Tuesday, March 22, 2011



ಸಾಯಿ ಭಜನ ಗಾಯಕ - ಶ್ರೀ.ಸಂದೀಪ್ ಪಾಂಡ್ಯ - ಕೃಪೆ: ಸಾಯಿಅಮೃತಧಾರಾ.ಕಾಂ  


 ಶ್ರೀ.ಸಂದೀಪ್ ಪಾಂಡ್ಯರವರು ಸಂಸ್ಕಾರ್ ಖಾಸಾಗಿ ವಾಹಿನಿಯ ಅಧಿಕೃತ ಭಜನ ಗಾಯಕರು, ಗಜಲ್ ಗಾಯಕರು ಮತ್ತು ಸಂಗೀತಗಾರರಾಗಿರುತ್ತಾರೆ. ಇವರು 15ನೇ ಜನವರಿ 1975 ರಂದು ರಾಜಸ್ಥಾನದ ಬನ್ಸ್ವಾರ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಪಿ.ರಾಜೇಂದ್ರ ಪಾಂಡ್ಯ ಮತ್ತು ತಾಯಿಯವರು ಶ್ರೀಮತಿ.ಹೇಮಸುತ ಪಾಂಡ್ಯ. ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯವರು ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯರು  ಮತ್ತು ತಾಯಿಯವರು ಗೃಹಿಣಿ. ಶ್ರೀ.ಸಂದೀಪ್ ಪಾಂಡ್ಯರವರು ಗುಜರಾತ್ ನವರಾದರೂ ಕೂಡ ಬಹಳ ವರ್ಷಗಳಿಂದ ರಾಜಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಇವರು ಶ್ರೀಮತಿ.ರಾಧಿಕ ಪಾಂಡ್ಯರವರನ್ನು ವಿವಾಹವಾಗಿ ರಾಜಸ್ಥಾನದ ಬನ್ಸ್ವಾರದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ವಿಜ್ಞಾನದಲ್ಲಿ ಪದವಿಯನ್ನು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೆ, ಮಹಾರಾಷ್ಟ್ರದ ಮೀರಜ್ ನ "ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ" ದಿಂದ  "ಸಂಗೀತ ವಿಶಾರದ" ಪದವಿಯನ್ನು ಕೂಡ ಗಳಿಸಿರುತ್ತಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ಸಂಗೀತಗಾರರ ಮತ್ತು ಸಂಗೀತ ಪ್ರೇಮಿಗಳ ಕುಟುಂಬದಲ್ಲಿ ಜನಿಸಿದರು. ಇವರ ಮನೆಯವರೆಲ್ಲರೂ ಭಕ್ತಿ ಸಂಗೀತದಲ್ಲಿ ತಮ್ಮನ್ನು ತಾವೇ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದಲೇ ಇವರಿಗೆ ಸಹಜವಾಗಿ ಬಾಲ್ಯದಿಂದಲೇ ಸಂಗೀತದ ಬಗ್ಗೆ ಒಲವು ಬೆಳೆಯಿತು ಎಂದರೆ ತಪ್ಪಾಗಲಾರದು. ಆದರೆ ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರ ದಂತಹ ಒಂದು ಸಣ್ಣ ಊರಿನಲ್ಲಿ ವಾಸಿಸುತ್ತಿದ್ದರಿಂದ ಸಂಗೀತ ಕಲಿಯಲು ಸಣ್ಣ ವಯಸ್ಸಿನಲ್ಲಿ ಬಹಳ ತೊಂದರೆಯಾಯಿತು. ಆದುದರಿಂದ ಶ್ರೀ.ಸಂದೀಪ್ ಪಾಂಡ್ಯರವರು ತಮ್ಮ ಓದಿನ ಕಡೆ ಹೆಚ್ಚಿನ ಗಮನವನ್ನು ಹರಿಸಿದರು. ನಂತರ ತಮ್ಮ ಹೈಸ್ಕೂಲ್ ಮತ್ತು ಕಾಲೇಜ್ ದಿನಗಳಲ್ಲಿ ಸಂಗೀತ ಶಿಕ್ಷಣವನ್ನು ಕ್ರಮಬದ್ಧವಾಗಿ ಕಲಿತು ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭ ಮಾಡಿದರು. ಇವರು ಅಂತರ ಶಾಲಾ, ಅಂತರ ಕಾಲೇಜು,  ಜಿಲ್ಲಾ ಮಟ್ಟದಲ್ಲಿ, ರಾಜ್ಯ  ಮಟ್ಟದಲ್ಲಿ ಮತ್ತು  ಅಂತರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಇವರು 1990ನೇ ಇಸವಿಯಲ್ಲಿ ಇನ್ನೂ ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ "ಸುರ ಸಂಗಮ್" ಎಂಬ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ "ಧ್ವನಿಮುದ್ರಿತ ಗೀತೆ" ಮತ್ತು "ಧ್ವನಿ ಮುದ್ರಿತವಲ್ಲದ ಗೀತೆ" ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸುವುದರಲ್ಲಿ ಯಶಸ್ವಿಯಾದರು. 

ಈ ಪ್ರಶಸ್ತಿಯು ಶ್ರೀ.ಸಂದೀಪ್ ಪಾಂಡ್ಯರವರಿಗೆ ಸಂಗೀತ ಶಿಕ್ಷಣ ಕಲಿಯುವಂತೆ ಇನ್ನಷ್ಟು ಹೆಚ್ಚು ಉತ್ಸಾಹವನ್ನು ತುಂಬಿತು. 1995 ನೇ ಇಸವಿಯಲ್ಲಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂದಿನಿಂದ ಇಂದಿನವರೆಗೂ ಆಕಾಶವಾಣಿಯ ಕಾಯಂ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

2001 ರಲ್ಲಿ ದಾಹೋಡ್, ಗುಜರಾತ್ ನ  ಖ್ಯಾತ ಸಂಗೀತ ವಿದ್ವಾಂಸರಾದ ಶ್ರೀ.ಕಪಿಲ್ ದೇವ್ ತ್ರಿವೇದಿಯವರ ಪರಿಚಯವಾಯಿತು. ಶ್ರೀ.ಸಂದೀಪ್ ಪಾಂಡ್ಯರವರು ತಮ್ಮನ್ನು ಗುರು ಶಿಷ್ಯ ಪರಂಪರೆಯ ಅಡಿಯಲ್ಲಿ ಶಿಷ್ಯರನ್ನಾಗಿ ಸ್ವೀಕರಿಸುವಂತೆ ಶ್ರೀ.ಕಪಿಲ್ ದೇವ್ ತ್ರಿವೇದಿಯವನ್ನು ಕೋರಿಕೊಂಡರು. ಶ್ರೀ.ತ್ರಿವೇದಿಯವರು ಇವರನ್ನು ಸಂತೋಷದಿಂದ ತಮ್ಮ ಶಿಷ್ಯನನ್ನಾಗಿ ಸ್ವೀಕಾರ ಮಾಡಿದರು. ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರದಿಂದ ಸುಮಾರು 100 ಕಿಲೋಮೀಟರ್ ದೂರವಿದ್ದ ದಾಹೋಡ್ ಗೆ ವಾರಕ್ಕೊಂದು ಬಾರಿ ಹೋಗಿ ಸಂಗೀತ ಶಿಕ್ಷಣವನ್ನು ಅಭ್ಯಾಸ ಮಾಡಿ ಬರುತ್ತಿದ್ದರು. ಹೀಗೆ ಸುಮಾರು 10 ವರ್ಷಗಳ ಕಾಲ ಸಂಗೀತ ಶಿಕ್ಷಣವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದರು. ಹೀಗೆ ಸಂಗೀತ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ಹಲವು ಕಾರ್ಯಕ್ರಮಗಳನ್ನೂ ಕೂಡ ನೀಡಿದರು. 2008 ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಯವರು ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ "ಯುವ  ಗಾಯಕ"  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ನಂತರದ ದಿನಗಳಲ್ಲಿ ಶ್ರೀ.ಸಂದೀಪ್ ಪಾಂಡ್ಯರವರು ಸಂಸ್ಕಾರ್ ವಾಹಿನಿಯ ಸಂಪರ್ಕದಲ್ಲಿ ಬಂದು ಅನೇಕ ಸಂಗೀತ, ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಸಂಸ್ಕಾರ್ ವಾಹಿನಿಯ ಖಾಯಂ ಗಾಯಕರಾಗಿರುತ್ತಾರೆ. 

ಬನ್ಸ್ವಾರದ ಸಾಯಿಬಾಬಾ ಮಂದಿರದ ಮುಖಾಂತರ 2005 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡ ಶ್ರೀ.ಸಂದೀಪ್ ಪಾಂಡ್ಯರವರು ಪ್ರತಿ ಭಾನುವಾರ ತಪ್ಪದೇ ಸಾಯಿಮಂದಿರಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಇವರು 2005 ರ ಗುರುಪೂರ್ಣಿಮೆಯಂದು ತಮ್ಮ ಪ್ರಪ್ರಥಮ ಸಾಯಿ ಭಜನೆಯ ಕಾರ್ಯಕ್ರಮವನ್ನು ಬನ್ಸ್ವಾರದ ಸಾಯಿಮಂದಿರದಲ್ಲಿ ನೀಡಿದರು. ನಂತರದ ದಿನಗಳಲ್ಲಿ ಇವರು ಖ್ಯಾತ ಸಾಯಿ ಬಂಧುಗಳಾದ ಶ್ರೀ.ದೀಪಕ್ ತನೇಜ ಮತ್ತು ಶ್ರೀ.ನವನೀತ್ ಅಗ್ನಿಹೋತ್ರಿಯವರ ಸಂಪರ್ಕಕ್ಕೆ ಬಂದು ಸಾಯಿಬಾಬಾರವರ ಬಗ್ಗೆ ಒಂದು ಧ್ವನಿಸುರಳಿಯನ್ನು ಮಾಡಲು ಪ್ರೇರೇಪಣೆಯಾಯಿತು. ಈ ಧ್ವನಿಸುರುಳಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರದಲ್ಲಿ "ಸರಸ್ವತಿ ಸಂಗೀತ ಕಲಾ ಸಂಸ್ಥಾನ" ಎಂಬ ಸಂಗೀತ ಶಾಲೆಯನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಭಕ್ತಿ ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಸುವ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. 

ಶ್ರೀ.ಸಂದೀಪ್ ಪಾಂಡ್ಯರವರು ಅನೇಕ ಸಾಯಿ ಭಜನ ಸಂಧ್ಯಾ, ಆರ್ಟ್ ಆಫ್ ಲೀವಿಂಗ್ ಸತ್ಸಂಗ ಮತ್ತು ಶಾಮ್ ಎ ಗಜಲ್ ಕಾರ್ಯಕ್ರಮಗಳನ್ನು ದೇಶದಾದ್ಯಂತ ನೀಡುತ್ತಾ ಬಂದಿದ್ದಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಯಾವುವೆಂದರೆ : ಅಂತರ ರಾಜ್ಯ ರಾಷ್ಟ್ರೀಯ ಭಾವೈಕ್ಯತ ಶಿಬಿರದ ಕಾರ್ಯಕ್ರಮ, ಫಿರೋಜಪುರ-1993, ರಾಜಸ್ಥಾನ ಸರ್ಕಾರದ ಯುವ ಉತ್ಸವ -1994,1995, 12ನೇ ಅಖಿಲ ಭಾರತ ಭಾವಗೀತೆ ಮತ್ತು ಜಾನಪದ ಗೀತೆಗಳ ಸ್ಪರ್ಧೆ-1989, ರಾಷ್ಟ್ರೀಯ ಮಾನವ ಸಂಪನ್ಮೂಲ ಮಂತ್ರಾಲಯದ ಕಾರ್ಯಕ್ರಮ-1990, ಜವಾಹರ್ ಕಲಾ ಕೇಂದ್ರದ ಕಾರ್ಯಕ್ರಮ-1992,1997 ಮತ್ತು 12ನೇ ರಾಷ್ಟ್ರೀಯ ಯುವ ಉತ್ಸವ, ಪುಣೆ-2007. 2008 ರಲ್ಲಿ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಜೋಧಪುರದ ಮಹಾರಾಣಿಯವರಿಂದ "ಯುವ ಪುರಸ್ಕಾರ" ಪ್ರಶಸ್ತಿ, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತಕ್ಕೆ ಇವರು ನೀಡಿದ ಕೊಡುಗೆಗೆ ರಾಜಸ್ಥಾನ ರೋಟರಿ ಸಂಸ್ಥೆಯವರಿಂದ 2011 ರಲ್ಲಿ ಸನ್ಮಾನ.

  ದುರ್ಗಾ ಮಾತಾ ಮೇಲೆ ಹಾಡಿದ ಧ್ವನಿಸುರಳಿ ಬಿಡುಗಡೆ 2010 

ಜೋಧಪುರ ಮಹಾರಾಣಿಯವರಿಂದ ಯುವ ಪುರಸ್ಕಾರ 2008

ಬನ್ಸ್ವಾರಾದ ರೋಟರಿ ಕ್ಲಬ್ ನಿಂದ 2011 ರಲ್ಲಿ ಸನ್ಮಾನ 

ಪ್ರಪಂಚದಾದ್ಯಂತ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಮುಖಾಂತರ ಸಾಯಿ ಪ್ರಚಾರವನ್ನು ಮಾಡಬೇಕೆಂಬ ಹೆಬ್ಬಯಕೆ ಶ್ರೀ.ಸಂದೀಪ್ ಪಾಂಡ್ಯರವರದು.

ಶ್ರೀ.ಸಂದೀಪ್ ಪಾಂಡ್ಯರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 


ವಿಳಾಸ:

ನಿರ್ದೇಶಕರು, ಸರಸ್ವತಿ ಸಂಗೀತ ಕಲಾ ಸಂಸ್ಥಾನ, ನಾಗವಾರ, ಬನ್ಸ್ವಾರ , ರಾಜಸ್ಥಾನ.

ದೂರವಾಣಿ ಸಂಖ್ಯೆ:
+91 94133 05874

ಈ ಮೇಲ್ ವಿಳಾಸ:
Sandycom.pandya356@gmail.com

ಅಂತರ್ಜಾಲ ತಾಣ:
http://www.sandeeppandya.com

ಭಜನೆ ವೀಡಿಯೋಗಳು:







ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment