡಿದರು. ಬೂಟಿಯವರು ಅದನ್ನು ಚೆನ್ನಾಗಿ ಅಭ್ಯಾಸ ಮಾಡಿ ಪಾಂಡಿತ್ಯವನ್ನು ಗಳಿಸಿ ಒಳ್ಳೆಯ ಜ್ಯೋತಿಷಿ ಎಂದು ಹೆಸರನ್ನು ಪಡೆದರು. 

ಬೂಟಿವಾಡಾವು ಬಾಬಾರವರ ಸಮಾಧಿ ಮಂದಿರವಾಗಿರುವುದರಿಂದ ಈ ಕಟ್ಟಡದಲ್ಲಿ ಅನೇಕ ಬದಲಾವಣೆಗಳನ್ನು ಸಾಯಿಬಾಬಾ ಸಂಸ್ಥಾನದವರು ಆಗಿಂದಾಗ್ಗೆ ಮಾಡುತ್ತಾ ಬಂದಿದ್ದಾರೆ. ಮೊದಲು ಸುವರ್ಣ ಕಲಶ ಸ್ಥಾಪನೆಯಾಯಿತು. ನಂತರ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪ್ರತಿಷ್ಟಾಪನೆಯಾಯಿತು. 

ಸುವರ್ಣ ಕಲಶದ ಸ್ಥಾಪನೆ

ಮೊದಲು ಸಮಾಧಿ ಮಂದಿರದ ಮೇಲ್ಭಾಗದಲ್ಲಿ ಮೇಲ್ಚಾವಣಿಯನ್ನು ಹೊದಿಸಲಾಗಿತ್ತು. ನಂತರ ರಾಜಗೋಪುರ ಮತ್ತು ಸುವರ್ಣ ಕಲಶವನ್ನು ಪ್ರತಿಷ್ಟಾಪಿಸಲಾಯಿತು. ಸಾಯಿಬಾಬಾರವರ ಮಹಾಸಮಾಧಿಯಾಗಿ ಸರಿಯಾಗಿ 34 ವರ್ಷಗಳ ನಂತರ (15-10-1918 ಮಹಾಸಮಾಧಿ ದಿವಸ) ಅಂದರೆ 29ನೇ ಸೆಪ್ಟೆಂಬರ್ 1952 ರಂದು ವಿಜಯದಶಮಿಯ ದಿವಸ ಸುವರ್ಣ ಕಲಶದ ಪ್ರತಿಷ್ಟಾಪನೆಯನ್ನು ಸಂತ ಶ್ರೇಷ್ಠ ಶ್ರೀ.ಪರ್ಣೆಕರ್ ಮಹಾರಾಜ್ ರವರು ವಿಧಿವತ್ತಾಗಿ ನೆರವೇರಿಸಿದರು. 

1952 ರಲ್ಲಿ ಕಲಶ ಸ್ಥಾಪನೆ ನಡೆಯುತ್ತಿರುವ ದೃಶ್ಯ 

ಸುವರ್ಣ ಕಲಶ (ಇತೀಚಿನ ಚಿತ್ರ)

ಹಬ್ಬದ ಅಂಗವಾಗಿ ದೀಪಗಳಿಂದ ಅಲಂಕೃತಗೊಂಡ ಸುವರ್ಣ ಕಲಶ

ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ

ಅಮೃತ ಶಿಲೆಯ ವಿಗ್ರಹ ಮತ್ತು ಬಿ.ವಿ.ತಾಲೀಮ್ (ಒಳಚಿತ್ರ)

ವಿಗ್ರಹವನ್ನು ಕೆತ್ತುವುದರಲ್ಲಿ ಮಗ್ನರಾಗಿರುವ ಬಿ.ವಿ.ತಾಲೀಮ್ 

1952 ರಲ್ಲಿ ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಸಮಾಧಿಯ ಮೇಲೆ ಚಿತ್ರಪಟವನ್ನು ಇರಿಸಲಾಗಿತ್ತು. ಶಿರಡಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದ ಕಾರಣ ಶಿರಡಿ ಸಾಯಿಬಾಬಾ ಸಂಸ್ಥಾನದವರು ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲು ಯೋಚಿಸಿದರು. ಈ ಕೆಲಸಕ್ಕಾಗಿ ಮಹಾರಾಷ್ಟ್ರದ ಐದು ಪ್ರಸಿದ್ದ ಶಿಲ್ಪಿಗಳನ್ನು ಆರಿಸಿದರು. ಅದರಲ್ಲಿ ಬಿ.ವಿ.ತಾಲೀಮ್ ರವರು ಕೂಡ ಒಬ್ಬರಾಗಿದ್ದರು. ಪ್ರತಿಯೊಬ್ಬ ಶಿಲ್ಪಿಗೂ ಒಂದು ಕಪ್ಪು ಬಿಳುಪು ಸಾಯಿಬಾಬಾರವರ ಭಾವಚಿತ್ರವನ್ನು ನೀಡಲಾಯಿತು. ಅಲ್ಲದೇ, ವಿಗ್ರಹದ ಮಾದರಿಯನ್ನು ಕೆತ್ತಲು ಹತ್ತು ದಿನಗಳ ಗಡುವು ನೀಡಲಾಯಿತು. 

ಆಗ ಶಿರಡಿಯ ಮಾರುಕಟ್ಟೆಯಲ್ಲಿದ್ದ ಸಾಯಿಬಾಬಾರವರ ಭಾವಚಿತ್ರಗಳಿಂದ ಅವರ ವಿಗ್ರಹ ಕೆತ್ತುವುದು ಕಷ್ಟವಾಗಿತ್ತು. ಏಕೆಂದರೆ ಮುಖವನ್ನು ಭಾವಚಿತ್ರಗಳನ್ನು ನೋಡಿ ಕೆತ್ತುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.  ಒಂದೊಂದು ಭಾವಚಿತ್ರಗಳಲ್ಲಿ ಸಾಯಿಬಾಬಾರವರು ಒಂದೊಂದು ರೀತಿ ಕಂಡು ಬರುತ್ತಿದ್ದರು. ಇದರಿಂದ ಬಿ.ವಿ.ತಾಲೀಮ್ ರವರಿಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬಿ.ವಿ.ತಾಲೀಮ್ ರವರು ಸಾಯಿಬಾಬಾರವರನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಪುಸ್ತಕಗಳಲ್ಲಿ ಸಾಯಿಬಾಬಾರವರು ಬಿ.ವಿ.ತಾಲೀಮ್ ರವರ ಕನಸಿನಲ್ಲಿ ದಿವ್ಯ ದರ್ಶನ ನೀಡಿ ಅವರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಲಾಗಿದೆ. ಆದರೆ, ಬಿ.ವಿ.ತಾಲೀಮ್ ರವರ ಮೊಮ್ಮಗನ ಪ್ರಕಾರ ಸಾಯಿಬಾಬಾರವರು ಒಂದು ದಿನ ಬೆಳಗಿನ ಸಮಯದಲ್ಲಿ ದಿವ್ಯ ಜ್ಯೋತಿಯ ಹಾಗೆ ದರ್ಶನ ನೀಡಿದರು ಮತ್ತು ಆ ಬೆಳಕಿನಲ್ಲಿ ಸಾಯಿಬಾಬಾರವರ ವದನವು ಬಹಳ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಸಾಯಿಬಾಬಾರವರ ದಯೆಯಿಂದ ಮತ್ತು ಮಾರ್ಗದರ್ಶನದಿಂದ ವಿಗ್ರಹದ ಮುಖವನ್ನು ಕೆತ್ತುವುದು ಬಹಳ ಸುಲಭವಾಯಿತು ಎಂದು ತಿಳಿದು ಬರುತ್ತದೆ.  ಅಷ್ಟೇ ಅಲ್ಲದೆ, ಸಾಯಿಬಾಬಾರವರು ತಾಲೀಮ್ ರವರಿಗೆ "ನೀನು ನನ್ನ ವಿಗ್ರಹ ಕೆತ್ತನೆಯ ಕೆಲಸವನ್ನು ಬೇಗನೆ ಮಾಡಿ ಮುಗಿಸು ಮತ್ತು ಮುಂದೆ ನೀನು ಬೇರೆ ಯಾವ ವಿಗ್ರಹವನ್ನು ಕೆತ್ತುವುದಿಲ್ಲ" ಎಂದು ತಿಳಿಸಿದರೆಂದು ಹೇಳಲಾಗಿದೆ. ಬಾಬಾರವರ ಮಾತುಗಳು ಅಕ್ಷರಶಃ ನಿಜವಾಯಿತು.




ಸಾಯಿಬಾಬಾರವರ ಈ ಸುಂದರ ವಿಗ್ರಹವನ್ನು ಇಟಾಲಿಯನ್ ಮಾರ್ಬಲ್ ನಿಂದ ಕೆತ್ತಲಾಗಿದೆ.ಈ ವಿಗ್ರಹವನ್ನು 7ನೇ ಅಕ್ಟೋಬರ್ 1954 ರ ವಿಜಯದಶಮಿಯಂದು ಸಾಯಿಬಾಬಾರವರ ಸಮಾಧಿಯ ಹಿಂಭಾಗದಲ್ಲಿ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಸ್ವಾಮಿ ಶರಣಾನಂದ್ ರವರು ವಿಧಿವತ್ತಾಗಿ ಪ್ರತಿಷ್ಟಾಪಿಸಿದರು. ಈ ವಿಗ್ರಹದ ಕೆತ್ತನೆಗೆ ಆ ಕಾಲದಲ್ಲೇ 22,000 ರುಪಾಯಿಗಳು ಖರ್ಚಾಗಿತ್ತು. ಈ ವಿಗ್ರಹವನ್ನು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಸ್ಥಾಪಿಸಲಾಗಿದ್ದು ಸಾಯಿಬಾಬಾರವರ ಮುಖವನ್ನು ಈಶಾನ್ಯ ದಿಕ್ಕಿಗೆ ನೋಡುತ್ತಿರುವಂತೆ ಸ್ಥಾಪಿಸಲಾಗಿದೆ. ಸಾಯಿಭಕ್ತರು ಯಾವ ದಿಕ್ಕಿನಿಂದ ನೋಡಿದರೂ ಕೂಡ ತಮ್ಮ ಕಡೆಯೇ ನೋಡುತ್ತಿರುವಂತೆ ಭಕ್ತರಿಗೆ ಭಾಸವಾಗುವ ಹಾಗೆ ಬಹಳ ಸುಂದರವಾಗಿ ಕೆತ್ತಲಾಗಿದೆ.


ಪವಿತ್ರ ಇಟ್ಟಿಗೆ: 

ಈ ಪವಿತ್ರ ಇಟ್ಟಿಗೆ ಸದಾಕಾಲ ಬಾಬಾರವರ ಜೊತೆ ಇರುತ್ತಿತ್ತು. ಮಹಾಳಸಾಪತಿ, ಕಶೀರಾಂ ಶಿಂಪಿ ಮತ್ತು ಮಾಧವ ಫಾಸ್ಲೆ ಪ್ರತಿದಿನ ಈ ಪವಿತ್ರ ಇಟ್ಟಿಗೆಗೆ ಮಂಗಳ ಸ್ನಾನ ಮಾಡಿಸಿ ಪೂಜಿಸುತ್ತಿದ್ದರು. ಒಂದು ದಿನ ಈ ಇಟ್ಟಿಗೆಯು ಕೆಳಗೆ ಬಿದ್ದು ಒಡೆದು ಹೋಯಿತು. ಇಟ್ಟಿಗೆ ಬಿದ್ದು ಒಡೆದಿದ್ದು ಸಾಯಿಬಾಬಾರವರ ಮರಣದ ಮುನ್ಸೂಚನೆಯಾಗಿತ್ತು. ಬಾಬಾರವರು ಇಟ್ಟಿಗೆ ಒಡೆದ ವಿಷಯವನ್ನು ಕೇಳಿ ಅತೀವ ದುಃಖವನ್ನು ವ್ಯಕ್ತಪಡಿಸಿದರು. "ಈ ಇಟ್ಟಿಗೆಯು ನನ್ನ ಆಪ್ತ ಸಂಗಾತಿಯಾಗಿತ್ತು. ಇದು ಒಡೆದದ್ದು ನನ್ನ ದುರದೃಷ್ಟವೇ ಸರಿ" ಎಂದು ಕೊರಗಿದರು. ಇಟ್ಟಿಗೆ ಒಡೆದ ದಿನದಿಂದ ಬಾಬಾರವರ ಆರೋಗ್ಯ ಹದಗೆಡಲು ಆರಂಭವಾಗಿ ಈ ಘಟನೆಯಾದ 5 ದಿನಗಳ ನಂತರ ಬಾಬಾರವರು ಸಮಾಧಿ ಹೊಂದಿದರು. ಇದರ ಪೂರ್ಣ ವಿವರವನ್ನು ಸಾಯಿ ಸಚ್ಚರಿತ್ರೆಯ 44 ನೇ ಅಧ್ಯಾಯದಲ್ಲಿ ನೋಡಬಹುದು. 

ಸಾಯಿಬಾಬಾರವರ ಸಮಾಧಿ:

ಸಾಯಿಬಾಬಾರವರ ಸಮಾಧಿಯು 6 ಅಡಿ ಉದ್ದ ಮತ್ತು 2 ಅಡಿ ಅಗಲ ಇದೆ. ಸಮಾಧಿಯ ಸುತ್ತಾ 9 ಅಡಿ ಉದ್ದ ಮತ್ತು 9 ಅಡಿ ಅಗಲ ಮತ್ತು 3 ಅಡಿ ಎತ್ತರವಿರುವ ಪೀಠವನ್ನು ಸ್ಥಾಪಿಸಲಾಗಿದೆ. ಈ ಪೀಠದ ಕೆಳಗಡೆ 3 ಮೆಟ್ಟಿಲುಗಳನ್ನು ಸ್ಥಾಪಿಸಲಾಗಿದೆ ಮತ್ತು 3 ನೇ ಮೆಟ್ಟಿಲಿನ ಮೇಲೆ "ಆಶ್ವಯುಜ ಶುದ್ದ ದಶಮಿ, 15ನೇ ಅಕ್ಟೋಬರ್ 1918 ರಂದು ಸಾಯಿಬಾಬಾರವರು ಮಹಾಸಮಾಧಿ ಹೊಂದಿದರು" ಎಂದು ಕೆತ್ತಲಾಗಿದೆ. 


ಸಮಾಧಿ ಮಂದಿರದ ದಿನಚರಿ: 

ಪ್ರತಿದಿನ ಬೆಳಗಿನ ಜಾವ ಸಾಯಿಬಾಬಾರವರ ವಿಗ್ರಹ ಮತ್ತು ಸಮಾಧಿಗಳಿಗೆ ಮಂಗಳಸ್ನಾನ ಮಾಡಿಸಲಾಗುತ್ತದೆ. ಅಲ್ಲದೇ, ಅಷ್ಟಗಂಧದಿಂದ ಅಲಂಕಾರ ಮಾಡಲಾಗುತ್ತದೆ. ಸಮಾಧಿಯ ಮೇಲೆ ಶಾಲು ಹೊದೆಸಲಾಗುತ್ತದೆ. ಬಾಬಾರವರ ವಿಗ್ರಹದ ಪಕ್ಕದಲ್ಲಿ ಸೀಮೆಎಣ್ಣೆಯ ಲಾಂದ್ರವನ್ನು ರಾತ್ರಿಯಿಡಿ ಇರಿಸಲಾಗುತ್ತದೆ. ಲಾಂದ್ರದ ಪಕ್ಕದಲ್ಲಿ ಒಂದು ಲೋಟದಲ್ಲಿ ನೀರನ್ನು ಇರಿಸಲಾಗುತ್ತದೆ. ಸಾಯಿಬಾಬಾರವರ ಕಾಲದಲ್ಲಿ ರಾಧಾಕೃಷ್ಣ ಮಾಯಿಯವರು ಈ ಕಾರ್ಯವನ್ನು ಅತ್ತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಮಾಡುತ್ತಿದ್ದರು. ರಾತ್ರಿಯ ಶೇಜಾರತಿಯ ನಂತರ ಬಾಬಾರವರ ವಿಗ್ರಹ ಮತ್ತು ಸಮಾಧಿಯ ಮೇಲೆ ಸೊಳ್ಳೆಯ ಪರದೆಯನ್ನು ಹೊದೆಸಲಾಗುತ್ತದೆ. ಮಾರನೇ ದಿನ ಬೆಳಗಿನ ಜಾವ ಕಾಕಡಾ ಆರತಿಯ ಸಮಯದಲ್ಲಿ ಸೊಳ್ಳೆಯ ಪರದೆಯನ್ನು ತೆಗೆಯಲಾಗುತ್ತದೆ. ಕಾಕಡಾ ಆರತಿಯ ಸಮಯದಲ್ಲಿ ಸಾಯಿಬಾಬಾರವರಿಗೆ ಬೆಣ್ಣೆ ಮತ್ತು ಸಕ್ಕರೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಲಘು ಆರತಿಯ ಸಮಯದಲ್ಲಿ ಉಪಹಾರ ನೈವೇದ್ಯವನ್ನು ಮಾಡಲಾಗುತ್ತದೆ. ಮಧ್ಯಾನ್ಹ ಆರತಿಯ ಸಮಯದಲ್ಲಿ ಭೋಜನ ನೈವೇದ್ಯವನ್ನು ನೀಡಲಾಗುತ್ತದೆ. ಸಂಜೆಯ ಧೂಪಾರತಿಯ ಸಮಯದಲ್ಲಿ ರಾತ್ರಿ ಭೋಜನದ ನೈವೇದ್ಯವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಸ್ವಲ್ಪ ರೊಟ್ಟಿ ಮತ್ತು ಈರುಳ್ಳಿಯನ್ನು ನೈವೇದ್ಯ ಮಾಡುವ ಸಂಪ್ರದಾಯವಿದೆ. ಏಕಾದಶಿಯ ದಿನದಂದು ಉಪವಾಸ ಭೋಜನ ಅಂದರೆ ಫಲಹಾರ ಭೋಜನ ನೈವೇದ್ಯವನ್ನು ನೀಡಲಾಗುತ್ತದೆ. ಸಾಯಿಬಾಬಾರವರ ನೈವೇದ್ಯವನ್ನು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದ ಪ್ರಾಂಗಣದ ಹಿಂಭಾಗದಲ್ಲಿ ಇದ್ದ ನೈವೇದ್ಯ ಶಾಲೆಯಲ್ಲಿ ಮೊದಲು ತಯಾರಿಸಲಾಗುತ್ತಿತ್ತು. ಈಗ ಈ ಸ್ಥಳವು ಸಮಾಧಿ ಮಂದಿರದ ಮೊದಲನೇ ಮಹಡಿಯಲ್ಲಿ ಇರುತ್ತದೆ. 

ಸಮಾಧಿ ಮಂದಿರದಲ್ಲಿ ನಡೆಯುವ ದಿನನಿತ್ಯದ ಕಾರ್ಯಕ್ರಮಗಳ ಸಮಯವನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

4:00 AM ಸಮಾಧಿ ಮಂದಿರ ತೆರೆಯುತ್ತದೆ.
4:15 AM ಭೂಪಾಳಿ 
4:25 AM ಸಾಂಬ್ರಾಣಿಯ ಅರ್ಪಣೆ (ಇದ್ದಿಲನ್ನು ದ್ವಾರಕಾಮಾಯಿಯ ಧುನಿಯಿಂದ ತೆಗೆಯಲಾಗುತ್ತದೆ)
4:30 AM
ಕಾಕಡ ಆರತಿ (ಸಾಯಿಬಾಬಾರವರಿಗೆ ಬೆಣ್ಣೆ ಮತ್ತು ಸಕ್ಕರೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಮತ್ತು ಆರತಿಯ ನಂತರ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ).
5:00 AM ಭಜನೆ.
5:05 AM
ಮಂಗಳ ಸ್ನಾನ (ಮಂಗಳ ಸ್ನಾನದ ನಂತರ ತೀರ್ಥವನ್ನು ಭಕ್ತರಿಗೆ ಹೊರಗಡೆ ಪಾತ್ರೆಗಳಲ್ಲಿ ತುಂಬಿಸಿ ಇರಿಸಲಾಗುತ್ತದೆ).
5:35 AM ಚೋಟ ಆರತಿ "ಶಿರಡಿ ಮಾಜ್ಹೆ ಪಂಡರಾಪುರ".
5:40 AM ದರ್ಶನದ ಆರಂಭ.
11:30 AM ಸಮಾಧಿ ಮಂದಿರ ಶುಚಿಗೊಳಿಸುವ ಕಾರ್ಯಕ್ರಮ.
11:45 AM ಸಾಂಬ್ರಾಣಿಯ ಅರ್ಪಣೆ (ಇದ್ದಿಲನ್ನು ದ್ವಾರಕಾಮಾಯಿಯ ಧುನಿಯಿಂದ ತೆಗೆಯಲಾಗುತ್ತದೆ)
12:00 PM ಮಧ್ಯಾನ್ಹ ಆರತಿ.
12:30 PM ಭೋಜನ ನೈವೇದ್ಯ ಮತ್ತು ತಾಂಬೂಲ ಸಮರ್ಪಣೆ.
4:00 PM ಸಾಯಿ ಸಚ್ಚರಿತ್ರೆ ಪೋತಿ ಪಾರಾಯಣ.
Sunset
ಧೂಪಾರತಿ  (ಸಮಾಧಿ ಮಂದಿರ ಶುಚಿಗೊಳಿಸುವ ಕಾರ್ಯಕ್ರಮ ಮತ್ತು ಸಾಂಬ್ರಾಣಿ ಅರ್ಪಣೆ ಸಂಜೆ ಆರತಿಗೆ ಮುಂಚಿತವಾಗಿ ನಡೆಯುತ್ತದೆ. ರೊಟ್ಟಿ ಮತ್ತು ಈರುಳ್ಳಿಯನ್ನು ನೈವೇದ್ಯ ಮಾಡುವ ಕಾರ್ಯಕ್ರಮ ಸಂಜೆ ಆರತಿಯ ನಂತರ ನಡೆಯುತ್ತದೆ).
8:30 PM to 10:00 PM ವಿವಿಧ ಭಜನಾ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.
10:30 PM
ಶೇಜಾರತಿ ಆರತಿಯ ನಂತರ ವಿಗ್ರಹದ ಮತ್ತು ಸಮಾಧಿಯ ಮೇಲೆ ಶಾಲು ಹೊದೆಸಲಾಗುತ್ತದೆ. ಬಾಬಾರವರ ವಿಗ್ರಹಕ್ಕೆ ರುದ್ರಾಕ್ಷಿ ಮಾಲೆ ಹಾಕಲಾಗುತ್ತದೆ. ಸೊಳ್ಳೆಯ ಪರದೆ ಹಾಕಲಾಗುತ್ತದೆ ಮತ್ತು ಒಂದು ಲೋಟ ನೀರನ್ನು ಇರಿಸಲಾಗುತ್ತದೆ. 
11:15 PM ಸಮಾಧಿ ಮಂದಿರ ಮುಚ್ಚಲಾಗುತ್ತದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, June 29, 2010

ಶಿರಡಿಯಲ್ಲಿನ ವಸತಿ ಸ್ಥಳಗಳ ಬಗ್ಗೆ ಮಾಹಿತಿ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಮತ್ತು ಸಾಯಿ ಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ತಮ್ಮ ಭಕ್ತರಿಗೆ "ಮುಂದಿನ ದಿನಗಳಲ್ಲಿ ಶಿರಡಿ ಕ್ಷೇತ್ರಕ್ಕೆ ಜನರು ಸಕ್ಕರೆಯನ್ನು ಇರುವೆಗಳು ಸೇರುವ ಹಾಗೆ ಬಂದು ಸೇರುತ್ತಾರೆ" ಎಂದು ಭವಿಷ್ಯ ನುಡಿದಿದ್ದರು. ಅದು ಈಗ ಅಕ್ಷರಶಃ ನಿಜವಾಗಿದೆ. ಪ್ರತಿನಿತ್ಯ ದೇಶ ವಿದೇಶಗಳಿಂದ ಜಾತಿ ಮತ ಭೇದವಿಲ್ಲದೆ ಲಕ್ಷಾಂತರ ಮಂದಿ ಭಕ್ತರು ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದಾರೆ. ಮೊದಲು ಶಿರಡಿಯು ಒಂದು ಕುಗ್ರಾಮವಾಗಿತ್ತು. ಆದರೆ, ಈಗ ಸಾಯಿಬಾಬಾರವರ ಆಶೀರ್ವಾದದಿಂದ, ಮಹಾರಾಷ್ಟ್ರ ಸರ್ಕಾರ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಅವಿರತ ಪ್ರಯತ್ನದಿಂದ ಶಿರಡಿಯು ಭಾರತದ ಒಂದು ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ಈಗ ಶಿರಡಿಯಲ್ಲಿ ಸಂಸ್ಥಾನದವರು ನಿರ್ಮಿಸಿರುವ ವಸತಿ ಗೃಹಗಳು, ಧರ್ಮಶಾಲೆಗಳು, ಮಧ್ಯಮ ದರದ ಹೋಟೆಲ್ ಗಳು ಮತ್ತು ಪಂಚತಾರ ಹೋಟೆಲ್ ಗಳು ಬಹಳಷ್ಟು ಇದ್ದು ಶಿರಡಿ ಯಾತ್ರಿಕರಿಗೆ ವಿಶೇಷ ದಿನಗಳಲ್ಲೂ ಕೂಡ ಯಾವುದೇ ತೊಂದರೆಯ ಪರಿಸ್ಥಿತಿ ಎದುರಾಗುವುದಿಲ್ಲ.

೧. ಶಿರಡಿ ಸಾಯಿಬಾಬಾ ಸಂಸ್ಥಾನದ ವಸತಿಗೃಹಗಳು

ಶಿರಡಿ ಸಂಸ್ಥಾನದವರು ನಡೆಸುವ ವಸತಿ ಗೃಹಗಳ ವಿವರ ಈ ಕೆಳಕಂಡಂತೆ ಇವೆ:

ಸಾಯಿ ಪ್ರಸಾದ-1   - 87 ಕೊಠಡಿಗಳು 
ಸಾಯಿ ಪ್ರಸಾದ-2   - 78 ಕೊಠಡಿಗಳು
ಸಾಯಿ ಉದ್ಯಾನ     - 36 ಕೊಠಡಿಗಳು
ಸಾಯಿ ನಿವಾಸ       - 24 ಕೊಠಡಿಗಳು
ಸಮರ್ಪಣ             - 2 ಕೊಠಡಿಗಳು
ಶಾಂತಿನಿಕೇತನ     - 15 ಕೊಠಡಿಗಳು
ಸೇವಧಾಮ್          - 66 (ಸಣ್ಣ ಕೊಠಡಿಗಳು)
ಧರ್ಮಶಾಲಾ        - 27 ( ಸಣ್ಣ ಕೊಠಡಿಗಳು)
ಭಕ್ತಿನಿವಾಸ           - 500 ಕೊಠಡಿಗಳು
ದ್ವಾರಾವತಿ           - 322 ಕೊಠಡಿಗಳು (ಆನ್ ಲೈನ್ ಬುಕಿಂಗ್ ವ್ಯವಸ್ಥೆ ಇದೆ)
ಸಾಯಿಆಶ್ರಮ 1 ಮತ್ತು 2 - ನಿರ್ಮಾಣ ಹಂತದಲ್ಲಿವೆ. 

 
ಸಾಯಿಬಾಬಾ ಭಕ್ತನಿವಾಸ (500 ಕೊಠಡಿಗಳು)

ಸಾಯಿಬಾಬಾ ಭಕ್ತನಿವಾಸವು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಿಂದ 1 ಕಿಲೋಮೀಟರ್ ದೂರದಲ್ಲಿದ್ದು ಅಹಮದ್ ನಗರ - ಮನಮಾಡ ರಾಜ್ಯ ಹೆದ್ದಾರಿಯಲ್ಲಿ ಅಹಮದ್ ನಗರಕ್ಕೆ ಹೋಗುವ ಮಾರ್ಗದಲ್ಲಿದೆ.  ಈ ವಸತಿ ಸಂಕೀರ್ಣದಲ್ಲಿ 500 ಕೊಠಡಿಗಳಿವೆ. ಶ್ರೀ ಸಾಯಿಬಾಬಾ ಸಂಸ್ಥಾನವು ಭಕ್ತನಿವಾಸದಿಂದ ಸಾಯಿಬಾಬಾ ಸಮಾಧಿ ಮಂದಿರಕ್ಕೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿರುತ್ತದೆ.

ಸಾಯಿಪ್ರಸಾದ ಭಕ್ತನಿವಾಸ - 1 ಮತ್ತು 2

ಸಾಯಿಪ್ರಸಾದ ಭಕ್ತನಿವಾಸವು ಸಮಾಧಿ ಮಂದಿರ ಸಂಕೀರ್ಣಕ್ಕೆ ಉತ್ತರ ದಿಕ್ಕಿನಲ್ಲಿ ಬಹಳ ಹತ್ತಿರದಲ್ಲಿದೆ. ಈ ವಸತಿ ಸಂಕೀರ್ಣದಲ್ಲಿ ಭಕ್ತರ ಅನುಕೂಲಕ್ಕಾಗಿ 165 ಕೊಠಡಿಗಳು ಹಾಗೂ ಲಾಕರ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.  

ದ್ವಾರಾವತಿ ಭಕ್ತನಿವಾಸ

ಸಂಸ್ಥಾನದ ವತಿಯಿಂದ ನಡೆಸುತ್ತಿದ್ದ ವಸತಿ ಸಂಕೀರ್ಣಗಳು ದಿನೇ ದಿನೇ ಶಿರಡಿಗೆ ಹರಿದು ಬರುತ್ತಿದ್ದ ಭಕ್ತರಿಗೆ ಸಾಕಾಗುತ್ತಿರಲಿಲ್ಲ. ಆದ ಕಾರಣ, ದ್ವಾರಾವತಿ ಭಕ್ತನಿವಾಸವನ್ನು ಹೊಸದಾಗಿ ನಿರ್ಮಾಣ ಮಾಡಲಾಯಿತು. ಈ ವಸತಿ ಸಂಕೀರ್ಣವು 4 ಅಂತಸ್ತುಗಳನ್ನು ಹೊಂದಿದ್ದು 320 ಕೊಠಡಿಗಳು ಇರುತ್ತವೆ. 4ನೇ ಅಂತಸ್ತಿನಲ್ಲಿ 80 ಹವಾನಿಯಂತ್ರಿತ ಕೊಠಡಿಗಳು ಸಹ ಇರುತ್ತವೆ. ಸುಸಜ್ಜಿತ ವಾಹನ ನಿಲುಗಡೆ ಸ್ಥಳ, ಮಾಲಿನ್ಯ ರಹಿತ ವಾತಾವರಣ ಮತ್ತು ಸುಂದರವಾದ ಕ್ಯಾಂಪಸ್ ಅನ್ನು ಹೊಂದಿರುವುದು ಈ ವಸತಿ ಸಂಕೀರ್ಣದ ವಿಶೇಷತೆ.
 
ಸಾಯಿ ಆಶ್ರಮ -ಯೋಜನೆ 1 ಮತ್ತು 2 (ನಿರ್ಮಾಣ ಹಂತದಲ್ಲಿದೆ)

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನೀಡಿರುವ 20 ಎಕರೆ ಜಾಗದಲ್ಲಿ ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನವರು 105 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಈ ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಿ ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡುತ್ತಿದ್ದಾರೆ.  ವಸತಿ ಸಂಕೀರ್ಣದ ನಿರ್ಮಾಣ ಪೂರ್ತಿಯಾದ ನಂತರ ಇದನ್ನು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರಿಸಲಾಗುತ್ತದೆ. ಶಿರಡಿ ಸಾಯಿಬಾಬಾ ಸಂಸ್ಥಾನದ ಇತಿಹಾಸದಲ್ಲೇ ಮೊಟ್ಟಮೊದಲಿಗೆ ಈ ಟ್ರಸ್ಟ್ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡುತ್ತಿದೆ. ಈ ಆಶ್ರಮಗಳು 10 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಿತವಾಗಿದ್ದು 1536  ಕೊಠಡಿಗಳು ಮತ್ತು 192 ದೊಡ್ಡ ಹಾಲ್ ಗಳನ್ನು ಹೊಂದಿದ್ದು ಏಕಕಾಲಕ್ಕೆ ಅಂದಾಜು 15,000 ಭಕ್ತರು ತಂಗಲು ವ್ಯವಸ್ಥೆಯಿದೆ.

ಸಾಯಿ ಆಶ್ರಮ 1 ನಗರ-ಮನಮಾಡ ಮುಖ್ಯರಸ್ತೆಯಲ್ಲಿರುವ ಸಾಯಿಬಾಬಾ ಭಕ್ತನಿವಾಸದ ಹತ್ತಿರ ಇದೆ. ಈ ವಸತಿ ಸಂಕೀರ್ಣದಲ್ಲಿ 1500 ಕೊಠಡಿಗಳಿದ್ದು ನಿರ್ಮಾಣ ಹಂತದಲ್ಲಿದೆ. 

ಸಾಯಿ ಆಶ್ರಮ 2 ಹೊಸ ಪ್ರಸಾದಾಲಯದ ಹತ್ತಿರ ಇದೆ. ಈ ವಸತಿ ಸಂಕೀರ್ಣವು 192 ದೊಡ್ಡ ಹಾಲ್ ಗಳನ್ನು ಹೊಂದಿದ್ದು ನಿರ್ಮಾಣ ಹಂತದಲ್ಲಿದೆ. 

ದ್ವಾರಾವತಿ ಭಕ್ತನಿವಾಸವನ್ನು ಹೊರತುಪಡಿಸಿ  ಇನ್ನಿತರ ಮೇಲ್ಕಂಡ ವಸತಿ ಗೃಹಗಳನ್ನು ಮುಂಗಡವಾಗಿ ಕಾದಿರಿಸುವ ವ್ಯವಸ್ಥೆ ಇಲ್ಲ. ಸಾಯಿ ಭಕ್ತರು ಶಿರಡಿಗೆ ತೆರಳಿದ ನಂತರ ಶಿರಡಿ ಬಸ್ ನಿಲ್ದಾಣದ ಎದುರುಗಡೆ ಇರುವ ಸಂಸ್ಥಾನದ ಸ್ವಾಗತ ಕೌಂಟರ್ ನ್ನು  ಸಂಪರ್ಕಿಸತಕ್ಕದ್ದು. ಶಿರಡಿ ಸಾಯಿಬಾಬಾ ಸಂಸ್ಥಾನದ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇದೆ: 

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)
ಶಿರಡಿ - 423 109, ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ
ದೂರವಾಣಿ: +91 (2423) 258 500 ಫ್ಯಾಕ್ಸ್ : +91 (2423) 258770/258870
ಅಂತರ್ಜಾಲ ತಾಣ : www.sai.org.in  ಇ-ಮೈಲ್ :saibaba@sai.org.in  / saibaba@shirdisaibabasansthan.org 
 
ವಸತಿಯನ್ನು ಕಾದಿರಿಸಲು www.online.sai.org.in ಜೋಡಣೆಯನ್ನು ಕ್ಲಿಕ್ಕಿಸಿ:

2. ವಸತಿಯೊಂದಿಗೆ ಉಚಿತ ಭೋಜನ ವ್ಯವಸ್ಥೆ ಇರುವ ಆರ್ಯ ವೈಶ್ಯ ಛತ್ರಗಳು

ಈ ಕೆಳಗೆ ವಿವರ ನೀಡುವ ಛತ್ರಗಳಲ್ಲಿ ವಸತಿಯೊಂದಿಗೆ ಉಚಿತ ಭೋಜನ ವ್ಯವಸ್ಥೆ ಕೂಡ ಇರುತ್ತದೆ. ಈ ಸ್ಥಳಗಳಲ್ಲಿ ಕೊಟಡಿಯನ್ನು 10 ದಿನಗಳ ಮುಂಚಿತವಾಗಿ ದೂರವಾಣಿ ಮಾಡಿ ಕಾದಿರಿಸಬಹುದು.

ಅಖಿಲ ಭಾರತ ಶಿರಡಿ ಕ್ಷೇತ್ರ ಸಾಯಿ ಭಕ್ತ ನಿವಾಸ ಟ್ರಸ್ಟ್
ಸಾಯಿ-ದ್ವಾರ ಲೇನ್, ಸಾಯಿ ಪುಷ್ಪಾಂಜಲಿ ಹೋಟೆಲ್ ಹಿಂಭಾಗ,
ಪಿಂಪಲ್ವಾಡಿ ರಸ್ತೆ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ: 02423 – 256178

ಕರಿವೆನ ಬ್ರಾಹ್ಮಣ ಛತ್ರ
ಶಾಂತಿಕಮಲ್ ಹೋಟೆಲ್ ಎದುರು, ಭಕ್ತಿನಿವಾಸ ಹತ್ತಿರ, ಶಿರಡಿ - 423 109.
ದೂರವಾಣಿ: 02423 - 258118

ಕಾಶಿ ಅನ್ನಪೂರ್ಣ ಆರ್ಯ ವೈಶ್ಯ ಛತ್ರ
ಭಕ್ತಿ ನಿವಾಸ ಹತ್ತಿರ, ಹೈದರಬಾದ-ಮನಮಾಡ ರಸ್ತೆ, ಜೋಷಿ ಆಸ್ಪತ್ರೆ ಎದುರು
ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ : 02423 - 255039, 098228 - 93791

ಶ್ರೀ ಶಿರಡಿ ಸಾಯಿ ಸೇವಾ ಸದನ
ನಂ.111/24, ಗಾಯಕವಾಡಿ ವಸ್ತಿ,
ಕಾಳಿಕಾ ನಗರ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ:  +91 93259 12011 / +91 94402 76643 / +91 2423 325911
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಕುಮಾರ ಸ್ವಾಮಿ

ಕರ್ನಾಟಕ ಶ್ರೀ ಶಿರಡಿ ಸಾಯಿ ಭವನ
ಗುಂಟೂರು ಛತ್ರದ ಹತ್ತಿರ, ದತ್ತನಗರ,
ಪಿಂಪಲ್ವಾಡಿ ರಸ್ತೆ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ:  +91 2423 219805  / +91 94054 01308


3. ಆಶ್ರಮಗಳು 


ಗೋವಿಂದ ಧಾಮ
ಗರೋಡಿಯ ಹೋಟೆಲ್ ಹಿಂಭಾಗ, ಹೋಮಿ ಬಾಬಾ ಆಶ್ರಮ ರಸ್ತೆ
ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ: 02423 - 255001 / 258147


ನಾರಾಯಣ ಬಾಬಾ ಆಶ್ರಮ
ಪಿಂಪಲ್ವಾಡಿ ರಸ್ತೆ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ: 02423 - 255271 ಸಂಪರ್ಕಿಸಬೇಕಾದವರು: ವಿಜಯ್

ಸಾಯಿ ಕುಟೀರ
ಸಮಾಧಿ ಮಂದಿರದ ಹಿಂಭಾಗ, ಮಹಾಲಕ್ಷ್ಮಿ ಮಂದಿರದ ಎದುರುಸಾಲು,
ಪಿಂಪಲ್ವಾಡಿ ರಸ್ತೆ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ: 02423 - 256195

ಸಾಯಿ ವಿಜಯಶ್ರೀ ಅನ್ನದಾನ ಚಾರಿಟಬಲ್ ಟ್ರಸ್ಟ್
ದ್ವಾರಕಾ ನಿಲಯಂ, ಕೋತೆ ಗಲ್ಲಿ, ದ್ವಾರಕಾಮಾಯಿ ಹತ್ತಿರ,
ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ:  02423-255 023/099758 85557/093701 07223/093717 54111

ಶ್ರೀ ಸಾಯಿ ದತ್ತ ನಿಸ್ವಾರ್ಥ ಕರ್ಮ ಸೇವಾ ನಿತ್ಯ ಅನ್ನ ಛತ್ರ
ಮಾರುತಿ ಮಂದಿರದ ಪಕ್ಕ,
ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ:  083412 68806/099603 06397

ಶ್ರೀ ಸಾಯಿ ದ್ವಾರಕಾಮಾಯಿ ಭವನ
ಸಾಯೀಶ ಹೋಟೆಲ್ ಹಿಂಭಾಗ,
ಪಿಂಪಲ್ವಾಡಿ ರಸ್ತೆ, ಶಿರಡಿ - 423 109. ಮಹಾರಾಷ್ಟ್ರ
ದೂರವಾಣಿ: 094219 93891/02423-255 002

ಅಷ್ಟೇ ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನವು ಕೇವಲ ಸಾಯಿಬಾಬಾರವರ ದರ್ಶನವನ್ನು ಮಾಡಿ ತಕ್ಷಣವೇ ತಮ್ಮ ತಮ್ಮ ಊರುಗಳಿಗೆ ತೆರ‍ಳುವ ಪರಿಪಾಠವನ್ನು ಇಟ್ಟುಕೊಂಡಿರುವ ಸಾಯಿ ಭಕ್ತರಿಗಾಗಿ ಪ್ರಸಾಧನ ಹಾಗೂ ಸ್ನಾನ ಗೃಹಗಳ ವ್ಯವಸ್ಥೆಯನ್ನು ಸಹ ಮಾಡಿದೆ. ಅದರ ವಿವರ ಈ ಕೆಳಕಂಡಂತೆ ಇದೆ: 

ಪ್ರಸಾಧನ ಮತ್ತು ಸ್ನಾನ ಗೃಹಗಳ ವ್ಯವಸ್ಥೆ

ಅನೇಕ ಸಾಯಿ ಭಕ್ತರು ಶಿರಡಿಗೆ ಬಂದು ಕೇವಲ ಸಾಯಿಬಾಬಾರವರ ದರ್ಶನವನ್ನು ಮಾಡಿ ತಕ್ಷಣವೇ ತಮ್ಮ ತಮ್ಮ ಊರುಗಳಿಗೆ ತೆರ‍ಳುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಆದರೆ, ಅವರಿಗೆ ದೇವಾಲಯಕ್ಕೆ ದರ್ಶನಕ್ಕೆ ಹೋಗುವಾಗ ತಮ್ಮ ವಸ್ತುಗಳನ್ನು ಇರಿಸಲು ಸ್ಥಳ, ನಿತ್ಯ ಕರ್ಮಗಳನ್ನು ಪೂರೈಸಲು ಪ್ರಸಾಧನ ಮತ್ತು ಸ್ನಾನ ಗೃಹಗಳ ಅವಶ್ಯಕತೆಯಿದೆ. ಭಕ್ತರ ಈ ಅವಶ್ಯಕತೆಗಳನ್ನು ಮನದಲ್ಲಿಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನದವರು 120 ಪ್ರಸಾಧನ ಕೋಣೆಗಳನ್ನು ಮತ್ತು 108 ಸ್ನಾನಗೃಹಗಳನ್ನು ಇನ್ನಿತರ ಸೌಲಭ್ಯಗಳೊಡನೆ ನಿರ್ಮಾಣ ಮಾಡಿದ್ದು ಅದು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುತ್ತವೆ. ಈ ಸಂಕೀರ್ಣವು ಸಾಯಿಪ್ರಸಾದ ಭಕ್ತನಿವಾಸದ ಹಿಂಭಾಗದಲ್ಲಿದ್ದು ಇದನ್ನು ಸುಲಭ್ ಇಂಟರ್ ನ್ಯಾಷನಲ್ ರವರು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಸಾಯಿ ಭಜನ ಗಾಯಕರು - ಶ್ರೀ. ಗಂಗಾಧರ ತಿಲಕ್, ಶ್ರೀ. ಕಾರ್ತಿಕ್ ಮತ್ತು ಶ್ರೀ. ಶಿವಚರಣ್ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಶ್ರೀ. ಗಂಗಾಧರ ತಿಲಕ್ ರವರು ಶಿರಡಿ ಸಾಯಿಬಾಬಾರವರ ದಿವ್ಯಗಾನಾಮೃತವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಇಬ್ಬರು ಪುತ್ರರಾದ ಶ್ರೀ. ಕಾರ್ತಿಕ್ ಹಾಗೂ ಶ್ರೀ ಶಿವಚರಣ್ ರವರೊಂದಿಗೆ 1985 ರಲ್ಲಿ ಪ್ರಾರಂಭಿಸಿದರು. ಇವರ ಕುಟುಂಬದವರೆಲ್ಲರೂ ಅನನ್ಯ ಸಾಯಿ ಭಕ್ತರಾಗಿದ್ದು ಅನೇಕ ಭಕ್ತರಿಗೆ ಸಾಯಿಬಾಬಾರವರ ಮಹಿಮೆಯನ್ನು ಕುರಿತು ಭೋದನೆಯನ್ನು ಮಾಡಿ ಅವರು ಕೂಡ ಅನನ್ಯ ಸಾಯಿಭಕ್ತರಾಗುವಂತೆ ಅನವರತವೂ ಶ್ರಮಿಸುತ್ತಿದ್ದಾರೆ.

ಶ್ರೀ. ಗಂಗಾಧರ ತಿಲಕ್ ರವರು ತಮ್ಮ ಸುಶ್ರಾವ್ಯವಾದ ಧ್ವನಿಯಿಂದ ಸಾವಿರಾರು ಸಾಯಿ ಭಜನೆಗಳನ್ನು ಹಾಡಿ ಬೆಂಗಳೂರಿನ ಸಾಯಿಭಕ್ತರಿಗೆಲ್ಲ ಚಿರಪರಿಚಿತರಾಗಿದ್ದರೆ. ಇವರ "ದೇವಿ ಭವಾನಿ ಮಾ" ಹಾಗೂ "ಭಸ್ಮ ಭೂಷಿತಾಂಗ ಸಾಯಿ ಚಂದ್ರಶೇಖರ" ಭಜನೆಗಳು ಸಾಯಿಭಕ್ತರನ್ನು ಮಂತ್ರಮುಗ್ದರನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರೀ. ಕಾರ್ತಿಕ್ ರವರು ಕೇವಲ ಸುಶ್ರಾವ್ಯವಾಗಿ ಸಾಯಿ ಭಜನೆಯನ್ನು ಹಾಡುವುದೇ ಆಲ್ಲದೇ ಉತ್ತಮ ತಬಲಾ ವಾದಕರಾಗಿದ್ದು ತಮ್ಮ ಸುಮಧುರ ಧ್ವನಿಯಿಂದ ಮತ್ತು ತಬಲಾ ವಾದನದಿಂದ ಎಲ್ಲ ಸಾಯಿ ಭಕ್ತರ ಮನಸೂರೆಗೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ಇವರು ತಮ್ಮ ಎಲ್ಲ ಕೆಲಸದ ಒತ್ತಡಗಳ ನಡುವೆಯು  ಸಾಯಿ ಸೇವೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡುತ್ತ ಬಂದಿದ್ದಾರೆ.

ಶ್ರೀ. ಶಿವಚರಣ್ ರವರು ಬಾಲ್ಯದಿಂದಲೇ ವೇದ, ಸಂಸ್ಕೃತ, ಉಪನಿಷತ್ ಮತ್ತು ಇನ್ನು ಹಲವಾರು ವಿದ್ಯೆಗಳನ್ನು ಯಾರ ಮಾರ್ಗದರ್ಶನವೂ ಇಲ್ಲದೆ, ಕೇವಲ ಸಾಯಿಬಾಬಾರವರ ಕೃಪಾಕಟಾಕ್ಷದಿಂದ ಚೆನ್ನಾಗಿ ಕಲಿತಿದ್ದಾರೆ. ಇವರ ಸಂಸ್ಕೃತದ ಮೇಲಿನ ಪಾಂಡಿತ್ಯ ಎಲ್ಲರನ್ನು ಬೆರಗುಗೊಳಿಸುತ್ತದೆ. ಇವರು ಸಂಸ್ಕೃತದಲ್ಲಿ "ಶಿವ-ಪಾರ್ವತೀ ಕಲ್ಯಾಣ" ಎಂಬ ಕಾವ್ಯವನ್ನು ರಚಿಸಿದ್ದಾರೆ. ಆಲ್ಲದೇ ಶಿರಡಿ ಸಾಯಿಬಾಬಾರವರ "ಶ್ರೀ. ಸಾಯಿ ಸಹಸ್ರನಾಮ" ಕ್ಕೆ ಭಾಷ್ಯವನ್ನು "ಸಾಯಿ ಅಮೃತಧಾರ.ಕಾಂ" ನ ಅಂತರ್ಜಾಲದ ತಿಂಗಳ ವಾರ್ತಾ ಪತ್ರವಾದ "ಸಾಯಿ ಅಮೃತವಾಣಿ" ಯಲ್ಲಿ ಬರೆಯುತ್ತಿದ್ದಾರೆ. ಇವರ ಪ್ರತಿಭೆ ಇಷ್ಟಕ್ಕೆ ಸೀಮಿತವಲ್ಲ. ಇವರು ಎಲ್ಲ ಹೋಮ ಪ್ರಯೋಗವನ್ನು, ರುದ್ರಾಭಿಷೇಕದ ಕ್ರಮವನ್ನು ಕೂಡ ಯಾರ ಮಾರ್ಗದರ್ಶನವೂ ಇಲ್ಲದೆ, ಕೇವಲ ಸಾಯಿಬಾಬಾರವರ ಕೃಪಾಕಟಾಕ್ಷದಿಂದ ಚೆನ್ನಾಗಿ ಕಲಿತಿದ್ದಾರೆ ಹಾಗೂ ಬೆಂಗಳೂರಿನ ಅನೇಕ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ಹಾಗೂ ಸಾಯಿ ಭಕ್ತರ ಮನೆಗಳಲ್ಲಿ ಮಾಡಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಎಂ.ಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಇವರು ತಮ್ಮ ಎಲ್ಲ ಕೆಲಸದ ಒತ್ತಡಗಳ ನಡುವೆಯು ಸಾಯಿ ಸೇವೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡುತ್ತ ಬಂದಿದ್ದಾರೆ.

ಶ್ರೀಮತಿ.ಅನ್ನಪೂರ್ಣ ಗಂಗಾಧರ ತಿಲಕ್ ರವರು ಶ್ರೀ.ಗಂಗಾಧರ ತಿಲಕ್ ರವರ ಧರ್ಮಪತ್ನಿ. ಇವರು ತಮ್ಮ ಯಜಮಾನರಿಗೆ ಹಾಗೂ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರಾಗಿರುವುದೇ ಆಲ್ಲದೇ ಸ್ವತಃ ಒಳ್ಳೆಯ ಬರಹಗಾರ್ತಿಯಾಗಿದ್ದು ಕನ್ನಡದ ಕೃತಿಯಾದ "ಶ್ರೀ ಸಾಯಿಬಾಬಾ ಹೇಳಿದ ಮಾತುಗಳು" ಎಂಬ ಗ್ರಂಥವನ್ನು "ಶ್ರೀ ಸಾಯಿಬಾಬಾ ವಾಕ್ಸುಧಾಮೃಥಮು" ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದಾರೆ. ಆಲ್ಲದೇ ಪ್ರಸಿದ್ದ ಅವಧೂತರಾದ "ಶ್ರೀ ಶಂಕರ ಲಿಂಗ ಭಾಗವನ್" ರವರ ಜೀವನ ಚರಿತ್ರೆ, "ತುಂಬಿಗೆರೆಯ ಬ್ರಹ್ಮಾನಂದ" ರ ಜೀವನ ಚರಿತ್ರೆಗಳನ್ನು ಕೂಡ ಕನ್ನಡದಿಂದ ತೆಲುಗು ಭಾಷೆಗೆ ಅನುವಾದಿಸಿದ್ದಾರೆ.

ಶ್ರೀ.ಗಂಗಾಧರ ತಿಲಕ್ ರವರು 1991 ರಲ್ಲಿ "ಸಾಯಿ ಸೌರಭ" ಎಂಬ ದ್ವನಿಸುರಳಿಯನ್ನು ಕನ್ನಡದಲ್ಲಿ ಬಿಡುಗಡೆ ಮಾಡಿರುತ್ತಾರೆ.


ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:


ವಿಳಾಸ: 
"ದ್ವಾರಕಮಾಯಿ" , ನಂ. 1775, 27ನೇ  ಮುಖ್ಯರಸ್ತೆ, 9ನೇ ಬಡಾವಣೆ, ಜಯನಗರ, ಬೆಂಗಳೂರು-560 069.

ದೂರವಾಣಿ:
+91 80 22450365 / +91 99015 05022

ಈ ಮೇಲ್ ವಿಳಾಸ:

sivatilak@gmail.com


ಅಂತರ್ಜಾಲ ತಾಣ:
http://www.saiamrithadhara.com/

ಅಲ್ಬಮ್ ಗಳು: 
ಸಾಯಿ ಸೌರಭ

ಭಜನೆ ವೀಡಿಯೋಗಳು:  





































ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಶಿರಡಿಗೆ ಹೋಗಬೇಕಾದ ಅವಶ್ಯಕತೆಯೇನು? - ಕೃಪೆ - ಸಾಯಿ ಅಮೃತಧಾರಾ.ಕಾಂ


ನಮಗೆಲ್ಲ ತಿಳಿದಿರುವಂತೆ ಸಾಯಿಬಾಬ ಸರ್ವಾಂತರ್ಯಾಮಿ ಅಲ್ಲವೇ? ಸಾಯಿಬಾಬಾರವರು ವಿಶ್ವದೆಲ್ಲೆಡೆ ಇರುವರು. ಹಾಗಿದ್ದಾಗ, ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಪೂಜಿಸುವ ಅವಶ್ಯಕತೆಯೇನು? ನಾವಿರುವ ಜಾಗದಲ್ಲೇ ಅವರನ್ನು ಪೂಜಿಸಬಹುದಲ್ಲವೇ? ಈ ರೀತಿಯ ಪ್ರಶ್ನೆಗಳನ್ನು ಪದೇ ಪದೇ ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಸಂದರ್ಶಿಸಿ ಬರುವ ಭಕ್ತರಿಗೆ ಅವರ ಹಿರಿಯರು, ಸ್ನೇಹಿತರು ಮತ್ತು ಬಂಧುಗಳು ಕೇಳುವುದನ್ನು ನಾವೆಲ್ಲರೂ ನೋಡಿರಬಹುದು.

ಪ್ರಪಂಚದ ಎಲ್ಲಾ ಧರ್ಮಗಳೂ ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ, ತೀರ್ಥ ಕ್ಷೇತ್ರಗಳನ್ನು, ದೇವಾಲಯಗಳನ್ನು, ಸಾಧು ಸಂತರನ್ನು ಹಾಗೂ ಅವರ ಸಮಾಧಿಗಳನ್ನು ಸಂದರ್ಶನ ಮಾಡಬೇಕೆಂದು ಹೇಳುತ್ತವೆ. ಭಾರತದ ಎಲ್ಲಾ ಪುರಾಣ ಗ್ರಂಥಗಳೂ ಇದನ್ನೇ ಪ್ರತಿಪಾದಿಸುತ್ತವೆ. ಇಸ್ಲಾಂ ಧರ್ಮವು ಪ್ರತಿಯೊಬ್ಬ ಮುಸಲ್ಮಾನನು ಜೀವನದಲ್ಲಿ ಒಂದು ಬಾರಿಯಾದರೂ ಮೆಕ್ಕಾ (ಹಜ್ ಯಾತ್ರೆ) ಯಾತ್ರೆ ಮಾಡಲೇಬೇಕೆಂದು ಹೇಳುತ್ತವೆ. ಹಿಂದೂ ಧರ್ಮವು ಪ್ರತಿಯೊಬ್ಬ ಹಿಂದುವೂ ಜೀವನದಲ್ಲಿ ಒಂದು ಬಾರಿಯಾದರೂ ಕಾಶಿ ಯಾತ್ರೆಯನ್ನು ಮಾಡಬೇಕೆಂದು ಹೇಳುತ್ತವೆ. ಸೂಫಿ ಧರ್ಮವು ಭಕ್ತರು ಸಾಧು ಸಂತರಲ್ಲಿ ಶರಣಾಗುವಂತೆ ಹಾಗೂ ಅವರ ಸಮಾಧಿ ದರ್ಶನ ಮಾಡುವಂತೆ ಹೇಳುತ್ತವೆ. ಐತರೀಯ ಬ್ರಾಹ್ಮಣ ಉಪನಿಷತ್ತು ಯಾವ ಮನುಷ್ಯನು ಜೀವನದಲ್ಲಿ ಪುಣ್ಯ ಕ್ಷೇತ್ರಗಳ ಯಾತ್ರೆಯನ್ನು ಮಾಡುವುದಿಲ್ಲವೋ ಅವನು ಸುಖಿಯಾಗಿರಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಯಾಕೆಂದರೆ ಪ್ರತಿಯೊಬ್ಬ ಮನುಷ್ಯನು ಅವನು ಎಷ್ಟೇ ದೊಡ್ದವನಾಗಿರಲಿ ಅಥವಾ ಪಂಡಿತೊತ್ತಮನಾಗಿರಲಿ ಅವನು ಒಮ್ಮೆಯಾದರೂ ತಪ್ಪು ಮಾಡದೆ ಇರಲು ಸಾಧ್ಯವೇ ಇಲ್ಲವೆಂದು ಮತ್ತು ಅದಕ್ಕಾಗಿ ಪರಿಹಾರಾರ್ಥವಾಗಿ ಯಾತ್ರೆಯನ್ನು ಕೈಗೊಂಡು ಸ್ವಲ್ಪವಾದರೂ ಪಾಪವನ್ನು ತೊಳೆದುಕೊಳ್ಳಲು ಪ್ರಯತ್ನಪಡುವಂತೆ ಹೇಳುತ್ತದೆ.

ಭಾರತದ ಪ್ರಸಿದ್ದ ಋಷಿ, ಮುನಿಗಳೂ ಕೂಡ ತಾವೇ ಸ್ವತಃ ತೀರ್ಥ ಯಾತ್ರೆಗಳನ್ನು ಕೈಗೊಂಡು ತಮ್ಮ ಭಕ್ತರಿಗೆಲ್ಲ ದಾರಿ ದೀಪವಾಗಿದ್ದಾರೆ. ಪುರಾಣಗಳು ಅನೇಕ ಋಷಿಗಳು, ದೇವತೆಗಳು ಪುಣ್ಯ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿರುವುದನ್ನು ಧೃಡಪಡಿಸುತ್ತವೆ. ಭಾರತ ಕಂಡ ಪ್ರಸಿದ್ದ ಸಾಧು ಪುಂಗವರಾದ ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ಚೈತನ್ಯ ಮಹಾಪ್ರಭು, ಮೀರಾಬಾಯಿ, ಸಂತ ಜ್ಞಾನೇಶ್ವರ ಮಹಾರಾಜ, ಸಂತ ನಾಮದೇವ, ಸಂತ ತುಕಾರಾಮ, ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಇನ್ನು ಹಲವಾರು ಸಾಧು ಸಂತರು ದೇಶದ ಉದ್ದಗಲಕ್ಕೂ ಸಂಚರಿಸಿ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ತಪಸ್ಸನ್ನಾಚರಿಸಿ ಆ ಕ್ಷೇತ್ರಗಳನ್ನು ಪಾವನ ಗೊಳಿಸಿರುವುದು ನಮಗೆಲ್ಲ ತಿಳಿದಿದೆ. ಈ ಮಹಾ ಮಹಿಮರೆಲ್ಲ ತಾವು ಇರುವೆಡೆಯಲ್ಲಿ ದೇವರನ್ನು ಕಾಣಲಾಗದೆ ತೀರ್ಥ ಯಾತ್ರೆ ಕೈಗೊಳ್ಳಲಿಲ್ಲ. ಸಾಮಾನ್ಯ ಜನರಿಗೆ ತೀರ್ಥ ಯಾತ್ರೆಯ ಮಹತ್ವವನ್ನು ತಿಳಿಸುವುದಕ್ಕೊಸ್ಕರವಾಗಿ ತೀರ್ಥ ಯಾತ್ರೆ ಕೈಗೊಂಡರು.

ಪ್ರಸಿದ್ದ ಸಂತರಾದ ಜ್ಞಾನೇಶ್ವರ ಮಹಾರಾಜ ಹಾಗೂ ನಾಮದೇವ ರವರು ಪ್ರಾರಂಭಿಸಿದ "ವಾರಕರಿ ಸಂಪ್ರದಾಯ" ವು ದೇಶದಾದ್ಯಂತ ಪಾಂಡುರಂಗನ ಮಹಿಮೆಯನ್ನು ಕೊಂಡಾಡುತ್ತಾ ಪ್ರತಿ ವರ್ಷವೂ ಭಕ್ತರು ಪಂಡರಾಪುರ ಯಾತ್ರೆ ಮಾಡುವ ಪದ್ದತಿಯನ್ನು ಆಚರಣೆಗೆ ತಂದರು. ಈ ಸಂಪ್ರದಾಯವನ್ನು ಮುಂದೆ ಸಂತ ಏಕನಾಥ ಮತ್ತು ಸಂತ ತುಕಾರಾಮ ಜನಪ್ರಿಯಗೊಳಿಸಿದರು. ಮರಾಠಿಯಲ್ಲಿ "ವಾರಕರಿ" ಎಂದರೆ "ಯಾತ್ರೆಯನ್ನು ಕೈಗೊಳ್ಳುವವನು" ಎಂದು ಅರ್ಥ. ತೀರ್ಥಯಾತ್ರೆಯ ಉದ್ದೇಶವೇನೆಂದರೆ ಭಕ್ತನು ದೇವರನ್ನು ಹೊರಗಿನ ಕಣ್ಣುಗಳಿಂದ ನೋಡಿ ಅಂತಚಕ್ಷುಗಳಿಂದ ಪ್ರತಿಯೊಬ್ಬ ಮನುಷ್ಯನಲ್ಲೂ ದೇವರನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು.  

ಆದರೆ ನಾವುಗಳು ಒಂದು ವಿಷಯವನ್ನು ಚೆನ್ನಾಗಿ ಗಮನಿಸಬೇಕು. ಅದೇನೆಂದರೆ, ಪುರಾಣಗಳು ಹಾಗೂ ಸಂತರು, ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ನಮ್ಮನ್ನು ನಾವು ಅರಿತುಕೊಳ್ಳಲು ತೀರ್ಥಯಾತ್ರೆ ಕೈಗೊಳ್ಳಬೇಕೆಂದು ಹೇಳಿದರೇ ವಿನಹ  ನಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳುವುದಕ್ಕಾಗಿ ಅಥವಾ ಮೋಕ್ಷಕ್ಕಾಗಿ ಅಲ್ಲ. ಈ ರೀತಿಯ ಮೂಢನಂಬಿಕೆಗಳನ್ನು ತೀರ್ಥಕ್ಷೇತ್ರಗಳ ಪುರೋಹಿತರು ಹೆಚ್ಹು ಹೆಚ್ಹು ಜನರು ಬರಲೆಂದು ಹುಟ್ಟು ಹಾಕಿದರು. ಮನುಷ್ಯನು ಪ್ರತಿಕ್ಷಣವೂ ಪಾಪ ಕರ್ಮಗಳನ್ನೇ ಮಾಡಿ ತೀರ್ಥಕ್ಷೇತ್ರಗಳಲ್ಲಿ ಮಿಂದು ಬಂದರೆ ಅವನ ಪಾಪ ತೊಳೆದು ಹೋಗುವುದಿಲ್ಲವೆಂದು ಶ್ರೇಷ್ಠ ಸಂತರು ಹಾಗೂ ಪುರಾಣಗಳು ಖಡಾಖಂಡಿತವಾಗಿ ತಿಳಿಸುತ್ತಾರೆ. ದೇವಿ ಭಾಗವತವು "ಯಾವ ಮನುಷ್ಯನು ಅಂತರಂಗ ಶುದ್ದಿಯಿಂದ ತೀರ್ಥ ಯಾತ್ರೆ ಮಾಡುವನೋ ಅವನು ಮಾತ್ರ ಯಾತ್ರೆಯ ಪ್ರಯೋಜನ ಪಡೆಯುತ್ತಾನೆ. ಪಾಪಿಷ್ಟನು ಯಾತ್ರೆ ಮಾಡಿದರೆ ಅವನ ಪಾಪ ಇನ್ನಷ್ಟು ಹೆಚ್ಚುತ್ತದೆ ಹೊರತು ಪಾಪ ತೊಳೆದು ಹೋಗುವುದಿಲ್ಲ" ಎಂದು ತಿಳಿಸುತ್ತದೆ.

ಪ್ರಸಿದ್ದ ಗೋದಾವರಿ ನದಿಯ ತೀರದಲ್ಲಿರುವ ಶಿರಡಿ ಕ್ಷೇತ್ರದಲ್ಲಿ ೬೦ ವರ್ಷಗಳಿಗೂ ಹೆಚ್ಚು ಕಾಲ  ಪರಬ್ರಹ್ಮ ಸ್ವರೂಪಿಯಾದ, ದತ್ತವತಾರಿಯಾದ ಸಾಯಿಬಾಬಾರವರು ಜೀವಿಸಿ ಆ ಕ್ಷೇತ್ರವನ್ನು ಅತ್ಯಂತ ಪವಿತ್ರವಾದ ಪುಣ್ಯಭೂಮಿಯನ್ನಾಗಿಸಿದ್ದಾರೆ. ಆದುದರಿಂದ ಸಾಯಿಭಕ್ತರು ಪರಿಶುದ್ದವಾದ ಮನಸ್ಸಿನಿಂದ ಶಿರಡಿಯ ಯಾತ್ರೆಯನ್ನು ಪ್ರತಿ ವರ್ಷವೂ ತಪ್ಪದೆ ಮಾಡಿದರೆ, ಅವರ ಇಷ್ಟಾರ್ಥಗಳೆಲ್ಲವೂ ಸಿದ್ದಿಸುವುದು ಎಂಬುದರಲ್ಲಿ ಸಂಶಯವೇ ಇಲ್ಲ.

Sunday, June 27, 2010

ಶಿರಡಿ ಸಾಯಿಬಾಬಾ ಯಾರು ? - ಕೃಪೆ - ಸಾಯಿ ಅಮೃತಧಾರಾ.ಕಾಂ 


ಶ್ರೀ ಸಾಯಿ ಸಚ್ಚರಿತೆಯಲ್ಲಿ ಹೇಳಿರುವಂತೆ ಸಾಯಿಬಾಬಾರವರ ಜೀವನವು ಸಾಗರದಷ್ಟು ಆಳವು ಮತ್ತು ವಿಶಾಲವೂ ಆಗಿದೆ. ಆ ಸಾಗರದಲ್ಲಿ ಯಾರು ಬೇಕಾದರೂ ಮುಳುಗಿ ಜ್ಞಾನ ಮತ್ತು ಭಕ್ತಿಯೆಂಬ ಅನರ್ಘ್ಯ ಮುತ್ತು ರತ್ನಗಳನ್ನು ಪಡೆಯಬಹುದು ಮತ್ತು ಅವನ್ನು ಇತರರಿಗೂ ಹಂಚಬಹುದು.

ಆದ್ದರಿಂದ ಸಾಯಿಬಾಬಾ ಎಂದರೆ ಯಾರು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟಕರವಾದ ಕೆಲಸ. ಸಾಯಿಬಾಬಾರವರ ಬಗ್ಗೆ ಈಗ ಇರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದರೂ ಕೂಡ ಸಾಯಿಬಾರವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಮ್ಮನ್ನು ಪ್ರಶ್ನೆ ಹಾಗೆಯೇ ಕಾಡುತ್ತದೆ. ಏಕೆಂದರೆ, ಸರ್ವಾಂತರ್ಯಾಮಿಯಾದ ಹಾಗೂ ವರ್ಣನಾತೀತನಾದವನನ್ನು ವರ್ಣಿಸುವುದು ಹೇಗೆ? ನಿಗೂಢ ವ್ಯಕ್ತಿತ್ವದ ಸಾಯಿಬಾಬಾರವರ ಬಗ್ಗೆ ಮಾತನಾಡುವುದು ಹೇಗೆ? ಸಾಯಿ ಸಚ್ಚರಿತೆಯ ಲೇಖಕರೆಂದೇ ಪ್ರಸಿದ್ದಿ ಪಡೆದ ಶ್ರೀ.ಗೋವಿಂದ ಧಾಬ್ಹೊಲ್ಕರ್ ಅಲಿಯಾಸ್ ಹೇಮಾಡಪಂತರು ಸಾಯಿಬಾಬಾರವರ ಅಪರಿಮಿತವಾದ ಪ್ರೀತಿ ಮತ್ತು ಅವರ ಸರ್ವಾಂತರ್ಯಾಮಿತ್ವವನ್ನು ವರ್ಣಿಸಲು ತಮಗೆ ಸಾಧ್ಯವಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಇಲ್ಲಿ ಹೇಮಾಡಪಂತರು ಸಾಯಿಬಾಬಾ ಎಂದರೆ ಯಾರು ಎಂಬ ಪ್ರಶ್ನೆಗೆ ಸೂಕ್ಷ್ಮವಾಗಿ ತಿಳಿಸಲು ಪ್ರಯತ್ನಿಸಿದ್ದಾರೆಂದು ಅನಿಸುತ್ತದೆ. ಯಾಕೆಂದರೆ, ಕೆಲವು ಸಾಯಿಭಕ್ತರಿಗೆ ಸಾಯಿಬಾಬಾರವರು ಪ್ರೀತಿಯ ಅವತಾರ ಮುರ್ತಿಯಂತೆ ಗೋಚರಿಸಿದರೆ, ಮತ್ತೆ ಕೆಲವು ಭಕ್ತರಿಗೆ ಸಾಯಿಬಾಬಾರವರ ಅಂತರ್ಯಾಮಿತ್ವ ಸ್ವತಃ ಅರಿವಾಗುತ್ತದೆ. ಆದುದರಿಂದ, ಸಾಯಿಬಾಬಾರವರನ್ನು ಸ್ವತಃ ಅನುಭವದಿಂದ ತಿಳಿದುಕೊಳ್ಳಬೇಕೆ ವಿನಃ ಅವರ ಬಗ್ಗೆ ತಿಳಿಸಲು ಶಕ್ಯವಿಲ್ಲ. ಸಾಯಿಬಾಬಾರವರ ಅಪರಿಮಿತ ಪ್ರೀತಿ ಮತ್ತು ಅವರ ಅಂತರ್ಯಾಮಿತ್ವ ಎರಡನ್ನು ಅರಿತ ಸಾಯಿಭಕ್ತರು ಅದೃಷ್ಟವಂತರೆಂದೇ ಹೇಮಾಡಪಂತರು ಹೇಳುತ್ತಾರೆ.

ಸಾಯಿಬಾಬಾರವರು ಪುಣ್ಯ ಭೂಮಿ ಭಾರತ ಕಂಡ ಅತ್ಯುನ್ನತ ಸಂತ ಶಿರೋಮಣಿ ಮತ್ತು ದೇವ ಮಾನವನೆಂದರೆ ತಪ್ಪಾಗಲಾರದು. ಇವರ ದಿವ್ಯಶಕ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಇವರು ಯುವಕನಾಗಿದ್ದಾಗಲೇ ಯಾರಿಗೂ ಹೇಳದೆ ಶಿರಡಿಯ ಗ್ರಾಮದ ಹೊರಭಾಗದಲ್ಲಿದ್ದ ಒಂದು ಬೇವಿನ ಮರದ ಕೆಳಗೆ ಕಾಣಿಸಿಕೊಂಡರು ಮತ್ತು ತಮ್ಮ ಜೀವಿತದ ಕೊನೆಯವರೆಗೆ ಶಿರಡಿಯಲ್ಲೇ ವಾಸ ಮಾಡಿದರು. ಇವರನ್ನು ಭೇಟಿಯಾದ ಜನರ ಕಷ್ಟಗಳನ್ನು ನಿವಾರಿಸುತ್ತ ಮತ್ತು ಅವರ ಜೀವನ ಶೈಲಿಯನ್ನು ಪರಿವರ್ತಿಸುತ್ತಿದ್ದರು ಮತ್ತು ಈಗಲೂ ಕೂಡ ಅವರನ್ನು ನಂಬಿದ ಭಕ್ತರ ಕಷ್ಟಗಳನ್ನು ನಿವಾರಿಸುತ್ತಿದ್ದಾರೆ ಮತ್ತು ಅವರನ್ನು ಆಶೀರ್ವದಿಸುತ್ತಿದ್ದಾರೆ.

ಸಾಯಿಬಾಬಾರವರು ತಾವು ಭಕ್ತರನ್ನು ಆಶೀರ್ವದಿಸುವ ಸಲುವಾಗಿ ಅವತರಿಸುವೆನೆಂದು ಹೇಳುತ್ತಿದ್ದರು. ಅದನ್ನು ಅವರು ಅನೇಕ ನಿಗೂಢ ರೀತಿಯಲ್ಲಿ ಮಾಡುತ್ತಿದ್ದರು. ಅನಾರೋಗ್ಯದಿಂದ ಬಳಲುವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಿದ್ದರು, ಅನೇಕ ಭಕ್ತರ ಜೀವ ಉಳಿಸಿದರು, ಆಶಕ್ತರನ್ನು ರಕ್ಷಿಸಿದರು, ಅಪಾಯಗಳನ್ನು ಮೊದಲೇ ಗ್ರಹಿಸಿ ಅಪಾಯವಾಗದಂತೆ ನೋಡಿಕೊಳ್ಳುತ್ತಿದ್ದರು, ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಆಶೀರ್ವದಿಸುತ್ತಿದ್ದರು, ಬಡವರಿಗೆ ಹಣವನ್ನು ನೀಡಿ ಶ್ರೀಮಂತನಾಗುವಂತೆ ಮಾಡುತ್ತಿದ್ದರು, ಎಲ್ಲಾ ವರ್ಗದ ಜನರು ಸೌಹಾರ್ದದಿಂದ ಬಾಳುವಂತೆ ಸದಾಕಾಲ ಶ್ರಮಿಸುತ್ತಿದ್ದರು ಮತ್ತು ಇವಲ್ಲಕ್ಕಿಂತ ಮಿಗಿಲಾಗಿ ತಮ್ಮ ಬಳಿ ಬಂದ ಎಲ್ಲಾ ಭಕ್ತರೂ ಕೂಡ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದರು. ಅವರ ಸಹವರ್ತಿ ಭಕ್ತರು ಹೇಳುವಂತೆ ಸಾಯಿಬಾಬಾರವರು ತಾವು ಭಕ್ತರಿಗೆ ಉಪದೇಶ ನೀಡಿದಂತೆ ತಾವು ಕೂಡ ನಡೆದುಕೊಳ್ಳುತ್ತಿದ್ದರು ಮತ್ತು ತಮ್ಮ ಬಳಿ ಬಂದ ಭಕ್ತರು ಸಾಧಕರಾಗುವಂತೆ ಮಾಡುತ್ತಿದ್ದರು. ಸಾಯಿ ಭಕ್ತರಿಗೆ ಸಾಯಿಬಾಬಾರವರು ದೇವರ ಅವತಾರವಷ್ಟೇ ಅಲ್ಲದೇ ಬೇರೇನೂ ಅಲ್ಲ.

ಸಾಯಿಬಾಬಾರವರು ಜಾತ್ಯಾತೀತರಾಗಿದ್ದರು. ಯಾವುದೇ ಮತ ಪಂಗಡಕ್ಕೆ ಸೇರಿರಲಿಲ್ಲ. ಅವರ ಜಾತಿ ಯಾವುದು, ಅವರ ಮಾತಾಪಿತರು ಯಾರು ಎಂಬುದು ಯಾರಿಗೂ ಈಗಲೂ ಕೂಡ ತಿಳಿದಿಲ್ಲ. ಕೆಲವರು ಇವರನ್ನು ಹಿಂದೂವೆಂದು ತಿಳಿದಿದ್ದರು, ಮತ್ತೆ ಕೆಲವರು ಇವರನ್ನು ಮುಸ್ಲಿಂ ಎಂದು ನಂಬಿದ್ದರು. ಇವರು ಎಲ್ಲಾ ಮತಗಳಿಗೂ ಸೇರಿದ್ದವರಾಗಿದ್ದರು. ಆದರು ಯಾವ ಮತದ ಡಂಭಾಚಾರ ಪದ್ದತಿಗಳಿಗೂ ಅಂಟಿ ಕೊಂಡಿರಲಿಲ್ಲ. ಎಲ್ಲಾ ಜಾತಿ ಮತದವರು ಸಾಯಿಬಾಬಾರವರನ್ನು ಪ್ರೀತಿಯಿಂದ ಮತ್ತು ಭಕ್ತಿಯಿಂದ ಸೇವಿಸುತ್ತಿದ್ದರು. ಹಿಂದುಗಳಿಗೆ ಹಿಂದುವಿನಂತೆ, ಮುಸ್ಲಿಮರಿಗೆ ಮುಸ್ಲಿಮರಂತೆ ಗೋಚರಿಸುತ್ತಿದ್ದರು. ಆದರೆ, ಹಿಂದುಗಳಿಗೆ ತಮ್ಮನ್ನು ಫಕೀರನೆಂದು ಮತ್ತು ಮುಸ್ಲಿಮರಿಗೆ ತಮ್ಮನ್ನು ಬ್ರಾಹ್ಮಣನೆಂದು ಸ್ವೀಕರಿಸಲು ಒತ್ತಾಯ ಮಾಡುತ್ತಿದ್ದರು. ಹಿಂದುಗಳಿಗೆ ಅವರ ಧರ್ಮದ ಪ್ರಕಾರ ತಮ್ಮನ್ನು ಪೂಜಿಸಲು ಅನುಮತಿ ನೀಡಿದರೆ, ಮುಸ್ಲಿಮರು ತಮ್ಮ ಧರ್ಮದಂತೆ ಪೂಜಿಸಲು ಅವಕಾಶ ನೀಡಿದ್ದರು. ಇದರಿಂದ ಹಿಂದೂಗಳು ಸಾಯಿಬಾಬಾರವರನ್ನು ತಮ್ಮವರೆಂದು, ಮುಸ್ಲಿಮರು ತಮ್ಮ ಪಂಗಡದವರೆಂದು ತಿಳಿದುಕೊಂಡಿದ್ದರು. ಆದರೆ ಸಾಯಿಬಾಬಾರವರು ಯಾವಾಗಲೂ ಮಸೀದಿಯಲ್ಲಿ ವಾಸ ಮಾಡುತ್ತಾ ಸದಾಕಾಲ ಬಾಯಲ್ಲಿ ಅಲ್ಲಾ ನಾಮವನ್ನು ಉಚ್ಚರಿಸುತ್ತಿದ್ದರು.

ಸಾಯಿಬಾಬಾರವರು ಯಾರಿಗೂ ಉದ್ದುದ್ದ ಭಾಷಣವನ್ನಾಗಲೀ, ಉಪದೇಶವನ್ನಾಗಲಿ ನೀಡುತ್ತಿರಲಿಲ್ಲ. ಆದರೆ, ಭಕ್ತರು ತಮ್ಮ ಸ್ವಂತ ಅನುಭವದಿಂದ ಇವರನ್ನು ತಿಳಿಯುವಂತೆ ಮಾಡುತ್ತಿದ್ದರು. ಸಾಯಿಬಾಬಾರವರು ಯಾರು ತಮ್ಮ ಧರ್ಮವನ್ನು, ಆಚಾರ ವಿಚಾರಗಳನ್ನು ಬಿಡದಂತೆ ಹೇಳುತಿದ್ದರು. ಒಮ್ಮೆ ಒಬ್ಬ ಹಿಂದೂ ಭಕ್ತನು ಮುಸ್ಲಿಮನಾಗಿ ಪರಿವರ್ತನೆ ಮಾಡಿಕೊಂಡಾಗ ಅವನ ಕಪಾಳಕ್ಕೆ ಚೆನ್ನಾಗಿ ಬಿಗಿದು "ಏನು, ನಿನ್ನ ಅಪ್ಪನನ್ನು ಬದಲಿಸಿದ್ದೀಯ?" ಎಂದು ರೇಗಾಡಿದರು.

ಸಾಯಿಬಾಬಾರವರು ಕೆಲವೊಮ್ಮೆ ಮೌನಿಯಾಗಿರುತ್ತಿದ್ದರು, ಮತ್ತೆ ಕೆಲವೊಮ್ಮೆ ತಮ್ಮ ಭಕ್ತರಿಗೆ ದೃಷ್ಟಾಂತವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಹಾಸ್ಯ ಮಾಡುತ್ತಿದ್ದರು, ಮತ್ತೆ ಕೆಲವು ವೇಳೆ ಇದ್ದಕ್ಕಿದ್ದಂತೆ ಕುಪಿತರಾಗುತ್ತಿದ್ದರು. ಕೆಲವು ಬಾರಿ ಸರಳವಾಗಿ ಭೋಧನೆ ಮಾಡುತ್ತಿದ್ದರು, ಮತ್ತೆ ಕೆಲವು ವೇಳೆ ವಾದಿಸುತ್ತಿದ್ದರು. ಸಾಯಿಬಾಬಾರವರು ಬಹಳ ಸರಳ ಜೀವನವನ್ನು ನಡೆಸುತ್ತಿದ್ದರು. ಹೀಗೆ ಭಕ್ತರ ಜೀವನ ಶೈಲಿಗೆ ತಕ್ಕಂತೆ ಉಪದೇಶ ನೀಡಿ ಅವರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದರು.

ಸಾಯಿಬಾಬಾರವರು ಭಕ್ತರಿಗೆ ತಮ್ಮ ಜೀವಿತದ ಕೊನೆಯವರೆಗೂ ಉಪದೇಶ ನೀಡುತ್ತಲೇ ಇದ್ದರು ಮತ್ತು ತಮ್ಮ ಉಪದೇಶಗಳಿಂದ ಅವರನ್ನು ಪರಿವರ್ತನೆ ಮಾಡುತ್ತಿದ್ದರು. ಕೆಲವರಿಗೆ ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡುವಂತೆ ಹೇಳುತಿದ್ದರು, ಮತ್ತೆ ಕೆಲವರಿಗೆ ಮೌನ ವಾಗಿರಲು ಹೇಳುತ್ತಿದ್ದರು. ಕೆಲವರಿಗೆ ಜಪ-ತಪ ಮಾಡಲು ಹೇಳುತ್ತಿದ್ದರು, ಮತ್ತೆ ಕೆಲವರಿಗೆ ಅದನ್ನು ಬಿಡುವಂತೆ ಹೇಳುತ್ತಿದ್ದರು. ಕಲವರಿಗೆ ನಾಮ ಜಪ ಮಾಡಲು ಹೇಳುತ್ತಿದ್ದರು, ಮತ್ತೆ ಕೆಲವರಿಗೆ ಕೀರ್ತನೆ ಮಾಡಲು ಪ್ರಚೋದಿಸುತ್ತಿದ್ದರು. ಹೀಗೆ ಭಕ್ತರಿಗೆ ಬೇರೆ ಬೇರೆ ರೀತಿಯ ಉಪದೇಶಗಳನ್ನು ನೀಡುತ್ತಿದ್ದರು. ಕೆಲವು ಭಕ್ತರಿಗೆ ತಮ್ಮ ಇಷ್ಟ ದೇವರಂತೆ ಕೂಡ ಗೋಚರಿಸಿದ ಪ್ರಸಂಗ ನಡೆದಿದೆ.

ಸಾಯಿಬಾಬಾರವರು ಭಕ್ತರಿಗೆ ತಮ್ಮ ಗುರುವಿನಲ್ಲಿ ಧೃಡ ಭಕ್ತಿಯಿರಬೇಕೆಂದು ಉಪದೇಶ ನೀಡುತ್ತಿದ್ದರು. ಶ್ರದ್ದೆ ಮತ್ತು ಸಬೂರಿ ಎಂಬ ಎರಡು ಕಾಸುಗಳನ್ನು ತಮ್ಮ ಗುರುವಿಗೆ ಅರ್ಪಿಸಬೇಕೆಂಬ ನೀತಿಯನ್ನು ಬಹಳ ಸುಂದರವಾಗಿ ಭೋದಿಸಿದರು.

ಈ ರೀತಿಯಲ್ಲಿ ಇಂದಿಗೂ ಸಾಯಿಬಾಬಾರವರು ತಮ್ಮ ಅಸಂಖ್ಯಾತ ಭಕ್ತರ ಮನದ ಬಯಕೆಗಳನ್ನು ಪೂರೈಸುತ್ತಾ, ಕಷ್ಟಗಳನ್ನು ನಿವಾರಿಸುತ್ತಾ ತಮ್ಮ ಅಂತರ್ಯಾಮಿತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.