Wednesday, July 16, 2014

ಶ್ರೀ ಶಿರಡಿ ಸಾಯಿಬಾಬಾರವರು ತಮ್ಮ ಬಳಿ ಸದಾ ಇರಿಸಿಕೊಂಡಿರುತ್ತಿದ್ದ ಇಟ್ಟಿಗೆಯ ಮಹತ್ವ- ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರು ಶಿರಡಿಗೆ ಬಂದು ದ್ವಾರಕಾಮಾಯಿಯಲ್ಲಿ ಶಾಶ್ವತವಾಗಿ ನೆಲೆಸಿದ ನಂತರದಿಂದ ಅವರ ಬಳಿ ಸದಾ ಒಂದು ಇಟ್ಟಿಗೆಯನ್ನು ಇರಿಸಿಕೊಳ್ಳುತ್ತಿದ್ದರು. ಅದು ಅವರ ಜೀವನದ ಸಂಗಾತಿಯಾಗಿತ್ತು. ಆ ಇಟ್ಟಿಗೆಯ ಸುತ್ತಳತೆಯು   3-1/2x9 ಇಂಚುಗಳಾಗಿತ್ತು. ಬಾಬಾರವರು ಆ ಇಟ್ಟಿಗೆಯನ್ನು ಬಹಳ ಪ್ರೀತಿಸುತ್ತಿದ್ದರು ಹಾಗೂ ಆ ಇಟ್ಟಿಗೆಯನ್ನು "ನನ್ನ ಜೀವನದ ಸಂಗಾತಿ" ಎಂದು ಯಾವಾಗಲೂ ಹೇಳುತ್ತಿದ್ದರು. ಅವರು ದ್ವಾರಕಾಮಾಯಿಯಲ್ಲಿ ಒಬ್ಬರೇ ಏಕಾಂತದಲ್ಲಿ ಕುಳಿತುಕೊಂಡಿದ್ದಾಗ ಆ ಇಟ್ಟಿಗೆಯ ಮೇಲೆ ತಮ್ಮ ಕೈಯನ್ನು ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದರು. ಅವರು ಮಲಗಿಕೊಳ್ಳುವಾಗ ಆ ಇಟ್ಟಿಗೆಯನ್ನು ತಲೆದಿಂಬಿನಂತೆ ಇರಿಸಿಕೊಳ್ಳುತ್ತಿದ್ದರು. ಮಹಾಳಸಾಪತಿ ಮತ್ತು ಕಾಶೀರಾಂ ಶಿಂಪಿಯವರು ಆ ಇಟ್ಟಿಗೆಗೆ ಪ್ರತಿನಿತ್ಯ ಮಂಗಳ ಸ್ನಾನವನ್ನು ಮಾಡಿಸಿ ಅದನ್ನು ಒಣಗಿಸುವ ಸಲುವಾಗಿ  ಧುನಿಯ ಪಕ್ಕದಲ್ಲಿದ್ದ ಕಂಬಕ್ಕೆ ಒರಗಿಸಿ ನಿಲ್ಲಿಸುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಆ ಇಟ್ಟಿಗೆಯನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಸುತ್ತಿ  ಬಾಬಾರವರಿಗೆ ತಲೆದಿಂಬಿನಂತೆ ಇಟ್ಟುಕೊಳ್ಳಲು ನೀಡುತ್ತಿದ್ದರು. 

ಹೀಗಿರುವಾಗ ಒಂದು ದಿನ ದ್ವಾರಕಾಮಾಯಿಯನ್ನು ಪ್ರತಿನಿತ್ಯ ಗುಡಿಸಿ, ಸಾರಿಸಲು ಬರುತ್ತಿದ್ದ ಮಧು ಫಾಸ್ಲೆ ಎಂಬ ಹುಡುಗ ಅಕಸ್ಮಾತ್ತಾಗಿ ಆ ಇಟ್ಟಿಗೆಯನ್ನು ಕೆಳಗೆ ಎತ್ತಿಹಾಕಲು ಆ ಇಟ್ಟಿಗೆಯು ಒಡೆದು ಎರಡು ಹೋಳಾಯಿತು. ಮುಂದೆ ಆಗಬಹುದಾದ ಪರಿಣಾಮವನ್ನು ನೆನೆದು ಹೆದರಿದ ಅವನು ಮುರಿದ ಆ ಎರಡು ತುಂಡುಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದರಂತೆ ಹಾಗೆಯೇ ಸೇರಿಸಿ  ಅದನ್ನು ಧುನಿಯ ಪಕ್ಕದಲ್ಲಿ ಇರಿಸಿ ಮಸೀದಿಯಿಂದ ಹೊರಟು ಹೋದನು. ಬಾಬಾ ಮಸೀದಿಗೆ ವಾಪಸ್ ಬಂದವರೇ ಆ ಇಟ್ಟಿಗೆಯ ಬಗ್ಗೆ ಮಹಾಳಸಾಪತಿಯ ಹತ್ತಿರ ವಿಚಾರಿಸಿದರು.  ಮಹಾಳಸಾಪತಿಯವರು ಆ ಇಟ್ಟಿಗೆಯನ್ನು ಮೇಲೆಕ್ಕೆತ್ತಲು ಹೋದಾಗ ಆ ಇಟ್ಟಿಗೆಯ ಒಂದು ಭಾಗ ನೆಲದ ಮೇಲೆ ಬಿದ್ದಿತು. ಅದನ್ನು ನೋಡಿ ಬಾಬಾರವರು ಸಾಮಾನ್ಯ ಮಾನವರಂತೆ ಅಳತೊಡಗಿದರು. ಅವರು "ಇದು ಕೇವಲ ಇಟ್ಟಿಗೆಯಾಗಿರಲಿಲ್ಲ, ಬದಲಿಗೆ, ನನ್ನ ಭಾಗ್ಯವೇ ಒಡೆದು ಹೋದಂತೆ ಆಗಿದೆ. ಇದು ನನ್ನ ಜೀವನದ ಸಂಗಾತಿಯಾಗಿತ್ತು. ಈಗ ಈ ಇಟ್ಟಿಗೆಯು ಒಡೆದುಹೋಯಿತು. ನಾನು ಕೂಡ ಇನ್ನು ಹೆಚ್ಚು ದಿನಗಳ ಕಾಲ ಬದುಕಿರಲಾರೆ" ಎಂದು ಭಾವುಕರಾಗಿ ನುಡಿದರು. ಆಗ ಮಹಾಳಸಾಪತಿಯವರು ಬಾಬಾರವರನ್ನು ಸಮಾಧಾನ ಮಾಡುತ್ತಾ "ಬಾಬಾ, ಯೋಚನೆ ಮಾಡಬೇಡಿ. ನಾನು ಈ ಇಟ್ಟಿಗೆಯ ಎರಡೂ ತುಂಡುಗಳನ್ನು ಚಿನ್ನದ ತಿಂತಿಯಿಂದ ಜೋಡಿಸಿಕೊಡುತ್ತೇನೆ" ಎಂದರು. ಅದಕ್ಕೆ ಬಾಬಾರವರು "ಎಲೈ ಭಗತ್, ಈ ಇಟ್ಟಿಗೆಯು ಚಿನ್ನದ ಇಟ್ಟಿಗೆಗಿಂತಲೂ ಬೆಲೆಬಾಳುತ್ತದೆ. ನನ್ನ ಸಂಗಾತಿಯೇ ಒಡೆದುಹೋಗಿದೆ. ನಾನು ಬದುಕಿರಲು ಸಾಧ್ಯವೇ ಇಲ್ಲ" ಎಂದು ನುಡಿದರು. ಈ ಘಟನೆಯಾದ ನಂತರದಿಂದ ಬಾಬಾರವರ ದೇಹಸ್ಥಿತಿ ಬಿಗಡಾಯಿಸಲು ಪ್ರಾರಂಭಿಸಿ ಸರಿಯಾಗಿ 5ನೇ ದಿನ ಬಾಬಾರವರು ಮಹಾಸಮಾಧಿ ಹೊಂದಿದರು. ಈ ಘಟನೆಯನ್ನು ಶ್ರೀ ಸಾಯಿ ಸಚ್ಚರಿತ್ರೆಯ 44ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ. ಪಂಢರಪುರದ ಪಾಂಡುರಂಗ ಇಟ್ಟಿಗೆಯ ಮೇಲೆ ನಿಂತುಕೊಂಡಿದ್ದರೆ  ಶಿರಡಿ ಸಾಯಿಬಾಬಾರವರು ಅದೇ ಇಟ್ಟಿಗೆಯನ್ನು ತಲೆದಿಂಬಿನಂತೆ ಉಪಯೋಗಿಸುತ್ತಿದ್ದರು. 

ಬಹುಶಃ ಈ ಇಟ್ಟಿಗೆಯ ಮಹತ್ವ ಹೀಗಿರಬಹುದು: ಇಟ್ಟಿಗೆಯನ್ನು ಮಣ್ಣು ಹಾಗೂ ಮರಳಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಒಂದು ರೂಪವನ್ನು ನೀಡಿ ಅದನ್ನು ಚೆನ್ನಾಗಿ ಸುಟ್ಟು ಒಣಗಿಸಲಾಗುತ್ತದೆ. ಇಟ್ಟಿಗೆಯು ಮನುಷ್ಯನ ದೇಹವನ್ನು ಪ್ರತಿನಿಧಿಸುತ್ತದೆ. ಅದು ಒಡೆಯುವುದು ಮರಣವನ್ನು ಸೂಚಿಸುತ್ತದೆ. ಇಟ್ಟಿಗೆಯನ್ನು ಗೂಡಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಅದನ್ನು ಹದ ಮಾಡಿ ಗಟ್ಟಿಯಾಗುವಂತೆ ಮಾಡಲಾಗುತ್ತದೆ.  ಇಷ್ಟಾದರೂ ಕೂಡ ಆ ಇಟ್ಟಿಗೆಯು ಒಡೆಯುತ್ತದೆ. ಇಟ್ಟಿಗೆಯನ್ನು ಸುಡುವುದು ಮನುಷ್ಯನ ಅಂತರಂಗದ ಆರು ಶತ್ರುಗಳನ್ನು ಸುಡುವುದರ ಸಂಕೇತವಾಗಿರುತ್ತದೆ. ಪಂಢರಾಪುರದ ವಿಠಲನು ಇಟ್ಟಿಗೆಯನ್ನು ಮೆಟ್ಟಿ ನಿಲ್ಲುವ ಮೂಲಕ ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತಿದ್ದಾನೆ.  ಅಂತೆಯೇ ಬಾಬಾರವರು ಇಟ್ಟಿಗೆಯನ್ನು ತಮ್ಮ ತಲೆಯ ಕೆಳಗೆ ಇರಿಸಿಕೊಳ್ಳುವ ಮೂಲಕ ಅರಿಷಡ್ವರ್ಗಗಳನ್ನು ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿ  ತಮ್ಮ ಭಕ್ತರನ್ನು ಲೌಕಿಕ ಆಸೆ ಆಕಾಂಕ್ಷೆಗಳಿಂದ ಮುಕ್ತಗೊಳಿಸಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಉದಾಹರಣೆ ನೀಡಬೇಕೆಂದರೆ ಅರಿಷಡ್ವರ್ಗಗಳಲ್ಲಿ ಒಂದಾದ ಪ್ರೀತಿ ಹಾಗೂ ಹಾತೊರೆಯುವ ಭಾವನೆಯನ್ನು ನಾವು ಬಾಬಾರವರ ಕಡೆ ತಿರುಗಿಸಬಹುದಾಗಿದೆ.  ಹೇಗೆ ಗೋಪಿಯರು ತಮ್ಮ ಪ್ರೀತಿಯನ್ನು ಭಗವಾನ್ ಶ್ರೀಕೃಷ್ಣನ ಕಡೆಗೆ ತಿರುಗಿಸುತ್ತಾರೋ ಹಾಗೆಯೇ ನಾನುಗಳು ಸಹ ನಮ್ಮ ಪ್ರೀತಿಯನ್ನು ಶ್ರೀ ಸಾಯಿಬಾಬಾರವರ ಕಡೆಗೆ ತಿರುಗಿಸಬಹುದಾಗಿದೆ. 

1918ನೇ ಇಸವಿಯಲ್ಲಿ ಬಾಬಾರವರ ಮಹಾಸಮಾಧಿಯಾದಾಗ, ಅವರ ಕೊನೆಯ ಇಚ್ಛೆಯಂತೆ ಅವರ ದೇಹವನ್ನು ಬೂಟಿವಾಡಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಸಮಾಧಿ ಮಾಡಲಾಯಿತು. ಹಾಗೆ ಸಮಾಧಿ ಮಾಡುವ ಸಮಯದಲ್ಲಿ ಮಧು ಫಾಸ್ಲೆ ಆ ಒಡೆದ ಇಟ್ಟಿಗೆಯ ತುಂಡುಗಳನ್ನು ದಿಂಬಿನಂತೆ ಬಾಬಾರವರ ತಲೆಯ ಕೆಳಗೆ ಇರಿಸಿದನು. ಮಧು ಫಾಸ್ಲೆ, ಶ್ಯಾಮ ಹಾಗೂ ತಾತ್ಯಾ ಕೋತೆ  ಪಾಟೀಲ್ ರವರುಗಳು ಈ ವಿಷಯವನ್ನು ಡಾ.ಗಾವಂಕರ್ ರವರಿಗೆ ತಿಳಿಸಿರುತ್ತಾರೆ. ಈ ರೀತಿಯಲ್ಲಿ ಈ ಪುಣ್ಯವಂತ ಇಟ್ಟಿಗೆಯು ಬಾಬಾರವರ ಸಮಾಧಿಯ ಜೊತೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿರುತ್ತದೆ. (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿಯವರ ಬಾಬಾ'ಸ್ ಋಣಾನುಬಂಧ್ )


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment