ಶ್ರೀ.ಗೋಪಾಲ್ ರಾವ್ ಮುಕುಂದ್ ಆಲಿಯಾಸ್ ಬಾಪು ಸಾಹೇಬ್ ಬೂಟಿಯವರು ನಾಗಪುರದ ಶ್ರೀಮಂತರು ಹಾಗೂ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು 1910 ನೇ ಇಸವಿಯಲ್ಲಿ ಮತ್ತೊಬ್ಬ ಸಾಯಿಭಕ್ತ ಶ್ರೀ.ಎಸ್.ಬಿ.ಧುಮಾಳ್ ರವರ ಮುಖಾಂತರ ಸಾಯಿ ಭಕ್ತರಾಗಿ ರೂಪುಗೊಂಡರು. ಇವರು ತಮ್ಮ ಮನೆಯವರೊಂದಿಗೆ ಶಿರಡಿಗೆ ಬಂದು ಶಾಶ್ವತವಾಗಿ ನೆಲೆಸಿ ಸಾಯಿಬಾಬಾರವರ ಸೇವೆಯನ್ನು ಮಾಡಿದರು. ಸಾಯಿಬಾಬಾರವರು ಇವರನ್ನು "ಭೂತಯ್ಯ" ಎಂದು ಸಂಬೋಧಿಸುತ್ತಿದ್ದರು.
ಬೂಟಿಯವರು ಶಿರಡಿಯಲ್ಲಿ ಒಂದು ಭೂಮಿಯನ್ನು ಖರೀದಿ ಮಾಡಿ ಮನೆಯನ್ನು ನಿರ್ಮಿಸಿ ಅಲ್ಲೇ ಶಾಶ್ವತವಾಗಿ ವಾಸ ಮಾಡಬೇಕೆಂದು ಹಲವಾರು ಬಾರಿ ಯೋಚನೆ ಮಾಡುತ್ತಿದ್ದರು. ಪ್ರತಿದಿನ ಮಧ್ಯಾನ್ಹದ ಆರತಿಯ ನಂತರ ಮಸೀದಿಗೆ ತೆರಳಿ ಅಲ್ಲಿ ಸಾಯಿಬಾಬಾರವರ ಎಡಗಡೆ ಕುಳಿತು ಅವರೊಂದಿಗೆ ಮಧ್ಯಾನ್ಹದ ಭೋಜನವನ್ನು ಸ್ವೀಕರಿಸುತ್ತಿದ್ದರು.
ಒಮ್ಮೆ ಬೂಟಿಯವರಿಗೆ ವಾಂತಿ ಹಾಗೂ ಆಮಶಂಕೆ ಆರಂಭವಾಯಿತು. ಅವರ ಬಳಿಯಿದ್ದ ಎಲ್ಲಾ ಬಗೆಯ ಔಷಧಿಗಳನ್ನು ತೆಗೆದುಕೊಂಡರೂ ರೋಗ ಗುಣವಾಗಲಿಲ್ಲ. ಇದರಿಂದ ಬೂಟಿಯವರ ಹೆದರಿಕೆ ಪ್ರಾರಂಭವಾಯಿತು. ಹಲವಾರು ಬಾರಿ ವಾಂತಿ ಹಾಗೂ ಭೇದಿಯಾದ ಕಾರಣ ಬಹಳ ಆಯಾಸವಾಗಿದ್ದರಿಂದ ಮಸೀದಿಗೆ ಹೋಗಲೂ ಸಹ ತ್ರಾಣವಿಲ್ಲದಂತಾಯಿತು. ಬಾಬಾರವರಿಗೆ ಈ ವಿಷಯ ತಿಳಿಯಿತು. ಬಾಬಾರವರು ಅವರನ್ನು ಕರೆಯಿಸಿ ತಮ್ಮ ಮುಂದೆ ಕೂರಿಸಿಕೊಂಡು "ಎಚ್ಚರದಿಂದಿರು! ಇನ್ನು ನೀನು ವಾಂತಿ ಮಾಡಕೂಡದು" ಎಂದು ತಮ್ಮ ತೋರುಬೆರಳನ್ನು ಸೂಚಿಸುತ್ತಾ ಹೇಳಿದರು. ಆ ಕೂಡಲೇ ಬೂಟಿಯವರ ವಾಂತಿ ಮತ್ತು ಭೇದಿ ನಿಂತಿತು. ಹಿಂದೆ ಇನ್ನೊಂದು ಸಂದರ್ಭದಲ್ಲಿ ಅವರಿಗೆ ಕಾಲರಾ ಜಾಡ್ಯವು ಅಂಟಿಕೊಂಡು ಬಹಳ ಬಾಯಾರಿಕೆಯಿಂದ ಬಳಲುತ್ತಿದ್ದರು. ಡಾ.ಪಿಳ್ಳೆಯವರು ಅವರಿಗೆ ಅನೇಕ ಔಷಧೋಪಚಾರಗಳನ್ನು ಮಾಡಿದರು. ಆದರೂ ರೋಗ ಗುಣವಾಗಲಿಲ್ಲ. ಆಗ ಬೂಟಿಯವರು ಬಾಬಾರವರಲ್ಲಿಗೆ ಧಾವಿಸಿದರು. ಬಾಬಾರವರು "ಬಾದಾಮಿ, ಆಕ್ರೋಟು, ಪಿಸ್ತಾ - ಈ 3 ವಸ್ತುಗಳನ್ನು ಅರೆದು, ಸಕ್ಕರೆ ಹಾಕಿ ಹಾಲಿನಲ್ಲಿ ಸೇರಿಸಿ ಬೇಯಿಸಿ ಕುಡಿ" ಎಂದರು. ಬೇರೆ ವೈದ್ಯರನ್ನು ಕೇಳಿದರೆ ಇದರಿಂದ ರೋಗ ಹೆಚ್ಚಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಬೂಟಿಯವರು ಸಾಯಿಬಾಬಾರವರ ಆಜ್ಞೆಯನ್ನು ಪಾಲಿಸಿ ಈ ಔಷಧಿಯನ್ನು ತಯಾರಿಸಿ ಕುಡಿದರು. ಅವರ ರೋಗ ಆ ಕೂಡಲೇ ಗುಣವಾಯಿತು (ಶ್ರೀ ಸಾಯಿ ಸಚ್ಚರಿತ್ರೆ 13ನೇ ಅಧ್ಯಾಯ).
ಒಮ್ಮೆ ಪ್ರಸಿದ್ಧ ಜ್ಯೋತಿಷಿಯಾದ ಶ್ರೀ ನಾನಾ ಸಾಹೇಬ್ ಡೇಂಗಳೆಯವರು ಬಾಪು ಸಾಹೇಬ್ ಬೂಟಿಯವರಿಗೆ "ಈ ದಿನ ನಿಮಗೆ ಗ್ರಹಗತಿಗಳು ಸರಿಯಾಗಿಲ್ಲ, ಅಪಾಯವಿದೆ, ಎಚ್ಚರಿಕೆಯಿಂದಿರಿ" ಎಂದರು. ಬಾಪು ಸಾಹೇಬರು ಇದರಿಂದ ಗಾಬರಿಯಾದರು. ಮನದಲ್ಲಿ ಚಿಂತೆ ಮಾಡಲು ಪ್ರಾರಂಭಿಸಿದರು. ಎಂದಿನಂತೆ ಆ ದಿನ ಅವರು ಮಸೀದಿಗೆ ಬಂದಾಗ ಬಾಬಾರವರು "ನಾನಾ ನಿನಗೇನು ಹೇಳಿದರು? ನಿನಗೆ ಈ ದಿನ ಮರಣ ಸಂಭವವಿದೆಯೆಂದು ಹೇಳಿರುತ್ತಾರೆ ಅಲ್ಲವೇ? ನೀನೇನೂ ಹೆದರಬೇಡ. ಹೇಗೆ ಆ ಮೃತ್ಯುವು ನಿನ್ನನ್ನು ಕೊಲ್ಲುವುದೋ ನೋಡೋಣ" ಎಂದರು. ಆ ದಿನ ಸಂಜೆ ಬಾಪು ಸಾಹೇಬರು ತಮ್ಮ ಬಹಿರ್ದಷೆಯನ್ನು ತೀರಿಸುವ ಸಲುವಾಗಿ ಮನೆಯ ಹಿತ್ತಲಿಗೆ ಹೋಗಿದ್ದಾಗ ಅಲ್ಲಿ ಒಂದು ಸರ್ಪವನ್ನು ಕಂಡರು. ಅಲ್ಲಿಯೇ ಇದ್ದ ಅವರ ಮನೆಯ ಜವಾನ ಲಹಾಣು ಸರ್ಪವನ್ನು ಹೊಡೆಯಲು ಕಲ್ಲನ್ನು ಎತ್ತಿದನು. ಆದರೆ ಬಾಪು ಸಾಹೇಬರು ಅವನನ್ನು ತಡೆದು ಒಂದು ದೊಡ್ಡ ಕೋಲನ್ನು ತರುವಂತೆ ಹೇಳಿ ಕಳುಹಿಸಿದರು. ಜವಾನನು ಕೋಲನ್ನು ತರುವುದರೊಳಗಾಗಿ ಆ ಸರ್ಪವು ಗೋಡೆಯಿಂದ ಕೆಳಗೆ ಇಳಿಯುವಾಗ ಆಯತಪ್ಪಿ ಬಿದ್ದು ಅಲ್ಲಿಯೇ ಇದ್ದ ಒಂದು ಸಂದಿಯಲ್ಲಿ ಮಾಯವಾಯಿತು. ಆಗ ಬಾಪು ಸಾಹೇಬರು ಬಾಬಾರವರ ಮಾತುಗಳನ್ನು ಜ್ಞಾಪಕಕ್ಕೆ ತಂದುಕೊಂಡು ಸಂತೋಷಭರಿತರಾದರು (ಶ್ರೀ ಸಾಯಿ ಸಚ್ಚರಿತ್ರೆ, 22ನೇ ಅಧ್ಯಾಯ).
ಒಮ್ಮೆ ಬೂಟಿಯವರು ದೀಕ್ಷಿತವಾಡಾದ ಮೇಲ್ಮಹಡಿಯಲ್ಲಿ ಮಲಗಿದ್ದಾಗ ಕನಸಿನಲ್ಲಿ ಬಾಬಾರವರು ದರ್ಶನ ನೀಡಿ "ನಿನ್ನದೇ ಆದ ಒಂದು ಧರ್ಮಶಾಲೆಯನ್ನು ದೇವಸ್ಥಾನ ಸಹಿತ ನಿರ್ಮಾಣ ಮಾಡು" ಎಂದರು. ಅಲ್ಲಿಯೇ ಪಕ್ಕದಲ್ಲಿ ಮಲಗಿದ್ದ ಶ್ಯಾಮ ಅವರಿಗೂ ಅದೇ ತರಹದ ಕನಸು ಬಿದ್ದಿತು. ಕೂಡಲೇ ಎಚ್ಚರಗೊಂಡ ಬಾಪು ಸಾಹೇಬರು ಅಳುತ್ತಿದ್ದ ಶ್ಯಾಮ ಅವರನ್ನು ನೋಡಿ ಏಕೆ ಅಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ಶ್ಯಾಮ "ಬಾಬಾರವರು ನನ್ನ ಕನಸಿನಲ್ಲಿ ದರ್ಶನ ನೀಡಿ ದೇವಸ್ಥಾನ ಸಹಿತವಾದ ವಾಡಾ ನಿರ್ಮಾಣ ಮಾಡು ಎಂದು ಆಜ್ಞಾಪಿಸಿದರು. ಅವರ ವಾಣಿಯನ್ನು ಕೇಳಿ ಆನಂದಭರಿತನಾದೆ. ಆದುದರಿಂದಲೇ ಆನಂದಬಾಷ್ಪ ಸುರಿಯುತ್ತಿದೆ" ಎಂದು ಹೇಳಿದರು. ಇಬ್ಬರ ಕನಸೂ ಒಂದೇ ಆಗಿರುವುದನ್ನು ಕಂಡು ಬೂಟಿಯವರಿಗೆ ಅಚ್ಚರಿಯಾಯಿತು. ಕೂಡಲೇ ವಾಡಾ ನಿರ್ಮಾಣಕ್ಕೋಸ್ಕರ ಶ್ಯಾಮ ಅವರೊಡನೆ ಕಲೆತು ಒಂದು ಯೋಜನೆಯನ್ನು ತಯಾರಿಸಿದರು. ಕಾಕಾ ಸಾಹೇಬ್ ದೀಕ್ಷಿತರೂ ಆ ಯೋಜನೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಮಾರನೇ ದಿನ ಬೆಳಿಗ್ಗೆ ಆ ಯೋಜನೆಯನ್ನು ಸಾಯಿಬಾಬಾರವರ ಮುಂದೆ ಇರಿಸಲಾಯಿತು. ಬಾಬಾರವರೂ ಕೂಡ ಆ ಯೋಜನೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
ಹೀಗೆ ಬೂಟಿವಾಡಾದ ನಿರ್ಮಾಣ ಕಾರ್ಯವು ಸರಿ ಸುಮಾರು 30ನೇ ಡಿಸೆಂಬರ್ 1915 ರ ಹೊತ್ತಿಗೆ ಆರಂಭವಾಯಿತು (ಖಾಪರ್ಡೆ ಡೈರಿ, ಪುಟ ಸಂಖ್ಯೆ 123). ಶ್ಯಾಮರವರು ಕೂಡಲೇ ಕಾರ್ಯತತ್ಪರರಾಗಿ ಕೆಲಸವನ್ನು ಪ್ರಾರಂಭಿಸಿ ನೆಲಮಾಳಿಗೆ ಹಾಗೂ ನೆಲ ಅಂತಸ್ತನ್ನು ಪೂರ್ಣಗೊಳಿಸಿದರು. ಭಾವಿಯ ನಿರ್ಮಾಣವನ್ನು ಕೂಡ ಪೂರ್ಣಗೊಳಿಸಿದರು. ಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಮತ್ತು ಬರುವಾಗ ನಿಂತು ನಿರ್ಮಾಣ ಕಾರ್ಯವನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರು ಲೇಂಡಿಗೆ ಹೋಗುತ್ತಿರುವಾಗ "ಆ ಬಾಗಿಲನ್ನು ಇಲ್ಲಿ ಇರಿಸು. ಕಿಟಕಿಯನ್ನು ಇಲ್ಲಿ ಇರಿಸು. ಮಹಾದ್ವಾರವನ್ನು ಪೂರ್ವಕ್ಕೆ ಇರಿಸು. ಇದರಿಂದ ಅಂದ ಹೆಚ್ಚುತ್ತದೆ" ಎಂದು ಸೂಚಿಸಿದರು. ನಿರ್ಮಾಣದ ಮೇಲ್ವಿಚಾರಣೆಯನ್ನು ಬಾಪು ಸಾಹೇಬರೇ ವಹಿಸಿಕೊಂಡಿದ್ದರು. ಈ ರೀತಿ ಕೆಲಸ ಸಾಗುತ್ತಿರುವಾಗ ಮಧ್ಯದ ಅಂಗಳದಲ್ಲಿ ಮುರಳೀಧರನ ಪ್ರತಿಮೆಯನ್ನು ಇಡಬೇಕೆಂಬ ಬಯಕೆ ಬೂಟಿಯವರ ಮನದಲ್ಲಿ ಬಂದಿತು. ಇದನ್ನು ಬಾಬಾರವರಿಗೆ ತಿಳಿಸಲು ಶ್ಯಾಮ ಅವರಿಗೆ ಹೇಳಿದರು. ಶ್ಯಾಮ ಅವರು ಬಾಬಾ ಅವರನ್ನು ಕೇಳಲಾಗಿ ಅವರು ತಮ್ಮ ಸಮ್ಮತಿಯನ್ನು ಸೂಚಿಸಿದರು. ದೇವಾಲಯ ಪೂರ್ತಿಯಾದ ನಂತರ ನಾನೇ ಅಲ್ಲಿಗೆ ಬಂದು ವಾಸಿಸುವೆನೆಂದು ನುಡಿದರು. ನಂತರ ವಾಡಾವನ್ನು ನೋಡಿ "ನಾವೇ ಈ ವಾಡಾವನ್ನು ಉಪಯೋಗಿಸೋಣ. ಅಲ್ಲಿಯೇ ವಾಸ ಮಾಡೋಣ" ಎಂದು ಹೇಳಿದರು. ಆಗ ಶ್ಯಾಮ ಅವರು ಮಧ್ಯದ ಅಂಗಳದಲ್ಲಿ ಪೂಜಾಸ್ಥಳಕ್ಕೆ ತಳಪಾಯ ಹಾಕಲು ಈ ದಿವಸ ಪ್ರಶಸ್ತವಾಗಿದೆಯೇ ಎಂದು ಕೇಳಲು ಬಾಬಾರವರು "ಸರಿಯಾಗಿದೆ" ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಶ್ಯಾಮರವರು ಕೂಡಲೇ ಪೂಜೆ ಮಾಡಿ ತೆಂಗಿನಕಾಯಿಯನ್ನು ಒಡೆದು ಕಾರ್ಯವನ್ನು ಆರಂಭಿಸಿದರು. ಅಂದುಕೊಂಡಂತೆ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸವೂ ಸಂಪೂರ್ಣವಾಯಿತು. ಮುರಳೀಧರನ ಪ್ರತಿಮೆಯ ತಯಾರಿಕೆಗೂ ಹೇಳಿದ್ದರು. ಆದರೆ ಆ ಪ್ರತಿಮೆ ತಯಾರಾಗುವ ಮೊದಲೇ ಪರಿಸ್ಥಿತಿ ಬದಲಾಯಿತು. ಬಾಬಾರವರು ತೀವ್ರ ಜ್ವರದಿಂದ ಹಾಸಿಗೆ ಹಿಡಿದರು. ಬಾಪು ಸಾಹೇಬರು ತಮ್ಮ ವಾಡಾ ಬಾಬಾರವರ ಪಾದಧೂಳಿಯಿಂದ ಪವಿತ್ರವಾಗುವುದೋ ಇಲ್ಲವೋ ಎಂದು ಅತ್ಯಂತ ಕಳವಳದಿಂದಿದ್ದರು. ಬಾಬಾರವರು ಗತಿಸುವ ಮೊದಲು ನನ್ನನ್ನು ವಾಡಾಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಅದರಿಂದ ಅವರೆಲ್ಲರಿಗೂ ಸಮಾಧಾನವಾಯಿತು. ಬಾಬಾರವರು ಇಹಲೋಕವನ್ನು ತ್ಯಜಿಸಿದ ನಂತರ ತಕ್ಕ ಮರ್ಯಾದೆ ಮತ್ತು ಸಂಭ್ರಮದಿಂದ ಮುರಳೀಧರನ ಪ್ರತಿಮೆಗೋಸ್ಕರ ಮೀಸಲಾಗಿಟ್ಟಿದ್ದ ಸ್ಥಳದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ನಿಜವಾಗಿ ಹೇಳಬೇಕೆಂದರೆ ಸಾಯಿಬಾಬಾರವರೇ ಮುರಳೀಧರನಾದರು. ಇದೇ ಈಗಿರುವ ಸಮಾಧಿ ಮಂದಿರ. ಇದನ್ನು ಶ್ರೀಮಾನ್ ಬೂಟಿಯವರು ನಿರ್ಮಾಣ ಮಾಡಿದ್ದರಿಂದ "ಬೂಟಿವಾಡಾ" ಎಂಬ ಹೆಸರು ಬಂದಿತು. ಬಾಬಾರವರ ಪರಮ ಪವಿತ್ರ ಭೌತಿಕ ಶರೀರವನ್ನು ಸಮಾಧಿ ಮಾಡಲ್ಪಟ್ಟಿರುವ ವಾಡಾದ ನಿರ್ಮಾಪಕರಾದ ಶ್ರೀಮಾನ್ ಬೂಟಿಯವರೇ ಧನ್ಯರು. ಸಾಯಿಬಾಬಾರವರು ಈ ವಾಡಾವನ್ನು "ಡಗ್ಡೀವಾಡಾ" (ಕಲ್ಲಿನ ಕಟ್ಟಡ) ಎಂದು ಕರೆಯುತ್ತಿದ್ದರು. ಬಾಪೂ ಸಾಹೇಬ್ ಬೂಟಿಯವರು ವಾಡಾದ ಸಂರಕ್ಷಣೆಗಾಗಿ ಪ್ರತಿವರ್ಷ 500 ರೂಪಾಯಿಗಳನ್ನು ನೀಡುತ್ತಿದ್ದರು. (ಶ್ರೀ ಸಾಯಿ ಸಚ್ಚರಿತ್ರೆ, 39ನೇ ಅಧ್ಯಾಯ).
ಸಾಯಿಬಾಬಾರವರ ಸಮಾಧಿ ಮಂದಿರದ ಪೂಜಾ ಕಾರ್ಯಗಳ ಮೇಲ್ವಿಚಾರಣೆಗಾಗಿ 27ನೇ ಅಕ್ಟೋಬರ್ 1918 ರಂದು ಶ್ರೀ ಬಾಪು ಸಾಹೇಬ್ ಬೂಟಿಯವರ ನೇತೃತ್ವದಲ್ಲಿ 15 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಬೂಟಿಯವರು ಕಾಕಾ ಸಾಹೇಬ್ ದೀಕ್ಷಿತ್ ರವರನ್ನು ಬಾಬಾ ಸಮಾಧಿಯನ್ನು ನೋಡಿಕೊಳ್ಳಲು ನೇಮಿಸಿದರು.
ಈ ರೀತಿಯಲ್ಲಿ ಬೂಟಿಯವರು ಅತೀವ ಶ್ರದ್ಧಾ ಭಕ್ತಿಯಿಂದ ತಮ್ಮ ಕೊನೆಯ ಉಸಿರಿರುವ ತನಕ ಸಾಯಿಬಾಬಾರವರನ್ನು ಸೇವಿಸಿ ಕಾಲಾನಂತರ 1921ನೇ ಇಸವಿಯಲ್ಲಿ ಮುಂಬೈನಲ್ಲಿ ನಿಧನ ಹೊಂದಿದರು.
(ಆಧಾರ: ಶ್ರೀ ಸಾಯಿ ಸಚ್ಚರಿತ್ರೆ, 13, 22 ಮತ್ತು 39 ಅಧ್ಯಾಯಗಳು)
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment