Friday, January 10, 2014

ಸಾಯಿ ಮಹಾಭಕ್ತ ಶ್ರೀ.ಚೋಳ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ.ಚೋಳ್ಕರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು.  ಇವರು ಮುಂಬೈ ಹತ್ತಿರದ ಥಾಣೆಯ ಸಿವಿಲ್ ನ್ಯಾಯಾಲಯದಲ್ಲಿ ಪರೀಕ್ಷಾ ಅವಧಿಯಲ್ಲಿರುವ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಪ್ರತಿನಿತ್ಯ ಸಂತ ದಾಸಗಣು ಮಹಾರಾಜರ ಕೀರ್ತನೆಯನ್ನು ಕೇಳಲು ಶ್ರೀ ಕೌಪೀನೇಶ್ವರ ದೇವಾಲಯಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರು. ಒಂದು ದಿನ ದಾಸಗಣುರವರು ಹರಿ ಕೀರ್ತನೆಯನ್ನು ಮಾಡುತ್ತಿದ್ದಾಗ ಇವರ ಹೃದಯದಲ್ಲಿ ಸಾಯಿಬಾಬಾರವರ ಬಗ್ಗೆ ಅತಿಯಾದ ಪ್ರೀತಿ ಉಕ್ಕಿತು. ಆಗ ಅವರು ತಮ್ಮ ಮನದಲ್ಲಿ "ಓ ದಯಾಮಯನಾದ ಸಾಯಿಬಾಬನೇ, ದಯಮಾಡಿ ಈ ಅಸಹಾಯಕ ಪ್ರಾಣಿಯ ಬಗ್ಗೆ ಕನಿಕರ ತೋರು" ಎಂದು ಪ್ರಾರ್ಥನೆ ಮಾಡಿಕೊಂಡರು. 

 

ಶ್ರೀ.ಚೋಳ್ಕರ್ ರವರು ಪರೀಕ್ಷಾವಧಿಯಲ್ಲಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಡಿಮೆ  ಸಂಬಳ ಬರುತ್ತಿದ್ದ ಕಾರಣ ಬಡವರಾಗಿದ್ದರು. ಆದ ಕಾರಣ ಸಂಸಾರದ ಭಾರವನ್ನು ಹೊರಲು ಅಸಮರ್ಥರಾಗಿದ್ದು ತಮ್ಮ ಸರ್ಕಾರಿ ನೌಕರಿಯನ್ನು ಖಾಯಂಗೊಳಿಸುವ  ಸಂಪೂರ್ಣ ಜವಾಬ್ದಾರಿಯನ್ನು ಸಾಯಿಬಾಬಾರವರ ಮೇಲೆ ಹೊರಿಸಿದ್ದರು. 


ಸಾಮಾನ್ಯವಾಗಿ  ಭಕ್ತರು ತಮ್ಮ ಬಯಕೆ ಪೂರ್ಣವಾದರೆ ಒಬ್ಬ ಬ್ರಾಹ್ಮಣನಿಗೆ ಹೊಟ್ಟೆ ತುಂಬಾ ಭೋಜನವಿಡುವುದಾಗಿ ಹರಸಿಕೊಳ್ಳುವ ಪರಿಪಾಠ ಇಟ್ಟುಕೊಂಡಿರುತ್ತಾರೆ. ಶ್ರೀಮಂತ ಭಕ್ತರಾದರೆ ಸಾವಿರಾರು  ಬ್ರಾಹ್ಮಣರಿಗೆ ಭೋಜನವಿಡುವುದಾಗಿ ಅಥವಾ ನೂರಾರು ಹಸುಗಳನ್ನು ದಾನ ಮಾಡುವುದಾಗಿ ಹರಸಿಕೊಳ್ಳುತ್ತಾರೆ.

ಆದರೆ  ಶ್ರೀ.ಚೋಳ್ಕರ್ ರವರು ಕಡು ಬಡವರಾಗಿದ್ದರು. ಆದ್ದರಿಂದ ಅವರು ಸಾಯಿಬಾಬಾರವರಿಗೆ ವಂದಿಸುತ್ತಾ "ಬಾಬಾ, ನಾನು ಸಂಸಾರ ನಿರ್ವಹಣೆಯನ್ನು ಮಾಡಲಾಗದಿರುವ ಕಡು ಬಡವ. ನಾನು ಈಗ ಮಾಡುತ್ತಿರುವ ಕೆಲಸ ಖಾಯಂ ಆಗಬೇಕಾದರೆ ಇಲಾಖೆಯವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ನಾನು ಬಹಳ ಕಷ್ಟಪಟ್ಟು ಚೆನ್ನಾಗಿ ಓದಿ ಪರೀಕ್ಷೆಗೆ ತಯಾರಾಗಿದ್ದೇನೆ. ನಾನು ಈ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ ಈಗ ಇರುವ ಕೆಲಸ ಸಹ ಕಳೆದುಕೊಳ್ಳುತ್ತೇನೆ. ನಿಮ್ಮ ದಯೆಯಿಂದ ಈ ಸಾರಿ ನನಗೆ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖಾಯಂ ಕೆಲಸ ದೊರೆತರೆ ಶಿರಡಿಗೆ ಬಂದು ನಿಮ್ಮ ಪಾದಪದ್ಮಗಳಿಗೆ ವಂದಿಸಿ ನಿಮ್ಮ ಹೆಸರಿನಲ್ಲಿ ನಾನು ಕಲ್ಲುಸಕ್ಕರೆ  ಹಂಚುತ್ತೇನೆ" ಎಂದು ಪ್ರಾರ್ಥನೆ ಮಾಡಿಕೊಂಡರು. 

 ನಂತರ ಸಾಯಿಬಾಬಾರವರ ಆಶೀರ್ವಾದದಿಂದ ಶ್ರೀ.ಚೋಳ್ಕರ್ ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖಾಯಂ ಕೆಲಸ ದೊರಕಿತು. ಆಗ ಅವರು ಹರಕೆಯನ್ನು ಪೂರೈಸುವುದೊಂದೆ ಉಳಿಯಿತು. ಈಗಾಗಲೇ ತಿಳಿಸಿದಂತೆ ಶ್ರೀ.ಚೋಳ್ಕರ್ ರವರು ಕಡು ಬಡವರಾದ ಕಾರಣ ಸಂಸಾರ ತಾಪತ್ರಯವಿದ್ದುದರಿಂದ ಶಿರಡಿಗೆ ಹೋಗಲು ಬೇಕಾದ ಹಣದ ಕೊರತೆ ಇದ್ದಿತು. ಆದರೂ ತಮ್ಮ ಖರ್ಚನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕೆಂದು ನಿರ್ಧಾರ ಮಾಡಿ "ಇಂದಿನಿಂದ ನನ್ನ ದಿನ ನಿತ್ಯದ ಆಹಾರದಲ್ಲಿ ಅಥವಾ ಚಹಾದಲ್ಲಿ ಸಕ್ಕರೆ ಉಪಯೋಗಿಸದೇ ಹಣ ಉಳಿಸುತ್ತೇನೆ" ಎಂದು ಧೃಡ ಸಂಕಲ್ಪ ಮಾಡಿ ಸಕ್ಕರೆಯನ್ನು ಬಳಸುವುದನ್ನೇ ಬಿಟ್ಟುಬಿಟ್ಟರು. 

ಈ ರೀತಿ ಹಲವಾರು ತಿಂಗಳುಗಳು ಉರುಳಿದವು. ನಂತರ ಹಣವನ್ನು ಸ್ವಲ್ಪ ಸಲ್ಪವೇ ಕೂಡಿಸಿ ಕೆಲವು ದಿನಗಳ ನಂತರ ಶಿರಡಿಗೆ ಬಂದು ತಮ್ಮ ಹರಕೆಯನ್ನು ಪೂರೈಸಿ, "ನನ್ನ ಬಹು ದಿನಗಳ ಆಸೆಯು ಇಂದು ನೆರವೇರಿತು" ಎಂದು ಮನದಲ್ಲಿ ಅಂದುಕೊಂಡು ಶಿರಡಿ ಸಾಯಿಬಾಬಾರವರ ದಿವ್ಯ ಚರಣಗಳಿಗೆ ಭಕ್ತಿ ಹಾಗೂ ನಮ್ರತೆಯಿಂದ ವಂದಿಸಿದರು. ಅಲ್ಲದೆ ಸಾಯಿಬಾಬಾರವರಿಗೆ ಕಲ್ಲುಸಕ್ಕರೆ ಹಾಗೂ ತೆಂಗಿನಕಾಯಿಯನ್ನು ಅರ್ಪಣೆ ಮಾಡಿದರು.

ಶ್ರೀ.ಚೋಳ್ಕರ್ ರವರು ಬಾಪು ಸಾಹೇಬ್ ಜೋಗ್ ರವರ ಅತಿಥಿಯಾಗಿ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಆದ ಕಾರಣ ಜೋಗ್ ರವರು ಮನೆಗೆ ಹೊರಡಲು ಎದ್ದಾಗ ತಾವೂ ಅವರ ಜೊತೆಗೆ ಎದ್ದು ಹೊರಡಲು ಅನುವಾದರು. ಆಗ ಬಾಬಾರವರು ಜೋಗ್ ರವರನ್ನು ಉದ್ದೇಶಿಸಿ "ಈ ದಿನ ನಿನ್ನ ಅತಿಥಿಗೆ ಚಹಾದಲ್ಲಿ ಹೆಚ್ಚಾಗಿ ಸಕ್ಕರೆ ಹಾಕಿ ಕುಡಿಯಲು ನೀಡು" ಎಂದರು.


ತಮಗೆ ಮಾತ್ರ ತಿಳಿದಿದ್ದ ತಮ್ಮ ಹರಕೆಯ ವಿಷಯ ಸಾಯಿಬಾಬಾರವರಿಗೆ ಗೊತ್ತಾಗಿರುವುದು ತಿಳಿದು ಶ್ರೀ.ಚೋಳ್ಕರ್ ರವರಿಗೆ ಅತ್ಯಂತ ಆಶ್ಚರ್ಯವಾಯಿತು. ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಉಕ್ಕಿತು. ಕೂಡಲೇ ಅವರು ಪುನಃ ಸಾಯಿಬಾಬಾರವರ ಪಾದಕಮಲಗಳಿಗೆ ಭಕ್ತಿಯಿಂದ ವಂದಿಸಿದರು. 


ಚಹಾವನ್ನೇ ಕುಡಿಯದ ಸಾಯಿಬಾಬಾರವರು ಏಕೆ ಈ ರೀತಿ ನುಡಿದರು? ಸಾಯಿಬಾಬಾರವರು ತಮ್ಮ ಮಾತಿನಿಂದ ಚೋಳ್ಕರ್ ರವರಿಗೆ ನಿಶ್ಚಲ ಭಕ್ತಿಯುಂಟಾಗುವಂತೆ ಮಾಡಿದರು. ಅಲ್ಲದೆ, ಬಾಬಾರವರು "ನೀನು ನನಗೆ ಕಲ್ಲುಸಕ್ಕರೆ ನೀಡುವೆನೆಂದು ವಾಗ್ದಾನ ಮಾಡಿದ್ದೆ. ಆ ಕಲ್ಲುಸಕ್ಕರೆ ನನಗೆ ಸಂದಿದೆ. ಆದ ಕಾರಣ ನಿನ್ನ ಹರಕೆಯು ಕೂಡ ಪೂರ್ಣವಾಗಿದೆ. ನೀನು  ರಹಸ್ಯವಾಗಿಟ್ಟಿದ್ದರೂ ಹರಕೆಯನ್ನು ಪೂರ್ಣ ಮಾಡಲು ನೀನು ಅನುಭವಿಸಿದ ಕಷ್ಟಗಳೆಲ್ಲವೂ ನನಗೆ ತಿಳಿದಿದೆ" ಎಂದು ನುಡಿದರು.

ಶ್ರೀ ಶಿರಡಿ ಸಾಯಿಬಾಬಾರವರ ಈ ಅದ್ಭುತ ಲೀಲೆಯನ್ನು ಶ್ರೀ ಸಾಯಿ ಸಚ್ಚರಿತ್ರೆಯ 15ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಯಾವ ಭಕ್ತರು ಶಿರಡಿ ಸಾಯಿಬಾಬಾರವರಿಗೆ ಹರಕೆಯನ್ನು ಮಾಡಿಕೊಂಡು ಶ್ರೀ ಸಾಯಿ ಸಚ್ಚರಿತ್ರೆಯ 15ನೇ ಅಧ್ಯಾಯವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪ್ರತಿನಿತ್ಯ ಪಾರಾಯಣ ಮಾಡುತ್ತಾರೋ ಅವರ  ಬಯಕೆಗಳೆಲ್ಲವೂ ಸಾಯಿಬಾಬಾರವರ ಆಶೀರ್ವಾದದಿಂದ ಪೂರ್ಣಗೊಳ್ಳುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

(ಆಧಾರ: ಶ್ರೀ ಸಾಯಿ ಸಚ್ಚರಿತ್ರೆ, 15ನೇ ಅಧ್ಯಾಯ)
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment