ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ದೀಕ್ಷಿತ್ ವಾಡ - ಕೃಪೆ: ಸಾಯಿಅಮೃತಧಾರಾ.ಕಾಂ
ದೀಕ್ಷಿತ್ ವಾಡ ಎರಡು ಅಂತಸ್ತಿನ ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡಿರುವ ಕಟ್ಟಡವಾಗಿದ್ದು ಗುರುಸ್ಥಾನದ ಪಕ್ಕದಲ್ಲಿ ಇರುತ್ತದೆ.ಇಲ್ಲಿ ಒಂದು ದೊಡ್ಡದಾದ ಹಾಲ್ ಇದ್ದು ಇದನ್ನು ಸಾಯಿಬಾಬಾರವರ ಪರಮ ಭಕ್ತ ಶ್ಯಾಮರವರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಸಾಯಿಬಾಬಾ ಸಂಸ್ಥಾನದ ರಚನೆಯಾದಾಗ ಶ್ಯಾಮ ಅವರು ತಮ್ಮ ಮನೆಗೆ ವಾಪಸಾದರು. 1950ನೇ ಇಸವಿಯಲ್ಲಿ ಈ ಸ್ಥಳವನ್ನು ಪ್ರಸಾದಾಲಯವಾಗಿ ಮಾರ್ಪಡಿಸಲಾಗಿತ್ತು. ಇದರಿಂದ ಸಾವಿರಾರು ಸಾಯಿ ಭಕ್ತರ ಊಟ ಉಪಹಾರಗಳಿಗೆ ಬಹಳ ಅನುಕೂಲವಾಗಿತ್ತು. ದೀಕ್ಷಿತ್ ರವರು ತಮ್ಮ ಕಾಲದಲ್ಲಿ ಅನೇಕ ಸಾಯಿಭಕ್ತರ ಊಟ ಉಪಚಾರಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂಬ ವಿಷಯ ಇಲ್ಲಿ ಉಲ್ಲೇಖನಾರ್ಹ. ನಂತರ ಕೆಲವು ವರ್ಷಗಳ ಕಾಲ ಈ ಸ್ಥಳದಲ್ಲಿ ಟೀ ಕ್ಯಾಂಟೀನ್ ನಡೆಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಸ್ಥಳವನ್ನು "ಸಾಯಿಬಾಬಾ ವಸ್ತು ಸಂಗ್ರಹಾಲಯ" ವನ್ನಾಗಿ ಪರಿವರ್ತಿಸಲಾಗಿದೆ. ಅಂದಿನ ದಿನಗಳಲ್ಲಿ ದೀಕ್ಷಿತ್ ವಾಡ ದ ಹಾಲ್ ನ ಪಕ್ಕದಲ್ಲಿ ಇದ್ದ ಎರಡು ಕೋಣೆಗಳನ್ನು ವಾಚನಾಲಯವನ್ನಾಗಿ ಮಾರ್ಪಡಿಸಲಾಗಿತ್ತು. ಆದರೆ ಈಗ ಒಂದು ಕೋಣೆಯನ್ನು "ಪ್ರಥಮ ಚಿಕಿತ್ಸಾ ಕೇಂದ್ರ" ವನ್ನಾಗಿ ಮತ್ತು ಮತ್ತೊಂದು ಕೋಣೆಯನ್ನು "ಸ್ವಯಂ ಪ್ರೇರಿತ ರಕ್ತದಾನ ಕೇಂದ್ರ" ವನ್ನಾಗಿ ಮಾರ್ಪಡಿಸಲಾಗಿದೆ.
ಕಾಕಾ ದೀಕ್ಷಿತ್ ರವರು ಮೊಟ್ಟ ಮೊದಲ ಬಾರಿಗೆ 2ನೇ ನವೆಂಬರ್ 1909 ರಲ್ಲಿ ಶಿರಡಿಗೆ ಭೇಟಿ ನೀಡಿದರು. ಸಾಯಿಬಾಬಾರವರ ದೈವಿಕ ಶಕ್ತಿಯನ್ನು ಕಂಡು ಕಾಕಾರವರ ಮನ ಪರಿವರ್ತನೆಯಾಗಿ ಶಿರಡಿಯಲ್ಲೇ ಒಂದು ವಾಡ ಕಟ್ಟಿಸಿ ಅಲ್ಲಿಯೇ ತಮ್ಮ ಜೀವಮಾನವನ್ನು ಕಳೆಯಬೇಕೆಂದು ನಿರ್ಧಾರ ಮಾಡಿದರು. ಪುನಃ ಡಿಸೆಂಬರ್ 1909 ರಲ್ಲಿ ಶಿರಡಿಗೆ ಭೇಟಿ ನೀಡಿದಾಗ ಅವರ ನಿರ್ಧಾರ ಇನ್ನಷ್ಟು ಪಕ್ವವಾಯಿತು.
ಮೊದಲು ತಮ್ಮ ಬಳಿ ತಮ್ಮ ಕಂಪನಿಯವರು ನೀಡಿದ್ದ 25 ಶೇರುಗಳನ್ನು ಮಾರಿ ಅದರಿಂದ ಬಂದ ಹಣದಿಂದ ಶಿರಡಿಯಲ್ಲಿ ಒಂದು ತಗಡಿನ ಜೋಪಡಿಯನ್ನು ಕಟ್ಟಿಸಬೇಕೆಂದು ತೀರ್ಮಾನಿಸಿದ್ದರು. ಆದರೆ ಸ್ವಲ್ಪ ದಿನಗಳ ನಂತರ ತಮ್ಮ ನಿರ್ಧಾರವನ್ನು ಬದಲಿಸಿ ತಗಡಿನ ಜೋಪಡಿಯ ಬದಲಿಗೆ ಶಿರಡಿಗೆ ಯಾತ್ರಿಕರು ಬಂದರೆ ಉಳಿದುಕೊಳ್ಳಲು ಅನುಕೂಲವಾಗುವಂತೆ ವಾಡ ನಿರ್ಮಾಣ ಮಾಡಲು ನಿರ್ಧರಿಸಿದರು. ಅದರಂತೆ, 9ನೇ ಡಿಸೆಂಬರ್ 1910 ರಂದು ಸಾಯಿಬಾಬಾರವರ ಒಪ್ಪಿಗೆಯನ್ನು ಪಡೆದು ಭೂಮಿಪೂಜೆಯನ್ನು ನೆರವೇರಿಸಿದರು. ಇವರ ಸಹೋದರ ಮತ್ತು ಇವರು ಒಟ್ಟಿಗೆ ಹಗಲು ರಾತ್ರಿ ದುಡಿದು ದೀಕ್ಷಿತ್ ವಾಡವನ್ನು ಕೇವಲ ಆರು ತಿಂಗಳಿನಲ್ಲಿ ಪೂರ್ಣಗೊಳಿಸಿದರು.
1911 ನೇ ಇಸವಿಯ ರಾಮನವಮಿಯ ಪವಿತ್ರ ದಿನದಂದು ದೀಕ್ಷಿತ್ ವಾಡ ದ ಗೃಹಪ್ರವೇಶವನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
ದೀಕ್ಷಿತ್ ರವರು ಬಹಳ ವಿದ್ಯಾವಂತರಾಗಿದ್ದು ಮುಂಬೈ ನ ಪ್ರಸಿದ್ದ ಸಾಲಿಸಿಟರ್ ಆಗಿ ಕೆಲಸ ಮಾಡುತ್ತಿದ್ದರು.ಇವರು ಬಹಳ ಸ್ಥಿತಿವಂತರಾಗಿದ್ದು ಮುಂಬೈ ಮತ್ತು ಲೋನಾವಳ ದಲ್ಲಿ ಎರಡು ದೊಡ್ಡ ಬಂಗಲೆಗಳನ್ನು ಹೊಂದಿದ್ದರು. ಅಲ್ಲದೆ, ಇವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು ಮುಂಬೈ ಶಾಸನ ಸಭೆಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇವರ ಸಾಧನೆಗಳು ಬಹಳವಾಗಿದ್ದು ಇವರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದರೆ ತಮ್ಮ ಬಳಿ ಇದ್ದ ಬಂಗಲೆ, ಹಣ, ಕೀರ್ತಿ ಎಲ್ಲವನ್ನು ತ್ಯಜಿಸಿ ಸಾಯಿಬಾಬಾರವರ ದೈವಿಕ ಶಕ್ತಿಯಿಂದ ಆಕರ್ಷಿತರಾಗಿ ಶಿರಡಿಯಲ್ಲೇ ತಮ್ಮ ಜೀವಮಾನವನ್ನು ಕಳೆದರು.
ದೀಕ್ಷಿತ್ ರವರು ಶಿರಡಿಯಲ್ಲಿ ನೆಲೆಸಿ ಪ್ರತಿದಿನವೂ ಬಾಬಾರವರು ಓದಲು ಹೇಳುತ್ತಿದ್ದ ಎಲ್ಲ ಗ್ರಂಥಗಳನ್ನು ಪಾರಾಯಣ ಮಾಡುತ್ತಿದ್ದರು. ಸಾಯಿಬಾಬಾರವರು ತಮ್ಮ ಬಳಿ ಬಂದ ಅನೇಕ ಭಕ್ತರ ಸಂದೇಹಗಳನ್ನು ಪರಿಹರಿಸಿಕೊಳ್ಳಲು ದೀಕ್ಷಿತ್ ರವರ ಬಳಿ ಕಳುಹಿಸುತ್ತಿದ್ದರು. ದೀಕ್ಷಿತ್ ರವರು ಓದುತ್ತಿದ್ದ ಭಾಗದಲ್ಲಿ ತಮ್ಮ ಸಂದೇಹಗಳ ಪರಿಹಾರವಾಗುತ್ತಿದ್ದುದನ್ನು ಅನೇಕ ಸಾಯಿಭಕ್ತರು ಮನಗಂಡಿದ್ದರು.
ದೀಕ್ಷಿತ್ ರವರು ತಮ್ಮ ಕೆಲಸವನ್ನು ಬಿಟ್ಟು ಹೆಚ್ಚು ಸಮಯ ಶಿರಡಿಯಲ್ಲೇ ಕಳೆಯುತ್ತಿದ್ದುದರಿಂದ ಅವರ ಆಸ್ತಿಯು ಕರಗತೊಡಗಿತು. ಆದರೆ, ದೀಕ್ಷಿತ್ ರವರು ಇದರಿಂದ ಬೇಸರಗೊಳ್ಳಲಿಲ್ಲ ಅಥವಾ ಧೃತಿಗೆಡಲಿಲ್ಲ. ಬದಲಿಗೆ, ತಮ್ಮ ತನು, ಮನ, ಧನವನ್ನು ಸಾಯಿಬಾಬಾರವರಿಗೆ ಅರ್ಪಣೆ ಮಾಡಿ ಅವರಿಗೆ ಸಂಪೂರ್ಣ ಶರಣಾಗತರಾಗಿ ಸಂಪೂರ್ಣವಾಗಿ ವೈರಾಗ್ಯವನ್ನು ಹೊಂದಿದ್ದರು.
ದೀಕ್ಷಿತ್ ವಾಡದ ಮಹಡಿಯ ಮೇಲಿನ ಒಂದು ಸಣ್ಣ ಕೋಣೆಯನ್ನು ದೀಕ್ಷಿತ್ ರವರು ತಮ್ಮ "ಏಕಾಂತ ಧ್ಯಾನ" ಕ್ಕೆ ಬಳಸುತ್ತಿದ್ದರು. ಬಾಬಾರವರು "ಕಾಕಾ, ನೀನು ಮಹಡಿಯ ಮೇಲಿರುವ ನಿನ್ನ ಕೋಣೆಯಲ್ಲಿಯೇ ಇರು. ಎಲ್ಲಿಗೂ ಹೋಗಬೇಡ. ದ್ವಾರಕಾಮಾಯಿಗೂ ಕೂಡ ಬರಬೇಡ" ಎಂದು ಕಟ್ಟಪ್ಪಣೆ ವಿಧಿಸಿದ್ದರು. ಸಾಯಿಬಾಬಾರವರ ಅಪ್ಪಣೆಯಂತೆ ಕಾಕಾರವರು ಸುಮಾರು 9 ತಿಂಗಳ ಕಾಲ ತಮ್ಮ ಕೋಣೆಯಲ್ಲಿಯೇ ಇದ್ದು ಭಾಗವತದ 10ನೇ ಸ್ಕಂದವನ್ನು ಮತ್ತು ಸಾಯಿಯವರ ಆಜ್ಞೆಯಂತೆ ಏಕನಾಥ ಭಾಗವತದ 11ನೇ ಸ್ಕಂದವನ್ನು (ಇದನ್ನು ಬಾಬಾರವರು ಬೃಂದಾವನ ಪೋತಿ ಎಂದು ಕರೆಯುತ್ತಿದ್ದರು) ಪ್ರತಿದಿನ ಅತ್ಯಂತ ಶ್ರದ್ದೆಯಿಂದ ಪಾರಾಯಣ ಮಾಡುತ್ತಿದ್ದರು. ಅಲ್ಲದೆ, ಇನ್ನು ಅನೇಕ ಪುರಾಣ ಗ್ರಂಥಗಳನ್ನು ಕೂಡ ಅಭ್ಯಾಸ ಮಾಡುತ್ತಿದ್ದರು ಮತ್ತು ಪ್ರತಿದಿನ ಇತರ ಭಕ್ತರೊಡನೆ ಚರ್ಚಿಸುತ್ತಿದ್ದರು. ಈ ರೀತಿಯಲಿ ಸಾಯಿಬಾಬಾರವರು ಹೇಗೆ ಗರ್ಭಿಣಿಯಾದ ಹೆಂಗಸು ತನ್ನ ಮಗುವಿಗೆ ಹೊಸ ಜನ್ಮ ನೀಡುವಳೋ ಅದರಂತೆ 9 ತಿಂಗಳ ನಂತರ ಕಾಕಾರವರಿಗೆ ಹೊಸ ಜನ್ಮವನ್ನು ನೀಡಿದರೆಂದು ಯಾವುದೇ ಸಂದೇಹವಿಲ್ಲದೆ ಹೇಳಬಹುದು.
ಇದೇ ವಾಡದಲ್ಲಿ ದೀಕ್ಷಿತ್ ಉಪಾಸಿನಿ ಬಾಬಾರವರನ್ನು ಕರೆದು ಅತಿಥ್ಯ ನೀಡಿರುತ್ತಾರೆ. ಬಾಬಾರವರ ಸಲಹೆಯ ಮೇರೆಗೆ ಹೇಮಾಡಪಂತರು ಶಿರಡಿಗೆ ಬಂದಾಗಲೆಲ್ಲ ಈ ವಾಡದಲ್ಲಿ ದೀಕ್ಷಿತ್ ರವರೊಡನೆ ತಂಗುತ್ತಿದ್ದರು. ಒಮ್ಮೆ ದೀಕ್ಷಿತ್ ವಾಡದ ಮಹಡಿಯ ಕೋಣೆಯಲ್ಲಿ ದೀಕ್ಷಿತ್ ಮತ್ತು ಅವರ ಸ್ನೇಹಿತರು ಚರ್ಚೆಯಲ್ಲಿ ಮಗ್ನರಾಗಿದ್ದಾಗ ಕಿಟಕಿಯ ಸಂದಿಯಿಂದ ಒಂದು ಸರ್ಪವು ಬಂದು ಒಂದು ಸುರಳಿ ಸುತ್ತಿಕೊಂಡು ಸದ್ದು ಮಾಡದೆ ಕುಳಿತಿತ್ತು. ಸರ್ಪವನ್ನು ನೋಡಿ ಎಲ್ಲರು ಕೋಲು ತರಲು ಓಡಿ ಹೋದರು. ಆಗ ಸರ್ಪವು ಅದೇ ಕಿಟಕಿಯ ಸಂದಿಯಿಂದ ಮಾಯವಾಯಿತು. ಅದು ಇಲ್ಲಿಗೆ ಹೋಯಿತೋ ತಿಳಿಯಲಿಲ್ಲ. ಎಷ್ಟು ಹುಡುಕಾಡಿದರೂ ಕೂಡ ಸರ್ಪವು ಸಿಗಲೇ ಇಲ್ಲ. ನಂತರ ಆ ವಿಷಯದ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು. ಮಾರನೇ ದಿನ ಸಾಯಿಬಾಬಾರವರನ್ನು ಈ ಬಗ್ಗೆ ವಿಚಾರಿಸಿದಾಗ ಸಾಯಿಬಾಬಾರವರು "ಹಾವುಗಳೇ ಇರಲಿ, ಚೇಳುಗಳೇ ಇರಲಿ, ಪ್ರತಿಯೊಂದು ಜೀವಿಯಲ್ಲೂ ಆ ಪರಮಾತ್ಮನು ವಾಸ ಮಾಡುತ್ತಾನೆ. ಅವನ ಆಜ್ಞೆಯಿಲ್ಲದೆ ಯಾರೂ ಕೂಡ ಕೇಡು ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ನಾವುಗಳು ಎಲ್ಲಾ ಜೀವಿಗಳಲ್ಲೂ ಪ್ರೀತಿಯನ್ನು ತೋರಿಸಬೇಕು" ಎಂದು ಉತ್ತರಿಸಿದರು (ಸಾಯಿ ಸಚ್ಚರಿತ್ರೆ 22ನೇ ಅಧ್ಯಾಯ).
ಈ ವಾಡದಲ್ಲಿ ದೀಕ್ಷಿತ್ ರವರು ಶ್ಯಾಮರಾವ್ ಜಯಕರ್ ರವರು ರಚಿಸಿದ ಸಾಯಿಬಾಬಾರವರ ಚಿತ್ರಪಟವನ್ನು ಮತ್ತು ಸಾಯಿಬಾಬಾರವರ ಪವಿತ್ರ ಪಾದುಕೆಗಳನ್ನು ಇಟ್ಟಿದ್ದರು ಮತ್ತು ಅಲ್ಲಿ ತಂಗಿದ್ದ ಎಲ್ಲಾ ಭಕ್ತರ ಒಡಗೂಡಿ ಪ್ರತಿದಿನ ಪೂಜೆಯನ್ನು ನೆರವೇರಿಸುತ್ತಿದ್ದರು. ಆದುದರಿಂದ, ದೀಕ್ಷಿತ್ ವಾಡ ಅತ್ಯಂತ ಪಾವಿತ್ರ್ಯತೆಯನ್ನು ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಬಾಬಾರವರು ಮೊದಲಿನಿಂದಲೂ "ನನ್ನ ಪ್ರೀತಿಯ ಕಾಕಾನನ್ನು ವಿಮಾನದಲ್ಲಿ ಕರೆದೊಯ್ಯುತ್ತೇನೆ" ಎಂದು ಹೇಳುತ್ತಿದ್ದರು. ಅದರಂತೆ 5ನೇ ಜುಲೈ 1926 ರಂದು ಪವಿತ್ರ ಏಕಾದಶಿಯ ದಿನ ದೀಕ್ಷಿತ್ ರವರು ಹೇಮಾಡಪಂತರೊಡನೆ ರೈಲಿನಲ್ಲಿ ಪ್ರಯಾಣ ಮಾಡುತ್ತಾ "ಸಾಯಿಬಾಬಾರವರು ಎಷ್ಟು ದಯಾಮಯರು. ನಮಗೋಸ್ಕರ ಒಂದು ಕ್ಷಣ ಕೂಡ ತಡಮಾಡದೆ ರೈಲನ್ನು ಕಳುಹಿಸಿದ್ದಾರೆ. ಇದು ಸಾಯಿಬಾಬಾರವರ ಕೃಪೆಯಲ್ಲದೆ ಮತ್ತೇನು" ಎಂದು ಹೇಳುತ್ತಾ ತಮ್ಮ ತಲೆಯನ್ನು ಹೇಮಾಡಪಂತರ ಭುಜದ ಮೇಲೆ ಇಟ್ಟು ದೇಹತ್ಯಾಗವನ್ನು ಅತ್ಯಂತ ನಿರಾಯಾಸವಾಗಿ ಮಾಡಿದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment