ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಆಯೋಜಿಸಿದ್ದ ಗುರುಪೂರ್ಣಿಮಾ ಉತ್ಸವವು 11ನೇ ಜುಲೈ 2014, ಶುಕ್ರವಾರದಂದು ಬಹಳ ವಿಜೃಂಭಣೆಯಿಂದ ಪ್ರಾರಂಭವಾಯಿತು. ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಪಲ್ಲಕ್ಕಿಗಳೊಂದಿಗೆ ಶಿರಡಿಗೆ ಆಗಮಿಸಿದ್ದರು.
ಈ ವರ್ಷದ ಗುರುಪೂರ್ಣಿಮೆಯಲ್ಲಿ ಸುಮಾರು 50 ಪಲ್ಲಕ್ಕಿ ಪಾದಯಾತ್ರಿ ತಂಡದವರು ಭಾಗವಹಿಸಿದ್ದರು. ಹಾಗಾಗಿ ಪುಣೆಯಿಂದ ಶಿರಡಿಗೆ ಪಲ್ಲಕ್ಕಿಯಲ್ಲಿ ಆಗಮಿಸಿದ್ದ ಪಾದಯಾತ್ರಿ ತಂಡದವರನ್ನು ನೋಡಿಕೊಳ್ಳುವ ಸಲುವಾಗಿ ವಿಶೇಷ ಶ್ರೀ ಸಾಯಿಬಾಬಾ ಪಲ್ಲಕ್ಕಿ ಉತ್ಸವ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿಯು ಪಾದಯಾತ್ರಿಗಳ ಎಲ್ಲಾ ಅನುಕೂಲತೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡರು. ಪಲ್ಲಕ್ಕಿ ಉತ್ಸವದಲ್ಲಿ ಜೋರಾಗಿ ಬಾರಿಸುತ್ತಿದ್ದ ಡ್ರಮ್ ಗಳ ಸದ್ದಿಗೆ ಶಿರಡಿ ಪಟ್ಟಣದ ಎಲ್ಲೆಡೆ ಒಂದು ರೀತಿಯ ಧನಾತ್ಮಕ ತರಂಗಗಳ ಅಲೆಯೇ ತುಂಬಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತೆಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ.
ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಸುಬ್ರಮಣಿ ರಾಜು ಮತ್ತು ಶ್ರೀ. ಪ್ರಸಾದ ಬಾಬುರವರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು.
ಉತ್ಸವದ ಮೊದಲ ದಿನದ ಅಂಗವಾಗಿ 11ನೇ ಜುಲೈ 2014, ಶುಕ್ರವಾರದಂದು ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಉತ್ಸವದಲ್ಲಿ ಸಮಾಧಿ ಮಂದಿರದಿಂದ ದ್ವಾರಕಾಮಾಯಿಗೆ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀ.ಬಾವು ಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್ ಹಾಗೂ ಮತ್ತಿತರರು ಉತ್ಸವದಲ್ಲಿ ಭಾಗವಹಿಸಿದ್ದರು.
ಉತ್ಸವವು ದ್ವಾರಕಾಮಯಿಗೆ ಬಂದ ನಂತರ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಮೊದಲನೇ ಅಧ್ಯಾಯವನ್ನು ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇ ಅಧ್ಯಾಯವನ್ನು ಪಾರಾಯಣ ಮಾಡುವ ಮುಖಾಂತರ ಅಖಂಡ ಪಾರಾಯಣವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದರು.
ನಂತರ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಹಾಗೂ ಅವರ ಧರ್ಮಪತ್ನಿಯವರು ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳಿಗೆ ಪೂಜೆಯನ್ನು ಸಲ್ಲಿಸಿದರು.
ಮಧ್ಯಾನ್ಹ 12:30 ಕ್ಕೆ ಮಧ್ಯಾನ್ಹದ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4 ರಿಂದ 6 ಗಂಟೆಯವರೆಗೆ ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿತ್ತು. ಸಂಜೆ 7:30 ರಿಂದ ರಾತ್ರಿ 10:30 ರವರೆಗೆ ಸಮಾಧಿ ಮಂದಿರದ ಎದುರುಗಡೆ ಹಾಕಲಾಗಿದ್ದ ವಿಶೇಷ ವೇದಿಕೆಯಲ್ಲಿ ಭೂಪಾಲ್ ನ ಶ್ರೀ.ಸುಮಿತ್ ಪೊಂಡಾರವರಿಂದ "ಸಾಯಿ ಅಮೃತ ಕಥಾ" ವನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 9:15 ಕ್ಕೆ ಶಿರಡಿ ಪಟ್ಟಣದ ಸುತ್ತ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ತಂಡದವರು ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿದ್ದರು.
ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ 12ನೇ ಜುಲೈ 2014, ಶನಿವಾರದಂದು ದೇಶದ ವಿವಿಧ ಸ್ಥಳಗಳಿಂದ ಲಕ್ಷಾಂತರ ಮಂದಿ ಸಾಯಿ ಭಕ್ತರು ಆಗಮಿಸಿ ಶ್ರೀ ಸಾಯಿಬಾಬಾರವರ ಪವಿತ್ರ ಸಮಾಧಿಯ ದರ್ಶನವನ್ನು ಪಡೆದರು.
ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುಷ್ಮಾ ಕುಲಕರ್ಣಿಯವರು ಬಾಬಾರವರ ಪವಿತ್ರ ಪಾದುಕೆಗಳಿಗೆ ಪೂಜೆಯನ್ನು ಸಲ್ಲಿಸಿದರು.
ದ್ವಾರಕಾಮಾಯಿಯಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣ ಮುಕ್ತಾಯಗೊಂಡಿತು. ನಂತರ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಬಾಬಾರವರ ಭಾವಚಿತ್ರ ಹಾಗೂ ವೀಣೆಯೊಂದಿಗೆ ದ್ವಾರಕಾಮಾಯಿಯಿಂದ ಗುರುಸ್ಥಾನದ ಮುಖಾಂತರವಾಗಿ ಸಮಾಧಿ ಮಂದಿರಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಶಶಿಕಾಂತ ಕುಲಕರ್ಣಿಯವರು ಶ್ರೀ ಸಾಯಿ ಸಚ್ಚರಿತ್ರೆಯನ್ನು ಹಿಡಿದುಕೊಂಡಿದ್ದರೆ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಸಾಯಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರದ ಕೃಷಿ ಹಾಗೂ ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಹಾಗೂ ಅವರ ಪತ್ನಿಯವರು ಉತ್ಸವದ ಮುಖ್ಯ ದಿನದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.
ಸಂಜೆ 4 ರಿಂದ 6 ಗಂಟೆಯವರೆಗೆ ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿತ್ತು. ಸಂಜೆ 7:30 ರಿಂದ ರಾತ್ರಿ 10:30 ರವರೆಗೆ ಸಮಾಧಿ ಮಂದಿರದ ಎದುರುಗಡೆ ಹಾಕಲಾಗಿದ್ದ ವಿಶೇಷ ವೇದಿಕೆಯಲ್ಲಿ ಮುಂಬೈನ ಶ್ರೀ.ವಿಜಯ್ ಸಕ್ಕರ್ಕರ್ ಮತ್ತು ಅವರ ತಂಡದವರಿಂದ ಹಿಂದಿ-ಮರಾಠಿ ನೃತ್ಯ ನಾಟಕವಾದ "ಸಾಯಿ ವಾಯ್ಸ್" ಅನ್ನು ಏರ್ಪಡಿಸಲಾಗಿತ್ತು. ರಾತ್ರಿ 9:15 ಕ್ಕೆ ಶಿರಡಿ ಪಟ್ಟಣದ ಸುತ್ತ ಶ್ರೀ ಸಾಯಿಬಾಬಾರವರ ರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 11.00 ರಿಂದ ಮಾರನೇ ದಿನ ಬೆಳಿಗ್ಗೆ 5 ಗಂಟೆಯವರೆಗೆ ಆಹ್ವಾನಿತ ಸಾಯಿ ಭಕ್ತ ಗಾಯಕರಿಂದ ಸಾಯಿ ಭಜನೆಯನ್ನು ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀಮತಿ.ಮುಗ್ಧ ದಿವಾಡಕರ್ ರವರು ಶಿರಡಿ ಸಾಯಿಬಾಬಾರವರ ಬಗ್ಗೆ ಮರಾಠಿ ಭಾಷೆಯಲ್ಲಿ ರಚಿಸಿ ಪುಣೆಯ ಅನುಬಂಧ್ ಪ್ರಕಾಶನವು ಹೊರತಂದಿರುವ "ಸಾಯಿಂಚ್ಯಾ ಸಾನಿಧ್ಯಾತ್" ಎಂಬ ಹೊಸ ಪುಸ್ತಕವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಶ್ರೀಮತಿ.ಮುಗ್ಧ ದಿವಾಡಕರ್, ಶ್ರೀ.ಸುಧೀರ್ ದಿವಾಡಕರ್, ಪ್ರಕಾಶಕರಾದ ಶ್ರೀ.ಎ.ಎ.ಕುಲಕರ್ಣಿಯವರುಗಳು ಭಾಗವಹಿಸಿದ್ದರು. ಈ ಪುಸ್ತಕದಲ್ಲಿ 1854 ರಿಂದ 1918 ರವರೆಗೆ ಸಾಯಿಬಾಬಾರವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಸಾಯಿ ಮಹಾಭಕ್ತರ ಅನುಭವಗಳನ್ನು ಉಲ್ಲೇಖಿಸಲಾಗಿದೆ.
11ನೇ ಜುಲೈ 2014, ಶುಕ್ರವಾರದಂದು ಪ್ರಾರಂಭವಾದ ಗುರುಪೂರ್ಣಿಮೆ ಉತ್ಸವವು 13ನೇ ಜುಲೈ 2014, ಭಾನುವಾರದಂದು ಸಮಾಧಿ ಮಂದಿರದಲ್ಲಿ ಪರ್ಬಾನಿಯ ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರ ಲ್ಯಾಚಾ ಕೀರ್ತನೆ ಹಾಗೂ ದಹಿ ಹಂಡಿ (ಮೊಸರಿನ ಗಡಿಗೆ) ಒಡೆಯುವ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯಿತು.
ಉತ್ಸವದ ಮುಕ್ತಾಯದ ದಿನವಾದ ಕಾರಣ ಅಂದು ಬೆಳಗಿನ ಜಾವ ಗುರುಸ್ಥಾನದಲ್ಲಿ ರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಮತ್ತು ಅವರ ಧರ್ಮಪತ್ನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಸಮಾಧಿ ಮಂದಿರದಲ್ಲಿ ನೆಡೆದ ಸಮಾರಂಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಹಾಗೂ ಅವರ ಧರ್ಮಪತ್ನಿಯವರು ಸಾಯಿಬಾಬಾರವರ ಪವಿತ್ರ ಪಾದುಕೆಗಳಿಗೆ ಪಾದ ಪೂಜೆಯನ್ನು ಸಲ್ಲಿಸಿದರು.
ದೀಪಾಲಂಕಾರವನ್ನು ಮಾಡಿದ ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ತಂಡದ ಸದಸ್ಯರು ಹಾಗೂ ಹೂವಿನ ಅಲಂಕಾರಕ್ಕೆ ಧನ ಸಹಾಯ ಮಾಡಿದ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಸುಬ್ರಮಣಿ ರಾಜು ಮತ್ತು ಶ್ರೀ. ಪ್ರಸಾದ ಬಾಬುರವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನ ಮಾಡಲಾಯಿತು.
ಉತ್ಸವದ ಕೊನೆಯ ಕಾರ್ಯಕ್ರಮವಾದ "ಸಾಯಿ ಮಿಲನ್ ಕಿ ಆಸ್" ಅನ್ನು ಸಂಜೆ 7.30 ರಿಂದ ರಾತ್ರಿ 10.30 ರವರೆಗೆ ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಶ್ರೀರಾಮಪುರದ ಕಲಾವಿದರಾದ ಶ್ರೀ.ವಿಶ್ವನಾಥ ಓಜಾರವರು ಬಹಳ ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಎಲ್ಲ ಭಕ್ತರೂ ಮುಕ್ತ ಕಂಠದಿಂದ ಹೊಗಳಿದರು.
ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಉತ್ಸವದ 3 ದಿನಗಳೂ ಎಲ್ಲ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಸಿಕಂದರಾಬಾದ್ ನ ಶ್ರೀಮತಿ. ಶ್ರಾವಣಿ ಮತ್ತು ಶ್ರೀ.ಸಾರಥಿ ಕಲ್ಪವಲ್ಲಿ, ದೆಹಲಿಯ ಶ್ರೀಮತಿ.ವೃಂದಾ ಸುಂದರಂ, ಚಿರಾಲದ ಶ್ರೀ.ಕರುಮುಡಿ ವೆಂಕಟರಮಣ ರೆಡ್ಡಿ, ಮುಂಬೈನ ಶ್ರೀ.ಅಡ್ಯಾನ್ ನಾರಂಗ್, ಶ್ರೀ.ಅನಿಲ್ ದಿಧಿಕರ್, ಗೋಂಡ್ಯಾದ ಶ್ರೀ.ಘನಶ್ಯಾಮದಾಸ ರಾಮಕಿಶನ್ ಮಸಾನಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಶ್ರೀ.ಶಿವಪ್ರಕಾಶ ಗುಪ್ತಾ, ಹೈದರಾಬಾದ್ ನ ಶ್ರೀ.ಸುಧೀಶ್ ತಿಮ್ಮರಾಜು, ಶ್ರೀ.ಕರಣಂ ನಾರಾಯಣ, ಜಬಲ್ ಪುರದ ಸಾಯಿ ಗ್ರಾಫಿಕ್ಸ್ ನ ಶ್ರೀ.ಶಿಶಿರ್ ಪಾಂಡೆ, ಹೈದರಾಬಾದ್ ನ ಶ್ರೀ.ಪೊನ್ನಪುಲ ಪಾರ್ಥಸಾರಥಿ ಮತ್ತು ಶ್ರೀಮತಿ.ಸುಲೋಚನ ಕಾರ್ತೀಕ್ ಸಂಜಯ್, ಥಾಣೆಯ ಶ್ರೀ.ನರೇಶ್ ವಿ. ಉಧಾನಿ ಮತ್ತು ನವದೆಹಲಿಯ ಶ್ರೀ.ಪ್ರವೀಣ್ ಕುಮಾರ್ ಭಟ್ಟರವರುಗಳು ಬಹಳವಾಗಿ ಧನಸಹಾಯವನ್ನು ಮಾಡಿ ಪ್ರಸಾದ ಭೋಜನವನ್ನು ಪ್ರಾಯೋಜಿಸಿದರು.
ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಾಯಿ ಭಕ್ತರು ಆಗಮಿಸಿ ಶ್ರೀ ಸಾಯಿಬಾಬಾರವರ ಆಶೀರ್ವಾದವನ್ನು ಪಡೆದರು.
2,50,000 ಕ್ಕೂ ಹೆಚ್ಚು ಉಚಿತ ಲಾಡು ಪ್ರಸಾದ ಪೊಟ್ಟಣಗಳನ್ನು ದರ್ಶನದ ಸಾಲಿನಲ್ಲಿ ಭಕ್ತರಿಗೆ ಹಂಚಲಾಯಿತು. ಅಲ್ಲದೇ ಉಚಿತ ಉಪಹಾರ ಪೊಟ್ಟಣಗಳನ್ನೂ ಸಹ ಹಂಚಲಾಯಿತು. ಎಲ್ಲಾ ಪಲ್ಲಕ್ಕಿ ಪಾದಯಾತ್ರಿಗಳಿಗೂ ಸಾಯಿ ಆಶ್ರಮ-2 ರಲ್ಲಿ ಉಚಿತವಾಗಿ ತಂಗಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ಶ್ರೀ ಸಾಯಿಬಾಬಾ ಸಂಸ್ಥಾನದವರು ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಮಾಡಿದ್ದ ಎಲ್ಲಾ ವ್ಯವಸ್ಥೆಗಳನ್ನು ಸಾಯಿ ಭಕ್ತರುಗಳು ಮುಕ್ತ ಕಂಠದಿಂದ ಹೊಗಳಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ, ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment