Wednesday, June 1, 2011

ಔರಂಗಾಬಾದ್ ಜಿಲ್ಲೆಯ ಧೂಪಖೇಡದಲ್ಲಿರುವ ಚಾಂದ್ ಭಾಯಿ ಪಾಟೀಲನ ಮನೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಧೂಪಖೇಡ ಒಂದು ಸಣ್ಣ ಹಳ್ಳಿಯಾಗಿದ್ದು ಔರಂಗಾಬಾದ್ ನ ನೈಋತ್ಯ ದಿಕ್ಕಿನಲ್ಲಿದೆ. ಈ ಹಳ್ಳಿಯಲ್ಲಿ ಚಾಂದ್ ಭಾಯಿ ಪಾಟೀಲ ಹಳ್ಳಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಹಳ ಸ್ಥಿತಿವಂತನಾಗಿದ್ದನು. ಇವನಿಗೆ ಮಕ್ಕಳಿರಲಿಲ್ಲ. ಆದರೆ, ಇವನ ಸಹೋದರ ಅನ್ಸರ್ ಖಾನ್ ಮತ್ತು ಅವನ ಹೆಂಡತಿ ಉಮರ್ಬಿಗೆ ಗುಲಾಬ್ ಖಾನ್ ಎಂಬ ಮಗನಿದ್ದನು. ಗುಲಾಬ್ ಖಾನ್ ನ ಮಗ ಲಾಲ್ ಖಾನ್ ಈಗಲೂ ಜೀವಂತನಾಗಿದ್ದು ಇದೇ ಹಳ್ಳಿಯಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾನೆ. 

ಚಾಂದ್ ಭಾಯಿ ಪಾಟೀಲನ ಮನೆ ಇದ್ದ ಸ್ಥಳದಲ್ಲಿ ಈಗ ಒಂದು ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. 




ಒಮ್ಮೆ ಚಾಂದ್ ಭಾಯಿ ಪಾಟೀಲನು ತನ್ನ ಕುದುರೆಯನ್ನು ಕಳೆದುಕೊಂಡನು. ಲಾಲ್ ಖಾನ್ ನ ಹೇಳಿಕೆ ಪ್ರಕಾರ ಚಾಂದ್ ಭಾಯಿ ಪಾಟೀಲನು ಧೂಪಖೇಡದಿಂದ ಸುಮಾರು 15 ರಿಂದ 25 ಕಿಲೋಮೀಟರ್ ದೂರದಲ್ಲಿದ್ದ ಸಿನ್ಧೂನ್ ಮತ್ತು ಬಿನ್ಧೂನ್ ಎಂಬ ಎರಡು ಹಳ್ಳಿಗಳ ನಡುವೆ ತನ್ನ ಕುದುರೆಯನ್ನು ಕಳೆದುಕೊಂಡನು. ಚಾಂದ್ ಭಾಯಿ ಪಾಟೀಲ ತನ್ನ ಕುದುರೆಗಾಗಿ ಎಲ್ಲಾ ಕಡೆ ಹುಡುಕಾಡಿ, ಕುದುರೆ ಸಿಗದೇ ನಿರಾಶನಾಗಿ ಕುದುರೆಯ ಜೀನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ತನ್ನ ಮನೆಗೆ ಹಿಂತಿರುಗುತ್ತಿದ್ದ ದಾರಿಯಲ್ಲಿ ಮಾವಿನ ಮರದ ಕೆಳಗಡೆ ಕುಳಿತಿದ್ದ ಈ ಫಕೀರನನ್ನು ಕಂಡನು.ಫಕೀರನು ತನ್ನ ಚಿಲುಮೆಯನ್ನು ಸೇದಲು ತಯಾರಿ ನಡೆಸುತ್ತಿದ್ದನು. ನಿರಾಶನಾಗಿ ಹಿಂತಿರುಗಿ ಹೋಗುತ್ತಿದ್ದ ಚಾಂದ್ ಭಾಯಿ ಪಾಟೀಲನ ಹೆಸರನ್ನು ಹಿಡಿದು ಕೂಗಿ ಕರೆದು ಅವನ ಬೇಸರಕ್ಕೆ ಕಾರಣವನ್ನು ಕೇಳಿದನು. ಚಾಂದ್ ಭಾಯಿ ಪಾಟೀಲ ತಾನು ಕುದುರೆಯನ್ನು ಕಳೆದುಕೊಂಡ ವಿಷಯವನ್ನು ಅರುಹಿದನು. ಆಗ ಫಕೀರನು ಕುದುರೆಯು ಅಲ್ಲಿಯೇ ಇದ್ದ ಹಳ್ಳದ ಬಳಿ ಇದೆಯೆಂದು ಹೇಳಿ ಹೋಗಿ ನೋಡಲು ಹೇಳಿದನು. ಅದರಂತೆ ಚಾಂದ್ ಭಾಯಿ ಪಾಟೀಲ ಹೋಗಿ ನೋಡಲು ಕುದುರೆಯು ಅಲ್ಲಿಯೇ ಹಳ್ಳದ ಬಳಿ ಇದ್ದಿತು. ಚಾಂದ್ ಭಾಯಿ ಪಾಟೀಲನು ಸಂತೋಷಭರಿತನಾಗಿ ಕುದುರೆಯನ್ನು ಕರೆದುಕೊಂಡು ಫಕೀರನ ಬಳಿಗೆ ಬಂದನು. ಅಷ್ಟು ಹೊತ್ತಿಗೆ ಫಕೀರನು ಚಿಲುಮೆಯನ್ನು ಸಿದ್ಧಪಡಿಸಿದ್ದನು. ಆದರೆ ಚಿಲುಮೆಯನ್ನು ಹೊತ್ತಿಸಲು ಬೆಂಕಿ ಮತ್ತು ಬಟ್ಟೆಯನ್ನು ಒದ್ದೆ ಮಾಡಲು ನೀರಿನ ಅವಶ್ಯಕತೆ ಇದ್ದಿತು. ಫಕೀರನು ತನ್ನ ಚಿಮಟದಿಂದ ನೆಲಕ್ಕೆ ಎರಡು ಬಾರಿ ಹೊಡೆದು  ಬೆಂಕಿ ಮತ್ತು ನೀರು ಬರುವಂತೆ ಮಾಡಿದನು. ಫಕೀರನು ಕೂಡಲೇ ಚಿಲುಮೆಯನ್ನು ಹೊತ್ತಿಸಿ ತಾನು ಒಮ್ಮೆ ಸೇದಿ ಅದನ್ನು ಸೇದಲು ಚಾಂದ್ ಭಾಯಿ ಪಾಟೀಲನಿಗೂ ನೀಡಿದನು. ಅಲ್ಲಿ ನಡೆದ ಪವಾಡವನ್ನು ಕಂಡು ಚಾಂದ್ ಭಾಯಿ ಪಾಟೀಲನಿಗೆ ವಿಸ್ಮಯವಾಯಿತು. ಚಾಂದ್ ಭಾಯಿ ಫಕೀರನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದನು. ಅವನ ಆಹ್ವಾನವನ್ನು ಮನ್ನಿಸಿದ ಫಕೀರ ಚಾಂದ್ ಪಾಟೀಲನೊಡನೆ ಅವನ ಮನೆಗೆ ಹೋಗಿ ಕೆಲವು ದಿನಗಳು ಉಳಿದುಕೊಂಡರು. ಚಾಂದ್ ಪಾಟೀಲನ ಮೈದುನನ ಮಗನ ಮದುವೆ ಶಿರಡಿಯ ಹುಡುಗಿಯೊಂದಿಗೆ ನಿಶ್ಚಯವಾಯಿತು. ಅದಕ್ಕಾಗಿ ಚಾಂದ್ ಪಾಟೀಲನ ಮನೆಯವರೆಲ್ಲ ಶಿರಡಿಗೆ ಹೊರಡಲು, ಫಕೀರನು ಕೂಡ ಮದುವೆ ದಿಬ್ಬಣದ ಜೊತೆಯಲ್ಲಿ ಶಿರಡಿಯ ಖಂಡೋಬ ಮಂದಿರದ ಬಳಿಯಿದ್ದ ಆಲದ ಮರದ ಬಳಿ ಬಂದಿಳಿದನು. ಆಗ ಖಂಡೋಬ ಮಂದಿರದ ಪೂಜಾರಿ ಮಹಾಲ್ಸಾಪತಿಯವರು ಫಕೀರನನ್ನು "ಆವೋ ಸಾಯಿ" ಎಂದು ಆಹ್ವಾನ ನೀಡಿದರು. ಅಂದಿನಿಂದ ಶಿರಡಿಯ ಎಲ್ಲ ಗ್ರಾಮಸ್ತರೂ ಫಕೀರವನ್ನು ಸಾಯಿಬಾಬಾ ಎಂದೇ ಕರೆಯಲು ಪ್ರಾರಂಭಿಸಿದರು. ಅಂದಿನಿಂದ ಸುಮಾರು 60 ವರ್ಷಗಳ ಕಾಲ ಸಾಯಿಬಾಬಾರವರು ಶಿರಡಿಯಲ್ಲಿ ಜೀವಿಸಿದ್ದರು (ಸಾಯಿ ಸಚ್ಚರಿತ್ರೆ 5ನೇ ಅಧ್ಯಾಯ ನೋಡುವುದು). 

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment