Monday, June 23, 2014

ಮುಂಬೈ ನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, ಶ್ರೀ ಪ್ರೇಮಲ ವಿಠಲ ಮಂದಿರ, ಪಾನಸವಾಡಿ, ಮಿಲ್ ಏರಿಯಾ, ಗಿರ್ಗಾಮ್, ಮುಂಬೈ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ ಸಾಯಿ ಸಚ್ಚರಿತ್ರೆಯ ನಾಲ್ಕನೆಯ ಅಧ್ಯಾಯದಲ್ಲಿ ಪವಿತ್ರ ತೀರ್ಥಕ್ಷೇತ್ರವಾದ ಪಂಢರಾಪುರ, ಶ್ರೀ ವಿಠಲ ಹಾಗೂ ರುಕ್ಮಾಯಿಯನ್ನು ಕುರಿತು ಉಲ್ಲೇಖಿಸಿರುವುದನ್ನು ನಾವು ಓದಿ ತಿಳಿದಿದ್ದೇವೆ. ಹೀಗೆ ಪಂಢರಾಪುರ ಹಾಗೂ ಶ್ರೀ.ವಿಠಲ ಮತ್ತು ರುಕ್ಮಾಯಿಯ ಬಗ್ಗೆ ಬರೆಯುತ್ತಾ ಅಣ್ಣಾ ಸಾಹೇಬ್ ದಾಭೋಲ್ಕರ್ ಆಲಿಯಾಸ್  ಹೇಮಾಡಪಂತರು "ಪಂಢರಾಪುರದಲ್ಲಿ ಶ್ರೀ ವಿಠಲ ರುಕ್ಮಾಯಿಯರ ದರ್ಶನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಶಿರಡಿಯಲ್ಲಿ ಸಾಯಿಬಾಬಾರವರೂ ಕೂಡ ಶ್ರೀ ವಿಠಲನಂತೆಯೇ ದರ್ಶನ ನೀಡುತ್ತಾರೆ" ಎಂದು ಉಲ್ಲೇಖಿಸಿದ್ದಾರೆ. 

ಅದೇ ಅಧ್ಯಾಯದ ಮುಂದಿನ ಸಾಲುಗಳಲ್ಲಿ ಸ್ವಯಂ ಶ್ರೀ ಸಾಯಿಬಾಬಾರವರೇ ದಾಸಗಣು ಮಹಾರಾಜ್ ರವರಿಗೆ "ಢಂಕಪುರಿಯಲ್ಲಿ ಶ್ರೀ.ಢಾಕುರನಾಥ ಹಾಗೂ ಪಂಢರಾಪುರದಲ್ಲಿ ಶ್ರೀ ವಿಠಲ ರುಕ್ಮಾಯಿಯರು ಇರುವಂತೆಯೇ ನಾನು ಶಿರಡಿಯಲ್ಲಿ ಇದ್ದೇನೆ. ಶ್ರೀ ಕೃಷ್ಣನನ್ನು ನೋಡಲು ದ್ವಾರಕಾನಗರಿಗೆ ಹೋಗಬೇಕಾಗಿಲ್ಲ" ಎಂದು ಹೇಳಿದ್ದಾರೆ. ಸಾಯಿಬಾಬಾರವರ ಈ ಮಾತುಗಳಿಂದ ಶ್ರೀ ವಿಠಲನು ಶಿರಡಿಯಲ್ಲಿ ಕೂಡ ನೆಲೆಸಿದ್ದಾನೆಂದು ಸ್ವಯಂ ಬಾಬಾರವರೇ ಮನಗಂಡಿದ್ದು ನಮ್ಮ ಅರಿವಿಗೆ ಬರುತ್ತದೆ. 

ಪಂಢರಾಪುರದ ಶ್ರೀ ವಿಠಲನ ಬಗ್ಗೆ ಬಾಬಾರವರಿಗೆ ಇದ್ದ ವಿಶೇಷ ಗೌರವವನ್ನು ನಾವು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ ಬರುವ ಸಾಯಿ ಭಕ್ತ ಶ್ರೀ ಭಗವಂತ ಕ್ಷೀರಸಾಗರರ ಕಥೆಯಿಂದ ತಿಳಿದುಕೊಳ್ಳಬಹುದಾಗಿದೆ. ಶ್ರೀ ವಿಠಲನು ಭಗವಂತ ಕ್ಷೀರಸಾಗರರ ಕುಲದೈವವಾಗಿದ್ದರು.  ಅವರ ತಂದೆಯವರೂ ಸಹ ವಿಠಲನ ಭಕ್ತರಾಗಿದ್ದು ಅವರ ಮನೆಯಲ್ಲಿ ವಿಠಲನ ಪೂಜೆಯನ್ನು ಅತ್ಯಂತ ಹೆಚ್ಚಿನ ಶ್ರದ್ಧಾ ಭಕ್ತಿಗಳಿಂದ ಆಚರಿಸಿಕೊಂಡು ಬಂದಿದ್ದರು. ಅವರ ತಂದೆಯವರ ಮರಣದ ನಂತರ ಈ ಜವಾಬ್ದಾರಿ ಶ್ರೀ ಭಗವಂತ ಕ್ಷೀರಸಾಗರರ ಮೇಲೆ ಬಿತ್ತು. ಆದರೆ ಅನಿವಾರ್ಯ ಕಾರಣದಿಂದ ಅವರು ವಿಠಲನ ಪೂಜೆಯನ್ನು ಮುಂದುವರಿಸಿಕೊಂಡು ಹೋಗಲಿಲ್ಲ. ಹಾಗಾಗಿ, ಶ್ರೀ ಭಗವಂತ ಕ್ಷೀರಸಾಗರರು ಒಮ್ಮೆ ಶಿರಡಿಗೆ ಶ್ರೀ ಸಾಯಿಬಾಬಾರವರ ದರ್ಶನಕ್ಕೆಂದು ಬಂದಿದ್ದಾಗ ಬಾಬಾರವರು ಈ ವಿಷಯದ ಬಗ್ಗ್ಗೆ ಭಗವಂತ ಕ್ಷೀರಸಾಗರರ ಹತ್ತಿರ ಪ್ರಸ್ತಾಪ ಮಾಡಿದರು ಹಾಗೂ ಎಲ್ಲಾ ದೇವರೂ ಒಂದೇ ಎಂಬ ಸತ್ಯವನ್ನು ಅವರಿಗೆ ತಿಳಿಸಿದರು. ಅಲ್ಲದೇ ಅವರು ಮಾಡುತ್ತಿದ್ದ ವಿಠಲನ ಪೂಜೆಯನ್ನು ಮುಂದುವರಿಸಿಕೊಂಡು ಹೋಗುವುದನ್ನು ಬಿಟ್ಟು ಶಿರಡಿಗೆ ಓಡಿ ಬರುವ ಅವಶ್ಯಕತೆ ಇರಲಿಲ್ಲವೆಂದು ಬಾಬಾರವರು ಕ್ಷೀರಸಾಗರರಿಗೆ ಮನದಟ್ಟು ಮಾಡಿಸಿದರು. ಭಗವಂತ ಕ್ಷೀರಸಾಗರರಿಗೆ ಎಲ್ಲಾ ದೇವರುಗಳೂ ಒಂದೇ ಎಂದು ತೋರಿಸುವ ಸಲುವಾಗಿ ಬಾಬಾರವರು ಅವರಿಗೆ ಪಂಢರಾಪುರದ ಶ್ರೀ ವಿಠಲನಂತೆ ದರ್ಶನ ನೀಡಿದರು. 

ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಗಳೂ ಶಿರಡಿಯ  ಶ್ರೀ ಸಾಯಿಬಾಬಾ ಹಾಗೂ ಪಂಢರಾಪುರದ ಶ್ರೀ ವಿಠಲರಿಗಿರುವ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಮುಂಬೈನ ಗಿರ್ಗಾಮ್ ನ ಪಾನಸವಾಡಿಯಲ್ಲಿರುವ ಸಾಯಿಬಾಬಾ ಮಂದಿರವು ಮೊದಲಿಗೆ ವಿಠಲನ ಮಂದಿರವಾಗಿದ್ದು "ಶ್ರೀ ಪ್ರೇಮಲ ವಿಠಲ ಮಂದಿರ" ವೆಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಮಂದಿರವನ್ನು ಶ್ರೀ ಗಜಾನನ ವಿನಾಯಕ ಪ್ರಧಾನ್ ಎಂಬುವರು ತಮ್ಮ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಿ ಮಂದಿರದ ಗರ್ಭಗುಡಿಯಲಿ ಶ್ರೀ ವಿಠಲ ಹಾಗೂ ರುಕ್ಮಾಯಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಿದರು. ಆದರೆ ಶ್ರೀ ವಸಂತಾಶಾಸ್ತ್ರಿ ಆಲಿಯಾಸ್ ಅಬಾ ಪಂಶೀಕರ್ ರವರು ಮಂದಿರವನ್ನು ಸಂಪೂರ್ಣವಾಗಿ ನವೀಕರಣಗೊಳಿಸಿ ಹಳೆಯ ಮಂದಿರಕ್ಕೆ ಈಗ ಇರುವ ರೂಪವನ್ನು ನೀಡಿದರು. 

ಶ್ರೀ ಅಬಾ ಪಂಶೀಕರ್ ರವರು ಮರಾಠಿ ರಂಗಭೂಮಿಯ ಪ್ರಸಿದ್ಧ ನಟರಾಗಿದ್ದಾರೆ. ಅವರು ಹಾಗೂ ಅವರ ಸಹೋದರ ಈ ಮಂದಿರದಲ್ಲಿ ನಿಯಮಿತವಾಗಿ ಕೀರ್ತನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಾಯಿ ಭಕ್ತರಾದ ಶ್ರೀ ಭೋಲೆ ಗುರೂಜಿಯವರು ಮಂದಿರದ ಹತ್ತಿರದ ಗಿರ್ಗಾಮ್ ನ ಮುಗ್ಭಾತ್ ನಲ್ಲಿ  ಮನೆ ಮಾಡಿಕೊಂಡಿದ್ದ ಕಾರಣ ಶ್ರೀ ಅಬಾ ಪಂಶೀಕರ್ ರವರ ಕೀರ್ತನೆಯನ್ನು ಆಲಿಸಲು ಆಗಾಗ್ಗೆ ಬರುತ್ತಿದ್ದರು.  ಶ್ರೀ ಭೋಲೆ ಗುರೂಜಿಯವರು ಶ್ರೀ ಅಬಾ ಪಂಶೀಕರ್ ರವರಿಗೆ ಸಾಯಿಬಾಬಾರವರ ಪೂಜೆಯನ್ನು ಮಾಡುವಂತೆ ಸಲಹೆ ನೀಡಿದರು. ಅಲ್ಲಿಯವರೆಗೆ ಶ್ರೀ ಪಂಶೀಕರ್ ರವರು ಬಾಬಾರವರ ದೈವತ್ವದ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಶ್ರೀ ಭೋಲೆ ಗುರೂಜಿಯವರಿಂದ ಉಪದೇಶ ಪಡೆದ ನಂತರ ಅವರು ಬಹಳವೇ ಸಂತೋಷದಿಂದ ಶ್ರೀ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  ಕೆಲವೇ ದಿನಗಳಲ್ಲಿ ಅವರು ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದಷ್ಟೇ ಅಲ್ಲದೇ ಶ್ರೀ ವಿಠಲನ ಮಂದಿರವನ್ನು ಶ್ರೀ ಸಾಯಿಬಾಬಾ ಮಂದಿರವಾಗಿ ಮಾರ್ಪಡಿಸಲು ಯೋಚಿಸಿದರು. ಹೀಗೆ ಶ್ರೀ ಅಬಾ ಪಂಶೀಕರ್ ರವರ ಅವಿರತ ಶ್ರಮದ ಫಲವಾಗಿ ಶ್ರೀ ವಿಠಲನ ಮಂದಿರವು ಶ್ರೀ  ಸಾಯಿಬಾಬಾ ಮಂದಿರವಾಗಿ ಮಾರ್ಪಟ್ಟು ಅದೇ ಹೆಸರಿನಿಂದ ಪ್ರಸಿದ್ಧವಾಗಿದೆ. 

ಈ ಮಂದಿರದಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಿದ ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದಾಗಿದೆ.  ಈ ವಿಗ್ರಹವನ್ನು ಒಂದು ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ ಮೊದಲಿಗೆ ಇದ್ದ ಶ್ರೀ ವಿಠಲ ಹಾಗೂ ರುಕ್ಮಾಯಿಯ ವಿಗ್ರಹಗಳನ್ನು ಸಹ ಸಾಯಿ ಭಕ್ತರು ನೋಡಬಹುದಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಖ್ಯಾತ ಶಿಲ್ಪಿಯಾದ ಶ್ರೀ.ಜಿ.ವಿ.ಪಾಟ್ಕರ್ ರವರು ತಯಾರಿಸಿರುತ್ತಾರೆ. ಮೊದಲು ಈ ಮಂದಿರವನ್ನು ಸ್ವಂತಕ್ಕೆಂದು ಕಟ್ಟಿಸಿ ಕೊಂಡಿದ್ದರೂ ಸಹ ನಂತರದ ದಿನಗಳಲ್ಲಿ ಸಾರ್ವಜನಿಕರಿಗೂ ಸಹ ದರ್ಶನ ಮಾಡಲು ಅವಕಾಶ ನೀಡಲಾಯಿತು.  ಪ್ರಸ್ತುತ ಯಾರು ಬೇಕಾದರೂ ಈ ಮಂದಿರಕ್ಕೆ ತೆರಳಿ ಶ್ರೀ ಸಾಯಿಬಾಬಾ ಹಾಗೂ ಶ್ರೀ ವಿಠಲ ಮತ್ತು ರುಕ್ಮಾಯಿಯರ ವಿಗ್ರಹಗಳಿಗೆ ಪುಷ್ಪ ಹಾಗೂ ಹೂಮಾಲೆಯನ್ನು ಅರ್ಪಿಸಿ ಪೂಜಿಸಿಕೊಳ್ಳಬಹುದಾಗಿರುತ್ತದೆ. 

ಮಂದಿರದ ಹಿಂಭಾಗದಲ್ಲಿ ಸುಮಾರು ನೂರು ವರ್ಷಗಳಿಗೂ ಹಳೆಯದಾದ ಆಲದ ಮರ ಇದೆ.  ಈ ಮರದ ಸುತ್ತಲೂ ಶ್ರೀ ದತ್ತಾತ್ರೇಯ, ಹನುಮಾನ್ ಹಾಗೂ ಶಿವಲಿಂಗಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ ಬೆಳ್ಳಿಯಲ್ಲಿ ಕೆತ್ತಲಾಗಿರುವ ಸಾಯಿಬಾಬಾರವರ ಪಾದುಕೆಗಳನ್ನು ಸಹ ಈ ಮಂದಿರದಲ್ಲಿ ನೋಡಬಹುದಾಗಿದೆ. ಈ ಪವಿತ್ರ ಪಾದುಕೆಗಳನ್ನು 26ನೇ ಅಕ್ಟೋಬರ್ 1952 ರಂದು ಶ್ರೀ ಪಾಲೇಕರ್ ಶಾಸ್ತ್ರಿಯವರು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಟಾಪಿಸಿರುತ್ತಾರೆ.

ಬೆಳ್ಳಿಯಲ್ಲಿ ಶ್ರೀ ಸಾಯಿಬಾಬಾರವರ ಪಾದುಕೆಗಳನ್ನು ತಯಾರು ಮಾಡಿಸಿ ಭಕ್ತರ ಮನೆಗಳಿಗೆ ಹಾಗೂ ಸಂಸ್ಥೆಗಳಿಗೆ ಪೂಜೆ ಮಾಡಿಕೊಳ್ಳುವ ಸಲುವಾಗಿ ನೀಡುವ ಸಂಪ್ರದಾಯವನ್ನು ಈ ಮಂದಿರದವರು ಮೊದಲಿಗೆ ಪ್ರಾರಂಭಿಸಿದರು. ಇದುವರೆಗೂ ಈ ಮಂದಿರದ ವತಿಯಿಂದ ಪೂಜೆ ಮಾಡಿಕೊಳ್ಳುವ ಸಲುವಾಗಿ ಐದು ವಿವಿಧ ಮಂದಿರಗಳಿಗೆ ಬೆಳ್ಳಿಯ ಪಾದುಕೆಗಳನ್ನು ಮಾಡಿಕೊಡಲಾಗಿದೆ. ಲಂಡನ್ ನಲ್ಲಿ ಶ್ರೀಮತಿ.ಅಜೀಬಾಯಿ ವನರಸೆಯವರು ನೆಡೆಸುತ್ತಿರುವ ಸಾಯಿಬಾಬಾ ಮಂದಿರದಲ್ಲಿ ಕೂಡ ಈ ಮಂದಿರದ ವತಿಯಿಂದ ಮಾಡಿಕೊಡಲಾದ ಬೆಳ್ಳಿಯ ಪಾದುಕೆಗಳನ್ನು ಪೂಜಿಸಲಾಗುತ್ತಿದೆ ಎಂಬ ವಿಷಯವನ್ನು ಸಾಯಿ ಭಕ್ತರು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುತ್ತದೆ. 

"ಮಾನವ ಸೇವೆ ಹಾಗೂ ಮಾತು ಬರದವರ ಸೇವೆಯನ್ನು ಮಾಡುವುದೇ ನಿಜವಾಗಿ ನಾವು ದೇವರಿಗೆ ಮಾಡುವ ಸೇವೆ" ಎಂಬುದು ಶ್ರೀ ಸಾಯಿಬಾಬಾರವರ ಧ್ಯೇಯವಾಗಿತ್ತು. ಈ ಮಂದಿರದ ಟ್ರಸ್ಟ್ ನ ಸದಸ್ಯರು ಈ ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ಮಂದಿರದ ಟ್ರಸ್ಟ್ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಸಹ ತನ್ನನ್ನು ತಾನು ತೊಡಗಿಸಿಕೊಂಡಿದೆ. ಮಂದಿರದ ಮೊದಲನೇ ಮಹಡಿಯಲ್ಲಿ ಮುಂಬೈ ಮಹಾನಗರದಲ್ಲಿ ತಂಗಲು ಸ್ಥಳವಿಲ್ಲದೆ ಒದ್ದಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇದರ ಸದುಪಯೋಗವನ್ನು ಹಲವಾರು ವಿದ್ಯಾರ್ಥಿಗಳು ಪಡೆದುಕೊಂಡಿರುವುದಷ್ಟೇ ಅಲ್ಲದೇ ಸಣ್ಣ ವಯಸ್ಸಿನಿಂದಲೇ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ.  

ಶಿರಡಿಯಲ್ಲಿ ನಡೆಯುವಂತೆಯೇ ಈ ಮಂದಿರದಲ್ಲಿ ಕೂಡ ಆರತಿ ಹಾಗೂ ಪೂಜೆಗಳನ್ನು ನೆರವೇರಿಸಲಾಗುತ್ತಿದೆ.  ಅಲ್ಲದೇ ಶಿರಡಿಯಲ್ಲಿ ನೆಡೆಯುವಂತೆಯೇ ಇಲ್ಲಿ ಕೂಡ ಶ್ರೀರಾಮನವಮಿ, ಗುರುಪೂರ್ಣಿಮೆ ಹಾಗೂ ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಅಲ್ಲದೇ ಪ್ರತಿ ವರ್ಷದ ಶ್ರಾವಣ ಮಾಸದ ಸೋಮವಾರದಂದು ಹಾಗೂ ಮಹಾ ಶಿವರಾತ್ರಿಯ ದಿನದಂದು ಶ್ರೀ ಸಾಯಿಬಾಬಾರವರಿಗೆ ಹಣ್ಣುಗಳ ನೈವೇದ್ಯವನ್ನು ಅರ್ಪಿಸಿ ಅದೇ ಹಣ್ಣುಗಳನ್ನು ಮಂದಿರಕ್ಕೆ ಅಂದು ಬರುವ ಎಲ್ಲಾ ಭಕ್ತರಿಗೂ ಪ್ರಸಾದ ರೂಪದಲ್ಲಿ ಹಂಚಲಾಗುತ್ತಿದೆ. ಮಹಾನ್ ಸಾಯಿ ಭಕ್ತರಾದ  ಶ್ರೀ ಪಾಂಡುರಂಗ ಮಹದೇವ ವಾರಂಗ್ ರವರು ಈ ಮಂದಿರದ ಮೇಲುಸ್ತುವಾರಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರು ಬಾಲ್ಯದಿಂದ ಈ ಮಂದಿರದ ಆವರಣದಲ್ಲೇ ವಾಸವಾಗಿದ್ದು ಮಂದಿರದ ಎಲ್ಲಾ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಮಂದಿರದ ಟ್ರಸ್ಟ್ ನ ಸದಸ್ಯರು ಮಂದಿರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ಮಂದಿರದಲ್ಲಿ ಸ್ಥಳಾವಕಾಶದ ಅಭಾವವಿರುವ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಬಾಬಾರವರು ತಮಗೆ ಬಂದೊದಗುವ ಎಲ್ಲಾ ಕಷ್ಟಗಳನ್ನು ಆ ಕೂಡಲೇ ಹೊಡೆದೊಡಿಸುತ್ತಿದ್ದಾರೆ ಎಂದು ಶ್ರೀ ವಾರಂಗ್ ರವರು ಸಂತೋಷದಿಂದ ನುಡಿಯುತ್ತಾರೆ. ಇವರು ಅವರಿಗೆ ಬಾಬಾರವರಲ್ಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಸೂಚಿಸುತ್ತದೆ. 

ಮುಂಬೈನ ಗಿರ್ಗಾಮ್ ಪ್ರದೇಶವು ಜನರಿಂದ ಸದಾ ಕಿಕ್ಕಿರಿದು ತುಂಬಿರುವ ಪ್ರದೇಶವಾಗಿರುತ್ತದೆ.  ಲಾಲ್ ಬಾಗ್ ಹಾಗೂ ಪರೇಲ್ ನಡುವಿನ ಪ್ರದೇಶವಾದ "ಮಿಲ್ ಪ್ರದೇಶ" ವು ಸಹ ಸದಾ ಜನರಿಂದ ತುಂಬಿರುವ ಪ್ರದೇಶವಾಗಿರುತ್ತದೆ.  "ಮಿಲ್ ಪ್ರದೇಶ" ದಲ್ಲಿ ಕೆಳ  ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು ತಮ್ಮ ಒಂದೊಂದು ದಿನವನ್ನು ಕಳೆಯಲು ಬಹಳ ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಅವರಿಗೆ ದೇವರ ಬಗ್ಗೆ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಆದರೆ ಗಿರ್ಗಾಮ್ ಪ್ರದೇಶದಲ್ಲಿ ಬಹಳಷ್ಟು ಶ್ರೀಮಂತರು ವಾಸವಾಗಿದ್ದಾರೆ.  ಅವರು ನಿಗದಿತ ಸಮಯವನ್ನು ತಮ್ಮ ಕಛೇರಿಯ ಕೆಲಸಕ್ಕೆಂದು ವಿನಿಯೋಗಿಸುತ್ತಾರೆ. ಅಲ್ಲದೇ ಬಾಲ್ಯದಿಂದಲೇ ಅವರಲ್ಲಿ ಧಾರ್ಮಿಕ ಆಚರಣೆಗಳು ಮೈಗೂಡಿಕೊಂಡಿರುತ್ತವೆ.  ಹಾಗಾಗಿ ಪೂಜೆ ಮಾಡಿಕೊಳ್ಳುವ ಸಲುವಾಗಿ ಹಾಗೂ ಮನಶ್ಯಾಂತಿಗಾಗಿ ಅವರುಗಳಿಗೆ ಪೂಜಾ ಸ್ಥಳದ ಅವಶ್ಯಕತೆ ಇದೆ. ಈ ಹಿಂದೆ ವಿಠಲನ ಭಕ್ತರಾಗಿದ್ದ ಜನರು ಈ ಮಂದಿರಕ್ಕೆ ಪೂಜೆ ಮಾಡುವ ಸಲುವಾಗಿ ಬರುತ್ತಾರೆ. ಅಲ್ಲಿ ಬಂದವರೇ ಶ್ರೀ ಸಾಯಿಬಾಬಾರವರ ವಿಗ್ರಹವನ್ನು ನೋಡಿ ಹಾಗೂ ಅವರ ದೈವತ್ವವನ್ನು ತಿಳಿದವರೇ ಸಾಯಿ ಭಕ್ತರಾಗಿ ಪರಿವರ್ತನೆಯಾಗುತ್ತಾರೆ. ಈ ರೀತಿಯಲ್ಲಿ ಗಿರ್ಗಾಮ್ ಪ್ರದೇಶದಲ್ಲಿ ವಾಸಿಸುವ ಭಕ್ತರಿಗೆ ಈ ಮಂದಿರವು ಬಹಳ ಉಪಯೋಗಕಾರಿಯಾಗಿದೆ ಎಂದು ಹೇಳಬಹುದು. ಹಾಗಾಗಿ ಈ ಮಂದಿರಕ್ಕೆ ಪ್ರತಿನಿತ್ಯ ಬಹಳ ಭಕ್ತರು ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಮಂದಿರದ ವಿಳಾಸ: 

ಶ್ರೀ ಸಾಯಿಬಾಬಾ ಮಂದಿರ 
ಶ್ರೀ ಪ್ರೇಮಲ ವಿಠಲ ಮಂದಿರ,
ಪಾನಸವಾಡಿ, 
ಮಿಲ್ ಏರಿಯಾ, ಗಿರ್ಗಾಮ್,
ಮುಂಬೈ,ಮಹಾರಾಷ್ಟ್ರ, ಭಾರತ.  

(ಆಧಾರ:ಶ್ರೀ ಸಾಯಿ ಲೀಲಾ ಪತ್ರಿಕೆ (ಮರಾಠಿ), ಜುಲೈ 1975)


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment