Sunday, January 19, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ 16 ಹಳ್ಳಿಗಳಿಗೆ ಉಚಿತ ಸಂಚಾರಿ ವೈದ್ಯಕೀಯ ಘಟಕದ ವಿಸ್ತರಣೆ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಪ್ರಯೋಗಾರ್ಥವಾಗಿ ಪ್ರಾರಂಭಿಸಲಾದ ಉಚಿತ ಸಂಚಾರಿ ವೈದ್ಯಕೀಯ ಘಟಕವು ಅತ್ಯುತ್ತಮ ಸೇವೆಯನ್ನು ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದ ಕಾರಣ, ಶಿರಡಿ ಸಾಯಿಬಾಬಾ ಸಂಸ್ಥಾನವು ಈ ಸೌಲಭ್ಯವನ್ನು 16 ಹಳ್ಳಿಗಳಿಗೆ ವಿಸ್ತರಿಸಬೇಕೆಂದು ತೀರ್ಮಾನಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ  ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಶಿರಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಬಡ ಜನರು ವಾಸಿಸುತ್ತಿದ್ದು ಅವರುಗಳು ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗಳಿಗೆ ಅಥವಾ ಕ್ಲಿನಿಕ್ ಗಳಿಗೆ ಹೋಗಲು ಸಮರ್ಥರಾಗಿಲ್ಲ. ಅಲ್ಲದೆ, ಈ ಹಳ್ಳಿಗಳಲ್ಲಿ ಈಗಲೂ ಅಂಧಶ್ರದ್ಧೆ ಹಾಗೂ ಹಣಕಾಸಿನ ತೊಂದರೆಯಿರುವ ಕಾರಣ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಈ ಬಡ ಜನರು ವೈದ್ಯಕೀಯ ನೆರವನ್ನು ಪಡೆಯಲು ಸಮರ್ಥರಾಗಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯು ಉಚಿತ ಸಂಚಾರಿ ವೈದ್ಯಕೀಯ ಘಟಕವನ್ನು ಪ್ರಾರಂಭಿಸಲು ನಿರ್ಧರಿಸಿತ್ತು. ಅದರಂತೆ ಕಳೆದ ವರ್ಷದ ಪವಿತ್ರ ಮಕರ ಸಂಕ್ರಾಂತಿಯ ದಿನ ಅಂದರೆ 14ನೇ ಜನವರಿ 2013 ರಂದು ಶುಭ ಮಹೂರ್ತದಲ್ಲಿ ಈ ಸಂಚಾರಿ ಘಟಕದ ಉದ್ಘಾಟನೆಯಾಗಿತ್ತು.  ಪ್ರಾಯೋಗಿಕವಾಗಿ ಈ ಸಂಚಾರಿ ಘಟಕವು ನಂದುರ್ಕಿ,ಕುರ್ಡ್,ವೇಸ್,ಭದ್ರಾಪುರ್,ರಂಜನ್ ಗಾವ್, ದೇಶಮುಖ್, ಕಾಕಡಿ ಹಳ್ಳಿಗಳಿಗೆ ನಿಯಮಿತವಾಗಿ ಸಂಚಾರ ಮಾಡುತ್ತಿದ್ದು ಈ ಹಳ್ಳಿಗಳ ಜನರು ಈ ಉಚಿತ ಸಂಚಾರಿ ಘಟಕವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಷ್ಟೇ ಅಲ್ಲದೆ ಅದರ ಪ್ರಯೋಜನವನ್ನೂ ಸಹ ಪಡೆಯುತ್ತಿದ್ದಾರೆ. 14ನೇ ಜನವರಿ 2013 ರಿಂದ 31ನೇ ಡಿಸೆಂಬರ್ 2013 ರವರೆಗೂ ಒಟ್ಟು 28,343 ರೋಗಿಗಳು ಇದರ ಲಾಭವನ್ನು ಪಡೆದಿದ್ದಾರೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು. 

ಉಚಿತ ವೈದ್ಯಕೀಯ ಸಂಚಾರಿ ಘಟಕದ ಪ್ರಯೋಜನವನ್ನು ಪಡೆದ ಜನರು ನೀಡಿದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯು ಇನ್ನೂ 4 ಹಳ್ಳಿಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಣೆ ಮಾಡಿದೆ.  ಹಳ್ಳಿಗಳಾದ ನಂದುರ್ಕಿ,ಕುರ್ಡ್,ವಾಲ್ಕಿ, ವೇಸ್,ಭದ್ರಾಪುರ್, ಪಿಂಪಲಾಸ್, ಕೇಲ್ವಾಡ್, ರಂಜನ್ ಗಾವ್, ದೇಶಮುಖ್, ಕಾಕಡಿ, ನಿರ್ಮಲ್ ಪಿಂಪ್ರಿ, ಮೊರವಾಡಿ, ಚೌಲ್ಕೆವಾಡಿ, ರಂಜನ್ ಗಾವ್ ಕೂ, ನಾಪವಾಡಿ, ರಾಮಪುರವಾಡಿ, ಏಕರುಕೆ ಮತ್ತು ಗಣೇಶನಗರ್ ಗಳಿಗೆ ಸರದಿ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ, ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಇನ್ನೂ ಹೆಚ್ಚು ಸಂಚಾರಿ ವೈದ್ಯಕೀಯ ವಾಹನಗಳನ್ನು ಖರೀದಿಸಲು ಸಹ ನಿರ್ಧರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆರಡು ವಾಹನಗಳ ಸೇರ್ಪಡೆಯಾಗಲಿದೆ. ಶಿರಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಬಡ ರೋಗಿಗಳು ಈ ಘಟಕಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಂಡರು. 

ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment