Thursday, June 19, 2014

ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯ ಪ್ರಥಮ ಪ್ರತಿಯನ್ನು ಪಡೆದ ಮಹಾನ್ ಸಾಯಿ ಭಕ್ತೆ - ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ -ಕೃಪೆ: ಸಾಯಿ ಅಮೃತಧಾರಾ.ಕಾಂ


ಪರಮ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಾಯಿಬಾಬಾರವರ ಅಶೀರ್ವಾದದಿಂದ 1922ನೇ ಇಸವಿಯಿಂದ 1929ನೇ ಇಸವಿಯ ನಡುವೆ ದಿವಂಗತ ಶ್ರೀ.ಗೋವಿಂದ ರಘುನಾಥ್ ದಾಭೋಲ್ಕರ್ ರವರು ಪ್ರಪ್ರಥಮ ಬಾರಿಗೆ ಮರಾಠಿ ಓವಿ ಶೈಲಿಯಲ್ಲಿ ರಚಿಸಿದರು. ಈ ಮಹಾನ್ ಗ್ರಂಥವನ್ನು ಶ್ರೀ ಸಾಯಿಬಾಬಾ ಸಂಸ್ಥಾನವು 30ನೇ ಅಕ್ಟೋಬರ್ 1930 ರಂದು ಲೋಕಾರ್ಪಣೆ ಮಾಡಿತು.  ನಂತರ ಅದರ ಸಂಕ್ಷಿಪ್ತ ಆವೃತ್ತಿಯನ್ನು ಅಂಗ್ಲ ಭಾಷೆಗೆ ಶ್ರೀ.ನಾಗೇಶ್ ವಾಸುದೇವ್ ಗುಣಾಜಿಯವರು ಅನುವಾದ ಮಾಡಿ ಪ್ರಕಟಿಸಿದರು. ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿದ್ದು  ಈಗ ಇತಿಹಾಸ.  ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಮೊದಲಿಗೆ ತೆಲುಗು ಭಾಷೆಯಲ್ಲಿ ದಿವಂಗತ ಶ್ರೀ.ಪ್ರತ್ತಿ ನಾರಾಯಣ ರಾವ್ ರವರಿಂದ ಅನುವಾದಗೊಂಡಿತು. ಸಂಕ್ಷಿಪ್ತ ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ  ಮೊದಲ ಆವೃತ್ತಿಯ ಮೊದಲ ಪ್ರತಿಯನ್ನು 19ನೇ ಮೇ 1953 ರಂದು ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಹಾನ್ ಸಾಯಿ ಭಕ್ತೆಯಾದ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಅವರಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನೀಡಲಾಯಿತು. 

ಮಾತಾಜಿಯವರು 17ನೇ ಆಗಸ್ಟ್ 1923  ಜನಿಸಿದರು.  ಇವರು ತಮ್ಮ ಜೀವನದುದ್ದಕ್ಕೂ ಸಾಯಿ ತತ್ವವನ್ನು ಪಾಲಿಸಿದ್ದಷ್ಟೇ ಅಲ್ಲದೇ ತಮ್ಮ ಬಳಿ ಬರುತ್ತಿದ್ದ ಅಸಂಖ್ಯಾತ ಸಾಯಿ ಭಕ್ತರಿಗೆ ಬೋಧಿಸುತ್ತಿದ್ದರು.ಇವರು 2004ನೇ ಇಸವಿಯಲ್ಲಿ ಸಿಕಂದರಾಬಾದ್ ನ ಓಲ್ಡ್ ಆಲ್ವಾಲ್ ಪ್ರದೇಶದಲ್ಲಿ ಧ್ಯಾನ ಮಂದಿರ ಹಾಗೂ ಸಾಯಿ ಮಂದಿರವನ್ನು ಪ್ರಾರಂಭಿಸಿದರು. ತಮ್ಮ ಬಳಿ ಪ್ರತಿನಿತ್ಯ ಬರುತ್ತಿದ್ದ ಭಕ್ತರಿಗೆ ಅವರು "ಬಾಬಾರವರಲ್ಲಿ ನಂಬಿಕೆಯಿಡಿ. ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಯಾರೊಡನೆಯೂ ಬೇಡದ ವಿಷಯಗಳ  ಚರ್ಚೆ ಮಾಡಬೇಡಿ.  ನಿಮ್ಮ ತೊಂದರೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಹೋಗಬೇಡಿ. ಅದರ ಬದಲಿಗೆ ನಿಮಗೆ ಸಮಯ ಸಿಕ್ಕಾಗಲೆಲ್ಲಾ ನೀವು ಎಲ್ಲಿದ್ದರೂ ಸರಿಯೇ ಸದಾ ಸಾಯಿಬಾಬಾರವರಿಗೆ ಮಾನಸ ಪೂಜೆಯನ್ನು ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ" ಎಂದು ಬೋಧಿಸುತ್ತಿದ್ದರು. ತಮ್ಮ ಭಕ್ತರ ಅನುಭವಗಳನ್ನು ಅವರು "ಸಾಯಿ ಲೀಲಮ್ಮ - ಭಕ್ತರ ಅನುಭವಗಳು" ಎಂಬ ಪುಸ್ತಕದಲ್ಲಿ  ಹಂಚಿಕೊಂಡಿದ್ದರು. ಆ ಪುಸ್ತಕದಲ್ಲಿ ಅವರು ಶ್ರೀ ಸಾಯಿಬಾಬಾರವರಿಗೆ  ಮಾನಸ ಪೂಜೆಯನ್ನು ಸಲ್ಲಿಸುವುದು ಹೇಗೆ ಎಂದು ತಿಳಿಸಿದ್ದರು. ತಮ್ಮ ಭಕ್ತರ ಕಷ್ಟಗಳನ್ನು ಅವರು ತಮ್ಮ ಮೇಲೆ ಎಳೆದುಕೊಂಡು ಅದನ್ನು ಬಾಬಾರವರ ಬಳಿ ತಿಳಿಸಿ ಅವರ ಕಷ್ಟಗಳನ್ನು ನಿವಾರಿಸುತ್ತಿದ್ದರು

ಸಾಯಿ ಭಕ್ತೆ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಮಾತಾಜಿಯವರು 25ನೇ ಆಗಸ್ಟ್ 2014, ಸೋಮವಾರ ದಂದು ಬೆಳಿಗ್ಗೆ 11:05 ಕ್ಕೆ ಸಿಕಂದರಾಬಾದ್ನ ಓಲ್ಡ್ ಆಲ್ವಾಲ್ ನ ಮಂದಿರ ಮತ್ತು ಸ್ವಗೃಹದಲ್ಲಿ ವಿಧಿವಶರಾದರು. ಮಾತಾಜಿಯವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಶ್ರೀ.ಪ್ರಕಾಶ್ ಎಂಬ  ಮಗ, ಶ್ರೀಮತಿ.ಲಲಿತಾ ಎಂಬ  ಮಗಳು, ಅನೇಕ ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment