Wednesday, December 1, 2010

ಸಾಯಿ ಭಜನ ಗಾಯಕ - ಶ್ರೀ.ಎಂ.ಎಸ್.ಗಿರಿಧರ್ - ಕೃಪೆ : ಸಾಯಿಅಮೃತಧಾರಾ.ಕಾಂ

ಸಾಯಿ ಭಜನ ಗಾಯಕ ಶ್ರೀ.ಎಂ.ಎಸ್.ಗಿರಿಧರ್ 

ಅನನ್ಯ ಸಾಯಿ ಭಕ್ತರಾದ ಶ್ರೀ.ಎಂ.ಎಸ್.ಗಿರಿಧರ್ ರವರು 24ನೇ ಮೇ 1961 ರಂದು ಜನಿಸಿದರು. ಇವರ ತಂದೆ ವೇದಮುರ್ತಿ ದಿವಂಗತ ಶ್ರೀ.ವೆಂಕಟರಮಣ ಐತಾಳ್ ಮತ್ತು ಇವರ ತಾಯಿ ಶ್ರೀಮತಿ.ಕಮಲಮ್ಮ. ಇವರು ಭಕ್ತಿ ಗೀತೆಗಳ ಗಾಯನದಲ್ಲಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಇವರು ವಿಜ್ಞಾನದಲ್ಲಿ ಮತ್ತು ಕಾನೂನು ವಿಭಾಗಗಳಲ್ಲಿ ಪದವಿಯನ್ನು ಪಡೆದಿದ್ದಾರೆ. 

ಶ್ರೀ.ಗಿರಿಧರ್ ರವರು ತಮ್ಮ ಸಂಗೀತ ಪಯಣವನ್ನು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭಿಸಿದರು. ಇವರು ತಮ್ಮ ದೊಡ್ಡ ಅಕ್ಕನವರಾದ ಮತ್ತು ತ್ಯಾಗ ಜೀವಿಯಾದ ಶ್ರೀಮತಿ.ಲಲಿತಾಂಬ ಅವರ ನೆರವಿನೊಂದಿಗೆ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಭಜನೆ ಮತ್ತು ಉಪನ್ಯಾಸ ವಿಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಬೆಂಗಳೂರಿನ ವೈಟ್ ಫೀಲ್ಡ್  ನಲ್ಲಿರುವ ಭಗವಾನ್ ಶ್ರೀ.ಸತ್ಯ ಸಾಯಿ ಕಾಲೇಜ್ ನ ಸತ್ಸಂಗಗಳಲ್ಲಿ ಭಾಗವಹಿಸಿ ವಿಶ್ವವಿದ್ಯಾನಿಲಯದ ಕುಲಪತಿಗಳಿಂದ ಮೆಚ್ಚುಗೆಯನ್ನು ಗಳಿಸಿದರು. ಪ್ರಸಿದ್ದ ವೇದಾಂತ ಉಪನ್ಯಾಸಕಾರಾದ ಶ್ರೀ.ಲಕ್ಷ್ಮಿನಾರಾಯಣ ಐತಾಳ್ ರವರ ಬಳಿ ವೇದ, ವೇದಾಂತ ಮತ್ತು ಆತ್ಮ ಜ್ಞಾನ ವಿಷಯಗಳಲ್ಲಿ ತರಬೇತಿಯನ್ನು ಪಡೆದರು.

ಇವರು ಕ್ರೀಡೆಯಲ್ಲಿ ಕೂಡ ಹಿಂದೆ ಬೀಳಲಿಲ್ಲ. ಇವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್ ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರು ಮತ್ತು ಕೇರಂ ಮತ್ತು ಚೆಸ್ ನಲ್ಲಿ ಪ್ರತಿಷ್ಟಿತ ಕ್ಲಬ್ ನ್ನು ಪ್ರತಿನಿಧಿಸಿದ್ದರು. 

ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀಮತಿ.ಛಾಯಾಮಣಿಯವರ ಬಳಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಶ್ರೀ.ರಘುವೀರ್ ರಾವ್ ಉಲ್ಲಾಳ್ ರವರ ಬಳಿ, ಹಾರ್ಮೋನಿಯಂ ಅಭ್ಯಾಸವನ್ನು ಶ್ರೀ.ನರಸಿಂಹ ರಾವ್ ಬಳಿ, ಸಂಗೀತ ಅಂಕಕರಣ ಪದ್ಧತಿಯನ್ನು ಶ್ರೀ.ಬಿ.ಕೆ.ಚಂದ್ರಶೇಖರ್ (ಲಂಡನ್ ಚಂದ್ರು) ಮತ್ತು ಶ್ರೀಮತಿ.ಲಲಿತಾಂಬರವರ ಬಳಿ ಭಜನ ಗಾಯನವನ್ನು ಕಲಿತರು. 

ಇವರ ಸಾಧನೆಯ ಹೆಜ್ಜೆ ಗುರುತುಗಳು: 

ಆಕಾಶವಾಣಿಯ ಶ್ರೇಣಿ ಕಲಾವಿದರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. 50ನೇ ಸ್ವಾತಂತ್ರ್ಯ ದಿನಾಚರಣೆಯ ಉತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಂಗಳೂರು ಆಕಾಶವಾಣಿಯನ್ನು ಪ್ರತಿನಿಧಿಸಿದ್ದರು. 

ರಾಷ್ಟ್ರ ಮಟ್ಟದ ಆಕಾಶವಾಣಿ ಗಾಯನ ಸ್ಪರ್ಧೆಯಲ್ಲಿ ಉತ್ತಮ ಗೀತ ರಚನೆ ಮತ್ತು ಹಾಡುಗಾರಿಕೆ ವಿಭಾಗಗಳಲ್ಲಿ  2ನೇ ಸ್ಥಾನವನ್ನು ಗಳಿಸಿದರು.

ಹಾಡುಗಾರಿಕೆ ವಿಭಾಗದಲ್ಲಿ ಆಕಾಶವಾಣಿಯ ಕಲಾವಿದರಾಗಿ ಬಹಳ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ರಾಷ್ಟ್ರೀಯ ದೂರದರ್ಶನ ಮತ್ತು ದೂರದರ್ಶನ ಚಂದನ ವಾಹಿನಿಗಳ ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. 

ಪ್ರಸಿದ್ದ ದೂರದರ್ಶನ ಖಾಸಗಿ ವಾಹಿನಿಗಳಾದ ಉದಯ ಟಿವಿ, ಸುವರ್ಣ, ಶಂಕರ ಟಿವಿ,ಕಸ್ತೂರಿ ಮತ್ತು ಚಂದನ ವಾಹಿನಿಗಳ ಅನೇಕ ಭಕ್ತಿ ಗೀತೆ ಆಧಾರಿತ ಕಾರ್ಯಕ್ರಮಗಳಿಗೆ ಹಾಡುಗಳನ್ನು ರಚಿಸಿ, ಸಂಗೀತ ನೀಡಿ ಮತ್ತು ಹಾಡುಗಳನ್ನು ಹಾಡಿದ್ದಾರೆ. 

ಪ್ರತಿವರ್ಷ ದಕ್ಷಿಣ ಕನ್ನಡದ ಮುಡಬಿದರೆ ಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕನ್ನಡ ಸಮ್ಮೇಳನವಾದ "ನುಡಿಸಿರಿ" ಕಾರ್ಯಕ್ರಮದ ಅಧಿಕೃತ ಸಂಗೀತ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ಪ್ರತಿವರ್ಷ ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಅನೇಕ ಭಜನೆಗಳನ್ನು ರಚಿಸುತ್ತಾ ಬಂದಿದ್ದಾರೆ. 

"ಯು ನೆಟ್ ವರ್ಕ್ಸ್" ಎಂಬ ಖಾಸಗಿ ವಾಹಿನಿಗೆ ಪ್ರತಿ ವಾರ ಒಂದು ಭಜನೆಯನ್ನು ಅಂಕಕರಣ ಪದ್ದತಿಯೊಂದಿಗೆ ಹೇಳಿಕೊಡುವ ಅತ್ಯುತ್ತಮ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. 

ಬೆಂಗಳೂರಿನ ಪ್ರತಿಷ್ಟಿತ ಕೃಷ್ಣ ದೇವಾಲಯವಾದ ಇಸ್ಕಾನ್ ರವರ ಮಾಸಪತ್ರಿಕೆಗೆ ಅನೇಕ ದಾಸ ಸಾಹಿತ್ಯವನ್ನು ರಚನೆ ಮಾಡಿಕೊಟ್ಟಿದ್ದಾರೆ. 

ಚಲನಚಿತ್ರ ಸಂಗೀತ ನಿರ್ದೇಶನ: 

ಶ್ರೀ.ಪದ್ಮನಾಭ ನಿರ್ದೇಶನದ ಪೋಲಿಸ್ ಕಥಾ ಹಂದರವಿರುವ ಕನ್ನಡ ಚಲನಚಿತ್ರ "ನಿಷೇಧಾಜ್ಞೆ" ಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಶ್ರೀ.ಕುಪ್ಪುಸ್ವಾಮಿ ನಿರ್ದೇಶನದ ಪ್ರೀತಿಯ ಕಥಾ ಹಂದರವನ್ನು ಹೊಂದಿರುವ ಕನ್ನಡ ಚಲನಚಿತ್ರ "ಒಮ್ಮೆ ನೋಡಿದೆ" ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಆಡಿಯೋ ಧ್ವನಿಸುರಳಿಗಳು ಮತ್ತು ಅಲ್ಬಮ್ ಗಳು: 

ಚೆನ್ನೈ ನ ಪ್ರತಿಷ್ಟಿತ ಆಡಿಯೋ ಕಂಪೆನಿ ಜೈ ಆಡಿಯೋರವರ ಸರಿ ಸುಮಾರು 50 ಕ್ಕೂ ಹೆಚ್ಚು ಭಕ್ತಿ ಗೀತೆಗಳ ಅಲ್ಬಮ್ ಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

11 ಸ್ವಂತ ಭಜನೆಯ ಅಲ್ಬಮ್ ಗಳು, ಸಂಗೀತ ಸಾಗರ ಆಡಿಯೋ ಕಂಪೆನಿಗಾಗಿ 1 ಸಾಯಿ ಭಜನೆಯ ಅಲ್ಬಮ್, ಲಹರಿ ಆಡಿಯೋ ಕಂಪೆನಿ ಗಾಗಿ 1 ಸಾಯಿ ಭಜನೆಯ ಅಲ್ಬಮ್  ಮತ್ತು ರಾಗಂ ಆಡಿಯೋ ಕಂಪೆನಿಗಾಗಿ 1 ಭಜನೆಯ ಅಲ್ಬಮ್ ಗಳನ್ನು ಮಾಡಿಕೊಟ್ಟಿರುತ್ತಾರೆ. 

ಉಚಿತ ಭಜನೆಯ ಕಾರ್ಯಾಗಾರಗಳು: 

ಪ್ರತಿ ಶನಿವಾರದಂದು ಸಂಜೆ 4 ಘಂಟೆಯಿಂದ 5 ಘಂಟೆಯವರೆಗೆ ಬೆಂಗಳೂರಿನ ಪುತ್ತಿಗೆ ಮಠದಲ್ಲಿ ಭಜನೆಯನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. 

ಪ್ರತಿ ಶನಿವಾರದಂದು ಸಂಜೆ 5:30 ರಿಂದ 6:30 ರವರೆಗೆ ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ದೇವಾಲಯದಲ್ಲಿ ಭಜನೆಯನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರತಿ ಭಾನುವಾರದಂದು ಬೆಂಗಳೂರಿನ ಶಂಕರಪುರದಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ಸಂಜೆ 4:15 ರಿಂದ 5:15 ರವರೆಗೆ  ಭಜನೆಯನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಶಸ್ತಿಗಳು / ಪುರಸ್ಕಾರಗಳು: 

ದಕ್ಷಿಣ ಕನ್ನಡದ ಸುಮಾರು 50ಕ್ಕೂ ಹೆಚ್ಚು ಚರ್ಚ್ ಗಳಲ್ಲಿ ಜೀಸಸ್ ಜೀವನವನ್ನು ಕುರಿತಾದ ಹಾಡುಗಳನ್ನು ಹಾಡಿದುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್ ಗಳ ಬಿಷಪ್ ರವರಿಂದ "ಗಾನಕಲಾ ರತ್ನ" ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಉಡುಪಿಯಲ್ಲಿ 2001 ನೇ ಇಸವಿಯಲ್ಲಿ ನಡೆದ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ.ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿಗಳವರಿಂದ "ಭಜನಾಕರ" ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 

1985 ರಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಸಂಗೀತ ಉತ್ಸವದಲ್ಲಿ ತಾಲ್ಲೂಕು ಮಟ್ಟದ ಜ್ಯೂನಿಯರ್ ಕಾಲೇಜುಗಳ ಸ್ಪರ್ಧೆಯಲ್ಲಿ "ಮೆಲೋಡಿ ಕಿಂಗ್" ಎಂದು ಪುರಸ್ಕೃತರಾಗಿದ್ದಾರೆ. 
ಕೊಯ್ಲಾ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಶ್ರೀ.ರಾಮಾನಂದ ಸ್ವಾಮಿಯವರಿಂದ "ಗಾನ ಗಂಧರ್ವ" ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಬೆಂಗಳೂರಿನ ವಿಜಯನಗರದ ಪಲ್ಲವಿ ಸಾಂಸ್ಕೃತಿಕ ವೇದಿಕೆಯವರಿಂದ "ಸುಗಮ ಸಂಗೀತ ಗುರು ತಿಲಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:


ಗಾಯಕರ ಹೆಸರು ಗಿರಿಧರ್ ಎಂ.ಎಸ್.
ವಿಳಾಸ ಭಜನ ಸತ್ಸಂಗ, ನೆಲಮಾಳಿಗೆ, 271, “ಶ್ರೀ ಸುಮೇರು", 4ನೇ  ಅಡ್ಡ ರಸ್ತೆ, 5ನೇ  ಮುಖ್ಯರಸ್ತೆ, ವಯ್ಯಾಲಿಕಾವಲ್  ಬಡಾವಣೆ, ವಿಜಯನಗರ, ಬೆಂಗಳೂರು-560 040.
ದೂರವಾಣಿ 98441-84023
ಈ ಮೇಲ್ giriaithal1961@gmail.com
ವೆಬ್ ಸೈಟ್ ಇಲ್ಲ
ಅಲ್ಬಮ್ ಗಳು
ರಾಜಾಧಿರಾಜ, ಸಾಯಿ ಸ್ಮರಣ್
ಭಜನೆಗಳು  ಸುಮಾರು 2000ಕ್ಕೂ ಹೆಚ್ಚು ಭಜನೆಗಳನ್ನು ಸಂಗೀತ ಅಂಕಕರಣ ಸಹಿತವಾಗಿ ಅನೇಕ ವೈವಿಧ್ಯಮಯ ರಾಗ ಹಾಗೂ ತಾಳ ಸಂಯೋಜನೆಯೊಂದಿಗೆ ಮಾಡಿರುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment